ಪ್ರೀತಿ ಸಂಭ್ರಮಿಸುತ್ತಿತ್ತು…ಸ್ನೇಹ ಸಮಾಧಿ‌ ಸೇರಿತ್ತು…

ಯಾವುದೇ ವಿಷಯದ ಮೇಲಾಗಲೀ ಒಂದು ಕತೆಯನ್ನು ಹೇಳದೇ ಸಮರ್ಥಿಸಿಕೊಳ್ಳದ ಗೆಳೆಯನೊಬ್ಬ, ಇಬ್ಬರ ನಡುವಿನ ಸ್ನೇಹವು ಪ್ರೀತಿಯಾಗಿ ಬದಲಾದಾಗ ಎರಡೂ ಉಳಿದುಕೊಳ್ಳುತ್ತವೆಯಾ? ಎಂಬ ತಾತ್ವಿಕ ವಿಷಯವು ಸ್ನೇಹಿತರ ವಲಯದಲ್ಲಿ ಚರ್ಚೆ ಆಗುತ್ತಿರುವಾಗ ತನ್ನದೇ ರೀತಿಯಲ್ಲಿ ಸಮರ್ಥಿಸಿಕೊಳ್ಳುವ ಸಲುವಾಗಿ ಈ ಕತೆಯನ್ನು ಹೇಳಿದ.

* * * * *

“ಅಂಕಿತ್ ,ಇದೇನು ವಿಶೇಷ ಇವತ್ತು ಬೇರೆ ಯಾವ ಸ್ನೇಹಿತರೂ ಬೇಡ ನಾವಿಬ್ಬರೇ ಹೋಗೋಣ ಎಂದು ಯಾಕೆ ಹಠ ಹಿಡಿದೆ? ”

ಇದೊಂದೇ ಪ್ರಶ್ನೆಯನ್ನ ಅಕ್ಷತಾ, ಹಿಂದಿನ‌ ದಿನ ಕಾಲ್ ಮಾಡಿ ಪ್ರೋಗ್ರಾಂ ಫಿಕ್ಸ್ ಮಾಡಿದಾಗಿನಿಂದಲೂ ಅವನಿಗೆ ಅನೇಕ ಬಾರಿ ಕೇಳಿದ್ದಳು. ಆ ದಿನ ಬೆಳಗ್ಗೆಯೂ ಬೈಕ್ ಹತ್ತುವ ಮುನ್ನ ಮತ್ತೆ ಕೇಳಿದ್ದಳು, ಯಶವಂತಪುರದ ಫ್ಲೈಓವರ್ ಮೇಲೆ, ಗೋಕುಲಂ ಬಳಿಯ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಲು ನಿಲ್ಲಿಸಿದಾಗ, ಹೆಬ್ಬಾಳದ ಬಳಿಯ ಫ್ಲೈ ಓವರ್ ಸಿಗ್ನಲ್ ನಲ್ಲಿ ಕಾಯುತ್ತಾ ನಿಂತಿದ್ದಾಗ ಹೀಗೇ ಅನೇಕ ಬಾರಿ ಕೇಳಿದ್ದರೂ ಆ ಪ್ರಶ್ನೆಯನ್ನು Willing Suspension ( ಪ್ರಜ್ಞಾಪೂರ್ವಕವಾಗಿ ಮುಂದೂಡುವಿಕೆ) ಮಾಡುತ್ತಲೇ ಇದ್ದ ಅಂಕಿತ್ .

ತನ್ನ ‘ಪಲ್ಸರ್ 220’ ಬೈಕಿನ ಎಕ್ಸಲೆರೇಟರ್ ನ್ನು ಜೋರಾಗಿ ಹಿಂಡುತ್ತಿದ್ದ ಅಂಕಿತ್ ಗೆ ತನ್ನ ಬೆನ್ನಿಗೆ ಅಂಟಿಕೊಂಡು ಕೂತಿದ್ದ ಅಕ್ಷತಾಳ ಈ ಪ್ರಶ್ನೆ ಕೇಳಿಸದೇ ಇರಲಿಲ್ಲ. ಆದರೆ ತನ್ನ ಜಾಣಕಿವುಡು ಪ್ರದರ್ಶಿಸುತ್ತ ಹೇಳಿದ : “ಏನೂ ಕೇಳಿಸ್ತಿಲ್ಲ ಕಣೇ ಸ್ವಲ್ಪ ಕಿವಿ ಹತ್ರನಾದ್ರೂ ಬಂದು ಹೇಳು. ಇಲ್ಲದಿದ್ರೆ ಇನ್ನು ಅರ್ಧ ಗಂಟೆ ತಡ್ಕೊ ನಂದಿ ಬೆಟ್ಟ ಬಂದು ಬಿಡುತ್ತೆ ”

ಅಷ್ಟೆ ಅಕ್ಷತ ಮತ್ತೆ ಆ ಪ್ರಶ್ನೆ ಕೇಳುವ ಗೋಜಿಗೆ ಹೋಗಲಿಲ್ಲ..ದೇವನಹಳ್ಳಿಗಿಂತ ಮುಂದೆ ಹೈವೇನಲ್ಲಿ ಮಾರುತ್ತಿದ್ದ ಹಲಸಿನ ಹಣ್ಣಿನ ಗಾಡಿಗಳನ್ನು ನೋಡಿದ ಅಕ್ಷತಾ ಅವನ್ನು ತಿನ್ನಲೇಬೇಕೆಂದು ಹಠ ಹಿಡಿದಳು. ಗಾಡಿ ನಿಲ್ಲಿಸಿಕೊಂಡು ಹಣ್ಣು ತಿನ್ನುವಾಗ ಇಬ್ಬರೂ ಹೆಚ್ಚೇನೂ ಮಾತಾಡಲಿಲ್ಲ. ಮತ್ತೆಲ್ಲೋ ಒಂದೆಡೆ ನಿಲ್ಲಿಸಿ ದ್ರಾಕ್ಷಿ ಹಣ್ಣುಗಳನ್ನು ತಿನ್ನುವಾಗಲೂ ಆಕೆ ಆ ಪ್ರಶ್ನೆಯನ್ನು ಮೆಲ್ಲಗೆ ಕೇಳಿದ್ದನ್ನು ಅವನು ನಯವಾಗಿಯೇ ನಿರಾಕರಿಸಿದ.

ಆ ನಂತರ ನಂದಿ ಬೆಟ್ಟದ ತಿರುವುಗಳಲ್ಲಿ ಅನೇಕ ಕಡೆ ಗಾಡಿ ನಿಲ್ಲಿಸಿ, ತರಹೇವಾರಿ ಸೆಲ್ಫಿಗಳನ್ನು ತೆಗೆದುಕೊಂಡಾದ ಮೇಲೆ ಒಂದಿಡೀ ದಿನ ನಂದಿ ಬೆಟ್ಟದಲ್ಲಿ ಸುತ್ತಾಡಿ ಸಂಜೆ ಮನೆಗೆ ಹೊರಡುವ ಹೊತ್ತಲ್ಲಿ ಟಿಪ್ಪು ಡ್ರಾಪ್ ಬಳಿ ಅಕ್ಷತಾ ಮತ್ತದೇ ಪ್ರಶ್ನೆ ಕೇಳಿದಳು “ಯಾಕೋ ಇವತ್ತು ಬೇರೆ ಫ್ರೆಂಡ್ಸ್ ಯಾರೂ ಬೇಡ ಅಂದೆ?”

“ಯಾವಾಗಲೂ ಫ್ರೆಂಡ್ಸ್ ಜೊತೆನೇ ಇದ್ದರೆ ನಮ್ಮ ಪರ್ಸನಲ್ ರಿಲೇಷನ್ ಶಿಪ್ ಗೆ ಟೈಮ್ ಕೊಡೋದು ಹೇಗೆ? ” ಎಂದು ಅಸಹನೆ ಮತ್ತು ಆಪ್ಯಾಯಮಾನವಾಗಿ ಮರುಪ್ರಶ್ನೆ ಹಾಕಿದ್ದ ಅಂಕಿತ್. ಈ ಪ್ರಶ್ನೆ ಅಕ್ಷತಾಗೆ ವಿಚಿತ್ರ ಅನ್ನಿಸಿತು. ಏಕೆಂದರೆ ಅಂಕಿತ್ ಮತ್ತು ಅಕ್ಷತಾ ಕಳೆದ ಇಪ್ಪತ್ತು ವರ್ಷಗಳ ಖಾಸಾ ಗೆಳೆಯರು. ತಮ್ಮ ಸ್ನೇಹಿತರ ಪ್ರೀತಿಗೆ ಅದೆಷ್ಟೇ ಅಡ್ಡಿ ಆತಂಕಗಳು ಬಂದರೂ ತಾವೇ ಮುಂದೆ ನಿಂತು ಮದುವೆ ಮಾಡಿಸಿದ್ದುಂಟು.

ಆದರೆ ತಮ್ಮ ನಡುವೆ ಒಂದು ನಿರ್ವ್ಯಾಜ ಸ್ನೇಹ ಮಾತ್ರ ಇದೆ ಅಂದುಕೊಂಡಿದ್ದರು. ಅದನ್ನು Platonic Affair ಅನ್ನಬಹುದೇನೋ… ಅಲ್ಲಿ ಹಾಗೆ, ಇಡೀ ಪ್ರಪಂಚಕ್ಕೇ ಅವರು ಪ್ರೇಮಿಗಳಂತೆ ಕಾಣುತ್ತಿರುತ್ತಾರೆ ಆದರೆ ಅವರಿಬ್ಬರಿಗೆ ಮಾತ್ರ ತಮ್ಮ ನಡುವೆ ಇರುವುದು ಸ್ನೇಹ ಮಾತ್ರ ಅಂತನ್ನಿಸುತ್ತಿರುತ್ತದೆ.. ಅದನ್ನು ಮತ್ತೆ ಮತ್ತೆ ತಾವೇ ಕನ್ ವಿನ್ಸ್ ಮಾಡಿಕೊಳ್ಳುತ್ತಿರುತ್ತಾರೆ.

ಹೀಗಿರುವಾಗ ಅಂಕಿತ್ ನ ಈ ಮಾತು ಅಸಹಜವೆನಿಸಿದರೂ ಒಳಗೊಳಗೇ ಖುಷಿಗೊಂಡ ಅಕ್ಷತ ತಮಾಷೆಗೆ ಎಂಬಂತೆ ” I love You ,ಅಂಕಿತ್ ” ಎಂದಳು. ಆತನಲ್ಲಿ ದೊಡ್ಡದೊಂದು ಯುದ್ಧ ಗೆದ್ದ ಸಂಭ್ರಮ. ನಂದಿ ಬೆಟ್ಟದ ತಂಪಾದ ಸಂಜೆಯಲ್ಲಿ ಪ್ರೇಮ ಸಂತಸದಿಂದ ಸಂಭ್ರಮಿಸುತ್ತಿತ್ತು..ಆದರೆ ಇಪ್ಪತ್ತು ವರ್ಷಗಳ ಸ್ನೇಹ ಮಾತ್ರ ಸಮಾಧಿ ಸೇರಿ ಸಂಕಟಪಡುತ್ತಿತ್ತು..

ಹೀಗೆ ಹಲವಾರು ವರ್ಷಗಳ ಸ್ನೇಹಿತರಿಬ್ಬರು ಪ್ರೇಮಿಗಳಾಗಿ ಪರಿವರ್ತನೆಗೊಳ್ಳುತ್ತಿದ್ದರೆ ಸಂಜೆಯ ಸೂರ್ಯ ಯಾಕೋ ಇದನ್ನು ಸಹಿಸದೇ ಅವಸರದಲ್ಲಿ ಮುಳುಗಿಬಿಟ್ಟ…

ಅವರಿಬ್ಬರೂ ಪ್ರೇಮಿಗಳಾದ ಆ ದಿನ ಅವರ ಪ್ರೇಮ ಸಂತಸದಿಂದ ಸಂಭ್ರಮಿಸುತ್ತಿತ್ತು.. ಆದರೆ ಇಪ್ಪತ್ತು ವರ್ಷಗಳ ಸ್ನೇಹ ಮಾತ್ರ ಸಮಾಧಿ ಸೇರಿ ಸಂಕಟಪಡುತ್ತಿತ್ತು.

* * * * * *

ಅಂಕಿತ್ ಮತ್ತು ಅಕ್ಷತಾಗೆ ಈಗ ಇಬ್ಬರು ಮಕ್ಕಳಿದ್ದಾರೆ. ಅವರ ಪ್ರೇಮ ಸಂಸಾರವೂ ಚೆನ್ನಾಗಿಯೇ ನಡೆಯುತ್ತಿದೆ. ಆದರೆ ಅವರ ಸ್ನೇಹ ಮಾತ್ರ ನಂದಿ ಬೆಟ್ಟದ ಟಿಪ್ಪು ಡ್ರಾಪ್ ನಲ್ಲಿ ಆ ದಿನವೇ ಸತ್ತು ಹೋಗಿತ್ತಲ್ಲ !

* * * * * *

ಆತ ಈ ಕಟ್ಟು ಕತೆ ಯಾಕೆ ಹೇಳಿದ ಎಂಬುದನ್ನು ತಲಾಷ್ ಮಾಡಲಾಗಿ ‘ತನ್ನ ಕೈಗೆಟುಕದಿದ್ದುದರ ಬಗ್ಗೆ ಮನುಷ್ಯ ಫಿಲಾಸಫಿಕಲ್ ಆಗಿ ಮಾತಾಡುತ್ತಾನೆ ‘ ಎಂಬ ಸತ್ಯ ಗೋಚರವಾಯಿತು . ಆತ ಈ ರೀತಿ ಫಿಲಾಸಫಿ ಹೇಳುವಂತದ್ದೇನಾಗಿರಬಹುದು ಎಂದು ನೀವು ಕೇಳುತ್ತೀರಾದರೆ it must be a story of brutal betrayal !

2 comments

  1. ಎಲ್ಲೋ ಒಂದು ಕಡೆ ಅನುಸ್ತಾ ಇತ್ತು, …ಪರ್ವಾಗಿಲ್ಲ ನಿಮ್ ಲೇಖನಗಳ ಅಂತ್ಯ ಹೇಗೆ ಆಗಬಹುದು ಅಂಥ ಒಂದು ಕಲ್ಪನೆ…

Leave a Reply