‘ಪ್ರೀತಿ’ ಕತೆಗೆ ಕಾರಣ– ಕಾರಣಕ್ಕೊಂದು ಕತೆ

ಪ್ರೀತಿಯ ನಲವತ್ತು ನಿಯಮಗಳು

ಕತೆಗೆ ಕಾರಣ – ಕಾರಣಕ್ಕೊಂದು ಕತೆ

 ಮಮತಾ ಜಿ ಸಾಗರ

ಧಾರ್ಮಿಕ ಮೂಲಭೂತವಾದಗಳು ನಮ್ಮ ಜಗತ್ತುಗಳನ್ನೇ ಅಲ್ಲೋಲ ಕಲ್ಲೋಲ ಮಾಡುತ್ತಿರುವ ಈ ಹೊತ್ತಿನಲ್ಲಿ ಪ್ರೀತಿಯ ಮಾತನಾಡುವುದು ಅತ್ಯವಶ್ಯ ಅನ್ನಿಸುತ್ತಿದ್ದಾಗಲೇ ಘಟಿಸಿದ್ದ್ದು ‘ಪ್ರೀತಿಯ ನಲವತ್ತು ನಿಯಮಗಳು’.

ಇತ್ತೀಚೆಗೆ ಪ್ರಪಂಚದಾದ್ಯಂತ ಹಬ್ಬಿ ಹರಡುತ್ತಿರುವ ಧಾರ್ಮಿಕ ಮೂಲಭೂತವಾದದ ಬಿಸಿ ಎಲ್ಲಾ ದೇಶ, ಎಲ್ಲಾ ಧರ್ಮಗಳ ಎಲ್ಲಾ ಗಡಿಗಳನ್ನೂ ಮೀರಿ ಇಂದು ಚಲಾವಣೆಯಲ್ಲಿ ಕಂಡುಬರುತ್ತಿದೆ. ಅದರಲ್ಲೂ ವಿಷೇಶವಾಗಿ ಭಾರತದಲ್ಲಂತೂ ಸಾಂಕ್ರಾಮಿಕದ ಹಾಗೆ ಹಬ್ಬುತ್ತಿರುವ ಧಾರ್ಮಿಕ ಮೂಲಭೂತವಾದದ ಪಿಡುಗು ಯಾರು ಏನನ್ನು ತಿನ್ನಬೇಕು, ಯಾವ ರೀತಿಯ ಬಟ್ಟೆಯನ್ನು ತೊಡಬೇಕು, ಯಾರನ್ನು ಪ್ರೀತಿಸಬೇಕು, ಮದುವೆ ಯಾರನ್ನು ಆಗಬೇಕು, ನಮ್ಮವರು ಯಾರು, ಯಾರು ಇತರರು, ಯಾರ ಜೊತೆ ಕಾಣಿಸಿಕೊಳ್ಳಬೇಕು, ಓಡಾಡಬೇಕು, ಒಡನಾಡಬೇಕು, ಆಡಬೇಕಾದ್ದು ಏನನ್ನು, ಆಡಬಾರದ್ದು ಏನೇನನ್ನು, ಯಾವ ಭಾಷಾ ಸಾಹಿತ್ಯ ಯಾವ ಧರ್ಮದ ಜೆತೆಗೆ ಸಮೀಕರಣಗೊಳ್ಳಬೇಕು, ಏನ ಬರೆದರೆ ಮುಟ್ಟುಗೋಲು, ಏನನ್ನಾಡಿದರೆ ತಲೆದಂಡ ಎಂಬ ಪೂರ್ವಾಗ್ರಹಗಳು ಇನ್ನೆಂದಿಗಿಂತಲೂ ಹೆಚ್ಚಾಗಿ ಈಗ ಕಾಣಿಸಿಕೊಳ್ಳುತ್ತಿದ್ದು, ಮೂಲಭೂತ ಹಕ್ಕುಗಳನ್ನೇ ಹತ್ತಿಕ್ಕುವ ಸಾಹಸಗಳು ಈ ಪ್ರಜಾಸತ್ತಾತ್ಮಕ ನಾಡಿನಲ್ಲಿ ಸರ್ವೇಸಾಮಾನ್ಯವಾಗಿಬಿಟ್ಟಿರುವಂತೆ ಅನ್ನಿಸುತ್ತಿದೆ. ರಾಷ್ಟ್ರಪ್ರೇಮದ ಅಳತೆಗೋಲುಗಳು ಅಳೆದಳೆದು ಉದ್ದಗಲ, ಜಗ್ಗಿಬಿಟ್ಟಿವೆ ವಿಶ್ವಾಸದ, ಪ್ರೀತಿಯ ಹಾಗೂ ನಂಬಿಕೆಯ ನೆಲೆಗಳನ್ನು. ಈ ಎಲ್ಲ ಅಹವಾಲುಗಳಿಗೂ ಸ್ಪಂದಿಸುವ ತಾಣವೇನೋ ಎಂಬಂತ ಈ ಪಠ್ಯ ನನಗೆ ಸಿಕ್ಕಿತು.

ಸಾಧಾರಣವಾಗಿ ಕತೆಗಳು ಏಕಕಾಲಕ್ಕೆ ಹಲವು ಕಾರಣಗಳನ್ನು ಕುರಿತು, ಹಲವು ಕಾಲಗಳನ್ನು ಉದ್ದೇಶಿಸಿ ಮಾತಾಡುತ್ತಿರುತ್ತವೆ. ಪ್ರೀತಿ, ದ್ವೇಶ, ಪಿತೂರಿ, ಮೋಹ, ನಿರಾಶೆ, ಸಾವುಗಳು ಕಥೆಗಳಿಗೆ ನೆಚ್ಚಿನ ಕಾರಣಗಳು. ನೋವ ತರುವ ಇವುಗಳಿಗೂ ಗಡಿಗಳಿಲ್ಲವಲ್ಲ. ಎಲ್ಲಿಂದ ಎಲ್ಲಿಗೆ ನಡೆದರೂ ಪ್ರೀತಿ ಪ್ರೀತಿಯೇ! ದುಃಖ ದುಃಖವೇ! ಸಾವು ಸಾವೇ!

ಈ ಅಸಾಧಾರಣ ಕಾದಂಬರಿಯಲ್ಲಿನ ಘಟನೆಗಳು, ಪಾತ್ರಗಳು, ಸಂಬಂಧಗಳು, ಧಾರ್ಮಿಕ ಮೂಲಭೂತವಾದದ ಕುಮ್ಮಕ್ಕಿಗೊಳಗಾಗುವ ದ್ವೇಶಗಳು, ಈ ಎಲ್ಲ ಅಡೆ ತಡೆಗಳನ್ನೂ ಮೀರಿ ಗೋಚರಿಸುವ ಪ್ರೀತಿಯ ಹಾತೊರಿಕೆ, ಅಮಿತ ಪ್ರೇಮದ ಸಾಕ್ಷಾತ್ಕಾರ ಈ ಹೊತ್ತಲ್ಲಿ ಕನ್ನಡಕ್ಕೂ ದಕ್ಕಬೇಕೆಂಬ ಆಶಯವು ಈ ತರ್ಜುಮೆಯನ್ನು ಆಗಿಸಿತು.

ಅನುವಾದವು ಜಗತ್ತನ್ನು ಹತ್ತಿರ ತರುತ್ತದೆ. ನೊಂದವರ ನೋವನ್ನು ನುಡಿದು, ಅದಕ್ಕೆ ಮಿಡಿದು, ಅವರಿಗೆ ಸಾಂತ್ವನವನ್ನು ನೀಡಿ, ಬದುಕುವ ಉಮೀದನ್ನೂ ಅವರಲ್ಲಿ ಹೆಚ್ಚಿಸುತ್ತದೆ. ಬಿಕ್ಕಟ್ಟಿನ ಸಂದರ್ಭಗಳಲ್ಲಿ ಇತರರು ಸಂಕಷ್ಟಕಗಳನ್ನು ಎದುರಿಸಿದ್ದನ್ನು, ಆ ಸಂಕಟಗಳನ್ನು ಅವರು ನಿವಾರಿಸಿಕೊಂಡಿದ್ದನ್ನು ನಮಗೆ ಪರಿಚಯಿಸುವುದರ ಮೂಲಕ ನಮ್ಮ ಪರಿಸ್ಥಿತಿಯನ್ನು ನಾವು ಎದುರಿಸುವಲ್ಲಿ ಧೈರ್ಯ ತುಂಬುತ್ತದೆ. ಹೀಗೆ, ಯಾವುದೇ ಅನುವಾದವಾದರೂ ಸಹ, ನಿರ್ದಿಷ್ಟ ಸಂಸ್ಕೃತಿಯ ಬೇಡಿಕೆಗೆ ಅನುಸಾರವಾಗಿ ಆಗುತ್ತದೆಯೇ ಹೊರತು ಯಾವುದೋ ಕೃತಿ ಇನ್ಯಾವುದೋ ಸಂಸ್ಕೃತಿಯಲ್ಲಿ ಪ್ರಚಾರಕ್ಕೆ ಬಂದಿದೆ ಎಂದಲ್ಲ. ಕನ್ನಡವು ಆಡಲಾರಂಭಿಸಿದ ಮಾನವತಾವಾದ ಹಾಗೂ ವಿಶ್ವ ಮಾನವ ಪ್ರಜ್ಞೆಯನ್ನು ಹೆಚ್ಚು ಸ್ಪಷ್ಟವಾಗಿ ಪ್ರಸ್ತುತ ಪಡಿಸುವ ಹಿನ್ನೆಲೆಯಲ್ಲಿ ವಡ್ರ್ಸ್‍ವರ್ತ್, ಶೆಲ್ಲಿ, ಕೀಟ್ಸ್, ಕಾಲೆರಿಜ್ಜರನ್ನು ಕನ್ನಡ ಬರಮಾಡಿಕೊಂಡಿತು.

ಎಡಪಂಥೀಯ ನಿಲುವುಗಳು; ರಾಜಕಾರಣದಲ್ಲೂ ಸಾಮಾಜಿಕ ನೆಲೆಗಳಲ್ಲೂ ಹರಡ ಹತ್ತಿದಾಗಲೇ ರಷಿಯನ್ನಿನಿಂದ ಧಢ ಧಢಾಯಿಸಿ ಟಾಲ್ಸ್‍ಟಾಯ್, ಗಾರ್ಕಿ, ಚೆಕಾವ್, ಅನಾ ಅಖ್ಮತೋವಾ, ಮುಂತಾದವರನ್ನು ಕನ್ನಡದ ತೆಕ್ಕೆಗೆ ತಂದುಕೊಳ್ಳಲಾಯಿತು. ಎಲಿಯಟ್, ಏಟ್ಸ್, ಎಸ್ರಾ ಪೌಂಡ್ ಇರಬಹುದು, ಕಪ್ಪು ಕಾವ್ಯ, ಮಹಿಳಾ ಬರವಣಿಗೆಗಳಿರಬಹುದು, ಮಾಕ್ರ್ವೆಸ್ ಮತ್ತಿತರ ಲ್ಯಾಟಿನ್ ಅಮೇರಿಕದ ಲೇಖಕರ ಕತೆ ಕಾದಂಬರಿಗಳಿರಬಹುದು; ಅವುಗಳ ಬರುವಿಕೆಗೆ ಬೇಕಾದ ಸಜ್ಜಿಕೆಯನ್ನು ವಸಾಹತು ಹಾಗೂ ವಸಾಹತೋತ್ತರ ಸಂದರ್ಭದ ಸಮಾಜೋ-ಸಾಂಸ್ಕೃತಿಕ ಪ್ರತಿರೋಧಗಳ ವಾತಾವರಣದ ಬಿಸಿ ಸಿದ್ಧಗೊಳಿಸಿ ಕೊಟ್ಟಿರುವುದನ್ನು ನಾವು ಕಂಡಿದ್ದೇವಷ್ಟೆ. ಅಂದಮೇಲೆ, ಭಾಷಾಂತರ ಅಥವ ತರ್ಜುಮೆ ಅನ್ನುವುದೂ ಪ್ರತಿರೋಧದ ಇನ್ನೊಂದು ಆಯಾಮ ಅಲ್ಲವೇ? ಕಾಲಕಾಲಕ್ಕೆ ಘಟಿಸುವ ಈ ಭಾಷಾಂತರ ಕಾಯಕ್ಕೆ ಸಾಂಸ್ಕೃತಿಕ ಕಾರಣಗಳ ಒತ್ತಡವೂ ಇದ್ದಿರುತ್ತದೆ ಅನ್ನುವುದೂ ಸಾಬೀತು ಆಗಿರುವಂಥಾದ್ದು.

ಧರ್ಮದ ದುರುಪಯೋಗವನ್ನು ಖಂಡಿಸುತ್ತಾ ಬಂದಿರುವ ಗುಣವು ಚಾರಿತ್ರಿಕವಾಗಿ ಕನ್ನಡಕ್ಕಿದೆ ಅನ್ನುವುದಕ್ಕೆ ಹನ್ನೆರಡನೇ ಶತಮಾನದ ವಚನ ಚಳುವಳಿಗಿಂತ ಮತ್ತೊಂದು ಉದಾಹರಣೆ ಬೇಕಿಲ್ಲ. ಧರ್ಮದ ಕರ್ಮಗಳನ್ನು, ಕರ್ಮದ ಅಧರ್ಮಗಳನ್ನು ಸತತವಾಗಿ ಕಾಲಕಾಲಕ್ಕೆ ಪರಿಶೀಲಿಸುತ್ತ, ಪರ್ಯಾಯಗಳನ್ನು ರೂಪಿಸಿಕೊಂಡು ಬಂದಿರುವ ಸಂಸ್ಕೃತಿ ನಮ್ಮದು.

ಸೂಫಿ ಪಂಥವು ಸಾರುವ ದಯೆ, ಕರುಣೆ, ಕ್ಷಮೆ, ಪ್ರೀತಿಗಳಿಗಾಗಿ ಕನ್ನಡನಾಡು ಮತ್ತು ಇಡೀ ಭಾರತ ದೇಶವೇ ಹಾತೊರೆಯುವುದರಿಂದ; ಕಬೀರನ ಹಾಗೆ ರೂಮಿಯೂ ಕವಿಯಾಗಿ ನಮಗೆ ಪರಿಚಿತನೇ. ತನ್ನ ಕಾಲದ ರಾಜಕೀಯ ಹಾಗೂ ಸಾಮಾಜಿಕ ಒತ್ತಡಗಳನ್ನು ನಿಭಾಯಿಸಿಕೊಂಡು ಪ್ರೀತಿಯನ್ನು ಸಾರಿದ ಚಿಂತಕ ಮತ್ತು ಕವಿ ಅವನು. ಯಾವ ಹಿಂಸೆಯನ್ನು ವಿರೋಧಿಸಿ ರೂಮಿಯ ಪ್ರೀತಿ ಬೆಳಗಿತೋ ಅಂಥದ್ದೇ ಹಿಂಸೆಯನ್ನು ಓಲೈಸುವ ಪರಿಸ್ಥಿತಿಗಳನ್ನು ಎದುರಿಸುವ ಹಾಗೂ ಹತ್ತಿಕ್ಕುವ ಸಾಧನಗಳಿಗಾಗಿ ನಾವಿಂದು ಈ ಜಗತ್ತಿನಲ್ಲಿ ಹಾತೊರೆಯುತ್ತಿದ್ದೇವೆ. ಆದ್ದರಿಂದ, ಪ್ರೀತಿಯ ನಲವತ್ತು ನಿಯಮಗಳ ಸುತ್ತ ಹೆಣೆದುಕೊಂಡಿರುವ ಈ ಕಥಾನಕವು ಎಂದಿಗಿಂತ ಇಂದು ಹೆಚ್ಚು ಪ್ರಸ್ತುತವೆಂದು ನನಗನ್ನಿಸುತ್ತದೆ.

ನಾನು ಈ ಕಾದಂಬರಿಯನ್ನು ಮೊದಲಿಗೆ ಇಂಗ್ಲೀಷಿನಿಂದ ಕನ್ನಡಕ್ಕೆ ತಂದು ಆನಂತರ ಇಸ್ತಾಂಬುಲ್‍ನ ಟರ್ಕಿಶ್ ಸ್ನೇಹಿತರ ಸಹಾಯ ಪಡೆದು, ಕಾದಂಬರಿಯ ಕೆಲವು ಸೂಕ್ಷ್ಮಗಳನ್ನು ಕನ್ನಡೀಕರಿಸಿದೆ. ಟರ್ಕಿಶ್ ಅಥವಾ ಇಂಗ್ಲೀಶ್ ಪಠ್ಯದಲ್ಲಿ ಇರದ ಕೆಲ ಅಂಶಗಳನ್ನು ಕನ್ನಡ ಪಠ್ಯದಲ್ಲಿ ಸೀರಿಸಿದ್ದೇನೆ. ಪಾರಿಭಾಷಿಕ ಪದಕೋಷದ ಜೊತೆಗಷ್ಟು ಟಿಪ್ಪಣಿಯನ್ನೂ ಕೊಡಬೇಕೆಂದು ಅನ್ನಿಸಿತು. ಪಠ್ಯದಲ್ಲಿ ಅಲ್ಲಲ್ಲಿ ಬರುವ ಖುರಾನಿನ ಕಥೆಗಳ ಉಲ್ಲೇಖಗಳ ಹಿನ್ನೆಲೆಯನ್ನೂ, ಸಂಬಂಧಗಳನ್ನೂ ಕನ್ನಡದ ಓದುಗರಿಗೆ ಪರಿಚಯಿಸುವುದು ಅವಷ್ಯವೆಂದು ಅನ್ನಿಸಿತು.

ಖುರಾನಿನ ಕಥೆಗಳಿಗಾಗಿ ಮಕ್ಕಳ ಪುಸ್ತಕಗಳನ್ನೂ ಸೇರಿದ ಹಾಗೆ, ಹಲವಾರು ಪಠ್ಯಗಳನ್ನು ಇಂಗ್ಲೀಶಿನಲ್ಲಿ ಓದಿರುತ್ತೇನೆ. ಕನ್ನಡದಲ್ಲಿ ಇಸ್ಲಾಮೀ ಸಾಹಿತ್ಯ ಪ್ರಕಾಶನ ಕರ್ನಾಟಕವು 1981ರಲ್ಲಿ ಪ್ರಕಟಿಸಿರುವ ದಿವ್ಯ ಕುರ್‍ಆನ್ ಅನುವಾದಕ ಮಂಡಲಿ ತಿದ್ದಿದ ಎರಡನೆಯ ಆವೃತ್ತಿಯಾದ ‘ದಿವ್ಯ ಕುರ್‍ಆನ್’ ಅರಬೀ ಮೂಲ ಸಹಿತ ಕನ್ನಡಾನುವಾದವನ್ನು ಪರಾಮರ್ಶಿಸಿರುತ್ತೇನೆ. ಖುರಾನಿನ ಓದಿಗೆ ನನ್ನ ವಿದ್ಯಾರ್ಥಿಯಾಗಿ ಭಾಷಾಂತರ ಅಧ್ಯಯನವನ್ನು ಓದಿರುವ ಮೊಹಮ್ಮದ್ ಮುಸೇಬನ ಸಹಾಯವನ್ನು ಪಡೆದುಕೊಂಡಿರುತ್ತೇನೆ. ಕಾದಂಬರಿಯ ಹಾಸುಹೊಕ್ಕಾಗಿ ಬರುವ ಅeóÁನಿನ ಹಾಗೂ ಖುರಾನಿನ ಪಂಕ್ತಿಗಳ ಉಚ್ಚಾರಣೆಯನ್ನು ಕನ್ನಡದಲ್ಲಿ ಸರಿಯಾಗಿ ಬರೆಯುವುದರಲ್ಲೂ ಮತ್ತು ಪ್ರೀತಿಯ ನಲವತ್ತು ನಿಯಮಗಳ ಪ್ರೋ¥sóï ತಿದ್ದುವುದರಲ್ಲೂ ಮಹಮ್ಮದ್ ನನಗೆ ಸಹಾಯ ಮಾಡಿರುತ್ತಾನೆ. ಅವನಿಗೆ ನಾನು ರುಣಿ. ದಿನೇಶ್ ವಾಜರಹಳ್ಳಿ ಮತ್ತು ರುದ್ರೇಶ್ವರ ಸ್ವಾಮಿಯವರು ಈ ಓದಿನ ಪ್ರಕ್ರಿಯೆಯಲ್ಲಿ ಭಾಗೀದಾರರು. ಅವರಿಗೂ ನನ್ನ ಧನ್ಯವಾದಗಳು.

ಸಂಶೋಧನೆ, ಕಥಾನಕತೆ, ಕ್ರಯಾಶೀಲ ಬರವಣಿಗೆಯ ಒಟ್ಟು ಸಾಮಥ್ರ್ಯವನ್ನು ಭಿಟ್ಟಿ ಇಳಿಸಿ, ಇಂಥಾ ಉತ್ತಮ ಕೃತಿಯನ್ನು ಸಾಧ್ಯವಾಗಿಸಿಕೊಂಡಿರುವ ಟರ್ಕಿಶ್ ಬರಹಗಾರ್ತಿ ಎಲಿ¥sóï ಶ¥sóÁಕ್ ಅವರಿಗೆ ನನ್ನ ಮೆಚ್ಚುಗೆ. ಈ ಪುಸ್ತಕಕ್ಕಾಗೇ ಮುಗಲ್ ಮಿನಿಯೇಚರ್ ಸಂಪ್ರದಾಯ ಹಾಗೂ ಇಸ್ಲಾಮ್ ಪರಂಪರೆಯಲ್ಲಿ ಉಲ್ಲೇಖಿತ ಹೂಗಳ ರೇಖಾ ಚಿತ್ರವನ್ನು ಅತ್ಯಂತ ಸುಂದರವಾಗಿ ಮೂಡಿಸಿ ಕೊಟ್ಟಿರುವ ವಿದ್ಯಾರ್ಥಿ ವೇದಿಕ ಲಾಲ್ ಅವರಿಗೆ ಧನ್ಯವಾದಗಳು. ಎಲ್ಲಕ್ಕಿಂತ ಮಿಗಿಲಾಗಿ ಈ ಕಾದಂಬರಿಯನ್ನು ಪ್ರಕಟಿಸಲು ಆಸಕ್ತಿ ತೋರಿ ತಮ್ಮ ಭಾಷಾಂತರ ಪ್ರಕಟಣೆಗಳ ಸಾಲಿಗೆ ಸೇರಿಸಿಕೊಂಡು ಉತ್ತಮವಾಗಿ ಪ್ರಕಟಿಸಿರುವ ಶ್ರೀ ಸೃಷ್ಟಿ ನಾಗೇಶ್ ಅವರಿಗೆ ವಿಶೇಷವಾದ ಕೃಜ್ಞತೆಗಳು.

ಹೀಗೆ ಹೆಸರಿಸ ಹೊರಟರೆ, ಸಾಕಾಷ್ಟು ಜನರ ಬಗ್ಗೆ ಹೇಳಬೇಕಾಗುತ್ತದೆ. ತರ್ಜುಮೆಯ ಸಮಯದಲ್ಲಿ ನನ್ನ ಕೈಗೆ ಸಿಕ್ಕುಬಿದ್ದು ಹಲಕೆಲವು ಭಾಗಗಳನ್ನು ಕೇಳಿಸಿಕೊಳ್ಳುವ ಒತ್ತಾಯಕ್ಕೆ ಒಳಗಾದ ಬಹಳಷ್ಟು ಸ್ನೇಹಿತರು ಇದ್ದಾರೆ. ಅವರ ಸಂಯಮಕ್ಕೆ ನನ್ನ ಸಲಾಮು. ಇವರೆಲ್ಲರ ಸಹಾಯವಿಲ್ಲದೇ ಹೀಗೆ, ನಾನಂದುಕೊಂಡಂತೆ, ಇಷ್ಟರ ಮಟ್ಟಿಗೆ ಈ ಕಥೆಯನ್ನು ಹೇಳಲಾಗುತ್ತಿರಲಿಲ್ಲವೇನೊ. ನಾನು ಈ ಕಾದಂಬರಿಯನ್ನು ಅದೆಷ್ಟು ಬಾರಿ ಓದಿದ್ದೇನೋ ಗೊತ್ತಿಲ್ಲ. ಜಗಳ, ಕದನ, ಪ್ರೀತಿ, ಮೋಹ, ಮನಸ್ತಾಪಗಳನ್ನು ಮೈಗೂಡಿಸಿಕೊಂಡಿರುವ ಪ್ರೀತಿಯ ನಲವತ್ತು ನಿಯಮಗಳ ಜೊತೆಗಿನ ಒಡನಾಟದ ಪ್ರತಿ ಹೆಜ್ಜೆಯನ್ನೂ ನಾನು ವಿಶೇಷವಾಗಿ ಅನುಭವಿಸಿದ್ದೇನೆ. ಈಗಿದು ನಿಮ್ಮದು. ಒಪ್ಪಿಸಿಕೊಳ್ಳಿ.

Leave a Reply