ಪ್ರತಿಭಾ ನಂದಕುಮಾರ್ ಬರೆದ ‘ನಗರ ನಕ್ಸಲ್’ ಕವನಗಳು

 

ಒಂದು ಬಕೆಟಿನ ಸ್ವಗತ

 

ನನ್ನನ್ನು ಯಾವುದಕ್ಕೆ ಬೇಕಾದರೂ ಬಳಸಬಹುದು

ತುಂಬಲು, ಖಾಲಿಮಾಡಲು ಅಥವಾ

ಬೋರಲು ಹಾಕಿ ಬಡಿದು ಶಬ್ದ ಮಾಡಲು.

ಶಬ್ದ ಮಾಡಿದ್ದು ಸಂಗೀತವೆಂದು ನಾನು

ಅಲ್ಲವೆಂದು ನೀವು ಅನ್ನಬಹುದು

ಆದರೆ ಬಕೇಟಿನ ಹಲವು ಉಪಯೋಗಗಳಲ್ಲಿ

ಅದೇ ಬಹಳ ಮುಖ್ಯವಾದುದು

 

ನನ್ನನ್ನು ಬಹಳವಾಗಿ ಬಳಸುವುದು ಸಗಣಿ ಎತ್ತಲು

ಸಗಣಿ ಹಾಕುವುದು ಯಾವ ಪ್ರಾಣಿಯೆಂದೂ ಗೊತ್ತು

ಉಳಿದ ಪ್ರಾಣಿಗಳು ಹಾಕುವ ಹಿಕ್ಕೆ ಇತ್ಯಾದಿ

ಗಳನ್ನು ಸುಮ್ಮನೆ ಗುಡಿಸಿ ತಳ್ಳಿಬಿಡುವುದು

ನನ್ನನ್ನು ಮಾತ್ರ ಗೋವರ್ಜ್ಯವನ್ನು ಮಾತ್ರ

ಎತ್ತಲು ಬಳಸುವುದು. ಹಾಗಾಗಿ ನಾನು

ಸಕಲ ಗೋ-ಪಾಲಕರಿಗೆ ಬಹು ಪ್ರಿಯವಾದ ಬಕೆಟ್ಟು

ಅಷ್ಟಲ್ಲದೇ ನಾನು ಚಿನ್ನದ ಬೆಳ್ಳಿಯ ಬಕೆಟ್ಟು

ಹಾಗಾಗಿ, ತುಂಬುವುದು ಸಗಣಿಯೇ ಆದರೂ

ನನಗೆ ಬೆಲೆ ಜಾಸ್ತಿ, ಸಕಲ ಮರ್ಯಾದೆ ಕೊಟ್ಟು

ವೇದಿಕೆಗಳಲ್ಲಿ ಸನ್ಮಾನ ಹಾರ ತುರಾಯಿ ಫೋಟೋ

ಬಕೆಟ್ಟುಗಳಲ್ಲೇ ನಾನು ಶ್ರೇಷ್ಠ ಎಂದು ಬಿರುದು

ನಾನೂ ಸದಾ ತೋರಿದೆ ನಿಯತ್ತು

 

ಅಂತಹ ನಿಷ್ಠಾವಂತ ಬಕೆಟ್ಟಾದ ನನಗೆ

ಇದ್ದಕ್ಕಿದ್ದಂತೆ ಒಂದು ದಿನ ಸ್ಥಾನಪಲ್ಲಟವಾಗಿ

ಹಿಡಿ ಕಿತ್ತುಹೋಗಿ ತಳ ಒಡೆದು ಅಂಚು ಬಿಚ್ಚಿಕೊಂಡು

ಅಂದವಾದ ಅರಮನೆಯ ಬಿಳಿಶಿಲೆಯ ಹಾಸಿನ ಮೇಲೇ

ಸಕಲ ಸಗಣಿ ಚೆಲ್ಲಾಪಿಲ್ಲಿಯಾಗಿ ರಾಡಿ ನಾತವಾಗಿದ್ದಕ್ಕೆ

ಈ ಬಕೆಟ್ಟುಗಳ ಹಣೆಬರಹವೇ ಇಷ್ಟು

ಎಂದು ಗೂಬೆ ಕೂಡಿಸುವುದು

ಎತ್ತೆತ್ತಿ ಮೊಗೆದು ಸುಸ್ತಾದವರಿಗೂ ನ್ಯಾಯವಲ್ಲ

ಸೇವೆ ಮಾಡಿಸಿಕೊಂಡವರಿಗೂ ಶೋಭೆಯಲ್ಲ.

ಆದರೂ ಅವರು ಹೇಳುತ್ತಾರೆ

ಇದು ಬಕೆಟ್ಟುಗಳ ಕಾಲ

ಸುಲಭಕ್ಕೆ ಬಿಡಿಸಲಾಗುವುದಿಲ್ಲ ಈ ಜಾಲ

5 comments

  1. ಪ್ರತಿಭಾ ಮೇಡಮ್…ಕವಿತೆ ಚನ್ನಾಗಿದೆ.ಬಕೆಟ್ ಪಡೆದುಕೊಂಡ ಸ್ಥಿತ್ಯಂತರ, ಬಳಸಿಕೊಂಡವರಿಗಿಲ್ಲದ ಕೃತಜ್ಞತೆ.. ಇವೆಲ್ಲಾ ಸರಳವಾಗಿಯೇ ದ್ವನಿಪೂರ್ಣವಾಗಿದೆ.ನಾನು ನಿಮ್ಮ ಆತ್ಮಕಥನವನ್ನೂ ಓದಿದ್ದೇನೆ ಮೇಡಮ್.

  2. A very nice analogy of a bucket and the ups and downs in its life….BUCK IT, appealed very much to me. Thanks

Leave a Reply