ಇವಳೇ ಆ ‘ಗೌರಿ’

ಜಿ ಎನ್ ನಾಗರಾಜ್ 

ಗೌರಿ ಮತ್ತು ಗಣೇಶ ಮೂಲದಲ್ಲಿ ಕೃಷಿಯ ದೇವತೆಗಳು. ಗೌರಿ ತನ್ನ ಮೈಯ ಕೊಳೆಯಿಂದ ಗಣಪನನ್ನು ಮಾಡಿದಳು ಎಂಬುದು ಮೊದಲ ಹಂತದ ನದೀ ಬಯಲಿನ ಕೃಷಿಯ ಆಚರಣೆಯ ಪ್ರತಿಫಲನ.  ಮಾನವಶಾಸ್ತ್ರೀಯ Anthropology ವಿಧಾನಗಳನ್ನು ಬಳಸಿಸ ಅಧ್ಯಯನದಿಂದ ಇದನ್ನು ಅನ್ಬೇಷಿಸಬೇಕು.

ಗಣಪನನ್ನು ಮೂಲದಲ್ಲಿ ಮಾಡುವುದೇ ಮೆಕ್ಕಲು ಮಣ್ಣಿನಿಂದ. ನದೀ ನೀರು ಮುಂಗಾರಿನಲ್ಲಿ ಬಗ್ಗಡವಾಗಿ , ನದೀ ಹರಿಯುವ ಪಾತ್ರದ ಮಣ್ಣಿನ ಗುಣಕ್ಕನುಗುಣವಾಗಿ ಕೆಂಪಾಗಿ, ಕಪ್ಪಾಗಿ ಉಕ್ಕಿ ಸೊಕ್ಕಿ ಹರಿಯುತ್ತದೆ.ಆಗ ಸಮತಟ್ಟಾದ ವಿಸ್ತಾರವಾದ ದೊಡ್ಡ ಬಯಲಿನ ಪ್ರದೇಶಗಳಲ್ಲಿ – ಉತ್ತರ ಭಾರತದಲ್ಲಿ,  ಉಳಿದೆಡೆ ನದೀ ಮುಖಜ ( ನದಿ ಸಮುದ್ರಕ್ಕೆ ಸೇರುವೆಡೆಗಳು) ಪ್ರದೇಶಗಳಲ್ಲಿ ಕೂಡಾ ಭೂಮಿ ಸಮತಟ್ಟಾಗಿರುತ್ತದೆ.

ಹೀಗೆ ಸಮತಟ್ಟಾದ ಪ್ರದೇಶಗಳಲ್ಲಿ ಮುಂಗಾರಿನಲ್ಲಿ ಉಕ್ಕಿ ಸೊಕ್ಕಿ ಹರಿವ ನದಿ ವಿಶಾಲ ಪ್ರದೇಶವನ್ನಾವರಿಸಿಕೊಂಡು ಹರಿಯುತ್ತದೆ. ನದಿಯ ಮೈ ತುಂಬಾ ಬಗ್ಗಡ. ಇದೇ ಪಾರ್ವತಿಯ ಮೈಯ ಕೊಳೆ.

ಕೆಲ ದಿನಗಳ ನಂತರ ಈ ಬಗ್ಗಡವೆಲ್ಲಾ ಕೆಳಕ್ಕಿಳಿಯುತ್ತದೆ. ನದೀ ತಿಳಿಗೊಂಡು ನಿರ್ಮಲವಾಗಿ ಹರಿಯತೊಡಗುತ್ತದೆ.
ಇದೇ ಪಾರ್ವತಿಯ ಮೈಯ ಕೊಳೆ ತೊಳೆದುಕೊಂಡು ಸ್ನಾನ ಮಾಡುವ ಕ್ರಿಯೆ.

ನಂತರ ಕೆಲ ದಿನಗಳಲ್ಲಿ ಮಳೆಯ ಉರುಬು ಕಡಿಮೆಯಾದಂತೆ ನದೀ ತನ್ನ ಮೊದಲಿನ ಪಾತ್ರದೊಳಕ್ಕೆ ಹಿಂದೆ ಸರಿಯುತ್ತದೆ.
ಹೀಗೆ ಹಿಂದೆ ಸರಿದ ನಂತರ , ಸೊಕ್ಕಿ ವಿಶಾಲವಾಗಿ ಹರಿಯುತ್ತಿದ್ದ ಪ್ರದೇಶದ ತುಂಬಾ ಬಗ್ಗಡ. ಮೆಕ್ಕಲು ಮಣ್ಣು .
ಇದು ಆದಿಮ ಕೃಷಿಕರಿಗೆ ಬಹಳ ಸಂತೋಷದಿಂದ ಕುಣಿದಾಡುವ ಸಂಗತಿ. ಅದರಿಂದ ಭೂಮಿ ಫಲವತ್ತಾಗಿ ಒಳ್ಳೆಯ ಬೆಳೆ.

ಆದಿಮ ಕೃಷಿಯ ಕಾಲದಲ್ಲಿ ಒಂದೆರಡು ಬೆಳೆ ತೆಗೆದುಕೊಂಡ ಮೇಲೆ ಭೂಮಿ ಫಲವತ್ತತೆ ಕಳೆದುಕೊಂಡು ಬೆಳೆ ಕುಗ್ಗುತ್ತಿತ್ತು. ಆಗ ಈ ನದಿಯ ಮೈಯ ಕೊಳೆಯೇ ಅವರಿಗೆ ಜೀವನಾಧಾರ. ಅದಕ್ಕಾಗಿ ಕಾಯುತ್ತಾ ಕುಳಿತಿರುತ್ತಿದ್ದರು.

ಈ ಸಂತೋಷವನ್ನು ಮತ್ತು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಮಣ್ಣಿನಿಂದ ತಮ್ಮ ಕುಲ ದೇವತೆಯ ಮೂರ್ತಿಯನ್ನು ಪೂಜೆ ಮಾಡಿ ಹಬ್ಬ ಮಾಡುತ್ತಿದ್ದರು.

ಕುಲದೇವತೆಗಳು ಸಾಮಾನ್ಯವಾಗಿ ಪ್ರಾಣಿಗಳೇ ಆಗಿರುತ್ತಿದ್ದವು. ಆನೆಯ ಮುಖದ ಮೂರ್ತಿ, ಬೃಹತ್ ಗಣಪನಿಗೆ ಸಣ್ಣ ಇಲಿ ವಾಹನವಾದುದು ಇದೆಲ್ಲಾ ಈ ಕುಲ ದೇವತೆಗಳ ಪ್ರತಾಪ.

ಇಲ್ಲಿ ನದಿ ಹೇಗೆ ಪಾರ್ವತಿಯಾಯಿತು. ಅದು ಗಂಗೆಯಲ್ಲವೇ ಎಂಬ ಪ್ರಶ್ನೆ ಬರಬಹುದು. ಪರ್ವತದಲ್ಲಿ ಹುಟ್ಟಿದ್ದು ಪಾರ್ವತಿ. ನದಿಗಳು ಪರ್ವತ, ಬೆಟ್ಟ, ಗುಡ್ಡಗಳಲ್ಲಿಯೇ ಹುಟ್ಟುವುದು. ಹೀಗಾಗಿ ಎಲ್ಲ ನದಿಗಳು ಪಾರ್ವತಿ, ಗಿರಿಜೆಗಳೇ. ಗಂಗೆಯೂ ಪಾರ್ವತಿಯೇ. ಹಿಮಾಲಯವೆಂಬ ಮಹಾ ಪರ್ವತದಲ್ಲಿ ಹುಟ್ಟಿದವಳು. ಗಂಗಾ ನದಿಯೂ ಬೃಹತ್ ಪಾರ್ವತಿಯೇ !

ಶಿವನ ಹೆಂಡತಿ ಹಿಮವಂತನ ಪುತ್ರಿಯೂ ನೀರಿನ ಮೂಲದವಳು. ಹಿಮಾಲಯದ ಮೇಲೆಲ್ಲಾ ಅಸವರಿಸಿದ ಬೆಳ್ಳಗಿನ ಹಿಮವೇ ಗೌರಿ – ಬಿಳಿಯವಳು . ಅದೇ ಹಿಮವೇ ಕರಗಿದಾಗ ಗಂಗೆಯಾಗಿ ಇತರನೇಕ ನದಿಯಾಗಿ ಹರಿಯುತ್ತಾರೆ.

ಆದ್ದರಿಂದ ಈ ಅನೇಕ ನದಿಗಳು ಪಾರ್ವತಿಗಳು , ಗೌರಿಯರು. ಬೆಟ್ಟದ ತಪ್ಪಲಿನಲ್ಲಿ ವಾಸಿಸುತ್ತಿದ್ದ ಬುಡಕಟ್ಟುಗಳ ಅಮ್ಮಗಳು. ಮಾತೃ ದೇವತೆಯರು.

ಹೀಗೆ ಈ ಗೌರಿ ಯಾ ಪಾರ್ವತಿಯ ಮೈ ಕೊಳೆ ಗಣಪನಾಗಿ ಪೂಜೆಗೊಂಡ ಕತೆಯ ಮೂಲ.

Leave a Reply