ಬಿಸಿ ಬಿಸಿ ಕಜ್ಜಾಯವೂ ಕೆಲವರಿಗೆ ಸಿಕ್ಕಿತು..

ಗೀತಾ ಹೆಗ್ಡೆ / ಕಲ್ಮನೆ 

ಗಣಪ ಅಂದರೆ ಸಾಕು ನೆನಪಾಗುವುದು ದೊಡ್ಡ ಕಿವಿ, ಸೊಂಡಿಲ ಮೂತಿ, ಚಂದ ಕಣ್ಣು, ಡೊಳ್ಳು ಹೊಟ್ಟೆ.  ಹಾವು ಸುತ್ತಿಕೊಂಡು ತುಂಬಿದೊಟ್ಟೆ ಒಡೆಯದಿರಲೆಂದು ಕಟ್ಟಿಕೊಂಡ ಗಣಪ ಅಂತ ಅಮ್ಮ ಹೇಳುವ ಕಥೆಯೂ ನೆನಪಾಗದೇ ಇರದು.  ಅಷ್ಟು ಮುದ್ದು ಮುದ್ದು ನಮ್ಮ ಗಣಪ ಅಂದು, ಇಂದು, ಮುಂದೆಂದೂ.

ಹಂಗಂಗೇ ಇವತ್ತು ಇನ್ನಷ್ಟು ನೆನಪು ಬಾಲ್ಯದ ಚಿನಕುರುಳಿ ಆಟದ ದಿನಗಳಲ್ಲಿ ನಡೆದ ಅನೇಕ ಘಟನೆಗಳು ಕಣ್ಣ ಮುಂದೆ ಬಂದು ಒಂದೊಂದೇ ಸರಣಿ ಬಿಚ್ಚಿದಂತೆ ನೆನಪಾದಾಗ ಆಗಿನ ಕುಚೇಷ್ಟೆ ಈಗ ನಗು ತರಿಸಿದರೆ ಆ ಭಯ ಭಕ್ತಿ ಈಗೆಲ್ಲಿ ಹೋಯ್ತು ಅನ್ನುವಂತಾಗುತ್ತದೆ.  ಇದನ್ನೇ ನಾವು ಕಾಲ ಬದಲಾಯಿತು ನಾವೂ ಬದಲಾಗಿ ಬಿಟ್ವಿ ಅನ್ನೋದು ಅಲ್ವಾ?

ನಿಜರೀ…ಇವತ್ತು ಪೇಪರಿನಲ್ಲಿ ಬಂದ ಒಂದು ಸುದ್ದಿ “ಅಂದುಕೊಂಡಿದ್ದು ಈಡೇರಿದ್ದರಿಂದ ಗಣೇಶನಿಗೆ ಬೆಳ್ಳಿ ಕಿರೀಟ ಮಾಡಿಸಿ ಹರಕೆ ತೀರಿಸಿದರಂತೆ!”  ಅಬ್ಬಾ ಕಾಲವೇ ಅನಿಸಿತು. ಕಾರಣ ;

ಹಿಂದೆಲ್ಲ ಇಷ್ಟೊಂದು ಕಾಷ್ಟ್ಲಿ ಹರಕೆ ಇತ್ತಾ?  ಭಯಂಕರ ಯೋಚನೆಗೆ ಶುರು ಹಚ್ಚಿಕೊಂಡಿತು ತಲೆ.  ಪೇಟೆ ಮೇಲಿನ ಜನರ ಸುದ್ದಿ ನಂಗೊತ್ತಿಲ್ಲ : ಆದರೆ ನಮ್ಮ ಹಳ್ಳಿ ಕಡೆ ಮಂದಿ ಹರಸಿಕೊಳ್ಳುವ ಪರಿ ಸ್ವಲ್ಪ ದೇಹಕ್ಕೆ ಶ್ರಮ ಕೊಡುವ ಹರಕೆ ಆಗಿತ್ತು.  ಹುಟ್ಟುವ ಅಥವಾ ಹುಟ್ಟಿದ ಮಕ್ಕಳ ಶ್ರೇಯೋಭಿವೃದ್ಧಿಗೆ ಅವರ ವಿಷಯದಲ್ಲಿ ಅಂದುಕೊಂಡದ್ದು ಈಡೇರಿಸಲು ಗಣಪನಲ್ಲಿ ಹರಕೆ ಹೊರುತ್ತಿದ್ದುದು ಒಂದಾ ಪಂಚಕಜ್ಜಾಯ ಇಂತಿಷ್ಟು ಸೇರು ಮಾಡಿ ಇಡಗುಂಜಿ ಗಣೇಶನಿಗೋ ಇಲ್ಲಾ ಸಿರ್ಸಿ ದೊಡ್ಡ ಗಣಪತಿ ದೇವಸ್ಥಾನಕ್ಕೋ ಹರಸಿಕೊಂಡು ತಪ್ಪದೇ ಹರಕೆ ಒಪ್ಪಿಸೋದು.  ಈ ರೂಢಿ ಎಲ್ಲಾ ಶುಭಕಾರ್ಯ, ಅನು ಆಪತ್ತು ಬರಲಿ,ಅವಘಡ ಸಂಭವಿಸಲಿ ಪ್ರತಿಯೊಂದಕ್ಕೂ ಪಂಚಕಜ್ಜಾಯ, ಕಾಯಿ ಒಡೆಸೋದು ಇಂತಿಷ್ಟು ಅಂತ, ಇಲ್ಲಾ ಮನೆಯಲ್ಲಿ ಬೆಳೆದ ಫಸಲು ಇಂತಿಷ್ಟು ದೇವಸ್ಥಾನಕ್ಕೆ ಅದರಲ್ಲೂ ಗಣೇಶನಿಗೆ ಹರಕೆ ಹೊರುವುದು ಜಾಸ್ತಿ.  ಏಕೆಂದರೆ ನಮ್ಮ ಮಲೆನಾಡಿನಲ್ಲಿ ಗಣೇಶನೇ ದೊಡ್ಡ ದೇವರು.  ಬಿಟ್ಟರೆ ಶ್ರೀ ಮಾರಿಕಾಂಬಾ ದೇವಿ.  ಸಕಲ ಕಷ್ಟ ನಿವಾರಿಣಿ.

ಮತ್ತೆ ಶಾಲೆಗೆ ಹೋಗುವ ಮಕ್ಕಳಲ್ಲಿ ದೊಡ್ಡವರು ಚಿಕ್ಕಂದಿನಿಂದಲೂ ಅವರ ತಲೆಯಲ್ಲಿ ತುಂಬುವ ವಿಷಯ ದೇವರ ಭಕ್ತಿಗೆ ಇಂತಿಷ್ಟು ಗರಿಕೆ ಕೊಯ್ದು ಅರ್ಪಿಸ್ತೀನಿ, ಇಂತಿಷ್ಟು ಉದ್ದಂಡ ನಮಸ್ಕಾರ ಹಾಕ್ತೀನಿ ಅಂತ ಹರಸಿಕೊ, ಗಣೇಶ ಹಬ್ಬದಲ್ಲಿ ನೂರಾ ಒಂದು ಗಣೇಶನ ದರ್ಶನ ಮಾಡಿ ನಮಸ್ಕಾರ ಮಾಡ್ತೀನಿ ಅಂತ ಹರಸಿಕೊ, ಉಪವಾಸ ಮಾಡ್ತೀನಿ, ಸಹಸ್ರನಾಮಾವಳಿ ಓದುತ್ತೇನೆ ಅಂತ ಹರಸಿಕೊ ಹೀಗೆ.  ನಾವೇನಿಲ್ಲಪ್ಪಾ, ಯಾವ ಉಡಾಫೆ ಮಾತಾಡದೇ ಅವರೇಳಿದ್ದು ಅಪ್ಪಟ ಸತ್ಯ ಅಂತ ನಂಬಿ ಹಾಗೆ ಮಾಡ್ತಿದ್ವಿ.  ಕಾಸಿಲ್ಲ,ಖರ್ಚು ಮೊದಲೇ ಇಲ್ಲ.

ಹರಕೆ ತೀರಿಸಲು ಹಳ್ಳಿ ಹಳ್ಳಿ ಗಣೇಶನ ನೋಡಲು ಅದೆಷ್ಟು ಕಿ.ಮೀ. ಕಾಲ್ಗಾಡಿಯಲ್ಲಿ ಹೋಗ್ತಿದ್ವೊ ಏನೊ.  “ಶೆಟ್ಟಿ ಬಿಟ್ಟಲ್ಲೆ ಪಟ್ನ”ಅನ್ನೊ ಹಾಗೆ ಕತ್ತಲೆ ಆಯ್ತು ಅಂದರೆ ಗಣೇಶನ ಕೂರಿಸಿದವರ ಮನೆಯಲ್ಲಿ ನಮ್ಮ ಠಿಕಾಣಿ.  ಹೇಗಿದ್ರೂ ಗುಂಪಲ್ಲಿ ಗೋವಿಂದ.  ನಾಲ್ಕಾರು ಮಕ್ಕಳು ಕೈಯಲ್ಲಿ ಒಂದಷ್ಟು ಅಕ್ಷತ ಕವರಿನಲ್ಲಿ ಹಿಡಕೊಂಡು ಗುರುತು ಪರಿಚಯ ಇರಬೇಕಂತನೂ ಇಲ್ಲ.  ಗಣೇಶ ಇರಟ್ಟಿರುವ ಮನೆಗೆ ಹೋಗೋದು “ನಿಮ್ಮಲ್ಲಿ ಗಣೇಶನ ಇಟ್ಟಿದ್ವ?” ಕೇಳೋದು ಬೇರೆ ಸುಮ್ಮನೆ.  “ಇದ್ದು ಬನ್ನಿ ಬನ್ನಿ, ಹುಡುಗ್ರಾ ಆಸ್ರಿಗೆ ಬೇಕನ್ರ^^^ತಗಳಿ ಪಂಜಕಜ್ಜ ಪ್ರಸಾದ.” ಎಲ್ಲರ ಮನೆ ಉಪಚಾರ.  ಊಟದ ಹೊತ್ತಾದರೆ ಆ ಸಮಯಕ್ಕೆ ಯಾರ ಮನೆ ತಲುಪಿರುತ್ತೇವೊ ಅಲ್ಲೇ ಊಟ!  ಸ್ವಲ್ಪವೂ ಬಿಡಿಯಾ ಇಲ್ಲ ದಾಕ್ಷಿಣ್ಯ ಮೊದಲೇ ಇಲ್ಲ.

ಹಬ್ಬಕ್ಕೆ ನಾಲ್ಕೈದು ದಿನ ಮೊದಲೇ ಹರಕೆ ಹೊತ್ತದ್ದು ಮಕ್ಕಳಾದ ನಮ್ಮ ನಮ್ಮಲ್ಲೆ ಚರ್ಚೆ ನಡೆದು ಎಲ್ಲಾ ತೀರ್ಮಾನ ಆಗಲೇ ಮಾಡಿ ಹಿರಿಯರು ಬೇಡಾ ಹೇಳೋದೇ ಇಲ್ಲ ಎಂದು ಗೊತ್ತಿದ್ದು ಧೈರ್ಯವಾಗಿ ಸಾಂಗವಾಗಿ ನಡಿತಿತ್ತು.  ಒಂದು ಚೂರೂ ಅಹಿತ ಘಟನೆಗಳು ಹೆಣ್ಣು ಮಕ್ಕಳಾದ ನಮಗಂತೂ ಅನುಭವಕ್ಕೆ ಬಂದೇ ಇಲ್ಲ.  ಅದೆಷ್ಟು ಮುಕ್ತ ವಾತಾವರಣ!  ಹೋದಲ್ಲೆಲ್ಲ ಪಟಾಕಿ ಸಿಕ್ಕರೆ ನಾವೂ ಒಂದಾಗಿ ಜಡಾಯಿಸೋದು.  ಅಲ್ಲಿರೊ ಮಕ್ಕಳ ಜೊತೆ ಅದೆಷ್ಟು ಕೇಕೆ. ಮೊಗಮ್ಮಾಗಿ ವಿಜೃಂಭಣೆಯಿಂದ ಹಳ್ಳಿ ಸೊಗಡಿನ ಮಂಟಪದಲ್ಲಿ ಮುದ್ದಾಗಿ ಕುಳಿತ ತರಾವರಿ ಭಾವಗಳ ಗಣಪನ ಜಭರ್ದಸ್ತ ಬೊಂಬಾಟ್ ದರ್ಭಾರು ಸುಮಾರು ಹನ್ನೊಂದು ದಿವಸದವರೆಗೂ ನಡೆಯುತ್ತಿತ್ತು ಕೆಲವರ ಮನೆಯಲ್ಲಿ.  ಅಷ್ಟೂ ದಿನ ಶಾಲೆಗೆ ಕೊಟ್ಟ ಒಂದೆರಡು ದಿನ ರಜಾನೂ ಸೇರಿಸಿ ಎಂಜಾಯ್ ಮಾಡಿದ್ದೇ ಮಾಡಿದ್ದು.  ಶಾಲೆಗೆ ಹೋದಾ ಪುಟ್ಟಾ ಬಂದಾ ಪುಟ್ಟಾ!  ಏನಾದರೂ ಕಾರಣ ಹೇಳಿ ಮಧ್ಯಾಹ್ನ ಊಟಕ್ಕೆ ಬಂದವರು ತಿರಗಾ ಹೋದರೆ ಉಂಟು ಇಲ್ಲಾ ಅಂದರೆ ಮಾರನೇ ದಿನವೂ ಗೋತಾ.

ಆದರೀಗ ಹಾಗಲ್ಲ ;  ಸಿಟಿಯಲ್ಲಿ ಮಗ ಆಗಲಿ ಮಗಳಾಗಲಿ ಒಂದು ಚೂರು ಮನೆಯಿಂದ ಆಚೆ ಈಚೆ ಆದರೆ ಸಾಕು ಮನೆಯವರೆಲ್ಲರ ಹುಡುಕಾಟ.  ಹಳ್ಳಿಗಳಲ್ಲೂ ಅಲ್ಪ ಸ್ವಲ್ಪ ಈ ವಾತಾವರಣ ಉದ್ಭವ ಆಗಿದೆ.

ಹೀಗೆ ಗಣೇಶ ಹಬ್ಬ ನೋಡಿ ನೋಡಿ ಗಣಪನ ಮುಳುಗಿಸೋದು ಕೊನೆಯಲ್ಲಿ ಅದೂ ನೋಡಿ ಒಂದಷ್ಟು ಮಕ್ಕಳು ಸೇರಿ ಅಡಿಗೆ ಆಟ ಆಡಿದ್ದು ಆಮೇಲೆ ದೊಡ್ಡವರು ದೊಣ್ಣೆ ತಗೊಂಡು ಬಂದಿದ್ದು ಯಾವತ್ತಾದರೂ ಮರೆಯೋಕೆ ಸಾಧ್ಯನಾ? ;

ಊರ ಹುಡುಗರು ಹುಡುಗಿಯರೆಲ್ಲ ಸೇರಿ ಹಬ್ಬ ಮುಗಿದ ಒಂದು ಭಾನುವಾರ ಊರ ಪಟೇಲರ ಮನೆ ಮುಂದಿನ ದೊಡ್ಡ ಜಾಗದಲ್ಲಿ ಗಣೇಶ ಹಬ್ಬ ಆಚರಿಸುವ ಆಟ ಶುರುವಾಯಿತು.  ಸಿಕ್ಕ ಹೂವು, ಎಲೆ ಎಲ್ಲ ತಿರಿದು ಆ ಕಡೆ ಈ ಕಡೆ ಆಧಾರವಾಗಿ ಸಿಕ್ಕ ಬೇಲಿಯ ಕೋಲಿಗೆ ತೋರಣ ಕಟ್ಟಿ ಅಲ್ಲೆ ಅಕ್ಕ ಪಕ್ಕದಲ್ಲಿ ಇದ್ದ ಕಲ್ಲು ಒಂದರ ಮೇಲೊಂದಿಟ್ಟು ಗಣೇಶನ ಕೂಡಿಸುವ ಜಾಗ ನಿರ್ಮಾಣ ಆಯಿತು.  ಒಂದಷ್ಟು ತೆಂಗಿನ ಕಾಯಿಯ ಗರಟೆಗಳೇ ಅಡಿಗೆ ಸಾಮಾನು ಆಗೆಲ್ಲ.  ಮೂರು ಕಲ್ಲು ಹೂಡಿ ಒಲೆನೂ ರೆಡಿ ಆಯ್ತು.  ಒಣಗಿದ ಕಡ್ಡಿ ಆರಿಸಿ ಒಲೆಗಿಕ್ಕಿದ್ದೂ ಆಯ್ತು.  ಒಂದಷ್ಟು ಗಿಡದ ಎಲೆ ಕೊಯ್ದು ಚಚ್ಚಿ ಚಟ್ನಿ,ಪಲ್ಯ,ಸಂಬಾರು,ಪಂಚಕಜ್ಜಾಯ, ಚಕ್ಲಿ ಇರೊ ಬರೋ ಎಲ್ಲಾ ತಿಂಡಿ ಅಡಿಗೆ ರೆಡಿ ಆಯಿತು.  ಈಗ ಗಣೇಶನ ಕೂರಿಸುವ ಸರದಿ.

ನಮ್ಮ ನಮ್ಮಲ್ಲೇ ಮಾತಾಡಿಕೊಂಡು ನಮ್ಮ ಜೊತೆ ಸೇರಿ ಕೂತಲ್ಲೇ ಆಟ ಆಡುತ್ತಿದ್ದ ಪುಟ್ಟ ಮಗು ಅವನೇ ನಮ್ಮಾಟದ ಗಣೇಶ.  ಸರಿ ಪೀಟದಲ್ಲಿ ಕೂಡಿಸಿ ಹೂ ಹಾಕಿ ಪೂಜೆನೂ ಮಾಡಿದ್ವಿ. ಸುಮ್ಮನೆ ಪಿಕಿ ಪಿಕಿ ನೋಡ್ತಾ ನಗುತ್ತ ಕೂತ ಅವನನ್ನು ನೋಡಿ ನಮಗೆಲ್ಲಾ ಖುಷಿ ನೋ ಖುಷಿ, ಉಮೇದಿ.  ಕತ್ತಲಾಗುತ್ತಿದೆ, ” ಏಯ್ ಬರ್ರೊ ಗಣೇಶನ ನೀರಿಗೆ ಬಿಡನ” ನಮ್ಮಲ್ಲೇ ಮಾತಾಡಿಕೊಂಡು ಗಣೇಶನ ಪಾತ್ರಧಾರಿಯನ್ನು ಅನಾಮತ್ತಾಗಿ ಇಬ್ಬರು ಎತ್ತಿಕೊಂಡು “ಗಣಪತಿ ಬಪ್ಪ ಮೋರೆಯಾ, ಮಂಗಳ ಮೂರ್ತಿ ಮೋರೆಯಾ”ಎಂದು ಜೈಕಾರ ಹಾಕುತ್ತಾ ಹೊರಟಿತು ನಮ್ಮ ಸವಾರಿ ಊರ ಮುಂದಿನ ಕೆರೆಯತ್ತ.

ಅಲ್ಲೀವರೆಗೂ ಜಗುಲಿಯ ಕಟ್ಟೆ ಮೇಲೆ ಕೂತು ಮಕ್ಕಳಾಟ ನೋಡುತ್ತ ನಗುತ್ತ ಕೂತ ಪಟೇಲರ ಮನೆ ಅಜ್ಜಿ “ಬರ್ರೋ ಯಾರರೂ, ಈ ಹುಡುಗರ ತಡೆದು ನಿಲ್ಲಸ್ರ….” ಲಭ ಲಭ ಹೋಯ್ಕಳ ಅಭ್ರಕ್ಕೆ ನಾಕಾರು ಜನ ದೊಡ್ಡವರು ಅಕ್ಕ ಪಕ್ಕದ ಮನೆಯಿಂದ ಓಡಿ ಬಂದು ನಮ್ಮ ಮೆರವಣಿಗೆ ನೋಡಿ ಧಂಗಾದರು.  ದೊಣ್ಣೆ ಹಿಡಿದು ಅಟ್ಟಿಸಿಕೊಂಡು ಬಂದಾಗ ಗಣೇಶನನ್ನು ದೊಬಕ್ಕನೆ ಅಲ್ಲೆ ಬಿಸಾಕಿ ನಾವೆಲ್ಲರೂ ಪಕ್ಕದಲ್ಲಿ ಇದ್ದ ಅಡಿಕೆ ತೋಟದಲ್ಲಿ ದಿಕ್ಕಾಪಾಲು.

ಇತ್ತ ಅಡಿಗೆ ಮಾಡ ಜಾಗದಲ್ಲಿ ನಮ್ಮ ಅಡಿಗೆ ಒಲೆಗೆ ಹೊತ್ತಿಸಿದ ಬೆಂಕಿ ಅಕ್ಕ ಪಕ್ಕ ಇರೊ ಒಣಗಿದ ಹುಲ್ಲು ಬಣವೆಯ ಹತ್ತಿರ ಸಾಗುತ್ತಿರುವುದ ಕಂಡು ಅಲ್ಲಿದ್ದ ಕೆಲವರು ಕೂಡಲೇ ನೀರು ಸೋಕಿ ನಂದಿಸಿದ ವಿಷಯ ಕತ್ತಲಾದ ಎಷ್ಟೋ ಹೊತ್ತಿನ ಮೇಲೆ ನಡುಗುತ್ತ ಮನೆಗೆ ಬಂದ ಮೇಲೆ ಗೊತ್ತಾಯಿತು.  ಹಾಗೆ ಬಿಸಿ ಬಿಸಿ ಕಜ್ಜಾಯವೂ ಕೆಲವರಿಗೆ ಸಿಕ್ಕಿತು.

Leave a Reply