ಸರ್ವ ಜನಾಂಗದ ಶಾಂತಿಯ ತೋಟ..

ನಮ್ಮ ದೇಶದಲ್ಲಿ ಅದೆಷ್ಟೋ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಲಕ್ಷಾಂತರ ಜನರು ಸೇರುವ ಬಹಳಷ್ಟು  ಉತ್ಸವಗಳು ದೇಶಾದ್ಯಂತ ಆಚರಿಸಲಾಗುತ್ತದೆ.  ವೈವಿಧ್ಯಮಯ ಮೇಳಗಳು, ಯಾತ್ರೆಗಳು, ಅಭಿಷೇಕ ಕಾರ್ಯಗಳು.. ಹೀಗೆ ಲೆಕ್ಕ ಕ್ಕೆ ಸಿಗದ ಪಟ್ಟಿಗಳೇ ಇವೆ.  ಅನೇಕ ಪುರಾತನ ಇತಿಹಾಸಗಳು ಕೂಡ ಇಡೀ ಜಗತ್ತಿಗೆ ಹರಡಿ ತನ್ನ ಮನ್ನಣೆ ಗಳಿಸಿವೆ. ಮಹಾನ್ ವ್ಯಕ್ತಿಗಳು ಜನಿಸಿದ ನಾಡು ನಮ್ಮದು. ಅಂತಹ ಮಹಾಪುರುಷರಿಂದ ಸಾವಿರಾರು ಬೋಧನೆಗಳು ನಡೆದಿವೆ. ಅವುಗಳನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ದಾಟಿಸುವ ಕಾರ್ಯಗಳು ಭರದಿಂದ ಸಾಗುತ್ತಿವೆ.  ಸರ್ವಧರ್ಮ ಸಮನ್ವಯ ಸಾರೋದೆ ನಮ್ಮೆಲ್ಲರ ಮಂತ್ರ.  ಧಾರ್ಮಿಕ ಸಹಿಷ್ಣುತೆಯನ್ನು ಕಾಪಾಡಿಕೊಂಡು ಬರುತ್ತಿರುವ ದೇಶ ಅನ್ನುವ ಹೆಗ್ಗಳಿಕೆಯೂ ನಮಗೆ ಇದೆ. ಆದರೆ ಇವುಗಳ ಬೆನ್ನಲ್ಲೇ ನಡೆಯುವ ಕೋಮು ಗಲಭೆ, ಹಿಂಸಾಚಾರಗಳಿಗೆ, ವಿಧ್ವಂಸಕ ಕೃತ್ಯಗಳಿಗೆ ಯಾರು ಹೊಣೆ ?  ನಮ್ಮ ನೆರಳಿನಂತೆ ಬಾಧಿಸುತ್ತಿರುವ ಈ ಚಟುವಟಿಕೆಗಳಿಗೆ ಎಂದು ಕೊನೆ ? ಸಾರ್ವಜನಿಕವಾಗಿ ನಡೆಯುವ ಪ್ರಚೋದನಾತ್ಮಕ ಕ್ರಿಯೆಗಳಿಗೆ ಕಡಿವಾಣವೇ ಇಲ್ವಾ.

ನಮ್ಮ ನಂಬಿಕೆ, ಯಾವುದೇ ತೊಂದರೆ, ಹೇರಿಕೆಗಳನ್ನು ನೀಡದೆ ಮಾಡುವಂತಹ ಆಚಾರ ವಿಚಾರಗಳು ಒಂದೆಡೆಯಾದ್ರೆ, ಅವನ್ನೇ ರಾಜಕೀಯ ಮಾಡಿ, ಜನರ ಮನಸ್ಸನ್ನು ಕೆರಳಿಸಿ ಬಿಡೋ ಅತೃಪ್ತತೆ ಇನ್ನೊಂದೆಡೆ. ನಮ್ಮಲ್ಲಿ ವಾಕ್ ಸ್ವಾತಂತ್ರ್ಯ ಎಷ್ಟರ ಮಟ್ಟಿಗೆ ಬೆಳೆದಿದೆ ಅಂದ್ರೆ , ಪ್ರತಿಯೊಂದು ವಿಚಾರದಲ್ಲೂ ರಾಜಕೀಯ ಮಾಡುವುದೇ ಒಂದು ಶೋಕಿ.  ಅಂಥವನಿಗೆ ವಾಗ್ಮಿ ಅನ್ನುವ ಪಟ್ಟ ಬೇರೆ. ಇವಕ್ಕೆಲ್ಲಾ ಪ್ರತಿಕ್ರಿಯೆ ನೀಡುವ ಮೊದಲು ನಮ್ಮೊಳಗಿರುವ ಪ್ರಬುದ್ಧತೆ ಯನ್ನು ಪ್ರಶ್ನೆ ಮಾಡಿಕೊಳ್ಳುವ ಅನಿವಾರ್ಯತೆ ಇಂದಿನ ದಿನಗಳಲ್ಲಿ ಇದೆ.

ಇಂತಹದ್ದೇ ಪ್ರೌಢ ವಿಚಾರದಲ್ಲಿ ಸಿಂಗಾಪುರ ಸರ್ಕಾರದ ಪಾತ್ರ ಮಹತ್ವದ್ದು. ಜಾತಿ, ಧರ್ಮ, ರೀತಿ – ರಿವಾಜುಗಳು ಏನೇ ಇರಲಿ , ಅವುಗಳನ್ನು ಅನುಸರಿಸುವ ಬಗ್ಗೆ ಇಲ್ಲಿ ಯಾವುದೇ ಆಕ್ಷೇಪವಿಲ್ಲ. ಆದರೆ ಜನಾಂಗೀಯ ಅಥವಾ ಧಾರ್ಮಿಕ ಸಾಮರಸ್ಯವನ್ನು ಪ್ರತಿಕೂಲವಾಗಿ ಪರಿಣಾಮ ಬೀರುವಂತಹ ಭಾಷಣ ಅಥವಾ ಕಾರ್ಯಕ್ರಮಗಳು ಮಾತ್ರ ಕಾನೂನು ಬಾಹಿರ.  ನಮ್ಮಲ್ಲಿ ಹೀಗೆ ನಡೆಯುವ ಕ್ರಮ ಇದೆಯಾ..?  ಸಂಪೂರ್ಣ ತದ್ವಿರುದ್ಧ. ನಮ್ಮಲ್ಲಿ ಪ್ರಚಾರ ಪ್ರಿಯರೇ ಹೆಚ್ಚು. ಸ್ವಂತಕ್ಕೆ ನಿಯಮಗಳು ಪಾಲನೆ ಆಗ್ತವೋ ಇಲ್ವೋ . ಸಾರ್ವಜನಿಕವಾಗಿ ಮಾತ್ರ ಎಲ್ಲರೂ ನಾಯಕರೇ.

ಸಿಂಗಾಪುರ ದೇಶ ಸಂಪೂರ್ಣ ಪಾರದರ್ಶಕತೆಯನ್ನು ಹೊಂದಿದೆ ಅನ್ನೋದನ್ನು ನಾನು ಇಲ್ಲಿ ಹೇಳ್ತಿಲ್ಲ. ನಮ್ಮ ದೇಶದ ಹಾಗೆ ಅದೆಷ್ಟೋ ರಾಜಕೀಯ ಇಲ್ಲೂ ತಾಂಡವ ಆಡುತ್ತಿರಬಹುದು. ಆದರೆ ದೇಶದ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಡೆಯುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಸಿಂಗಾಪುರದಲ್ಲಿ ಪ್ರಮುಖ ಧಾರ್ಮಿಕ ಪಂಥಗಳು ಅಸ್ತಿತ್ವದಲ್ಲಿವೆ. ಚೈನೀಸ್ 74.3%, ಮಲಯ್ 13.4%, ಇಂಡಿಯನ್ 9.1% (ಶ್ರೀಲಂಕಾದವರು ಸೇರಿ), ಇತರೆ 3.2% ರಷ್ಟು ನೆಲೆಸಿದ್ದಾರೆ.  ಧರ್ಮಗಳು ಪ್ರಮುಖವಾಗಿ ಬುದ್ಧಿಸ್ಟ್ 33.9%, ಮುಸ್ಲಿಂ 14.3%, ಟಾವೊ 11.3%, ಕ್ಯಾತೋಲಿಕ್ 7.1%, ಹಿಂದೂ 5.2%, ಹೀಗೆ ಪಟ್ಟಿ ಸಾಗುತ್ತವೆ.

ಸಾರ್ವಜನಿಕವಾಗಿ ಎಲ್ಲಾ ಧರ್ಮದವರು ಸಮಾನರು, ಎಲ್ಲರಿಗೂ ಒಂದೇ ಕಾನೂನು. ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳ ವಿಭಿನ್ನತೆ ಯನ್ನು ಇಲ್ಲಿ ಕಾಣಬಹುದು. “ಪ್ಯೂ ಸರ್ಚ್ ಸೆಂಟರ್” 2014 ರಲ್ಲಿ ನಡೆಸಿದ ವಿಶ್ಲೇಷಣೆಯ ಪ್ರಕಾರ, ವಿಶ್ವದಲ್ಲೇ ಅತ್ಯಂತ ಧಾರ್ಮಿಕ ವೈವಿಧ್ಯಮಯ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಸಿಂಗಾಪುರ ಪಾತ್ರವಾಗಿದೆ.  ಶ್ರೀಮಂತ ಇತಿಹಾಸವನ್ನು ಹೊಂದಿರುವ  ನಮ್ಮಲ್ಲಿ ಕಾನೂನುಗಳೇ ನೆಟ್ಟಗಿಲ್ಲ. ಇನ್ನೂ ಜನರು ಸುಧಾರಿಸುವ ಬಗೆ ದೇವರಿಗೆ ಪ್ರೀತಿ. ಕುಟುಂಬ ರಾಜಕೀಯ, ಲಂಚ ಅವತಾರಗಳು, ದೊಡ್ಡ ವ್ಯಕ್ತಿಗಳ ಪ್ರಭಾವಗಳಲ್ಲೇ ನಮ್ಮ ದಿನ ಬೆಳಗಾಗೋದು.

ಸಿಂಗಾಪುರದಲ್ಲಿ ಎಲ್ಲಾ ಧಾರ್ಮಿಕ ಗುಂಪುಗಳು ಸರ್ಕಾರದ ಪರಿಶೀಲನೆಗೆ ಒಳಪಟ್ಟಿವೆ ಮತ್ತು ಸೊಸೈಟೀಸ್ ಕಾಯಿದೆಯಡಿ ಕಾನೂನು ಬದ್ಧವಾಗಿ ಇವುಗಳಿಗೆ ನೊಂದಣಿ ಅಗತ್ಯ. ಕಾನೂನು ಬಾಹಿರ ಚಟುವಟಿಕೆ ಹಿನ್ನಲೆಯಲ್ಲಿ1972 ರಲ್ಲಿ Jehovah’s Witnesses ಮತ್ತು 1982 ರಲ್ಲಿ Unification Church ಎಂಬ ಎರಡು ಗುಂಪುಗಳನ್ನು ಇಲ್ಲಿ ನಿಷೇಧಿಸಲಾಗಿದೆ. ಹೀಗಾದಾಗ ಇವು ಆಸ್ತಿಯನ್ನು ಹೊಂದುವುದು, ಹಣಕಾಸಿನ ವಹಿವಾಟು, ಅಥವಾ ಸಾರ್ವಜನಿಕ ಸಭೆಗಳನ್ನು ನಡೆಸುವುದು ನಿಷಿದ್ಧವಾಗಿದೆ. ಇಂತಹ ವಿಚಾರದಲ್ಲಿ ನಮ್ಮ ಕಥೆ ಶೋಚನೀಯ. ಕಣ್ಣಿಗೆ ಕಾಣುವ, ತೆರೆಮರೆಯಲ್ಲಿ ಕಾರ್ಯವಿರ್ವಹಿಸುವ ಸಾವಿರಾರು ಸಂಘ ಸಂಸ್ಥೆಗಳು ಹುಟ್ಟಿವೆ ಮತ್ತು ಇನ್ನೂ ಹುಟ್ಟುತ್ತಲೇ ಇವೆ. ಅದರಲ್ಲಿ ಅಸಲಿ ಯಾವುದು, ನಕಲಿ ಯಾವುದು ಅನ್ನೋದು ಸಂಶಯಗಳ ಗೂಡು. ಕೆಲವು ಗುಂಪುಗಳು ಉತ್ತಮ ಕಾರ್ಯ ಚಟುವಟಿಕೆಯಲ್ಲಿ ತೊಡಗಿದ್ರೆ, ಮತ್ತೆ ಕೆಲವು ವರ್ಗಗಳಲ್ಲಿ ಹೇಳತೀರದ ಅವ್ಯವಹಾರಗಳು. ಇನ್ನೊಂದೆಡೆ ಸಮಾಜ ಕಾರ್ಯದಲ್ಲಿ ತೊಡಗಿದ ಸಂಸ್ಥೆಗಳನ್ನು ಹಾಳು ಮಾಡಲೆಂದೇ ಹುಟ್ಟುವ ಮತ್ತಷ್ಟು ಗುಂಪುಗಳು.

ಹಾಗೆ ನೋಡಿದರೆ ಸಿಂಗಾಪುರ ಸರ್ಕಾರವು, ವಿವಿಧ ಧರ್ಮಗಳ ಬಗೆಗೆ ತಾಳ್ಮೆಯನ್ನು ಹೊಂದಿದ್ದು ಧಾರ್ಮಿಕ ಸಾಮರಸ್ಯವನ್ನು ಪ್ರೋತ್ಸಾಹಿಸುತ್ತದೆ. ಅನೇಕ ಚೀನೀ ಮತ್ತು ಭಾರತೀಯ ದೇವಾಲಯಗಳು, ಮಲಯ್ ಮಸೀದಿಗಳು, ಮತ್ತು ಕ್ರಿಶ್ಚಿಯನ್ ಚರ್ಚುಗಳನ್ನು ಇಲ್ಲಿ ಕಾಣಬಹುದು. ಹೆಚ್ಚಿನ ಧಾರ್ಮಿಕ ಚಟುವಟಿಕೆಗಳನ್ನು ಮನೆಯಲ್ಲೇ ನಡೆಸಲಾಗುತ್ತದೆ. ವಿಭಿನ್ನ ಜನಾಂಗೀಯ ಗುಂಪುಗಳ ಧಾರ್ಮಿಕ ಕ್ಯಾಲಂಡರ್ ಗಳ ಪ್ರಕಾರ ವಿವಿಧ ಬಗೆಯ “ರಸ್ತೆ ಉತ್ಸವಗಳು” ಇಲ್ಲಿ ನಡೆಯುತ್ತವೆ. ಜೊತೆಗೆ ಧಾರ್ಮಿಕ ಕಾರ್ಯಕ್ರಮಗಳೇ ಇರಲಿ ಅಥವಾ ಮನೋರಂಜನೆ, ರಾತ್ರಿ ೧೦.೩೦ ಬಳಿಕ ಸಾರ್ವಜನಿಕವಾಗಿ ಧ್ವನಿವರ್ಧಕಗಳನ್ನು ಬಳಸುವ ಹಾಗಿಲ್ಲ.

ಈ ಸಂಗತಿ ಜೊತೆಗೆ ನಮ್ಮ ದೇಶದ ಸ್ಥಿತಿ ಕಲ್ಪಿಸಿದ್ರೆ ನಗು ಬರುತ್ತೆ ಅಲ್ವಾ. ಧರ್ಮದ ವಿಚಾರಗಳ ಬಗ್ಗೆ ಮಾತು ಎತ್ತುವ ಹಾಗಿಲ್ಲ, ಇದುವರೆಗೆ ಕಾಣದ , ಕಂಡು ಅರಿಯದ ಮಹಾನ್ ನಾಯಕರು , ರಾತ್ರಿ – ಬೆಳಗಾಗೋದ್ರಲ್ಲಿ ಪ್ರತ್ಯಕ್ಷವಾಗಿಬಿಡ್ತಾರೆ.  ಒಂದಷ್ಟು ದಿನ ಅವರದ್ದೇ ಹವಾ. ಅಯ್ಯೋ ಮಾಧ್ಯಮ , ಸಾಮಾಜಿಕ ಜಾಲತಾಣಗಳು ತುಂಬಾ ಉಪದೇಶಗಳ ಸುರಿಮಳೆ. ನಾನಿರುವ ಈ ದೇಶದಲ್ಲಿ ಮಾತ್ರ, ಹೀಗೇನಾದ್ರೂ ಮಾಡಿದ್ರೆ, ಕೋರ್ಟ್ ಕಚೇರಿ ಹೇಳಿ ಸುತ್ತಾಡಿಸಿ, ಜನ್ಮ ಜಾಲಾಡಿಸಿ ಬಿಡ್ತಾರೆ. ಜೈಲು ಕಳುಹಿಸಲು ಹೇಸಲ್ಲ ಇಲ್ಲಿನ ಕಾನೂನು.

ಜಾತಿ – ಧರ್ಮ ಪ್ರತಿಪಾದಿಸುತ್ತಾ ದಿನ ಕಳೆಯುವ ನಮಗೆ ಇಲ್ಲಿನ ಹಲವಾರು ಸಂಗತಿಗಳು ಅಚ್ಚರಿ ಮೂಡಿಸುತ್ತದೆ. ಅದರಲ್ಲೂ ದೇವಾಲಯಗಳಲ್ಲಿ ಸ್ಥಾಪಿತವಾಗಿರುವ ಬೇರೆ ಸಮುದಾಯಗಳಿಗೆ ಸೇರಿದ ಮೂರ್ತಿಗಳು ಹಾಗೂ ಅವುಗಳ ಪೂಜಾ ಕೈಂಕರ್ಯ. ಇಲ್ಲಿನ ಲೋಯಾಂಗ್ ತುವಾ ಪೆಕ್ ಕಾಂಗ್ ದೇವಾಲಯದಲ್ಲಿ ತಾವೊ ತತ್ತ್ವ, ಹಿಂದೂ ಧರ್ಮ, ಮತ್ತು ಬೌದ್ಧ ಧರ್ಮಗಳನ್ನು ಪೂಜಿಸಲಾಗುತ್ತದೆ. ಇದೇ ಆವರಣದಲ್ಲಿ ಮುಸ್ಲಿಂ ದೇವಾಲಯವೂ ನೆಲೆಯಾಗಿದೆ.  ಇಲ್ಲಿನ ಹಿಂದೂ ದೇವಾಲಯಗಳಲ್ಲೂ ಚೈನೀಸ್ ದೇವರ ಮೂರ್ತಿಗಳನ್ನು ಕಾಣಬಹುದು. ಚಾಂಗಿ ವಿಲೇಜ್ ನಲ್ಲಿ ರುವ ಶ್ರೀ ರಾಮನ ದೇಗುಲದಲ್ಲಿ ಬುದ್ಧನ ಹಾಗೂ ಗುವಾನಿನ್ ದೇವತೆಯ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. “ಬೂಗಿಸ್’’ಎಂಬಲ್ಲಿ ಸಿಮಾಲು ಗುವಾನಿನ್ ದೇವಾಲಯದಲ್ಲಿ ಕೃಷ್ಣನ ವಿಗ್ರಹ ವನ್ನು ಪೂಜಿಸಲಾಗುತ್ತದೆ. ಒಂದೇ ರಸ್ತೆಯಲ್ಲಿ ಹಿಂದೂ , ಮುಸ್ಲಿಂ , ಕ್ರಿಸ್ಚಿಯನ್ ಧರ್ಮ ಮಂದಿರಗಳು ಇಲ್ಲಿವೆ.

ಪ್ರಮುಖ ಧರ್ಮದ ಪವಿತ್ರ ದಿನಗಳಿಗೆ ಸರ್ಕಾರಿ ರಜೆಗಳನ್ನು ಘೋಷಿಸಲಾಗಿದೆ. ಮುಸ್ಲಿಮರ ದಿನಕ್ಕಾಗಿ ಹರಿ ರಾಯ ಹಾಜಿ ಮತ್ತು ಹರಿ ರಾಯ ಪೌಸ, ಕ್ರಿಶ್ಚಿಯನ್ನರಿಗೆ ಗುಡ್ ಫ್ರೈಡೆ ಮತ್ತು ಕ್ರಿಸ್ಮಸ್, ಹಿಂದೂಗಳಿಗೆ ದೀಪಾವಳಿ ಮತ್ತು ಬೌದ್ಧರಿಗೆ ವೆಸಾಕ್.

ಜನಾಂಗೀಯ ಸಾಮರಸ್ಯವನ್ನು ಉತ್ತೇಜಿಸುವ ಸಲುವಾಗಿ ಇಲ್ಲಿ ಸರ್ಕಾರಿ ಕಾರ್ಯಕ್ರಮಗಳು ನಡೆಯುತ್ತವೆ. ಪ್ರಧಾನಿ ಲೀ ಹೈನ್ ಲೂಂಗ್ , “ ಕಮ್ಯೂನಿಟೀ ಎಂಗೇಜ್ಮೆಂಟ್ ಕಾರ್ಯಕ್ರಮ”ವನ್ನು { ಸಿಇಪಿ } 2006 ರಲ್ಲಿ ಅನಾವರಣಗೊಳಿಸಿದರು. ಸಿಇಪಿ ಮೂಲಕ ಅನೇಕ ಸಮುದಾಯ-ಆಧಾರಿತ ವಿಚಾರಗೋಷ್ಟಿಗಳು ನಡೆಸಲಾಗುತ್ತದೆ. ಧಾರ್ಮಿಕ ಮತ್ತು ಸಮುದಾಯಗಳ ನಡುವಿನ ಸಾಮರಸ್ಯದ ಪರವಾಗಿ ಬಹು ಜನರ ಗುಂಪುಗಳನ್ನು ರೂಪಿಸಲು ಕಾರ್ಮಿಕ ಒಕ್ಕೂಟದ ಜೊತೆ ಸೇರಿ ಕೆಲಸವನ್ನು ಮಾಡೋದಲ್ಲದೆ ಈ ಹಿನ್ನೆಲೆಯಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ವೇದಿಕೆಯಾಗಲು ಹೊಸ ವೆಬ್ ಸೈಟ್  ಅನ್ನು ಪ್ರಾರಂಭಿಸಲಾಗಿದೆ.

ಈ ದೇಶ ವೈವಿಧ್ಯಮಯ ಜನಾಂಗೀಯಗಳ ಮಿಶ್ರಣ. ಮನೆಗಳ ಮಾರಾಟ ಹಾಗೂ ಖರೀದಿ ವಿಚಾರಗಳಲ್ಲಿ ಜನಾಂಗೀಯತೆಯ ಕೋಟಾ ವ್ಯವಸ್ಠೆ ಕಾರ್ಯ ನಿರ್ವಹಿಸುತ್ತದೆ. ಎತ್ನಿಕ್ ಇಂಟಿಗ್ರೇಷನ್ ಪಾಲಿಸಿ ಮೂಲಕ ಸರ್ಕಾರಿ ಒಡೆತನದ ಅಪಾರ್ಟ್ಮೆಂಟ್ ಗಳಲ್ಲಿ ಆಯಾಯ ವರ್ಗಗಳಿಗೆ ಇಂತಿಷ್ಟು ಮನೆಗಳು ಎಂಬ ಲೆಕ್ಕಾಚಾರಗಳು ಇಲ್ಲಿ ನಡೆಯುತ್ತವೆ.

ಒಂದು ಜನಾಂಗದ  ಸದಸ್ಯರು ಒಂದೇ ಸ್ಥಳಗಳಲ್ಲಿ ಕ್ರೋಢೀಕರಣಗೊಳ್ಳುವ ಬದಲು ಎಲ್ಲ ಕಡೆ ಹೊಂದಾಣಿಕೆಯ ಜೀವನ ಶೈಲಿಯನ್ನು ಅಳವಡಿಸುವ ಮಹತ್ವದ ಕಾರ್ಯ ಇದಾಗಿದೆ.

ಪ್ರತಿ ವರ್ಷ ಜುಲೈ ೨೧ರಂದು ದೇಶದಾದ್ಯಂತ “ರೇಶಿಯಲ್ ಹಾರ್ಮನೀ ಡೇ” ಆಚರಿಸಲಾಗುತ್ತದೆ. ಧಾರ್ಮಿಕ ಗುಂಪುಗಳು, ಶಾಲೆಗಳು ಮತ್ತು ಜನಸಾಮಾನ್ಯ ಸಂಘಟನೆಗಳು ಈ ಪ್ರಯುಕ್ತ ಅನೇಕ ಸಮಾರಂಭಗಳನ್ನು ಆಯೋಜಿಸುತ್ತವೆ . ಶಿಕ್ಷಣ ಸಚಿವಾಲಯವು 1997 ರಲ್ಲಿ ಮೊದಲ ಬಾರಿಗೆ ಈ ಕಾರ್ಯಕ್ರಮವನ್ನು ಶಾಲೆಗಳಲ್ಲೂ ಆಚರಿಸಲು ಪ್ರಾರಂಭಿಸಿತು.

ಜುಲೈ 21, 1964ರಲ್ಲಿ ಹಿಂಸಾತ್ಮಕ ಜನಾಂಗೀಯ ಹಿಂಸಾಚಾರ  ನಡೆದಿತ್ತು. ಈ ಘಟನೆಯಲ್ಲಿ 22 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದು ನೂರಾರು ಜನರು ತೀವ್ರವಾಗಿ ಗಾಯಗೊಂಡಿದ್ದರು. 50 ಮತ್ತು 60 ರ ದಶಕದುದ್ದಕ್ಕೂ ಅನೇಕ  ಕೋಮು ಗಲಭೆಗಳು ಮತ್ತು ಘಟನೆಗಳು ಸಂಭವಿಸಿದ ವರದಿಗಳು ಇಲ್ಲಿವೆ. ಆ ಸಂದರ್ಭದಲ್ಲಿ ಸಿಂಗಾಪುರ ಮಲೇಷ್ಯಾದ ಭಾಗವಾಗಿ ಗುರುತಿಸಿಕೊಂಡಿತ್ತು.

ರೇಶಿಯಲ್ ಹಾರ್ಮನೀ ಡೇ ದಿನದಂದು ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಇತರೆ ಸಂಸ್ಕೃತಿಯ ಸಾಂಪ್ರದಾಯಿಕ ವೇಷಭೂಷಣಗಳನ್ನು ಧರಿಸಲು ಪ್ರೋತ್ಸಾಹಿಸಲಾಗುತ್ತದೆ. ಚೀನಿಯರ ಸಾಂಪ್ರದಾಯಿಕ ಉಡುಗೆ ಚೊಂಗ್ಸಾಮ್,  ಮಲಯ್ ಅವರ “ಬಜು ಕುರುಂಗ್” ಈ ದಿನದ ಹೈಲೈಟ್ಸ್. ಸಾಂಪ್ರದಾಯಿಕ ಭಕ್ಷ್ಯಗಳು  ಕೂಡ ಪ್ರಮುಖ ಪಾತ್ರವಹಿಸುತ್ತವೆ. ಇವಿಷ್ಟಲ್ಲದೆ  ಅವರವರ ಸಾಂಪ್ರದಾಯಿಕ ಆಟಗಳು, ರಂಗೋಲಿ ಸ್ಪರ್ಧೆ,  ಮದರಂಗಿ { ಹೆನ್ನಾ} ಬಿಡಿಸಿ ಹಿರಿಯರು – ಕಿರಿಯರೆನ್ನದೆ ತಮ್ಮದೇ  ಹಬ್ಬದಲ್ಲಿ ಭಾಗವಹಿಸಿದ ಸಂತೋಷವನ್ನು ಅನುಭವಿಸುತ್ತಾರೆ.

ಹೀಗೆ ಮುನ್ನೆಚ್ಚರಿಕಾ ಕ್ರಮವಾಗಿ, ಮೂಲ ಮಟ್ಟದಿಂದಲೇ ಜನರ ನಡುವೆ ಸಾಮರಸ್ಯವನ್ನು ಉಳಿಸಿ ಬೆಳೆಸುವ ಕಾರ್ಯ ಇಲ್ಲಿ ನಡೀತಾ ಇವೆ.

ಮೇಲೋ – ಕೀಳೋ ತಾನು ಮಾಡುವ ಕೆಲಸದಲ್ಲಿ, ನಂಬುವ ವಿಚಾರದಲ್ಲಿ ಅಹಂಕಾರವಿಲ್ಲದ ತೃಪ್ತ ಮನೋಭಾವ ಇರಬೇಕು. ನಮ್ಮ ತಲೆಗೆ ನಮ್ಮದೇ ಕೈ ಹೇಳುವ ಹಾಗೇ, ನಾಳಿನ ದಿನದ ಗ್ಯಾರಂಟಿನೇ ಇಲ್ಲದ ಇಂದಿನ ಜಗತ್ತಿನಲ್ಲಿ ಸುಖಾಸುಮ್ಮನೆ ಬೇರೆಯವರ ವಿಷಯದಲ್ಲೇ ಕೊಂಕು ನುಡಿಯುತ್ತ ಬದುಕೋದಿಕ್ಕಿಂತ  ಎಲ್ಲರ ಜೊತೆ  ಸಮನ್ವಯ ಜೀವನದ ಪರಿಪಾಠ ಬೆಳೆಸಿದ್ದಲ್ಲಿ ನಮ್ಮ ಸುತ್ತಲಿನ ವಾತಾವರಣವೂ ಸುಖಮಯವಾದೀತು.

2 comments

  1. Thank you Sri Vidya,
    Nice to hear of racial tolerance and harmony in Singapore. You seem to have the struck the right balance in this area. Government seems to encourage these principles while suppressing cults and fanatics. There are regulations to curb and keep harmful elements at bay.
    In UK THERE IS COMPLETE religious freedom and freedom of speech. This has clearly given the head ache. Nation is struggling to sustain the integration.
    Well done Singapore.

    ರವಿ ಸಾಣಿಕೊಪ್ಪ

Leave a Reply