ಶಿರಸಿಯ ಬೀದಿ ಮತ್ತೆ ನೆನಪಾಗದಿರಲಿ ದೇವರೇ. . .

ಶಿರಸಿಯ ಬೀದಿಯೊಂದು ಸಂಜೆ ದಣಿದು ಬಂದ ಅಪ್ಪ , ಮುಖ ತೊಳೆದುಕೊಂಡು ನಿಟ್ಟುಸಿರು ಬಿಡುವಂತೆ ಒಂದು ಸಣ್ಣಮಳೆಗೆ ತೋಯ್ದು ದಣಿವಾರಿಸಿಕೊಳ್ಳುತ್ತಿತ್ತು. ಒಂದೂ ಕಲೆಯೇ ಇರದ ಚಂದದ ಹುಡುಗಿಯ ಮುಖದಂತೆ, ಸುಳಿಯಲು ಯಾರಿಗೂ ಅವಕಾಶ ನೀಡದ ಬೀದಿ ಪ್ರಶಾಂತತೆಯನ್ನೇ ಉಸಿರಾಡುತ್ತಿತ್ತು. ರಾಡಿಯಾಗಲು ಮನಸ್ಸಿಗೆ ಅವಕಾಶ ನೀಡಬಾರದು ಎನ್ನುವ ಕಾರಣಕ್ಕೆ  ಬೆಂಗಳೂರಿನಿಂದ ಹೊರಟು
ಊರೂರು ತಿರುಗುತ್ತಿದ್ದವನು, ಅದೊಂದು ದಿನ ಶಿರಸಿಯಲ್ಲಿ ಉಳಿದುಕೊಂಡಿದ್ದೆ.

ಮಾರಿಕಾಂಭ ದೇವಸ್ಥಾನದ ಒಂದಿಷ್ಟು ದೂರಕ್ಕಿದ್ದ ಹೊಟೇಲ್‍ನಲ್ಲಿ ತಂಗಿದ್ದೆ. ಬೆಳಿಗ್ಗೆ ಎದ್ದವನು ವಿನಾಕಾರಣ ಕಾಲು ಸವೆಯುವಷ್ಟು ದೂರ ನಡೆಯಬೇಕು ಎಂದು ನನಗೆ ನಾನೇ ತೀರ್ಮಾನಿಸಿಕೊಂಡು, ರಾಯರಪೇಟೆ ಬೀದಿಯಲ್ಲಿ ನಡೆದು ಹೊರಟಿದ್ದೆ. ಅದಾಗಲೇ ನೆನೆದು ರದ್ದಿಯಾಗಿದ್ದ ಬೀದಿಗೆ ಮತ್ತೂ ರದ್ದಿಯಾಗುವ ಸರದಿ ಬಂದಿತ್ತು. ಸಣ್ಣ ಕಿತಾಪತಿಯಂತೆ ಆರಂಭವಾದ ಮಳೆ, ದೊಡ್ಡ ರಾಧಾಂತವಾಗಿ ಮುಂದುವರೆದಿತ್ತು.

ಗಾಳಿಗೆ ಹಿಡಿದಿದ್ದ ನನ್ನ ಬಣ್ಣದ ಕೊಡೆ ಮಗುಚಿಬಿದ್ದು, ಲಟಕ್ ಲಟಕ್ ಎನ್ನುವ ಸದ್ದೂ ಮಾಡದೆ ನಾಲ್ಕೈದು ಕಡ್ಡಿಗಳು ಮುರಿದುಕೊಂಡಿದ್ದವು.  ಜರ್ಕಿನ್, ಟೋಪಿ ತೊಟ್ಟಿದ್ದರಿಂದ ಭಯ ಪಡಲಿಲ್ಲ. ರಾಯರಪೇಟೆ ದಾಟಿ, ಗಾಂಧಿನಗರದ ಸಮೀಪದ ಚರ್ಚ್‍ನ ಮಗ್ಗುಲಿನ ಬೀದಿ ತಲುಪುವ ವೇಳೆಗೆ, ತಪ್ಪು ಮಾಡಿದವರಿಗೆ ಬೆತ್ತದ ರುಚಿ ತೋರುವ ಕಠಿಣ ಮೇಷ್ಟರಿನಂತೆ ಮಳೆ ಇನ್ನಷ್ಟು ಜೋರಾಗಿತ್ತು.

ಪ್ಯಾಂಟು, ತಲೆಯ ಮೇಲಿದ್ದ ಟೋಪಿ ಮಳೆಗೆ ಬಲಿಯಾಗಿದ್ದವು. ನೀರು ಮೈಯಿಂದ ತೊಟ್ಟಿಕ್ಕುತ್ತಿತ್ತು. ನಿಲ್ಲಲೆಬೇ ಕಿತ್ತು ಮಳೆಯನ್ನು ತಪ್ಪಿಸಿಕೊಂಡು.  ಎಲ್ಲಕ್ಕಿಂತಲೂ ಹೆಚ್ಚಾಗಿ ಮಳೆಯಲ್ಲಿ ನೆನೆಯುವುದಕ್ಕೆ ಮನಸಿನಲ್ಲಿ ಯಾವ
ಸಿದ್ದತೆಯೂ ಆ ಕ್ಷಣಕ್ಕೆ ಇರಲಿಲ್ಲ. ಮಳೆಯಿಂದ ತಪ್ಪಿಸಿಕೊಳ್ಳುವುದಕ್ಕೆ, ನನಗೆ ಅರಿವಿಲ್ಲದಂತೆ ಐದಾರು ಹೆಜ್ಜೆಗಳಷ್ಟು ದೂರಕ್ಕಿದ್ದ ಅದೊಂದು ಗೇಟಿಲ್ಲದೇ, ಬರಿಯ ಕಾಪೌಂಡಿನ ಮನೆಯ ಚಾವಣಿಯ ಕೆಳಗೆ ಓಡಿ ಸೇರಿಕೊಂಡೆ.  ಒಂದಿಷ್ಟೇ ದೂರಕ್ಕೆ ನಿಂತಿದ್ದ ಅರವತ್ತರ ಅಂಚಿನ ಅಜ್ಜ ನಾನು ಓಡಿ ಬರುವುದನ್ನು ನೋಡಿ “ಮಳೆಗೆ ನೆನೆಯಬೇಡ, ಇನ್ನೂ ಒಳಗೆ ಬಾ” ಎನ್ನುವಂತೆ ಆಂಗಿಕ ಭಾಷೆಯಲ್ಲಿ ಕರೆದರು. ನಾನು ಅವರು ಕರೆದಷ್ಟೂ ಹತ್ತಿರವಾಗಿ ನಿಂತೆ. ಮಳೆ ಆವೇಶಕ್ಕೆ ಸುರಿಯುತ್ತಿರುವಂತೆ ರಭಸವನ್ನ ಇನ್ನೂ ಜೋರಾಗಿಸಿಕೊಂಡಿತು.

ಮಳೆಯ ರಭಸಕ್ಕೋ ಏನೋ ಶಿರಸಿಯ ಬೀದಿಯಲ್ಲಿ ಮೊದಲು ಕಂಡ ಪ್ರಶಾಂತತೆ ನಿಧಾನವಾಗಿ ಕರಗತೊಡಗಿತ್ತು. ರಣಬಿಸಿಲಿಗೆ ಓಣಗಿದ ಮನೆಯ ಹಿಂದಿನ ಹೂವಿನಂತೆ ಮೈ ಮುದುಡಿಕೊಂಡಿದ್ದ ಅಜ್ಜ, ಆಗಾಗ ಮನೆಯೊಳಗೆ ಇಣುಕಿ ಬರುತ್ತಿದ್ದರು. ನಾಲ್ಕೈದು ತೆಂಗಿನ ಮರಗಳು, ಒಂದು ಹಳೆಯ ಬಾವಿಯ ಹೆಂಚಿನ ಮನೆ ಅದೊಂದು ವಿಷಾದವನ್ನು ಹೊತ್ತು ನಿಂತಂತೆ ಕಂಡಿತು‌. ಮೊದಲ ಸಾರಿ ನೋಡಿದಾಗಲೂ ಹೀಗೆ ಅನಿಸಿಹೋಗಿದ್ದು ಅದೆಷ್ಟೋ ಸೋಜಿಗದಂತೆ ಕಂಡಿದೆ.

ಹೊರಗೆ ಮಳೆ ಸುರಿಯುತ್ತಲೇ ಇತ್ತು. ನಡುವೆಯೂ ಅಜ್ಜ ಇಣುಕುವುದು, ಒಂದಿಷ್ಟು ಹೊತ್ತು ಮನೆಯೊಳಗೆ ನಿಂತು ಬರುವುದು ನಡೆದೇ ಇತ್ತು. ಮಳೆ ನಿಲ್ಲುವುದನ್ನು ಮಾತ್ರವೇ ಕಾಯುತ್ತಿದ್ದ ನನಗೆ ಅಜ್ಜನ ನಡೆಗಳು ಅರ್ಥೈಸಿಕೊಳ್ಳುವುದು ಅಷ್ಟು ಅನಿವಾರ್ಯ ಎನಿಸಿಲಿಲ್ಲ. ಅಜ್ಜನ ಅವತಾರವನ್ನ ಪುನಾತರ್ವನೆಗೊಂಡಿದ್ದು ನನ್ನ ವಯೋಸಹಜ ಕುತೂಹಲವನ್ನು ಕೆಣಕಿ ಗಾಯಗೊಳಿಸಿತ್ತು. ಈ ಬಾರಿ ಮನೆಯೊಳಗೆ ಇಣುಕಿ ಬಂದ ಅಜ್ಜನನ್ನು  “ಒಳಗೆ ನಡೆಯುತ್ತಿರುವುದು ಏನು?” ಅವರದೇ ಆಂಗಿಕ ಭಾಷೆಯಲ್ಲಿ ಕೇಳಿದೆ.

“ಒಳಗೆ ಇತ್ಯರ್ಥವಾಗ್ತಾ ಇದೆ”. ಎಂದರು ಮೆಲ್ಲಗೆ.

ಅರ್ಥವಾಗದೇ, ಏನು? ಎಂದೆ

“ಈ ಮನೆಯವರ ಮಗಳು ಇದ್ದಾರಲ್ಲ! ಅವರು ಗಂಡನ ಜತೆ ಇರಬೇಕೋ!  ಬೇಡವೋ?  ಎನ್ನುವ ಇತ್ಯರ್ಥವಾಗುತ್ತಿದೆ.  ಬೆಳಿಗ್ಗೆಯಿಂದಲೇ ನಡೀತಿದೆ ಜಟಾಪಟಿ”. ಎಂದ ಅಜ್ಜನ ಕಣ್ಣುಗಳಲ್ಲಿ, ಸೋನೆ ಮಳೆಯಂತೆ ಸಣ್ಣ ಹನಿಗಳು ಸೇರಿಕೊಳ್ಳುತ್ತಿದ್ದವು.

ಬೆಳಿಗ್ಗೆ ಎಂಟು ಗಂಟೆ. ಮಳೆಯ ನಡುವೆಯೂ ಒಂದಿಷ್ಟು ಬಂದು ಮನೆ ಸೇರಿಕೊಂಡರು. ನಿಧಾನವಾಗಿ ಮಾತುಗಳು ಹೊರಜಾರಲು ಶುರುವಿಟ್ಟುಕೊಂಡವು.  ರಚ್ಚೆ ಹಿಡಿದ ಮಗುವೊಂದು, ಅಳು ನಿಲ್ಲಿಸಿದಂತೆ ಚಂಡಿ ಹಿಡಿದ ಮಳೆಯೂ ಥಟ್ಟನೇ ನಿಂತುಹೋಗಿತ್ತು. ಮಳೆಯ ನಿಲ್ಲುವುದನ್ನೇ ಕಾಯುತ್ತಿದ್ದವನಂತೆ, ಬಿಡುವು ನೀಡಿದ ತತ್ ಕ್ಷಣವೇ
ಅಜ್ಜ ಕುಳ್ಳುಗಾಲುಗಳನ್ನು ಹಾಕುತ್ತ  ಮನೆಯ ಕಡೆಗೆ ಓಡಿದರು.

ಮಳೆ ನಿಂತಮೇಲೂ ಚಾವಣಿಯ ಕೆಳಗೆ ನಿಲ್ಲಬೇಕಾ? ಅಥವಾ ನನ್ನ ದಾರಿ ಎನ್ನುವಂತೆ ಹೊರಡಬೇಕಾ ಎನ್ನುವುದು ಅರ್ಥವಾಗದೆ ಗೊಂದಲವಾದೆ. ಇತ್ಯರ್ಥವಾಗಿದ್ದು ಕೇಳುವುದು ಸರಿಯೆಂದು ಅಜ್ಜನಿಗಾಗಿ ಕಾಯುವುದು ಒಳಿತು ಏನಿಸಿತು.

ಹೆಗಲಿಗೆ ಕೆಂಪು ಚೌಕದ ಇಳೀಬಿಟ್ಟುಕೊಂಡಿದ್ದ ಅಜ್ಜ ಎಷ್ಟೋ ಹೊತ್ತಿನ ನಂತರ ಬಂದು ಜತೆಯಾದರು. ಅಜ್ಜನ ಕುಳ್ಳುಗಾಲುಗಳಿಗೆ ಮೊದಲಿದ್ದ ವೇಗವಿರಲಿಲ್ಲ. ನಿಸ್ತೇಜವಾಗಿ ಸೊರಗಿದಂತೆ ನಿಧಾನವಾಗಿ ಬಂದವು. ಅಜ್ಜನಿಗೆ ಕಣ್ಣು ಮಿಟುಕಿಸಿದೆ.

“ಎಲ್ಲ ಆಯ್ತು. ಹುಡುಗಿ ಇಲ್ಲೇ ಉಳಿತಾಳೆ”.

ಹುಡುಗ?

ಅವನು ಯಾವತ್ತೋ ಹೊರಡಬೇಕು ಎಂದಿದ್ದವನು. ಇಷ್ಟು ತಡೆದಿದ್ದು ಹೆಚ್ಚು. ಹುಡುಗಿ ಒಬ್ಬಳೇ ಮಗಳು, ಉಳಿಯಲಿ ಬಿಡು.

ಈ ಎಲ್ಲವನ್ನ ಕಂಡಿದ್ದ ಅಜ್ಜ, ಅದೇ ಮನೆಯವರಲ್ಲ. ಅಜ್ಜ ಆ ಮನೆಯ ಕೆಲಸದವರು. ಶಿರಸಿಯಿಂದ ಐದಾರು ಕಿಲೋ ಮೀಟರ್ ದೂರಕ್ಕಿರುವ ಚಿಪಗಿ ಊರಿನವರಂತೆ. ಈ ಮನೆಯವರ ತೋಟ ನೋಡಿಕೊಳ್ಳುತ್ತ, ತೆಂಗಿನಕಾಯಿಗಳನ್ನು ಸುಲಿಸುತ್ತ, ಪೇಟೆಗೆ ಅಡಿಕೆ ಧಾರಣೆಗೆ ಜತೆಯಾಗಿ ನಿಲ್ಲುತ್ತಿದ್ದವರು. ಹೀಗೆ ಕೆಲಸ ಮಾಡುತ್ತಲೇ ಇದೇ ಮನೆಯೊಂದಿಗೆ ಇಪ್ಪತ್ತ ವರ್ಷಗಳಿಗೂ ಹೆಚ್ಚು ಕಳೆದುಹೋದವರು.

ಅಜ್ಜ ಆಗಾಗ ಮನೆಯೊಳಗೆ ಸಲೀಸಾಗಿ ನಡೆದು ಬಂದಿದ್ದು. ಎಲ್ಲವೂ ಮುಗಿದಿದೆ ಎನಿಸಿದ ಮೇಲೆ ಸಿಟ್ಟಿನಿಂದಲೋ, ಬೇಸರದಿಂದಲೋ ಹೊರಗೆ ಬಂದು ನಿಂತಿದ್ದು ವ್ಯಕ್ತಪಡಿಸಲಾಗದಕ್ಕೆ ತೆರೆದು ನಿಂತಿತ್ತು.  ಮನೆಯೊಂದಿಗಿನ ಕಾದಿಟ್ಟುಕೊಂಡಿರುವ ಸಲುಗೆಯನ್ನು ಸಾರುತ್ತಿತ್ತು.  ಮನೆಯ ರೀತಿ ರಿವಾಜುಗಳನ್ನು ಚೆನ್ನಾಗೆ ತಿಳಿದಿದ್ದವರು ಎನ್ನುವುದು ಸಲೀಸಾಗಿ ಗೋಚರವಾಗುತ್ತಿತ್ತು.

ಅಜ್ಜ ಮಾತನ್ನು ಮುಂದುವರೆಸುತ್ತ, ಗೇಟಿಲ್ಲದ ಕಾಪೌಂಡಿನ ಆ ಮನೆಯನ್ನು ದಾಟಿ ಬಂದರು. ಜತೆಯಾಗಿ ನಡೆದದಕ್ಕೆ ಅವರೊಂದಿಗೆ ನಾನೂ ಹೆಜ್ಜೆ ಸೇರಿಸಿದ್ದೆ. ಅಜ್ಜ ನಾನು ಬಂದ ಅದೇ ಹಾದಿಯಲ್ಲಿ ಹೆಜ್ಜೆ ಹಾಕುತ್ತ, ಮುರಿದು ಬಿದ್ದ ಮನೆಯೊಳಗಿನ ಅಸಲಿಯತ್ತನ್ನು ಹೇಳುತ್ತಲೇ ಹೋದರು.

ಒಂದಿಷ್ಟು ಅನುಕೂಲವಾಗಿರುವ ಆ ಮನೆಗೆ ಒಬ್ಬಳೇ ಹೆಣ್ಣು ಮಗಳು. ಬೆಂಗಳೂರಿನಲ್ಲಿ ಒಂದಿಷ್ಟು ಕೆಲಸ ಮಾಡಿದ್ದ ಅವಳನ್ನು ಮೂರು ವರ್ಷಗಳ ಹಿಂದೆ ಶಿರಸಿಗೆ ಕರೆಸಿಕೊಳ್ಳಲಾಗಿತ್ತು. ಒಪ್ಪಿಗೆಯಿಂದ ಮದುವೆಯನ್ನೂ ಮಾಡಲಾಗಿತ್ತು. ಹುಡುಗನೂ ಅದೇ ಊರಿನವನಾಗಿದ್ದು, ಇದ್ದ ಸರ್ಕಾರಿ ಕೆಲಸವನ್ನು ಬಿಟ್ಟು ತೋಟ ಮಾಡುತ್ತಿದ್ದನಂತೆ. ಮೊದಲು ಎಲ್ಲವೂ ಸಾಂಧ್ರವಾಗಿದ್ದು, ದಿನಕಳೆದಂತೆ ಅವರಿಬ್ಬರು ವಿಚಿತ್ರವಾದ ರೀತಿಯಲ್ಲಿ ಜಗಳವಾಡತೊಡಗಿದ್ದಾರೆ. ಒಬ್ಬರ ಮೇಲೊಬ್ಬ ಮಾನಸಿಕ ದಾಳಿಗಿಳಿದಿದ್ದಾರೆ.

ವಿರುದ್ಧ ದಿಕ್ಕಿಗೆ ಬೀಸುವ ಗಾಳಿಯಂತೆ ಸಣ್ಣ ಪ್ರಮಾಣದ ಮುನಿಸು ದಿನಕಳೆದಂತೆ ಗಾಢವಾಗಿದೆ. ಮೊದಲು ಅವರಿಬ್ಬರ ಕೋಣೆಯಲ್ಲಿ ಆರಂಭವಾದ ಅಸಹನೆ, ಮನೆಯ ಹಜಾರಕ್ಕೂ ಬಂದಿತ್ತು. ಕಾವು ತೀವ್ರವಾದದ್ದು ಹುಡುಗಿಯ ಅಪ್ಪನ ಮನೆಯನ್ನೂ ತಲುಪಿತ್ತು. ಮೊದಲ ಒಂದಿಷ್ಟು ದಿನ ಸಮೀಕರಿಸಲು ಎರಡೂ ಮನೆಯವರೂ ಯತ್ನಿಸಿದ್ದಾರೆ. ಹರಿದ ಬಟ್ಟೆಯನ್ನು ಒಲಿದುಕೊಂಡ ಮೊದಲು ದಿನ ನೆಮ್ಮದಿಯಾದರೂ, ತೊಟ್ಟವನ ಎದೆ ಗಟ್ಟಿಯಾಗದೇ ಹೋದರೆ, ಬಟ್ಟೆ ಹರಿದ್ದದ್ದು ಎನ್ನುವ ಕೀಳರಿಮೆ ಉಳಿದುಹೋದಂತೆ, ಮುನಿಸಿಕೊಂಡಿದ್ದ ಅವರಿಬ್ಬರಿಗೂ ಸಂಬಂಧಗಳು ತೇಪೆ ಹಾಕಿದ್ದು ಎನ್ನುವುದು ರಾಚಿದೆ. ಅಸಹಜ ಎನಿಸಿದೆ.

ಒಂದು ತಿಂಗಳಿನ ನಂತರ ಅದೇ ಖಯಾಲಿ. ಮೊದಲು ಮೌನ, ನಂತರ ಮುನಿಸು, ಅದರ ಹಿಂದೆಯೇ ಸಣ್ಣ ಜಗಳ, ಅಸಹನೆ, ಜೋರು ದನಿ. ಮತ್ತೆ ಎರಡೂ ಮನೆಯವರು ಎದುರು ನಿಂತು ಒಬ್ಬರ ಮುಖ ಮತ್ತೊಬ್ಬರು ನೋಡಿಕೊಳ್ಳುತ್ತಾ ಮಾತು ಕತೆಗಿಳಿಯುವುದು. ರಾಜಿ ಸಂಧಾನದ ಸೂತ್ರಗಳನ್ನು ಎದುರಿಡುವುದು ಹೀಗೆ ಅವಿರತವಾಗಿ ನಡೆದ ಅದದೇ ಕತೆಗಳು, ಇಂದು ಒಂದು ಜೋರು ಮಳೆ ಸ್ಭಬ್ದವಾಗುವುದರೊಳಗೆ ಇತ್ಯರ್ಥವಾಗಿಹೋಗಿತ್ತು.

ಜತೆ ಹೆಜ್ಜೆ ಹಾಕಿದ್ದಕ್ಕೆ ಇಷ್ಟೆಲ್ಲಾ ಹೇಳಿದೆ ಎನ್ನುವ ಧೋರಣೆಯ ಅಜ್ಜ, ಯಾವ ಪರಿಚಯವೂ ಇರದ ನನ್ನೊಂದಿಗೆ ಹೇಳಬಹುದಾದ ವಿಚಾರಗಳ ಗುಟ್ಟುಗಳನ್ನು ಮಾತ್ರ ಬಿಟ್ಟುಕೊಡುತ್ತಿದ್ದರು. ಅವರು ಎಂಜಲು ನುಂಗಿದಷ್ಟೇ, ಮಾತುಗಳನ್ನೂ, ಮಾತಿನ ಹಿಂದಿನ ವಿಚಾರಗಳನ್ನೂ ನುಂಗಿದ್ದರು. ಹೇಳಬೇಕಾಗಿದ್ದ ಅದೆಷ್ಟೋ ವಿಚಾರಗಳು ಅಜ್ಜನ ಹಿಂಜರಿಕೆಯ ಹಿಂದೆ ಅವಿತುಹೋಗಿದ್ದವು ಎನ್ನುವುದು ಅವರು ಹೇಳದೇ ಇದ್ದರೂ ಗೊತ್ತಾಗಿಹೋಗಿತ್ತು. ಅದು ಒಳ್ಳೆಯದು ಹೌದು, ನನಗೆ ಆ ಎಲ್ಲವನ್ನೂ ಕೇಳುವ ಅಗತ್ಯವೂ ಇರಲಿಲ್ಲ, ಅನಿವಾರ್ಯವೂ ಇರಲಿಲ್ಲ. ಈ ಎಲ್ಲಕ್ಕಿಂತ ಮನಸ್ಥಿತಿ ಅಷ್ಟೊಂದು ಗಟ್ಟಿಯಾಗಿರಲಿಲ್ಲ.

ಎಲ್ಲ ಗೊಡವೆಗಳನ್ನು ಬದಿಗಿಟ್ಟು ಅಲೆಯಬೇಕು ಎಂದುಕೊಂಡಿದ್ದ ನನ್ನ ಯೋಜನೆ, ಮೂರನೆಯ ದಿನವೇ ಮಣ್ಣುಪಾಲಾಗಿತ್ತು. ಒಡೆದುಬಿದ್ದಿದ್ದ ಎರಡೂ ಮನೆಗಳು ಮತ್ತವರ ಸದ್ಯದ ಸ್ಥಿತಿ ಮುರಿದುಬಿದ್ದಿದ್ದ, ನನ್ನ ಕೈನಲ್ಲಿದ್ದ ಬಣ್ಣದ ಕೊಡೆಯನ್ನೇ ಹೋಲುತ್ತಿದ್ದವು. ಜೋರು ಗಾಳಿಗೆ ಧೃತಿಗೆಟ್ಟು ತಂತಿಗಳನ್ನು ಮುರಿದುಕೊಂಡು ಬಿದ್ದಿದ್ದ ನನ್ನ ಕೊಡೆ, ಹಿಡಿದಿದ್ದ ನನಗೆ ಯಾವುದೇ ಉಪಯೋಗಕ್ಕೆ ಬರುವ ಸ್ಥಿತಿಯಲ್ಲಿ ಇರಲಿಲ್ಲ. ಆದರೆ ಅದರ ಸುತ್ತಲೂ ಹರಡಿಕೊಂಡಿದ್ದ ಅದರ ಬಣ್ಣಗಳು ಮಾತ್ರ ಕಾಣುವಾಗ ಚಂದವಾಗಿತ್ತು. ಯಾಕೋ ಆ ಮನೆಯವರು ನನ್ನ ಮುರಿದುಬಿದ್ದಿದ್ದ ಬಣ್ಣದ ಕೊಡೆಯ ಸ್ಥಿತಿಯಲ್ಲೇ ಉಳಿದುಹೋಗಿರಬಹುದಾ ಎಂದುಕೊಂಡೆ. ಮೇಲ್ನೋಟಕ್ಕೆ ಚಂದವಾಗಿದ್ದರು ಒಳಗೇ ಒಡೆದುಬಿದ್ದಿದ್ದರು ನೋವು ತೀವ್ರವಾಗಿತ್ತು.

ಅಜ್ಜನ ಮಾತುಗಳಿಂದ ತಿಳಿದದ್ದು ಆ ಎರಡೂ ಮನೆಗಳಲ್ಲಿ ಬದುಕುವುದಕ್ಕೆ ಬೇಕಾದ ಎಲ್ಲವೂ ಅಲ್ಲಿ ಸಾಕೆನ್ನುವಷ್ಟಿತ್ತು. ಆದರೆ ಬದುಕನ್ನು ಜೀವಿಸುವುದಕ್ಕೆ, ಅನುಭವಿಸುವುದಕ್ಕೆ ಬೇಕಾದ ತಾಳ್ಮೆ, ನಂಬಿಕೆಗಳಿಗೆ ಕೊರತೆ ಕಾಣುತ್ತಿತ್ತು. ಮಳೆ ಬಿದ್ದು ನೆಲ ಒಣಗುವುದರೊಳಗೆ ಎಲ್ಲವೂ ಬರಿದಾಗಿತ್ತು.

ಅಜ್ಜ ಬಸ್ ಸ್ಟಾಪಿನ ಕಡೆಗೆ ಹೊರಟರು. ಒಂದಷ್ಟು ಹೊತ್ತು ಅದನ್ನೇ ಯೋಚಿಸುತ್ತ ನಿಂತೆ. ಮತ್ತೆ ಅಜ್ಜನನ್ನ ನೋಡಬೇಕು ಎಂದು ಬಸ್ ಸ್ಟಾಪಿನ ಕಡೆಗೆ ಹೊರಟು ಹುಡುಕಿದರು ಅಜ್ಜ ಸಿಗಲಿಲ್ಲ.

“ರಿಪೇರಿ, ರಿಪೇರಿ, ಛತ್ರಿ ರಿಪೇರಿ
ಬೀಗ ರಿಪೇರಿ,
ಟ್ರಂಕು ರಿಪೇರಿ, ರಿಪೇರಿ, ರಿಪೇರಿ”
ಮನೆಯ ಹುಡುಗರೆಲ್ಲ ಗೇಟಾಚೆ ಕಾದರು ಕೂಡ
ದಿನವೆಲ್ಲ ಆ ಅವನು ಬರಲೇ ಇಲ್ಲ
“ತಲೆ ರಿಪೇರಿ?
” ಮುರಿದ ಮನ ರಿಪೇರಿ?
” ಉರಿದ ಎದೆ ರಿಪೇರಿ?

ಎಲ್ಲಿ ಹೋದನು ಮುದುಕ? ಯಾವ ಬಡಗುಡಿಸಲಲಿ
ಯಾವ ಹಣತೆಯ ಮುಂದೆ ಅಡಗಿ ಕುಳಿತ?
ಕಾರು ಏರದ, ಗಾಡಿ ಕೂಡ ತಾಗದ ಯಾವ
ತಪ್ಪಲಿನ ಗುಹೆಯಲ್ಲಿ ಮೈಯ ಮರೆತ?

(ಹಿಮಗಿರಿಯ ಕಂದರ: ಗೋಪಾಲಕೃಷ್ಣ ಅಡಿಗರು)

***

ನನ್ನೊಂದಿಗೆ ಓದಿದ ಹುಡುಗಿಯೊಬ್ಬಳಿಗೆ ಕಾಲೇಜು ಮುಗಿದ ಎರಡೇ ತಿಂಗಳಿಗೆ ಮದುವೆಯಾಗಿತ್ತು. ಇಬ್ಬರಿಗೂ ಆತ್ಮೀಯ ಎನಿಸಬಹುದಾದಷ್ಟು ಗೆಳೆತನವಿದೆ‌. ಕಾಲೇಜು ಮುಗಿದ ಮೇಲೆ ಸಿಕ್ಕಾಗ ಒಂದೆರಡು ಮಾತುಗಳು ಮಾತ್ರವೇ ನಡೆಯುತ್ತಿದ್ದವು. ಕೆಲವೊಮ್ಮೆ ಊಟ, ಒಂದಿಷ್ಟು ಹರಟೆಯಲ್ಲಿ ಒಂದಿಷ್ಟು ಕಳೆದುಹೋಗಿತ್ತು. ಎರಡು ದಿನಗಳ ಹಿಂದೆ ಆಕೆಯ ಅಮ್ಮ  ಮೈಸೂರಿನಲ್ಲಿ ಎದುರಾಗಿದ್ದರು. ಮಾತು ಆರಂಭದಲ್ಲೇ ಅಸಹಜತೆಯ ವರ್ಣ ಬಳಿದುಕೊಂಡಿತು. ಮಾತು ಮುಗಿಯುವ ಹೊತ್ತಿಗೆ ಅವರು ಹೇಳಿದ್ದು ಇಷ್ಟೇ.

“ಎಲ್ಲ ಮಾತಾಡಿ ಆಯ್ತು ಕಣೋ, ಅವಳು ಒಪ್ಪುತ್ತಿಲ್ಲ, ಅವನೂ ಒಪ್ಪುತ್ತಿಲ್ಲ. ನಮಗೂ ಸಾಕು ಸಾಕಾಗಿದೆ. ಇಬ್ಬರು ಬಡಿದಾಡಿ ಸಾಯುವುದಕ್ಕಿಂತ ಹೀಗೆ ಅವರವರ ಪಾಡಿಗೆ ಇರಲಿ. ಹೇಗೋ ಓದಿದ್ದಾರೆ, ಬದುಕಿದರೆ ಸಾಕು. ಡಿವೋರ್ಸ್ ಎಲ್ಲ ಬೇಡ. ನೆಂಟರು ನಗುತ್ತಾರೆ” ಎಂದರು. ಮಾತು ಮುಕ್ತವಾಗಿತ್ತು. ಅವಳ ಅಮ್ಮನ ಕಣ್ಣಿನಲ್ಲಿ ನೀರೂರಿತ್ತು.

***

ನನ್ನ ಪಿಯೂಸಿ ಟೀಚರ್ ಒಬ್ಬರು,  ಸಂಸಾರಿಕವಾಗಿ ಕ್ಷುದ್ರವಾಗಿ ಯಾವುದೋ ಕಾರಣಕ್ಕೆ ದೂರವಾಗಿದ್ದಾರೆ. ಅವರ ಶಿಷ್ಯಕೋಟಿಯಾದ ನಮಗೆಲ್ಲ ಈ ವಿಚಾರಗಳು ಬೇಗ ವ್ಯಾಟ್ಸ್ ಆಪ್ ತಲುಪಿಬಿಡುತ್ತವೆ. ಈ ವಿಚಾರವೂ ಹಾಗೇ ಮೊಬೈಲ್ ನ ಸಣ್ಣ ಸ್ಕ್ರೀನ್ ಗೆ ಅಕ್ಷರಗಳಾಗಿ ಬಡಿದಿತ್ತು. ನಾವು ಅವರನ್ನು ಆ ಕುರಿತು ಎಷ್ಟೇ ಆತ್ಮೀಯವಾಗಿದ್ದರು  ಕೇಳಿರಲಿಲ್ಲ.

ಪಾಠ ಮಾಡುವಾಗ ಅದು ಎಷ್ಟೇ ಕಷ್ಟವಾಗಿದ್ದರು, ಸರಿಯಾಗಿ ಬ್ಯಾಲೆನ್ಸ್ ಶೀಟ್‍ನಲ್ಲಿ ಪ್ರೂವ್ ಮಾಡಿಬಿಡುತ್ತಿದ್ದ ಅವರು ಬದುಕಿನಲ್ಲಿ ಬ್ಯಾಲೆನ್ಸ್ ಶೀಟ್ ಪ್ರೂವ್ ಮಾಡಿಕೊಳ್ಳಲು ಯಾಕೋ ಸೋತಿರಬಹದು ಎನಿಸಿತು. ಇದ್ದಷ್ಟು ದಿನವೂ ಮಾದರಿ ಎನ್ನುವಂತೆ ಬದುಕಿದ್ದ ಅವರು ತಮ್ಮದೇ ಬದುಕಿನ ಡೆಬೀಡ್ ಹಾಗೂ ಕ್ರೇಡಿಟ್‍ಗಳನ್ನು ಸರಿಯಾಗಿ ಟ್ಯಾಲಿ ಮಾಡದೇ ಹೋದದ್ದು, ಸಾಕಷ್ಟು ಪ್ರಶ್ನೆಗಳನ್ನು ಕೇಳಿಕೊಳ್ಳುವಂತೆ ಮಾಡಿದೆ.

ಮೈಸೂರಿಗೆ ಹೋಗಿದ್ದಾಗ ಭೇಟಿಯಾಗುವುದಕ್ಕೆ ಅರ್ಧ ಗಂಟೆಯ ಸಮಯ ನೀಡಿದ್ದರು.  ಕ್ಲಾಸ್‍ಮೆಟ್ ಇರಬೇಕು ಎನ್ನುವಷ್ಟು ಸಲುಗೆಯ ನಮ್ಮಿಬ್ಬರ ನಡುವೆ ಆವತ್ತಿನ ಮಾತುಕತೆಯಲ್ಲಿ ಮೊದಲ ಹೊಳಪಿರಲಿಲ್ಲ. ಸುಮ್ಮನೇ ಅವರು ಮಾತನಾಡಲು ಬಯಸದ, ಅವರ ಮನೆಯ ವಿಚಾರವನ್ನೇ ಸಾಮಾನ್ಯವಾಗಿ ಕೇಳಿದೆ. ಸಿಗರೇಟು ಕೊಡವುತಿದ್ದ ಅವರ ಕೈಗಳು ನಿಂತವು.

You know Sandeep, I may be a good teacher as you people says but I will tell you am not a good husband. ಎಂದು ಸಣ್ಣಗೆ ನಕ್ಕರು. ಅವರ ಮತ್ತೊಂದು ಕೈನಲ್ಲಿದ್ದ ಟೀ ಸಣ್ಣದಾಗಿ ತುಳುಕಿತ್ತು. ಕಣ್ಣು ತುಂಬಿಕೊಂಡಿತ್ತು.

***

ದೇಶದ ಅತಿದೊಡ್ಡ ರಾಜಕೀಯ ವಿಚಾರಗಳಿಂತ ನನಗೆ ಈ ನಡುವೆ ಕಳೆದುಹೋಗುತ್ತಿರುವ ಸಂಬಂಧಗಳು ಅತಿಯಾಗಿ ಕಾಡುತ್ತವೆ.
ಮನುಷ್ಯ ವೇಗದಲ್ಲಿ , ಏನನ್ನೋ ತಲುಪುವ ಬರದಲ್ಲಿ ಓಡುತ್ತಿದ್ದಾನೆ.
ಗುರಿಯ ಸ್ಪಷ್ಟತೆ ಇದ್ದಂತೆ ಏನು ಕಾಣುವುದಿಲ್ಲ. ವೈರುಧ್ಯಗಳ ನಡುವೆಯೂ ಜೀವಿಸುವುದನ್ನು ಕಲಿಯುವ ತುರ್ತಿನಿಂದ ಮನುಷ್ಯ ವಂಚಿತನಾಗುತ್ತಿದ್ದಾನೆ. ಸದಾ ಗಂಟುಮುಖವಾಗಿ, ದೊರೆತ ಒಂದಿಷ್ಟೇ ಜಾಗದಲ್ಲೂ ನಮ್ಮ ಬೌದ್ಧಿಕಮುದ್ರೆಯನ್ನು ಠಸ್ಸೆ ಹೊಡೆಯುವುದಕ್ಕೆ ಹಂಬಲಿಸುತ್ತಿದ್ದೇವೆ. ಸದಾ ರಾಜಕೀಯದ ಗುಂಗಿನಲ್ಲಿರುವ ನಮಗೆ ಅತಿಮುಖ್ಯವಾಗಬೇಕಾಗಿದ್ದ ಮನುಷ್ಯನ ಸಹಜ ಸಂಬಂಧಗಳು ಹೆಣಭಾರವಾಗುತ್ತಿವೆ.

ಎಲ್ಲದಕ್ಕೂ ಈಗ ಪರ್ಯಾಯ ಸೃಷ್ಠಿಯಾಗಿದೆ‌. ಅಥವಾ ಮನುಷ್ಯನೇ ಸೃಷ್ಠಿಸಿಕೊಂಡಿದ್ದಾನೆ. ಕೆಲವು ಮರು ಬಳಕೆಗೆ ಹೊಸ ದಿರಿಸು ತೊಟ್ಟುಬರುತ್ತವೆ. ಮನೆಯಲ್ಲಿ ಅಮ್ಮನ ಅಡಿಗೆ ಬೋರು, ಇವತ್ತು ಹೊಟೇಲ್ ಊಟ ಮಾಡಿಬರಬೇಕು ಎಂದು ಹೊಟೇಲ್ ಗೆ ಹೋಗಿ ಕುಳಿತುಕೊಳ್ಳುತ್ತೇವೆ. ಏನು ಬೇಕು ಎನ್ನುವುದನ್ನು ಆರ್ಡರ್ ಮಾಡಿ ಹೊಟೇಲ್ ನ ಮೇನು ಕಾರ್ಡ್ ನೋಡಿದರೆ ಗಾಬರಿಯಾಗುತ್ತದೆ.‌ ಹೊಟೇಲ್ ನ ಹೆಸರಿನೊಂದಿ ಬರೆದಿರುತ್ತದೆ. ” ಅಮ್ಮನ ಕೈ ರುಚಿ”, “ಮನೆ ಊಟ” ಹೀಗೆ. ಹಾಗಾದರೆ ನಾವು ತ್ಯಜಿಸಿ ಬಂದಿದ್ದು ಮನೆಯ ಊಟವನ್ನೇ ಅಲ್ಲವಾ?

ಬದುಕು ಅಷ್ಟೇ‌. ನಾವು ತ್ಯಜಿಸಿ ಬಂದಿದ್ದನ್ನೇ ಹುಡುಕುವಂತಾಗುತ್ತದೆ. ಪ್ರಪಂಚ ಅತಿಯಾಗಿದ್ದರು, ಭಾವನೆಗಳು ಮತ್ತು ಅದರ ಚೌಕ್ಕಟಿಗೆ ಮಿತಿ ಇದೆ. ಪ್ರೀತಿ, ಸಂಬಂಧಗಳು ಅನುಕಂಪದ ಮೇಲೆ ಸೃಷ್ಠಯಾಗುವುದಿಲ್ಲ. ಸಹಜವಾಗಿ ವೃದ್ದಿಯಾಗುತ್ತವೆ‌ ಅಷ್ಟೇ.

ಮತ್ತೆ ಅಜ್ಜ ನೆನಪಾದರು. ಜತೆ ಓದಿದ ಹುಡುಗಿ ಮತ್ತೆ ಪಾಠ ಮಾಡಿದ ಗುರವೂ ನೆನಪಾದರು. ಆ ಎಲ್ಲರ ತೊಳಲಾಟಕ್ಕೆ ಉತ್ತರವಾಗಿ ಕಂಡಿದ್ದು ಭಾರತಿ ಬಿವಿ ಅವರ ಕೆಲವು ಕವಿತೆಗಳಲ್ಲಿ.

ಕೆಲವು ಮದುವೆಗಳು
ಗಾಜಿನ ಬೀರುವಿನಲ್ಲಿ ಜೋಪಾನ ಮಾಡಿಟ್ಟ
ಪಿಂಗಾಣಿ ಕಪ್ಪುಗಳಂತೆ,
ಬಂದವರ ಎದುರು ಪ್ರದರ್ಶನ ಮಾಡಲಿಕ್ಕಷ್ಟೇ ಇರುತ್ತವೆ

***

ಸಾರಿಗೆ ಉಪ್ಪು – ಹುಳಿ – ಖಾರ
ಮೊದಲಿಗೆ ಹದವಾಗಿ ಹಾಕಬೇಕು
ನಂತರವೂ ನೀರು ಹಾಕಿ ಸರಿಪಡಿಸಬಹುದು
ಆದರೆ ಸಾರುಗುಂದುತ್ತದೆ. . .ತೇಪೆ ಹಚ್ಚಿದ ಸಂಬಂಧದಂತೆ

***

ಒಗ್ಗರಣೆ ಡಬ್ಬಿ ನೋಡಿದರೆ
ಒಂದೇ ಕಾಂಪೌಂಡಿನ ಬೇರೆ ಮನೆಗಳಲ್ಲಿನ
ಅಣ್ಣ ತಮ್ಮಂದಿರು ನೆನಪಾಗುತ್ತಾರೆ
ಅಗತ್ಯವಿರುವಾಗ ಹತ್ತಿರ, ಆದರೂ ಪ್ರತ್ಯೇಕ

***

ಬೆಕ್ಕು ಅರ್ಧ ಹಾಲು ಕುಡಿದು ಉಳಿಸಿಬಿಟ್ಟರೆ
ಮುಠ್ಠಾಳನೆಂದು ಸಿಟ್ಟಾಗುತ್ತಿದ್ದೆ
ಪ್ರೀತಿ ಒದೆಯುವ ಮನುಷ್ಯರನ್ನು ಕಂಡಮೇಲೆ
ಇತ್ತೀಚೆಗೆ ಬೆಕ್ಕನ್ನು ಕ್ಷಮಿಸಲಾರಂಭಿಸಿದ್ದೇನೆ

***

ಅಗೋ! ಈರುಳ್ಳಿ ತುಟ್ಟಿಯಾದಾಗ
ಸಣ್ಣ ತುಂಡುಗಳನ್ನೂ ಹೆಕ್ಕಿ ಬಳಸುವಿರಿ
ಅಗ್ಗವಾದರೆ ಬೇಕಾಬಿಟ್ಟಿ ಪೋಲು ಮಾಡುವಿರಿ
ಪ್ರೀತಿ ಹೆಚ್ಚು ಸಿಕ್ಕರೂ ಇದೇ ಉದಾಸೀನ

***

ಈ ನಡುವೆ ನಾನು ಪದ್ಯಗಳನ್ನು ಓದುವುದಿಲ್ಲ. ಮೊದಲೇ ಮನಸು ಕದಡಿದ್ದ ಶಿರಸಿ ಮತ್ತೆ ನೆನಪಾಗದಿರಲಿ ಎಂದು ದೇವರಿಗೆ ಕೇಳಿಕೊಳ್ಳುತ್ತೇನೆ ಅಷ್ಟೇ.

6 comments

 1. ಸಂದೀಪ್, ಶಿರಸಿ ಅಂತ ಕಂಡ ಕೂಡಲೇ ಕಣ್ಣು ಕಿವಿ ನೆಟ್ಟಗಾಗಿ ಹೊಟ್ಟೆ ಹಸಿತಿದ್ದರೂ ತದೇಕ ಚಿತ್ತದಿಂದ ಓದುತ್ತಿದ್ದೆ ; ಅಂಥಾದ್ದೇನು ವಿಷಯ ಅಂತ. ಇಂತಹ ವಿಷಯ ಊರು ಅಂದರೆ ಇರಲೇ ಬೇಕು. ಅದು ಯಾವ ಊರಾದರೇನು. ಶಿರಸಿ ನನ್ನ ತವರು ಕಂಡ್ರೀ. ಅವಿನಾಭಾವ ಸಂಬಂಧ ಇದೆ. ಬೇಕಾದಷ್ಟು ಮನಸ್ಸಿಗೆ ಮುದ ನೀಡುವ ಕಳೆದು ಹೋಗುವಷ್ಟು ಖುಷಿ ಕೊಡುವ ಸಂಗತಿ ಆದರುಪಚಾರ ಬೇಕಾದಷ್ಟಿದೆ. “ಶಿರಸಿ ಮತ್ತೆ ನೆನಪಾಗದಿರಲಿ”ಅಂತ ಹೇಳಬೇಡಿ. ಸಂಕಟವಾಗುತ್ತದೆ ಕಂಡ್ರೀ……

  ಮತ್ತೆ ಹೋಗೋಣ. ಬನ್ನಿ ನನ್ನ ಜೊತೆ. ಈ ಮಾತು ಮರೆಯೋಕೆ.

 2. ಯಾರು ಬೇಡವೆಂದರೂ ಈ ಭಾನುವಾರ ನಾನು ಶಿರಸಿಗೆ ಹೋಗುತ್ತೇನೆ. ಸಾಧ್ಯವಾದರೆ ಅದೇ ಬೀದಿಗಳಲ್ಲಿ ತಿರುಗಿ ಬರುತ್ತೇನೆ.‌

 3. ತುಂಬಾ ಚೆನ್ನಾಗಿ ಅಕ್ಷರಕ್ಕಿಳಿಸಿದ್ದೀರಿ….ನಿಮ್ಮ ಈ ತಾಳ್ಮೆ ಯಷ್ಟೇ ಕಡಿಮೆ ನಮ್ಮ ಜನಕ್ಕೆ…ನೀವು ಕಂಡ ಶಿರಸಿ …ಅಕ್ಕಿಯೊಳಗಣ ಜೊಳ್ಳು ಇದ್ದಂತೆ‌….ಅಲ್ಲಿನ ಸಮೃದ್ದಿ ನಿಮ್ಮ ನಮ್ಮ ಕೈಗೆಟುಕುವಷ್ಟು ಸರಳವಲ್ಲ…ಶಿರಸಿಗೆ ಮತ್ತೆ ಬನ್ನಿ…ಇನ್ನೊಂದು ಮುಖವ ನೋಡುವಿರಿ…

 4. ಶಿರಸಿಯ ಬಗ್ಗೆ ನನ್ನ ತಕಾರಾರಿಲ್ಲ ಮಾರಾಯ. ನನಗೆ ಗೊತ್ತಿದೆ, ನೀನು ಶಿರಸಿಯ ಬಗ್ಗೆ ಈ ಹಿಂದೆ ಸಾಕಷ್ಟು ಸಾರಿ ಮೈಸೂರಿನಲ್ಲಿದ್ದಾಗ ಹೇಳಿದ್ದು ನೆನಪಿದೆ, ನಾನು ಕಂಡದ್ದನ್ನು ಮಾತ್ರವೇ ಇಲ್ಲಿ ಬರೆದಿರುವೆ. ಅಷ್ಟಕ್ಕೇ ಶಿರಸಿಯ್ನನು ದೂರುವುದು ಕಷ್ಟ. ಕಡೆಯದಾಗಿ, ಶಿರಸಿ ನೆನಪಾಗದಿರಲಿ ಎನ್ನುವುದಕ್ಕೆ ನನಗೆ ನನ್ನದೇ ವಯಕ್ತಿಕ ಕಾರಣವಿದೆ, ಅದನ್ನು ದಾಟುವುದು ನನಗೆ ಅಷ್ಟು ಸಲೀಸಲ್ಲ, ಬಹುಶಃ ದಾಟುವುದಕ್ಕೆ ನಾನು ಯತ್ನಿಸುವುದೂ ಇಲ್ಲ.

 5. ಸಂಬಂಧಗಳು ಬಹು ಸೂಕ್ಷ್ಮ ಸರ್.ನಿಜವಾಗಲೂ ಕಳೆದುಕೊಂಡ ನಂತರವೇ ಅವುಗಳ ಬೆಲೆ ತಿಳಿಯುತ್ತೆ ಸರ್.ಹೊಂದಾಣಿಕೆ ಮುಖ್ಯ ಅನ್ಸುತ್ತೆ ಸರ್…

 6. ಬಹಳ ಆಪ್ತವಾಗಿ ಬರೀತೀನಿ..ಓದುಗರಿಗೆ ಅವರೇ ಅನುಭವಿಸುವಂತೆ …
  ತಲೆ ರಿಪೇರಿ..
  ಉರಿದ ಎದೆ ರಿಪೇರಿ…ಓದಕ್ಕೆ ಚೆನ್ನಾಗಿದೆ

  ಸಧ್ಯ ಅದನ್ನು ಅವರವರೇ ಮಾಡಿಕೊಳ್ಳಬೇಕು..
  ಇಲ್ಲಾಂದ್ರೆ ಇಂಥ ಬರಹ ಹುಟ್ಲಲ್ಲ….

Leave a Reply