ಬ್ಲಡ್ ಡೈಮಂಡ್: ಅಂಗೋಲಾದ ಕಥೆಯಾಗದ ಕಥೆಗಳು

ಡಿಸೆಂಬರ್ 2009

ಅಂಗೋಲಾದ ಕವೂಬಾ ಎಂಬ ಪುಟ್ಟ ಹಳ್ಳಿ. ಡಿಸೆಂಬರ್ ತಿಂಗಳ ಆರಂಭದ ದಿನಗಳು. ದಿನವು ಎಂದಿನಂತೆ ತಣ್ಣಗಿತ್ತು. ಅಷ್ಟೇನೂ ದೊಡ್ಡದಾಗಿಲ್ಲದ ಸುರಂಗದಂತಿದ್ದ ಜಾಗವೊಂದರಲ್ಲಿ ನಲವತ್ತೈದು ಜನ ಕಾರ್ಮಿಕರು ತಮ್ಮಷ್ಟಕ್ಕೆ ತಮ್ಮ ನಿತ್ಯದ ಕಾರ್ಯದಲ್ಲಿ ಮಗ್ನರಾಗಿದ್ದರು. ಎಂದಿನಂತೆ ಅಂದೂ ಅವರು ಆ ಕೆಸರು ತುಂಬಿದ ಮೆಕ್ಕಲುಮಣ್ಣಿನಿಂದ ತೆಗೆಯುತ್ತಿದ್ದಿದ್ದು ವಜ್ರಗಳನ್ನು. ಅವರಿಗದು ಹೊಟ್ಟೆಪಾಡು, ನಿತ್ಯದ ಕರ್ಮ.

ಹೀಗಿರುವಾಗಲೇ ಕೆಲ ಸಮವಸ್ತ್ರಧಾರಿ ಅಧಿಕಾರಿಗಳು ದಡದಡನೆ ಸದ್ದುಮಾಡುತ್ತಾ ಆಯುಧಗಳೊಂದಿಗೆ ಅಲ್ಲಿ ಬಂದಿಳಿಯುತ್ತಾರೆ. ಕೂಡಲೇ ಈ ಜಾಗವನ್ನು ತೆರವುಗೊಳಿಸಿ ಎಂದು ಅಬ್ಬರಿಸುತ್ತಾರೆ. ಏನಾಗುತ್ತಿದೆಯೆಂದು ಕಾರ್ಮಿಕರಿಗೆ ಅರ್ಥವಾಗುವ ಮೊದಲೇ ಈ ಸೈನಿಕರು ಸುರಂಗದ ದ್ವಾರದಂತಿದ್ದ ಭಾಗವೊಂದರಲ್ಲಿ ಮಾಡಿಟ್ಟಿದ್ದ ತಾತ್ಕಾಲಿಕ, ಶಿಥಿಲ ವ್ಯವಸ್ಥೆಯನ್ನು ಜೊತೆಗೆ ತಂದಿದ್ದ ಸಲಾಕೆಗಳಿಂದ ನಾಶಪಡಿಸುತ್ತಾರೆ. ಅಲ್ಲಿಗೆ ಬಿಲದಂತಿದ್ದ ಆ ಸುರಂಗವು ಏಕಾಏಕಿ ಧೊಪ್ಪನೆ ಕುಸಿಯುತ್ತದೆ. ಸೈನಿಕರ ಈ ಅಮಾನವೀಯ ಪುಂಡಾಟದೊಂದಿಗೆ ಅಲ್ಲಿದ್ದ ಅಷ್ಟೂ ಕಾರ್ಮಿಕರು ಕ್ಷಣಾರ್ಧದಲ್ಲಿ ಜೀವಂತ ಸಮಾಧಿಯಾಗುತ್ತಾರೆ.

ಕಾರ್ಮಿಕರ ಸಾಮೂಹಿಕ ಮರಣದ ಬಗೆಗಿನ ಸುದ್ದಿ ನಿಧಾನಕ್ಕೆ ಹರಡಿಕೊಳ್ಳುತ್ತದೆ. ಸೈನಿಕರ ಭಯದಿಂದಾಗಿ ಇಲ್ಲಿಯ ಬಹಳಷ್ಟು ಸ್ಥಳೀಯರು ತಮ್ಮ ಆಪ್ತರ ಮೃತದೇಹಗಳನ್ನು ತರಲೂ ಅತ್ತ ಕಡೆ  ತಲೆಹಾಕುವುದಿಲ್ಲ. ಉಳಿದವರು ಹೇಗೋ ಕಸರತ್ತುಗಳನ್ನು ಮಾಡಿ ಕೆಲ ಮೃತದೇಹಗಳನ್ನು ಹೊರತೆಗೆಯುತ್ತಾರೆ. ಲಿಂಡಾ ರೋಸಾ ಎಂಬ ಮಹಿಳೆಯ ಹೇಳಿಕೆಯ ಪ್ರಕಾರ ಸೈನಿಕರ ಈ ದೌರ್ಜನ್ಯದ ವಿರುದ್ಧ ದನಿಯೆತ್ತಲು ಹೋದಾಗ ಅವರನ್ನು ಸೈನ್ಯದ ಮತ್ತೊಂದು ಘಟಕಕ್ಕೆ ಕಳಿಸಲಾಯಿತು. ಅಲ್ಲಿಂದಲೋ ಮತ್ತೆ ಬಂದೂಕು ತೋರಿಸಿ ನ್ಯಾಯ ಕೇಳಲು ಬಂದಿದ್ದ ಕಾರ್ಮಿಕರ ಬಂಧುಗಳನ್ನು ಓಡಿಸಲಾಯಿತು.

**********

ಆಫ್ರಿಕಾದ ಕೆಲ ಭಾಗಗಳಿಂದ ಹೊರತೆಗೆಯಲಾಗುವ ವಜ್ರಗಳನ್ನು ‘ಬ್ಲಡ್ ಡೈಮಂಡ್’ ಎಂದು ವಿಶ್ವಸಂಸ್ಥೆಯು ಕರೆದಿದ್ದು ಸುಮ್ಮನೇನಲ್ಲ.

ಅವು ನಿಜಕ್ಕೂ ರಕ್ತಸಿಕ್ತ ವಜ್ರಗಳೇ. ಸಾವಿರಾರು ಬಡ ಕಾರ್ಮಿಕರ ರಕ್ತ ಕುಡಿದು ಹೊಳೆಯುತ್ತಿರುವ ವಜ್ರಗಳು. ಲಕ್ಷಾಂತರ ಆಫ್ರಿಕನ್ನರ ಜೀವನವನ್ನೇ ಶಾಶ್ವತವಾಗಿ ಹೊಸಕಿಹಾಕಿ ತಮ್ಮ ಹೊಳಪಿನಿಂದ ಈ ದೌರ್ಜನ್ಯದ ಕಥೆಗಳನ್ನು ಮರೆಮಾಚಿರುವ ವಜ್ರಗಳು. ರಕ್ತಕ್ಕಿಂತ ಸಾವಿರಾರು ಪಟ್ಟು ಹೆಚ್ಚು ಸಂಪತ್ತು ಹರಿದುಬಂದಿದೆ ಎಂಬ ಒಂದೇ ಒಂದು ಕಾರಣಕ್ಕಾಗಿ ಕಣ್ಣೆದುರಿಗೇ ಎಲ್ಲವೂ ನಡೆಯುತ್ತಿದ್ದರೂ, ಏನೂ ನಡೆಯುತ್ತಿಲ್ಲವೆಂಬಂತೆ ಅಧಿಕಾರಸ್ಥರ, ಪ್ರಬಲರ ಎಲ್ಲಾ ಇಂದ್ರಿಯಗಳನ್ನು ಮುಚ್ಚಿಸಿಬಿಟ್ಟ ಅಮೂಲ್ಯ ವಜ್ರಗಳು.

ನಾನು ಅಂಗೋಲಾಕ್ಕೆ ತೆರಳಿದಾಗಿನಿಂದ ಇಲ್ಲಿಯ ವಜ್ರಗಳ ಬಗ್ಗೆ ಕೇಳಿದವರು ಸಾಕಷ್ಟಿದ್ದಾರೆ. ನನ್ನನ್ನೂ ಸೇರಿದಂತೆ ವಜ್ರಗಳ ಬಗ್ಗೆ ಹೀಗೆ ಕೇಳಿದವರು ಆಫ್ರಿಕಾದಲ್ಲಿ ವಜ್ರಗಳು ಸಿಗುತ್ತವೆ ಎಂದು ಯಾವತ್ತೋ ಓದಿ ಮರೆತಿದ್ದ ಮಾಹಿತಿಯನ್ನೇ ಮತ್ತೆ ನೆನಪಿಸಿಕೊಂಡು ಕೇಳಿದವರು. ಆದರೆ ವಜ್ರಗಳ ತಲಾಶೆಯಲ್ಲಿ ಹೊರಟ ನನಗೆ ಸಿಕ್ಕಿದ್ದಂತೂ ನಿರಾಶೆ ಮಾತ್ರ. ”ವಜ್ರಗಳು ನಿಮಗಿಲ್ಲಿ ಸಿಗುವುದಿಲ್ಲವೆಂದಲ್ಲ. ಆದರೆ ಖರ್ಚು ಬಹಳ. ಕಾಳಮಾರುಕಟ್ಟೆಯಲ್ಲಿ ಸಿಗುವಂಥದ್ದು ಇವೆಲ್ಲಾ. ಇನ್ನು ಒಂದು ಪಕ್ಷ ನಿಮಗೆ ಸಿಕ್ಕರೂ ಭಾರತದವರೆಗೆ ಕೊಂಡೊಯ್ಯುವುದು ಕಷ್ಟ. ಅಂಗೋಲಾದಲ್ಲಿ ವಜ್ರ ಸಿಗಬೇಕಾದರೆ ಇಲ್ಲಿಯ ಸರಕಾರದ ಅಥವಾ ಸೈನ್ಯದ ಆಯಕಟ್ಟಿನ ಸ್ಥಾನಗಳನ್ನು ಅಲಂಕರಿಸಿರುವವರ ಜೊತೆ ಒಡನಾಟವಿರಬೇಕು”, ಎಂದಿದ್ದ ಒಬ್ಬಾತ. ಆತನ ಮಾತುಗಳಲ್ಲಿರುವ ಸತ್ಯವನ್ನು ಅರಿಯಲು ನನಗೆ ಹೆಚ್ಚು ಸಮಯವೇನೂ ಬೇಕಾಗಲಿಲ್ಲ. ತೈಲದ ನಂತರ ವಜ್ರಗಳನ್ನೇ ತನ್ನ ಆದಾಯದ ಪ್ರಮುಖ ಮೂಲವಾಗಿ ಮಾಡಿಕೊಂಡಿರುವ ಅಂಗೋಲಾದಲ್ಲೇ ವಜ್ರಗಳು ಕಾಣಸಿಗುವುದಿಲ್ಲ ಎಂದರೆ ಏನನ್ನಬೇಕು!

ಅಷ್ಟಕ್ಕೂ ‘ಬ್ಲಡ್ ಡೈಮಂಡ್’ ಎಂದು ವಿಶ್ವಸಂಸ್ಥೆಯು ಕರೆದಿದ್ದು ಯಾವ ಬಗೆಯ ವಜ್ರಗಳನ್ನು? ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಸರಕಾರಗಳ ವಿರುದ್ಧ ದಂಗೆಯೆದ್ದು ತಮ್ಮ ಪ್ರಭುತ್ವವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿರುವ ಕೆಲ ಶಸ್ತ್ರಾಸ್ತ್ರ ಪಡೆ/ಬಣಗಳು ತಮ್ಮ ಶಸ್ತ್ರಾಸ್ತ್ರ ಖರೀದಿಗಳ ಭಾರೀ ಖರ್ಚನ್ನು ನೋಡಿಕೊಳ್ಳಲು ಬಳಸುತ್ತಿರುವ ವಜ್ರನಿಕ್ಷೇಪಗಳಿಂದ ತೆಗೆದ ವಜ್ರಗಳೇ ಈ ‘ಬ್ಲಡ್ ಡೈಮಂಡ್’ ಗಳು. ಆಫ್ರಿಕಾದ ಸಿಯೆರಾ ಲಿಯೋನೆಯಲ್ಲಿ ವಜ್ರದ ಹೆಸರಿನಲ್ಲಿ ನಡೆದ ಹತ್ಯಾಕಾಂಡಗಳ ಬಗ್ಗೆ ತಿಳಿಯದವರಿಲ್ಲ. ಅಲ್ಲಿಯ ಸರಕಾರ ಮತ್ತು ದಂಗೆಕೋರರ ನಡುವೆ ನಡೆಯುತ್ತಿದ್ದ ಸುದೀರ್ಘ ಘರ್ಷಣೆ, ದಂಗೆ, ಯುದ್ಧ, ರಕ್ತಪಾತಗಳಿಂದ ಸತ್ತವರದ್ದೇ ಒಂದು ಸಂಖ್ಯೆಯಾದರೆ ತಮ್ಮ ಕೈಕಾಲುಗಳನ್ನು ಕಳೆದುಕೊಂಡು ಶಾಶ್ವತವಾಗಿ ವಿಕಲಾಂಗರಾದವರ ಸಂಖ್ಯೆ ಅದಕ್ಕಿಂತಲೂ ದೊಡ್ಡದು.

ದೇಶದ ವಜ್ರನಿಕ್ಷೇಪಗಳ ಮೇಲೆ ತಮ್ಮ ಸಂಪೂರ್ಣ ಹಿಡಿತವನ್ನು ಸಾಧಿಸಿ, ಅಮೂಲ್ಯ ವಜ್ರಗಳನ್ನು ಬಿಕರಿಗಿಟ್ಟು ಈ ದಂಗೆಕೋರರು ತರಿಸಿಕೊಂಡಿದ್ದು ಅಪಾರ ಪ್ರಮಾಣದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು. ಸರಕಾರದ ಪತನ ಮತ್ತು ಅಮಾನುಷ ಅತ್ಯಾಚಾರ, ಹತ್ಯಾಕಾಂಡಗಳನ್ನು ಸೇರಿದಂತೆ ಸಿಯೆರಾ ಲಿಯೋನೆಯಲ್ಲಿ ಮುಂದೆ ನಡೆದಿದ್ದೆಲ್ಲಾ ಈಗ ರಕ್ತಸಿಕ್ತ ಇತಿಹಾಸ. ಇಂದಿಗೂ ಈ ನೆಲದಲ್ಲಿ ಎರಡೂ ಕೈಗಳಿಲ್ಲದ ಅದೆಷ್ಟೋ ಮಂದಿ ವಿವಿಧ ನಿರಾಶ್ರಿತರ ಶಿಬಿರಗಳಲ್ಲಿ ಕಾಣಸಿಗುವುದು ಸಾಮಾನ್ಯ. ಜನಸಾಮಾನ್ಯರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ದಂಗೆಕೋರರು ಸ್ಥಳೀಯರಿಗೆ ನೀಡುತ್ತಿದ್ದ ಅಮಾನುಷ ಶಿಕ್ಷೆಯಾಗಿತ್ತದು.

ಇತ್ತ ಅಂಗೋಲಾದಲ್ಲಿ ವಜ್ರದ ಹೆಸರಿನಲ್ಲಿ ನಡೆಯುತ್ತಿದ್ದ ದೌರ್ಜನ್ಯಗಳೂ ಕಮ್ಮಿಯೇನಲ್ಲ. ಆಡಳಿತಾರೂಢ ಎಂ.ಪಿ.ಎಲ್.ಎ ಪಕ್ಷದ ಪ್ರಬಲ ಎದುರಾಳಿಯಾಗಿದ್ದ ಯುನಿಟಾ ಮಿಲಿಟರಿ ದಳವು ಅಂಗೋಲಾದ ಸುದೀರ್ಘ ಆಂತರಿಕ ಯುದ್ಧದ ಅವಧಿಯಲ್ಲಿ ತಮ್ಮ ಶಸ್ತ್ರಾಸ್ತ್ರಗಳ ಖರೀದಿಗೆಂದು ಮೀಸಲಿಟ್ಟಿದ್ದ ಸಂಪನ್ಮೂಲವೆಂದರೆ ಅಂಗೋಲಾದ ವಜ್ರನಿಕ್ಷೇಪಗಳು. ಆಡಳಿತ ಪಕ್ಷಕ್ಕೆ ವಜ್ರಗಳ ಮೇಲೆ ಹಿಡಿತವಿರಲಿಲ್ಲ ಎಂಬುದು ಸುಳ್ಳಾದರೂ ಇಂಥಾ ಪ್ರದೇಶಗಳಲ್ಲಿ ಯುನಿಟಾಗಿರುವಷ್ಟು ಪ್ರಾಬಲ್ಯ ಆಡಳಿತ ಪಕ್ಷಕ್ಕಿರಲಿಲ್ಲ. ಹೀಗಾಗಿ ಸ್ಫೋಟಕಗಳ ಖರೀದಿಗಾಗಿ ಎಂ.ಪಿ.ಎಲ್.ಎ ಆಶ್ರಯಿಸಿದ್ದು ದೇಶದ ತೈಲಸಂಪತ್ತನ್ನು. ಯುನಿಟಾ ಪಕ್ಷದ ಮಿಲಿಟರಿ ನಾಯಕನಾಗಿದ್ದ ಜೋನಸ್ ಸವಿಂಬಿಯ ಸಾವು ಮತ್ತು ಆಂತರಿಕ ಯುದ್ಧದ ಅಂತ್ಯದ ನಂತರವೇ ಎಂ.ಪಿ.ಎಲ್.ಎ ಪಕ್ಷವು ಯುನಿಟಾದ ಕಪಿಮುಷ್ಟಿಯಲ್ಲಿದ್ದ ವಜ್ರನಿಕ್ಷೇಪಗಳನ್ನು ಸೇರಿದಂತೆ ದೇಶದ ಎಲ್ಲಾ ಸಂಪತ್ತನ್ನೂ ನಿಸ್ಸಂಕೋಚವಾಗಿ ಬಾಚಿಕೊಳ್ಳಲಾರಂಭಿಸಿದ್ದು.

ವಜ್ರಗಳ ವಿಚಾರಕ್ಕೆ ಸಂಬಂಧಪಟ್ಟಂತೆ ಜನಸಾಮಾನ್ಯರು ಮತ್ತು ಕಾರ್ಮಿಕವರ್ಗಗಳ ಮೇಲೆ ನಡೆದ ನಿರಂತರ ದೌರ್ಜನ್ಯಗಳು ಸಿಯೆರಾ ಲಿಯೋನೆ ಅಥವಾ ಜಿಂಬಾವ್ವೆಗಳಿಗೆ ಮಾತ್ರ ಸೀಮಿತವಲ್ಲ. ಬೆರಳೆಣಿಕೆಯ ಸಮಿತಿಗಳನ್ನು ಆರಂಭಿಸಿ ವ್ಯವಸ್ಥಿತ ಗಣಿಗಾರಿಕೆಯನ್ನು ನಡೆಸಲು ಅಂಗೋಲಾ ಸರಕಾರವು ಪ್ರಯತ್ನಿಸಿದ್ದು ಹೌದಾದರೂ ಅಂಗೋಲಾ ವಜ್ರನಿಕ್ಷೇಪಗಳ ದೊಡ್ಡಮಟ್ಟಿನ ಸಂಪತ್ತು ಹರಿದುಬರುತ್ತಿದ್ದಿದ್ದು ಪುಡಿಮಾರುಕಟ್ಟೆಗಳಂತಿದ್ದ ಪುಟ್ಟ ಪ್ರದೇಶಗಳಿಂದ. ಇಲ್ಲಿಯ ಕಾರ್ಮಿಕವರ್ಗವು ನದಿಯ ದಂಡೆಗಳಲ್ಲಿ, ಮೆಕ್ಕಲು ಮಣ್ಣಿನ ಪ್ರದೇಶಗಳಲ್ಲಿ ಕಲ್ಲು-ಮಣ್ಣು-ಕೆಸರುಗಳಲ್ಲಿ ಹುದುಗಿದ್ದ ವಜ್ರಗಳನ್ನು ತೆಗೆದು ಮಧ್ಯವರ್ತಿಗಳ ಮೂಲಕವಾಗಿ ಮಾರುಕಟ್ಟೆಗೆ ತಲುಪಿಸುತ್ತಿತ್ತು. ಇಲ್ಲಿಯ ಬಹಳಷ್ಟು ಮಂದಿ ಇದನ್ನೇ ವೃತ್ತಿಯನ್ನಾಗಿಸಿಕೊಂಡವರು ಮತ್ತು ಇದನ್ನು ಹೊರತುಪಡಿಸಿ ಬೇರ್ಯಾವ ವೃತ್ತಿಗಳನ್ನು ಮಾಡಲೂ ಕೌಶಲಗಳನ್ನು ಹೊಂದಿಲ್ಲದವರು. ಮುಂದೆ ಕಾರ್ಖಾನೆಗಳನ್ನು ತಲುಪಿ, ನುಣುಪಾಗಿಸಿಕೊಂಡು, ವಿವಿಧ ಆಕಾರ-ಗಾತ್ರ-ಶೈಲಿಗಳಲ್ಲಿ ಜಗತ್ತಿನಾದ್ಯಂತ ಬಿಕರಿಯಾಗುತ್ತಿದ್ದ ವಜ್ರಗಳು ಇವುಗಳೇ.

ವಿಪರ್ಯಾಸವೆಂದರೆ ಅಂಗೋಲಾದ ಕುವಾಂಗೋ, ಝಾ-ಮುಟೇಬಾದಂತಹ ಪ್ರದೇಶಗಳಲ್ಲಿ ಈ ಅಮಾಯಕರು ಸಂಪಾದಿಸಿದ್ದು ಹತ್ತಾದರೆ ಕಳೆದುಕೊಂಡಿದ್ದು ಮಾತ್ರ ಸಾವಿರ. ವಜ್ರನಿಕ್ಷೇಪಗಳನ್ನು ಹೊಂದಿದ್ದ ಪ್ರದೇಶಗಳ ಮೇಲೆ ಸಂಪೂರ್ಣ ಹಿಡಿತವನ್ನು ಹೊಂದಿದ್ದ ಯುನಿಟಾವನ್ನು ಮಣಿಸಬೇಕಿದ್ದರೆ ಅಂಥದ್ದೇ ಮಾರ್ಗವನ್ನು ಅನುಸರಿಸುವುದು ಎಂ.ಪಿ.ಎಲ್.ಎ ಪಕ್ಷಕ್ಕೂ ಅನಿವಾರ್ಯವಾಗಿತ್ತು. ಹೀಗಾಗಿ ವಜ್ರವೂ ಕೂಡ ಕ್ರಮೇಣ ವಶವಾಗಿದ್ದು ದೇಶದ ಪ್ರಮುಖ ಉದ್ಯಮಗಳಲ್ಲಿ ದೊಡ್ಡ ಪ್ರಮಾಣದ ಶೇರುಗಳನ್ನು ಹೊಂದಿದ್ದ ಸರಕಾರಿ ದೈತ್ಯ ಕುಳಗಳ ಮತ್ತು ಸೈನ್ಯದ ಹಿರಿಯ ಅಧಿಕಾರಿಗಳ ಕೈಗಳಲ್ಲಿ. ಅಂಗೋಲಾದ ಸಂವಿಧಾನದ ಪ್ರಕಾರ ಸರಕಾರಿ ಹುದ್ದೆಯನ್ನು ಅಲಂಕರಿಸಿರುವ ಯಾವೊಬ್ಬನೂ ಇಂಥಾ ಹೆಚ್ಚುವರಿ ಸಂಪತ್ತಿನ ಮೂಲಗಳನ್ನು ಹೊಂದಿರುವಂತಿಲ್ಲ. ಆದರೆ ಇಲ್ಲಿಯ ಭ್ರಷ್ಟಸರಕಾರವು ತನ್ನ ಮೊದಲ ಹೆಜ್ಜೆಯನ್ನೇ ಸಂವಿಧಾನವನ್ನು ಕಡೆಗಣಿಸಿ ಇಟ್ಟಾಗಿತ್ತು.

ಅಂಗೋಲಾದ ವಜ್ರನಿಕ್ಷೇಪಗಳನ್ನು ಕಾಯಲು ನಿಂತ ಸೈನ್ಯದ ಅಧಿಕಾರಿ ಬಳಗವು ಮಾಡಿದ ಮೊಟ್ಟಮೊದಲ ಕೆಲಸವೆಂದರೆ ಭದ್ರತೆಯ ನೆಪದಲ್ಲಿ ಖಾಸಗಿ ಸೆಕ್ಯೂರಿಟಿ ಸಂಸ್ಥೆಗಳ ಪೇದೆಗಳನ್ನಿರಿಸಿಕೊಂಡು ಕಾರ್ಮಿಕರ ಜನ್ಮಜಾಲಾಡಿದ್ದು. ಇಂತಿಪ್ಪ ಚಿಕ್ಕ ಜಾಗವೊಂದರಲ್ಲಿ ಕಾರ್ಮಿಕನೊಬ್ಬ ಕೆಲಸ ಮಾಡಬೇಕಿದ್ದರೆ ಸೈನಿಕರಿಗೆ ಹಫ್ತಾ ಮತ್ತು ತಮಗೆ ಸಿಗುವ ಲಾಭಾಂಶದ ಹಣದಲ್ಲಿ ಕೇಳಿದಷ್ಟು ಪಾಲನ್ನು ನೀಡಬೇಕಿತ್ತು. ಸರಕಾರ, ಸೈನ್ಯ, ಆರಕ್ಷಕ ದಳ, ಮಾಫಿಯಾ… ಹೀಗೆ ಎಲ್ಲರೂ ಒಂದು ಕಡೆ ಸೇರಿ ಕಾರ್ಮಿಕನೆಂಬ ಗುಬ್ಬಿಯ ಮೇಲೆ ಬೆನ್ನುಬೆನ್ನಿಗೆ ಬ್ರಹ್ಮಾಸ್ತ್ರಗಳನ್ನು ಪ್ರಯೋಗಿಸತೊಡಗಿದಾಗ ಆತ ಎದ್ದು ಸಾವರಿಸಿಕೊಳ್ಳುವ ಮಾತೇ ಇರಲಿಲ್ಲ. ಹೀಗೆ ಈ ಕಾರ್ಮಿಕರ ಮೇಲೆ ನಡೆಸಲಾಗಿದ್ದ ಹಿಂಸೆಗಳನ್ನು ವಿವರವಾಗಿ ಬರೆದರೆ ಅದೇ ಒಂದು ದೊಡ್ಡ ಕಥೆಯಾಗಿಬಿಡುವುದು ಖಚಿತ.

ಕಾರ್ಮಿಕರನ್ನು ಸತತವಾಗಿ ಹಿಂಸಿಸುತ್ತಿದ್ದಿದ್ದಲ್ಲದೆ ಹೊಸಹೊಸ ಬಗೆಯ ಚಿತ್ರಹಿಂಸೆಗಳನ್ನು ಪ್ರಯೋಗಿಸುವುದರಲ್ಲಿ ಈ ಸ್ಯಾಡಿಸ್ಟ್ ಸೈನಿಕರ ಪಡೆಗಳಿಗೆ ವಿಲಕ್ಷಣ ಆಸಕ್ತಿಯಿತ್ತು. ಮಚ್ಚಿನ, ಹಾರೆ-ಪಿಕ್ಕಾಸುಗಳ ಹಿಡಿಗಳಿಂದ ನಿತಂಬ, ಕೈ ಮತ್ತು ಪಾದಗಳಿಗೆ ನೀಡುತ್ತಿದ್ದ ಬಲವಾದ ಹೊಡೆತಗಳು ಇವರ ಸಾಮಾನ್ಯ ಶಿಕ್ಷೆಗಳಲ್ಲೊಂದು. ಇಂಥಾ ಕ್ಷಣಗಳಲ್ಲಿ ಕಾರ್ಮಿಕರನ್ನು ನಗ್ನರನ್ನಾಗಿಸುವುದಲ್ಲದೆ ಅವರ ಬಟ್ಟೆಗಳನ್ನು, ಸ್ವತ್ತುಗಳನ್ನು ಸುಡಲಾಗುತ್ತಿತ್ತು. ಇನ್ನು ಥಳಿತಕ್ಕೊಳಗಾಗುತ್ತಿರುವಂತೆ ತಮಗೆ ಬೀಳುತ್ತಿದ್ದ ಹೊಡೆತಗಳನ್ನೂ ಈ ಬಡಪಾಯಿಗಳು ಎಣಿಸಬೇಕಿತ್ತು. ”ತಮಗೆ ಸುಸ್ತಾಗುವಷ್ಟು ಥಳಿಸಿದ ನಂತರವೇ ಅವರು ನಿಲ್ಲಿಸುತ್ತಿದ್ದರು. ನಂತರ ಕಾರ್ಮಿಕರು ಒಬ್ಬರನ್ನೊಬ್ಬರು ಥಳಿಸಬೇಕಿತ್ತು”, ಎಂದು ಕಾರ್ಮಿಕನೊಬ್ಬ ರಫೆಲ್ ಮಾರ್ಕಸ್ ಮೊರೈಸ್ ರವರ ‘ಬ್ಲಡ್ ಡೈಮಂಡ್: ಕಿಲ್ಲಿಂಗ್ ಆಂಡ್ ಟಾರ್ಚರ್’ ಕೃತಿಗಾಗಿ ವಿವರಿಸುತ್ತಾನೆ. ಹೀಗೆ ಅಮಾನುಷವಾಗಿ ಥಳಿಸುತ್ತಿದ್ದಿದ್ದಲ್ಲದೆ ಬಟ್ಟೆಗಳನ್ನು ಮರಳಿಸದೆ ನಗ್ನರಾಗಿಯೇ ಅಲ್ಲಿಂದ ಓಡಿಸುವುದು, ರಕ್ತ ಕಾರಿಕೊಂಡು ವಿಲವಿಲ ಒದ್ದಾಡುತ್ತಿರುವವರನ್ನು ಅಲ್ಲೇ ಬಿಟ್ಟುಹೋಗುವುದು ಇತ್ಯಾದಿಗಳೂ ಅಲ್ಲಿ ನಿರಾತಂಕವಾಗಿ ನಡೆಯುತ್ತಿದ್ದವು.

ರಫೆಲ್ ಮಾರ್ಕಸ್ ಮೊರೈಸ್ ತಮ್ಮ ‘ಬ್ಲಡ್ ಡೈಮಂಡ್: ಕಿಲ್ಲಿಂಗ್ ಆಂಡ್ ಟಾರ್ಚರ್’ ಕೃತಿಯಲ್ಲಿ ಇಂಥಾ ನೂರಕ್ಕೂ ಹೆಚ್ಚು ಪ್ರಕರಣಗಳನ್ನು ವಿವರವಾಗಿ ದಾಖಲಿಸಿದ್ದಾರೆ. ರೈಫಲ್ಲುಗಳ ಹಿಡಿಗಳಿಂದ ಬಲವಾಗಿ ತಿವಿಯುವುದು, ಮರ್ಮಾಂಗಗಳಿಗೆ ಬಡಿದು ಪೀಡಿಸುವುದು, ಕಾರ್ಮಿಕರನ್ನು ನಗ್ನರನ್ನಾಗಿಸಿ ಪರಸ್ಪರರ ಮರ್ಮಾಂಗಗಳನ್ನು ಸ್ಪರ್ಶಿಸುವಂತೆ ಒತ್ತಾಯಪಡಿಸುವುದು, ಕೆಸರನ್ನು ಕುಡಿಸುವುದು, ಲೀಟರುಗಟ್ಟಲೆ ನದಿಯ ಕಲುಷಿತ ನೀರನ್ನು ಕುಡಿಸುವುದು, ಬಾಯೊಳಗೆ ಹುಲ್ಲುಗಳನ್ನು ತುಂಬಿ ಹೊಟ್ಟೆಗೆ ಬಲವಾಗಿ ಒದೆಯುವುದು… ಹೀಗೆ ತಮ್ಮ ಮೇಲೆ ನಡೆಯುತ್ತಿದ್ದ ಭಯಂಕರ ದೈಹಿಕ ಮತ್ತು ಮಾನಸಿಕ ದೌರ್ಜನ್ಯಗಳನ್ನು ಕಾರ್ಮಿಕರು ಇಲ್ಲಿ ಎಳೆಎಳೆಯಾಗಿ ವಿವರಿಸಿದ್ದಾರೆ.

ಕಾರ್ಮಿಕರನ್ನು ಪೀಡಿಸುವುದಕ್ಕೆಂದೇ ಹೊಸ ಹೊಸ ವಿಧಾನಗಳನ್ನೂ ಕೂಡ ಸೈನಿಕರು ಪ್ರಯತ್ನಿಸುತ್ತಾ ಮೋಜು ನೋಡುವುದು ಸಾಮಾನ್ಯವಾಗಿತ್ತು. ಉದಾಹರಣೆಗೆ ಕಾರ್ಮಿಕರನ್ನು ಲಾರಿಗಳಲ್ಲಿ ದನಗಳಂತೆ ತುಂಬಿಸಿ ವೇಗವಾಗಿ ಸಾಗುತ್ತಿದ್ದ ಲಾರಿಗಳಿಂದ ಧುಮುಕುವಂತೆ ಮಾಡಲಾಗುತ್ತಿತ್ತು. ಕಾರ್ಮಿಕರು ಪರಸ್ಪರರ ಸಹಾಯಕ್ಕೆ ಬರಬಾರದೆಂಬ ಕಾರಣಕ್ಕಾಗಿ ಒಂದಿಷ್ಟು ದೂರವಿಟ್ಟುಕೊಂಡೇ ಟ್ರಕ್ಕುಗಳಿಂದ ಹಾರಲು ಕಾರ್ಮಿಕರಿಗೆ ಸೂಚಿಸಲಾಗುತ್ತಿತ್ತು. ಇನ್ನು ಬಂದೂಕು ತೋರಿಸಿ ಕಾರ್ಮಿಕರನ್ನು ಕೆಸರಿನಿಂದ ಸ್ನಾನ ಮಾಡಿಸಲಾಗುತ್ತಿದ್ದಿದ್ದಲ್ಲದೆ, ಕಾರ್ಮಿಕರು ಕಟ್ಟಿಗೆಗಳನ್ನು ರಾಶಿ ಹಾಕಿ, ಬೆಂಕಿ ಹಚ್ಚಿ, ಬೆಂಕಿಯ ಮೇಲೆ ಅತ್ತಿತ್ತ ಕುಪ್ಪಳಿಸುತ್ತಾ ತಮ್ಮ ದೇಹಗಳನ್ನು ಒಣಗಿಸಬೇಕಿತ್ತು. ನಗ್ನ ಕಾರ್ಮಿಕರನ್ನು ಸಾಲಾಗಿ ಮಲಗಿಸಿ ಸೊಂಟಗಳನ್ನು ಕಟ್ಟಿ ಅವರನ್ನು ಮೆಟ್ಟಿಲುಗಳಂತೆ ಬಳಸಿಕೊಳ್ಳುವುದು, ಅವರ ದೇಹದ ಮೇಲಿನಿಂದ ಗಾಡಿಗಳನ್ನು ಹಾಯಿಸುವುದು, ನಗ್ನರಾದ ಕಾರ್ಮಿಕರಿಂದ ನೃತ್ಯಗಳನ್ನು, ದೈಹಿಕ ಕಸರತ್ತುಗಳನ್ನು ಮಾಡಿಸುವುದು, ಅವರ ದೇಹದ ಕೆಲ ಭಾಗಗಳನ್ನು ಬೆಂಕಿಯ ಜ್ವಾಲೆಗೆ ಹಿಡಿಯುವುದು… ಹೀಗೆ ತರಹೇವಾರಿ ವಿಧಾನಗಳಿಂದ ಕಾರ್ಮಿಕರನ್ನು ಇವರುಗಳೆಲ್ಲಾ ಕಾಡಿದ್ದು ಕಮ್ಮಿಯೇನಲ್ಲ. ಗುಲಾಮಗಿರಿಯ ನಂತರ ಆಫ್ರಿಕನ್ ನಾಗರಿಕರು ಅನುಭವಿಸಿದ ನೋವಿನ ಕಥನಗಳಲ್ಲಿ ರಾಜಕೀಯ ದಾಳವಾಗಿ ಬಳಕೆಯಾಗುತ್ತಿರುವ, ಸಿರಿವಂತರಿಗಾಗಿ ಚಿನ್ನದ ಮೊಟ್ಟೆಯಿಡುವ ಕೋಳಿಗಳಂತಿರುವ ಈ ವಜ್ರದ ಕಥನಗಳು ಇಂದಿಗೂ ಪ್ರಸ್ತುತ.

ಅಂಗೋಲನ್ ಸೈನ್ಯದ, ಪೋಲೀಸರ ಮತ್ತು ಖಾಸಗಿ ಸೆಕ್ಯೂರಿಟಿ ಸಂಸ್ಥೆಗಳ ಪೇದೆಗಳಿಂದ ಚಿತ್ರಹಿಂಸೆಗೊಳಗಾಗಿ ಅಂಗವಿಕಲರಾದವರ ಮತ್ತು ಸತ್ತ ಕಾರ್ಮಿಕರ ಸಂಖ್ಯೆ ದೊಡ್ಡದು. ಸೈನಿಕರ ತೀವ್ರ ಥಳಿತದಿಂದ ಕಾರ್ಮಿಕರೇನಾದರೂ ಕೊನೆಯುಸಿರೆಳೆದರೆ ಅವರನ್ನು ಒಂದೋ ಅಲ್ಲೇ ಬಿಟ್ಟುಹೋಗಲಾಗುತ್ತಿತ್ತು ಅಥವಾ ಕ್ವಾಂಗು ನದಿಗೆ ನಿರ್ದಾಕ್ಷಿಣ್ಯವಾಗಿ ಎಸೆಯಲಾಗುತ್ತಿತ್ತು. ಸಾಮಾನ್ಯವಾಗಿ ಇಂಥಾ ಪ್ರಕರಣಗಳು ಆಗಿಯೇ ಇಲ್ಲವೇನೋ ಎಂಬಂತೆ ಮುಚ್ಚಿಹೋಗುತ್ತಿದ್ದವು. ಸೈನಿಕರ ಚಿತ್ರಹಿಂಸೆಯ ಭಯದಿಂದಾಗಿ ಕೊಲೆ ಪ್ರಕರಣಗಳಲ್ಲಿ ಪ್ರತ್ಯಕ್ಷದರ್ಶಿಗಳಾಗಿದ್ದ ಇತರ ಕಾರ್ಮಿಕರೂ ಈ ಬಗ್ಗೆ ತುಟಿ ಪಿಟಕ್ಕೆನ್ನುತ್ತಿರಲಿಲ್ಲ. ಇನ್ನು ಬೆರಳೆಣಿಕೆಯ ಮಂದಿ ಒಂದಷ್ಟು ಧೈರ್ಯ ಮಾಡಿ ಠಾಣೆಯ ಮೆಟ್ಟಿಲು ಹತ್ತಿದರೂ ಅಲ್ಲಿ ಅವರಿಗೆ ನ್ಯಾಯ ಸಿಗುವ ಭರವಸೆಯೇನೂ ಇರಲಿಲ್ಲ. ಹೀಗೆ ಠಾಣೆಯ ಮೆಟ್ಟಿಲೇರಿದ ನಂತರ ಕೋಲು ಕೊಟ್ಟು ಏಟು ತಿನ್ನಿಸಿಕೊಳ್ಳುವ ಫಜೀತಿ ಎದುರಾಗುವುದರಿಂದ ಬೇರೆ ದಾರಿಯಿಲ್ಲದೆ ಸ್ಥಳೀಯ ಕಾರ್ಮಿಕರು ಇವೆಲ್ಲವುಗಳಿಂದ ದೂರವಿರುವುದು ಸಹಜವೇ ಆಗಿತ್ತು.

ಅಂಗೋಲಾದಲ್ಲಿ ‘ಬ್ಲಡ್ ಡೈಮಂಡ್’ ವಿಚಾರಕ್ಕೆ ಸಂಬಂಧಪಟ್ಟಂತೆ ನಡೆದ ಅಸಂಖ್ಯಾತ ಪ್ರಕರಣಗಳಲ್ಲಿ ಬೆರಳೆಣಿಕೆಯಷ್ಟೇ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾದವು. ಸರಕಾರವು ಈ ಪ್ರಕರಣಗಳ ಸಂತ್ರಸ್ತರಿಗೆ ನ್ಯಾಯ ಒದಗಿಸುವುದಿರಲಿ, ಇಂಥಾ ಪ್ರಕರಣಗಳು ವಿವಾದಕ್ಕೀಡಾದಾಗಲೆಲ್ಲಾ ಜವಾಬ್ದಾರಿಯುತವಾಗಿ ಉತ್ತರಿಸುವ ಸೌಜನ್ಯವನ್ನೂ ತೋರಲಿಲ್ಲ. ಅಂಗೋಲನ್ ಸರಕಾರಕ್ಕೆ ನಿಜವಾದ ಇಚ್ಛಾಶಕ್ತಿಯಿದ್ದರೆ ಇಲ್ಲಿಯ ವಜ್ರದ ಸಂಪತ್ತನ್ನು ವ್ಯವಸ್ಥಿತವಾಗಿ ಬಳಸಿಕೊಂಡು ತನ್ನ ನಾಗರಿಕರಿಗಾಗಿ ಉದ್ಯೋಗಗಳನ್ನು ಸೃಷ್ಟಿಸಬಹುದಿತ್ತು. ಆದರೆ ದುರಾದೃಷ್ಟವಶಾತ್ ವ್ಯವಸ್ಥೆಯಿಂದ ಹಿಡಿದು ವ್ಯವಸ್ಥೆಯನ್ನು ಸಂಭಾಳಿಸುವ ಗುತ್ತಿಗೆಯನ್ನು ಪಡೆದಿದ್ದ ಎಲ್ಲರಿಗೂ ಇದ್ದಿದ್ದು ಸ್ವಂತ ಹಿತಾಸಕ್ತಿಯ ದುರುದ್ದೇಶಗಳು ಮಾತ್ರ.

ರಕ್ತಸಿಕ್ತ ವಜ್ರಗಳನ್ನು ಮುಂದಿಟ್ಟುಕೊಂಡು ಕಾಸು ಬಾಚಿಕೊಳ್ಳುತ್ತಿರುವ ವ್ಯವಸ್ಥಿತ ಮಾಫಿಯಾಗಳ ಕೈಗಂಟಿಕೊಂಡಿರುವ ರಕ್ತದ ಕಲೆಗಳು ಇನ್ನೂ ಒಣಗಿಲ್ಲ. ಜೊತೆಗೇ ಇವರುಗಳ ರಕ್ತದ ದಾಹವೂ ಇನ್ನೂ ಇಂಗಿದಂತೆ ಕಾಣುತ್ತಿಲ್ಲ. ಯಾವ ಸಮರ್ಥನೆಯ ಯಾವ ಸುಗಂಧದ್ರವ್ಯ ತಾನೇ ಈ ಪಾಪದ ಕಮಟನ್ನು ನಿವಾಳಿಸಿ ತೆಗೆಯಬಲ್ಲದು?

Leave a Reply