ಮತ್ತೆ ಸೊಗಸಾದ ಮಳೆಯಾಗಲಿ!

”ಮತ್ತೆ ಮಳೆಯಾಗಲಿ…”

ನನ್ನ ದೆಹಲಿಯ ದಿನಗಳ ವರ್ಷಧಾರೆಯಿನ್ನೂ ನನಗೆ ನೆನಪಿದೆ.

‘ಇದನ್ನು ಮಳೆಯೆನ್ನಲೂ ನಾಲಾಯಕ್ಕು’, ಎಂದು ಆ ಮಳೆಯನ್ನು ನೋಡುತ್ತಾ ನಾನು ಗೊಣಗುತ್ತಿದ್ದ ದಿನಗಳಿದ್ದವು. ಮಂಗಳೂರಿನಂತಹ ಪ್ರದೇಶಗಳಲ್ಲಿ ಮಳೆಗಾಲದ ಹೆಸರಿಗೆ ಕುಂದಾಗದಂತೆ ಮೂರ್ನಾಲ್ಕು ತಿಂಗಳಾದರೂ ಚೆನ್ನಾಗಿ ಮಳೆಯಾಗುತ್ತಿದ್ದುದನ್ನು ನೋಡಿ ಆನಂದಿಸಿದವನು ನಾನು. ಅಂಥದ್ದರಲ್ಲಿ ಯಾರದ್ದೋ ಒತ್ತಾಯಕ್ಕೆ ಬಂದಂತೆ ಕಾಲೆಳೆದುಕೊಂಡು ಬರುತ್ತಿದ್ದ ದೆಹಲಿಯ ಮಳೆಯು ನನಗೆ ಮಳೆಯೇ ಆಗಿರಲಿಲ್ಲ. ಒಟ್ಟಾರೆಯಾಗಿ ನೋಡಿದರೆ ದೆಹಲಿಯ ಮಳೆಯು ಬಹುತೇಕ ಎಲ್ಲರಿಗೂ ಗೊಂದಲಮಯ. ಹೊರಬಂದರೆ ಎಲ್ಲಿ ಬೆಂದು ಹೋಗುತ್ತೇವೆಯೋ ಎಂಬಂತಹ ಜೂನ್-ಜುಲೈ ತಿಂಗಳಲ್ಲಿ ದೆಹಲಿಯ ಜನತೆ ಒದ್ದಾಡುತ್ತಿರುವಾಗ ಒಂದಿಷ್ಟು ವರ್ಷಧಾರೆಯಾದರೆ ಆಹಾ ಎನ್ನಿಸುವಂತಹ ಆಹ್ಲಾದಕರ ವಾತಾವರಣವು ಸೃಷ್ಟಿಯಾಗುತ್ತದೆ. ಈ ಖುಷಿಯನ್ನು ತಳ್ಳಿಹಾಕುವವರೇ ಇರಲಾರರು. ಪ್ರಫುಲ್ಲಗೊಂಡ ಮನಸ್ಸನ್ನು ಹೊಂದಿದ ಜನರ ಹೊಗಳಿಕೆಯಿಂದಾಗಿ ಇದು ವರುಣದೇವನಿಗೆ ಸುಗ್ಗಿಯ ಸಮಯ.

ಆದರೆ ಇದು ಹೆಚ್ಚು ಹೊತ್ತೇನೂ ಉಳಿಯುವುದಿಲ್ಲ. ಒಂದೇ ಒಂದು ತಾಸು ಮಳೆಯಾದರೂ ದೆಹಲಿ ಮತ್ತು ಸುತ್ತಮುತ್ತಲಿನ ಎನ್.ಸಿ.ಆರ್ (ನ್ಯಾಷನಲ್ ಕ್ಯಾಪಿಟಲ್ ರೀಜನ್) ಪ್ರದೇಶದ ಜನಜೀವನವು ಏಕಾಏಕಿ ಅಸ್ತವ್ಯಸ್ತವಾಗುತ್ತದೆ. ಅರ್ಧ-ಒಂದು ತಾಸಿನ ಚಿಲ್ಲರೆ ಮಳೆಗೂ ರಸ್ತೆಗಳು ಈಜುಕೊಳಗಳಂತೆ ಬದಲಾಗುತ್ತವೆ. ಟ್ರಾಫಿಕ್ ಜಾಮ್ ಬ್ರಹ್ಮರಾಕ್ಷಸನಂತೆ ಹೆದರಿಸುತ್ತದೆ. ರಸ್ತೆಗಳನ್ನು ತುಂಬಿರುವ ನೀರು ಪಾದಗಳನ್ನು ನುಂಗಿ ಮತ್ತಷ್ಟು ಮೇಲೆ ಹತ್ತಲು ಹರಸಾಹಸ ಮಾಡುತ್ತದೆ. ”ಈಗಷ್ಟೇ ಸುಡ್ತಾ ಇತ್ತು. ಹೀಗೆ ಏಕಾಏಕಿ ಮಳೆ ಬಂದರೆ ಕಷ್ಟಾನಪ್ಪಾ”, ಎಂದು ಮೆಟ್ರೋ ಸ್ಟೇಷನ್ನುಗಳ ಗೇಟುಗಳ ಆಶ್ರಯದಲ್ಲಿ ಮಳೆಯಿಂದ ರಕ್ಷಿಸಿಕೊಳ್ಳಲು ನಿಂತಿರುವ ದೈತ್ಯ ಜನಜಂಗುಳಿಗಳು ತಮ್ಮತಮ್ಮಲ್ಲೇ ನಿಡುಸುಯ್ಯುತ್ತಿರುತ್ತವೆ. ‘ಮಳೆ ಬರೋದೇನೋ ಓಕೆ, ಆದ್ರೆ ನೋಟೀಸ್ ಕೊಟ್ಟು ಬರಬಾರದೇ’, ಎಂದು ಗುರ್ರೆನ್ನುವ ವರ್ಗವಿದು. ಏಕೆಂದರೆ ದೆಹಲಿಯ ಮಳೆಯೆಂದರೆ ಮಹಾಚಂಚಲೆ. ಬರುವುದು, ಹೋಗುವುದು ಅದರ ಮರ್ಜಿ. ಅದು ಕಪ್ಪುಮೋಡಗಳ ದಿಬ್ಬಣ ಕಟ್ಟಿಕೊಂಡು, ಗುಡುಗುಡು ಅಬ್ಬರಿಸಿ ಸೂಚನೆ ಕೊಡುತ್ತಾ ಬರುವುದಿಲ್ಲ. ಬಿಸಿಲ ಮಧ್ಯದಲ್ಲೂ ಏಕಾಏಕಿ ಧೋ ಎಂದು ಸುರಿದುಬಿಡುತ್ತದೆ. ಹೀಗೆ ಮಳೆಯ ಮೊದಲ ಹಂತದ ಆಹ್ಲಾದವು ಇಳಿದ ನಂತರ ಎಲ್ಲವೂ ಅಸಹನೀಯ ಎನ್ನಿಸತೊಡಗುತ್ತದೆ. ಮಳೆಗೂ, ವರುಣದೇವನಿಗೂ, ನಗರಪಾಲಿಕೆಗೂ, ಸರಕಾರಕ್ಕೂ ಸಗಟಿನಲ್ಲಿ ಜನರಿಂದ ಶಾಪಗಳು ಸಂದಾಯವಾಗುತ್ತವೆ. ಒಟ್ಟಿನಲ್ಲಿ ಮಳೆ ಬಂದರೂ ಕಷ್ಟ, ಬರದಿದ್ದರೂ. ಲೋಕೋ ಭಿನ್ನರುಚಿ!

ಅಂದು ಅಂಗೋಲಾದಲ್ಲಿ ನನ್ನ ಮೊದಲ ಮಳೆಗೆ ಕಾದು ಕುಳಿತಾಗಲೂ ಎಂಥದ್ದೋ ಒಂದು ರೋಮಾಂಚನ. ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತಿದ್ದ ಆ ಪ್ರದೇಶ, ತಲೆಯೆತ್ತಿ ನೋಡಿದರೆ ಏರಿ ಬರುವಂತೆ ಹೆದರಿಸುತ್ತಿದ್ದ ದೈತ್ಯಾಕಾರದ ಮೋಡಗಳು, ಮಳೆಯನ್ನು ಹೊತ್ತು ತರುತ್ತಿರುವ ಕಾರ್ಮೋಡಗಳಿಂದಾಗಿ ಗ್ರಹಣ ಹಿಡಿದಂತೆ ಸಂಜೆ ಐದಕ್ಕೇ ಕತ್ತಲಾಗುವ ಬಗೆ, ದೂರದಲ್ಲೆಲ್ಲೋ ಸುರಿಯುತ್ತಿರುವ ಮಳೆಯು ಬಕೆಟ್ಟಿನಿಂದ ನೀರು ಹುಯ್ಯುವಂತೆ ಇನ್ನೆಲ್ಲಿಂದಲೋ ನೋಡುತ್ತಿರುವ ನಮ್ಮ ಕಣ್ಣುಗಳಿಗೆ ಕಾಣುವ ಪರಿ… ಇವೆಲ್ಲವನ್ನು ಆಸ್ವಾದಿಸುವುದೇ ಚಂದ. ಒಟ್ಟಿನಲ್ಲಿ ಅಂಗೋಲಾದ ಮಳೆ, ಬೆಂಗಳೂರಿನ ಮಳೆ, ದೆಹಲಿಯ ಮಳೆ… ಅಂತೆಲ್ಲಾ ನಾವುಗಳು ಸುಮ್ಮನೆ ಮಾತಿಗೆ ಬಳಸುತ್ತೇವಷ್ಟೇ. ಮಳೆ ಎಲ್ಲಿ ಬಂದರೂ ಸರಿಯೇ. ಅದೊಂದು ನಿಜಕ್ಕೂ ಮಧುರ ಜೀವೋಲ್ಲಾಸ!

ಹೀಗೆ ಕಾರ್ಮೋಡಗಳು ಖಿಲ್ಜಿಯ ಸೈನ್ಯದಂತೆ ಗುಂಪುಗಟ್ಟಿ ನಗರದಲ್ಲಿ ಧಾಂಧಲೆಯನ್ನೆಬ್ಬಿಸುವ ರಣೋತ್ಸಾಹದಲ್ಲಿ ಏರಿಬರುವಂತೆ ಕಾಣುತ್ತಿದ್ದಂತೆಯೇ ಅಂಗೋಲಾದ ಬೀದಿಗಳು ಮುಂದಿನ ಹೆಜ್ಜೆಯಿಡಲು ಲಗುಬಗೆಯಿಂದ ತಯಾರಾಗುತ್ತವೆ. ಚಿಕ್ಕ ಸಂತೆಗಳಲ್ಲಿ ಬುಟ್ಟಿಗಳೊಂದಿಗೆ ಕುಳಿತಿರುವ ಮಹಿಳಾ ವ್ಯಾಪಾರಿಗಳು ಬೇಗಬೇಗನೇ ತಮ್ಮ ಸಾಮಾನುಗಳನ್ನು ಬಟ್ಟೆಗಳಲ್ಲಿ ಸುತ್ತಿ ಜಾಗಖಾಲಿ ಮಾಡಲು ತಯಾರಾಗುತ್ತಾರೆ. ಮನೆಗಳ ಹೊರಗೆ ಒಣಗಲಿಟ್ಟಿದ್ದ ಕಸಾವಾ ಉತ್ಪನ್ನಗಳು, ಮೀನುಗಳು, ವೈನ್ ಬಾಟಲುಗಳಲ್ಲಿ ತುಂಬಿಸಿಟ್ಟಿರುವ ಡೀಸೆಲ್ ಗಳು ಒಳಸೇರುತ್ತವೆ. ಮಳೆಗೆ ಆಶ್ರಯವೆಂಬಂತೆ ಕಾಣಬಹುದಾದ ಎಲ್ಲಾ ಜಾಗಗಳೂ ಕ್ಷಣಾರ್ಧದಲ್ಲಿ ತುಂಬತೊಡಗುತ್ತವೆ. ಎಲ್ಲಿಗೋ ತಲುಪಬೇಕಾಗಿದ್ದವರು ಮತ್ತಷ್ಟು ವೇಗದಲ್ಲಿ ದಾಪುಗಾಲಿಕ್ಕುತ್ತಾರೆ. ಏಕೆಂದರೆ ಅವರಿಗ್ಗೊತ್ತು. ಈ ಮಳೆಯೆಂದರೆ ಅಂತಿಂಥದ್ದಲ್ಲ. ಒಮ್ಮೆ ಬಂದರೆ ನಿಲ್ಲುವ ಮಾತೇ ಇಲ್ಲದೆ ಭರ್ಜರಿಯಾಗಿ ಸುರಿದು ಎಲ್ಲವನ್ನೂ ನಿವಾಳಿಸಿ ಬಿಡುತ್ತದೆಂದು.

ಇವರೆಲ್ಲರ ನಿರೀಕ್ಷೆಗೆ ತಕ್ಕಂತೆ ಬಹಳಷ್ಟು ಬಾರಿ ಹೀಗಾಗುತ್ತೆ ಕೂಡ. ಹಲವು ವರ್ಷಗಳ ನಂತರ ಎದೆಯ ಅಣೆಕಟ್ಟಿನ ದ್ವಾರಗಳನ್ನು ತೆರೆದು ಕಟ್ಟಿಹಾಕಿದ್ದ ಕಣ್ಣೀರನ್ನೆಲ್ಲಾ ಹರಿದುಬಿಡುವಷ್ಟರ ಭರದಲ್ಲಿ, ಸುರಿಯುವ ವರ್ಷಧಾರೆಯು ‘ಮಳೆ ಅಂದ್ರೆ ಹೀಗಿರಬೇಕು’ ಎಂಬ ರೀತಿಯಲ್ಲಿ ಯಾವುದೇ ಚೌಕಾಶಿಗಳಿಲ್ಲದೆ ಭರ್ಜರಿಯಾಗಿ ಸುರಿಯುತ್ತದೆ. ಮನೆಗಳಲ್ಲಿದ್ದವರು ವಯಸ್ಸಿನ ಭೇದವಿಲ್ಲದೆ ಎಲ್ಲರೂ ತಮ್ಮ ತಮ್ಮ ಗೂಡುಗಳಿಂದ ಹೊರಬಂದು ಮಳೆಯಲ್ಲಿ ನೆನೆದು ಹಾಯಾಗುತ್ತಾರೆ. ಇನ್ನು ಕೆಲ ತಿಂಗಳುಗಳು ನೀರಿಗೇನೂ ಸಮಸ್ಯೆಯಿಲ್ಲ ಎಂಬ ಆಶಾಭಾವವೇ ಮನೆಯ ಹೆಣ್ಣುಮಕ್ಕಳ ಮೊಗಗಳಲ್ಲಿ ಮತ್ತಷ್ಟು ಮಂದಹಾಸವನ್ನು ತರುತ್ತದೆ. ಇನ್ನು ಬೆಚ್ಚಗಿನ ಸೂರುಗಳಡಿಯಲ್ಲಿ ಸುರಕ್ಷಿತವಾಗಿರುವವರು ಎಂದಿನಂತೆ ಕಾಫಿ, ಸಂಗೀತ, ಪುಸ್ತಕಗಳ ಜೊತೆಗೂಡಿ ಮಳೆಗಾಲವನ್ನು ಮತ್ತಷ್ಟು ಸುಂದರವಾಗಿಸುವಲ್ಲಿ ನಿರತರಾಗುತ್ತಾರೆ. ನೀರಿನ ಸಮಸ್ಯೆಯಿರುವ ಬಹುತೇಕ ಪ್ರದೇಶಗಳಲ್ಲಿ ಮಳೆಗಾಲವೆಂದರೆ ನಿಜಕ್ಕೂ ನಿರಾಳತೆಯ ಋತು.

ಕುಡಿಯುವ ನೀರಿಗೇ ಸಂಕಷ್ಟವಿರುವಾಗ ನಿತ್ಯವೂ ಸ್ನಾನಾದಿ ಕಾರ್ಯಗಳನ್ನು ಸರಾಗವಾಗಿ ಮಾಡುವುದು ಕಷ್ಟವೇ. ಅದರಲ್ಲೂ ಬಹುಪಾಲು ಮಕ್ಕಳನ್ನು ಹೊಂದಿದ್ದು, ಸರಾಸರಿ ಆರರಿಂದ ಎಂಟರಷ್ಟು ಸಂಖ್ಯೆಯುಳ್ಳ ಇಲ್ಲಿಯ ಕುಟುಂಬಗಳಲ್ಲಿ ನೀರಿದ್ದಷ್ಟೂ ಸಾಲದು ಎಂಬ ಪರಿಸ್ಥಿತಿ. ಪರಿಸ್ಥಿತಿಗಳು ಹೀಗಿರುವಾಗ ಐದಾರು ತಿಂಗಳುಗಳ ಕಾಲ ನಿರಂತರವಾಗಿ ಸುರಿಯುವ ಮಳೆಯು ನೀರಿಗಾಗಿ ವ್ಯಯಿಸಬೇಕಾದ ಶ್ರಮ, ಹಣ ಮತ್ತು ಸಮಯಗಳನ್ನು ಉಳಿಸಿ ಜೀವನವನ್ನು ಮತ್ತಷ್ಟು ಸುಲಭವಾಗಿಸುವಂತೆ ಭಾಸವಾಗುತ್ತದೆ. ನಿತ್ಯವೂ ಮನೆಗಳಲ್ಲಿ ನೀರಿನ ವ್ಯವಸ್ಥೆಯನ್ನು ಮಾಡಬೇಕಾಗಿರುವವರು ಮಹಿಳೆಯರೇ ಆಗಿರುವುದರಿಂದ ಮಳೆಗಾಲವೆಂದರೆ ಅವರಿಗೆ ಮತ್ತಷ್ಟು ಪ್ರೀತಿ. ಹೀಗೆ ಸ್ನಾನದಿಂದ ಹಿಡಿದು ಪಾತ್ರೆಗಳನ್ನು ತೊಳೆಯುವುದು, ಬಟ್ಟೆ ಒಗೆಯುವುದು ಇತ್ಯಾದಿ ದಿನನಿತ್ಯದ ಕೆಲಸಗಳಿಗೆ ಹಿಡಿದಿಟ್ಟ ಮಳೆಯ ನೀರು ಉಪಯುಕ್ತವಾಗಿ ಪರಿಣಮಿಸುವುದು ಸತ್ಯ.

ಇನ್ನು ಕೆಲವೊಮ್ಮೆ ತೀರಾ ಚಂಡಮಾರುತದಂತೆ ಸುರಿಯುವ ವರ್ಷಧಾರೆಯು ಇಡೀ ಶಹರವನ್ನೇ ಅಲ್ಲೋಲಕಲ್ಲೋಲ ಮಾಡುವುದೂ ಇದೆ. ಈ ಮಳೆಯು ಅದ್ಯಾವ ಮಟ್ಟಿಗೆ ಸುರಿಯುತ್ತವೆಂದರೆ ವಾಹನಗಳನ್ನು ಓಡಿಸುತ್ತಿರುವವರು ಒಂದಿಷ್ಟೂ ಕಾಣದೆ ಗೊಂದಲಕ್ಕೊಳಗಾಗಿ ಮೂಲೆಯಲ್ಲೆಲ್ಲೋ ನಿಲ್ಲಿಸಿಬಿಡುತ್ತಾರೆ. ವೈಪರ್ ಗಳು ಅದೆಷ್ಟೇ ವೇಗದಲ್ಲಿ ಅತ್ತಿತ್ತ ಓಲಾಡುತ್ತಿದ್ದರೂ ಒಂದೇ ಬಾರಿಗೆ ಎಲ್ಲಾ ದಿಕ್ಕುಗಳಿಂದಲೂ ಮುಖದ ಮೇಲೆ ರಾಚುತ್ತಿರುವಂತೆ ಕಾಣುವ ಕುಂಭದ್ರೋಣದಂತಿನ ಮಳೆಯೆದುರು ಅವುಗಳು ಮಾತು ಮರೆಯುತ್ತವೆ. ಇಂತಹ ಸಂದರ್ಭಗಳಲ್ಲಿ ಮರಗಳಡಿಯಲ್ಲಿ ವಾಹನವನ್ನು ನಿಲ್ಲಿಸದಿರುವುದು ಸಾಮಾನ್ಯಜ್ಞಾನವೂ ಹೌದು, ಬುದ್ಧಿವಂತಿಕೆಯೂ ಹೌದು. ಈ ಧಾರಾಕಾರ ಮಳೆಯು ಮರಗಳನ್ನು ಕಿತ್ತೆಸೆಯಲಾರದಾದರೂ ಕೊಂಬೆಗಳನ್ನು ಮುರಿಯುವಷ್ಟು ಶಕ್ತವಾಗಿರುವಂಥವುಗಳು. ಅಷ್ಟೇನೂ ಗಟ್ಟಿಯಾಗಿಲ್ಲದ ಆದರೆ ಎತ್ತರವಾಗಿ ಬೆಳೆದಿರುವ ಕೃಶಕಾಯಿ ಮರಗಳು ಇಂಥಾ ಮಳೆಗಳಲ್ಲಿ ಧರೆಗುರುಳುವುದು, ಅಕ್ಕಪಕ್ಕದಲ್ಲಿರುವ ಮನೆಗಳನ್ನು, ವಾಹನಗಳನ್ನು, ಅಂಗಡಿಗಳನ್ನು ಜಖಂಗೊಳಿಸುವುದು ಇತ್ಯಾದಿಗಳು ಸಾಮಾನ್ಯ.

ಇನ್ನು ತೀರಾ ತಗ್ಗುಪ್ರದೇಶಗಳು ಇಂಥಾ ಜೋರಿನ ಮಳೆಯಿಂದಾಗಿ ಸಂಕಷ್ಟಕ್ಕೊಳಗಾಗುವ ಸಂದರ್ಭಗಳೂ ಉಂಟಾಗುತ್ತವೆ. ಹಲವು ಬಾರಿ ಈ ಮಳೆಯು ಮಣ್ಣನ್ನೂ ತನ್ನ ಜೊತೆ ತಂದು ಕೊಚ್ಚಿಹಾಕುತ್ತದೆ. ಕಾಲಿಡಲೂ ಆಗದಷ್ಟು, ವಾಹನಗಳೇನಾದರೂ ದಾರಿತಪ್ಪಿ ಬಂದಲ್ಲಿ ಚಕ್ರಗಳು ಸಿಕ್ಕಿಹಾಕಿಕೊಳ್ಳುವಷ್ಟು ತಗ್ಗುಪ್ರದೇಶಗಳನ್ನು ಕೆಸರಾಗಿಸುತ್ತವೆ. ಅಂಗೋಲಾದ ಗ್ರಾಮೀಣ ಭಾಗದಲ್ಲಿರುವ ಬಹಳಷ್ಟು ಮನೆಗಳು ಮಣ್ಣಿನ ಮನೆಗಳಾಗಿರುವುದರಿಂದ ಮಿತಿಮೀರಿದ ಮಳೆಯಿಂದಾಗಿ ಭಾರೀ ಹೊಡೆತಕ್ಕೊಳಗಾಗುವ ಸಂದರ್ಭಗಳೂ ಇಲ್ಲಿ ಸಾಮಾನ್ಯ. ಒಂದೆರಡು ವರ್ಷಗಳ ಹಿಂದೆ ವೀಜ್ ನಲ್ಲಿ ಸುಮಾರು ಐದರಿಂದ ಆರು ತಾಸುಗಳ ಕಾಲ ಸುರಿದ ನಿರಂತರ ಮಳೆಯು ಇಡೀ ಶಹರವನ್ನೇ ಕಂಗಾಲಾಗಿಸಿತ್ತು. ಸಾರಿಗೆ, ವಿದ್ಯುಚ್ಛಕ್ತಿ ಸೌಲಭ್ಯಗಳು ನೆಲಕಚ್ಚಿದ್ದವು. ಬೀದಿಗಳು, ರಸ್ತೆಗಳು ಚೆಲ್ಲಾಪಿಲ್ಲಿಯಾದಂತೆ ಕಂಡವು. ಸಹಜವಾಗಿಯೇ ಹಲವು ಕುಟುಂಬಗಳೂ ಕೂಡ ಮಳೆಯ ಈ ಆರ್ಭಟದಿಂದಾಗಿ ಬೀದಿಗೆ ಬರಬೇಕಾಯಿತು.

ಈ ಬಾರಿ ರಾಜಧಾನಿಯಲ್ಲಿ ಸುರಿದ ಮಳೆಯೂ ಕೂಡ ಕೆಲ ಬೀದಿಗಳನ್ನು ಕೆರೆಗಳನ್ನಾಗಿಸಿ ಪೇಚಿಗೆ ದೂಡಿತು. ಒಳಚರಂಡಿ ವ್ಯವಸ್ಥೆಗಳು ಕೈಕೊಟ್ಟ ಪರಿಣಾಮವಾಗಿ ಈ ಬಾರಿ ಲುವಾಂಡಾ ಪಟ್ಟ ಕಷ್ಟವು ಅಷ್ಟಿಷ್ಟಲ್ಲ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಮಳೆ ನೀರನ್ನು ಹಿಡಿದಿಡುವ, ಅವುಗಳನ್ನು ಮಳೆಯಿಲ್ಲದ ದಿನಗಳಲ್ಲಿ ಸಮರ್ಥವಾಗಿ ಬಳಸುವ ಪ್ರಯತ್ನಗಳು ತುರ್ತಾಗಿ ನಡೆಯಬೇಕಿವೆ. ಸಾಕಷ್ಟು ಹಸಿರಿನಿಂದ ಕಂಗೊಳಿಸುತ್ತಿರುವ ಅಂಗೋಲಾ ದೇಶವು ತನ್ನ ಬಹುತೇಕ ಪ್ರದೇಶಗಳಲ್ಲಿ ಒಳ್ಳೆಯ ಮಳೆಯನ್ನು ಪಡೆಯುತ್ತಿರುವುದೇನೋ ನಿಜ. ಆದರೆ ಹೆಚ್ಚುತ್ತಿರುವ ಜನಸಂಖ್ಯೆ, ನೀರಿನ ಪರಿಮಿತ ಮೂಲಗಳು, ಅವೈಜ್ಞಾನಿಕ ಬಳಕೆ, ಹೆಚ್ಚುತ್ತಿರುವ ನೀರಿನ ಬೇಡಿಕೆಯ ಪ್ರಮಾಣ… ಇತ್ಯಾದಿಗಳನ್ನು ಪರಿಗಣಿಸಿದರೆ ಮಳೆಯ ನೀರನ್ನು ಪರಿಣಾಮಕಾರಿಯಾಗಿ ಬಳಸುವತ್ತ ಸ್ಥಳೀಯ ಸರಕಾರಗಳು ಗಂಭೀರವಾಗಿ ಯೋಚಿಸಬೇಕಾಗಿರುವ ಅವಶ್ಯಕತೆಯು ಗೋಚರಿಸುವುದು ಸ್ಟಷ್ಟ.

ಇನ್ನು ಅಂಗೋಲಾದ ಮಳೆಗಾಲದ ದಿನಗಳಲ್ಲಿ ಹಲವು ಬಾರಿ ಕೆಲ ತಮಾಷೆಯ ದೃಶ್ಯಗಳೂ ಕಾಣಿಸಿಕೊಳ್ಳುವುದುಂಟು. ಉದಾಹರಣೆಗೆ ಮಳೆಗಾಲವೆಂದು ಗೊತ್ತಿದ್ದರೂ ಇಲ್ಲಿಯ ಬಹುಪಾಲು ಸ್ಥಳೀಯರು ಕೊಡೆಗಳನ್ನು ಹಿಡಿದುಕೊಂಡು ಓಡಾಡುವುದಿಲ್ಲ. ಪ್ರತೀಬಾರಿಯೂ ಇನ್ನೇನು ಮಳೆಯಾಗಲಿದೆ ಎಂಬಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಆಶ್ರಯವನ್ನು ಬಯಸಿ ದಿಕ್ಕಾಪಾಲಾಗಿ ಓಡುತ್ತಾರೆಯೇ ಹೊರತು ತಮ್ಮ ತಮ್ಮ ಕೊಡೆಗಳಡಿಯಲ್ಲಿ ಹಾಯಾಗಿರುವುದು ತೀರಾ ಕಮ್ಮಿ. ಹಾಗೆ ನೋಡಿದರೆ ನಗರ ಪ್ರದೇಶದಲ್ಲಿರುವ ಜನರೇ ವಾಸಿ. ಕೊಡೆಗಳನ್ನು ಒಂದಿಷ್ಟಾದರೂ ಬಳಸುವುದು ಈ ಭಾಗದವರು ಮಾತ್ರ. ಲುವಾಂಡಾ, ವಾಂಬೋ, ಬೆಂಗೇಲಾದಂತಹ ನಗರ ಪ್ರದೇಶಗಳಲ್ಲಿರುವ ಕಾಸ್ಮೋಪಾಲಿಟನ್ ಸಂಸ್ಕøತಿಯೂ ಇದಕ್ಕೆ ಕಾರಣವಿರಬಹುದು. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಹೆಚ್ಚಿನವರು ಮಳೆಗೂ ಸೈ, ರಣಬಿಸಿಲಿಗೂ ಸೈ. ಹೀಗೆ ಅದೆಷ್ಟೇ ದೊಡ್ಡ ಜಡಿಮಳೆಯಾಗಿ ತೊಯ್ದು ಒದ್ದೆಕೋಳಿಯಂತಾದರೂ, ಬಿಸಿಲಿಗೆ ಬಹುತೇಕ ಸುಟ್ಟುಹೋದರೂ ತಮಗೂ ಹವಾಮಾನಕ್ಕೂ ಯಾವುದೇ ಸಂಬಂಧವೇ ಇಲ್ಲವೆಂಬಂತೆ ಬದುಕುವ ಆಸಾಮಿಗಳಿವರು. ಒಟ್ಟಿನಲ್ಲಿ ಕೊಡೆಗಳ ವ್ಯಾಪಾರ ಮಾಡುವವರು ಅಂಗೋಲಾದಲ್ಲೇನೂ ನಿರೀಕ್ಷಿಸುವಂತಿಲ್ಲ.

ಹಲವು ತಾಸುಗಳ ಕಾಲ ನಿರಂತರವಾಗಿ ಸುರಿಯುವ ಮಳೆಯ ಆನಂದವನ್ನು ಸವಿದು ವರ್ಷಗಳೇ ಆಗಿದ್ದವು. ಅಂಥದ್ದರಲ್ಲಿ ಬಾಲ್ಯದ ಆ ದಿನಗಳ ಸವಿಯನ್ನು ಮತ್ತೆ ಮರಳಿ ತಂದಿದ್ದು ಅಂಗೋಲಾದ ನೆಲ. ಇನ್ನು ಬರೋಬ್ಬರಿ ಎರಡು ದಶಕಗಳ ನಂತರ ಗುಬ್ಬಚ್ಚಿಗಳನ್ನು ನಾನು ಮತ್ತೆ ನೋಡಿದ್ದೂ ಕೂಡ ಇದೇ ನೆಲದಲ್ಲಿ. ಹೀಗೆ ಆಕಾಶ ಸೀಳಲು ತುದಿಗಾಲಲ್ಲಿರುವ ಗಗನಚುಂಬಿ ಕಟ್ಟಡಗಳು, ಬೆದರಿಸುವ ಫ್ಲೈ-ಓವರ್ ಗಳು, ಸದಾ ಹೊಗೆಯುಗುಳುವ ಚಿಮಣಿಗಳು ಇತ್ಯಾದಿಗಳ ಯುಗದಲ್ಲೂ ಪ್ರಕೃತಿಗೆ ಇನ್ನೂ ಹತ್ತಿರವಾಗಿರುವ ಪ್ರದೇಶಗಳನ್ನು ಕಂಡಾಗಲೇ ಹಸಿರಿನ, ಮಳೆಯ, ನಿಸರ್ಗದ ಸೊಬಗಿನ, ಪ್ರಾಮುಖ್ಯತೆಗಳ ಬಗ್ಗೆ ನಮಗೆ ಅರಿವಾಗುವುದು. ನಗರೀಕರಣ, ಕೈಗಾರಿಕೀಕರಣದ ಕಬಂಧಬಾಹುಗಳು ಅಂಗೋಲಾದ ಕುಗ್ರಾಮಗಳನ್ನು ತಲುಪುವುದು ಇನ್ನೂ ಸಾಕಷ್ಟು ದೂರವಿದೆ. ಅಲ್ಲಿಯವರೆಗಾದರೂ ಈ ನೆಲವು ನಿಸರ್ಗಕ್ಕೆ ಹತ್ತಿರವಾಗಿ ಉಳಿಯಲಿ. ಅಂಗೋಲಾದ ಹಸಿರು, ಅರಣ್ಯಸಂಪತ್ತು ಮತ್ತಷ್ಟು ಸಮೃದ್ಧಿಯನ್ನು ತರಲಿ.

ಮತ್ತೆ ಸೊಗಸಾದ ಮಳೆಯಾಗಲಿ!

 

1 comment

  1. Very nice writing Prasanna,

    Very nice description of on coming rain, expectations and disturbances from rain, but author eagerly awaits rain ! Nice pictures to supplement the feelings of rainy days! I loved it

    ರವಿ ಸಾಣಿಕೊಪ್ಪ

Leave a Reply