ಎಷ್ಟೇ ಮಳೆಯಾದರೂ ನಮ್ಮೂರಿನ ನೆಲಕ್ಕೆ ನೆಗಡಿಯಾಗುವುದಿಲ್ಲ..

ನಾನು ಹತ್ತಿರದಿಂದ ನೋಡಿದ ಮೊದಲ ಸಾಬರವನು ಎಂದರೆ ಅವನೊಬ್ಬನೇ.  ಬಿಳಿಯ ಟೋಪಿಯೊಳಗೆ ಬಚ್ಚಿಟ್ಟುಕೊಂಡಿರುತ್ತಿದ್ದ ಒಂದಿಷ್ಟೇ ಗುಂಗುರು ಕೂದಲು, ಸಣ್ಣ ಗೆರೆಯಂತ ಗಡ್ಡ, ಲಂಗುಲಗಾಮಿಲ್ಲದೇ ಬೆಳೆದುಕೊಂಡಿರುತ್ತಿದ್ದ ಮೀಸೆ. ಇನ್ನು ಅಸಾಧಾರಣ ಕೊಳೆಯಿಂದ ನಲುಗಿಹೋಗಿರುತ್ತಿದ್ದ ಅವನ ಬಟ್ಟೆಗಳು ಎಷ್ಟೇ ಕೊಳಕಾಗಿದ್ದರೂ, ಅದೊಂದು ರೀತಿಯಲ್ಲಿ ಅವನಿಗೆ ಚೆನ್ನಾಗೇ ಕಾಣುತ್ತಿದ್ದವು.

ಹಳೆಯ ಅಟ್ಲಾಸ್ ಸೈಕಲ್ಲು. ಅದರ ಹ್ಯಾಂಡಲ್‍ ನ ಒಂದು ತುದಿಗೆ ಆಟೋ ರಿಕ್ಷಾಗಳಲ್ಲಿ ಬಳಸುವ, ಪೋಂ ಪೋಂ ಸದ್ದು ಮಾಡುವ ಹಸಿರು ಪೀಪಿ. ಇನ್ನು ಕ್ಯಾರಿಯರ್ ಗೆ ಮರದ ಪ್ಲೈ ವುಡ್‌ ನಿಂದ ಮಾಡಿದ್ದ ತುಸು ದೊಡ್ಡದು ಎನ್ನುವಂತಹ ಡಬ್ಬವನ್ನಿಟ್ಟುಕೊಂಡಿದ್ದರೆ, ಕ್ಯಾರಿಯರ್ ನ ಎರಡೂ ಮಗ್ಗಲಿಗೆ ಎರಡು ಪ್ಲಾಸ್ಟಿಕ್ ಚೀಲಗಳನ್ನು ನೇತುಹಾಕಿಕೊಂಡಿರುತ್ತಿದ್ದ.

ಗ್ರೀಕ್ ನಾಟಕದ ದುರಂತ ಪಾತ್ರವೊಂದರಂತೆ, ಅವನ ಮುಖ ಯಾವಾಗಲೂ ಬಿಗಿದುಕೊಂಡೆ ಇರುತ್ತಿತ್ತು. ವಯೋಮಾನವನ್ನ ಪ್ರಜ್ಞಾಪೂರ್ವಕವಾಗಿ ಎಷ್ಟೇ ಮುಚ್ಚಿಟ್ಟುಕೊಂಡರೂ, ಕನ್ನಡಿ ಎದುರು ಕೂತು ತಾನೇ ಬರೆದುಕೊಂಡಂತೆ ಕಾಣುತ್ತಿದ್ದ ಸುಕ್ಕಿನ ಗೆರೆಗಳು ಮಾತ್ರ ಅವನ ವಯಸ್ಸಿನ ಅಂದಾಜನ್ನು ಬಯಲು ಮಾಡಿಬಿಡುತ್ತಿದ್ದವು.

ಸೈಕಲ್‌ ನ ಕ್ಯಾರಿಯರ್ ಮೇಲಿದ್ದ ಡಬ್ಬದೊಳಗೆ ಐಸ್‍ ಕ್ರೀಮ್‌ ಗಳನ್ನು ತುಂಬಿಸಿಕೊಂಡು ಮಾರುತ್ತಿದ್ದ ಅವನು, ಮೈಸೂರಿನ ಎನ್.ಆರ್ ಮೊಹಲ್ಲಾದಿಂದ ಏಳು ಕಿಲೋ ಮೀಟರ್ ದೂರಕ್ಕಿದ್ದ ನಮ್ಮೂರು ಹಿನಕಲ್ಲಿನವರೆಗೂ ಸೈಕಲ್‍ ನ್ನು ತಳ್ಳಿಕೊಂಡೆ ಬರುತ್ತಿದ್ದ.

ಕೆಲವೊಮ್ಮೆ ಹಳೇ ನ್ಯೂಸ್ ಪೇಪರ್,  ನೋಟ್‍ ಬುಕ್ಕು, ಮ್ಯಾಗಜೈನ್, ಹಳೆಯ ಪ್ಲಾಸ್ಟಿಕ್ ಸಾಮಾನುಗಳು ಹಾಗೂ ಖಾಲಿ ಶೀಶೆಗಳನ್ನು ನೀಡಿದ್ದರೂ ಸಾಕಿತ್ತು, ಅವನು ಐಸ್‍ಕ್ರಿಮ್ ಕೊಟ್ಟುಬಿಡುತ್ತಿದ್ದ. ಆದರೆ ಅವನೊಂದಿಗಿನ ವ್ಯವಹಾರ ಮಾತ್ರ ಅಷ್ಟು ಸಲೀಸಾಗಿರಲಿಲ್ಲ. ಗಣಿತದಲ್ಲಿ ಪದಕ ಪಡೆದವರ, ಹೊಸ ಫಾರ್ಲುಲಾಗಳೂ ಕೂಡ ಅವನ ಗುಜರಿ ಲೆಕ್ಕಾಚಾರದ ಎದುರು ಬೋರಲು ಮಲಗಿಬಿಡುತ್ತಿದ್ದವು. ಒಂದು ರೂಪಾಯಿಯ ಐಸ್‌ ಕ್ರೀಮ್ ಮಾರುವುದಕ್ಕೂ ಅವನು ಬಳಸುತ್ತಿದ್ದ ಭಾಷೆ ಹಾಗೂ ತಂತ್ರಗಳು ಉತ್ಕೃಷ್ಟ ದರ್ಜೆಯದೇ ಆಗಿರುತ್ತಿದ್ದವು.

ಬೀದಿಯ ಹೆಂಗಸರು ಹಳೇ ಪೇಪರ್ ಗಳನ್ನೋ ಅಥವಾ ಮುರಿದ ಮಕ್ಕಳ ಕುರ್ಚಿ, ಒಡೆದ ಬಕೆಟ್‍ ಗಳನ್ನೋ ಅವನ ಎದುರಿಗೆ ಸುರಿದು “ಇದಕ್ಕೆ ಎಷ್ಟು ಕೊಡ್ತೀಯಾ? ಬೇಗ ಹೇಳು, ನನಗೆ ಒಳಗೆ ಕೆಲಸ ಇದೆ” ಎಂದ ತಕ್ಷಣವೇ ಆವರೆಗೆ ಅವನೊಳಗ ಸುಪ್ತವಾಗಿ ವಿರಮಿಸಿದ್ದ ಅಸಲಿ ವ್ಯಾಪಾರಿ ಜಾಗೃತವಾಗಿಬಿಡುತ್ತಿದ್ದ. ಅವನು ವ್ಯಾಪಾರ ಚತುರತೆಯ ಮೊದಲ ದಾಳವಾಗಿ ನಿರ್ಲಕ್ಷ್ಯದ ನೋಟವನ್ನು ಜಾರಿಗೊಳಿಸಿ “ಇದಕ್ಕೆ ಏನ್ ಕೊಡ್ತಾರಮ್ಮ, ಮೈಸೂರಿನ ಗುಜರಿ ಯಪಾರ, ಮೊದಲಿನಂಗಿಲ್ಲ. ಈಗ ಪ್ಲಾಸ್ಟಿಕ್ಕು ಯಾರ್ ತಗಾತಾರೇ ಹೇಳಿ?” ಎಂದು ಹೇಳುತ್ತಲೇ ಎದುರಿದ್ದ ಹೆಂಗಸರ ಉತ್ಸಾಹವನ್ನು ಕುಗ್ಗಿಸಲು ಯತ್ನಿಸುತ್ತಿದ್ದ.

ಹೆಂಗಸರು ಮತ್ತೆನಾದರೂ ಮಾತನಾಡಿ, ವ್ಯವಹಾರ ತಪ್ಪಿಹೋಗಬಹುದು ಎನ್ನುವ ಭಯದಿಂದ ಅವನೇ ಮಾತು ಮುಂದುವರೆಸುತ್ತಿದ್ದ. “ಬಂದಾಗದೆ, ಇನ್ನು ತಗಂಡಿಲ್ಲ, ಅಂದ್ರೆ ಸುಮ್ಕೆ ನಿಮ್ಮತ್ರ ಕೆಟ್ಟೆಸ್ರು, ನಿಷ್ಠುರು. ಇವಯ್ಯಾ ಯಾವಾಗ್ಲೂ ಹಿಂಗೆ ಮಾಡ್ತಾನೆ ಅಂತ. ಸರಿ, ತಗಳಿ” ಎಂದು ಸಾಮಾನು ನೀಡಿದ ಹೆಂಗಸರ ನಿರೀಕ್ಷೆಯ ಅರ್ಧದಷ್ಟು ದುಡ್ಡನ್ನು ಮಾತ್ರವೇ ಅವನ ಜೇಬಿನಿಂದ ತೆಗೆದು ಕೊಟ್ಟುಬಿಡುತ್ತಿದ್ದ. ಸಾಮಾನು ತುಂಬಿಕೊಳ್ಳುವಾಗ ನಾನು ಮೋಸ ಹೋದೆ ಎನ್ನುವಂತೆ ಲೊಚಗುಡುತ್ತ ಚೀಲಕ್ಕೆ ತುಂಬಿಕೊಳ್ಳುತ್ತಿದ್ದ.‌

ಮೈಸೂರಿನ ಗುಜರಿಯ ಮುಖವನ್ನೇ ನೋಡದ ಹೆಂಗಸರು, ಸಾಬರು ಕೊಟ್ಟ ದುಡ್ಡನ್ನೇ ಮೌನವಾಗಿ ತೆಗೆದುಕೊಳ್ಳುವ ಅಸಹಾಯಕ ಸ್ಥಿತಿಯನ್ನು ತಲುಪಿಬಿಡುತ್ತಿದ್ದರು. ತೀರಾ ಚೌಕಾಸಿಗಿಳಿದ‌ ಹೆಂಗಸರಿಗೆ ಸಮಾಧಾನ ಪಡಿಸುವ ಸಲುವಾಗಿ ಕ್ಯಾರಿಯರ್ ನಲ್ಲಿದ್ದ ಡಬ್ಬಿಯೊಳಗಿನಿಂದ ಐಸ್ ಕ್ರಿಮ್ ಒಂದನ್ನು ತೆಗೆದು ಅವರ ಮಕ್ಕಳಿಗೆ ಕೊಟ್ಟುಬಿಡುತ್ತಿದ್ದ. “ತಗಳಿ, ನಿಮ್ ಹತ್ರ ಯಾಪಾರ ಮಾಡಿದ್ದಕ್ಕೆ ಮೊದಲನೇ ಬೋಣಿನೇ ಲಾಸು” ಎಂದು ಹೆಂಗಸರಿಗೆ ಪಾಪಪ್ರಜ್ಞೆ ಉಂಟಾಗುವಂತೆ ಗೊಣಗಿಕೊಳ್ಳುತ್ತಿದ್ದ. ಅವನ ಪ್ರತಿ ವ್ಯಾಪಾರವೂ ಮೊದಲ ಬೋಣಿಯಾಗೇ ಮುಂದುವರೆಯುತ್ತಿತ್ತು.

ಬೀದಿಯ ಹೆಂಗಸರ ಮತ್ತು ಮನೆಯ ಎಷ್ಟೋ ಮಾತುಕತೆಯ ವೇಳೆ ಐಸ್‌ ಕ್ರೀಮ್ ಸಾಬರು ಉದಾಹರಣೆಯ ರೂಪದಲ್ಲಿ ನುಸುಳಿಬಿಡುತ್ತಿದ್ದ. ನಮ್ಮ ಯಾವುದಾದರು ನೋಟ್‍ಬುಕ್ ಹರಿದು ಹೋಗಿದ್ದರೆ ಅಥವಾ ನಮ್ಮ ಮೊಂಡಾಟದ ಎದುರು ಟೆಕ್ಸ್ಟ್ ಬುಕ್‍ ನ ತುದಿ, ಬಾಡಿದ ಹಿತ್ತಲ ಹೂವಿನಂತೆ ಮುದುರಿ ಹೋಗಿದ್ದರೆ ಅಮ್ಮ “ಬುಕ್ಕನ್ನ ಹಿಂಗಾ ಇಟ್ಕಳದು, ಇದ್ನ ಆ ಐಸ್‍ ಕ್ರೀಮ್ ಮಾರೋ ಸಾಬಿನೂ ಇಸ್ಕಳಲ್ಲ” ಎಂದುಬಿಡುತ್ತಿದ್ದಳು. ಅದೊಂದು ದೊಡ್ಡ ರೂಪಕ. ಐಸ್‌ ಕ್ರೀಮ್ ಮಾರುವ ಸಾಬಿಯೂ ಮುಟ್ಟದ ರೀತಿಯಲ್ಲಿ ನಾವು ಪುಸ್ತಕಗಳನ್ನು ಇಟ್ಟುಕೊಂಡಿದ್ದೇವೆ ಎಂದರೆ, ಇದು ಅಧಃಪತನದ ಕಡೆಯ ಹಂತ ಎನ್ನುವುದು ಸೂಚ್ಯವಾಗಿ ಹೇಳಿದಂತೆ ಕಂಡುಬಿಡುತ್ತಿತ್ತು. ನಾನು ಹಾಗೆಲ್ಲ ಬೈಸಿಕೊಂಡಾಗ, ಅವಮಾನದಲ್ಲಿ ಕುಗ್ಗಿಹೋಗುತ್ತಿದ್ದೆ.

ಹೀಗೇ ಬೀದಿಯಲ್ಲಿ ಐಸ್ ಕ್ರೀಮ್ ಅವನು ಊರಿನೊಂದಿಗೆ ಎಷ್ಟೋ ವರ್ಷಗಳ ಅನುಸಂಧಾನ ನಡೆಸಿದ್ದರೂ ಅದೊಂದು ಬಗೆಯ ಸೀಮಾರೇಖೆಯ ಹೊರಗೆ ನಿಂತೇ ಕೈ ಕುಲುಕುವ ಆತ್ಮೀಯನಂತೆ ಗೋಚರಿಸುತ್ತಿದ್ದ. ಅವನನ್ನು ನಮ್ಮೊಳಗೆ ಬಿಟ್ಟುಕೊಳ್ಳುವ ಪ್ರಯತ್ನವನ್ನೂ ಮಾಡಲೇ ಇಲ್ಲ.

ಈ ಎಲ್ಲದರ ‌ನಡುವೆಯೂ ಇಡೀ ಊರಿಗೆ ಈ ಐಸ್‌ ಕ್ರೀಮ್ ಸಾಬರದು ಅದೊಂದು ಅವ್ಯಕ್ತ ಬಗೆಯ ಪರಿಚಯವಾಗಿಹೋಗಿತ್ತು. ಆದರೆ ಅವನ ಮನೆ, ಮಕ್ಕಳು, ಊರು ಕಡೆಗೆ ಅವನ ಹೆಸರೂ ಕೂಡ ಯಾರಿಗೂ ಗೊತ್ತಿರಲಿಲ್ಲ ಅಥವಾ ಕೇಳುವ ಇರಾದೆಯನ್ನು ಯಾರೂ ತೋರಿರಲಿಲ್ಲ.

ಸಾಮಾನ್ಯವಾಗಿ ಶನಿವಾರ ಮಧ್ಯಾಹ್ನ ಜೋರು ಉಸಿರು ಬಿಡುತ್ತ ಬರುತ್ತಿದ್ದ ಸಾಬರವನು ನಮಗೆ ಮಾಯಲೋಕದ ಕಿನ್ನರನಂತೆ ಕಂಡುಬಿಡುತ್ತಿದ್ದ. ಅವನ ಸೈಕಲ್‌ನ “ಪೋಂ ಪೋಂ” ಎನ್ನುವ ಸದ್ದು ನಮ್ಮ ಸ್ಕೂಲಿನ ಕಡೆಯ ಗಂಟೆ ಸದ್ದಿನಷ್ಟೇ ಶುಶ್ರಾವ್ಯವಾಗಿ ಕೇಳುತ್ತಿತ್ತು.‌ ಅವನೊಮ್ಮೆ  ಹಳೇ ಪೇಪರ್ssssss, ಖಾಲಿ ಶೀಶಾssssssss, ಐಸ್‍ಕ್ರಿಮ್sssss ಎಂದು ಕೂಗುತ್ತಿದ್ದ‌. ಆದರೆ ಅವನ ಕೂಗು ಕೇವಲ ಒಂದು ಗಂಟಲ ಸದ್ದಾಗಿರದೇ ಸಂಗೀತದ ಒಂದು ಮಟ್ಟಿನಂತಿರುತ್ತಿತ್ತು. ಅವನ ಕೂಗು ಎಷ್ಟು ಧೀರ್ಘವಾಗಿ ಎಳೆದರೂ ಎಲ್ಲೂ ಕೀರಲು ದನಿಯ  ಶ್ರವ್ಯವಾಗುತ್ತಿರಲಿಲ್ಲ.‌

ಎಷ್ಟೇ ಮಳೆಯಾದರೂ ನಮ್ಮೂರಿನ ನೆಲಕ್ಕೆ ನೆಗಡಿಯಾಗುವುದಿಲ್ಲ ಎಂದು ನನಗೆ ಸಾಕಷ್ಟು ಸಾರಿ ಅನಿಸಿದೆ. ಅದೇ ನೆಲದ ನಮಗೆ ಸಾಬರ ಅಟ್ಲಾಸ್ ಸೈಕಲ್ ನ ಕ್ಯಾರಿಯರ್ ನಲ್ಲಿದ್ದ ಡಬ್ಬಿಯೊಳಗಿನ ಐಸ್ ಕ್ರೀಮ್ ತಿಂದು ಸಾಕಷ್ಟು ನೆಗಡಿಯಾಗಿದೆ.

ಈಗ ನೆಗಡಿಯಾದರೂ ಸರೀ, ಐಸ್ ಕ್ರೀಮ್ ತಿನ್ನುತ್ತೇ‌ನೆ ಎಂದರೂ ಸಾಬರು ಪ್ರತಿ ಶನಿವಾರ ಊರಿನ ಕಡೆ ಬರುತ್ತಿಲ್ಲ. ಊರಿನ ಯಾರಿಗಾದರೂ ಐಸ್ ಕ್ರೀಮ್ ಸಾಬರು ಎಂದು ನೆನಪಿಸಿದರೆ, ಯಾವುದೋ ಇತಿಹಾಸದ ಪುಟಗಳನ್ನು ನೆನಪು ಮಾಡಿಕೊಂಡವರಂತೆ ಮಾತನಾಡುತ್ತಾರೆ. ಅವನ ಪ್ರತಿ ಶನಿವಾರದ ಗೈರು ಹಾಜರಿ ಕಾಡುವಂತೆ ಕಾಣುವುದಿಲ್ಲ.

****

ಮೂರು ವಾರಗಳ ಹಿಂದೆ ಮೈಸೂರಿನ ಜನತಾ ಬಜಾರಿನ ಬಳಿಯ ಹಳೆ ಮೈಸೂರು ಭಾಗದ ಬೀದಿಯಲ್ಲಿ ಅದೇ ಐಸ್ ಕ್ರೀಮ್ ಸಾಬರವನ್ನು ನೋಡಿದೆ. ಕೂದಲಿಲ್ಲದೆ ತಲೆ ಬೊಕ್ಕವಾಗಿತ್ತು. ಮೀಸೆ ಮಟ್ಟಸವಾಗಿ ಹದಗೊಂಡಿತ್ತು.‌ ಕಣ್ಣುಗಳು ಇನ್ನಷ್ಟು ಆಳಕ್ಕಿಳಿದು, ದೀಪಾವಳಿಯ ಮಣ್ಣಿನ ದೀಪಗಳಂತೆ ಕಾಣುತ್ತಿದ್ದವು. ಅದೇ ಐಸ್ ಕ್ರೀಮ್ ಡಬ್ಬಿವನ್ನು ಬೆನ್ನಿಗೇರಿಸಿಕೊಂಡಿದ್ದ ಹಳೆಯ ಅಟ್ಲಾಸ್ ಸೈಕಲ್ ತನ್ಮಯವಾಗಿ ಒಂದಿಷ್ಟು ದೂರಕ್ಕೆ‌ ನಿಂತಿತ್ತು.

ಮಾತನಾಡಿಸಬೇಕು ಎನಿಸಿತು. ನಿಮಗೆ ನನ್ನ ನೆನಪಿದೆಯಾ ಸರ್? ಹೋಗ್ಲಿ ನಿಮಗೆ ನನ್ನನ್ನು ಎಲ್ಲಿಯಾದರೂ ನೋಡಿದ ಗುರುತಾದರೂ ಇದೆಯಾ? ಎಂದು ಕೇಳಿದೆ.

ಆಶ್ಚರ್ಯಗೊಂಡರೂ ಸಾವರಿಸಿಕೊಂಡು ಉತ್ತರಿಸಿದರು. ‌ಈಗ ಕಣ್ಣು ಮಂಜು ಕಣಪ್ಪಾ.‌ ಎಲ್ಲೋ ನೋಡಿರ್ತೀನಿ ಆದ್ರೂ ನೆನಪಾಗಲ್ಲ ಎಂದು ಹೇಳುತ್ತಾ ಗಡ್ಡದ ಒಳಗೆಲ್ಲೋ ಬಚ್ಚಿಟ್ಟುಕೊಂಡಿದ್ದ ತುಟಿಗಳಿಂದ ನಕ್ಕರು‌.‌ ಅರಳಿದ ತುಟಿಗಳು ಗಡ್ಡ ದಟ್ಟತೆಯ ನಡುವೆ ಕಾಣದಿದ್ದರೂ, ನಗು ಮಾತ್ರ ಸ್ಪಷ್ಟವಾಗಿ ಕೇಳಿತು.

ನಮ್ಮೂರು, ಬೀದಿ ಹಾಗೂ ಒಂದಿಷ್ಟು ಹಿಂದಿ‌ನ ದಿನಗಳ‌ ಕುರಿತು ನೆನಪಿಸಿದೆ. ಕುತ್ತಿಗೆಯಾಡಿಸುತ್ತ, ಎಲ್ಲ ನೆನಪಾದವರಂತೆ, “ಓ. . . ಓ. . . ಗೊತ್ತು, ಗೊತ್ತು ನಂಗೆ. ಚೆನ್ನಾಗೇ ನೆನಪೈತೆ ಅದು” ಎಂದರು.

“ಈಗ ಮೊದಲಿನಂಗೇ ಶಕ್ತಿಯಿಲ್ಲಾ, ಮೊದಲಾದ್ರೆ ಹತ್ತು ಕಿಲೋ ಮೀಟರ್ ಸೈಕಲ್‌ ತಳ್ಕಂಡೆ ಬಂದುಬುಡ್ತಾ ಇದ್ದೆ. ಈಗ ಆಗಲ್ಲ, ಅದಕ್ಕೆ ಇಲ್ಲೇ ಸಿಟಿ ಒಳಗೇ ಐಸ್ ಕ್ರಿಮ್ ಮಾರ್ತಿನಿ” ಎಂದು ನಿಟ್ಟುರಿಸಿಟ್ಟರು.

ಮೊದಲೆಲ್ಲಾ, ಗಂಟುಮುಖದ ಸಾಬಿ ಎಂದುಕೊಳ್ಳುತ್ತಿದ್ದ ನಾನು, ಅವರ ಹೊಸ ರೂಪಾಂತರದ ಎದುರು ಮೌನವಾಗದೇ ಅನ್ಯ ಮಾರ್ಗವಿರಲಿಲ್ಲ. ಬದಲಾದ ಎಷ್ಟೋ ರಾಜಕೀಯ ವಿದ್ಯಮಾನಗಳ ನಡುವೆಯೂ ಬದಲಾವಣೆಯನ್ನೇ ಸೋಕಿಸಿಕೊಳ್ಳದೇ ಐಸ್ ಕ್ರೀಮ್ ಸಾಬರು ಮಾತ್ರ ಅದೇ ರೀತಿಯಲ್ಲಿ ಉಳಿದುಹೋಗಿದ್ದಾರಾ? ಎನ್ನುವ ಪ್ರಶ್ನೆಗಳ ಧಕ್ಕನೇ ಎದ್ದುಕೂತವು.

ಐಸ್ ಕ್ರೀಮ್ ತಿನ್ನಬೇಕು ಎನಿಸಿತು. ಎಷ್ಟೋ ವರ್ಷಗಳ ನಂತರ ಅವಕಾಶ ಎದುರು ಬಂದಿತ್ತು.‌ ಹಿಂದಿನ ಜೇಬಿನಿಂದ ಪರ್ಸ್ ತೆಗೆದು ಒಂದು ಐಸ್ ಕ್ರೀಮ್ ಕೊಡಿ ಎಂದು ಹತ್ತು ರೂಪಾಯಿ ಅವರ ಎದುರು ಹಿಡಿದೆ.

ಸಾಬರು, ಜೋರಾಗಿ‌ ನಕ್ಕರು. ಅವರ ನಗು, ನನಗೆ ವಿಚಿತ್ರ ಎನಿಸಿತು. ಯಾಕ್ ಸರ್ ನಗ್ತೀರಾ? ಎಂದು ಸಾಮಾನ್ಯವಾಗಿ ನಗುತ್ತಲೇ ಕೇಳಿದೆ. “ಮೊದಲೆಲ್ಲಾ ಬುಕ್ ಕೊಟ್ಬುಟ್ಟು ಇಲ್ಲ ಖಾಲಿ ಶೀಶಾ ಕೊಟ್ಬುಟ್ಟು ಐಸ್ ಕ್ರೀಮ್ ತಿಂತಾ ಇದ್ರಿ. ಈಗ ಕಾಸ್ ಕೊಟ್ಬುಟ್ಟು ತಿನ್ನೋ ಹಂಗೆ ಆಗಿದೀರಾ” ಎಂದರು ಟೋಪಿ‌ ಸರಿ ಪಡಿಸಿಕೊಳ್ಳುತ್ತಾ.‌ ವ್ಯಾಪಾರದ ತರಾತುರಿಯಲ್ಲಿದ್ದವರಂತೆ, ಸ್ಟ್ಯಾಂಡ್ ನ ಬಲವಂತವಾಗಿ ತಳ್ಳಿ, ಸೈಕಲ್ ಗೆ ಸ್ವತಂತ್ರ ದೊರಕಿಸಿದರು. ಹೊರಡಲು ಅಣಿಯಾದರು.‌

ಇಷ್ಟು ವರ್ಷ ಆದ್ಮೇಲೆ ಕೇಳ್ತಾ ಇದಾನೆ ಅಂತ ಬೈಕೊಳಲ್ಲ ಅಂದರೆ ಒಂದು ಕೇಳ್ತೀನಿ ಹೇಳ್ತೀರಾ? ಎಂದೆ.

ಕೇಳಿ ಸಾರ್. ಬೈಯೋಕೆ ಏನಿದೆ ಈ ಐಸ್ ಕ್ರೀಮ್ ಸಾಬಿಯ ಹತ್ತಿರ‌ ಎಂದು ಮತ್ತೊಮ್ಮೆ ನಗೆಯಾಡಿದರು.‌

ನಿಮ್ಮ ಹೆಸರೇನು? ಎಂದು ಕೇಳಿದೆ.

ಈ ಬಾರಿ ಅವರು ಬಿರುಸಾಗಿ ನಕ್ಕರು. ಅತೀತವಾದ ಅವರ ನಗು ಇದ್ದಷ್ಟು ಹೊತ್ತು ಇರಲಿ ಎನ್ನುವಂತೆ ಎದುರು ನೋಡುತ್ತಿದ್ದೆ. ಎಷ್ಟೋ ಹೊತ್ತಿನ ನಂತರ‌ ನಗು ಕ್ರಮೇಣವಾಗಿ ಸದ್ದನ್ನು ಇಳಿಸಿ, ಲೀನವಾಗಿತ್ತು.‌ ಹೇಳಿ ಸರ್ ಎಂದು ಮತ್ತೆ ಒತ್ತಾಯಿಸಿದೆ.

ಇಲಿಯಾಜ್, ಎಂದರು.

ಇಲಿಯಾಜ್ ಎಂದು ನನಗೇ ನಾನೇ ಹೇಳಿಕೊಂಡೆ.

ತನ್ನ ಅಸಾಧಾರಣ ಚೌಕಾಸಿ ಕಲೆಯಿಂದ, ಬೀದಿಯ ಹೆಂಗಸರ ಕಣ್ಣಿನಲ್ಲಿ ಸದಾಕಾಲವೂ ವಿರೋಧಿಯಾಗೇ ಕಾಣುತ್ತಿದ್ದ ಐಸ್ ಕ್ರೀಮ್ ಸಾಬರು ಕಡೆಯ ಹಂತದಲ್ಲಿ ‌ನಿಂತಿದ್ದರು. ತೀರ ಅಸ್ವಸ್ಥರಂತೆ ಕಾಣುತ್ತಿದ್ದ ಅವರು ಅಶಕ್ತ ತೋಳುಗಳಿಂದ ಸೈಕಲ್‌ ತಳ್ಳುತ್ತ ಸೆಂಟ್ ಫಿಲೋಮಿನ ಚರ್ಚ್ ನ ರಸ್ತೆಯ ಕಡೆಗೆ ಹೋಗುತ್ತಿದ್ದನ್ನು ನೋಡುತ್ತಿದ್ದಾಗ, ಇಂಧನವಿಲ್ಲದ ವಾಹನವನ್ನು ಹುಂಬನೊಬ್ಬ ಬಲವಂತವಾಗಿ ಚಲಾಯಿಸಲು ಹೆಣಗಾಡುತ್ತಿರುವಂತೆ ಕಂಡಿತು.

ಕೈನಲ್ಲಿದ್ದ ಐಸ್ ಕ್ರೀಮ್ ನ ನೆನಪಾಗಿ ಬಾಯಿಗಿಟ್ಟೆ. ರುಚಿಯಲ್ಲಿ ವ್ಯತ್ಯಾಸವಿರಲಿಲ್ಲ.‌ ಆದರೆ ಮೊದಲ ನೆಮ್ಮದಿ ನೀಡಲು ಸಾಧ್ಯವಾಗಲಿಲ್ಲ.

ಸೈಕಲ್‌ನ ಬಲವಂತಾಗಿ ತಳ್ಳುವುದಕ್ಕೆ ಹೆಣಗಾಡುತ್ತಿದ್ದ ಥೇಟು ಸಾಬರಂತೆಯೇ ಐಸ್ ಕ್ರೀಮ್ ಕೂಡ ಹೆಣಗಾಡುತ್ತಿತ್ತು.

ಇಲಿಯಾಜ್ ಎಂದು ಮತ್ತೊಮ್ಮೆ ಹೇಳಿಕೊಂಡೆ.‌ ಐಸ್ ಕ್ರೀಮ್ ಸಾಬರು, ತಿರುವಿನಲ್ಲಿ ಮರೆಯಾದರು.

5 comments

  1. ತುಂಬಾ ಇಷ್ಟವಾಯಿತು ಸಂದೀಪ್ ಅವರೇ. ಕೆಲವು ರೂಪಕಗಳು, ಚಿತ್ರಗಳು ಮನ ಕಾಡುವಂತೆ ಬರೆದಿದ್ದೀರಿ. ಇಲಿಯಾಜ್ ಅವರನ್ನು ನನ್ನೊಳಗೂ ಇಳಿಸಿದ್ದೀರಿ, ಥಾಂಕ್ಸ್!

  2. ನಂಗೆ ನಮ್ ಮನೆ ಹತ್ರ ಬರ್ತಿದ್ಲ ಉಪ್ಪುಗಡ್ಲೆ ಮಾರ್ತೀದ್ದ ನಳ್ಳಾಡ್ವನು ಅಂತ್ಹೆಸ್ರು ಪಡೆದ ಹಳೇ ಪೇಪರ್ ಖಾಲಿಸೀಸದ ಅಜ್ಜ ಜ್ಞಾಪಕ ಆಗ್ತೀದ್ದಾರೆ. Very nice. Thank u.. v r waiting for ur article sandeep

  3. Dear Sandeep, i truly liked your article. Very nicely structured and created the story very lucidly. Lot of messages to the society and innovative article. Thanks for giving us a such a beautiful article

Leave a Reply