ಅವನ ಪಕ್ಕದಲ್ಲಿ ಕಂಪಿಸುತ್ತಾ..

“ಪಾಪ”

ಮೂಲ:Forugh Farrokhzad( Persian)

ಅನುವಾದ: ಮೆಹಬೂಬ ಮುಲ್ತಾನಿ

ನಾನೊಂದು ಭಾವಪರವಶವಾದ ಪಾಪ ಮಾಡಿದೆ
ಕಿಚ್ಚೆಬ್ಬಿಸುವ ಬೆಚ್ಚಗಿನ ಅಪ್ಪುಗೆಯ ಛಲಭರಿತ ಧಗಧಗಿಸುವ ತೋಳುಗಳಲ್ಲಿ…

ಒಂದು ಬರಿದಾದ ರಾತ್ರಿಯಲ್ಲಿ
ಅವನ ಚಂಚಲಭರಿತ ಕಣ್ಣುಗಳಲ್ಲಿ ನನ್ನನ್ನೇ ಹಂಬಲಿಸುವುದನ್ನು ಕಂಡು ನನ್ನ ಹೃದಯ ಅಶಾಂತಗೊಂಡು ನನ್ನ ಸ್ತನಗಳ ಮಧ್ಯೆ ಪಟ ಪಟ ಹೊಡೆದುಕೊಳ್ಳತೊಡಗಿತು

ಅದೇ ಬರಿದಾದ ರಾತ್ರಿ
ಚಂಚಲಗೊಂಡ ನಾನು, ಅವನ ಪಕ್ಕ ಕುಳಿತುಕೊಂಡೆ
ಅವನ ತುಟಿಗಳು ನನ್ನನ್ನು ಬಯಸಿದ್ದೇ ತಡ ನನ್ನ ಹುಚ್ಚು ಹೃದಯ ತನ್ನ ವ್ಯಸನದ ಬಿಗುವು ಸಡಿಲಿಸಿತು.

ಅವನ ಕಿವಿಯೊಳಗೆ ನಾನು,ಪ್ರೀತಿ ಪ್ರೇಮದ ಸಾಹಿತ್ಯ ಸುರಿದು;
ಓ ನನ್ನ ಜೀವವೇ..ನನ್ನ ಪ್ರಿಯತಮನೇ..ನಾನು ನಿನ್ನನ್ನೇ ಬಯಸಿದ್ದೆ, ಜೀವ ನೀಡುವ ಈ ತೋಳುಗಳಿಗಾಗಿಯೇ ಹಂಬಲಿಸಿ ನಿನ್ನ ಪ್ರೀತಿಗಾಗಿ ಬಾಯಾರಿದ ಹುಚ್ಚು ಪ್ರೇಮಿ..

ಅವನ ಕಣ್ಣುಗಳಲ್ಲಿ ಕಾಮ ಹೊತ್ತಿ
ಬಟ್ಟಲಿನಲ್ಲಿ ಕೆಂಪು ದ್ರಾಕ್ಷಾರಸ ಕಂಪಿಸತೊಡಗಿ
ಅಮಲೇರಿ ನಗ್ನಗೊಂಡ ನನ್ನ ದೇಹ
ಆತನೆದೆಯ ಮೇಲೆ ಮೃದುವಾಗಿ ಕಂಪಿಸತೊಡಗಿತು,

ನಾನೊಂದು ಭಾವಪರವಶವಾದ ಪಾಪ ಮಾಡಿದೆ
ಅವನ ಪಕ್ಕದಲ್ಲಿ ಕಂಪಿಸುತ್ತಾ ಆ ರಾತ್ರಿ ಕಳೆದೆ
ಅಯ್ಯೋ ದೇವರೆ…!
ನನಗೇನೂ ಗೊತ್ತಿಲ್ಲ ..ನಾನೇನು ಮಾಡಿದೆನೆಂದು ಆ ಬರಿದಾದ ರಾತ್ರಿಯಲಿ……

1 comment

Leave a Reply