ಸಾಗರವ ಗೆಲ್ಲುವುದು ಸಾಮಾನ್ಯವಾದ ಮಾತಲ್ಲ..

ನನಸಾಗದ ಕಮಲ್-ಸುರಯ್ಯಾ ಕನಸು

ಅಂದು ಬಾದಶಹ ಸ್ವಲ್ಪ ಚಿಂತಿತನಾಗಿಯೇ ಇದ್ದ. ರಾಜ್ಯದ ಇತ್ತೀಚಿನ ವಿದ್ಯಮಾನಗಳು ಅವನಿಗೆ ತೀರ ಸಮಾಧಾನವನ್ನೇನೂ ತಂದಿರಲಿಲ್ಲ. ಹಿಂದು ಮುಸ್ಲಿಂ ಬೇಧವನ್ನು ತೊಡೆಯಬೇಕೆಂಬ ಅವನ ಬಯಕೆಗೆ ಎರಡೂ ಕಡೆಗಳಿಂದ ಅಂಥಹ ಉತ್ಸಾಹದ ಪ್ರತಿಕ್ರಿಯೆಗಳೇನೂ ಕಂಡುಬರುತ್ತಿರಲಿಲ್ಲ. ಇಂತಹ ಸಂಜೆಗಳಲ್ಲಿ ಬಾದಶಹ ತನ್ನ ಗೆಳೆಯರರೊಂದಿಗೆ ಊರಾಚೆಯ ಉದ್ಯಾನವನದ ನಡುವಿರುವ ಕಲ್ಲುಮಂಟಪಕ್ಕೆ ಹೊಗುವ ಪರಿಪಾಟ ಮೊದಲಿನಿಂದಲೂ ಇತ್ತು. ಅಂತೆಯೇ ಇಂದು ಕೂಡ ಅವನ ಬರವಿಗೆ ಉಳಿದ ಮೂವರು ಅಲ್ಲಿ ಕಾಯುತ್ತಿದ್ದರು. ಬಾದಶಹ ಬಂದೊಡನೆ ಗೌರವಪೂರ್ವಕವಾಗಿ ಎದ್ದುನಿಂತರು.

ಬಾದಶಹನಿಗೆ ನಿಜಕ್ಕೂ ಅವರ ವರ್ತನೆಯಿಂದ ಸಿಟ್ಟು ಬಂದಿತ್ತು. ಆಸ್ಥಾನದಲ್ಲಂತೂ ಸರಿಯೆ. ಬಾದಶಹ ಸಭೆಯನ್ನು ಪ್ರವೇಶಿಸಿದೊಡನೇ ಸಭಾಸದರೆಲ್ಲರೂ ಎದ್ದುನಿಂತು ಗೌರವ ಸೂಚಿಸಬೇಕೆನ್ನುವುದು ನಿಯಮ. ಅವೆಲ್ಲವನ್ನೂ ಮರೆಯಲೆಂದು ಇಲ್ಲಿ ಬಂದಾಗಲೂ ಅದೇ ಪುನರಾವರ್ತನೆಯಾದಾಗ, ಬಹುಶಃ ಪ್ರಜೆಗಳಂತೆ ಇವರನ್ನೂ ಬದಲಾಯಿಸಲಾಗದು ಎನಿಸಿತು ಅವನಿಗೆ. “ಗೆಳೆಯರೇ, ನಿಮ್ಮ ಜಲಾಲ್ ಬಂದಿದ್ದಾನೆ. ತಿಳಿಯಿರಿ” ಎಂದು ವ್ಯಂಗ್ಯವಾಗಿ ನುಡಿದನು. ಇವನ ಮನದಿಂಗಿತ ಅರಿತ ತೋಡರಮಲ್ಲ, ಫಜಲ್, ಬೀರಬಲ್ಲರು ಒಕ್ಕೊರಲಿನಿಂದ, “ಕ್ಷಮಿಸು ಮಾರಾಯ. ಕೆಲವೊಮ್ಮೆ ನಾಟಕ ಮಾಡಿ, ಮಾಡಿ ನಿಜಸಂಗತಿ ಮರೆತೇಹೋಗುವುದು” ಎಂದರು.

ಅದಕ್ಕೆ ಜಲಾಲ್ ನಿರಾಕರಣೆಯ ಮುಖಭಾವ ತೋರುತ್ತಾ, “ನಾಟಕದ ವಿಷಯ ಮರೆತರೆ ತಪ್ಪಿಲ್ಲ. ನಿಜಜೀವನ ಮರೆಯುವುದು ತರವಲ್ಲ” ಎಂದ. ಅದಕ್ಕೆ ಫಜಲ್ ನಗುತ್ತಾ, “ನಮ್ಮ ಬೀರು ಇದ್ದಾನಲ್ಲ. ಅವನ ನಾಟಕವಂತೂ ಅದೆಷ್ಟು ಪ್ರಸಿದ್ಧಿಯೆಂದರೆ, ಜನರೀಗ ಅಕ್ಬರ್ ಮತ್ತು ಬೀರಬಲ್ಲನ ಕಥೆ ಕಟ್ಟುವುದರಲ್ಲಿಯೇ ಕಳೆದುಹೋಗಿದ್ದಾರೆ” ಎಂದು ನಗೆಯುಕ್ಕಿಸಿದನು. ಅದಕ್ಕೆ ತೋಡರಮಲ್ಲನು ಪ್ರತಿಕ್ರಿಯಿಸುತ್ತಾ, “ಅವರೇನು ಸುಮ್ಮನೆ ಕಟ್ಟುತ್ತಿಲ್ಲ. ಈ ಬೀರು ಅವರ ಒಂದೊಂದು ಕಥೆಗೆ ಒಂದೊಂದು ಚಿನ್ನದ ನಾಣ್ಯಗಳನ್ನು ಕೊಡುಗೆಯಾಗಿ ನೀಡುತ್ತಿದ್ದಾನೆ” ಎಂದು ಅಸಲಿಯತ್ತನ್ನು ಬಹಿರಂಗಗೊಳಿಸಿದನು.

ನಿಜಕ್ಕೂ ರಾಜ್ಯದಲ್ಲಿ ಆಗ ಅಕ್ಬರ್ ಮತ್ತು ಬೀರಬಲ್ಲರು ವೇಷ ಮರೆಸಿ ರಾಜ್ಯದ ತುಂಬೆಲ್ಲ ಸುತ್ತುವರೆಂಬ ಸುದ್ದಿ ಅದು ಹೇಗೋ ಮನೆಮಾತಾಗಿಬಿಟ್ಟಿತ್ತು. ಎಲ್ಲೋ, ಎಂದೋ ಬಾದಶಹನಿಗೆ ಹೇಗೆ ವಿಷಯಗಳೆಲ್ಲ ತಿಳಿಯುತ್ತವೆಯೆಂಬುದಕ್ಕೆ ಈ ಬೀರಬಲ್ಲನೇ ಕಟ್ಟಿದ ಕಥೆಯದಾಗಿತ್ತು. ಜನರು ಅದನ್ನು ನಿಷ್ಠೆಯಿಂದ ಮುಂದುವರೆಸಿದ್ದರು. ಹಾಗಾಗಿ ದಿನಕ್ಕೊಂದು ಬಗೆಯ ಕಥೆಗಳು ಅವರಿವರಿಂದ ಸೃಷ್ಟಿಗೊಂಡು ಅಧಿಕೃತತೆಯ ಮುದ್ರೆಯನ್ನು ಚಿನ್ನದ ನಾಣ್ಯದೊಂದಿಗೆ ಪಡೆದುಕೊಳ್ಳುತ್ತಿದ್ದವು. ಇದೇ ವಿಷಯವನ್ನು ನೆನಪಿಸಿಕೊಂಡು ನಾಲ್ವರೂ ನಕ್ಕು ಹಗುರಾದರು. ಅಷ್ಟರಲ್ಲಿ ಜಲಾಲನಿಗೆ ಹೊಸದೇನಾದರೂ ಕಥೆಯನ್ನು ಕೇಳುವ ಆಸೆಯಾಯಿತು. “ಬೀರೂ, ನಿನ್ನೆ ಮೊನ್ನೆಯದೊಂದು ಹೊಸಕಥೆಯನ್ನು ಹೇಳು ನೋಡೋಣ” ಎಂದ. ಫಜಲ್ ಮತ್ತು ತೋಡರಮಲ್ಲರೂ ಜಲಾಲನ ಮಾತಿಗೆ ದನಿಗೂಡಿಸಿದರು. ಬೀರು ಇನ್ನು ತನಗೆ ಹೇಳದೇ ಬಿಡುಗಡೆಯಿಲ್ಲವೆಂದು ಕಥೆ ಹೇಳತೊಡಗಿದ.

ಒಂದು ದಿನ ಅಕ್ಬರ್ ಬೀರಬಲ್ಲನಿಗೆ ಹೇಳಿದ, “ಬೀರಬಲ್, ನಾನೂ ಹಿಂದುವಾಗಬೇಕಲ್ಲ.” ಬೀರಬಲ್ಲನಿಗೆ ಚಿಂತೆ ಹತ್ತಿತು. ಬಾದಶಹನನ್ನು ಹಿಂದುವಾಗಿ ಹೇಗೆ ಬದಲಾಯಿಸುವುದೆಂದು. ತಕ್ಷಣಕ್ಕೆ ಏನೂ ಹೊಳೆಯದೇ ಎರಡು ದಿನಗಳ ಗಡುವು ಕೇಳಿ ಪಾರಾದ. ಮಾರನೇ ದಿನ ಬಾದಶಹ ಇನ್ನೇನು ಮಲಗಬೇಕೆನ್ನುವ ಹೊತ್ತು, ಅರಮನೆಯೆದುರಿನ ಹೊಳೆಯಲ್ಲಿ ಯಾರೋ ಜೋರಾಗಿ ಬಟ್ಟೆ ತೊಳೆಯುವ ಸದ್ದು ಕೇಳಿಬಂತು. ಇಷ್ಟು ಹೊತ್ತಿನಲ್ಲಿ ಯಾರಿರಬಹುದೆಂದು ನೊಡಲು ಕೆಳಗಿಳಿದು ಬಂದ ಬಾದಶಹ.

ನೋಡಿದರೆ ಅಗಸನೊಬ್ಬ ತನ್ನ ಕತ್ತೆಯ ಮೈಯನ್ನು ಗಸಗಸನೆ ಉಜ್ಜುತ್ತಾ, ‘ಹುಸ್…. ಹುಸ್….’ ಎಂದು ಬಟ್ಟೆಯನ್ನು ತಿಕ್ಕುವಂತೆ ತಿಕ್ಕುತ್ತಿದ್ದಾನೆ. ಈ ತಡರಾತ್ರಿಯಲ್ಲಿ ಕತ್ತೆಯ ಮೈತೊಳೆಯುವ ಅವನನ್ನು ಕಂಡು ಬಾದಶಹನಿಗೆ ಆಶ್ಚರ್ಯವಾಯಿತು. ಅಗಸನಲ್ಲಿ ಹೀಗೇಕೆಂದು ಪ್ರಶ್ನಿಸಿದ. ಅಗಸನಿಗೆ ಮಾರುವೇಷದಲ್ಲಿದ್ದ ದೊರೆಯ ಗುರುತು ಹತ್ತಲಿಲ್ಲ. ಅವನು ಹೇಳಿದ, “ಈ ಕತ್ತೆಯನ್ನು ತೊಳೆದು, ತೊಳೆದು ನಾಳೆಯೊಳಗೆ ಕುದುರೆಯಾಗಿಸಬೇಕೆಂದು ಬಾದಶಹನ ಆಜ್ಞೆಯಾಗಿದೆ. ಅದಕ್ಕೇ ತೊಳೆಯುತ್ತಿದ್ದೇನೆ” ಬಾದಶಹ ನಕ್ಕು ನುಡಿದ, “ತೊಳೆದ ಮಾತ್ರಕ್ಕೆ ಕತ್ತೆ ಕುದುರೆಯಾಗುವುದೇನು?” ಅಗಸನೂ ಹಾಗೆಯೇ ನಗುತ್ತ ಕೇಳಿದ, “ಮುಸ್ಲಿಮನೊಬ್ಬ ಹಿಂದುವಾಗಬಹುದಾದರೆ, ಕತ್ತೆ ಕುದುರೆಯೂ ಆಗಬಹುದಲ್ಲವೆ?”

ಬೀರು ತನ್ನ ಕಥೆಯನ್ನು ಅಲ್ಲಿಗೆ ನಿಲ್ಲಿಸಿದ. ಆದರೆ ಆ ಕಥೆಯ ಹಿಂದಿನ ತಾತ್ಪರ್ಯ ಅಲ್ಲಿರುವ ಎಲ್ಲರನ್ನೂ ಬಹಳವೇ ಕಾಡಿತು. ಜೋಧಾಬಾಯಿಯನ್ನು ಮದುವೆಯಾಗಿ ತಂದು ಅವಳಿಗೆಂದು ಕೃಷ್ಣನ ಆಲಯವನ್ನು ನಿರ್ಮಿಸಿದ ಜಲಾಲನಿಗೆ ಅಷ್ಟಾಗಿಯೂ ಏನೂ ಸಾಧಿಸಿದಂತಾಗಲಿಲ್ಲವೆಂದು ಇತ್ತೀಚೆಗೆ ಅನಿಸುತ್ತಿತ್ತು. ಇಂದದು ಇನ್ನಷ್ಟು ಸ್ಥಿರವಾಯಿತು. ಈ ಹಿಂದು, ಮುಸ್ಲಿಂ ಬೇಧವಳಿಸಲು ರಕ್ತದ ಬೆರಕೆಯೊಂದೇ ಮಾರ್ಗವೆಂದು ಅವನಿಗೀಗ ಮತ್ತೆ ಮತ್ತೆ ಅನಿಸುತ್ತಿತ್ತು. ಇಲ್ಲವಾದರೆ ಕುದುರೆಯಿಂದ ಕತ್ತೆಯಾದವರೂ ಕೂಡ ಮತ್ತೆ ಇಂಥದ್ದೇ ಕಥೆಯನ್ನು ಇನ್ನಷ್ಟು ಹೊಸೆಯುವರೆಂಬುದು ನಿಶ್ಚಿತವಾಗಿತ್ತು.

ಅದಕ್ಕೆಂದೇ ಪ್ರತಿವರ್ಷ ಜಲಾಲ್ ತನ್ನ ಉದ್ಯಾನವನದಲ್ಲಿ ವಸಂತೋತ್ಸವವನ್ನು ಆಚರಿಸಿ, ಪ್ರಜಾಜನರೆಲ್ಲ ಯಾವ ಧರ್ಮದ ಬೇಲಿಯಿಲ್ಲದೇ ತಮ್ಮ ಪ್ರೇಮಿಯನ್ನು ಆಯ್ಕೆಮಾಡಿಕೊಳ್ಳಲು ಅನುವು ಮಾಡಿಕೊಡುತ್ತಿದ್ದ. ಅನೇಕ ಹೆಂಡಿರನ್ನು ಹೊಂದುವ ಸ್ವಾತಂತ್ರ್ಯವೂ ಧರ್ಮದ ಬೇಲಿಯನ್ನು ಇನ್ನಷ್ಟು ಪ್ರಬಲಗೊಳಿಸುವುದೆಂಬುದು ಬಾದಶಹನಿಗೆ ಇತ್ತೀಚೆಗೆ ಮನದಟ್ಟಾಗಿತ್ತು. ಒಲಿದು ಬಂದ ಅನ್ಯಧರ್ಮಿಯರು ಕೇವಲ ಪ್ರೇಯಸಿ ಮಾತ್ರವೇ ಆಗಿ ಉಳಿಯುವ ಅಪಾಯವೂ ಇತ್ತು. ಆಲಾಲ್ ಇದನ್ನು ಎಷ್ಟೋ ಸಲ ಗೆಳೆಯರಿಗೆ ಹೇಳುತ್ತಿದ್ದ, ತಾನು ಸಲೀಮನ ತಾಯಿಯೊಬ್ಬಳ ಗಂಡ ಮಾತ್ರವಾಗಿದ್ದರೆ ಎಷ್ಟು ಚೆನ್ನಾಗಿತ್ತು ಎಂದು.

ಹೀಗೆ ನಿರಾಸೆಯ ಕಾರ್ಮೋಡವೊಂದು ಆವರಿಸುವ ಗಳಿಗೆಯಲ್ಲಿ ಉದ್ಯಾನವನದ ದೂರದ ಮೂಲೆಯಲ್ಲಿ ಕಂಡ ದೃಶ್ಯವೊಂದು ಫಜಲ್‍ನನ್ನು ಹಿಡಿದಿಟ್ಟಿತು. ಹೌದು, ಅವಳೆ ಅವನ ಮಗಳು ಸುರಯ್ಯಾ. ತನ್ನ ಪ್ರಿಯಕರನೊಂದಿಗೆ ಕಲ್ಲುಹಾಸಿನ ಮೇಲೆ ಕೈಕೈ ಬೆಸೆದು ಕುಳಿತಿದ್ದಳು. ಅವನು ಉಳಿದವರನ್ನೆಲ್ಲ ಕರೆದು ಆ ದೃಶ್ಯವನ್ನು ತೋರಿಸಿದ. “ಅಗೋ, ಅಲ್ಲಿ ನೋಡಿ. ನನ್ನ ಮಗಳು ಸುರಯ್ಯಾ” ಅವನು ಮುಗಿಸುವ ಮೊದಲೇ ಬಾಯಿಹಾಕಿದ ತೋಡರಮಲ್ಲ ಹೇಳಿದ, “ಹಾಂ, ನನ್ನ ಮಗ ಕಮಲ್‍ನೊಂದಿಗೆ” ಇಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಂಡು ನುಡಿದರು, “ಸಧ್ಯ, ನಾವಿಬ್ಬರು ಪಾಪಿಗಳಾಗಲಿಲ್ಲ” ಅವರೊಂದಿಗೆ ಜಲಾಲ್, ಬೀರೂ ಕೂಡ ತೋಳನ್ನು ಸೇರಿಸಿದರು. ವಸಂತೋತ್ಸವದ ಮೊದಲ ದಿನವೇ ಉದ್ಯಾನವನಕ್ಕೆ ವಸಂತನ ಆಗಮನವಾಗಿತ್ತು!

ಸುರಯ್ಯಾ-ಕಮಲ್ ರ ಪ್ರೀತಿಗೆ ತಂದೆಯರೇನೋ ಒಪ್ಪಿದ್ದರು. ಆದರೆ ಸಂಪ್ರದಾಯಸ್ಥರಾದ ತಾಯಿಯರನ್ನು ಒಪ್ಪಿಸುವುದು ಸುಲಭವೇನಾಗಿರಲಿಲ್ಲ. ತೋಡರಮಲ್ಲನ ಮನೆಯ ಕೃಷ್ಣನ ಪೂಜೆಗೆ ಸುರಯ್ಯಾ ಬಂದು ಹಾಡು ಹೇಳಿ ಆರತಿ ಬೆಳಗಿದ್ದಳು. ಕಮಲ್ ತನ್ನ ಭಾವೀ ಮಾವ ಫಜಲ್‍ನೊಂದಿಗೆ ಮಸೀದಿಯಲ್ಲಿ ನಮಾಜು ಮಾಡಿದ್ದನು. ಹೀಗೆ ಒಂದು ಚೆಂದದ ಪ್ರೀತಿ ಸಂಪನ್ನಗೊಂಡಿತು.

“ಕೇಳಿ ಬರುವುದೇನು ಪ್ರೀತಿ
ಜಾತಿ, ಕುಲ, ಗೋತ್ರವ?
ಹೇಳಿ ಬರುವುದೇನು ಪ್ರೀತಿ
ಪ್ರೀತಿಸುವವರ ಧರ್ಮವ?
ಎಲ್ಲ ಬಂಧ ತೊರೆದ ಭಾವ
ವಲ್ಲವೇನು ಪ್ರೀತಿ?
ಭಿನ್ನವಾದುದೆಲ್ಲವನ್ನು
ಬಂಧಿಸುವುದೇ ಪ್ರೀತಿ”

ಹೀಗೆ ಅರಳಿದ ಪ್ರೀತಿಗೆ ಬಾದಶಹನೇ ದಾಂಪತ್ಯಮಂತ್ರವನ್ನು ಬೋಧಿಸಿದ. ಧರ್ಮದ ಬೇಲಿಯನ್ನು ಜಿಗಿದ ಪ್ರೀತಿ ಹಕ್ಕಿಗಳು ಬಾನತುಂಬ ಹಾರಿದ್ದವು.

“ಹೇಳು ಸುರಯ್ಯಾ, ನಾವು ಮಧುಚಂದ್ರಕ್ಕೆ ಎಲ್ಲಗೆ ಹೋಗೋಣ?” ಅವಳ ಹೂವಿನೆಸಳಿನಂಥ ಕೈಯನ್ನು ಹಿಡಿದು ಕೇಳಿದ್ದ ಕಮಲ್.

“ಈ ಯಮುನೆಯ ನೀರು ಸಾಗರವನ್ನು ಸೇರುವುದಲ್ಲ, ಅಲ್ಲಿಗೆ” ಎಂದಳು ಸುರಯ್ಯಾ ನೀರ ಅಲೆಗಳನ್ನು ದಿಟ್ಟಿಸುತ್ತಲೆ.

“ಅದಕ್ಕೇನಂತೆ? ಈ ನೀರಿನೊಳಗೆ ಜಿಗಿದರಾಯಿತಲ್ಲವೆ? ನೀರಿನೊಂದಿಗೆ ನಾವೂ ಸಮುದ್ರ ಸೇರಬಹುದು” ಎಂದು ನಕ್ಕ ಕಮಲ್.

ಸುರಯ್ಯಾ ಅವನ ಬಾಯ ಮೇಲೆ ಬೆರಳಿಟ್ಟು ಹೇಳಿದಳು, “ನನಗೆ ಇನ್ನೂ ನೂರು ವರ್ಷ ಬದುಕುವಾಸೆಯಿದೆ. ಮತ್ತು ಜೀವಂತವಾಗಿಯೇ ಸಾಗರವೆಂಬ ನೀರರಾಶಿಯನ್ನು ಸೇರಬೇಕಿದೆ.”

ಕಮಲ್ ಹೇಳಿದ, “ಹೌದು ಸುರಯ್ಯಾ, ಸಾಗರವೆಂಬ ಅಗಾಧ ನೀರರಾಶಿಯನ್ನು ನೋಡುವುದೇ ಕಣ್ಣಿಗೆ ಹಬ್ಬ. ನಾನು ಸಣ್ಣವನಾಗಿರುವಾಗೊಮ್ಮೆ ಆ ದೃಶ್ಯವನ್ನು ಕಣ್ತುಂಬಿಕೊಂಡಿದ್ದೆ. ನಾಳೆಯೇ ಸೂರತ್ ಗೆ ಹೋಗೋಣ. ನೀನೂ ಸಾಗರವನ್ನು ನೋಡುವಿಯಂತೆ.”

ಸಾಗರದ ದಡದಲ್ಲಿ ಕೈಗೆ ಕೈಯನ್ನು ಬೆಸೆದು ಕುಳಿತ ಆ ಗಳಿಗೆ ಸುರಯ್ಯಾ ಕಮಲ್ ನನ್ನು ಕೇಳಿದಳು, “ಏನಿದೆ ಈ ಸಾಗರದೊಳಗೆ?’

ಕಮಲ್ ಉತ್ತರಿಸಿದ, “ಇಡಿಯ ಬದುಕು!” ಸುರಯ್ಯಾಳ ಕಣ್ಣೊಳಗೆ ಸಾವಿರ ಪ್ರಶ್ನೆಗಳು! ಕಮಲ್ ಅವಳಿಗೆ ಸಾಗರದಾಳದೊಳಗಿರುವ ಅಗಾಧ ಸಂಪತ್ತನ್ನು, ಸಾಗರದೊಳಗಿರುವ ಅನೂಹ್ಯ ಜೀವಜಗತ್ತನ್ನೆಲ್ಲ ಅವಳಿಗೆ ವಿವರಿಸಿದ. ಸಾಗರದಾಚೆಯ ಊರಿನಲ್ಲಿರುವ ತನ್ನ ಗೆಳತಿ ಮಾಧುರಿಯ ಬಗೆಗೂ ತಿಳಿಸಿದ. ಅವಳಿಗೂ ಸಾಗರದಾಚೆಯ ಊರನ್ನು ನೋಡುವ ಬಯಕೆಯಾಯಿತು. ಇಬ್ಬರೂ ಭೂಯಾನದ ಮೂಲಕವೇ ವೆ ನಿಸ್ ನಗರಕ್ಕೆ ಹೋದರು. ಅಲ್ಲಿ ಹೊಸದೊಂದು ಜಗತ್ತು ಅವರಿಗಾಗಿ ಕಾಯುತ್ತಿತ್ತು.

ವೆನಿಸ್ಸಿನ ಬಂದರು ಫ್ಲಾರೆನ್ಸ್ ನಲ್ಲಿ ಕುಳಿತ ಸುರಯ್ಯಾ ಕಮಲ್ ನನ್ನು ಕೇಳುತ್ತಾಳೆ, “ಕಮಲ್, ಇಲ್ಲಿನ ಜನ ಯಾಕಿಷ್ಟು ಸುಖಿಗಳಾಗಿದ್ದಾರೆ?”

“ಯಾಕೆಂದರೆ ಇಲ್ಲಿಯ ಜನಗಳು ಸಾಗರವನ್ನು ಗೆದ್ದಿದ್ದಾರೆ”

“ಸಾಗರವನ್ನು ಗೆಲ್ಲುವುದೆಂದರೆ ಜೀವನವನ್ನು ಗೆಲ್ಲುವುದೇನು?”

“ಖಂಡಿತ ಹೌದು. ನೋಡು ಈ ಸಾಗರವನ್ನು. ತನ್ನದಲ್ಲದ ಯಾವುದೊಂದನ್ನೂ ತನ್ನೊಡಲೊಳಗೆ ಬಚ್ಚಿಟ್ಟುಕೊಳ್ಳುವುದಿಲ್ಲ. ಇಲ್ಲಿಯ ಜನರೂ ಹಾಗೆ. ತಮಗೆ ಅವಶ್ಯಕತೆಯಿಲ್ಲದ ಸಂಪತ್ತನ್ನು ಕತ್ತಲೆ ಕೋಣೆಯಲ್ಲಿ ಸಂಗ್ರಹಿಸಿಡುವುದಿಲ್ಲ. ಹಾಗಾಗಿಯೇ ಎಲ್ಲರೂ ಸಂಪತ್ತಿನ ಒಡೆಯರಾಗಿದ್ದಾರೆ.”

“ಹೌದು ಕಮಲ್, ನಮ್ಮಲ್ಲಿ ನೋಡು, ಉತ್ತು, ಬಿತ್ತಿ, ಬೆಳೆಯುವ ರೈತರ ಬವಣೆ ಕಳೆಯುವುದೇ ಇಲ್ಲ. ಅವರೆಂದಿಗೂ ಬಡತನದ ಬೇಗೆಯಲ್ಲಿಯೇ ಬೇಯುತ್ತಾರೆ”

“ವರ್ತಕರು ಅತಿಲಾಭದಾಸೆಯನ್ನು ತೊರೆಯುವವರೆಗೂ ಇದೇ ಸ್ಥಿತಿ ಮುಂದುವರೆಯುವುದು”

“ಅದೆಲ್ಲ ಸರಿ, ಇಲ್ಲಿ ರಾಜರ್ಯಾಕಿಲ್ಲ”?

“ಯಾಕೆಂದರೆ ರಾಜನ ಅವಶ್ಯಕತೆ ಇಲ್ಲಿಯವರಿಗಿಲ್ಲ ಅಷ್ಟೆ. ನಮ್ಮಲ್ಲಿಯ ಬವಣೆಗೆ ರಾಜರ ವೈಭವೋಪೇತ ಬದುಕೂ ಕಾರಣವೆನಿಸುತ್ತದೆ”

“ನನಗಂತೂ ಅವಕುಂಠನದ ಹಂಗಿಲ್ಲದೇ ಓಡಾಡುವ ಇಲ್ಲಿನ ಸ್ವಾತಂತ್ರ್ಯ ಬಹಳ ಮೆಚ್ಚುಗೆಯಾಗಿದೆ. ಅಲ್ಲಿ ನಮ್ಮೂರಿನಲ್ಲಿ ಮುಖಪರದೆಯಿಲ್ಲದೇ ಹೊರಹೋಗಲಾಗುವುದೆ?”

“ನಮ್ಮೂರಿನಲ್ಲೂ ಮೊದಲೆಲ್ಲ ಈ ಬಗೆಯ ವ್ಯವಸ್ಥೆಯಿರಲಿಲ್ಲ. ಈಗಲೂ ದಕ್ಷಿಣ ಪ್ರಾಂತ್ಯದಲ್ಲಿ ಮುಖಪರದೆಯನ್ನು ಧರಿಸುವುದಿಲ್ಲ. ಅವೆಲ್ಲವೂ ಮತ್ತೆ ಬಂದ ಆಚರಣೆಗಳು.”

“ನಿನಗೆ ಇವೆಲ್ಲವೂ ತಿಳಿಯುವುದಾದರೂ ಹೇಗೆ ಕಮಲ್?”

“ನೋಡಿಲ್ಲಿ ಪುಸ್ತಕವೆಂಬ ಕಟ್ಟುಗಳು. ನಮ್ಮಲ್ಲಿಯೂ ಇವುಗಳನ್ನು ತಯಾರಿಸಬಹುದಾದ ಎಲ್ಲ ಸರಕುಗಳಿವೆ. ಆದರೆ ಜ್ಞಾನ ಎಲ್ಲರ ಪಾಲಾಗುವ ಭಯದಿಂದ ಅವರದನ್ನು ಬಾಯಿಂದ ಬಾಯಿಗೆ ಮಾತ್ರವೇ ದಾಟಿಸುತ್ತಿದ್ದಾರೆ.”

“ನನಗೆ ಊರಿನಲ್ಲಿದ್ದಾಗಿನ ಅನುಭವಗಳು ಕಾಡುತ್ತವೆ. ನಿನ್ನ ಜಾತಿಯ ಹೆಣ್ಣುಗಳೆಂದರೆ ಎಂಥಹ ಕೊಳಕರೆಂದು ನಮ್ಮ ಮನೆಗಳಲ್ಲಿ ಸದಾ ಚರ್ಚೆಯಾಗುತ್ತಿತ್ತು.”

“ನಮ್ಮ ಮನೆಯಲ್ಲೇನು ಕಡಿಮೆ? ಬಾದಶಹ ಹಣಿಸಿದ ನೀರು ಕುಡಿದರೆಂದು ನಮ್ಮನ್ನು ಜಾತಿಯಿಂದಲೇ ಬಹಿಷ್ಕರಿಸಿದ್ದರು.”

“ನೀರಿಗೆ ಯಾವ ಜಾತಿ ಹೇಳು? ಇಲ್ಲಿ ಎಲ್ಲರ ಮನೆಗಳಲ್ಲೂ ನಮ್ಮನ್ನು ಸಮಾನವಾಗಿ ಸತ್ಕರಿಸುತ್ತಾರೆ. ನಿಜಕ್ಕೂ ನಮ್ಮವರು ಇವರಂತೆಯೇ ಇರಬಾರದೆ?”

“ಇರಬಹುದು. ಆದರೆ ಸುತ್ತ ಆವರಿಸಿರುವ ಸಾಗರವನ್ನವರು ಜಯಿಸಬೇಕು. ಸಾಗರದಾಳದ ಸಂಪತ್ತನ್ನು ಉಪಯೋಗಿಸಬೇಕು. ಸಾಗರದಂತೆಯೇ ಬೇಡವೆನಿಸಿದ್ದನ್ನು ಹೊರಗೆಸೆಯಬೇಕು. ಎಲ್ಲಕ್ಕಿಂತ ಮಿಗಿಲಾಗಿ ಸಾಗರ ಸಂಚಾರಕ್ಕೆ ಅಗತ್ಯವಾದ ದೊಡ್ಡ ದೊಡ್ಡ ಹಡಗುಗಳನ್ನು ನಿರ್ಮಿಸಬೇಕು. ಇಲ್ಲಿಯವರೆಗೂ ಬಂದು ಇಲ್ಲಿನದೆಲ್ಲವನ್ನೂ ನೋಡು, ಕೇಳಿ ತಿಳಿಯಬೇಕು. ತಿಳಿದುದೆಲ್ಲವನ್ನು ಪುಸ್ತಕರೂಪದಲ್ಲಿ ಮುದ್ರಿಸಬೇಕು.”

ಕಮಲ್ ಹೇಳುತ್ತಾ ಹೋಗುತ್ತಿದ್ದ. ಸುರಯ್ಯಾ ಗಾಳಿಯಲ್ಲಿ ಹಾರಾಡುವ ತನ್ನ ಮುಂಗುರಳುಗಳನ್ನು ಸರಿಪಡಿಸುತ್ತಾ, ಸಾಗರದಿಂದ ತೂರಿಬರುವ ಗಾಳಿಗೆ ಮುಖವೊಡ್ಡಿ ಅವನ ಕನಸುಗಳನ್ನೆಲ್ಲವನ್ನು ತನ್ನೊಳಗೂ ತುಂಬಿಕೊಳ್ಳುತ್ತಿದ್ದಳು. ಕಮಲ್ ಇತ್ತೀಚೆಗೆ ಹಡಗು ಚಲಾಯಿಸಲು ಕಲಿಯುತ್ತಿದ್ದ ಕಾರಣ ಅವಳಿಗೀಗ ಸ್ಪಷ್ಟವಾಯಿತು. ಸಾಗರ ವಿಜಯಿಯಾಗುವ ಅವನ ಕನಸು ಅವಳಲ್ಲಿಯೂ ಹೊಸದೊಂದು ಭರವಸೆಯನ್ನು ಮೂಡಿಸಿತು.

“ಸಾಗರದ ಅಲೆಗಳಂತೆ ಮಾತು ಮಿಡಿಯಿತು
ಸೋತ ಬದುಕಿಗೊಂದು ಹೊಸದು ಆಸೆ ಬಂದಿತು
ಭಿನ್ನ ಬೇಧವಳಿದ ಜಗದ ಕನಸು ತುಂಬಿತು
ಎಲ್ಲ ಜನರ ಒಳಿತಿಗಾಗಿ ಮನಸು ಬಯಸಿತು”

ಹೀಗೆ ಕನಸಿನ ಮೂಟೆಯನ್ನು ಹೊತ್ತ ಅವರ ಯಾನ ಹಡಗಿನಲ್ಲಿಯೇ ಊರಿನೆಡೆಗೆ ಸಾಗಿತು. ತಿಂಗಳಾನುಗಟ್ಟಲೆಯ ಪಯಣವದು. ನಡುವಲ್ಲಿ ಕಡಲುಗಳ್ಳರ ಕಾಟವೆಂದು ಅವರಿಗೆ ಮೊದಲೇ ತಿಳಿದಿತ್ತು. ಕೆಲವೇ ದಿನದಲ್ಲಿ ಅದು ಸತ್ಯವೂ ಆಯಿತು. ಸಾಗರವ ಗೆಲ್ಲಲು ಹೊರಟ ಕಮಲ್ ಗೆ ಕಡಲುಗಳ್ಳರನ್ನು ಗೆಲ್ಲಲು ಸಾಧ್ಯವಿದ್ದರೆ ಎಷ್ಟು ಚೆನ್ನಿತ್ತು. ಆದರೆ ವಿಧಿ ಬೇರೆಯದನ್ನೇ ಬರೆದಿತ್ತು. ಕಡಲುಗಳ್ಳರೊಂದಿಗೆ ಹೋರಾಡುತ್ತಲೇ ಕಮಲ್ ನ ಕನಸು ಕೊನೆಗೊಂಡಿತ್ತು. ಅವನು ಕಡಲಿನಲ್ಲಿ ಮುಳುಗುವ ಹೊತ್ತು ಸೂರ್ಯನೂ ಬೇಸರಗೊಂಡು ಮುಳುಗಿದ್ದ. ಇನ್ನು ಹಡಗಿನಲ್ಲಿದ್ದು ತನಗೇನು ಕೆಲಸವೆಂಬಂತೆ ಸುರಯ್ಯಾಳೂ ಕಡಲಿನೊಳಗೆ ಇಳಿದುಬಿಟ್ಟಳು. ಇಳಿಯುವ ಮೊದಲು ಅವಳ ಬಾಯಿಂದ ಬಂದ ಒಂದೇ ಮಾತು, “ಸಾಗರ ವಿಜಯಿ!”

ಇನ್ನೂ ಈಜುತ್ತಲೇ ಇದ್ದೇವೆ, ಐದುನೂರು ವರ್ಷಗಳ ನಂತರವೂ ಅವರು ಬಯಸಿದ ದಡವನ್ನು ಸೇರಲಾಗಿಲ್ಲ. ಸಾಗರದಾಳದಿಂದ ಸಂಪತ್ತನ್ನೇನೋ ಬಾಚಿದ್ದೇವೆ, ಆದರೆ ಎಲ್ಲರಿಗೂ ಹಂಚಲಾಗಲಿಲ್ಲ. ಕಮಲ್ ಬಯಸಿದರೂ ಸುರಯ್ಯಾಳನ್ನು ಇಂದು ಸೇರಲಾರ. ಸುರಯ್ಯಾಳ ಸುತ್ತಲಿರುವ ಕಪ್ಪುಪರದೆ ಅವಳ ಮುಂಗುರುಳನ್ನು ಸವರುವ ಗಾಳಿಯ ಬಯಕೆಗೆ ತೊಡಕಾಗಿಯೇ ಇದೆ. ರಾಜನಿಲ್ಲದ ನಾಡಲ್ಲಿ ರಾಜಕಾರಣಿಯದೇ ಸಾಮ್ರಾಜ್ಯ. ಎಲ್ಲವೂ ಹಾಗೆಯೇ ಇದೆ, ಏಕೆಂದರೆ ಸಾಗರವ ಗೆಲ್ಲುವುದು ಸಾಮಾನ್ಯವಾದ ಮಾತಲ್ಲ.

6 comments

  1. ಬಹಳ ಸುಂದರವಾದ ಸಣ್ಣ ಕಥೆ. ಪ್ರೇಮಿಗಳ ಆಶೆ ಆಕಾಂಕ್ಷೆ ನಿರಾಶೆಗಳ ಅಭಿವ್ಯಕ್ತನೇ ಚನ್ನಾಗಿ ಮೂಡಿ ಬಂದಿದೆ. ಸಮಾಜ ರಾಜ ಮಹಾರಾಜಗಳು ಹೋದರೂ, ಪ್ರಜಾಪ್ರಭುತ್ವ ಬಂದರೂ ಈ ಪ್ರೇಮಿಗಳ ಕನಸು ಕನಸಾಗಿಯೇ ಉಳಿಯಿತು. ರಾಜಕಾರಣಿಗಳು ಉರಿಯುವ ಬೆಂಕಿಗೆ ಇಂಧನ ರಾಚುವದೇ ತಮ್ಮ ಜನ್ಮಸಿದ್ಧ ಹಕ್ಕು ಎಂಬಂತೆ ಸುಖ್ ಅನುಭವಿಸುತ್ತಿದ್ದಾರೆ. ಹೋಲ್ ಹರಿಯುತ್ತಲೇ ಇವೆ. ಜನ ಹೊಳೆಯಲ್ಲಿ ಕಸ ಚಲ್ಲುತ್ತಲೇ ಇದ್ದಾರೆ. ಸಮುದ್ರ ಮೌನವಾಗಿ ಮಾಲಿನ್ಯವನ್ನು ಸಹಿಸುತ್ತಲೇ ಇದೆ
    ರವಿ ಸಾಣಿಕೊಪ್ಪ

  2. ಐತಿಹಾಸಿಕ ಚೌಕಟ್ಟಿನಲ್ಲಿ ಕಟ್ಟಿದ ವಾಸ್ತವ ಭಾರತದ ಅರಿವಿನ ಕತೆ,
    .. ಸಾಗರದಂತೆಯೇ ಬೇಡವೆನಿಸಿದ್ದನ್ನು ಹೊರಗೆಡಹುವ.. ಆರ್ಥಿಕ ಅಸಮಾನತೆಗೆ ಎಷ್ಟೊಳ್ಳೆಯ ರೂಪಕ ನೀಡಿದ್ದೀರಿ ಸುಧಾ, ಬಹುಶಃ ನಾಟಕಗಳ ಆತ್ಯಂತಿಕ ಓದು ಇಂಥ ಒಳ್ಳೆಯ ಗ್ರಹಿಕೆಗಳಲ್ಲಿ ನಿಮ್ಮನ್ನು ಅದ್ದಿ ತೆಗೆದಿರಬಹುದು ಅಂದುಕೊಂಡಿರುವೆ..
    -ಸುನಂದಾ

Leave a Reply