ದೇವರ ನಾಡಲ್ಲಿ ಎಲ್ಲವೂ ಸರಿಯಾಗಿದ್ದರೆ..

ದೇವರ ನಾಡಲ್ಲಿ
ಎಲ್ಲವೂ ಸರಿಯಾಗಿದ್ದರೆ…..

ಇಷ್ಟು ಹೊತ್ತಿಗೆ

ಬಾನ ಚುಕ್ಕಿಗಳು ರಂಗು ತುಂಬಿಕೊಂಡು ನಾಡಿಗಿಳಿಯುತಿದ್ದವು
ಜರಿನಿರಿಗೆ ಚಿಮ್ಮಿಸುವ ಪುಟ್ಟ ಪಾದಗಳು ನೆಲಕೆ ರಂಗೋಲಿ ಬರೆಯುತಿದ್ದವು.
ಮನೆ ಮನೆಗಳಲ್ಲಿ ‘ವಿಳಕ್ಕು’ ಗಳು ಬೆಳಗುತಿದ್ದವು.

ದೇವರ ನಾಡಲ್ಲಿ
ಎಲ್ಲವೂ ಸರಿಯಾಗಿದ್ದರೆ….. ಇಷ್ಟು ಹೊತ್ತಿಗೆ

‘ವಿಳಕ್ಕು’ ದೀಪದ ಸುತ್ತ ಕಸಾವು ಸೀರೆ ನಾರಿಯರು ಹೆಜ್ಜೆ ಹಾಕುತ್ತಿದ್ದರು
ಓಣಿ ಓಣಿಗಳಲ್ಲಿ ಹಬ್ಬದ ಹಾಡುಗಳು ಕೇಳುತ್ತಿದ್ದವು
‘ಓಣಸಾದ್ಯ’ ದ ಘಮ ಊರಿಗೆಲ್ಲ ಹರಡುತಿತ್ತು.

ದೇವರ ನಾಡಲ್ಲಿ
ಎಲ್ಲವೂ ಸರಿಯಾಗಿದ್ದರೆ…..

ಇಷ್ಟು ಹೊತ್ತಿಗೆ

ಮನೆ ಮನೆಗಳೆದುರು ಹೂಗಳು ನಗುತ್ತ ‘ಪೂಕ್ಕಳಂ’ ಗಳಾಗುತಿದ್ದವು.
ಚರ್ಚುಗಳೆದುರು ಹೊಳೆವ ಕೊಡೆಗಳೇಳುತಿದ್ದವು.
ಬೀದಿಗಳೆಲ್ಲ ರಂಗು ಹೊತ್ತು ಸಂಜೆ ಹೊಳೆಯುತಿದ್ದವು.

ದೇವರ ನಾಡಲ್ಲಿ
ಎಲ್ಲವೂ ಸರಿಯಾಗಿದ್ದರೆ…..

ಇಷ್ಟು ಹೊತ್ತಿಗೆ

ನಾಡ ‘ಹುಲಿ’ ಗಳು ರಸ್ತೆಗಿಳಿದು ಗುರ್ರೆನ್ನುತಿದ್ದವು
ಹಾವಿನಂಥ ದೋಣಿಗಳು ಸ್ಪರ್ಧೆಗಿಳಿಯುತಿದ್ದವು
ಬಗೆ ಬಗೆಯ ಮುಖವಾಡಗಳು ಮೆರವಣಿಗೆ ಹೊರಡುತಿದ್ದವು

ದೇವರ ನಾಡಲ್ಲಿ
ಎಲ್ಲವೂ ಸರಿಯಾಗಿದ್ದರೆ…..

ಇಷ್ಟು ಹೊತ್ತಿಗೆ….

‘ಓಣಂ’ ಹಬ್ಬದ ಸಂಭ್ರಮವಿರುತ್ತಿತ್ತು.

(ವಿಳಕ್ಕು- ನಂದಾದೀಪ , ಓಣಸಾದ್ಯ- ಓಣಂ ಹಬ್ಬದ ಊಟ, ಪೂಕ್ಕಳಂ- ಹೂವಿನ ರಂಗೋಲಿ)

ಆದರೆ ಹಾಗಾಗುತ್ತಿಲ್ಲ. ಮಹಾಮಳೆ ಇಲ್ಲರ ಬದುಕನ್ನೂ ಮುಳುಗಿಸಿಬಿಟ್ಟಿದೆ. ಲಕ್ಷಗಟ್ಟಲೆ ಜನ ಮನೆ ಕಳೆದುಕೊಂಡಿದ್ದಾರೆ. ನಿರಾಶ್ರಿತರಾಗಿದ್ದಾರೆ. ನಾನು ಬದುಕಿದ್ದ ‘ಆಲುವಾ’ ಸಂಪೂರ್ಣ ಮುಳುಗಿದೆ. ನಾನಿದ್ದ ಮನೆ ಅರ್ಧಕ್ಕರ್ಧ ಮುಳುಗಿದೆ. ನಾನು ಹೋದ ಮೊದಲ ದಿನಗಳಲ್ಲಿ ನನಗೆ ಆಶ್ರಯ ಕೊಟ್ಟ ‘ ಸಲಾಂ’ ಮನೆ ಕಳೆದುಕೊಂಡು ಕ್ಯಾಂಪ್ ನಲ್ಲಿದ್ದಾನೆ.

ನನಗೆ ಆಗಾಗ ಮನೆಯಿಂದ ಊಟ ತರುತ್ತಿದ್ದ ‘ರೇಖಾ’ ಉವಾ¸ದಿಂದ ಹೈರಾಣಾಗಿದ್ದಾಳೆ. ಉಣ್ಣಿಯ ಹೊಟೆಲ್ ಮುಳುಗಿ ಹೋಗಿದೆ. ಯಜಮಾನನ ಜೊತೆ ಆತನೀಗ ಚರ್ಚ್ ನಲ್ಲಿದ್ದಾನೆ. ನನ್ನ ಅನೇಕ ರಂಗಭೂಮಿಯ ಗೆಳೆಯರು ನಿರಾಶ್ರಿತರಾಗಿದ್ದಾರೆ. ಜನ ಮನೆಗಳ ಜೊತೆ ಬದುಕನ್ನೂ ಕಳೆದುಕೊಂಡಿದ್ದಾರೆ. ಮುಗಿಯದ ಆತಂಕದಲ್ಲಿ ನಾನು ಹಲವು ರಾತ್ರಿಗಳನ್ನು ನಿದ್ದೆಯಿಲ್ಲದೇ ಕಳೆದಿದ್ದೇನೆ. ನಿರಂತರ ಕಾಲ್ ಮಾಡುತ್ತ ಗೆಳೆಯರಿಗೊಂದು ನೈತಿಕ ಬೆಂಬಲ ಕೊಡೋಕೆ ಪ್ರಯತ್ನಿಸಿದ್ದೇನೆ. ಇದ್ದ ಕಾಂಟ್ಯಾಕ್ಟ್ ಗಳ ಮೂಲಕವೇ ಒಂದೆರಡು ಕುಟುಂಬಗಳನ್ನ ಸೇವ್ ಮಾಢೋಕೆ ಯತ್ನಿಸಿದ್ದೇನೆ. ಆದರೆ ಅಲ್ಲಿಯ ಅನಾಹುತದ ಅಗಾಧತೆಯ ಮುಂದೆ ಇದು ಏನೇನೂ ಅಲ್ಲ. ಸಾವಿರಾರು ಕೇರಳಿಗರು ರಕ್ಷಣೆಗಾಗಿ ಬೀದಿಗಿಳಿದಿದ್ದಾರೆ. ಸೈನ್ಯ ಬಂದಿದೆ.

ಈ ಲೇಖನ ಬರೆಯೋ ಹೊತ್ತಿಗೆ ನೀರು ಇಳಿಯಹತ್ತಿದೆ. ರಕ್ಷಣಾ ಕಾರ್ಯ ಮುಗಿದಿದೆ. ಈಗ ಕಾಣುವ ಚಿತ್ರ ಇನ್ನೂ ನೋವು ಕೊಡ್ತಿದೆ. ಮನೆಗಳ ತುಂಬ ಮೊಣಕಾಲು ಎತ್ತರದ ಹೂಳು ತುಂಬಿದೆ. ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ತೊಪ್ಪೆಯಾಗಿವೆ. ಅಂಗಡಿಗಳಲ್ಲಿನ ವಸ್ತುಗಳನ್ನ ಎಸೆಯೋದೇ ಆಗಿದೆ. ಮನೆಗಳಲ್ಲೆಲ್ಲ ಹಾವುಗಳು ಸೇರಿಕೊಂಡಿವೆ, ಹಾವಿನಿಂದ ಕಚ್ಚಿಸಿಕೊಂಡ ಜನ ಆಸ್ಪತ್ರೆ ಸೇರುತ್ತಿದ್ದಾರೆ. ಮನೆಗೆ ಹಿಂದಿರುಗಿದ ಜನ ಗೋಳೋ ಎಂದು ಅಳೋದನ್ನ ನೊಡೊಕಾಗ್ತಿಲ್ಲ. ಮತ್ತೆ ಹೊಸದಾಗಿ ದೇವರ ನಾಡನ್ನ ಕಟ್ಟಬೇಕಿದೆ. ಎಲ್ಲರ ಸಹಾಯವೂ ಅಗತ್ಯ ಬೇಕಿದೆ.

ಈಗ ಇಂಥ ವಿಕೋಪಕ್ಕೆ ಕಾರಣಗಳನ್ನ ಹುಡುಕೋದಕ್ಕೆ ಶುರು ಮಾಡಿದಾರೆ. ಸ್ವಾರ್ಥಕ್ಕಾಗಿ ಪ್ರಕೃತಿಯನ್ನ ತನಗೆ ಬೇಕಾದ ಹಾಗೆ ಚಿಂದಿ ಮಾಡಿದ ಮನುಷ್ಯನ ದುರಾಸೆಯೇ ಮೊದಲ ಅಪರಾಧಿಯಾಗಿ ಕಾಣ್ತಿದೆ.

ಸುಮ್ಮನೆ ಕೂತು ಯೋಚಿಸ್ತಿದ್ದ ಹಾಗೆ ನನಗೆ ಅಲ್ಲೇ ಬೆಟ್ಟವೊಂದರ ತಪ್ಪಲಲ್ಲಿ ನೊಡಿದ ‘ ಅವಸಾನತ್ತೆ ಉರವ’ ( ಸೆಲೆಯೊಂದರ ಅಂತ್ಯ) ಎನ್ನೋ ನಾಟಕದ ನೆನಪಾಗ್ತಿದೆ.

ಇದೊಂದು ಕಾಡಿನ ಮಕ್ಕಳ ಹಾಡಿಯ ಕಥೆ. ಕಾಡ ನಡುವಿನ ಝರಿಯೊಂದರ ಸುತ್ತ ಬದುಕಿದ ಜನಾಂಗವೊಂದು ನಾಗರಿಕತೆಯ ಪ್ರವೇಶದಿಂದ ಅಂತ್ಯ ಕಾಣುವ ಕಥೆ.

ಕಾಡಿನ ಮಧ್ಯೆ, ಪ್ರಾಣಿಗಳ ಜೊತೆ ಗೆಳೆತನ ಮಾಡ್ಕೊಂಡು, ಬೇಕಾದಾಗ ಮಾತ್ರ ಬೇಟಿಯಾಡ್ಕೊಂಡು, ಒಟ್ಟಿಗೇ ಬದುಕ್ತಿರ್ತದೆ ಒಂದು ಚಿಕ್ಕ ಕಾಡು ಜನಾಂಗ. ಆ ಹಾಡಿಯ ಹುಡುಗೀಗೆ ಹಾವಿನ ಜೊತೆ ಗೆಳೆತನ. ಎಲ್ಲ ಕಷ್ಟ ಸುಖಾನ ಅದರ ಜೊತೇನೇ ಹೇಳ್ಲೊಳ್ಳೋ ಹುಡುಗಿ ತುಂಬ ಮುಗ್ಧೆ. ಆ ಹಾಡೀಲಿ ಎಲ್ರೂ ಕೂಡ ಹಾಗೇ. ದಿನಾ ಸಂಜೆ ಒಟ್ಟಿಗೆ ಹಾಡೋರು, ಕುಣಿಯೋರು. ಕಷ್ಟ ಬಂದ್ರೆ ಒಟ್ಟಿಗೆ ಅಳೋರು. ಗಾಯವಾದ್ರೆ ಸೊಪ್ಪು ತಂದು ಹಚ್ಕೊಂಡು ವಾಸಿ ಮಾಡ್ಕೊಳ್ಳೋರು. ಒಂಥರಾ ಸಮಾಧಾನದ, ಶಾಂತ ಬದುಕು ಬದುಕೋರು.

ಹೀಗಿರೋವಾಗ ಕತ್ತಲ ಕಾಡಿನ ಮಧ್ಯೆ ಇರೋ ಈ ಹಾಡಿಗೆ ನಾಗರಿಕತೆಯ ಪ್ರವೇಶವಾಗ್ತದೆ. ಪಕ್ಕದಲ್ಲೇ ಆಣೆಕಟ್ಟು ಕಟ್ಟೋಕೆ ಸುರು ಮಾಡ್ತಾರೆ. ಕಟ್ಟಡ ಕಟ್ಟೋ ಆಳುಗಳು ನೀರಿಗಾಗಿ ಝರಿಗೆ ಬರೋಕೆ ಶುರುವಾಗ್ತದೆ. ಹಾಗೇ ನಿಧಾನಕ್ಕೆ ಮರಗಳ್ಳರು ಬರ್ತಾರೆ. ಪ್ರಾಣಿಗಳ್ಳರು ಗಳು ಬರ್ತಾರೆ. ಇಡೀ ವಾತಾವರಣ ಹೊಲಸಾಗ್ತದೆ.

ಹಾಡಿಯ ಹುಡುಗನೊಬ್ಬನ್ನ ಸೆಳೆಕೊಳ್ತಾರೆ ಕಳ್ಳರು. ಕಾಣೆಯಾದ ಆತ ‘ನಾಗರಿಕ’ ನಾಗಿ ತಿರುಗಿ ಬಂದಾಗ ಹಾಡಿಗೆ ಹಾಡಿಯೇ ಬೆದರಿ ಹೋಗ್ತದೆ. ಸ್ವಚ್ಛವಾಗಿದ್ದ ಝರಿಯ ಸುತ್ತ ಪ್ಲಾಸ್ಟಿಕ್ ತುಂಬ್ಕೊಂಡು ಹೊಲಸು ನಾರೋದಕ್ಕೆ ಶುರುವಾಗ್ತದೆ. ಇದನ್ನೆಲ್ಲ ಕಂಡ ಹಾವು ಈ ಹಿಂಸೆ ಸಹಿಸಲಾರ್ದೇ ಹುತ್ತ ತೊರೆದು ಹೊರಟುಹೋಗ್ತದೆ. ಹುಡುಗಿ ಒಂಟಿಯಾಗ್ತಾಳೆ. ಹಾಡಿಯವ್ರ ಜೊತೆ ಜಗಳವಾಡಿ ಯುವಕ ಮತ್ತೆ ಹಾಡಿ ಬಿಟ್ಟು ಹೋಗ್ತಾನೆ.

ನೀರಿನ ಸೆಲೆಯಲ್ಲಿ ಈಗ ನೀರು ಕಡಿಮೆಯಾಗಿದೆ. ಕುಡಿಯೋಕೂ ಸಾಲದಂತಾಗಿದೆ. ಹಾಡಿಯ ಜನ ನರಳ್ತಾರೆ. ಸೋತು ಸೊರಗ್ತಾರೆ. ಹೀಗೇ ಒಂದು ರಾತ್ರಿ. ಹಾಡಿಯ ಹಿರಿಯನಿಗೆ ಎಚ್ಚರವಾಗ್ತದೆ. ದಾಹ. ನೀರು ಕುಡಿಯೋಕೆ ಝರಿಗೆ ಕೈ ಹಿಡೀತಾನೆ. ಬರ್ತಿರೋದು ನೀರಲ್ಲ. ಕೈ ನೋಡ್ಕೋತಾನೆ. ಕೈಯೆಲ್ಲ ಕೆಂಪಗಾಗಿದೆ. ಝರೀಲಿ ಈಗ ರಕ್ತ ಬರ್ತಿದೆ. ಎಂದೂ ಕಾಣದ ಹುಳವೊಂದು ಝರಿಯ ಕಟ್ಟೆಯ ಮೇಲೆ ಓಡಾಡ್ತಿದೆ.

ಬೆಟ್ಟದಿಂದ ಹರಿದು ಬರೋ ಚೊಕ್ಕ ನೀರಿನ ಝರಿಯಿಂದ ಆರಂಭವಾಗೋ ನಾಟ್ಕ ಅದೇ ಝರಿಯಲ್ಲಿ ರಕ್ತ ಬರೋದ್ರೊಂದಿಗೆ ದುರಂತದ ಅಂತ್ಯ ಕಾಣ್ತದೆ. ನಾಗರಿಕತೆ ಒಂದು ಜನಾಂಗದ ಬದುಕನ್ನೇ ಮುಗಿಸಿಬಿಡ್ತದೆ.

ಝರಿ, ಹಾವು, ಹುಳಗಳನ್ನ ರೂಪಕವಾಗಿ ಬಳಸಿರೋ ಈ ನಾಟ್ಕದಲ್ಲಿ ಅಲ್ಲಲ್ಲಿ ಚಿಕ್ಕ ಮ್ಯಾಜಿಕ್ ಗಳಿದ್ವು. ಹಾವು ಹುತ್ತ ಬಿಟ್ಟು ಹೊರಟು ಹೋಗೋ ದೃಶ್ಯ , ಝರಿಯ ಮೇಲೆ ಹುಳ ಓಡಾಡೋ ದ್ರಶ್ಯ ಹೀಗೆ ಕೆಲವು. ಕೇರಳದ ಅಮೆಚೂರ್ ನಾಟ್ಕದವ್ರು ಅಲ್ಲಲ್ಲಿ ಇಂಥ ಮ್ಯಾಜಿಕ್ ಮಾಡಿ ದಂಗಾಗಿಸ್ತಾರೆ.

ಇಂಥದೇ ಮ್ಯಾಜಿಕ್ ಈಗ ಕೇರಳದ ಜನರ ಬದುಕಲ್ಲೂ ಆಗಬೇಕಿದೆ. ಅವರು ಹೊಸ ಬದುಕು ಕಟ್ಟಿಕೊಳ್ಳಬೇಕಿದೆ. ಮತ್ತೆ ಹಬ್ಬದ ದಿನಗಳು ಬರಬೇಕಿದೆ. ನಾವುಗಳೆಲ್ಲ ಅವರ ಜೊತೆ ನಿಲ್ಲಬೇಕಿದೆ.

6 comments

Leave a Reply