ಗದ್ಗದಿತನಾಗಿ ಕ್ಷಣಕಾಲ ಮಾತೇ ಹೊರಡಲಿಲ್ಲ..

ಸಂಗಮೇಶ ಮೆಣಸಿನಕಾಯಿ 

ಫೇಸ್ ಬುಕ್ ನಿಂದ 

ಮಡಿಕೇರಿ, ಕೇರಳದ ಜನ್ರಿಗೆ ನಾನೂ ೧೦೧ ರೂಪಾಯಿ ಕೊಡಬೇಕು ಅಂತ ಮಾಡೀನಿ. ಹೆಂಗ ಕೊಡಬೇಕು ಅಂತ ಗೊತ್ತಾಗವಲ್ದು. ಇವನೌನ ಯಾರ ಕೈಯಾಗರ ಕೊಟ್ಟರ ಮುಟ್ಟಿಸ್ತಾರೋ, ತಿಂದು ಹಾಕ್ತಾರೋ ಗೊತ್ತಿಲ್ಲ…’.

‘ಹೇ…ನಾನೂ ೫೦೧ ರೂ. ಕೊಡಬೇಕಂತ ಮಾಡೀನಿ. ಯಾರೂ ನಂಬಿಕಸ್ಥರ ಸಿಗವಲ್ರು’.

ನರೇಗಲ್ ಬಸ್ ನಿಲ್ದಾಣದ ಹೊರಗಿನ ಡಬ್ಬಿ ಅಂಗಡಿ ಬಳಿ ನಡೆದಿರುವ ಚರ್ಚೆ ಇದು. ಸ್ವಲ್ಪ ಹೊತ್ತಿನ ಚರ್ಚೆಯನ್ನು ಕೇಳಿಸಿಕೊಂಡ ನಂತರ, ನಾನೂ ಮಧ್ಯ ಪ್ರವೇಶಿಸಿ ‘ಮುಖ್ಯಮಂತ್ರಿ ಪರಿಹಾರ ನಿಧಿ ಖಾತೆಗೆ ಹಾಕ್ರಿ’ ಅಂದೆ. ಬ್ಯಾಂಕ್ನಲ್ಲಿ ದುಡ್ಡು ಇಡುವುದು, ತೆಗೆದುಕೊಳ್ಳುವುದು ಬಿಟ್ಟರೆ ಬೇರೆ ವ್ಯವಹಾರ ಮಾಡಿ ಗೊತ್ತಿಲ್ಲ ಈ ಶ್ರಮಜೀವಿಗಳಿಗೆ. ‘ಅಣ್ಣಾರ ನಿಮ್ಮ ಕೈಯಾಗ ಕೊಡ್ತೀವಿ. ನೀವ ಹಾಕಿಬಿಡ್ರಿ’ ಅಂತ ನನ್ನ ಕೈಯಲ್ಲಿಯೇ ಕೊಡಲು ಬಂದರು! ಏನು ಹೇಳಬೇಕೋ ಗೊತ್ತಾಗಲಿಲ್ಲ.
ನಾನು ಹಣವನ್ನಂತೂ ಮುಟ್ಟಲಿಲ್ಲ. ‘ಬ್ಯಾಂಕ್ಗೆ ಹೋಗಿ ಕೇಳ್ರಿ…ಅವರು ಹೆಂಗ ಹಾಕಬೇಕು ಅನ್ನೂದು ಹೇಳ್ತಾರ’ ಅಂತ ತಿಳಿಹೇಳಿದೆ.

ಇನ್ನೂ ಮುಂದುವರಿದು, ‘ನೀವ ಆ ಖಾತೆಗೆ ಹಣ ಹಾಕಿದರ ನಿಮ್ಮ ಹೆಸರಲ್ಲಿ ಹಾಕಿದಂಗ ಆಗುತ್ತ. ನಾನು ಹಾಕಿದರ ನನ್ನ ಹೆಸರಲ್ಲಿ ಹೋಗತೈತಿ’ ಅಂದೆ. ಆಗ ಈ ಫೋಟೊದಲ್ಲಿರುವ ಗಾಂಧಿ ಟೋಪಿ ಅಜ್ಜ, ‘ಸಾಹೇಬರ ನಮಗ ನಮ್ಮ ಹೆಸರು ಮುಖ್ಯ ಅಲ್ರಿ. ಅಲ್ಲಿ ಕಷ್ಟದಾಗ ಇರೂ ಜನ್ರಿಗೆ ನಮ್ಮ ಹಣ ಮುಟ್ಟೂದು ಮುಖ್ಯ’ ಅಂದರು.

ಗದ್ಗದಿತನಾಗಿ ಕ್ಷಣಕಾಲ ಮಾತೇ ಹೊರಡಲಿಲ್ಲ.

1 comment

Leave a Reply