ಅವ ಬಿಡಿಸಿದ ಚಿತ್ರಕ್ಕೆ ತನ್ನದೆನುವುದೊಂದು ಬಣ್ಣ..

ಎಲ್ಲಿಯ ಹೂವು…ಎಲ್ಲಿಯ ಚಿತ್ರ!

ಅನಿತಾ ಪಿ ತಾಕೊಡೆ

ನಿನ್ನೆ, ಸಮಾಜದ ಬಾಯಿಗೆ ಒಂದಿಷ್ಟು ಮಣ್ಣು ಹಾಕಿ,
ಇನ್ನಿಚ್ಛೆಯಂತೆ ಇರಹೊರಟಿರುವ ಉತ್ಕಟ ಆಸೆಗಳನು
ದೂರದವರೆಗೂ ಕೇಳಿಸುವಂತೆ ಕಿರುಚಿದ್ದ
ತನ್ನೊಂದಿಗೆ ತಳುಕು ಹಾಕಿಕೊಂಡಿರುವ ಸೋಗಿನ ಮುಖಗಳನು
ಸಾರಾಸಗಟಾಗಿ ನಿರಾಕರಿಸಿದ್ದ
ತನ್ನೆದೆ ಮಾಳದಲಿ ಮಿಡಿವ ಭಾವಗಳ ಅರುಹಿ
ಒಂದನ್ನು ಬಿಟ್ಟು ಬಾಕಿ ಎಲ್ಲವನು ಹಳಿದು,
ಆ ಒಂದಲಿ ಒಂದಾಗಲು ಹಂಬಲಿಸಿದ್ದ

ಅವಳು ಎಲ್ಲವನೂ ಆಲಿಸಿದಳು
ಉದ್ವೇಗದ ಭಾವಗಳಿಗೆ ಮೌನ, ಕೆಲವೊಂದಕೆ ಧ್ಯಾನ,
ಉಳಿದವುಗಳಿಗೆ ಹ್ಞಾಂ… ಹ್ಞೂ…
ಭಾವುಕ ಮನಸಿನ ಪುಟಗಳ ಕಥೆಯಲ್ಲವೇ…!
ಒಂದಿಷ್ಟು ಖುಷಿಯ ಹೂವುಗಳ ನುಣುಪಿನಲಿ ನೇವರಿಸಿದಳು

ಇಂದು ಆತ ನಿನ್ನೆಯಂತಿರಲಿಲ್ಲ
ಸಮಾಜದ ಕಣ್ಣಿಗೆ ಸುಣ್ಣ ಬಣ್ಣ ಬಳಿಯಲು
ಬದುಕಿನ ಪುಟಗಳ ಹಿಂತಿರುವಿ ಚಂದದ ಚಿತ್ತಾರ ಬಿಡಿಸಿದ್ದ
ಬಣ್ಣದ ಲೋಕದ ಸಾಲು ಸಾಲು ನುಡಿಬರಹಗಳಿಗೆ
ಕಣ್ತೆರೆದು ಕಾದು ಮನಸನು ಕುಣಿಸಿದ್ದ

ಅವಳು ಎಲ್ಲವನೂ ಕಂಡಳು ಕಣ್ಣು ತುಂಬಿಕೊಂಡಳು
ನಿನ್ನೆಯ ಬಾಡಿದ ಹೂವಿನೆಸಳುಗಳ ಎತ್ತಿಟ್ಟು,
ಅವ ಬಿಡಿಸಿದ ಚಿತ್ರಕ್ಕೆ ತನ್ನದೆನುವುದೊಂದು ಬಣ್ಣ ಹಚ್ಚಿದಳು

ಹಚ್ಚಿದ ಬಣ್ಣ ಗಾಢವಾಯಿತೇನೋ…!
ಅವನು ಅಳತೆಗೋಲನು ಹಿಡಿದು, ಆಳ ಅಗಲಗಳ ಅಳೆಯತೊಡಗಿದ
ಎಲ್ಲಾದರೂ ಕದಡಿ, ಗೆರೆಯಾಚೆಗೆ ಸರಿಯಿತೇ…?

ನಿನ್ನೆ ಅವಳು ಅರಳಿಸಿದ ಖುಷಿಯ ಹೂವುಗಳು
ಇಂದು ಅವನು ಬಿಡಿಸಿಟ್ಟ ಚಿತ್ರ
ಎಲ್ಲಿಯ ಹೂವು… ಎಲ್ಲಿಯ ಚಿತ್ರ…!

Leave a Reply