ನಗರ ನಕ್ಸಲ್ ಕವಿತೆಗಳು: ಒದೆ ತಿನ್ನುವವನ ಅಫಿಡವಿಟ್

ಪ್ರಶಸ್ತಿಗೆ, ಸಲಹಾಮಂಡಳಿ ಸದಸ್ಯತ್ವಕ್ಕೆ,

ಜಿ ಕೆಟಗರಿ ನಿವೇಶನಕ್ಕೆ, ಫ್ಲೆಕ್ಸಿಗೆ ಲಾಯಕ್ಕಾದ

ನೂರಾರು ಸ್ಥಾನಗಳಿಗೆ ಅರ್ಜಿ ಹಾಕಿಕೊಳ್ಳದೆ ಬದುಕಿದ

ಮೂರ್ಖತನಕ್ಕೆ ಪ್ರಾಯಶ್ಚಿತ್ತವಾಗಿ

 

ನೀಡಲೇಬೇಕಾಗಿದೆ ವಿವರಣೆಯ ಅಫಿಡವಿಟ್ಟು

ದಾಳಿಕೋರರ ನಿಂದನೆಗಳಲ್ಲಿ ಸತ್ಯಾಂಶ ಇದ್ದೀತೆಂದು

ಯುವ ಗೆಳೆಯರು ನಂಬುವ ಸಾಧ್ಯತೆ ಇರುವುದರಿಂದ

ಎಂದು ಅಲವತ್ತುಕೊಳ್ಳುವ ಬುದ್ಧಿಗೇಡಿ

ಒಂದು ದಿನ ಹಠಾತ್ತನೆ ನಡುಹಗಲು

ನಾಗರಿಕರು ಉಂಡು ಆಲಸಿಗಳಾದ ಹೊತ್ತಲ್ಲಿ

ವೈಜ್ಞಾನಿಕ ಮನೋಧರ್ಮದವನೆಂದು

ಪ್ರಶ್ನೆಗಳನ್ನು ಕೇಳುತ್ತಾನೆಂದು ಆರೋಪಿಸಿ

ಬಂಧಿಸಿದರು ನಗರ ನಕ್ಸಲ್ ಪಟ್ಟ ಕಟ್ಟಿ

ದುರಂತದ ತಳ ಮುಟ್ಟಿ

 

ನಿನ್ನ ತಾತ ನೀರು ಎಂಜಲು ಮಾಡಿದ ತಪ್ಪಿಗೆ

ನಿನಗೆ ಶಿಕ್ಷೆ ಎಂದು ಕುರಿಮರಿಯ ಮೇಲೆ

ಎಗರಿಬಿದ್ದ ತೋಳಗಳು ಸಾಬೀತುಮಾಡಿದವು

ಅಲ್ಪನಿಗೆ ಅಧಿಕ ಸಂದೇಹ ಚಾಳಿ

ಸುಟ್ಟರೂ ಹೋಗದ ಹೀನ ಸುಳಿ

ಸಿಕ್ಕಸಿಕ್ಕವರನ್ನು ಆರೋಪಿಸಿ ನಗರ ನಕ್ಸಲ್ ಎಂದು

ಬಂಧಿಸಿದರೂ ಅಲ್ಪಮತಿಗಳು ಇಳಿಯಲೇ ಬೇಕು ಕುರ್ಚಿ ಬಿಟ್ಟು

ಇದು ಸಾತ್ವಿಕ ಆಕ್ರೋಶದ ಅಫಿಡವಿಟ್ಟು.

Leave a Reply