ನಾನೂ ಅವನೂ ಮಾತೇ ನಿಲ್ಲಿಸಿ ‘ಗೋಡೆಗೆ ಬರೆದ ಚಿತ್ರ’ಗಳಂತಾಗಿ ಬಿಟ್ಟಿದ್ದೆವು..

ಗೋಡೆಗೆ ಬರೆದ ನವಿಲು- ಸಂದೀಪ ನಾಯಕ

ಅದೊಂದು ದಿನ ಮಧ್ಯಾಹ್ನ ಅಜೆಂಟ್ ಏನೋ ತರೋದಿದೆ ಎಂದು ಮಧ್ಯಾಹ್ನ ಶಾಲೆ ಬಿಟ್ಟಾಗ ಮನೆಗೆ ಬಂದೆ. ನನ್ನ ಮಾಸ್ಟ್ರೋ ನಿಲ್ಲಿಸಿ ಒಳಗೆ ಬಂದು ಬ್ಯಾಗ್ ಹುಡುಕಿದರೆ ಕೀಲಿ ಕೈ ಮಾತ್ರ ಎಲ್ಲೂ ಸಿಗುತ್ತಿಲ್ಲ.

ಇಡೀ ಬ್ಯಾಗಿನಲ್ಲಿದ್ದ ಎಲ್ಲವನ್ನೂ ಕೆಳಗೆ ಸುರಿದು ಹುಡುಕಿದ್ದಾಯ್ತು. ಒಂದೆರಡು ಚಾಕಲೇಟ್ ಗಳು, ಬೆಳಿಗ್ಗೆಯಷ್ಟೇ ಯಾವುದೋ ಹುಡುಗ ತಂದುಕೊಟ್ಟ ಚಂದದ ದೊಡ್ಡ ದೊಡ್ಡ ಎರಡು ಕವಡೆಗಳು, ಗಮ್ ಟೇಪ್, ಕತ್ತರಿ, ರಬ್ಬರ್, ಪೆನ್ಸಿಲ್ ಪೆನ್ನು ಕೊನೆಗೆ ಹೋಗಲಿ ಎಂದರೆ ನನ್ನ ಮರ್ಯಾದೆ ತೆಗೆಯಲು ಎಂಬಂತೆ ಕಾದು ಕುಳಿತಿದ್ದ ಹೊಚ್ಚ ಹೊಸ ಓಪನರ್ ಇರುವ ಕೀ ಬಂಚ್, ಹಿಂಬದಿಯಲ್ಲಿ ಎರಡೆರಡು ಸಾಲು ಬರೆದು ಮುಂದೆಂದಾರೂ ಕವನವನ್ನು ಪೂರ್ತಿ ಮಾಡಿದರಾಯಿತು ಎಂದು ಎಸೆಯಲೂ ಆಗದಂತೆ ಕಾಪಿಟ್ಟುಕೊಂಡ ಶಾಯಿ ಹರಡಿ ಹೋದ ಎಂದೋ ಎಲ್ಲಿಗೋ ಹೋಗಿದ್ದ ಬಸ್ ಟಿಕೆಟ್ ಎಲ್ಲವೂ ತಾ ಮುಂದೆ ತಾಮುಂದೆ ಎಂದು ಬ್ಯಾಗ್‌ನಿಂದ ಹೊರಬಿದ್ದವು.

ಅಕ್ಕಪಕ್ಕ ಯಾರಾದರೂ ನೋಡುತ್ತಿದ್ದಾರೋ ಎಂದು ಕಳ್ಳ ಕಣ್ಣಿನಿಂದ ಅತ್ತಿತ್ತ ನೋಡಿ ಲಗುಬಗೆಯಿಂದ ಎಲ್ಲವನ್ನೂ ಮತ್ತೆ ಬ್ಯಾಗ್ ಗೆ ಸೇರಿಸಿದೆ. ಆದರೆ ನಾನು ಹುಡುಕುತ್ತಿದ್ದ ಮನೆ ಕೀ ಮಾತ್ರ ಸಿಗಲೇ ಇಲ್ಲ. ಹಾಗಾದರೆ ಯಾವತ್ತೂ ಬ್ಯಾಗ್‌ನಲ್ಲಿಯೇ ಇರುವ ಕೀ ಎಲ್ಲಿ ಹೋಯ್ತು ಎಂಬ ಚಿಂತೆ ಕಾಡ ತೊಡಗಿತು. ಬಹುಶಃ ಬ್ಯಾಗಿಂದ ಹೆಡ್ ಮಾಸ್ಟರ್‌ ರು ಕೇಳಿದ ಕಾಗದ ಪತ್ರ ತೆಗೆಯುವಾಗ ಟೇಬಲ್ ಮೇಲೆ ಬಿಟ್ಟು ಬಿಟ್ಟೆನೇನೋ ಎಂದು ನೆನಪು ಮಾಡಿಕೊಳ್ಳ ತೊಡಗಿದರೂ ತಕ್ಷಣಕ್ಕೆ ನೆನಪಾಗಲಿಲ್ಲ. ಇವರಿಗೆ ಫೋನ್ ಮಾಡಿ ಬಾ.. ಎಂದು ಕರೆದು ಅಷ್ಟು ದೂರದಿಂದ ಬೈಯ್ದುಕೊಳ್ಳುತ್ತ ಬಂದು ಹೋಗುವುದಕ್ಕಿಂತ ನಾನೇ ಶಾಲೆಗೆ ಹೋಗಿ ಟೇಬಲ್ ಮೇಲೆಯೇ ಬಿಟ್ಟಿರುವ ಗುಮಾನಿ ಇರುವುದರಿಂದ ನಾನೇ ಕೀಲಿ ಕೈಯ್ಯನ್ನು ತೆಗೆದುಕೊಂಡು ಬರುವುದು ಸುಲಭ ಎನ್ನಿಸತೊಡಗಿತ್ತು.

ಮತ್ತೊಂದು ಸಲ ಇಡೀ ಬ್ಯಾಗ್‌ನ್ನು ಜಾಲಾಡಿದ ನಂತರ ಅಂತೂ ಕೀಲಿ ಬ್ಯಾಗ್‌ ನಲ್ಲಿ ಇಲ್ಲ ಎಂದು ನಾನೂ  ತಿರುಗಿ ಶಾಲೆಗೆ ಹೊರಟೆ. ಅಷ್ಟರಲ್ಲಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿ ಊಟವೂ ಮುಗಿದು ನಾನು ಉಪವಾಸ ಎಂಬಂತಾಗಿತ್ತು. ಸುಮ್ಮನೆ ಖುರ್ಚಿಯಲ್ಲಿ ಕುಳಿತವಳೇ ನನ್ನ ಟೇಬಲ್ ಹುಡುಕಲಾರಂಬಿಸಿದೆ. ಟೇಬಲ್ ಮೇಲೂ ಕೀಲಿ ಇಲ್ಲ. ಹಾಗಾದರೆ ಹೋಗಿದ್ದಾದರೂ ಎಲ್ಲಿಗೆ…? ಚುರುಗುಟ್ಟುತ್ತಿರುವ ಹೊಟ್ಟೆ ಮತ್ತು ಸಿಗದ ಕೀಲಿ ನನ್ನ ಸಹನೆಯನ್ನು ಪರೀಕ್ಷಿಸುವಂತೆ ಕಾಣುತ್ತಿತ್ತು. ಹಾಳಾಗಲಿ ಎಂದು ನನ್ನ ಕೆಲಸ ಮಾಡಲು ಪ್ರಾರಂಭಿಸಿದೆ. ಒಂದು ಕ್ಲಾಸೂ ಮುಗಿಸಿ ಬಂದೆ ಚುರುಗುಟ್ಟುವ ಹೊಟ್ಟೆ  ತಲೆಯನ್ನು ತಿರುಗಿಸುವಂತಾಗಿತ್ತು. ಯಾರೋ ನೋಟ್ ಬುಕ್ ಚೆಕ್ ಮಾಡಲು ಇಟ್ಟು ಹೋಗಿದ್ದರು.  ಕೆಂಪು ಇಂಕಿನ ಪೆನ್ ಬೇಕು ಎಂದು ಬ್ಯಾಗ್ ನಲ್ಲಿ ಕೈ ಹಾಕಿದವಳಿಗೆ ಮನೆಯ ಕೀಲಿ ಸಿಕ್ಕಿತ್ತು. ಎಷ್ಟು ಕೋಪ ಬಂದಿರಬೇಡ ನೀವೇ ಹೇಳಿ. ಒಂದು ಕ್ಷಣ ನನ್ನ ಮೈ ನಾನೇ ಪರಚಿಕೊಳ್ಳುವಂತಾಯ್ತು. ಆ ಘಟನೆ ನೆನಪಾದಾಗಲೆಲ್ಲ ನನಗೆ ನನ್ನ ಬಗ್ಗೇ ಕೋಪ.  ಮತ್ತೊಮ್ಮೊ ನನ್ನ ಬಗ್ಗೆ ನಾನು ಕೋಪಿಸಿಕೊಳ್ಳುವಂತೆ ಮಾಡಿದ್ದು ಸಂದೀಪ ನಾಯಕರ ‘ಗೋಡೆಗೆ ಬರೆದ ನವಿಲು’ ಕಥಾ ಸಂಕಲನದ ‘ಬಾಗಿಲ ಮುಂದೆ’ ಎಂಬ ಕಥೆ.

ಬಾಗಿಲ ಕೀಲಿಯನ್ನು ಬ್ಯಾಗಿನಲ್ಲಿ ಇಟ್ಟುಕೊಂಡು ಇಲ್ಲ ಎಂದು ತಿಳಿದು ಇಡೀ ರಾತ್ರಿಯನ್ನು  ಮನೆಯಿಂದ  ಹೊರಗೆ ಕಳೆದ ಜಿ ಕೆ ಯ ಕಥೆ ಇಲ್ಲಿದೆ. ಒಂದು ಬೀಗದ ಕೈ ನೆಪವಾಗಿಟ್ಟುಕೊಂಡು ಇಡೀ ಸಮಾಜದ ಒಳತೋಟಿಯನ್ನು ಕಟ್ಟಿಕೊಡುವ ಈ ಕಥೆಯಲ್ಲಿ ಕಾಳು ಹಾಕುವ ಗಂಡಸರ ಕುರಿತು ಒಂದು ರೀತಿಯ ಉದಾಸೀನ ಭಾವದಲ್ಲಿ ಹೇಳುತ್ತಾ ಹೋಗುವ ಸಂದೀಪರ ನಿರೂಪಣಾ ಕ್ರಮ ಗಮನ ಸೆಳೆಯುವಂತಿದೆ.

ನಾನಾಗ  ಮೊದಲ ಪಿ ಯು ಸಿಗೆ ಪ್ರವೇಶ ಪಡೆದ ಹೊಸತು. ಗೆಳತಿ ರಾಜಿ “ಅಲ್ನೋಡು ಕವಿ” ಎಂದು ಬೆಳ್ಳನೆಯ ತೆಳ್ಳನೆಯ ವ್ಯಕ್ತಿಯೊಬ್ಬನನ್ನು ತೋರಿಸಿದ್ದಳು. ಕಂಡವರಿಗೆಲ್ಲ ಹೆಸರು ಹಾಕುವ ಪ್ರವೃತ್ತಿಯನ್ನು ಆಗಲೇ ಬೆಳೆಸಿಕೊಂಡಿದ್ದ ನಾನು “ಆಹಾ ಬೆಳಂಜಿ” ಎಂದಿದ್ದೆ. “ಸುಮ್ನಿರು, ಅವಂಗೆ ಈಗಾಗಲೇ ಹಲ್ಲಿ ಅಂತಾರೆ. ನೀನು ಮತ್ತೆ ಬೇರೆ ನಾಮಕರಣ ಮಾಡಬೇಡ” ಎಂದಿದ್ದಳು. ನಾನು ನಕ್ಕಿದ್ದೆ. ನಂತರದ ಕೆಲವು ದಿನಗಳಲ್ಲಿ ಕವಿಗೆ ಯಾವುದೋ ಪ್ರಶಸ್ತಿ ಬಂತಂತೆ.. ನೋಟಿಸ್ ಬೋರ್ಡ ನೋಡಿ ಮಾತನಾಡಿಕೊಂಡಿದ್ದೆವು. ಇಡೀ ಕಾಲೇಜೂ ಕವಿ ಎಂದು ಕರೆಯುತ್ತಿದ್ದರೆ ನಮಗೆ ಆತನ ಬಗ್ಗೆ ವಿಚಿತ್ರ ಕುತೂಹಲ. ಅದ್ಯಾಕೋ ಈ ಕವಿ ಪರಿಚಯವೂ ಆದ. ಪರಿಚಯದೊಂದಿಗೆ ಸ್ನೇಹವೂ. ಕೊನೆಗೆ ನೀನೂ ಕವನ ಬರೆಯೇ ಎಂದು ಸಣ್ಣಗೆ ವರಾತೆ ಹಚ್ಚುವಷ್ಟು ಆತ್ಮೀಯನೂ..

ಈ ಮೊದಲೇ ಕವಿತೆ ಬರೆಯುತ್ತಿದ್ದ ನಾನು ಆತ ಕವಿ ಎಂದಾಗ ಖುಷಿಯಾಗಿತ್ತು. ಹೀಗಾಗಿ ಆತ ಏನು ಬರೆಯುತ್ತಿದ್ದಾನೆ ಎಂಬುದರ ಬಗ್ಗೆ ಒಂದಿಷ್ಟು ಕುತೂಹಲ. ಮಧ್ಯದಲ್ಲಿ ಒಂದಿಷ್ಟು ಪ್ರಶಸ್ತಿ ಪಡೆದ ಆತನ ಮೇಲೆ ಕಾಂಪಿಟೇಶನ್ ಗೆ ಅಂತಾನೇ ಒಂದಿಷ್ಟು ಕವನ ಬರೆದೆನಾ? ಗೊತ್ತಿಲ್ಲ. ಅಂತೂ ಕವನ ಬರೆದದ್ದಂತೂ  ನಿಜ. ಇದರ ಮಧ್ಯೆ ಆತ ಏನಾದರೂ ಸಲಹೆ ಕೊಟ್ಟರೆ ನನ್ನ ಕವನ ನನ್ನದು ಎನ್ನುವ ಅಧಿಕಪ್ರಸಂಗಿತನ ಬೇರೆ.

ಅದೇನಾಯಿತೋ ಗೊತ್ತಿಲ್ಲ, ಪಕ್ಕಾ ಜಗಳಗಂಟಿಯಾದ ನನ್ನ ಬಳಿ ಆತ ಅದಾವುದೋ ವಿಷಯಕ್ಕೆ ಕ್ಯಾತೆ ತೆಗೆದಿದ್ದ. ಅಲ್ಲಿಂದ ಮುಂದೆ  ನಾನೂ ಅವನೂ ಮಾತೇ ನಿಲ್ಲಿಸಿ ಗೋಡೆಗೆ ಬರೆದ ಚಿತ್ರಗಳಂತಾಗಿ ಬಿಟ್ಟಿದ್ದೆವು. ಎಷ್ಟೆಂದರೆ ಆತ ಸೀದಾ ಮುಖದ ಎದುರೇ ಬಂದರೂ ಪರಿಚಯವೇ ಇಲ್ಲದಂತೆ ಮುಖ ತಿರುವಿ ಹೋಗುವಷ್ಟು. ಆತ ಬೆಂಗಳೂರಿನಲ್ಲೆಲ್ಲೋ ಪತ್ರಿಕೆಯೊಂದಕ್ಕೆ ಸೇರಿದ ಸುದ್ದಿ ಬಂದ ಬೆನ್ನಿಗೇ ಆತ ಅದನ್ನು ಬಿಟ್ಟ ಸುದ್ದಿಯೂ ಬಂದಿತ್ತು. ಕೇಳಿದ್ದಕ್ಕೆ ಸ್ವೀಟ್ ಇಷ್ಟ ಅಂತಾ ಸ್ವೀಟ್ ಅಂಗಡಿಲೇ ನೌಕರಿಗೆ ಸೇರಿದ ಹಾಗಾಯ್ತು ವಾಕರಿಗೆ ಬಂದು ಹೋಗಿದೆ ಎಂದು ಅವನು ಹೇಳಿಕೊಂಡು ನಕ್ಕ ಸುದ್ದಿಯೂ. ಅದರ ನಂತರವೂ ಮತ್ತೆ ಆತ ಪತ್ರಿಕಾ ರಂಗವನ್ನೇ ಆಯ್ದುಕೊಂಡು ಬೆಂಗಳೂರೆಂಬ ಮಹಾನಗರವನ್ನು ಸೇರಿದ್ದ. “ನಿಮ್ಮ ಕವಿ ಸಿಕ್ಕಿದ್ದ” ಎಂದು ನನ್ನ ಅಣ್ಣ ಆಗೊಮ್ಮೆ ಈಗೊಮ್ಮೆ ಹೇಳುತ್ತಿದ್ದುದಷ್ಟೇ ಆತನ ಬಗ್ಗೆ ಸಿಗುತ್ತಿದ್ದ ಸುದ್ದಿ,  ಸುಮಾರು ಏಳೆಂಟು ವರ್ಷ ಮಾತು ಬಿಟ್ಟವರು ಒಂದು ದಿನ ಅದಾವುದೋ ಸಾಹಿತ್ಯಿಕ ಕಾರ್ಯಕ್ರಮದಲ್ಲಿ ನಮ್ಮ ನಡುವೆ ಏನೂ ಆಗಲೇ ಇಲ್ಲ ಎಂಬಂತೆ  ಮತ್ತೆ ಮಾತು ಪ್ರಾರಂಭಿಸಿದ್ದೆವು.

ಅಂಕೋಲಾದ ಸಹಜ ಹುಡುಗಾಟಿಕೆಯ ನಡುವೆಯೂ ತೀರಾ ಗಂಭೀರವಾಗಿರುವಂತೆ ಕಾಣುವ ಸಂದೀಪ ತನ್ನ ಕಥೆಗಳಲ್ಲಿ ಸಹಜತೆಯನ್ನೇ ಉಸಿರಾಡುವುದು ಕಥೆಯನ್ನು ಓದಿದ ತಕ್ಷಣವೇ ಗ್ರಹಿಸುವಂತಾಗುತ್ತದೆ. ಕವಿತೆಗಳಿಂದ ಕಥೆಗಳ ಕಡೆ ಜಾರಿದ ಸಂದೀಪ ನಿಜಕ್ಕೂ ಒಳ್ಳೆಯ ನಿರ್ಧಾರವನ್ನೇ ತೆಗೆದುಕೊಂಡರು ಎನ್ನಬೇಕು. ಯಾಕೆಂದರೆ ಅವರ ಕಥೆ ಮತ್ತು ಕವಿತೆಗಳನ್ನು ನೋಡಿದರೆ ಅವರು ಕಥೆಗಾರರಾಗಲೆಂದೇ ಹುಟ್ಟಿದವರು ಎನ್ನುವಂತೆ ಕಥೆ ಬರೆಯುತ್ತಾರೆ.  ಕಥೆಗಳಲ್ಲಿ ಹರಿಯುವ ಉದ್ವೇಗವಿಲ್ಲದ ತಣ್ಣನೆಯ ಭಾವವೊಂದು ಸಂದೀಪನ ಮನಸ್ಥಿತಿಯಂತೆಯೇ  ನನಗೆ ಯಾವಾಗಲೂ ಭಾಸವಾಗುವುದು ಖಂಡಿತಾ ನನ್ನ ಭ್ರಮೆ ಇರಲಿಕ್ಕಿಲ್ಲ. ಎಲ್ಲಿಯೂ ತಾನು ಅನವಶ್ಯಕವಾಗಿ ಒಳ ಪ್ರವೇಶ ಮಾಡದೇ ಕಥೆಯನ್ನೇ ತನ್ನಷ್ಟಕ್ಕೆ ತಾನು ಮಾತನಾಡಲು ಮುಂದೆ ಮಾಡುವುದರಿಂದ ಈ ಕಥೆಗಳಿಗೆ ಇಂತಹುದ್ದೊಂದು ಬದ್ಧತೆ ಸಾಧ್ಯವಾಗಿದೆ. ಕವಿತೆಯನ್ನೇ ಉಸಿರಾಡಿಕೊಂಡಿದ್ದರಿಂದ ಈ ಕಥೆಗಳಿಗೊಂದು ಲಾಲಿತ್ಯವೂ ಇದೆ. ತನ್ನನ್ನು ತಾನೇ ಪ್ರೆಸೆಂಟ್ ಮಾಡಿಕೊಳ್ಳುವ ಈ ಕಥೆಗಳಲ್ಲಿನ ಗೇಯತೆಯೇ ಅದು ಓದುಗರನ್ನು ಸೆಳೆಯಲು ಇರುವ ಮುಖ್ಯ ಕಾರಣ ಎನ್ನುವಂತೆ ಮಾಡುತ್ತದೆ.

ಹಳ್ಳಿಯ ಜೀವನ ಅಥವಾ ಅಂಕೋಲಾ ಹಾಗೂ ಅದರ ಸುತ್ತುಮುತ್ತಲಿನ ಜನಜೀವನದ ಕುರಿತು  ಆಸಕ್ತಿ ಇರುವವರು ಓದಲೇ ಬೇಕಾದ ಪುಸ್ತಕ ಗೋಡೆಗೆ ಬರೆದ ನವಿಲು. ಹೀಗಾಗಿಯೇ ಈ ವಾರದ ರೆಕಮಂಡ್ ಗೆ ಇದು ತಕ್ಕ ಪುಸ್ತಕ.

ನನ್ನ ಅಮ್ಮ ಯಾವಾಗಲೂ ತಮ್ಮ ಸೋದರತ್ತೆ ಹೂ ಮಾರಿ ಚಿನ್ನ ಮಾಡಿಸಿಕೊಂಡ ಕಥೆ ಹೇಳುತ್ತಿರುತ್ತಾರೆ. ತಮ್ಮ ತೋಟದಲ್ಲಿ ಒಂದಿಷ್ಟು ಅಬ್ಬಲಿಗೆ ಗಿಡಗಳನ್ನು ಬೆಳೆಸಿದ್ದರು. ಅಬ್ಬಲಿಗೆ ಅಂದರೆ ಗೊತ್ತಲ್ಲ. ನೀವೆಲ್ಲ ಕನಕಾಂಬರ ಎನ್ನುತ್ತೀರಲ್ಲ ಅದು.  ಅದನ್ನು ಹೂ ಮಾರುವವರಿಗೆ ಕೊಟ್ಟು ಒಂದಿಷ್ಟು ಹಣ ಮಾಡಿಕೊಳ್ಳುತ್ತಿದ್ದರು. ಇದು ಹೆಂಗಸರೇ ಮಾಡಿಕೊಂಡ ಉಪ ಉತ್ಪನ್ನವಾದುದರಿಂದ ಅದರ ಮೇಲೆ ಯಾವ ಗಂಡನಿಗಾಗಲಿ, ಉಳಿದವರಿಗಾಗಲಿ ಯಾವ ಅಧಿಕಾರವೂ ಇರಲಿಲ್ಲ. ಅದನ್ನೇ ಇಷ್ಟಿಷ್ಟೇ  ಕೂಡಿಟ್ಟು ಒಂದಿಷ್ಟು ಚಿನ್ನ ಮಾಡಿಸಿಕೊಂಡಿದ್ದರು. ಮತ್ತಾರೋ ತಮಗಷ್ಟೇ ಅಲ್ಲದೇ ತಮ್ಮ ಮಗಳಿಗೂ ಅದರಿಂದಲೇ ಚಿನ್ನ ಮಾಡಿಸಿ ಮದುವೆ ಮಾಡಿದ್ದ ಕಥೆಯೂ ನನಗೆ ನಮ್ಮ ಅಜ್ಜಿ ಮನೆಗೆ ಹೋದಾಗ ಸಿಗುತ್ತಿತ್ತು. . ಆಗ ಬಿಡಿ, ಚಿನ್ನ ಈಗಿನಷ್ಟು ದುಬಾರಿಯದ್ದಾಗಿರಲಿಲ್ಲ. ಅದರ ಬೆಲೆ ಗಗನ ಮುಖಿಯಾಗಿರಲಿಲ್ಲ. ಹೀಗಾಗಿ ಅದು ಸಾಧ್ಯವಾದ ಮಾತಾಗಿದ್ದರೂ ನಾನು ಅದನ್ನು ಖಡಾಖಂಡಿತವಾಗಿ ನಿರಾಕರಿಸುತ್ತಿದ್ದೆ. ಯಕಶ್ಚಿತ್ ಹೂ ಮಾರಿ ಚಿನ್ನ ಮಾಡಿಸಿಕೊಳ್ಳುವುದೆಂದರೆ ಅದೇನು ಸುಲಭದ ಮಾತೇ?

ಆದರೆ ನಂತರದ ದಿನಗಳಲ್ಲಿ ಅದು ನಿಜ ಎಂಬುದು ಅರಿವಿಗೆ ಬರತೊಡಗಿತು. ಹಿತ್ತಲಿನ ಪಾತ್ರೆ ತೊಳೆಯುವ ಕಲ್ಲಿನ ಬಳಿ ಒಂದಿಷ್ಟು ಅಬ್ಬಲಿಗೆ ಗಿಡ, ಬಟ್ಟೆ ತೊಳೆಯುವ ಕಲ್ಲಿನ ಬಳಿ ಮತ್ತೊಂದಿಷ್ಟು ಗಿಡ, ಬಚ್ಚಲಿನ ನೀರು ಹೋಗುವ ಜಾಗದ ಅಕ್ಕ ಪಕ್ಕದ ಜಾಗದಲ್ಲೂ ಅಬ್ಬಲಿಗೆ ಗಿಡಗಳು ಹಾಗೂ ಬಾಗಿಲಿನ ದಣಪೆಯ ಬಳಿ ಚಪ್ಪರದಂತೆ ಹಬ್ಬಿಸಿರುವ ಮಲ್ಲಿಗೆ ಬಳ್ಳಿ, ಬಸಲೆ ಚಪ್ಪರದ ಸಮೀಪವೂ ಅಬ್ಬಲಿಗೆ ಹಾಗೂ ಜಾಜಿ ಹೂವಿನ ಪೊದೆಗಳು. ಈಗಲೂ ನಮ್ಮ ಹಳ್ಳಿ ಹೆಂಗಸರು ಈ ಹೂಗಳನ್ನು ಹೂ ಮಾರುವ ಹೆಂಗಸಿಗೆ ಕೊಟ್ಟು ತಮ್ಮ ಮೇಲು ಖರ್ಚಿಗೆ ಹಣ ಮಾಡಿಕೊಳ್ಳುವುದನ್ನು ಗಮನಿಸಿದ್ದೇನೆ. ಅದರಲ್ಲೂ ಈ ಹೂ ಮಾರುವ ಹೆಂಗಸರಿಗಂತೂ ಕೆಲವು ಖಾಯಂ ವರ್ತನೆಯ ಮನೆಗಳಿರುತ್ತವೆ. ಅಂತಹ ಮನೆಗಳಿಗೆ ಪ್ರತಿ ದಿನ ಹೂ ಹಾಕುವುದೇ. ಬೇಡ ಎನ್ನುವ ಮಾತೇ ಇಲ್ಲ.

ಇನ್ನು ಬಸ್ ನಿಲ್ದಾಣದಲ್ಲೂ ಹೂ ಮಾರುವ ಹೆಂಗಸರು ಇರುತ್ತಾರೆ. ಬಸ್ ನ ಕಿಟಕಿಯ ಸಮೀಪ ಬಂದು ಹೂಂಗ್ ತಕಣ್ರಾ…” ಎನ್ನುತ್ತ, “ತಂಗಿ, ಗನಾ ಕೆಲ್ಸಕೆ ಹೋಗ್ವಾಗೆ ಹೂಂಗ್ ಮುಡ್ಕಣ್ದೇ ಹೋಗೂಕಾಗ, ಹತ್ತೇ ರುಪಾಯಿ, ಒಂದ್ ದಂಡಿ ಕೊಡ್ತಿ ಅಗಾ…” ಎನ್ನುತ್ತ ಹೂವು ಮಾರುತ್ತಿರುವುದನ್ನು ಕಾಣಬಹುದು. ಇಷ್ಟಾದರೂ ಅವರದ್ದೇ ಒಂದು ಸರಹದ್ದು ಇರುತ್ತದೆಯೇನೋ ಎಂಬ ಅಚ್ಚರಿ ನನಗೆ. ಯಾಕೆಂದರೆ “ಇದು ನನ್ನ ಟೈಮು, ನೀ ಎಂತಕ್ಕೆ ಈ ಹೊತ್ನಾಗೆ ಬಂದಿ…?” ಎಂದು ಜಗಳವಾಡುವುದನ್ನೂ ನೋಡಿದ್ದೇನೆ. ಸಂಕಲನದ ಮೊದಲ ಕಥೆ ‘ಆನೆ ಸಾಕಿದ ಮನೆಗೆ ಎರಡು ಹೂ ದಂಡೆ’ ಎನ್ನುವ ಕಥೆಯಲ್ಲಿಯೂ ನಾಗವೇಣಿ ಎಂಬ ಗಂಡ ಇಲ್ಲದ ಹೆಂಗಸೊಬ್ಬಳು ಹೂವು ಮಾರಿಯೇ ತನ್ನ ಜೀವನವನ್ನು ಕಟ್ಟಿಕೊಂಡಿದ್ದಾಳೆ. ಮಗಳನ್ನು ಒಂದು ಹಂತಕ್ಕೆ ಬೆಳೆಸಿದ್ದಾಳೆ. ಆಕೆಗೆ ಮಗಳ ಮದುವೆ ಮಾಡಬೇಕಿದೆ. ಆದರೆ ಪ್ರತಿದಿನ ಎರಡು ಹೂದಂಡೆ ಹಾಕಿಸಿಕೊಳ್ಳುತ್ತಿದ್ದ ಸಾಹುಕಾರರ ಮನೆಯ ಅಮ್ಮ ಇತ್ತೀಚಿನ ದಿನಗಳಲ್ಲಿ ಕಾಣುತ್ತಲೇ ಇಲ್ಲ.ಒಂದಾನೊಂದು ಕಾಲದಲ್ಲಿ  ಆ ಸಾಹುಕಾರರ ಮನೆಯಲ್ಲಿ ಆನೆ ಸಾಕಿದ್ದರು ಎಂಬುದೊಂದು ಹೆಗ್ಗಳಿಕೆಯಾದರೆ, ಆ ಮನೆಯ ಸೊಸೆಯಂದಿರು ಹಾಗೂ ಹೆಂಗಸರು ಹೂ ಮುಡಿಯದೇ ಬರಿ ತಲೆಯಲ್ಲಿ ಇದ್ದದ್ದೇ ಇಲ್ಲ ಎಂಬ ಮಾತೊಂದನ್ನು   ಪ್ರತಿಷ್ಟೆಯೆಂಬಂತೆ ಬಳಸುತ್ತಿದ್ದರು. ಆದರೆ ಆ ಸಾಹುಕಾರ ಅಮ್ಮ ಈ ಬಡ ನಾಗವೇಣಿಗೆ ಕೊಡಬೇಕಾದ ಹೂವಿನ ಬಾಕಿ ಹಣವೇ ಅದೆಷ್ಟೋ ಆಗಿಬಿಟ್ಟಿತ್ತು. ಮಗಳ ಮದುವೆ ನಿಶ್ಚಯಿಸಿಕೊಂಡ ನಾಗವೇಣಿ ಅಮ್ಮನ ಬಳಿ ಹಣ ಕೇಳಲು ಹೋದರೆ ಅವರು ಸಿಕ್ಕುವುದೇ ಇಲ್ಲ. ಕೊನೆಗೂ ಮುಖ ತೋರಿಸದೇ ಕಿಟಕಿಯ ಒಳಗಿಂದಲೇ ಒಂದಿಷ್ಟು ಚಿಲ್ಲರೆ ಕಾಸನ್ನು ಬಿಸಾಡಿ ನಾಗವೇಣಿಯನ್ನು ಕಳುಹಿಸಿ ಬಿಡುವುದು ಮೇಲ್ವರ್ಗದವರು ಕೆಳಸ್ಥರದ ಜನರನ್ನು ಶೋಷಿಸುವ ಪೂರ್ಣ ಪಾಠವನ್ನು  ಯಥಾವತ್ತಾಗಿ ಬಿಂಬಿಸುತ್ತದೆ.

ನಮ್ಮ ಮನೆಯ ಹತ್ತಿರ ಇರುವ ಹೆಂಗಸೊಬ್ಬಳಿಗೆ ಮಗನನ್ನು ಹೇಗಾದರೂ ಮಾಡಿ ಒಂದು ನೌಕರಿಗೆ ಸೇರಿಸುವ ಕಾತುರ. ಎಡವುತ್ತ ಕುಂಟುತ್ತ ಶಾಲೆ ಕಲಿಯಲು ಹಿಂದೇಟು ಹಾಕುತ್ತಿದ್ದ ಮಗನಿಗಾಗಿ ಆಕೆ ಕಂಡವರ ಮನೆಯ ಕೆಲಸ ಮಾಡುತ್ತ, ಻ವು ಹೇಳಿದ ಕೆಲಸವನ್ನೆಲ್ಲ ಮರು ಮಾತನಾಡದೇ ಪಾಲಿಸುತ್ತ ಇರುವವಳು. ತಾನು ಮಾಡಿದ ಕೆಲಸದಿಂದಾದರೂ ಆ ಮನೆಯವರು ಪ್ರಸನ್ನರಾಗಿ ತನ್ನ ಮಗನಿಗೆ ನೌಕರಿ ಅಂತಾಗಿ ಜೀವನದಲ್ಲಿ ನೆಲೆ ನಿಂತರೆ ಸಾಕು, ಜೀವನ ಹಸನಾಗುತ್ತದೆ ಎಂದು ನಂಬಿದವಳು. ಮೊನ್ನೆ ರೌದ್ರಾವತಾರ ತಾಳಿ ತಾನು ನಂಬಿದ ಮಾಲಿಕರ ಮನೆಯನ್ನು ಧಿಕ್ಕರಿಸಿ ಹೊರ ಬಂದಿದ್ದಳು. ಸಂಕಲನದ  ಇಲ್ಲಿ ಬಂದೆವು ಸುಮ್ಮನೆ ಎಂಬ ಕಥೆಯೂ ಇದನ್ನೇ ಹೇಳುತ್ತದೆ. ತಿಮ್ಮಕ್ಕತನ್ನ ಮಗ ಮೋಹನನಿಗೆ ಕೆಲಸವಾಗಲಿ ಎಂದು ಜಾಯಕ್ಕನ ಮನೆಯ ಎಲ್ಲ ಕೆಲಸ ಬೊಗಸೆ ಮಾಡಿಕೊಡುತ್ತ, ತಿಮ್ಮಕ್ಕ ಇಲ್ಲದಾಗ ಅವಳ ಮನೆ ಕಾಯಲು ತನ್ನ ಮಗ ಮೋಹನನ್ನು ಕಳುಹಿಸಿ ಕೊಡುಲೂ ಒಪ್ಪಿಕೊಳ್ಳುತ್ತಾಳೆ. ಜಾಯಕ್ಕನ ಅಳಿಯ ತನ್ನ ಮಗನಿಗೊಂದು ಕೆಲಸ ಕೊಡುತ್ತಾನೆ ಎಂಬ ನಂಬಿಕೆ ಅವಳಿಗೆ. ಆದರೆ ಆ ಅಳಿಯನಿಗೇ ನೆಟ್ಟಗೆ ಕೆಲಸ ಇಲ್ಲವೆಂದು ತಿಳಿದ ಮೇಲೆ ಮಗ ಆ ಕಡೆ ಹೋಗುವುದನ್ನು ವಿರೋಧಿಸುತ್ತಾಳೆ. ನಮ್ಮೆಲ್ಲರ ಬದುಕೂ ಹೀಗೆ. ಒಂದಲ್ಲ ಒಂದು ಆಮಿಷದಿಂದಲೇ ನಾವು ನಮ್ಮ ಸುತ್ತ ಮುತ್ತ ಇರುವವರನ್ನು ನೆಚ್ಚಿಕೊಳ್ಳುತ್ತೇವೆ. ಕಥೆಯ ಶೈಲಿ ನಿಜಕ್ಕೂ ಓದುಗರ ಗಮನ ಸೆಳೆಯುತ್ತದೆ.

ನನ್ನ ಅಜ್ಜಿಯ ಚಿಕ್ಕಮ್ಮ ವೆಂಕಮ್ಮಜ್ಜಿ ಎನ್ನುವವರಿದ್ದರು. ಅವರು ಕೊನೆಯ ಕಾಲದಲ್ಲಿ ನಮ್ಮ ಅಜ್ಜಿ ಮನೆಯ ಹತ್ತಿರವೇ ಮನೆ ಮಾಡಿದ್ದರು. ಸಾಯುವ ಸಂದರ್ಭದಲ್ಲೂ ತನ್ನ ಗಂಡನ ಕಡೆಯವರು ಬರಬಹುದು, ತಮ್ಮನ್ನು ಅವರ ಊರಿಗೆ ಕರೆಯಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ನನ್ನ ಅಜ್ಜ ಕೂಡ  ಕೊನೆಯ ಕ್ಷಣದಲ್ಲೂ ಅದೇ ಊರಲ್ಲಿದ್ದ ತನ್ನ ತಂಗಿ  ಬರಬಹುದು ಎಂದು ಕಾಯುತ್ತಿದ್ದರಂತೆ.

ಮರೆತು ಹೋದ ಸಂಬಂಧ ಮತ್ತು ಕರೆ ಹಾಗೂ ಸಹಿ ಎಂಬ ಮೂರು ಕಥೆಗಳು ಮಾನವೀಯ ಸಂಬಂಧಗಳ ಕುರಿತು ಮಾತನಾಡುತ್ತವೆ. ಅದರಲ್ಲೂ ಮರೆತು ಹೋದ ಸಂಬಂಧ ಎಂಬ ಕಥೆಯಲ್ಲಿ ತಾನು ಚಿಕ್ಕವರಿದ್ದಾಗ ಸಂಬಂಧಿಸಿದ ಅಜ್ಜಿ ಮನೆಯ ಕಡೆಯ ಮಾವನ ಕಥೆ. ಚಿಕ್ಕವನಿರುವಾಗ ಜೊತೆಗೆ ಆಡಿದ ಶರಾವತಿ ಎಂಬ ಹುಡುಗಿಯ ಬಗ್ಗೆ ಪ್ರಸ್ತಾಪಿಸುತ್ತ ಬಾಲ್ಯದ ನೆನಪುಗಳು ಹೇಗೆ ನಮ್ಮನ್ನು ಕಟ್ಟಿ ಹಾಕುತ್ತದೆ ಎಂದು ಭ್ರಮಿಸುವಷ್ಟರಲ್ಲಿ, ನೀನು ಸಣ್ಣ ಇರಬೇಕಾದ್ರೆ ಮಾವ ಅಂತಿದ್ದೆ. ಈಗ್ಲೂ ಹಾಗೇ ಕರಿ ಎನ್ನುವ ವೆಂಕಟಣ್ಣ ಅಚ್ಚರಿ ಹುಟ್ಟಿಸುತ್ತಾನೆ. ಇನ್ನು ಮೋನಪ್ಪ ಎನ್ನುವ ಕಾಯಿಲೆಯ ಮನುಷ್ಯ ಆಸ್ಪತ್ರೆಯಲ್ಲಿ ಇನ್ನೇನು ಸಾಯುತ್ತೇನೆ ಎನ್ನುವ ಗಳಿಗೆಯಲ್ಲೂ ತನ್ನ ಚಿಕ್ಕಮ್ಮನ ಮಗ ಸೂರ್ವೆಯ ದಯಾನಂದನನ್ನು ನೆನಪಿಸುವುದು, ಇದರ ನಡುವೆಯೇ ತನ್ನ ಯೌವ್ವನದ ದಿನಗಳಲ್ಲಿ ತನ್ನನ್ನು ಕಾಡಿದ್ದ ಜಾನಕಿ ಹಠಾತ್ತಾಗಿ ಆಸ್ಪತ್ರೆಗೆ ತನ್ನನ್ನು ನೋಡಲು ಬರುವ ವಿಸ್ಮಯ, ಸಂಭ್ರಮವನ್ನು ಏಕಕಾಲದಲ್ಲಿ ಅನುಭವಿಸುವುದು ಕಣ್ಣಿಗೆ ಕಟ್ಟಿದಂತಿದೆ. ಇನ್ನು ಸಹಿ ಕಥೆಯಂತೂ ಅಂಕೋಲಾ ಹಾಗೂ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಮೊದಲಿನಿಂದಲೂ ನಡೆದು ಬಂದ ಕಥೆಯೇ.

ನಮ್ಮೂರಲ್ಲಿ ಎಂಬ ಹೆಸರಿನ ಹೆಂಗಸೊಬ್ಬಳಿದ್ದಳು. ಎಲ್ಲಾದರೂ ಶುಭ ಕಾರ್ಯಕ್ಕೆ ಹೊರಟರೆ ಅವಳು ಎದುರಿಗೆ ಸಿಕ್ಕರೆ ಆ ಕಾರ್ಯ ಯಶಸ್ವಿ ಆಗುತ್ತದೆ ಎಂಬ ನಂಬಿಕೆ ನಮ್ಮೂರಿನವರಲ್ಲಿತ್ತು. ಅದಕ್ಕೆ ತಕ್ಕ ಹಾಗೆ ಬೆಳ್ಳಂಬೆಳಿಗ್ಗೆ ಆಕೆ ದೇವಸ್ಥಾನಕ್ಕೆ ಹೂ ಇಡಲು ಬರುತ್ತಿದ್ದಳು. ನಮ್ಮೂರ ರಾಷ್ಟ್ರೀಯ ಹೆದ್ದಾರಿ ಪಕ್ಕದ, ತುಂಬಾ ಹಳೆಯ ಬ್ರಹ್ಮ ಜಟಕ ದೇವಸ್ಥಾನದ ದೇವರ ಶಿಲೆಯ ಮೇಲಿರುವ ಹಳೆಯ ಹೂವನ್ನು ತೆಗೆದು ಹೊಸ ಹೂವನ್ನು ಶಿಲೆಗೆ ಏರಿಸುತ್ತಿದ್ದಳು. ಹಾಗೆ ತೆಗೆದ ಹಳೆಯ ಹೂವನ್ನು ಎದುರಿಗೆ ಇದ್ದ ಬಸ್ ಸ್ಟಾಪ್ ನಲ್ಲಿ ನಿಂತಿರುವ ಎಲ್ಲರಿಗೂ ಕೊಡುತ್ತಿದ್ದಳು. ಪರಿಚಯ ಇರಲಿ ಇಲ್ಲದಿರಲಿ, ಅವಳು ಹೂವು ಕೊಟ್ಟರೆ ಯಾರೂ ಬೇಡ ಎನ್ನುತ್ತಿರಲಿಲ್ಲ.  ಎಷ್ಟೋ ಸಲ ಶುಭ ಕಾರ್ಯಕ್ಕೆ ಹೊರಡುವವರು ಅವಳಿಗೆ ಹೇಳಿ ಕಳುಹಿಸಿ ಅವಳು ಬಸ್ ನಿಲ್ದಾಣದಲ್ಲಿ ನಿಲ್ಲುವಂತೆ ತಿಳಿಸಿ  ಅವಳನ್ನು ನೋಡಿಯೇ ಮುಂದಿನ ಕೆಲಸಕ್ಕೆ ಹೋಗುವುದನ್ನೂ ನಾನು ನೋಡಿದ್ದೇನೆ. ಯಾರಿಗೇ ಆದರೂ ಒಲ್ಳೆಯ ಮನಸ್ಸಿನಿಂದ ಶುಭ ಹಾರೈಸುವ ಅವಳೆಂದರೆ ಎಲ್ಲರಿಗೂ ಗೌರವ. ಎಷ್ಟೆಂದರೆ ನಾನು ಬಿ. ಇಡಿ ಗೆ ಹೋಗುವಾಗ ಪ್ರತಿದಿನ ಬೆಳಿಗ್ಗೆ ಅವಳ ಮುಖ ನೋಡಿ, ಅವಳು ನೀಡುವ ದೇವರ ಪ್ರಸಾದವನ್ನು ಮುಡಿದುಕೊಂಡೇ ಹೋಗುವುದು ನನಗೆ ರೂಢಿಯಾಗಿ ಬಿಟ್ಟಿತ್ತು. ಒಂದು ದಿನ ಅವಳು ಎದರಿಗೆ ಸಿಗಲಿಲ್ಲವೆಂದರೆ ಅಂದು ನನಗೆ ಏನೋ ಕಷ್ಟ ಆಗುತ್ತದೆ ಎಂದು ನನಗೆ ನಾನೇ ಅಂದುಕೊಳ್ಳುವಷ್ಟು ಅಡಿಕ್ಟ್ ಆಗಿ ಬಿಟ್ಟಿದ್ದೆ. ಮೂಢನಂಬಿಕೆಗಳ ಕುರಿತು ಮಾತನಾಡುವ ನಾನೇ ಆಗ ಅಂತಹುದ್ದೊಂದು ಮೂಢನಂಬಿಕೆಯನ್ನು ಗಟ್ಟಿಯಾಗಿ ಆತುಕೊಂಡಿದ್ದೆ. ಅದರಲ್ಲೂ ಪರೀಕ್ಷೆ ಇದ್ದರಂತೂ, ಅವಳಿಗಾಗಿ, ಅವಳು ಕೊಡುವ ಹೂವಿಗಾಗಿ ಕಾಯುವಷ್ಟು ಮಾನಸಿಕವಾಗಿ ನಂಬಿ ಬಿಟ್ಟಿದ್ದೆ. ಕಾಕತಾಳಿಯವಾಗಿ ಅವಳು ಸಿಗದ ದಿನ ನನ್ನ ಟೆಸ್ಟ್ ಕಠಿಣವಾಗಿರುತ್ತಿದ್ದುದೂ ಅದಕ್ಕೆ ಕಾರಣವಿರಬಹುದು.ಆದರೆ ಊರವರ ಈ ನಂಬಿಕೆಯ ಅರಿವಿರುವ ಆಕೆ ತನ್ನ ಅನಾರೋಗ್ಯದಲ್ಲಿಯೂ ಬೆಳಗೆದ್ದು ಬಸ್ ಸ್ಟಾಂಡ್ ಹತ್ತಿರ ದೇವಸ್ಥಾನಕ್ಕೆ ಬರುವುದನ್ನು ತಪ್ಪಿಸುತ್ತಿರಲಿಲ್ಲ.

ಎಲ್ಲರೂ ಅವಳ ಮುಖ ನೋಡಿದರೆ ಅದೃಷ್ಟ ಎಂದುಕೊಳ್ಳುವಾಗ  ಅವಳ ಅದೃಷ್ಟ ಮಾತ್ರ ತೀರಾ ಕೆಟ್ಟು ಹೋಗಿತ್ತು. ಅವಳ  ಯೌವ್ವನದ ಕಥೆ ಇದು. ಅವಳ ಮದುವೆ ನಿಶ್ಚಯವಾಗಿತ್ತು. ದೂರದ ೂರಿಂದ ಬರಬೇಕಾದ ವರ ಮಹೂರ್ತ ಮೀರಿದರೂ ಬಂದಿರಲೇ ಇಲ್ಲ. ನೋಡಲು ಕಳುಹಿಸಿದರೆ ಏಕಾ ಏಕಿ ವರನ ಕಡೆಯವರು ಮದುವೆ ಮುರಿದುಕೊಂಡಿದ್ದರು. ಆದರೆ ಇತ್ತ ಹುಡುಗಿಯನ್ನು ಮಂಟಪಕ್ಕೆ ಕರೆ ತಂದಾಗಿತ್ತು. ಮದುವೆ ಮಂಟಪಕ್ಕೆ ತಂದವಳನ್ನು ಹಾಗೇ ವಾಪಸ್ ಕರೆದುಕೊಂಡು ಹೋಗುವುದು ಊರಿನ ಮರ್ಯಾದೆಯ ಪ್ರಶ್ನೆ ಅಷ್ಟೇ ಅಲ್ಲ, ಅದು ಊರಿಗೆ ಅನಿಷ್ಟ ಎಂಬ ನಂಬಿಕೆಯೂ ಇತ್ತು.  ಹೀಗಾಗಿ ಊರ ಹಿರಿಯರೆಲ್ಲ ಏನಾದರೂ ಮಾಡಿ ಅದೇ ಮಂಟಪದಲ್ಲಿ ಅವಳ ಮದುವೆ ಆಗಲೇ ಬೇಕೆಂದು ನಿರ್ಧರಿಸಿದರು. ಮಾವನ ಮಗಳ ಮದುವೆ ಎಂದು ಬಂದು, ಅಲ್ಲಿಯೇ ವ್ಯವಸ್ಥೆಗೆಂದು ಓಡಾಡುತ್ತಿದ್ದ ಅವಳ ಅತ್ತೆಯ ಮಗನನ್ನು ಒತ್ತಾಯದಿಂದ ಮಂಟಪಕ್ಕೆ ಕರೆತಂದು ತಾಳಿ ಕಟ್ಟಿಸಿದರು.

ಒಲ್ಲದ ಮದುವೆ ಬಾಳೀತಾದರೂ ಹೇಗೆ? ಮದುವೆ ಆಗಿ ಗಂಡ ಎನ್ನಿಸಿಕೊಂಡವ ಒಂದು ದಿನವೂ ಇವಳೊಡನೆ ಸಂಸಾರ ಮಾಡಲಿಲ್ಲ.ಅವಳೆಡೆಗೆ ತಿರುಗಿಯೂ ನೋಡಲಿಲ್ಲ. ಆದರೆ ಆತ ಬೇರೊಬ್ಬಳನ್ನು ಮದುವೆ ಆಗಿ ಸುಖ ಸಂಸಾರ ನಡೆಸಿದ. ಇವಳು ಮಾತ್ರ ಅಜನ್ಮ ತಪಸ್ವಿನಿಯಂತೆ ಬದುಕಿಬಿಟ್ಟಳು. ಬಹುಶಃ ಅವಳ ಈ ತಪಸ್ಸಿನಂತಹ, ಬಹು ಸ್ವಚ್ಛವಾದ ಜೀವನವೇ ಅವಳನ್ನು ಅದೃಷ್ಟದವಳನ್ನಾಗಿ ಮಾಡಿತ್ತೋ ಏನೋ. ಆದರೆ ಆಕೆ ತನ್ನ ಗಂಡನ ಮಕ್ಕಳನ್ನು ನೋಡುತ್ತ, ಆದರೆ ಅವರ ಸನಿಹಕ್ಕೂ ಹೋಗದೆ ವಿರಕ್ತಳಂತೆ ಬದುಕಿ ಬಿಟ್ಟಳು.

ಸಂಕಲನದ ಸಹಿ ಕಥೆಯೂ ಇಂತಹುದ್ದೇ ಹಿನ್ನಲೆಯಲ್ಲಿದೆ. ಗಂಡ ತಿರಸ್ಕರಿಸಿ ಹೋದ ಭಾಗಿರಥಿಗೆ ಗಂಡ ಸತ್ತ ಸುದ್ದಿಯನ್ನೂ ಯಾರೂ ಹೇಳಿರಲಿಲ್ಲ. ಆದರೆ ಕೆಲವೇ ದಿನಗಳಲ್ಲಿ ಬಂದ ಗಂಡನ ಎರಡನೆ ಹೆಂಡತಿಯ ಮಗ ಗಂಡನ ಆಸ್ತಿ, ಹಣದಲ್ಲಿ ಪಾಲು ಬೇಡ ಎಂಬುದಕ್ಕೆ ಸಹಿ ಮಾಡಿಸಿಕೊಳ್ಳಲು ಬರುವುದು, ಮತ್ತು ಅದಕ್ಕೆ ಆಕೆ, “ನೀನೊಬ್ಬನಾದರೂ ಬಂದು ಹೋಗಿ ಮಾಡುತ್ತಿರು” ಎಂದು ಕೇಳಿಕೊಳ್ಳುವುದು ಸಂಬಂಧದ ಆಸರೆಯನ್ನು ಮನಮುಟ್ಟುವಂತೆ ವಿವರಿಸುತ್ತದೆ. ಊರೂರು ತಿರುಗುತ್ತಿದ್ದ ಮದುವೆಯಾದ ಗಂಡ ಮಾವನ ಮನೆಯಲ್ಲಿ ತನಗೆ ಫ್ರೀಯಾಗಿ ಇರಲಾಗುವುದಿಲ್ಲ ಎಂದು ಬಿಟ್ಟು ಹೋದವ ನಂತರ ಅಲ್ಲೇ ಎಲ್ಲೋ ಒಂದು ಮದುವೆ ಆಗಿ ಸಾಯುವ ಕಾಲಕ್ಕೂ ತನ್ನನ್ನು ನೆನಪಿಸಿಕೊಳ್ಳದೇ ಇದ್ದರೂ ಆತನ ಮಗ ಬಂದಾಗ ಅವನನ್ನು ಆದರದಿಂದಲೇ ಕಾಣುವ ಅವಳ ಗುಣ ಹಳ್ಳಿಯ ಮುಗ್ಧತೆಯನ್ನು ಸೂಚಿಸುತ್ತದೆ. ಮಾತಿನ ಮಧ್ಯ ಸಾಯುವ ಕಾಲಕ್ಕಾದರೂ ತನ್ನ ಗಂಡ ತನ್ನನ್ನು ನೆನಪಿಸಿ ಕೊಂಡಿರಬಹುದೇ ಎಂಬ ಎದೆಯಾಳದ ಆಕಾಂಕ್ಷೆ ಓದುಗರನ್ನು ಒಂದು ಕ್ಷಣ ನಿಲ್ಲಿಸದೇ ಬಿಡುವುದಿಲ್ಲ. ಗಂಡನಿಗೆ ಅನಾರೋಗ್ಯವಾದಾಗ ದೊಡ್ಡ ಆಸ್ಪತ್ರೆಗಾದ್ರೂ ತೋರಿಸಬಹುದಿತ್ತು, ಆಗುವ ಖರ್ಚನ್ನು ತಾನು ಕೊಡುತ್ತಿದ್ದೆ ಎಂಬ ಅವಳ ಮಾತಿನ ಒಳದನಿ “ಅಯ್ಯೋ ಹೆಣ್ಣು ಜನ್ಮವೇ” ಎಂದು ಮರಗುವಂತೆ ಮಾಡುತ್ತದೆ.    ಆದರೆ ಹಾಗೆ ಬಂದ  ಗಂಡನ ಎರಡನೆ ಹೆಂಡತಿಯ ಮಗ ಅದಾವುದನ್ನೂ ಗಮನಿಸದವನಂತೆ ಅವಳು ಮಾಡಿ ಹಾಕಿದ ನಾಟಿಕೋಳಿ ಸಾರನ್ನು ಉಂಡು, ಮಲಗೆದ್ದು ನಂತರ ಯಾವ ಸಂಬಂಧದ ಕಕ್ಕುಲಾತಿಯೂ ಇಲ್ಲದಂತೆ ಆಸ್ತಿಯಲ್ಲಿ ಪಾಲು ಬೇಡ ಎಣದು ಬರೆದು ಕೊಡುವ ಕಾಗದ ಪತ್ರ ಕೊಟ್ಟು ಸಹಿ ಹಾಕಿಸಿಕೊಂಡು ನಿರ್ಲಿಪ್ತನಂತೆ ಹೊರಟು ಬಿಡುವುದು ನಿಜಕ್ಕೂ ಖೇದವೆನ್ನಿಸುತ್ತದೆ. ಇಷ್ಟಾಗಿಯೂ ಆಕೆ ಆಕೆ ಆತ ಮತ್ತೆ ಬರಲಿ, ಅವನಾದರೂ ತನ್ನ ಸಂಬಂಧವನ್ನು ಉಳಿಸಿಕೊಳ್ಳಲಿ ಎಂದುಕೊಳ್ಳುವುದು ಎದೆ ಕಲಕುತ್ತದೆ.

ಇನ್ನೊಂದೇ ಕಥೆ ಹಾಗೂ ಒಂಬತ್ತು ಎಂಟು ಎಂಟು… ಎನ್ನುವ ಕಥೆಗಳಿಗೆ ಬೇರೆಯದ್ದೇ ಆದ ಆಯಾಮ. ಹಳ್ಳಿಯ ಹೆಣ್ಣು ಮಕ್ಕಳು ಸಿಲುಕಿಕೊಳ್ಳುವ ಒಳಸುಳಿಗಳು ಮತ್ತು ಅದನ್ನು ಗುಟ್ಟಾಗಿ ಇಡುತ್ತಲೇ ಅದನ್ನು ಛೇದಿಸಲು ಹೊರಡುವ ಅವರ ಮನಸ್ಥಿತಿ, ಅದಕ್ಕೆ ಸಮಾಜ ಹಾಗೂ ಅವರ ಪಾಲಕರ ನಡವಳಿಕೆಗಳು ಇಲ್ಲಿ ಪ್ರಧಾನವಾಗುತ್ತದೆ. ಊರನ್ನು, ಊರಿನಲ್ಲಿರುವ ಅಮ್ಮನನ್ನು ಬಿಟ್ಟು  ಪೇಟೆಗೆ  ಯಾರದ್ದೋ ಮನೆಯ ಕೆಲಸಕ್ಕೆ ಬಂದ ದೇವಿಗೆ ಈ ಪೇಟೆಯದ್ದೇ ಒಂದು ರೀತಿ ಅಚ್ಚರಿ. ಅದರಲ್ಲೂ ಬಿಲ್ಲು ಜಾಸ್ತಿ ಬರ್ತದೆ ಎಂದು ತೆಗೆದು ಹಾಕಿದ ಲಾಂಡ್ ಲೈನ್ ಬದಲಿಗೆ ಕೊಡಿಸಿದ ಮೊಬೈಲ್ ಎಂಬ ಮಾಯಾ ಜಗತ್ತು, ಮನೆ ಬಿಟ್ಟು ಪೇಟೆ ತಿರುಗುವಾಗಲೂ ಮನೆಲಿದ್ದೆ ಎನ್ನ ಬಹುದಾದ ಸವಲತ್ತು ಎಲ್ಲವನ್ನೂ ಅಚ್ಚರಿಯಿಂದ ತನ್ನಲ್ಲಿ ಒಂದಾಗಿಸಿಕೊಳ್ಳುತ್ತಲೇ ಮನೆ ಬಿಟ್ಟು ಯಾರೊಂದಿಗೋ ಓಡಿ ಹೋದ ಅಕ್ಕನನ್ನು ಹುಡುಕಲು ನೆರವಾಗುತ್ತದೆ ಎಂಬ ಸೋಜಿಗವನ್ನು ನೀಡುತ್ತದೆ. ತನ್ನೂರಿನವಳೇ ಆದ ಒಬ್ಬಳು ನೀಡಿದ ನಂಬರ್ ನ್ನು ಒತ್ತುತ್ತ ಅಕ್ಕನನ್ನು ಹುಡುಕುವ ಹಲವಾರು ದೇವಿಯರು ಇಂದಿಗೂ ನಮ್ಮೂರಿನ ಅಂಚಿನಲ್ಲಿದ್ದಾರೆ. ಇದರ ಜೊತೆ ಜೊತೆಗೇ ಇನ್ನೊಂದೇ ಕಥೆಯಲ್ಲಿ ಬರುವ ಶಕ್ಕೂ ಅಕ್ಕ ಕೂಡ ಹಾಗೇನೇ. ತನ್ನದಲ್ಲದ ತಪ್ಪಿಗೆ ಊರವರಿಂದ ಬಿಡಿ, ತನ್ನ ಹೆತ್ತ ತಾಯಿಯಿಂದಲೂ ಮುಖ ತಿವಿಸಿಕೊಳ್ಳುವ ಶಕ್ಕು ಇಂತಹ ಹತ್ತಾರು ಹೆಣ್ಣುಗಳ ಪ್ರತಿರೂಪವೆಂಬಂತೆ ಕಾಣುತ್ತಾಳೆ.

ಇಡೀ ಸಂಕಲನದಲ್ಲಿ ಉರುಳಿತೊಂದು ಮರ ಎಂಬ ಕಥೆ ಇಂದಿಗೂ ಇರುವ ಪ್ರತಿ ಹಳ್ಳಿಯ ಒಳ ರಾಜಕೀಯದ ಪ್ರತೀಕವಾಗಿ ನಮ್ಮೆದುರು ನಿಲ್ಲುತ್ತದೆ. ಅಕಾರಣ ದ್ವೇಷ ಹಾಗೂ ಆ ದ್ವೇಷವನ್ನು ತೀರಿಸಲು ನೇರ ಹಣಾಹಣಿಗೆ ಇಳಿಯದೇ ಸುತ್ತು ಬಳಸಿನ ಮುಸುಕಿನ ಗುದ್ದು ನೀಡುವ ಪರಿ ಈ ಕಥೆಯಲ್ಲಿ ಅದ್ಭುತವಾಗಿ ಚಿತ್ರಿತವಾಗಿದೆ. ಇಲ್ಲಿನ ಭಾಷೆ ಭಾವನೆಗಳ ತೀವೃತೆ ಎಲ್ಲವೂ ಕಥೆಯನ್ನು ಒಂದು ಒಳ್ಳೆಯ ಕಥೆಯ ಸಾಲಿಗೆ ನಿಲ್ಲಿಸುತ್ತದೆ.

ಜಯಂತ ಕಾಯ್ಕಿಣಿಯವರ ಪಟ್ಟ ಶಿಷ್ಯ ಎಂದು ನಾವೆಲ್ಲ ತಮಾಷೆ ಮಾಡು ಸಂದೀಪನ ಕಥೆಗಳಿಗೂ ಆ ಛಾಯೆ ದಟ್ಟವಾಗಿರುವುದನ್ನು ಕಾಣಬಹುದು. ಅಥವಾ ಈ ಮೆಟ್ರೋಪಾಲಿಟನ್ ಸಿಟಿಗಳಲ್ಲಿರುವ ಹಳ್ಳಿ ಹುಡುಗರ ಕಥೆಯೇ ಹೀಗೋ…. ಹಳ್ಳಿಯ ಕುರಿತು ಮಾತನಾಡುತ್ತಲೇ ಒಮ್ಮೆಲೆ ಮುಂಬೈಗೆ ಜಿಗಿದು ಬಿಡುವ ಜಯಂತ ಕಾಯ್ಕಿಣಿಯವರಂತೆ, ರಾಜೀವ ನಾಯಕರಂತೆ ಸಂದೀಪ ಕೂಡ ಅಲ್ಲಲ್ಲಿ ಇಂತಹ ಸ್ಥಾನಪಲ್ಲಟ ಮಾಡುತ್ತಲೇ ಯುವ ಕಥೆಗಾರರ ಮುಖ್ಯ ಕಥಾನಕದಲ್ಲೊಂದು ಗಟ್ಟಿ ಸ್ಥಾನ ಗಳಿಸಿಕೊಂಡಿದ್ದಾರೆ.

21 comments

 1. ಅದೇ ಸಂದೀಪನಾಯಕರಿರಬಹುದೆ?
  ಬಹುಶ: 2000 -2001ರಲ್ಲಿ ಈ ಸಂದೀಪನಾಯಕರನ್ನು ನಾನು ಬೇಟಿಯಾದ ನೆನಪಿದೆ ಮಸುಕುಮಸುಕಾಗಿ. ಅದಾಗ ನಾನು ಪಾರ್ಶ್ವ ವಾಯುವಿಗೆ ತುತ್ತಾಗಿ ಅಂಕೋಲೆಯಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದೆ. ನಾನು ದಾಖಲಾಗಿದ್ದ ಆ ಪುಟ್ಟ ಊರ ಹೆಸರು ಬೆಳ್ಳಂಬಾರೆ ಅಂತಿರಬೇಕು. ನನ್ನ ಪೆನ್ ಫ್ರೆಂಡ್ ಆಗಿದ್ದ ವ್ಯಂಗ್ಯಚಿತ್ರಕಾರ ಮತ್ತು ಅಂಕೋಲೆಯ ಅಂಚೆ ಇಲಾಖೆಯಲ್ಲಿಕೆಲಸ ಮಾಡುತ್ತಿದ್ದ ದೇವಿದಾಸ ಸುವರ್ಣರವರು ಪ್ರತಿ ನಿತ್ಯ ನನ್ನ ನೋಡಲು ಸಂಜೆಯ ಹೊತ್ತು ತಮ್ಮ ಪತ್ನಿ ಮತ್ತು ಪುತ್ರನ ಜೊತೆ ಬರುತ್ತಿದ್ದರು. ಆ ಅಪರಿಚಿತ ಊರಿನಲ್ಲಿ ನನಗೆ ಅನಾಥ ಪ್ರಜ್ಞೆ ಮೂಡದಂತೆ ನೋಡಿಕೊಂಡಿದ್ದರು. ಒಂದು ಸಂಜೆಬರುವಾಗ ತಮ್ಮ ಜೊತೆಯಲ್ಲಿ ಒಬ್ಬ ಯುವಕನನ್ನು ಕರೆದುಕೊಂಡು ಬಂದು ಮಧುಸೂದನ್ “ಇವರು ಸಂದೀಪ ಎಂದು ನಮ್ಮೂರಿನ ಯುವಕವಿ ಮತ್ತು ಪ್ರಜಾವಾಣಿಯ ವರದಿಗಾರರೆಂದು ಪರಿಚಯಿಸಿದ್ದರು. ಅವತ್ತಿನ ಮಟ್ಟಿಗೆ ಬಾರಿ ಸಂಕೋಚದವನಂತೆ ಕಂಡ ಆ ಯುವಕ ಹೆಚ್ಚೇನು ಮಾತಾಡಿರಲಿಲ್ಲ. (ನಂತರ ಇತ್ತೀಚೆಗೆ ಮಯೂರ ಮಾಸ ಪತ್ರಿಕೆಯ ಸಂಪಾದಕರಾಗಿರುವ ಸಂದೀಪನಾಯಕ ಅವರೆ ಇರಬಹುದೇ ಎಂಬ ಅನುಮಾನ ಕಾಡಿತ್ತು. ) ನಂತರದಲ್ಲಿ ಕೆಲವು ವರ್ಷಗಳವರೆಗು ನನಗು ಸುವರ್ಣರವರಿಗು ಪತ್ರ ವ್ಯವಹಾರ ನಡೆಯುತ್ತಿತ್ತು. ತದನಂತರ ನಡೆದ ಒಂದು ಕಾರು ಅಪಘಾತ ಮತ್ತು ಖಾಸಗಿ ಬದುಕಿನ ಹಲವು ಅಹಿತಕರ ವಿಚಾರಗಳಿಂದಾಗಿ ನಾನು ಬಹುತೇಕ ಹೊರಜಗತ್ತಿನ ಸಂಪರ್ಕವನ್ನೇ ಕಳೆದುಕೊಂಡು ಬಿಟ್ಟಿದ್ದೆ. ಈಗೊಂದು ಆರು ತಿಂಗಳ ಹಿಂದೆ ಅಂಕೋಲೆಯ ಇನ್ನೊಬ್ಬ ಯುವಕವಿ ಸಚಿನ್ ಮೂಲಕ ಸುವರ್ಣ ಅವರ ದೂರವಾಣಿ ನಂಬರ್ ಪಡೆದು ಮಾತಾಡಿಸಿದ್ದೆ. ತದನಂತರಮತ್ತೆ ಅವರೊಂದಿಗೆ ಮಾತಾಡಲಾಗಲಿಲ್ಲ.
  ಇದೀಗ ನಿಮ್ಮೀ ಬರಹ ಓದಿದಾಗ ಅವತ್ತಿನ ಆ ಯುವ ಕವಿ ಈ ಸಂದೀಪನಾಯಕರೆ ಇರಬಹುದೆ ಎನಿಸಿತು.
  ಇದೀಗ ಅವರ ಕತೆಗಳನ್ನು ಓದಬೇಕೇನಿಸುತ್ತಿದೆ.
  ನಿಮ್ಮ ರಿವ್ಯೂ ಚೆನ್ನಾಗಿದೆ. ಅಭಿನಂದನೆಗಳು.
  ನಿಮ್ಮ ಮಿತ್ರ-
  ಕು.ಸ.ಮಧುಸೂದನರಂಗೇನಹಳ್ಳಿ

 2. ನೀವು ಕಥೆಯ ಪಕ್ಷಿನೋಟವನ್ನು ಕೊಡುವಾಗ ಕಥೆಯ ಒಳಗೆನಿದೆ ಅನ್ನುವ ಕುತೂಹಲಕ್ಕಿಂತ ನಿಮ್ಮ ಬಾಳಿನ ಅಥವಾ ನಿಮ್ಮ ಸುತ್ತಮುತ್ತಲಿನ ಪರಿಸರದ ಸಂಗತಿಗಳನ್ನು ಹೇಳುವ ನಿಮ್ಮ ಶೈಲಿ ನಿಮ್ಮ ಅಂಕಣವನ್ನು ಕತುಹಲದಿಂದ ನಿರಿಕ್ಷಿಸುವಂತೆ ಮಾಡುತ್ತದೆ. ತುಂಬಾ ಚನ್ನಾಗಿ ಪುಸ್ತಕದ ಬಗ್ಗೆ ವಿವರಿಸಿದ್ದಿರಾ. ಅದರಲ್ಲೂ ನಿಮ್ಮ ನೇರ ನುಡಿಗಳು ನಿಮ್ಮಬಗ್ಗೆ ಇನ್ನೂ ಹೆಚ್ಚು ಗೌರವಭಾವನೆ ಮುಡಿಸುತ್ತವೆ.ಒಬ್ಬ ಲೇಖಕಿಯಾಗಿ ಇನ್ನೊಬ್ಬ ಅದರಲ್ಲೂ ಬಾಲ್ಯದಲ್ಲಿ ಪ್ರತಿಸ್ಪರ್ಧಿ ಆಗಿದ್ದರು ಅನ್ನುವದನ್ನು ಲೆಕ್ಕಿಸದೆ ಅವರ ಕಥೆಗಳ ಬಗ್ಗೆ ಯಾವದೆ ಪೂರ್ವಾಗ್ರಹ ಇಲ್ಲದೆ ಅಭಿಪ್ರಾಯ ತಿಳಿಸುವದು ನಿಮ್ಮಂತ ಸ್ಥಿತಿಪ್ರಜ್ಞರಿಗೆ ಮಾಯ್ರ ಸಾದ್ಯ.ತುಂಬಾ ಸುಂದರ ಅವಲೋಕನ .

  • ಥ್ಯಾಂಕ್ಯೂ. ಈ ರೀತಿಯ ಬರವಣಿಗೆಗೆ ಪ್ರೇರೇಪಿಸಿದ್ದು ಜಿ ಎನ್ ಮೋಹನ್ ಸರ್. ಈ ಕ್ರೆಡಿಟ್ ಅವರಿಗೇ ಸೇರಬೇಕು.

   ಅಂದಹಾಗೆ ಸಂದೀಪ್ ನನ್ನ ಪ್ರತಿಸ್ಪರ್ಧಿ ಅಲ್ಲ.. ನನ್ನನ್ನು ನಿರಂತರ ಬರವಣಿಗೆಗೆ ಹಚ್ಚಿದ್ದು ಅವನೇ

 3. ಶ್ರೀದೇವಿ ಮೇಡಂ ಈ ವಾರದ ಅವಧಿಯಲ್ಲಿ ನಿಮ್ಮ ಶ್ರೀದೇವಿ ರೆಕಮೆಂಡ್ಸ ಅಂಕಣ ಬರಹ ಓದಿದೆ… ತುಂಬಾ ಚೆನ್ನಾಗಿ ಬರೆದಿದ್ದೀರಿ… ಸಂದೀಪ ನಾಯಕರ …ಗೊಡೆಗೆ‌ ಬರೆದ ನವಿಲು ಪುಸ್ತಕದ ಕುರಿತು ನಿಮ್ಮ ವಿಮರ್ಶೆ ತುಂಬಾ ಚೆನ್ನಾಗಿದೆ ನಿಮಗೆ ಅಭಿನಂದನೆಗಳು

 4. ಸಂದೀಪರ ಈ ಕೃತಿ ಓದಿದಾಗ ತುಂಬಾ ಇಷ್ಟವಾಗಿತ್ತು .ಈಗ ಮತ್ತೊಮ್ಮೆ ಓದಿದಂತೆ ಆಯಿತು. ತುಂಬಾ ಚೆನ್ನಾಗಿ ಅವರ ಕಥೆಗಳನ್ನು ಪರಿಚಯಿಸಿದ್ದಿರಿ.

 5. ಸಂದೀಪ ನಾಯಕ..ಪ್ರಜಾವಾಣಿಯಲ್ಲಿನ ಬರಹಗಳ ಮೂಲಕ ಕೊಂಚ ಪರಿಚಯ.ಇಲ್ಲಿ ಶ್ರೀ , ಅವರ ವ್ಯಕ್ತಿತ್ವ ,ಗೋಡೆಗೆ ಬರೆದ ನವಿಲು ಕಥಾ ಸಂಕಲನದ ಕತೆಗಳ ಸ್ವರೂಪ..ಇವನ್ನೆಲ್ಲಾ ತಮ್ಮದೇ ಆದ ನೈಜ ಶೈಲಿಯಲ್ಲಿ ಸುತ್ತ ಮುತ್ತಲಿನ ಅನುಭವದ ಕಥೆಗಳೊಟ್ಟಿಗೆ ಹೆಣೆಯುತ್ತಾ ಸುಂದರ ಪುಸ್ತಕ ಪರಿಚಯದ ಹೂ ಮಾಲೆಯನ್ನು ಕಟ್ಟಿದ್ದಾರೆ. ಇಂತಹ ಬರವಣಿಗೆಯ ಸುಗಂಧಕ್ಕೆ ಮಣಿಯದವರ್ಯಾರು.
  ಧನ್ಯವಾದಗಳು ಸಂದೀಪ ಅವರಿಗೂ …
  ಶ್ರೀದೇವಿ ಮೇಡಮ್ ಅವರಿಗೂ..
  ಅವಧಿ ಅಂಕಣ ಬರಹ ತಾಣಕ್ಕೂ.

 6. . ಪುಸ್ತಕ ಪರಿಚಯ ಇಷ್ಟ ವಾಯಿತು ಜೀವನದ ಅನೇಕ ಸಂಗತಿಗಳು ಕಥೆಗಳಾಗಿ ಮೂಡಿಬಂದಿವೆ ಬೀಗದ ಕೈ ಕಾಣದೇ ಉಂಟಾದ ಗಾಬರಿ ಪರಿತಾಪ ಇದು ಅನೇಕ ಜನರ ನಡುವೆ ನಡೆದ ವಾಸ್ತವ ಕೂಡ ಆಗಿದ್ದು ನನಗೂ ಅನುಭವ ಆಗಿದೆ ಧನ್ಯವಾದಗಳು ಮಂದಿನ ಅಂಕಣ ಕಾಗಿ ಕಾಯುವೆ

 7. ಸಂದೀಪ ನಾಯಕರ ಕಥೆಗಳನ್ನು ಓದಿಲ್ಲ ನಾನು. ನಿಮ್ಮ ಲೇಖನ ಓದಿದ ಮೇಲೆ ಓದಬೇಕು ಎನಿಸಿದೆ. ಅವರ ಸಂಕಲನವನ್ನ ಚೆನ್ನಾಗಿ ಪರಿಚಯಿಸಿದ್ದೀರಿ. ಶುಭಾಶಯಗಳು ಶ್ರೀದೇವಿ.

Leave a Reply