ಸಿಂಗಾಪುರ್ ನಲ್ಲೀಗ ದೆವ್ವಗಳದ್ದೇ ಸುದ್ದಿ..!

ಒಬ್ಬಾತ ತನ್ನ ಗೆಳತಿಯ ಜೊತೆ ಪಬ್ ಗೆ ಹೋಗಲು ನಿರ್ಧರಿಸುತ್ತಾನೆ. ಆ ಒಂದು ರಾತ್ರಿ, ನಗರದ ಮಧ್ಯಭಾಗದಲ್ಲಿರುವ ಒಂದು ಪಬ್ ಗೆ ಇಬ್ಬರು ತೆರಳುತ್ತಾರೆ. ಕೆಲವು ಗಂಟೆಗಳವರೆಗೆ ಬಾರ್ ನಲ್ಲಿ ಉಳಿದು, ಹಾಡು, ಕುಣಿತ ಹೇಳುತ್ತಾ ಎಂಜಾಯ್ ಮಾಡ್ತಾರೆ.  ಬಳಿಕ ಮನೆಗೆ ತೆರಳಲು ನಿರ್ಧರಿಸಿದ ಅವರಿಬ್ಬರು ಹಣ ಪಾವತಿ ಮಾಡಲು ಕ್ಯಾಶಿಯರ್ ಅತ್ತ ತೆರಳುತ್ತಾರೆ. ಆಗ ಕೌಂಟರ್ ನಲ್ಲಿದ್ದ ವ್ಯಕ್ತಿ, ನೀವು ಮೂವರ ಬಿಲ್ ಕಟ್ಟಬೇಕು ಎಂದು ತಿಳಿಸುತ್ತಾನೆ. ಅಚ್ಚರಿಯಿಂದ ನೋಡಿದ ಈತ, ಅದು ಹೇಗೆ ಸಾಧ್ಯ ನಾವು ಇಬ್ಬರೇ ಬಂದಿದ್ದು ಎಂದು ದೃಡಪಡಿಸುತ್ತಾನೆ.  ಇದಕ್ಕೆ ಉತ್ತರಿಸಿದ ಕ್ಯಾಶಿಯರ್, ಬೇಕಾದ್ರೆ ಕ್ಯಾಮರ ಫೂಟೇಜ್ ತೋರಿಸಲಾಗುವುದು ಅನ್ನುತ್ತಾನೆ. ಆ ವಿಡಿಯೋ ನೋಡಿದಾಗ, ಮೇಲ್ವಿಚಾರಕನ ಮಾತು ನಿಜವಾಗಿತ್ತು. ಇವರಿಬ್ಬರ ಜೊತೆಗೆ ಒಬ್ಬ ಮಹಿಳೆ ಕೂಡ ಎಂಟ್ರೀ ಕೊಟ್ಟಿದ್ಳು.

ಇನ್ನೊಂದೆಡೆ,

ಅಮ್ಮ ತನ್ನ ಮಗ ಮನೆಯಲ್ಲಿರುವ ವೇಳೆ ಮಾರ್ಕೆಟ್ ಹೋಗಿ ಸಾಮಾನು ತರೋದು ರೂಢಿ. ಆಕೆ ಹಿಂದಿರುಗಿ ಮನೆ ತಲುಪುತ್ತಿದ್ದಂತೆ ತಮಾಷೆಗಾಗಿ ಸೀಟಿ ಊದುವುದು ಅಭ್ಯಾಸ ಇತ್ತಂತೆ. ಆ ಮೂಲಕ ಅಮ್ಮ ಮನೆಗೆ ಬಂದ ಸೂಚನೆಯಂತೆ ಮಗ ಬಾಗಿಲು ತೆರೆಯುತ್ತಿದ್ದಂತೆ. ಆದರೆ ಒಂದು ದಿನ ಅಮ್ಮ ಹೊರಗಡೆ ಹೋಗಿ ಸ್ವಲ್ಪ ಸಮಯದ ಬಳಿಕ ಅದೇ ಸೀಟಿಯ ಶಬ್ದ ಮಗನಿಗೆ ಕೇಳಿಸಿತ್ತು. ಆದರೆ ಡೋರ್ ಓಪನ್ ಮಾಡಿ ನೋಡಿದಾಗ ಸುತ್ತಲೂ ಯಾರು ಇರಲಿಲ್ಲ. ಸಂಶಯ ದೂರ ಮಾಡಲು ಅಮ್ಮನಿಗೆ ಫೋನ್ ಮಾಡಿ ವಿಚಾರಿಸಿದಾಗ, ಅಮ್ಮ ಇನ್ನೂ ಮಾರ್ಕೆಟ್ ನಲ್ಲೇ ಇರೋದು ಮಗನಿಗೆ ಖಾತ್ರಿಯಾಗಿತ್ತು. ಹಾಗಾದ್ರೆ ಆ ಸೀಟಿ ಊದಿದವರು ಯಾರು..?

ಇಂತಹ ಹಲವಾರು ಕಥೆಗಳು ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಹರಿದಾಡುತ್ತಿರುತ್ತವೆ.  ಕಟ್ಟು ಕಥೆಯೋ ಅಥವಾ ನಿಜವೋ ಗೊತ್ತಿಲ್ಲ. ದೇಶದ ಮೂಲೆ ಮೂಲೆಯ ಸ್ಟೋರಿಗಳನ್ನು ಹುಡುಕುತ್ತಿರುವ ನನಗೆ, ಇದು ಯಾಕೋ ಕೊಂಚ ಅಚ್ಚರಿ ಮೂಡಿಸಿತು. ಜೋತಿಷ್ಯ, ದೇವರು, ದ್ವೆವ ಇಂತಹ ವರ್ಗಗಳ ಬಗ್ಗೆ ನಾವೇ ಹುಷಾರು ತಿಳಿದರೆ,  ಸಿಂಗಪುರದವರು ಒಂದು ಲೆವೆಲ್ ಹೆಚ್ಚೇ ಇದ್ದಾರೋ ಏನೋ ಅನ್ನಿಸಿತು.

ಇಲ್ಲಿನ ಒಂದು ಶಾಪಿಂಗ್ ಕಾಂಪ್ಲೆಕ್ಸ್ ಪದೇ ಪದೇ ಏನಾದರೂ ಒಂದು ಅವಘಡಕ್ಕೆ ಹೆಸರು ಮಾಡುತ್ತಿತ್ತು. ಹೀಗೆ ಮಾತಾಡುತ್ತಾ, ಇಂತಹ ಘಟನೆಗಳಿಗೆ ನಮ್ಮ ಊರಿನಲ್ಲಾದ್ರೆ , ಜೋತಿಷ್ಯರು ಕೂರಿಸಿ ಗಂಟೆಗಟ್ಟಲೇ ಪ್ಯಾನಲ್ ಡಿಸ್ಕಶನ್ ಮಾಡ್ತಿದ್ರು ಅಂದೆ. ಅದಕ್ಕೆ ನನ್ನ ಗೆಳತಿ, ” ಅಯ್ಯೋ ಇವರೇನೋ ಸುಮ್ಮನೆ ಕೂರುವ ಜನಗಳಲ್ಲ. ನಮ್ಮಕ್ಕಿಂತ ಒಂದು ಪಟ್ಟು ಹೆಚ್ಚೇ ಜೋತಿಷ್ಯವನ್ನು ನಂಬುವವರು. ಆದರೆ ಅಂತಹ ವಿಚಾರಗಳು ನಮ್ಮಲ್ಲಿ ಆಗೋ ಹಾಗೆ ಜಗಜ್ಜಾಹೀರು ಆಗೋದಿಲ್ಲ ಅಷ್ಟೇ  ” ಅಂದಿದ್ಲು.

ಅಂದ ಹಾಗೆ ಚೀನೀಯರಿಗೆ ಈಗ ” ಗೋಸ್ಟ್ ಮಂತ್”. ಪ್ರತೀ ವರ್ಷ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯುತ್ತವೆ. “ಹಂಗ್ರೀ ಗೋಸ್ಟ್ ಫೆಸ್ಟಿವಲ್” ಅನ್ನೋ ಹೆಸರು ಇದೆ. ಚೈನೀಸ್ ಕ್ಯಾಲಂಡರ್ ಪ್ರಕಾರ ವರ್ಷದ ೭ನೇ ಲೂನರ್ ತಿಂಗಳಿನಲ್ಲಿ ಇದನ್ನು ಆಚರಿಸಲಾಗುತ್ತದೆ. ಪ್ರಮುಖವಾಗಿ ಟಾವೊವಾದಿಗಳು ಮತ್ತು ಬೌದ್ಧರು ಮಾಡುವ ಸಂಪ್ರದಾಯ.

ಸಾವಿನ ಮನೆ ಅಂದ್ರೆ ನಮ್ಮಲ್ಲಿ ತುಂಬಾ ನಿಶ್ಯಬ್ದ ವಾತಾವರಣ. ಸೂತಕದ ಛಾಯೆ. ಮನ ತುಂಬಾ ದುಖದ ಮಡುವು. ವಾಸ್ತವವನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ. ಭಾರವಾದ ಮನಸ್ಸು. ಆದರೆ ಈ ಚೀನೀಯರು ಸಂಪೂರ್ಣ ಭಿನ್ನ. ಸಾವು ನಡೆದ ಮನೆಯಲ್ಲಿ ಅಳುವ ಅಥವಾ ಬೇಸರ ವ್ಯಕ್ತ ಪಡಿಸುವ ಹಾಗಿಲ್ಲ. ಈ ಸಮಯದಲ್ಲಿ ಇಸ್ಪೀಟ್ ಆಟಗಳನ್ನು ಆಡೋದು ಸಾಮಾನ್ಯ. ಮನೆಯವರು ಹಾಗೂ ಭೇಟಿ ನೀಡುವ ಸಂಬಂಧಿಕರು ಬಿಳಿಯ ಹಾಗೂ ಕಪ್ಪು ಬಟ್ಟೆಯನ್ನು ಧರಿಸಬೇಕು. ಸಾವಿನ ಕ್ರಿಯೆಯು ೩ ದಿನ ಅಥವಾ ೭ ದಿನಗಳವರೆಗೆ ನಡೆಯುತ್ತವೆ. ಬೆಸ ಸಂಖ್ಯೆಗಳು ಇವರಿಗೆ ಪ್ರಾಧಾನ್ಯತೆ. ಈ ಸಂಕೇತ ಅಪೂರ್ಣವಾದ ಜೀವನ ಚಕ್ರ ಮತ್ತು ಪುನರ್ಜನ್ಮದ ಭರವಸೆ ಎಂದು ಬಿಂಬಿಸಲಾಗುತ್ತದೆ.

ಇವರ ಇತಿಹಾಸಗಳು, ಸಂಪ್ರದಾಯಗಳು, ಆಚಾರ ವಿಚಾರಗಳು, ನಂಬಿಕೆಗಳ ಕಥೆಗಳ ಬಗ್ಗೆ ನೀವು ಕೇಳಲೇ ಬೇಕು.

ಇವರ ಜೋತಿಷ್ಯದ ಪ್ರಕಾರ, ವರ್ಷದ ೭ನೇ ಲೂನರ್ ತಿಂಗಳಲ್ಲಿ ನರಕದ ಬಾಗಿಲು ತೆರೆಯುತ್ತದೆ. ಆಗ ಅಲ್ಲಿ ಕೂಡಿ ಹಾಕಲ್ಪಟ್ಟಿರುವ ಆತ್ಮಗಳು ಹೊರಬರುವ ಸಮಯ. ಆಹಾರಕ್ಕಾಗಿ ಹುಡುಕಾಡುತ್ತಾ ಭೂಮಿಗೆ ಆಗಮಿಸುವ ಅವುಗಳು, ತಮ್ಮ ಮನೆಯತ್ತ ಪ್ರಯಾಣ ಬೆಳಸುತ್ತವೆ. ಹಸಿವಿನಿಂದಲೇ ಬರುವ ಈ ಆತ್ಮಗಳಿಗಾಗಿ ಊಟೋಪಚಾರಗಳು ಹಾಗೂ ಮನರಂಜನೆ ಕಾರ್ಯಕ್ರಮಗಳು ಕಡ್ಡಾಯವಾಗಿ ನೆರವೇರಿಸಲಾಗುತ್ತದೆ.

ಶ್ರದ್ಧಾದ ಸಮಯದಲ್ಲಿ ತರ್ಪಣ ಬಿಡೋದು, ಪಿಂಡ ಪ್ರದಾನ, ಅನ್ನ ಹೊರಗಡೆ ಇಟ್ಟು, ಕಾಗೆಗಳನ್ನು ಕರಿಯೋದು ನಮ್ಮಲ್ಲಿ ನಡಿಯೋ ಕ್ರಮ. ಅದು ಅರ್ಧ ದಿನದ ಕೆಲಸ. ಮತ್ತೆ ಏನಿದ್ರೂ ಮುಂದಿನ ವರ್ಷ. ಆದರೆ ಇಲ್ಲಿ ಹಾಗಲ್ಲ. ಸುಮಾರು ಒಂದು ತಿಂಗಳ ಆಚರಣೆ. ಈ ಸಮಯದಲ್ಲಿ ನೀವು ಎಲ್ಲೇ ತಿರುಗಾಡಿ, ಅಂಗಡಿ ಮುಂಗಟ್ಟುಗಳು, ಮನೆಯ ಮುಂಭಾಗಗಳು , ಗಲ್ಲಿ ರಸ್ತೆಗಳಲ್ಲಿ ಕೇಕ್ ಗಳು, ಹಣ್ಣುಗಳು, ಮನೆಯಲ್ಲಿ ತಯಾರಿಸಿದ ತಿನಿಸುಗಳು ಇಟ್ಟಿರಲಾಗುತ್ತದೆ. ಜೊತೆಗೆ ಧೂಪದ್ರವ್ಯಗಳು ,ಅಗರಬತ್ತಿ ಗಳನ್ನು ಹೊತ್ತಿಸಲಾಗಿರುತ್ತದೆ. ತಮ್ಮ ಪೂರ್ವಜರ  ಹಸಿವು ನೀಗಿಸಲು ನಡಿಯುವ ಪದ್ಧತಿ. ಜೊತೆಗೆ ಜಾಸ್ ಪೇಪರ್ ಗಳನ್ನು ಹೊತ್ತಿಸಲಾಗುತ್ತದೆ. ಈ ಹೊಗೆ, ಭೂಮಿಗೆ ಬಂದ ಆತ್ಮಗಳಿಗೆ ಸಂತೋಷವನ್ನು ನೀಡುತ್ತದೆ ಅನ್ನೋದು ಚೀನಿಯರ ನಂಬಿಕೆ. ನಿಜ ಜೀವನದಲ್ಲಿ ನೇರವೇರದ ವಿಷಯಗಳು, ವಸ್ತುಗಳನ್ನು ಹೊತ್ತಿಸುವ ಮೂಲಕ ಅವರಿಗೆ ಸಮರ್ಪಣೆ ಮಾಡಲಾಗುತ್ತದೆ. ಇದಕ್ಕಾಗಿ ಪೇಪರ್ ಆಕಾರದ ಹಣಗಳು, ವಸ್ತುಗಳು ಅಂಗಡಿಗಳಲ್ಲಿ ಲಭ್ಯವಿರುತ್ತವೆ. ಹೆಚ್ಚು ಹೆಚ್ಚು ಬೆಂಕಿಗೆ ಆಹುತಿ ಮಾಡಿದ್ದಲ್ಲಿ ಅಷ್ಟೇ ಪುಣ್ಯ ಸಿಗುತ್ತವೆ ಅನ್ನೋದು ಕೂಡ ಇವರಲ್ಲಿದೆ.

ಈ ಆಚರಣೆಗಳನ್ನು ಕೆಲವರು ಪ್ರತ್ಯೇಕವಾಗಿ ನಡೆಸಿದ್ರೆ, ಮತ್ತೆ ಕೆಲವರು ಸಾಮೂಹಿಕವಾಗಿಯೂ ನೆರವೇರಿಸುತ್ತಾರೆ. ಇದಕ್ಕಾಗಿ ಅಲ್ಲಲ್ಲಿ ಡೇರೆಗಳು, ಟೆಂಟ್‌ಗಳು ಬೀಡು ಬಿಟ್ಟಿರುತ್ತವೆ. ಹೆಜ್ಜೆ ಹೆಜ್ಜೆಗೂ ಅಗರ್ ಬತ್ತಿಗಳು,  ವಿಶೇಷ  ಪೇಪರ್ ಆಕೃತಿಗಳನ್ನು ಹೊಂದಿದ ಸ್ಟಾಲ್ ಗಳನ್ನು ಈ ತಿಂಗಳುಗಳಲ್ಲಿ ಕಾಣಬಹುದು. ಘೋಸ್ಟ್ ತಿಂಗಳ ಆಚರಣೆಯ ಕೊನೆಯ ದಿನದಲ್ಲಿ ತಾವರೆಯ ಆಕೃತಿಯ ಚಿಮಣಿ ದೀಪಗಳನ್ನು ನೀರನಲ್ಲಿ ಬಿಡಲಾಗುತ್ತದೆ. ಭೂಮಿಗೆ ಬಂದ ಆ ಆತ್ಮಗಳನ್ನು ಮತ್ತೆ ಮರಳಿಸುವ ಸಂಕೇತ  ಇದಾಗಿದೆ.

ಇನ್ನೊಂದು ವಿಚಾರ ಹೇಳಲೇಬೇಕು. ನಮ್ಮಲ್ಲಿ ಸಾವಿಗೆ ಸಂಬಂಧಿಸಿದ ಆಚರಣೆ ಸಂದರ್ಭಗಳಲ್ಲಿ ಶಬ್ದಗಳು ನಡೆಯಬಾರದು. ಯಾಕೆಂದರೆ ಇದರಿಂದ ಆತ್ಮಗಳು ಹೆದರುತ್ತವೆ ಅನ್ನುವ ಮಾತಿದೆ. ಆದರೆ ಚೀನೀಯರು ಘೋಸ್ಟ್ ತಿಂಗಳುಗಳಲ್ಲಿ ಸಂಗೀತ ರಸಸಂಜೆಗಳನ್ನು ಏರ್ಪಡಿಸುತ್ತಾರೆ. ಅಲ್ಲದೆ ನೃತ್ಯಗಳು, ಒಪೆರಾಗಳು ಮತ್ತು ಹಾಸ್ಯ ಕಾರ್ಯಕ್ರಮಗಳು ಒಳಗೊಂಡ ವಿಶೇಷ ಭೋಜನಗಳು ನಡೆಯುತ್ತವೆ. ಈ  ದಿನಗಳಲ್ಲಿ ಬರುವ ಆತ್ಮಗಳಿಗಾಗಿ ಮನೋರಂಜನೆ ಇದು. ಮುಖ್ಯವಾಗಿ ಆ ಸಮಾರಂಭದ ಮೊದಲ ಸಾಲು ಖಾಲಿ ಬಿಟ್ಟಿರುತ್ತಾರೆ. ಆತ್ಮಗಳು ಬಂದು ಕೂತು ಸಂತೋಷದಿಂದ ಕಾರ್ಯಕ್ರಮ ವೀಕ್ಷಿಸು ವುದು ಇದರ ಉದ್ದೇಶ.

ಸಾರ್ವಜನಿಕವಾಗಿ ನಡೆಯುವ ಪ್ರಾರ್ಥನೆಗಳಲ್ಲಿ ಹರಾಜು ಕಾರ್ಯಗಳು ನಡೆಯುತ್ತವೆ. ಇದರಿಂದ ಬರುವ ಹಣವು ಚಾರಿಟಿ ಅಥವಾ ಮುಂದಿನ ವರ್ಷ ಆಚರಣೆಗೆ ಸಂಗ್ರಹಿಸಲಾಗುತ್ತದೆ. ಈ ಹರಾಜಿನಲ್ಲಿ ದೊರೆಯುವ ವಸ್ತುಗಳು ಅದೃಷ್ಟ ಎಂದು ಭಾವಿಸಲಾಗುತ್ತದೆ.

ಬೌದ್ಧಧರ್ಮದಲ್ಲಿ ಇದಕ್ಕೆ ಇತಿಹಾಸವನ್ನು ಕಾಣಬಹುದು. ಮೊಘಲನ ಎಂಬಾತ ಶಕ್ಯಮುನಿ ಅವರ ಅತ್ಯುತ್ತಮ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದರು. ಅವರು ದೈವಿಕ ಶಕ್ತಿಗಳನ್ನು ಹೊಂದಿದ್ದರು. ಒಂದು ದಿನ, ತನ್ನ ಮೃತ ತಾಯಿ ಹಸಿದ ದೆವ್ವಗಳ ನಡುವೆ ಹುಟ್ಟಿರುವುದನ್ನು ನೋಡುತ್ತಾನೆ. ಇದರಿಂದ ದು:ಖಿತನಾದ ಆತ, ನರಕಕ್ಕೆ ತೆರಳಿ ಅಮ್ಮನಿಗೆ ಒಂದು ಬಟ್ಟಲು ಅನ್ನ ನೀಡಲು ಮುಂದಾಗುತ್ತಾನೆ. ಆದರೆ ಅವಳು ಜೀವಿತಾವಧಿಯಲ್ಲಿ ಮಾಡಿದ ಪಾಪದಿಂದಾಗಿ ಮುಟ್ಟಿದ ಅನ್ನವೆಲ್ಲವೂ ಬೂದಿಯಾಗಿ ಮಾರ್ಪಡುತ್ತದೆ.

ಇದರ ಪರಿಹಾರಕ್ಕಾಗಿ ಬುದ್ಧನ ಬಳಿ ತೆರಳಿದಾಗ ಸತ್ಯಾಂಶ ತಿಳಿಯುತ್ತದೆ. ಇದರ ಪರಿಹಾರಕ್ಕಾಗಿ “7 ನೇ ಚಂದ್ರನ ತಿಂಗಳ 15 ನೇ ದಿನವು ಎಲ್ಲಾ ದಿಕ್ಕುಗಳ ಜೋಡಣೆಗೊಂಡ ಸನ್ಯಾಸಿಗಳ ಪವರಾಣ ದಿನವಾಗಿದ್ದು, ನೂರಾರು ಸುವಾಸನೆ ಮತ್ತು ಐದು ಫಲಗಳು, ತೈಲ, ದೀಪ, ಮೇಣದ ಬತ್ತಿಗಳನ್ನು ಸನ್ಯಾಸಿಗಳಿಗೆ ಅರ್ಪಿಸಿದ್ದಲ್ಲಿ ಪಾಪ ಪರಿಹಾರ ಸಾಧ್ಯ ಎಂದು ನುಡಿಯುತ್ತಾರೆ.

ದುಃಖ ಶಕ್ತಿಗಳ ವಿಮೋಚನೆಗಾಗಿ ಇಂದಿಗೂ ಬೌದ್ಧ ಧರ್ಮದ ದೇವಾಲಯಗಳಲ್ಲಿ ಇದೇ ರೀತಿಯ ಆಚರಣೆಗಳು ನಡೆಯುತ್ತವೆ. ಬೌದ್ಧ ಸಂಪ್ರದಾಯವು 5 ನೇ ಶತಮಾನದ ಸಂಭಾಷಣೆಯ ಅಧಿಕೃತ ದಾಖಲೆ ಇದಾಗಿದೆ ಎಂದು ತಿಳಿಸಿದೆ.  ಇದು ಸಂಸ್ಕೃತದಿಂದ ಚೀನೀ ಭಾಷೆಗೆ ಧರ್ಮರಕ್ಷದಿಂದ ಜಿನ್ ರಾಜವಂಶದ ಆಡಳಿತದ ಸಮಯದಲ್ಲಿ ಅನುವಾದಿಸಲ್ಪಟ್ಟಿದೆ.

ರಾತ್ರಿಯ ಸಮಯದಲ್ಲಿ ಏಕಾಂಗಿಯಾಗಿ ಅಲೆದಾಡೋದು ಈ ದಿನಗಳಲ್ಲಿ ಒಳ್ಳೆಯದಲ್ಲ ಅನ್ನುತ್ತಾರೆ ಚೀನೀಯರು. ನಿಮ್ಮ ಹೆಸರನ್ನು ಯಾರೋ ಕೂಗಿದ್ದು ಭಾಸವಾದ್ರೆ ಕತ್ತು ಮಾತ್ರ ಹಿಂದ ನೋಡದೆ, ಇಡೀ ದೇಹವನ್ನೇ ಹಿಂದಕ್ಕೆ ತಿರುಗಿಸಬೇಕಂತೆ. ವಿಶೇಷವಾಗಿ ರಾತ್ರಿಯಲ್ಲಿ ಈಜುಕೊಳಕ್ಕೆ ಇಳಿಯಬಾರದು. ಬಾಯಾರಿದ ದ್ವೆವಗಳ ಸಂಚಾರ ಅಧಿಕವಾಗಿದ್ದರೆ,  ಸಾವು, ಮರುಹುಟ್ಟುಗಳು ನಡೆಯುವ ಸಾಧ್ಯತೆ ಇವೆ. ಯಾವುದೇ ಹೊಸ ಉದ್ಯಮ ಅಥವಾ ಹೊಸ ಯೋಜನೆಗಳಿಗೆ ಈ ತಿಂಗಳು ಯೋಗ್ಯವಲ್ಲ. ದಾರಿ ಬದಿಯಲ್ಲಿ ಸಮರ್ಪಣೆಗೆ ಇಟ್ಟ ವಸ್ತುಗಳನ್ನು ಮುಟ್ಟುವುದಾಗಲೀ, ಕಾಲಲ್ಲಿ ಒದೆಯುವುದಾಗಲಿ ಶುಭ ಸೂಚ ಅಲ್ಲ ಅನ್ನುತ್ತಾರೆ ಚೀನೀಯರು .

ಹೀಗೆ ಘೋಸ್ಟ್ ತಿಂಗಳಿನಲ್ಲೇ ಲೇಖನ ಬರೆಯುತ್ತಾ,  ಹಂಗ್ರಿ ಗೋಸ್ಟ್ ಫೆಸ್ಟಿವಲ್ ಒಳಗೆ ಹೋಗಿ ಹೊರಗೆ ಬರುವ ಹೊತ್ತಿಗೆ ಅಪರಾಹ್ನ ೩ ಗಂಟೆ. ಊಟ ಮಾಡದೆ ಹೊಟ್ಟೆ ಚುರು ಚುರು ಅನ್ನಿಸುತ್ತಿತ್ತು. ಮಗಳು ಶಾಲೆಗೆ ಹೋಗಿದ್ದಳು, ಗಂಡ ಆಫೀಸ್ ಗೆ. ಇನ್ನೇನು ಹೊಟ್ಟೆ ಪೂಜೆ ಮಾಡಲು ಹೊರಟಿದ್ದೆ. ಗಡಿಬಿಡಿಯಲ್ಲಿ ಕೈಯಲ್ಲಿದ್ದ ಮೊಸರು ಪಾತ್ರ ಕೆಳಗೆ ಬಿ ತ್ತು. ಅಡುಗೆ ಮನೆ ತುಂಬಾ ಮೊಸರು ಮಯ. ಆಗ ತಟ್ಟನೆ ಅನ್ನಿಸಿದ್ದು. ” ನಮ್ಮಊರಿನ ಮೊಸರು ತಿನ್ನೋಕೆ ಬಂದ ಅದ್ಯಾವುದಪ್ಪ ಇದು ಚೈನೀಸ್ ಘೋಸ್ಟ್ …..!!!

1 comment

  1. ಆಸಕ್ತಿದಾಯಕ. ಹಣದ ಆಕಾರದ ಪೇಪರ್ ಇರಬೇಕಲ್ವೇ?

Leave a Reply