ಕನ್ನಡ ಕವಿಗಳೂ.. ಅವರ ವೇಶ್ಯಾ ಜಗತ್ತೂ..

ಜಗತ್ತಿನ ಎಲ್ಲ ಸಮಾಜಗಳಲ್ಲಿಯೂ, ನಾಗರಿಕ ಸಮಾಜ ಎಂಬ ಕಲ್ಪನೆ ಹುಟ್ಟಿದಾಗಿನಿಂದಲೂ ಗಂಡಿನ ಮನರಂಜನೆ ಮತ್ತು ಭೋಗದ ಭಾಗವಾಗಿ, ಸಮಾಜದ ಅತಿ ಗೌಪ್ಯವಾದ, ಅನೈತಿಕ, ಅಮಾನವೀಯ ಆರ್ಥಿಕ ಚಟುವಟಿಕೆಯೊಂದು ಕಾಲ, ದೇಶ, ವರ್ಣ, ಜಾತಿ, ಮತಗಳನ್ನು ಮೀರಿ ನಡೆಯುತ್ತಿದೆ. ಅದು ವೇಶ್ಯಾವಾಟಿಕೆ.

ಇದನ್ನು ಕೆಲವು ದೇಶಗಳು ವೃತ್ತಿಯೆಂದು ಕರೆದರೆ, ಇನ್ನೂ ಕೆಲ ದೇಶಗಳು ” ದಂಧೆ” ಎಂದು ಕರೆಯುತ್ತಿವೆ. ವೃತ್ತಿಯೋ, ದಂಧೆಯೋ, sex work ಎಂಬ ನಾನಾ ಹೆಸರಿಂದ ನಾಗರಿಕ ಸಮಾಜ ಸೃಷ್ಟಿಸಿದ ಈ ಪಾತಕ ನಡೆಯುತ್ತಲೇ ಇದೆ. ಇದು ತಪ್ಪು, ಇದರ ಅಗತ್ಯ ಸಮಾಜಕ್ಕಿದೆ ಎಂಬ ಪರ ವಿರೋದದ ಚರ್ಚೆಗಳು ಈ ವೃತ್ತಿಯೊಂದಿಗೆ ಬೆಳೆಯುತ್ತಲೇ ಇವೆ. ಈ ವೃತ್ತಿಯಲ್ಲಿ ಅನಿವಾರ್ಯವಾಗಿ ತೊಡಗಿರುವ ಹೆಣ್ಣನ್ನು ಈ ಸಮಾಜ ಕೀಳಾಗಿ ಕಾಣುತ್ತಲೇ ಬಂದಿದೆ.

ಪುರುಷ ಮನಸ್ಥಿತಿಯಲ್ಲಿ ಬದಲಾವಣೆ ಎಂಬುದು ಎಲ್ಲಿಯವರೆಗೆ ಬರುವುದಿಲ್ಲವೋ ಅಲ್ಲಿಯವರೆಗೂ ಇದು ವೃತ್ತಿಯಾಗಿಯೋ, ದಂಧೆಯಾಗಿಯೋ ಇದ್ದೇ ಇರುತ್ತದೆ. ಅಲ್ಲಿಯವೆರೆಗೂ ಈ ವೃತ್ತಿಯ ಬಗೆಗೆ ” ವೇಶ್ಯಾವೃತ್ತಿಯನ್ನು ಹೊಂದಿದ ಸಮಾಜ ಅಮಾನವೀಯ ಸಮಾಜ, ಕ್ರೌರ್ಯ ತುಂಬಿದ, ನಿರ್ಜೀವ ಸಮಾಜ” ಎಂಬೆಲ್ಲ ಹೇಳಿಕೆಗಳನ್ನು ಕೇಳುತ್ತಲೇ ಇರುತ್ತೇವೆ.

ಈ ವೃತ್ತಿಗೆ ಬರುವ ಹೆಣ್ಣುಗಳ ಪರಿಸ್ಥಿತಿ, ಮನಸ್ಥಿತಿ,ಅಲ್ಲಿ ಆ ವಾತಾವರಣದಲ್ಲಿ ಅವಳು ಬದುಕುವ ಬಗೆ, ಅನುಭವಿಸುವ ನೋವು, ಹಿಂಸೆ ಮೊದಲಾದವುಗಳನ್ನು ಅಭಿವ್ಯಕ್ತಿಸುವ ಸ್ಥಿತಿಯಲ್ಲಾಗಲಿ, ಅಥವಾ ಆ ಮಟ್ಟಿಗಿನ ಹಂತದಲ್ಲಾಗಲಿ ಅವಳು ಇರುವುದಿಲ್ಲ. ಹಾಗಾಗಿ ಅಲ್ಲಿನ ಅವಳ ವ್ಯಕ್ತಿತ್ವ,ಮನಸ್ಥಿತಿ ಮೊದಲಾವುಗಳ ಬಗೆಗೆ ಹೊರ ಜಗತ್ತು ತಮ್ಮದೇ ಆದ ಕಲ್ಪನೆಗಳನ್ನು ತಮಗೆ ತೋಚಿದಂತೆ ಕಟ್ಟಿಕೊಂಡು, ಪೂರ್ವಾಗ್ರಹಪೀಡಿತವಾಗಿರುತ್ತವೆ.

ಅಲ್ಲಿನ ಅವಳ ಅದೇ ಪುನರಾವರ್ತಿತ, ಯಾಂತ್ರಿಕ ಬದುಕಲ್ಲಿ, ಕೊಂಚ ಜೀವಂತಿಕೆಯನ್ನು ಹುಟ್ಟಿಸಿಕೊಳ್ಳಲು ಅವಳೇ ಕಂಡುಕೊಳ್ಳುವ, ಸಣ್ಣ ಸಣ್ಣ ಖುಷಿಯ ವಿಚಾರಗಳು, ಹವ್ಯಾಸ ಮೊದಲಾದ ಚಟುವಟಿಗಳು, ಅವುಗಳ ವಿಶೇಷತೆಗಳು ಹೊರ ಜಗತ್ತಿಗೆ ಕಾಣುವುದೇ ಇಲ್ಲ. ಹಾಗಾಗಿ ಈ ವೃತ್ತಿಯ ಒಳ ಹೊರಗು ಸಮಾಜಕ್ಕೆ ಯಾವಾಗಲೂ ಕುತೂಹಲದ, ಅಸಹ್ಯದ, ಅನೈತಿಕತೆಯ ಕೇಂದ್ರವಾಗಿಯೇ ಕಾಣುತ್ತದೆ.

ಹೀಗೆ ಸಮಾಜದ ಕಣ್ಣಿಗೆ ವೇಶ್ಯಾವಾಟಿಕೆ ಎಂದರೆ ಅನೈತಿಕ, ಅಸಹ್ಯ ಕೇಂದ್ರವಾಗಿ ಕಂಡರೆ ನಮ್ಮ ಮಧ್ಯಕಾಲೀನ ಕವಿ ಆಂಡಯ್ಯನ ಕಣ್ಣಿಗೆ ಬೇರೆಯದೇ ರೀತಿಯಲ್ಲಿ ಹೀಗೆ ಕಾಣುತ್ತದೆ.

“ಗರುವರ ಗೊಟ್ಟಿಗಾರರ ನೆಗಳ್ತೆಯ ಮಿಂಡರ ಮೇಳಗಾರರ ಅಕ್ಕರಿಗರ ಸಂದ ಕಬ್ಬಿಗರ ಜೋಡೆಯ ಬಂಡರ ಸಾರ್ದ ನೆತ್ತಗಾರರ ಚದುರಂಗಗಾರರ ಓರೆಗಾರರ ಬಾಜಿಪ ಬೀಣೆಗಾರರ ಆಗರಮ್ ಎನೆ ಪೆಂಪು ಸೊಂಪನೊಳಕೊಂಡೆಸೆದಿರ್ಪುವು ಸೂಳೆಗೇರಿಗಳ್”

“ಗೌರವಾನ್ವಿತರ, ವಾಗ್ಮಿಗಳ, ವಿಷಯ ಲಂಪಟರ, ವಿನೋದಗಾರರ, ಪಂಡಿತರ, ಪ್ರಸಿದ್ಧ ಕವಿಗಳ, ಲಜ್ಜಗಾರರ, ಭಂಡರ, ಚದುರಂಗವನಾಡುವವರ, ಚಿನ್ನ ಒರೆಹಚ್ಚಿ ನೋಡುವ ಪರೀಕ್ಷಕರ, ವೀಣಾವಾದಕರ ಹೀಗೆ ಎಲ್ಲಾ ವೃತ್ತಿ, ಸ್ವಭಾವದವರ ಗುಂಪು ಎನ್ನುವಂತೆ ಬಹುಬಗೆಯ ಕಲಾವಿದರಿಂದ ಕೂಡಿ ಘನತೆವೆತ್ತ ಕೇಂದ್ರದಂತೆ ಮನೋಹರವಾಗಿತ್ತು”

ಈ ವೃತ್ತಿಯ ಬಗೆಗೆ ಹಾಗೂ ಅಲ್ಲಿನ ವಾತಾವರಣ,ಆ ವಾತಾವರಣದಲ್ಲಿನ ಗಂಡು- ಹೆಣ್ಣಿನ ಮನೋಭಾವ, ವರ್ತನೆ ಮೊದಲಾದವುಗಳ ಬಗೆಗೆ ನಮ್ಮ ಹಳಗನ್ನಡ ಕವಿಗಳು ತಮ್ಮ ಕಾವ್ಯಗಳಲ್ಲಿ ವಿಸ್ತಾರವಾಗಿ ಬರೆದು ಸಮಾಜಕ್ಕೆ ಈ ಜಗತ್ತಿನ ಅಸಲಿಯತ್ತನ್ನು ಪರಿಚಯಿಸುವ ಕೆಲಸ ಮಾಡಿದ್ದಾರೆ.

ಈ ಜಗತ್ತಿನಲ್ಲಿ ಕಾಣುವ ಹಾಸ್ಯ, ವ್ಯಂಗ್ಯ, ಸೌಂದರ್ಯ,, ಅಸಹ್ಯ, ಗಂಡಿನ ದರ್ಪ, ಅವನ ಅಸಹಾಯಕತೆ, ತೋರಿಕೆಯ ಗಂಡಸುತನ, ರಸಿಕತೆ ಮೊದಲಾವುಗಳ ಜೊತೆ ಜೊತೆಗೆ ಅಲ್ಲಿನ ಹೆಣ್ಣುಗಳ ಸೌಂದರ್ಯ, ಹೆಣ್ಣಿನ ಆಂತರ್ಯ, ಅವಳ ಒಳಗಿನ ಆಸೆ, ನಿರಾಸೆ ಮೊದಲಾವುಗಳ ವಿವರಣೆಯನ್ನು ಕಣ್ಣಿಗೆ ಕಟ್ಟುವಂತೆ ನಮ್ಮ ಹಳಗನ್ನಡದ ಅನೇಕ ಕವಿಗಳು ಕಟ್ಟಿಕೊಟ್ಟಿದ್ದಾರೆ.

ಆದಿಕವಿ ಪಂಪ ಕಟ್ಟುವ ವೇಶ್ಯಾ ಜಗತ್ತಿನ ಒಂದೊಂದು ದೃಶ್ಯಗಳು ಕೂಡ ಅದೆಷ್ಟು ಅಥೆಂಟಿಕ್ ಮತ್ತು ಅನುಭವ ರೂಪಗಳು ಎಂದರೆ, ವೇಶ್ಯಾಗೃಹದ ಅನುಭವವಿಲ್ಲದ ಯಾವನೂ ಕೂಡ ಹೀಗೆ ಚಿತ್ರಿಸಲಾಗದು.

‘ವಿಕ್ರಮಾರ್ಜುನ ವಿಜಯಂ’ ಕಾವ್ಯದಲ್ಲಿ ದ್ವಾರವತೀ ನಗರದ ವೇಶ್ಯಾವಾಟಿಕೆಯನ್ನು ವಿವರಿಸುತ್ತಾ ವೇಶ್ಯಾವಾಟಿಕೆಯ ಹುಟ್ಟಿಗೆ ಅವನು ಕೊಡುವ ಕಾರಣ ಕುತೂಹಲವೂ, ಅಧ್ಯಯನ ಯೋಗ್ಯವೂ, ಯೋಚಿಸಬೇಕಾದ ಅಂಶವೂ ಹಾಗಿದೆ.

ಪೆರತೆನೋ ಪಾರದರದೊಳ್ ಸಂಸಾರ ಸರ್ವಸ್ವಮಂ
ಗೆಲೆವಂದಿಂಪಿನಲಂಪನಾಳ್ದ ಸವಿಯುಂಟಕ್ಕುಂ ಸಮತಾವಗಂ ತಲೆಯಂ ಮೂಗಮನ್ ಒತ್ತೆಯಿಟ್ಟು ನೆರೆವಂತುಂತೇನವರ್ ಗಾಂಪರೆ”

“ಹಾದರಲ್ಲಿ ಸಂಸಾರಸಾರಸರ್ವಸ್ವವನ್ನು ಮೀರಿಸುವ ಸುಖದ ಸೊಂಪನ್ನುಕೊಡುವ ಯಾವುದೋ ಒಂದು ರುಚಿ ಇದ್ದಿರಬೇಕು, ಇಲ್ಲದಿದ್ದರೆ ಯಾವಾಗಲೂ ಅವರು ತಮ್ಮ ತಲೆ, ಮೂಗನ್ನು ಒತ್ತೆಯಿಟ್ಟು ಅದರಲ್ಲಿ ತೊಡಗಲು ಗಾಂಪರೇ”
ಎನ್ನುತ್ತಾನೆ.

ಮುಂದುವರೆದು ಅಲ್ಲಿನ ಸ್ರ್ತೀಯರ ಸೌಂದರ್ಯ ವನ್ನು ಹೀಗೆ ವರ್ಣಿಸುತ್ತಾನೆ

“ಮನಸಿಜನ ನಡಪಿದ ಜಂಗಮಲತೆಗಳಂತೆ,ಮನೋಜನ ಕಾಪಿನ ಕಲ್ಪಲತೆಗಳಂತೆ,ಮನೋಜನೆಂಬ ದೀವಗಾರನ ಪುಲ್ಲೆಗಳಂತೆ,ತಂತಮ್ಮ ಮನೆಯ ಮುಂದಣ ಪಚ್ಚೆಯ ಜಗುಲಿಗಳೊಳಂ ಮಣಿಮಯ ಮತ್ತವಾರಣಂಗಳೊಳ್ ಅಮಳವಿಗಳಿತ ವಿಳಾಸಂಗಳೊಳಂ ತಂಡ ತಂಡದೆ ನೆರೆದಿರ್ದ ಪೆಂಡವಾಸದೊಳ್”

ಮನ್ಮಥನು ಸಾಕಿದ ಜಂಗಮ ಬಳ್ಳಿಗಳಂತೆ, ಕಾಮನ ರಕ್ಷಣೆಯಲ್ಲಿರುವ ಕಲ್ಪವೃಕ್ಷದ ಬಳ್ಳಿಗಳಂತೆ, ಮನ್ಮಥನೆಂಬ ಬೇಟೆಗಾರನಿಗೆ ಸಿಕ್ಕ ಬೇಟೆಯ ಜಿಂಕೆಯಂತೆ ತಮ್ಮ ತಮ್ಮ ಮನೆಯ ಜಗಲಿಯಮೇಲೆಯೂ, ರತ್ನಖಚಿತವಾದ ಕೈಸಾಲೆಯಲ್ಲಿಯೂ ಸುಂದರಿಯರಾದ ವೇಶ್ಯೆಯರು ಕುಳಿತಿದ್ದರು.

ಅವರಲ್ಲಿ ಕೆಲವರ ಸೌಂದರ್ಯ ಅದೆಷ್ಟು ಅನನ್ಯವಾದ್ದು ಎಂದರೆ.

“ಮನಸಿಜನೀಕೆಗಂಡು ರತಿಯಂ ಬಿಸುಟಂ ಹರನೀಕೆಗಂಡು ನೂತನಗಿರಿಜಾತೆಯಂ ತೊರೆದನಾ ನರಕಾಂತಕನೀಕೆಗಂಡು ತೊಟ್ಟನೆ ನಿಜಲಕ್ಷ್ಮಿಯಂ ಮರೆದನ್ ಎಂಬ ನೆಗಳ್ತೆಯನಪ್ಪುಕೆಯ್ದು ಜವ್ವನದ ವಿಳಾಸದಂದದ ಬೆಡಂಗಿನ ಪೆಂಡಿರೆ ಪೆಂಡಿರಲ್ಲಿಯಾ”

ಅಲ್ಲಿನ ಒಬ್ಬಳ ಸೌಂದರ್ಯವನ್ನು ಕಂಡು ಮನ್ಮಥನು ರತಿಯನ್ನೆ ಬಿಟ್ಟುಬಿಟ್ಟನು,ಶಿವನು ಇವಳನ್ನು ಕಂಡು ನೂತನವಧುವಾದ ಗಿರಿಜೆಯನ್ನೆ ತೊರೆದನು,ಇನ್ನು ಆ ವಿಷ್ಣುವೋ ಇವಳನ್ನು ಕಂಡ ಕ್ಷಣವೇ,ಲಕ್ಷ್ಮಿಯನ್ನೆ ಮರೆತಿದ್ದಾನೆ ಎನ್ನುವಷ್ಟು ಪ್ರಸಿದ್ದಿಯನ್ನು ಪಡೆದ ವಿಳಾಸದ ಬೆಡಗಿನ ಹೆಣ್ಣುಗಳೇ ಅಲ್ಲಿರುವವರೆಲ್ಲರು.

ಮುಂದೆ ಆ ಸೂಳೆಗೇರಿಗೆ ಬರುವ ವಿಟರು ಬಗೆಗೆ ಪರಿಚಯಿಸುತ್ತ,

ಅಲ್ಲಿಗೆ ರಾಜವಿಟರು, ಸಾಮಾನ್ಯರು ಎಲ್ಲರೂ ಬರುತ್ತಾರೆ. ಅವರವರ ಅಂತಸ್ತಿಗೆ ತಕ್ಕ ಹಾಗೆ ಕೆಲವರು ಅಲ್ಲೇ ಕೋಟಿ ಹೊನ್ನು ಕೊಡುತ್ತೇವೆ, ಎಂದು ವೇಶ್ಯೆಯರ ಮನೆಯ ಮುಂದಿನ ಗಂಟೆ ಬಾರಿಸುತ್ತಿದ್ದರೆ, ಇನ್ನೂ ಕೆಲ ಸಾಮಾನ್ಯ ವಿಟರು ಸುಣ್ಣದ ಎಲೆಯನ್ನು ಒತ್ತೆಯಿಡುತ್ತೇವೆ ಎನ್ನುತ್ತಾರೆ,

ಮದ್ದಾನೆಯನ್ನು, ಮಾಣಿಕ್ಯವನ್ನು ಒತ್ತೆ ಇಡುತ್ತೇವೆ ಎನ್ನುವ ಜಗಳಗಂಟ ವಿಟರು ಕಸ್ತೂರಿಯ ಬಣ್ಣದ ಕರ್ರಗಿನ ವಿಟರು ಕಸ್ತೂರಿಯಲ್ಲೆ ಅದ್ದಿ, ಮುಳುಗಿ ಅಲ್ಲಿರುವ ಪಾನಶಾಲೆಗೆ ಬಂದರೆ ಅಲ್ಲಿ ಕಳ್ಳಿನಲ್ಲಿಯೂ,ಅಮೃತದಲ್ಲಿಯೂ ಹುಟ್ಟಿದ ಹೆಣ್ಣುಗಳಂತೆ ಅನೇಕ ಸುಂದರಿಯರನ್ನು ಕಂಡು, ಚಿನ್ನ ,ಬೆಳ್ಳಿ ಮತ್ತು ಪದ್ಮರಾಗಗಳಿಂದ ಗಿಳಿ, ಕೋಗಿಲೆ, ಕ್ರೌಂಚ, ಹಂಸ ಮೊದಲಾದ ಹಕ್ಕಿಗಳ ಮಾದರಿಯಲ್ಲಿ ಮಾಡಿದ್ದ ಬಟ್ಟಲುಗಳಲ್ಲಿ ಕಳ್ಳನ್ನು ತುಂಬಿಕೊಂಡು, ಮಧುದೇವತೆಗಳನ್ನು, ಮಧುಮಂತ್ರಗಳಿಂದ ಮಂತ್ರಿಸಿ, ಅದೇ ಕಳ್ಳಿನಿಂದ ತಲೆಗೆ ಪ್ರೋಕ್ಷಣೆ ಮಾಡಿ, ಅದೇ ಕಳ್ಳಿನಿಂದ ಹಣೆಗೆ ಬೊಟ್ಟಿಕ್ಕಿಕೊಂಡು, ಹಿರಿಯರನ್ನು ಗುರುತಿಸಿ ಅವರಿಗೆ ನಮಸ್ಕರಿಸಿ, ದಾನ ಕೊಡಬೇಕಾದವರಿಗೆ ದಾನ ಕೊಟ್ಟು, ಆ ಬಟ್ಟಲುಗಳಲ್ಲಿ ಕಳ್ಳು ತುಂಬಿಕೊಂಡು ಜೊತೆಗೆ ಎಳೆಯ ಬಿದಿರಿನ ಕಳಕೆ, ಮಾವಿನ ಮಿಡಿ, ಬಿಲ್ವಪತ್ರೆಯ ಕಾಯಿಯ ತಿರುಳು ತೆಗೆದು, ಕಾರದ ಪುಡಿಯಿಂದ ಕೂಡಿದ ಹಸಿಶುಂಠಿ ಬೆರೆಸಿದ ಚಾಕಣವನ್ನು ನಂಚಿಕೊಂಡು ಕಳ್ಳನ್ನು ಗುಟುಕು, ಗುಟುಕಾಗಿ ಸವಿದು, ಅಲ್ಲಿನ ತಮ್ಮಿಷ್ಟದ ಹೆಣ್ಣಿಗೂ ಕುಡಿಸಿದರು.

ಹೀಗೆ ಒಂದು ಕಡೆ ವಿಟರ ಜಗತ್ತು ಹೀಗಿದ್ದರೆ ಮತ್ತೊಂದು ಕಡೆ,

ಹೆಣ್ಣುಗಳು ಕಾಮೋದ್ರೇಕವಾದ ಕಳ್ಳುಗಳನ್ನು ಕುಡಿದರು.ಹೀಗೆ ಮಧ್ಯಪಾನದ ಸೊಕ್ಕಿನಿಂದ ಅವರು ನಾಲಗೆಯು ತೊದಲಲು ಆರಂಭಿಸಿದವು.ಆ ಸ್ಥಳದಲ್ಲಿ ಒಬ್ಬಳು ಸುಂದರಿ ಮತ್ತಿನಿಂದ ಕುಣಿಯತೊಡಗಿದಾಗ ಅವಳ ಕಡಗಣ್ಣಿನ ಹೊಳೆಯುವ ನೋಟವು,ಬಿಳುಚಿಕೊಂಡ ತುಟಿಯು,ನೀಳವಾದ ಹುಬ್ಬುಗಳು,ಬಾಯಿಂದ ಬರುತ್ತಿರುವ ಕಳ್ಳಿನ ವಾಸನೆಯನ್ನು ದುಂಬಿಗಳು ಯಾವುದೋ ಹೂವೆಂದು ಭ್ರಮಿಸಿ ಮುತ್ತತೊಡಗಿದವು.ಹೀಗೆ ಅನೇಕ ಹೆಣ್ಣುಗಳು ಅಲ್ಲಿ ಮಧ್ಯಪಾನದ ಮತ್ತಿನಿಂದ ತಮ್ಮಿಷ್ಟ ಬಂದ ಹಾಗೆ ಕುಣಿಯತೊಡಗಿದರು.

ಹೀಗಿರುವಲ್ಲಿ ಒಬ್ಬ ವಿಟನು

“ಕುಡಿಯುವವರನ್ನು ಕುಡುಕರು ಎಂದು ಹೇಳಬಹುದೆ, ಹಾಗೆ ಕುಡಿಯುವವರನ್ನು ಕುಡುಕರೆಂದರೆ ಅವರಿಗೆ ಸಂಕೋಚವಾಗುತ್ತದೆ. ಕುಡುಕರು ಎಲ್ಲರ ಹೃದಯವನ್ನು ಸೂರೆಗೊಳ್ಳುವವರು, ಕುಡಿಯುವುದು ದೋಷವಾದರೂ ಅದು ಯಾವುದಾದರೊಂದು ಒಳ್ಳೆಯ ಅವಲಂಬನದಲ್ಲಿ (ಹವ್ಯಾಸದಲ್ಲಿ) ತೊಡಗಿಸುತ್ತದೆ. ಹಾಗಾಗಿ ಮದ್ಯಪಾನ ದೋಷವಾದರೂ ಒಂದು ರೀತಿಯಲ್ಲಿ ಒಳ್ಳೆಯದೇ ಅಲ್ಲವೇ”

ಎಂದು ಹೇಳಿ, ತನ್ನನ್ನು ಬಯ್ಯುತ್ತಾ ಬರುತ್ತಿದ್ದ ಪ್ರಿಯಳನ್ನು ಬಿಡಲಾರದೆ ಅವಳ ಮನೆಯ ಮುಂದೆಯೇ ಸುಳಿದಾಡುತ್ತಿದ್ದಾಗ ಅವನ ಗೆಳೆಯ ಅವನಿಗೆ ಬುದ್ದಿ ಹೇಳಿ ಮರಳಿ ಮನೆಗೆ ಕರೆದುಕೊಂಡು ಹೋದನು.

ಮತ್ತೊಂದು ಕಡೆ ದಡ್ಡ ವಿಟನೊಬ್ಬನು ಕೀಟಲೆ ಸ್ವಭಾವದ ವೇಶ್ಯೆಯರು ಇದ್ದ ಕಡೆ ಬಂದು ತಾನು ಬಂದಿರುವ ಕಾರಣ ತಿಳಿಸಿದಾಗ, ಅವನು ದಡ್ಡನಾಗಿರುವುದನ್ನು ಮನಗಂಡು ತಮ್ಮ ಗುಟ್ಟಿನ ಭಾಷೆಯಲ್ಲಿ ಹೀಗೆಂದರು

“ನಿನಗಿಂತ ರಸಿಕರು, ಚತುರರು ಯಾರಿದ್ದಾರೆ, ನಿನ್ನ ಎಲ್ಲ ಗುಣಗಳನ್ನು ಹೊಗಳಲು ಹೊರಟರೆ ನೀನು ಸರ್ವಗುಣ ಸಂಪನ್ನನಾಗಿದ್ದಿಯಾ, ನೀನು ಆ ಶಿವನ ಮುಂದಿರುವ ಬಸವನೇ ಆಗಿದ್ದೀಯಾ “

ಎಂದು ಛೇಡಿಸಿ, ಕಾಡಿ ಕಡೆಗಣಿಸಿ ಅಲ್ಲಿಂದ ಓಡಿಸಿದರು. ಮತ್ತೊಂದೆಡೆಯಲ್ಲಿ ಒಬ್ಬಳು ತನ್ನ ಬಿಟ್ಟು ಹೋಗುತ್ತಿರುವ ಹೊಸ ಪ್ರೇಮದ ಒಡೆಯನನ್ನು, ಏನು ಮಾಡಿದರೂ ಹೋಗಲು ಬಿಡದೆ, ಪ್ರೀತಿ ತೋರಿಸುತ್ತಾ, ಅವನನ್ನು ಹೊಗಳಿ, ಕಣ್ಣೀರು ಸುರಿಸಿದಳು.

ಮತ್ತೆ ಬೇರೊಂದು ಕಡೆಯಲ್ಲಿ ಮನೆಯ ಯಜಮಾನಿಯ ಬಲಾತ್ಕಾರಕ್ಕೆ ಮತ್ತು ವಿಟನು ಕೊಡುವ ಹಣದ ಆಸೆಗೆ ಚಿಕ್ಕವಯಸ್ಸಿನ ಹೆಣ್ಣೊಬ್ಬಳು ಮುದುಕ ವಿಟನನ್ನು ಬಿಡಲು ಹೆದರಿ, ಆನಂತರ ತನ್ನ ಮನಸ್ಸಿಗೆ ಉಂಟಾಗಿರುವ ಬೇಸರವನ್ನು ತನ್ನ ಗೆಳತಿಯೊಂದಿಗೆ ಹೀಗೆ ಹೇಳಿದಳು

“ಆ ಮುದುಕನು ಗೊರಕೆ ಹೊಡೆದರೆ ಬೆಟ್ಟಗಳೆ ಬಿರುಕು ಬಿಡುತ್ತವೆ, ಸುರಿಯುವ ಜೊಲ್ಲೋ ಪ್ರವಾಹವಾಗಿ ಹರಿಯುತ್ತದೆ, ಅವನು ಜೋರಾಗಿ ಕೆಮ್ಮಿದರೆ ನನ್ನ ತೋಳಿನಲ್ಲಿಯೇ ಜೀವ ಹೋಗುತ್ತದೆಯೇನೋ ಎಂಬ ಭಯ ಬರುತ್ತದೆ, ಇನ್ನು ಹಲ್ಲಿಲ್ಲದ ಅವನ ಬಾಯಿಯ ವಾಸನೆಯನ್ನು,ಅವನು ಎಷ್ಟು ಹಣ ಸುರಿದರೂ ತಡೆದುಕೊಳ್ಳಲು ಸಾಧ್ಯವೇ”

ಎನ್ನುತ್ತಾಳೆ.

ಮತ್ತೊಬ್ಬಳು ತಾನು ಮಾಡುತ್ತಿರುವುದು ವೇಶ್ಯಾವೃತ್ತಿಯಾದರೂ ಆ ವೃತ್ತಿಯಲ್ಲಿ ಒಡಮೂಡುವ ಪ್ರೇಮದ ನಾನಾ ಬಗೆಗಳನ್ನು ವಿವರಿಸುತ್ತಾ ಹೀಗೆ ಹೇಳುತ್ತಾಳೆ.

“ಒತ್ತಾಯಮಾಡಿದರೆ ಪ್ರೇಮಿಯ ಪ್ರೇಮವು ದುಪ್ಪಟ್ಟಾಗುತ್ತದೆ. ಬಯ್ದರೆ ಪ್ರಿಯನ ಮನಸ್ಸು ಅಸ್ಥಿರವಾಗುತ್ತದೆ, ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ಪ್ರೇಮವು ಬೇಟಕಾರನ ಸವಿಯೂ ರಾಶಿ ರಾಶಿಯಾಗಿತ್ತದೆ. ದೂರ ತಳ್ಳಿದರೆ ಬೇಟಕಾರನ ಮನಸ್ಸು ಬೆನ್ನಟ್ಟಿ ಬರುತ್ತದೆ ಹಾಗಾಗಿ ಈ ಬೇಟ ಎನ್ನುವುದು ಎಂಥ ವಿರೋಧಾಭಾಸ ಸ್ವಭಾವದ್ದಾಗಿದೆ. ಈ ಪ್ರೇಮ ಎಂಬುದನ್ನು ಇಬ್ಬರೂ ಸೇರಿ ಹೊಸೆದರೆ ಹೊಸದಾಗುತ್ತದೆ, ಕೆಡಿಸಿದರೆ ಕೆಡುತ್ತದೆ. ಪ್ರೇಮ ಎಂಬುದು ಎಂಥ ವಿಚಿತ್ರವಲ್ಲವೇ ಎಂದುಕೊಳ್ಳುತ್ತಾ ಈ ಪ್ರೇಮ ಎಂಬುದು, ಪ್ರೇಮಿಗಳ ಆಗು-ಹೋಗುಗಳು ಅವರ ದೂತ ದೂತಿಯರ ಕೈಯಲ್ಲಿವೆ. ಪ್ರೇಮಿಗಳಿಬ್ಬರ ಜೀವ ,ಅವರ ದೂತರ ಮಾತುಗಳಲ್ಲಿ ಇರುತ್ತವೆ.ಅವರು ಅವನಿಗೆ ಅಥವಾ ಅವಳಿಗೆ ನಿನ್ನ ಬಗೆಗೆ ಆಸೆಯಿದೆ ಎಂದರೆ ಜೀವ ಬರುತ್ತದೆ, ಇಲ್ಲ ಎಂದರೆ ಹೋಗುತ್ತದೆ. ಹಾಗಾಗಿ ಪ್ರೇಮಿಗಳು ತಮ್ಮ ಜೀವವನ್ನು ಈ ದೂತರ ಬಳಿ ಗಿರವಿ ಇಟ್ಟಿದ್ದಾರೆ”

ಎಂದು ತನಗೆ ತಾನೆ ಪ್ರೇಮದ ಬಗೆಯನ್ನು ಕೊಂಡಾಡುತ್ತಾಳೆ.

ಹೀಗೆ ಅಲ್ಲಿನ ವೇಶ್ಯಾ ಜಗತ್ತು ನಾನಾ ದೃಶ್ಯಗಳನ್ನು ತೆರೆದಿಡುತ್ತಾ ಹೋಗುತ್ತದೆ.

1 comment

  1. ಆಹ ಅದ್ಭುತ ವಸ್ತು ವಿಷಯ. ಕಾಮತ್ವವನ್ನು ನಿರಾಕರಿಸಿ,ಗುಗ್ಗುಳ ರೀತಿ ಮಾತಾಡುವ ಪವಿತ್ರಾತ್ಮರೆಂಬ ಭಾರತೀಯರ ಇಬ್ಬಂದೀತನ ಹಾಗು ಹಿಪೋಕ್ರೈಸಿಗೆ ಈ ಲೇಖನ ಮಾರ್ಮಿಕವಾಗಿ ಇಕ್ಕುತ್ತದೆ. ಕಲೆ,ಕಾವ್ಯ, ವ್ಯವಹಾರ ಹಾಗು ಮನುಷ್ಯನ ರಕ್ತಗತ ಹಂಬಲಗಳ ಮೂಲಸೆಲೆಯೇ ಕಾಮ ಎಂಬುದ್ದನ್ನು ಒಪ್ಪಿಕೊಳ್ಳಲು ಹಿಂಜರಿವ ನಾವುಗಳು ಸೃಷ್ಟಿಸಿರುವ ಇಂಡಿಯಾ ಎಂಬ ಕಾಮಾಟಿಪುರವೇ ಹೇಳುತ್ತದೆ ಈ ದೇಶ ಕಾಮತ್ವದ ಬಗ್ಗೆ ಹೇಗೆ ಆಕರ್ಷಿತವಾಗಿತ್ತೆಂದು. ಅದ್ಭುತವಾದ ಈ ಲೇಖನ ನನಗಂತೂ ಬಹಳ ಇಷ್ಟವಾಯಿತು. ಅದರಲ್ಲೂ ಕನ್ನಡ ಕಬ್ಬಿಗರ ರಸಿಕತೆ, ಕಾಮಾಸಕ್ತಿ ಕುರಿತ ಹೇಳಿಕೊಳ್ಳುವ ದಿಟ್ಟತೆ ಇವೆಲ್ಲವುಗಳನ್ನು ಲೇಖನ ಬಿಡಿಸುತ್ತಲೇ ಓದುಗರಿಗೆ ಕಾಮದ ಬಗ್ಗೆ ಇರುವ ಹಿಂಜರಿಕೆಗಳನ್ನು ಇಲ್ಲವಾಗಿಸುತ್ತದೆ. ಥ್ಯಾಂಕು ಕಾಮಾಧ್ಯಯನ ಕೇಂದ್ರದ ನಿರ್ದೇಶಕರಾದ ಆರಾಧ್ಯರೆ…

Leave a Reply