ಅಣ್ಣನ ‘ವಾರ್ತೆ’ ಕೇಳುವ ಅಭಿಲಾಷೆ ಮಾತ್ರ ಪೂರ್ತಿ ಈಡೇರಲಿಲ್ಲ..

ಆದರೆ ಅಣ್ಣನ ‘ವಾರ್ತೆ’ ಕೇಳುವ ಅಭಿಲಾಷೆ ಮಾತ್ರ ಪೂರ್ತಿ ಈಡೇರಲಿಲ್ಲ.

ಮನೆಗೆ ಸುತ್ತು ಮುತ್ತಿನಿಂದ ಹಲವು ಜನ ಟಿ ವಿ ನೋಡೋದಕ್ಕೆ ಬರ್ತಿದ್ದರು. ಆಗ ಕನ್ನಡ ಬರೋದೂ ಅಪರೂಪ. ಶುಕ್ರವಾರ ಚಿತ್ರಮಾಲಾ ಅಂತ ಡಿ.ಡಿ.ಯಲ್ಲಿ ಬರ್ತಿತ್ತು. ಅದರಲ್ಲಿ ಒಂದು ಕನ್ನಡ ಹಾಡು ಇರ್ತಿತ್ತು. 7 ನಿಮಿಷದ್ದು, ಅದು ಬಿಟ್ಟರೆ ರವಿವಾರ ಬೆಳಿಗ್ಗೆ ‘ರಂಗೋಲಿ’ಯಲ್ಲಿ ವರ್ಷಕ್ಕೆ ಒಂದೋ ಎರಡೂ ಬಾರಿ ಕನ್ನಡ ಹಾಡು. ಮತ್ತೆ ಎಲ್ಲಾದರೂ ಕಲಾತ್ಮಕ ಸಿನೆಮಾದ ವಿಭಾಗದಲ್ಲಿ ವರ್ಷಕ್ಕೆ ಒಂದೋ ಎರಡೋ ಕನ್ನಡ ಸಿನೆಮಾ. ಮೊದಲೇ ಇದು ಅರ್ಥ ಆಗ್ತಿರಲಿಲ್ಲ. ಅದರಲ್ಲೂ ‘ಕಪ್ಪು ಬಿಳುಪು’ ಸಿನೆಮಾ. ಕರೆಂಟ್ ಇದ್ದಾಗ ಸಿಗ್ನಲ್ ಇರ್ತಿರಲಿಲ್ಲ. ಸಿಗ್ನಲ್ ಇದ್ದಾಗ ಕರೆಂಟ್ ಇರ್ತಿರಲಿಲ್ಲ. ಕೆಲವು ಬಾರಿ ಗಾಳಿಗೆ ಆ್ಯಂಟೆನಾ ತಿರುಗಿ ಟಿ.ವಿ.ಯಲ್ಲಿ ಮಂಡಕ್ಕಿ ಮಾತ್ರ ಬರ್ತಿತ್ತು. ಆಗ ಅಣ್ಣನ ಇಂಗ್ಲಿಷ್ ವಾರ್ತೆಗೆ ಯಾವ ಬಾಧಕವೂ ಇರಲಿಲ್ಲ.

ಆಮೇಲೆ ಕಲರ್ ಟಿ.ವಿ. ಮತ್ತು ಕೇರಿಗೆಲ್ಲಾ ಸೇರಿ ‘ಡಿಶ್’ ಬಂದ ಮೇಲೆ ಕಷ್ಟ ಶುರು ಆಯ್ತು. ಯಾವ ಯಾವಗ್ಲೋ ಸಂಜೆ 6 ಗಂಟೆಯಿಂದ 9 ಮತ್ತು 9.30 ರಿಂದ ರಾತ್ರಿ ಮುಗಿಯುವವರೆಗೂ ವಿ.ಸಿ.ಡಿ. ತಂದು ಸಿನೆಮಾ ಹಾಕ್ತಿದ್ದರು. ಆಗ ಒಂದು ಕ್ಯಾಸೆಟ್ಟಿಗೆ 10ರೂ. ವಿ.ಸಿ.ಡಿ.ಗೆ 50-75 ರೂ. ಬಾಡಿಗೆ. ಅದರ ಪೂರ್ಣ ಸದುಪಯೋಗಕ್ಕಾಗಿ ದಿನಕ್ಕೆ 3-3 ಸಿನೆಮಾ ಹಾಕವುದೂ ಇತ್ತು. ಈ ಸಿನೆಮಾ ನೋಡಲು ಮನೆಯ ಸುತ್ತ ಮುತ್ತಲಿನವರು ಬರ್ತಿದ್ದರು. ಟಿ.ವಿ. ಇಟ್ಟ ಕೋಣೆ ಪೂರ್ತಿ ತುಂಬಿ ಹೊರಗೆ ಕಿಟಕಿಯಿಂದಲೂ ನೋಡುತ್ತಿದ್ದರು.

ಅತಿಥಿ ಸತ್ಕಾರದ ಭಾಗವಾಗಿ ನಾವು ಟಿ.ವಿ. ನೋಡುವುದು ಬಿಟ್ಟು ಹೊರಗೆ ಕುಳಿತುಕೊಂಡಿದ್ದೂ ಇದೆ. ಆದರೆ ನಿದ್ದೆ ಮಾಡುವಂತಿಲ್ಲ. ಸುಮಾರು ಅರ್ಧ ಕಿ.ಮೀ. ದೂರ ‘ಡಿಶ್’ ಇರುವುದರಿಂದ ಅಲ್ಲಿಂದ ಕೇಬಲ್ ತರಲಾಗಿತ್ತು. ಅಡಿಕೆ, ತೆಂಗು ಮತ್ತು ಗೇರು ಬೀಜದ ಮೂಲಕ ಹಾಯ್ದು ಬಂದಿತ್ತು. ಎಲ್ಲಾದರೂ ರಾತ್ರಿ ತೆಂಗಿನ ಹೆಡೆಯಾಗಲೀ ಬಿದ್ದರೆ ಕೇಬಲ್ ಕಟ್ ಆಗ್ತಿತ್ತು. ಅಥವಾ ಯಾರಾದರೂ ಬೇಕೆಂತಲೇ ಕಟ್ ಮಾಡ್ತಿದ್ದರು.

ಹಾಗೇನಾದ್ರೂ ಆಗಿ ಟಿ.ವಿ. ಬಂದ್ ಆದ್ರೆ ನಾವೇ ಆ ರಾತ್ರಿ ಹೋಗಿ ಕೇಬಲ್ ಕೂಡಿಸಿ ಬರಬೇಕಾಗಿತ್ತು. ನನ್ನತ್ರ ಆಗೋದಿಲ್ಲ ಅಂತ ಹೇಳಿದರೆ ಬಂದ ಜನರಿಗೆ ಬೇಸರ ಆಗ್ಬಿಟ್ರೆ. ತಾವು ಬರೋದೇ ಇವರಿಗೆ ಇಷ್ಟ ಇಲ್ಲ ಅನ್ನಿಸಿ ಬಿಟ್ರೆ….. ಅಂತ ರಾತ್ರಿ ಡ್ಯೂಟಿ ಮಾಡೋದು.

ರಾಜಕುಮಾರನ ಸಿನೆಮಾ ಹಾಕೋ ದಿನವಂತೂ ನಮ್ಮ ಅಕ್ಕನಿಗೆ ಸಂಭ್ರಮವೋ ಸಂಭ್ರಮ. ಅವಳ ಸಂಬಂಧಿಕರಿಗೆ, ಗೆಳತಿಯರಿಗೆ ಹೇಳಿ ಕಳಿಸೋಳು. ಪ್ರಾರಂಭ ಆಗಿದ್ದಾಗೆ ಹೊರಗೆ ಬಂದು ಕೂ…… ಹಾಕೋಳು, ಯಾರು ಬರ್ದಿದ್ರೂ ಅವಳಿಗೆ ಪಕ್ಕದ ಮನೆ ತಂಗಿ (ಶಕುಂತಲಾ) ಸಣ್ಣ ತಂಗಿ (ಜ್ಯೋತಿ) ಗೌರಿ, ಗಂಗೆ ಬರಲೇ ಬೇಕಾಗಿತ್ತು. ಎಲ್ಲಾದ್ರೂ ಡಿ.ಡಿ. ಚಾನೆಲ್ಲಿನಲ್ಲಿ ಕನ್ನಡ ಹಾಡು ಬಂದ್ರೆ ಹೊರ ಹೋಗಿ ಜೋರಾಗಿ ಕರೆಯೋಳು. ಆಗ ರಾಮಾಯಣ, ಮಹಾಭಾರತ ಧಾರವಾಹಿ ಬರೋ ಕಾಲ ಅದು. ಅದಕ್ಕೂ ಆಕೆ ಕರೆದು ಕೂಡ್ರಿಸಿ ಕೊಳ್ತಿದ್ದಳು. ಆಗೆಲ್ಲಾ ಅಣ್ಣ ತಮಾಷೆಯಾಗಿ ನಗ್ತಾ ಕೂತಿರ್ತಿದ್ದ.

ಯಾವಾಗಲೂ ರಾತ್ರಿ ವಾರ್ತೆ ಬರೋ ಟೈಂಗೆ ಮೊದಲ ಸಿನೆಮಾ ಮುಗ್ಸೋದು. ಹೋಗುವವರು “ಮಾಸ್ತರ್ರೆ 3 ತಾಸಿಂದ ಟಿ.ವಿ. ಹಚ್ಕೊಂಡಿದೆ. ಹೀಟಾಗ್ಬಿಡ್ತದೆ ಆಫ್ ಮಾಡಿಡಿ. ಹೇಗೂ ಮತ್ತೆ 9.30ಕ್ಕೆ ಸಿನೆಮಾ ಹಚ್ಬೇಕಲ್ಲಾ. ನಿಮ್ಮ ಟಿ.ವಿ. ಹಾಳಾಗ್ಬಾರ್ದು” ಎಂದು ಪುಕ್ಕಟೆ ಉಪದೇಶ ಮಾಡಿ ಮನೆಗೆ ಹೋಗ್ತಿದ್ದರು. ನಮಗೂ ಇದು ಹೌದೆನಿಸಿ ವಾರ್ತೆ ಬರುವಾಗ ಟಿ.ವಿ. ಆಫ್ ಮಾಡಿಡುವುದು ಕೆಲವು ದಿನ ಅನಿವಾರ್ಯ ಆಗ್ತಿತ್ತು.

ಅಣ್ಣನ ಓದಿಗಂತೂ ಇದು ಬಹುಮಟ್ಟಿಗೆ ತೊಂದರೆ ಆಗ್ತಿತ್ತು. ಒಳಗಡೆ ಟಿ.ವಿ. ಸೌಂಡು, ಹೊರಗೆ ಬಂದವರು ಒಂದಿಷ್ಟು ಸುದ್ದಿ ಹೇಳ್ತಿದ್ದರು. ಯಾವ ಸುದ್ದಿಯೂ ಕೆಲಸಕ್ಕೆ ಬಾರದು. ಆದರೆ ಬಂದವರೊಂದಿಗೆ ಮಾತನಾಡದಿರುವಂತಿಲ್ಲ. ಇವನ ಅವಸ್ಥೆ ನೋಡಿ ನಮಗೇ ಅಯ್ಯೋ ಅನ್ನಿಸುತ್ತಿತ್ತು.

‘ಓದಿಗೆ ತುಂಬಾ ತೊಂದರೆ ಆಗ್ತದಾ?’ ಎಂದು ಕೇಳಿದರೆ ಇರಲಿಬಿಡು. ನನ್ನ ಪಾಡಿಗೆ ನಾನು ಓದು, ಬರಹ ಮಾಡ್ಕೋತೇನೆ. ಪಾಪ! ಅವರು ಟಿ.ವಿ. ನೋಡಲಿ. ಅವರಲ್ಲಿ ಕೊಂಡುಕೊಳ್ಳೋ ಸಾಮರ್ಥ್ಯ ಇದ್ದಿದ್ದರೆ ಅವರು ನಮ್ಮನೇಗೆ ಬರ್ತಿದ್ರಾ. ಅವರಿಗೊಂದು ಮನರಂಜನೆ ನೋಡ್ಲಿ ಬಿಡು. ನಮ್ಮನೆ ಟಿ.ವಿ. ಒಂದಿಷ್ಟು ಜನಕ್ಕೆ ಉಪಯೋಗ ಆಯ್ತಲ್ಲಾ. ಕೆಲವರಂತೂ ದಿನನಿತ್ಯ ಜಗಳ ಮಾಡಿಕೊಳ್ಳೋ ಅಕ್ಕಪಕ್ಕದ ಮನೆಯವರು ಇಲ್ಲಿ ಬಂದು ಒಟ್ಗೆ ಕೂತು, ಒಟ್ಗೆ ನಗಾಡಿ, ವಾಪಾಸಾಗ್ತರಲ್ಲ. ಅಷ್ಟರಮಟ್ಟಿಗೆ ಅವರ ದ್ವೇಷ ಮರೆತಾರೆ ಅನ್ನೋದು ಮುಖ್ಯ. ಎಂದು.

ಟಿ.ವಿ. ತಂದದ್ದರಿಂದ ತನ್ನ ಓದಿಗಾದ ಸಮಸ್ಯೆ ಮರೆತು ಊರ ಜನರಿಗಾದ ಅನುಕೂಲವನ್ನೇ ಸಾರ್ಥಕವೆಂದು ಭಾವಿಸಿ ಆತ ಬಹುಶಃ ಒಂದೇ ಒಂದು ಸಿನೆಮಾವನ್ನೂ ನೋಡಿಲ್ಲ.

ಬಹುಶಃ ಆತ ನೋಡಿದ ಒಂದೇ ಒಂದು ಧಾರವಾಹಿಯೆಂದರೆ ಅದು ‘ಮುಕ್ತ ಮುಕ್ತ’ ಇರಬೇಕು. ಅದರಲ್ಲೂ ಟಿ.ಎನ್. ಸೀತಾರಾಮ್ ಅವರ ಆ ಧಾರವಾಹಿಯ ಕೋರ್ಟ್ ಸೀನನ್ನು ಆತ ಎಂದೂ ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ಹಲವು ಬಾರಿ ಆರ್ಟ್  ಫಿಲ್ಮ್ ನೋಡಲು ಒತ್ತಾಯ ಪೂರ್ವಕವಾಗಿ ಕೂಡ್ರಿಸಿಕೊಂಡರೂ ಅರ್ಧ ಮುಕ್ಕಾಲು ಗಂಟೆಯಲ್ಲಿ ಎದ್ದು ಹೋಗಿ ಪುಸ್ತಕ ಹಿಡಿದು ಕುಳಿತುಕೊಂಡು ಬಿಡುತ್ತಿದ್ದ.

ಮತ್ತೆ ಕೇಳಿದರೆ…. ಹೌದು… ಚೆನ್ನಾಗಿದೆ. ಆದರೆ 2-3 ತಾಸ ಸಮಯ ಹಾಳಾಗುತ್ತದೆ ಎನ್ನುತ್ತಿದ್ದ. ಟಿ.ವಿ. ನೋಡಲು ಎಂದೂ ನಮಗೆ ತೊಂದರೆ ಮಾಡಿದ್ದಿಲ್ಲ. ಹಾಗೆ ಅವನೂ ಟಿ.ವಿ. ನೋಡುವ ತೊಂದರೆ ತೆಗೆದುಕೊಳ್ಳಲಿಲ್ಲ. ಆಮೇಲೆ ಸಾವಕಾಶ ಎಲ್ಲರಿಗೂ ಟಿ.ವಿ. ಬೇಸರ ಬಂತು. ಹಾಗೆ ಹಲವರ ಮನೆಗೆ ಟಿ.ವಿ. ಬಂತು. ನಮ್ಮ ಮನೆಯ ಜನಸಂದಣಿಯೂ ಕಡಿಮೆ ಆಯ್ತು. ಕೆರೆಕೋಣದ ಮನೆ ಬಿಟ್ಟು ಬರುವಾಗ ಆ ಟಿ.ವಿ.ಯನ್ನು ನಮ್ಮ ಮನೆಯ ಕೆಲಸಕ್ಕೆ ಬರುತ್ತಿರುವ ಸತೀಶನಿಗೆ ಕೊಟ್ಟು ಬಂದಾಯ್ತು. ಅದರೊಂದಿಗೆ ಇರುವ ಡಿಶ್ ಕೂಡ.

ಸಿದ್ದಾಪುರಕ್ಕೆ ಬಂದಾಗ ಹೊಸ ಟಿ.ವಿ. ಅದೂ ಬೇಸರ ಬಂದು ಈಗ ಮನೆಯಲ್ಲಿ ಟಿ.ವಿಯೂ ಇಲ್ಲ. ಯಮುನಾ ಜಪಾನಿಗೆ ಹೋಗಿ ಬರುವಾಗ ತಂದ ರೇಡಿಯೋ ಇದೆ ಅಷ್ಟೇ.

2 comments

  1. ಈ ಮಾಲಿಕೆಯ ಲೇಖನಗಳನ್ನು ಓದಿದಾಗೆಲ್ಲ ಓದಿನ ತೃಪ್ತಿ ದಕ್ಕುತ್ತದೆ. ಬಹು ಆರ್ದ್ರ ಬರಹಗಳು.

Leave a Reply