ಅರೆ ಇಸಕಿ ನನ್ನ ಕಾಲಿಗೇನಾಯ್ತಪ್ಪಾ!

ಗೀತಾ ಹೆಗ್ಡೆ, ಕಲ್ಮನೆ 

ಎಂದಿನಂತೆ ಬೆಳಿಗ್ಗೆ ಪಟಕ್ಕಂತ ಏಳಲು ಹೋದೆ.  ಎದ್ದೆ.  ಆದರೆ ಅರೆ ಇಸಕಿ ನನ್ನ ಕಾಲಿಗೇನಾಯ್ತಪ್ಪಾ! ಎಡಗಾಲು ಮಡಿಸಲು ಆಗ್ತಿಲ್ಲ ಮಂಡಿ ವಿಪರೀತ ನೋವು, ಒಂದೆಜ್ಜೆ ಇಡಲಾಗದಷ್ಟು ಯಾತನೆ.  ಮತ್ತಾಂಗೆ ಕೂತೆ ಮಂಚದ ಮೇಲೆ.  ಕಾಲು ಮಾತ್ರ ಕದಂ ಕೋಲ್.  ಯಪ್ಪಾ ಹೆಂಗೆಂಗೋ ಅಂತೂ ಇಂತೂ ನಿಧಾನವಾಗಿ ಮಡಸಿ ಬಿಟ್ಟು ಸ್ವಲ್ಪ ಕಸರತ್ತು ಮಾಡಿ ಹೋಗ್ ಹೋಗು ನಾ ಎಂದೊ ಗುಡ್ಬೈ ಹೇಳಾಗಿದೆ ಸಾಕಷ್ಟು ರೊಮೈಟೈಡ್ ಆರ್ಥರೈಟೀಸ್ ನೋವು ಹತ್ತು ವರ್ಷ ತಿಂದೂ ತಿಂದೂ.  ಅದನ್ನೇ ಯೋಗ ಸಾಧನೆ ಮಾಡಿ ಓಡ್ಸಿದೀನಂತೆ.  ಈಗ ನಿಂದ್ಯಾವ ಲೆಕ್ಕ?

ಆದರೆ ಯೋಚನೆ ಶುರು ; ಆಗಿಲ್ಲದ ಮಂಡಿ ನೋವು ಈಗೆಲ್ಲಿಂದ ಹೊಸದಾಗಿ ವಕ್ಕರಿಸಿಕೊಂಡ್ತು?  ರಾತ್ರಿ ಮಲಗುವಾಗ ಆರಾಂ ಇತ್ತಲ್ಲಾ ಕಾಲು.  ಥೊ…. ಎಂತಾ ಕೆಲಸ ಆಯ್ತು.  ಈ ದಿನ  ನಯನ ಸಭಾಂಗಣದಲ್ಲಿ ಒಂದೊಳ್ಳೆ ಕಾವ್ಯ ವಾಚನ ಕಾರ್ಯಕ್ರಮ ಇತ್ತು.  ಹೋಗಬೇಕು ಒಂದೆರಡು ಜನ ಭೇಟಿ ಆಗೊ ಲಿಸ್ಟಲ್ಲಿ ಇದ್ರು.  ಹೀಗಾಗೋಯ್ತಲ್ಲಾ.  ಈ ಬಾರಿ ಅವರುಗಳು ಬರ್ತಾರೆ ಅಂತ ಗೊತ್ತಿದ್ದೂ ಹೋಗಿಲ್ಲ ಅಂದರೆ ಗ್ಯಾರೆಂಟಿ ನನ್ನ ತಪ್ಪಾಗಿ ತಿಳ್ಕೋತಾರೆ.  ಸುಳ್ಳು ಸಬೂಬು ಹೇಳಲು ಬರೋದಿಲ್ಲ.  ಓ… ಆ ದಿನ ನಡೆದ ಅಭಿನಂದನೆ ಕಾರ್ಯಕ್ರಮ ಮೊದಲೇ ಸರಿಯಾಗಿ ತಿಳ್ಕೊಳ್ಳದೇ ಏನೇನೋ ಕೆಲಸ ಹಚ್ಚಿಕೊಂಡು ಸಮಾರಂಭದಲ್ಲಿ ಪಾಲ್ಗೊಳ್ಳೊ ಅವರುಗಳನ್ನು ಭೇಟಿ ಆಗೋದು ಮಿಸ್ ಮಾಡ್ಕೊಂಡೆ.  ಆಗೇನೊ ಹಲವಾರು ಕಾರಣಗಳ ನಿಮಿತ್ತ ಬರಲಾಗಲಿಲ್ಲ ಅಂತ ನಿಜವಾದ ಮೆಸೇಜ್ ವಗಾಯಿಸಿದ್ದೆ.  ಇವತ್ತೂ ಏನಾದರೂ ಹೇಳಿದರೆ ನಂಬುತ್ತಾರಾ?  ದೇವರೆ ದೇವರೆ….

ಹಂಗೆ ಕೇಳಿದೆ “ಬೆಂಗಳೂರಿಗೆ ಬಂದಿದ್ದೀರಾ”

“ಇಲ್ಲ ಪ್ರೋಗ್ರಾಂ ಪೋಸ್ಟ್ ಪೋನ್ ಆಯ್ತು” ಒಂಟಿ ಕಾಲ ಕುಣಿತ WhatsApp ಮೆಸೇಜ್ ನೋಡಿ.

ಅಂತೂ ಇಂತೂ ಒಂದತ್ತು ನಿಮಿಷ ಖಾಯಂ ನಮ್ಮನೆಯಲ್ಲಿ ನನ್ನ ಅತಿಥಿ ಏನು ಆಪದ್ಬಂಧುವಾಗಿ ಯಾವಾಗಾದರೂ ಬರುವ ಸೊಂಟ ನೋವಿಗೆ ರಾಮಭಾಣವಾದ ನನ್ನ ತಲೆ ದಿಂಬ ಕೆಳಗೆ ಠಿಕಾಣಿ ಹೂಡಿದ ಅದೇ ಆ ನೋವಿನ ಮುಲಾಮು ಮುಲಾಜಿಲ್ಲದೆ ತಿಕ್ಕಿ ತೀಡಿ ನಿಧಾನವಾಗಿ ಎದ್ದು ನಡೆಯೊ ಪ್ರಯತ್ನ ಮಾಡಿದರೆ ಮಂಡಿ ಸುತಾರಾಂ ಬಾಗವಲ್ಲದು.  ಒಂದು ಕಾಲು ಉದ್ದ ಒಂದು ಕಾಲು ಗಿಡ್ಡ ಇದ್ದವರ ತರ ಮಾರಿಗೊಂದು ಹೆಜ್ಜೆ ಎತ್ತಿಡೋದು ಈ ಕಾಲು ಬ್ಯಾಲೆನ್ಸ್ ಮಾಡೋದರಲ್ಲಿ ಬೆಳಗಿನ ಮಾಡಲೇ ಬೇಕಾದ ಕೆಲಸ ಎಲ್ಲಾ ಎಕ್ಕುಟ್ಟೋಯ್ತು.

ಆದರೂ ಬಿಡ್ತೀನಾ ಈ ನೋವಿನ ವಿರುದ್ಧ ಜಗಳಾಡೋದು ನನಗೆ ರೂಢಿ ಆಗೋಗಿದೆ.  ಗೊತ್ತು ಸೋಂಬೇರಿತನಕ್ಕೆ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ನೆಪ ಹೇಳಿಕೊಂಡು ವಾಕಿಂಗ್, ಯೋಗ ಎಲ್ಲಾ ಬಂದ್.  ಯೋಗಾ ಮಾಡೋಕೆ ಏನಾಗಿತ್ತೆ ಧಾಡಿ ಕೇಳಿತು ಮನಸ್ಸು ; ಚಳಿ ಚಳಿ ಅಂತ ಹೇಳಿ ಈರುಳ್ಳಿ ಪಕೋಡಾ ಬೇರೆ ಪೊಗದಸ್ತಾಗಿ ತಿಂದುಬಿಟ್ಟಿದ್ದೆ.  ಹಂಗೆ ಟೀ ಜೊತೆಗೆ ಇರಲಿ ಅಂತ ಕಾಫಿನೂ ಸ್ವಲ್ಪ ಹೆಚ್ಚೇ ಹೊಟ್ಟೆ ಸೇರಿಕೊಂಡು ವಾಯು ಮಾಲಿನ್ಯ ಹೊಟ್ಟೆಯೊಳಗೆ!  ಓಹೋ^^^^ ಈಗ ಎಲ್ಲಾ ಒಟ್ಟಾಗಿ ಮಂಡಿ ಸೇರಿಕೊಂಡು ಬಿಟ್ವಿದ್ದು ಮನಸಿಗೆ ಖಾತರಿನೂ ಆತು.

“ಅಮ್ಮಾ ಏನಾಯ್ತೆ?  ನಡಿ ನಡಿ ಹಾಸ್ಪಿಟಲ್ ಹೋಗೋಣ”

“ಇರೆ ಏನೂ ಆಗಿಲ್ಲ.  ಸರಿ ವಾಕಿಂಗ್ ಮಾಡಿದರೆ ಎಲ್ಲಾ ಓಡೋಗುತ್ತೆ”

“ಹ…ಹ.. ಅಮ್ಮಾ…. ನಡೆಯೋಕೆ ಆಗ್ತಿಲ್ಲ ವಾಕಿಂಗ್ ಮಾಡ್ತೀಯಾ?  ನಿನ್ನ ಹಠ ಎಲ್ಲಿ ಬಿಡ್ತೀಯಾ? ಏನಾರ ಮಾಡ್ಕ”

ಅವಳಿಗೆ ಚೆನ್ನಾಗಿ ಗೊತ್ತು ಈ ಅಮ್ಮನ ಹಠಮಾರಿ ಅವತಾರ.  ಅದಕ್ಕೆ ಜಾಸ್ತಿ ತಲೆ ತಿನ್ನದೆ ಅನಿವಾರ್ಯವಾಗಿ ಅಡಿಗೆಮನೆಗೆ ಪಾದಾರ್ಪಣೆ ಮಾಡಿದ್ಲು.  ನಳಪಾಕದ ಸ್ಪೆಷಲ್ ತಯಾರಿಗೆ.  ಸಧ್ಯ ಭಾನುವಾರವಾಗಿತ್ತು ನಾ ಬಚಾವ್!

ಸಾಯಂಕಾಲ ಪಕ್ಕದ ಮನೆ ಅಜ್ಜಿ ದಿನ ನಿತ್ಯ ಬಂದು ಒಂದಷ್ಟು ಹೊತ್ತು ಮಾತಾಡಿಕೊಂಡು ಹೋಗುವ ಪರಿಪಾಠ ಇತ್ತೀಚೆಗೆ ಬೆಳೆದಿತ್ತು.  ವಾಡಿಕೆಯಂತೆ ಅಜ್ಜಿ ಸಾಯಂಕಾಲ ಬರುವ ಬದಲು ಮಧ್ಯಾಹ್ನವೇ ಬಂದು ಗೇಟು ತಟ್ಟಿದರು.  ನನ್ನ ಮಾರಾಕುವ ಸ್ಟೈಲ್ ನಡಿಗೆ ನೋಡಿ ಎಲ್ಲಾ ಸಮಾಚಾರ ತಿಳಿದು ” ಇರಿ ನಾನು ಸಾಯಂಕಾಲ ದೀಪ ಹಚ್ಚುವ ಸಮಯಕ್ಕೆ ಬರ್ತೀನಿ.  ಸ್ವಲ್ಪ ಸಿದ್ಧಿ ಮಾಡಿಕೊ ಬೇಕು.  ಈ ಸಮಯದಲ್ಲಿ ಅಲ್ಲ. ” ಅಂತಂದು ಹೊರಟು ಹೋದರು.

ಇನ್ನೂ ನಾನು ಬಗ್ಗಲಾರದೇ ಕಷ್ಟಪಟ್ಟು ಬಗ್ಗಿ ದೇವರಿಗೆ ದೀಪ ಹಚ್ಚುವ ಶಾಸ್ತ್ರ ಮಾಡ್ತಿದ್ದೆ.  ಅಜ್ಜಿಯ ಆಗಮನ.

“ಬನ್ನಿ.  ಸ್ವಲ್ಪ ಕೊಬ್ಬರಿ ಎಣ್ಣೆ ತನ್ನಿ.”

ಆಯ್ತು ಎಣ್ಣೆ ಸಮಾರಾಧನೆ ಮಂಡಿಯಿಂದ ಕಾಲು ಪಾದದವರೆಗೆ.  ಅವರು ನೀವುತ್ತಿದ್ದರೆ ನನಗೆ ಒಂಥರಾ ಮುಜುಗುರ ಛೆ! ವಯಸ್ಸಾದ ಅಜ್ಜಿ ಕೈಯಲ್ಲಿ ನನ್ನ ಕಾಲು ಉಜ್ಜಿಸಿಕೊಳ್ಳುವಂತಾಯಿತಲ್ಲಾ!!  ಆದರೆ ಮನಸ್ಸಿಗೆ ಆ ನೋವಿನ ಕಾಲಿಗೆ ಅವರುಜ್ಜುವ ಪರಿ ಹಾಯ್! ಇನ್ನೂ ಸ್ವಲ್ಪ ಹೊತ್ತು ಹೀಗೆ ನೀವುತ್ತಿರಲಿ ಅಂತನಿಸಿದ್ದು ನನ್ನಪ್ಪನಾಣೆ ಸುಳ್ಳಲ್ಲ ಆಯ್ತಾ.

ಆಮೇಲೆ ಅವರ ಮನೆ ಡೋರ್ಲಾಕ್ ಕೀ ಅವರ ಕೈಲಿದ್ದದ್ದು ನನ್ನ ಕಾಲ ಮೇಲಿಟ್ಟು ಮೇಲಿಂದ ಕೆಳಗಿನವರೆಗೆ ಜಾರಿಸ್ತಾ ಬಂದ್ರು ಒಂದೆಂಟತ್ತು ಸರ್ತಿ.  ಹಂಗೆ ನೆಲಕ್ಕೆ ಪ್ರತಿ ಬಾರಿ ಕುಟ್ಟತಾ ಇದ್ರು.  ಇಷ್ಟೆಲ್ಲಾ ಪ್ರಕ್ರಿಯೆ ನಡೆಯುವಾಗ ಅದೇನೊ ಮಂತ್ರ ಹೇಳುತ್ತಿದ್ದರು ಕೂತಲ್ಲಿಂದಲೆ ದೇವರ ಮನೆ ಕಡೆ ಮುಖ ಮಾಡಿ ಪ್ರಾರ್ಥಿಸ್ತಾ ಇದ್ದದ್ದು ನನಗೆ ಬಲೂ ಸೋಜಿಗ ಅನಿಸಿತು.

ಇವರೇನೊ ಹೇಳ್ತಾರೆ, ಹಿರಿಯರು ಯಾಕೆ ಬೇಡಾ ಅನ್ನಲಿ ಅಂತ ಆಯ್ತು ಅಜ್ಜಿ ಬಂದು ನಿಮ್ಮ ಕೈಂಕರ್ಯ ಮಾಡಿ ಅಂತ ಒಪ್ಪಿಕೊಂಡಿದ್ದೆ.  ಆದರೆ ನನಗೆ ನಂಬಿಕೆ ಯಳ್ಳಷ್ಟೂ ಇರಲಿಲ್ಲ.  ಅಜ್ಜಿ ಎದುರಿಗೆ ತೋರಿಸಿಕೊಳ್ಳಲಿಲ್ಲ.  ಪ್ರತೀ ಬಾರಿ ಹೀಗೆ ಮಾಡಿದಾಗ ಅವರ ಕಾಲು ಮುಟ್ಟಿ ನಮಸ್ಕಾರ ಮಾಡೋದು ಮರಿಲಿಲ್ಲ.  ಬಹಳ ನಿಯತ್ತಿನ ಅಜ್ಜಿ.  ಏನು ಕೊಟ್ಟರೂ ಬೇಡಾ ಬೇಡಾ ಅನ್ನುವ ಅವರನ್ನು ಯಾವುದಾದರೂ ಹಣ್ಣು ಮನೆಯಲ್ಲಿ ಇರುವಾಗ ತಗೊಳ್ಳಿ ಪರವಾಗಿಲ್ಲ ಅಂತ ಅವರು ಅದನ್ನು ಸ್ವೀಕರಿಸುವ ಮಟ್ಟಕ್ಕೆ ಅವರ ಮನಸ್ಸು ತಂದಿಟ್ಟಿದ್ದೆ.  ಈಗಲೂ ಅದೇ ಕೊಡುತ್ತಿದ್ದೆ.

ಹೀಗೆ ಸಾಯಂಕಾಲ, ಬೆಳಿಗ್ಗೆ ಮತ್ತೆ ಸಾಯಂಕಾಲ ಮೂರು ಬಾರಿ ಅಜ್ಜಿಯ ಮಂತ್ರ ಶಕ್ತಿ ನನ್ನ ಕಾಲ ಮೇಲೆ ಪ್ರಯೋಗ ಆಯಿತು.  ನಿಧಾನವಾಗಿ ಮಂಡಿ ನೋವು ನನಗರಿವಿಲ್ಲದಂತೆ ಕಡಿಮೆ ಆಗುತ್ತ ಈ ದಿನ ಬೆಳಿಗ್ಗೆ ಪೂರ್ತಿ ಕಡಿಮೆ ಆಗಿ ಮಾಮೂಲಿ ಸ್ಥಿತಿಗೆ ಬಂದೆ.  ಯಾವ ಮೆಡಿಸಿನ್,ವಾಕಿಂಗ್ ಹೋಗಲಿ – ಯೋಗನೂ ಮಾಡಿಲ್ಲ, ಎಂತಾ ನಮನಿ ಕಷಾಯನೂ ಕುಡಿಲಿಲ್ಲ.

ಇದು ಹೇಗೆ?  ಒಂದು ರೀತಿ ವಿಸ್ಮಯ ಮೊನ್ನೆ ಆ ನಮನಿ ನೋವು ಈ ದಿನ ಬೆಳಿಗ್ಗೆ ಎಲ್ಲಾ ಮಾಯಾ!!  ಯಾಕೊ ಅಜ್ಜಿ ಮಾಡಿದ ಮಂತ್ರದಂಡದ ಹಿಂದೆಯೇ ಮನಸ್ಸು ಗಿರಕಿ ಹೊಡಿತಾ ಇದೆ.  ಅಜ್ಜಿಯ ನಂತರ ಈ ವಿಧ್ಯೆ ನಶಿಸಿ ಹೋಗುತ್ತಲ್ಲಾ ಅನ್ನುವ ಸಣ್ಣ ವ್ಯಥೆ ಕಾಡುತ್ತಾ ಇದೆ.

ಯಾರು ನಂಬಲಿ ಬಿಡಲಿ ಮಂತ್ರಕ್ಕೆ ಮಾವಿನಕಾಯಿ ಉದುರುತ್ತೊ ಇಲ್ಲವೊ ಗೊತ್ತಿಲ್ಲ.  ಆದರೆ ಮಂತ್ರಕ್ಕೆ ನೋವನ್ನು ತೆಗೆಯೊ ಶಕ್ತಿ ಇದೆ ಅಂತ ನಾನು ಸ್ವತಃ ಅನುಭವದಿಂದ ನಂಬುವಂತಾಗಿದ್ದಂತೂ ದಿಟ.

Leave a Reply