ಒಂದು ಇಂಟರ್ವೆಲ್; ಎರಡು ಸಿನಿಮಾ !

ಆಗಷ್ಟೇ ಇಂಟರ್ ವೆಲ್ ಮುಗಿಸಿ ಬಂದು ಪಾಪ್ ಕಾರ್ನ್ ಹಿಡಿದು ಕೂತಾಗ ಐದು ನಿಮಿಷದವರೆಗೂ ಸಿನಿಮಾ ಏನೊಂದೂ ಅರ್ಥವಾಗುವಂತೆ ಕಾಣಲಿಲ್ಲ . ವಿರಾಮದ ಮುಂಚೆ ಇದ್ದ ಒಬ್ಬ ನಟನಟಿಯರೂ ಸಿನಿಮಾದಲ್ಲಿರಲಿಲ್ಲ. ಇಡೀ ಸಿನಿಮಾದ ಥೀಮ್ ಬೇರೇನೇ ಆಗಿತ್ತು. ಅಲ್ಲದೆ ಸಿನಿಮಾ ಲೊಕೇಷನ್ ಗಳಲ್ಲೂ ಸಾಕಷ್ಟು ಬದಲಾವಣೆ ಇತ್ತು. ಅಲ್ಲೆಲ್ಲೋ ಕಾರ್ಪೊರೇಟ್ ಕಂಪನೀಲಿ  Data theft ( ಮಾಹಿತಿ ಕಳವು) ಮಾಡಿ ಕೆಲಸ ಕಳೆದುಕೊಂಡವನ ಬಗ್ಗೆ , ಅವನ ಮಾಸ್ಟರ್‌ ಪ್ಲಾನ್ ಗಳ ಬಗ್ಗೆ ನಡೆಯುತ್ತಿದ್ದ ಕತೆ ಅವನು ಸಿಕ್ಕಿಬಿದ್ದಿದ್ದು ಹೇಗೆ ಎಂಬುದರ ಬಗ್ಗೆ ಒಂದು Crucial Point ನಲ್ಲಿ ಇಂಟರ್ ವೆಲ್ ಗೆ ನಿಂತಿದ್ದ ಸಿನಿಮಾದಲ್ಲಿ ಈಗ ನಡೆಯುತ್ತಿರುವುದಾದರೂ ಎನು ? ರಾತ್ರಿಯ ನಿಶ್ಯಬ್ದದಲ್ಲಿ ಚಲಿಸುತ್ತಿರುವ ಟ್ರೈನಿನ ಸೆಕೆಂಡ್ ಕ್ಲಾಸ್ ರಿಸರ್ವಡ್ ಕೋಚ್ ನಲ್ಲಿ RAC ಸೀಟ್ ಗಳ ಸ್ಟೇಟಸ್ ಬದಲಾಗದೆ ಇದ್ದ ಕಾರಣ ಓರ್ವ ಯುವತಿ ಮತ್ತೊಬ್ಬ ಯುವಕ ಎದುರು ಬದರು ಕೂತು ಪ್ರಯಾಣ ಮಾಡುತ್ತಿದ್ದ ದೃಶ್ಯ.

ಏನೆಂದು ತಲೆಕೆಡಿಸಿಕೊಳ್ಳುತ್ತಿರುವಾಗಲೇ ಪಕ್ಕದವನನ್ನು ನೋಡಿದೆ. ಆಗಲೇ ತಿಳಿದದ್ದು ನಾನು ಅಕಸ್ಮಾತ್ ಆಗಿ ಬೇರೆ ಆಡಿ (Auditorium)ಯೊಳಗೆ ಬಂದು ಕೂತಿರುವುದು. ಈ ಮಾಲ್ ಗಳಲ್ಲಿ ಇಂಟರ್ವೆಲ್ ಹೋಗಿ ಬರುವಾಗ ನನಗೆ ಅನೇಕ ಬಾರಿ ಹೀಗಾಗಿದ್ದಿದೆ. ಸರತಿ ಸಾಲಿನಲ್ಲಿ ನಿಂತು ಏನಾದರೂ ಸ್ನ್ಯಾಕ್ಸ್ ತಗೋಂಡು ತಡವಾಗಿ ಒಳಹೋಗುವಾಗ  ‘ಆಡಿ’ ನಂಬರ್ ಗಳನ್ನು ನೋಡಲು ತಡವರಿಸಿದ್ದೇನೆ. ಆದರೆ ಯಾವತ್ತೂ ಹೀಗೆ ಬೇರೆ ಆಡಿಟೋರಿಯಂ ಗೆ ಹೋಗಿ ಕೂತಿರಲಿಲ್ಲ . ಪಕ್ಕದವನು ನನ್ನ ಅಸ್ತಿತ್ವಕ್ಕೆ ಯಾವುದೇ ಕಿಮ್ಮತ್ತು ಕೊಡದೆ  ಸಿನಿಮಾ ನೋಡೋದರಲ್ಲಿ ತಲ್ಲೀನನಾಗಿದ್ದ. ಕೇವಲ ಐದು ನಿಮಿಷ ಆ ಸಿನಿಮಾ ನೋಡಿದ ನನಗೆ ಇದೆಂಥ ಬೋರಿಂಗ್ ಕತೆಯಿರಬಹುದು ಎಂದೆನ್ನಿಸಿತು. ಕತ್ತಲೇ ಆವರಿಸಿರುವ ಸ್ಕ್ರೀನ್ ನ ಮೇಲೆ ಅವರಿಬ್ಬರ ಮುಖಗಳು ಮತ್ತು ರೈಲಿನ ಅರುಚುವ ಶಬ್ಧ ಬಿಟ್ಟು ಬೇರೇನೂ ಇರಲಿಲ್ಲ. ಅದನ್ನೇ ಇವನು ಅಷ್ಟೊಂದು ಗಹನವಾಗಿ ನೋಡುತ್ತಿದ್ದಾನಲ್ಲ ಅನ್ನಿಸಿತು. ಎದ್ದು ವಾಪಸ್ಸು ಈ ಹಿಂದಿನ ಸಿನಿಮಾಕ್ಕೆ  ಹೋಗಿ ಕೂರೋಣ ಎಂದುಕೊಂಡವನು ಹಾಗೆ ಮಾಡದೇ ಇದ್ದ ಕಾರಣ ಆ ಸಿನಿಮಾ ಪೂರ್ತಿ ನೋಡಿಂದಾಯಿತು.

RAC ( Reservation Against Cancellation) ಸೀಟುಗಳನ್ನು  ಸಾಮಾನ್ಯವಾಗಿ ಟಿಟಿಈ ( Train Ticket Examiner )ಗಳು ಖಾಲಿ ಉಳಿದಿರುವ ಸೀಟುಗಳಿಗೆ ಮರುಹಂಚಿಕೆ ಮಾಡುತ್ತಾರೆ. ಆದರೆ ಯಾವುದೇ ಸೀಟು, ಯಾವುದೇ ಬೋಗಿಯಲ್ಲಿಯೂ ಖಾಲಿ ಉಳಿದಿಲ್ಲವೆಂದಾದರೆ ಮಾತ್ರ ಹೀಗೆ ಇಬ್ಬರೂ ಎದುರುಬದುರಾಗಿ ಕೂತು ಪ್ರಯಾಣಿಸುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅಂಥದ್ದೇ ಸ್ಥಿತಿಯಲ್ಲಿ ಈ ಇಬ್ಬರು ಇದ್ದಾರೆ. ಇದರ ಮೇಲೆ ಆ ನಿರ್ದೇಶಕ ಅದೇನು ಕತೆ ಕಟ್ಟಿರಬಹುದು ಅನ್ನೋದಾದರೆ ನಿಮ್ಮ ಕುತೂಹಲಕ್ಕೆ ಆ ಕತೆಯನ್ನೂ ಹೇಳಿಬಿಡುತ್ತೇನೆ .

‘ಇತ್ತೀಚಿಗೆ ಟ್ರೈನ್ ಗಳಲ್ಲಿ ಓಡಾಡೋರ ಸಂಖ್ಯೆ ತುಂಬಾ ಜಾಸ್ತಿ ಆಗಿದೆ’ ಎಂದ ಆ ಯುವತಿ ತನ್ನ ಬ್ಯಾಗ್ ನಲ್ಲಿದ್ದ ಹೊದಿಕೆ ಮತ್ತು ತಲೆದಿಂಬನ್ನು ನಿಧಾನಕ್ಕೆ ಹೊರತೆಗೆದಳು. ಎದುರಿಗೆ ಅವನಿದ್ದಾನೆ ಮಲಗುವುದು ಸಾಧ್ಯವಿಲ್ಲ ಎಂದು ತಿಳಿದೂ ಆಕೆ ಅವುಗಳನ್ನು ಹೊರಗೆ ತಗೆದದ್ದು ಪಾಪ ಹುಡುಗಿ ಮಲಗಲಿ ತಾನು ಎಲ್ಲಾದರೂ ಕೆಳಗೆ ಮಲಗಿದರಾಯ್ತು ಎಂದು ಅವನು ಇವಳಗೇ ಪೂರ್ತಿ ಸೀಟು ಬಿಟ್ಟುಕೊಡಬಹುದೇನೋ ಎಂಬುದು ಅವಳ ಯೋಚನೆ. ಆದರೆ ಅವ‌ನು ಆ ರೀತಿಯ ಯಾವ ಸೂಚನೆಯನ್ನೂ ಕೊಡದೆ , ‘ಹೌದು ನಾನು ಕಳೆದ ನಾಲ್ಕು ಬಾರಿ RAC ನಲೇ ರಾತ್ರಿಯಿಡೀ ಕೂತು ಪ್ರಯಾಣ ಮಾಡಿದ್ದೀನಿ . ಇದೊಂಥರ ಶಿಕ್ಷೆ . ಮಲಕ್ಕೊಂಡ್ ಹೋಗೋಷ್ಟು ದುಡ್ಡು ಕೊಟ್ಟು ಕೂತ್ಕೊಂಡು ಹೋಗೋದು ನೋಡಿ’ ಎಂದು ಮುಖ ಸಿಂಡರಿಸಿದ. ಇವಳಿಗದು ಬೇಕಾಗಿರಲಿಲ್ಲ.

‘ಒಂದೇ ಸೀಟಲ್ಲಿ ಇಬ್ರೂ ಅಡ್ಜೆಸ್ಟ್ ಮಾಡ್ಕೊಂಡ್ ಮಲಗೋಣ್ವ ?’ ಎಂದು ಆಕೆ ಕೇಳಿದ್ದಕ್ಕೆ ಇವನಿಗೆ ಕೋಪ ಬಂದು , ‘ಅದ್ಹೇಗ್ರಿ ಸಾಧ್ಯ ? ನೀವ್ಯಾರು ಅಂತಾನೆ ನನ್ಗೆ ಗೊತ್ತಿಲ್ಲ. ಒಬ್ಬ ಅಪರಿಚಿತ ಹುಡುಗ, ಹುಡುಗಿ ಅದ್ಹೇಗ್ರಿ ಈ ಥರ ಇಕ್ಕಟ್ಟಿನಲ್ಲಿ ಜೊತೆಯಲ್ಲಿ ಮಲ್ಕೊಂಡ್ ಪ್ರಯಾಣ ಮಾಡೋದು? ನಿಮ್ಗೆ ಕಾಮನ್ ಸೆನ್ಸ್ ಇಲ್ವ? ಬೇರೆ ಯಾರಾದರೂ ಆದ್ರೆ ಇಂತಹ ಅವಕಾಶವನ್ನ ದುರುಪಯೋಗ ಪಡಿಸಿಕೊಳ್ತಿದ್ರೇನೋ. ನಾನು ಅಂಥವನಲ್ಲ’ ಎಂದು ತನ್ನ ಸಾಚಾತನಕ್ಕೆ ವಾಚಾಳಿತನವನನು ಸಾಕ್ಷೀಕರಿಸಿದ.

ಅವಳಿಗೋ ಅವಮಾನವಾದಂತಾಯಿತು.

ಕೆಲ ಹೊತ್ತು ಇಬ್ಬರೂ ಮಾತಾಡಲಿಲ್ಲ . ರಾತ್ರಿಯ ನಿಶ್ಯಬ್ದವನ್ನು ಸೀಳುತ್ತಾ ರೈಲು ಸಾಗುತ್ತಿತ್ತು. ಬೋಗಿಯೊಳಗಿನ ಜನ ಮನೆಯಲ್ಲಿದ್ದಷ್ಟೇ ಆರಾಮವಾಗಿ ನಿದ್ರಿಸುತ್ತಿದ್ದರು.

‘ ಯಾವ ಊರು ನಿಮ್ಮದು ? ‘

‘ ಎಲ್ಲಿಗೆ ಹೋಗಿದ್ದಿರಿ ಅಥವಾ ಎಲ್ಲಿಂದ ಬರುತ್ತಿದ್ದೀರಿ ? ‘

‘ ಎಲ್ಲಿ ಕೆಲಸ ಮಾಡ್ತೀರಿ ?’

‘ ಮದುವೆಯಾಗಿದೆಯಾ ?’

‘ ಆಗಿದ್ದರೆ ಯಾಕೆ ಒಬ್ಬರೇ ಪ್ರಯಾಣಿಸಿತ್ತಿದ್ದೀರಿ ?’

‘ಮಕ್ಕಳಿದ್ದಾರಾ ? ‘

‘ ಅವರುಗಳ ಹೆಸರೇನು ?’

‘ ಗಂಡೆಷ್ಟು ? ಹೆಣ್ಣುಗಳೆಷ್ಟು ?’

‘ ಹೆಂಗಸರ ವಿಷ್ಯದಲ್ಲಿ ನೀವ್ಯಾಕೆ ಇಷ್ಟು ರಿಸರ್ವ್ ಆಗಿದ್ದೀರಾ ?’

‘ ಯಾರಾದರೂ ಹುಡುಗಿ ಮೋಸ ಮಾಡಿ ಹೋಗಿದ್ದಾಳೆಯೇ ?’

‘ಜೊತೆಗೆ ಮಲಗಿದಾಕ್ಷಣ (ಅದರಲ್ಲೂ ನಾವು ಎದುರುಬದುರಾಗಿಯೇ ಮಲಗಬೇಕು ತಾನೆ ?) ಬ್ರೇಕಿಂಗ್ ನ್ಯೂಸ್ ಆಗಿಬಿಡುತ್ತದೆಯೇ ? ‘

‘ ಈ ಅತೀ ಒಳ್ಳೆಯವರು ಒಂಥರಾ ಇರಿಟೇಷನ್ ಮಾಡ್ತಾರೆ . ಒಂದು ರಾತ್ರಿಯ ಪ್ರಯಾಣಕ್ಕೆ ಇಷ್ಟೆಲ್ಲ ತಕರಾರು ಮಾಡುವವನ ಜೊತೆ ಜೀವನ ಪೂರ್ತಿ ಪ್ರಯಾಣ ಮಾಡಬೇಕಾಗಿ ಬಂದರೆ ಹೇಗಪ್ಪ ? ‘

ಹೀಗೇ, ಅವಳು ಇನ್ನೂ ಏನೇನೋ ಪ್ರಶ್ನೆಗಳನ್ನು ಐದು ನಿಮಿಷಕ್ಕೊಮ್ಮೆ ತನ್ನಲ್ಲಿ ತಾನೇ ಕೇಳಿಕೊಳ್ಳುವ ಹಾಗೆ  ಮೈಂಡ್ ವಾಯ್ಸ್ ಬಳಸಿದ್ದ ನಿರ್ದೇಶಕ. ಸಿನಿಮಾ ಎಷ್ಟೇ ಸ್ಲೋ ಇದ್ದರೂ ಅದರ ಕಂಟೆಂಟ್ ಹಿಡಿದು ಕೂರಿಸ್ತಿತ್ತು ಎಂದು ಹೊರಬರುವಾಗ ಯಾರೋ ಒಬ್ಬ ಷರಾ ಬರೆದಂಗೆ ಹೇಳ್ತಿದ್ದ.

ಹೀಗೆ ರಾತ್ರಿಯಿಡೀ ರೈಲಿನಲ್ಲಿಯೇ ಶೂಟ್ ಮಾಡಿರೋ ಸಿನಿಮಾದ ಕ್ಲೈಮಾಕ್ಸ್ ತೀರ ವಿಶೇಷವೇನೂ ಆಗಿರಲಿಲ್ಲ. ನಾನು ,ನೀವು ಮತ್ತೆ ಎಲ್ಲರೂ ಊಹಿಸಬಹುದಾದದ್ದೇ.

*      *        *      *       *        *         *

ಕೆಲ ಗಂಟೆಗಳ ಕಾಲ ಅವಳ ಮೈಂಡ್ ವಾಯ್ಸ್ ನ್ನೇ ತೋರಿಸುವ ನಿರ್ದೇಶಕ ಆನಂತರ ವಿಪರೀತ ನಿದ್ದೆ ಬಂದಕಾರಣ ಅವಳೇ ಸೀಟಿನ ಕೆಳಗಿರುವ ಜಾಗದಲ್ಲಿ ‌ಮಲಗುತ್ತಾಳೆ. ಆತ ಕೂತಲ್ಲಿಯೇ ಒರಗಿಕೊಂಡು ನಿದ್ದೆ ಮಾಡುತ್ತಿರುತ್ತಾನೆ. ಅಲ್ಲಿಗೆ ಬ್ಲಾಕ್ ಔಟ್ ಆಗಿ, ರೈಲಿನ ಇಂಜಿನ್ ಜೋರಾಗಿ ಕಿರುಚಿದ ಶಬ್ದದೊಂದಿಗೆ ಕೊನೆಗಂಡ‌ ದೃಶ್ಯ ಬೆಳಗ್ಗಿನ ಟಿವಿ ನ್ಯೂಸ್ ನಲ್ಲಿ
‘ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರೇಮಿಗಳಿಬ್ಬರ ಬರ್ಬರ ಹತ್ಯೆ‌ . ಜನಮೇಲ್ನೋಟಕ್ಕೆ ಇದು ಮರ್ಯಾದಾ ಹತ್ಯೆ ಎಂದು ಸಾಬೀತು. ಮನೆಯವರಿಗೆ ಹೇಳದೇ ಓಡಿಹೋಗುವ ಪ್ರಯತ್ನದಲ್ಲಿದ್ದ ಈ ಪ್ರೇಮಿಗಳನ್ನು ಚಾಲಾಕಿನಿಂದ ಹಿಂಬಾಲಿಸಿದ ,ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅವರ ಪೋಷಕರು ಕೊಂದಿದ್ದು ಸರಿನಾ ? ಪ್ರೀತಿಯ ನಿರಾಕರಣೆ ಕೊಲೆಯಲ್ಲೇ ಅಂತ್ಯ ಆಗಬೇಕಾ ? ” ಎಂಬ ಸಾಲುಗಳು ಟಿವಿ ಪರದೆಯ ಮೇಲೆ ಮೂಡುತ್ತಲೇ ಟೈಟಲ್ ಕಾರ್ಡ್ ಓಡಲಾರಂಭಿಸುವುದರ ಮೂಲಕ ಕೊನೆಗೊಳ್ಳುತ್ತದೆ.
•      *        *         *             *         *
ಆಡಿಟೋರಿಯಂ ನ ಲೈಟ್ಸ್ ಆನ್ ಆಗುತ್ತದೆ. ಪಕ್ಕದಲ್ಲಿ ಕೂತವನು ನನ್ನನ್ನೊಮ್ಮೆ ದಿಟ್ಟಿಸಿ ನೋಡುತ್ತಾನೆ. ಬೇರೆ ಯಾರೋ ಬಂದಿಲ್ಲಿ ಕೂತಿದ್ದಾನಲ್ಲ ಎಂಬುದು ಅವನ ಅನುಮಾನ. ನನಗಾಗ ಒಂದು ಪ್ರಶ್ನೆ ಕಾಡತೊಡಗಿತು. ಇಂಟರ್ ವೆಲ್ ತನಕ ನಾನು ನೋಡುತ್ತಿದ್ದ ಸಿನಿಮಾದಲ್ಲಿ ಆಗಲೇ ಕ್ರೈಂ ನಡೆದು ಹೋಗಿತ್ತು. ಅವನನ್ನು ಹುಡುಕುವ ಮತ್ತು ಅದನ್ನು ಜಗಜ್ಜಾಹೀರು ಮಾಡುವ ಪ್ರಯತ್ನ ಸೆಕೆಂಡ್ ಹಾಫ್ ನಲ್ಲಿ ಇರುವುದು ಖಚಿತವಿತ್ತು. ಅಂಥ ರೋಚಕತೆಯಿರುವ ಸಿನಿಮಾಕ್ಕೆ ವಾಪಾಸ್ ಹೋಗಿ ಕೂರುವ ಬದಲು ನಾನು ಈ ಬೋರಿಂಗ್ ಆದ , ಕೇವಲ ಎರಡೇ ಪಾತ್ರಗಳಿದ್ದ ಕತ್ತಲು ಕತ್ತಲು ಇದ್ದ ಸಿನಿಮಾವನ್ನೇ ನೋಡುತ್ತಾ ಕೂರಲು ಕಾರಣವೇನಿರಬಹುದು ? ಕ್ರೈಂ ಇನ್ ವೆಸ್ಟಿಗೇಷನ್ ಗಿಂತ ಕ್ರೈಂ ನಡೆಯುತ್ತದೆ ಎಂಬ ಕುತೂಹಲ ನನ್ನನ್ನಿಲ್ಲಿ ಕೂರಿಸಿತ್ತೆ ? ಎಂಬುದು ನನ್ನ ಅನುಮಾನ. ಆದರೆ ನಾನು ಊಹಿಸಿದ್ದ ಕ್ರೈಂ ಪ್ರಕಾರ ಅವನೇ ಅವಳನ್ನು ರೇಪ್ ಮಾಡಿಯೋ , ಇಲ್ಲವೇ ಹಾಗೆಯೇ ಕೊಲೆ ಮಾಡಿರಬೇಕಿತ್ತು. ಅದು ನನ್ನ ಸಿನಿಮಾ ನೋಡುವ ತಂತ್ರವೋ ಅಥವಾ ನನ್ನೊಳಗೇ ಸುಪ್ತವಾಗಿರುವ ಕ್ರೈಂ ನೇಚರ್ರೋ ಎಂಬುದು ನನಗಿನ್ನೂ ಸ್ಪಷ್ಟವಾಗಬೇಕಿದೆ.

*          *        *         *           *           *      *

ಇಷ್ಟಾದ ಮೇಲೆ ನನಗಿರುವ ದೊಡ್ಡ ಅನುಮಾನ ಒಂದೇ . ಇಂಟರ್ ವೆಲ್ ಗೂ ಮೊದಲು ಈ ಸಿನಿಮಾ ನೋಡುತ್ತಿದ್ದವ ಆ ನಂತರ ಎಲ್ಲಿ ಹೋದ ? ಆ ಸೀಟು ಆಕ್ಯುಪೈ ಆಗಿದ್ದಂತೂ ಪಕ್ಕದಲ್ಲಿ ಕೂತವನ ನೋಟದಿಂದ ನನಗೆ ಖಾತರಿಯಾಯ್ತು. ಹಾಗಾದರೆ ಅವನೂ ಏನಾದರೂ ನಾನು ಈ ಹಿಂದೆ ನೋಡುತ್ತಿದ್ದ ಸಿನಿಮಾಕ್ಕೆ ಹೋಗಿ ನನ್ನ ಜಾಗದಲ್ಲಿ ಕೂರುವಂಥ ಕಾಕತಾಳೀಯ ನಡೆದು ಹೋಯಿತಾ ? ಅಥವಾ ಅವನು ಈ ಟ್ರೈನ್ ಟೇಲ್ ನೋಡಲಾಗದೆ ಮನೆಗೆ ವಾಪಸ್ಸಾದನಾ ? ಇಲ್ಲವೆ ಥೇಟ್ ನನ್ನ ಹಾಗೆಯೇ ಅವನೂ ಕೂಡ ಗೊಂದಲದಲ್ಲಿ ಬೇರ್ಯಾವುದೋ ಆಡಿಟೋರಿಯಂ ಗೆ ಹೋಗಿ ಕೂತಿರಬಹುದಾ ? ಅಲ್ಲಿ ಇನ್ಯಾವ ಇಂಟರೆಸ್ಟಿಂಗ್ ಕತೆ ನಡೆಯುತ್ತಿರಬಹುದು ? ಅವನೂ ವಾಪಾಸ್ಸು ಬರಲಿಲ್ಲ ತಾನೆ ? ಅಥವಾ ಅವನಿಗೇನೋ ಅರ್ಜೆಂಟ್ ಕರೆ ಬಂದು ನಿರ್ಭಾವುಕನಾಗಿ ಎದ್ದು ಹೋಗಿರಬಹುದೆ ? ಎಂದೆಲ್ಲಾ ಯೋಚಿಸುತ್ತಾ ಪಾರ್ಕಿಂಗ್ ಲಾಟ್ ಗೆ ಬಂದೆ.

*         *          *           *          *           *       *

ಸಿನಿಮಾಗಳನ್ನು ಥಿಯೇಟರ್ ಗೆ ಹೋಗಿ ನೋಡುವ ಹವ್ಯಾಸವಿರುವ ಯಾರಿಗಾದರೂ ಇಂತಹ ಅನುಭವವಕಾಶ ಒದಗಿ ಬಂದಿರಬಹುದು. ಆಗ ಅವರೇನು ಮಾಡಿರಬಹುದು ? ಅಷ್ಟಕ್ಕೂ ಇಂಟರ್ ವೆಲ್ ನ ನಂತರ ನಾನು ನೋಡಿದ ಸಿನಿಮಾ ಸಂಪೂರ್ಣವಾಗಿ ಆ ಮೊದಲು ನೋಡಿದ ಸಿನಿಮಾಕ್ಕಿಂತ  ಬೇರೆಯದೇ ಆಗಿರಲು ಸಾಧ್ಯವೇ ?

ಎಲ್ಲಾ ಸಿನಿಮಾಗಳೂ ಒಂದೇ . ಕತೆ ಕಟ್ಟುತ್ತವೆ ಅಷ್ಟೇ. ನಮ್ಮೊಳಗಿನ ಕತೆಗೆ ಅವು ಜೊತೆಗೂಡಿದರೆ ಆಗ ಆ ಕತೆ ನಮಗೆ ಇಷ್ಟವಾಗುತ್ತದೆ. ಎಲ್ಲ ಸಿನಿಮಾಗಳ ಮಧ್ಯೆಯೂ ಒಂದು ಕಾಮನ್  ಲಿಂಕ್ ಇರುತ್ತದೆ. ನಾವದನ್ನು ಗುರುತಿಸಬೇಕಷ್ಟೇ.

ಮುಂದಿನ ಬಾರಿ ಮಾಲ್ ಗೆ ಹೋದಾಗ  Can you try this ?

 

1 comment

Leave a Reply