ತೀವ್ರ ಗ್ರಾಮೀಣ ಕಂಪನಗಳ ಕಥೆಗಳು- ಮಲ್ಲಿಗೆ ಹೂವಿನ ಸಖ

ನಾಗರೇಖಾ ಗಾಂವಕರ

ಎಲ್ಲ ಶಿಷ್ಟ ಸಂಸ್ಕಾರಗಳು, ಸಾಹಿತ್ಯ ಮತ್ತು ಸಂಪ್ರದಾಯಗಳು ಎಲ್ಲವನ್ನು ಒಟ್ಟಾರೆ ಗಮನಿಸಿದರೆ ಅದರ ಮೂಲ ಬೇರು ಜಾನಪದ. ಅಂತಹ ಹಳ್ಳಿಗಾಡಿನ ಜನಪದರ ಜೀವನದ ಜೀವನ್ಮುಖಿ ತಂತುಗಳಲ್ಲಿ ಅಡಗಿದ ಸುಪ್ತ ಸುಗಂಧವನ್ನು, ದುರ್ಗಮ ದಾರಿಯನ್ನು ಬದುಕಿನ ಹತ್ತು ಹಲವು ಸಂಕೀರ್ಣತೆಗಳನ್ನು ತಾನು ಕಂಡಂತೆ, ಕೆಲವೊಮ್ಮೆ ಅನುಭವಿಸಿದ ಸಂಗತಿಗಳ ಹೊಸ ಅವಿರ್ಭಾವದಂತೆ ಕಟ್ಟಿಕೊಡಬಲ್ಲ ಕೌಶಲ್ಯ ಈ ಕಥೆಗಾರರದು. ಹಾಗಾಗೇ ಟಿ ಎಸ್ ಗೊರವರ್ ಘನಗಾಂಭೀರ್ಯದ ಸಾಹಿತಿಗಳ ಸಾಲಿನಲ್ಲಿ ನಿಲ್ಲದೇ ನಮ್ಮ ನಿಮ್ಮದೇ ಮನೆಯ ಅಕ್ಕಪಕ್ಕದ ಮನೆಯವರಾಗಿ ಬಿಡುತ್ತಾರೆ.

ಇಲ್ಲಿರುವ ಆರೂ ಕಥೆಗಳು ಮಾನವ ಬದುಕಿನ ಲೌಕಿಕ ಪ್ರಜ್ಞೆಗಳ ಸುತ್ತಲೇ ಸುತ್ತುತ್ತವೆ. ಎಲ್ಲಿಯೂ ಅನುಭಾವಿಕ ಆಧ್ಯಾತ್ಮಿಕ, ಪಾರಮಾರ್ಥಿಕ ಸಂದೇಶಗಳಾಗಲಿ, ಉಪದೇಶಗಳಾಗಲಿ ಇಲ್ಲದೇ ಅಪ್ಪಟ್ ಬದುಕಿನೊಂದಿಗೆ ಸಂವಾದಿಸುತ್ತವೆ. ಎಲ್ಲಿಯೂ ಪಟ್ಟಣದ ನಯನಾಜೂಕಿನ ವೈಯಾರವಿಲ್ಲದ, ಮುಖವಾಡದ ಪಾತ್ರಗಳಿಲ್ಲದ, ಹಣದ ಹಮ್ಮಿನ ದಾಖಲೆಯೇ ಇಲ್ಲದ ಕೇವಲ ದೇಸಿ ಜೀವನದ ಕಸುವುಳ್ಳ ಗಾಂವಟಿ ಕಥೆಗಳು.

ಮೊದಲ ಕಥೆ “ಕನಸಿನ ವ್ಯಾಪಾರ”ದಲ್ಲಿ ಕನಸಿನ ವ್ಯಾಪಾರ ಮತ್ತು ಮನಸಿನ ವ್ಯಾಪಾರಗಳು ಒಂದಕ್ಕೊಂದು ಡಿಕ್ಕಿಹೊಡೆದು ವ್ಯಸನಕ್ಕೊಳಗಾಗುವ ಮಾಸ್ತರನೊಬ್ಬನ ತಳಮಳವನ್ನು ಓದುತ್ತ ಈ ಪಾತ್ರದೊಳಗೆ ಸ್ವಯಂ ಎಳೆಯಲ್ಪಡುತ್ತೇವೆ. ಮಾಸ್ತರನಾಗಿರುವ ತಾನು ಕನಸಿನಲ್ಲಿ ಟೋಪಿ ಮಾರುವವನಾಗಿದ್ದು ವಿಚಿತ್ರ ಮಾನಸಿಕ ವ್ಯಾಪಾರಗಳ ಗೋಜಲು ವ್ಯವಹಾರಗಳನ್ನು ಪಡಿಮುಡಿಸುವ ಕಥೆ, ಇಂದಿನ ಶಿಕ್ಷಣ ವ್ಯವಸ್ಥೆಯ ಮೇಲಿನ ಕಥೆಗಾರನ ವಿಮರ್ಶಾತ್ಮಕ ದೃಷ್ಟಿಯೂ ಹೌದೆನ್ನಬಹುದು. ನಮ್ಮ ಮನಸ್ಸಿನ ಆ ತುಡಿತವೇ ಕಥೆಯಾಗಿದೆಯಲ್ಲ ಎನ್ನಿಸುವಷ್ಟು ವಿಸ್ಮಯ ಪರಕಾಯದ ಕಥೆ. ಇಲ್ಲಿ ಮಾಸ್ತರ ಒಂದು ಉದಾಹರಣೆ ಅಷ್ಟೇ. ಜಗದಗಲದ ಎಲ್ಲ ಪಾತ್ರಗಳು ಹೀಗೆ ಗೊಂದಲದೊಳಗೆ ಗೂಡುಕಟ್ಟುತ್ತಲೇ ಅಸಹನೀಯತೆ ಅತೃಪ್ತಿಯ ನಡುವೆಯೇ ಬೆಳಗುತ್ತೇವೆ. ಕನಸಿನಲ್ಲಿ ಗಟಗಟನೇ ಕುಡಿದ ಬಿಸಿ ಚಹಾ ಜಾಗೃತ ಸ್ಥಿತಿಯಲ್ಲೂ ಹಾಗೇ ವರ್ತಿಸುವ ಖಯಾಲಿ ಹುಟ್ಟಿಸಿ ಬದುಕಿನ ಭ್ರಮೆಯನ್ನೇ ತೆರೆದಿಡುತ್ತದೆ.
“ಕತ್ತಲಿನಾಚೆ” ಕಥೆಯ ಪದ್ಮಾ, ಗಂಡನ ಮನೆಯಲ್ಲಿ ಬಂಜೆ ಎನ್ನಿಸಿಕೊಂಡು ಚಿಂತೆಯ ಬೇಗೆಯಲ್ಲಿ ಬೆಂದು ಮಾನಸಿಕ ಸ್ಥಿಮಿತ ಕಳೆದುಕೊಂಡರೂ, ಗರ್ಭಹೊತ್ತ ನಂತರ ಮತ್ತೆ ಮೊದಲಿನಂತಾದರೆ, ಆಕೆಯ ಗಂಡ ದೇವರಾಜ್ ಪತ್ನಿಯ ಗರ್ಭಕ್ಕೆ ಕಾರಣವನ್ನು, ಕಾರಣನಾದವನನ್ನು ಹುಡುಕುತ್ತಾ ಮಾನಸಿಕ ರೋಗಿಯಾಗುತ್ತಾನೆ. ಅನಿಶ್ಚಿತ ಸಂಬಂಧಗಳಲ್ಲಿ ಮೂಡುವ ನಿಶ್ಚಿತ ರೂಪ ಹೇಗೆ ತಾತ್ಪೂರ್ತಿಕವೋ, ಹಾಗೇ ನಿಶ್ಚಿತ ಸಂಬಂಧಗಳಲ್ಲಿ ಹುಟ್ಟುವ ಅನಿಶ್ಚಿತ ಬಂಧವೂ ತಾತ್ಪೂರ್ತಿಕವೇ. ಅದರೊಂದಿಗೆ ಬಂಜೆತನಕ್ಕೆ ಬರಿ ಹೆಣ್ಣೆ ಕಾರಣ ಎಂಬ ಪಾರಂಪಾರಿಕ ನಂಬುಗೆಯನ್ನು ಈ ಮೂಲಕ ವೈಂಗ್ಯ ಮಾಡುತ್ತಾರೆ ಲೇಖಕರು.

“ಪೆಪ್ಪರಮೆಂಟು” ಧ್ಯಾನಿಸಿ ಬರೆದ ಕಥೆ. ಬಾಲಕನೊಬ್ಬನ ಪೆಪ್ಪರಮೆಂಟಿನ ಆಸೆ ಇಡೀ ಕಥೆಯ ಮೂಲ. ಮನೆಯ ಹೊಲದಲ್ಲಿ ಬೆಳೆದ ಶೇಂಗಾ ಇಷ್ಟಪಡದ ಬಾಲಕನೋರ್ವ ಆಧುನಿಕತೆಯ ಸಿಹಿತಿನಿಸು ಪೆಪ್ಪರಮೆಂಟಿನ್ನು ತಿನ್ನಬೇಕೆನ್ನುವ ಖಯಾಲಿಗೆ ಬೀಳುತ್ತಾನೆ.ಆದರೆ ಅದನ್ನು ದುಡ್ಡುಕೊಟ್ಟು ತೆಗೆಸಿಕೊಡಲಾಗದ ಕುಟುಂಬದ ಬಡತನದ ಬೇಗೆ ಉರಿಯ ಕೆನ್ನಾಲಿಗೆಯಾದರೆ ಆಸೆಯನ್ನು ತೀರಿಸಿಕೊಳ್ಳುವುದಕ್ಕೋಸ್ಕರ ಹುಡುಗನೆಸಗುವ ಪ್ರಮಾದ ಆತನನ್ನೆ ಉರಿಗೆ ಬಲಿ ಬೇಡುತ್ತದೆ. ಪೆಪ್ಪರುಮೆಂಟು ಕೇವಲ ಪ್ರತೀಕ. ಆಧುನಿಕತೆಯ ಬೆಡಗು ವ್ಯಾಮೋಹ ಜೊತೆಗೆ ಅದರ ಕಠೋರತೆಯನ್ನು ಅದು ತಂದೊಡ್ಡಬಹುದಾದ ಭೀಕರ ಆಪತ್ತನ್ನು ಸೂಕ್ಷ್ಮವಾಗಿ ನಿರೂಪಿಸುತ್ತಾರೆ.

“ಮಲ್ಲಿಗೆ ಹೂವಿನ ಸಖ” ವಿನೂತನ ಶೈಲಿಯಲ್ಲಿ ಮೂಡಿದೆ.ಬದುಕಿನಾಟದಲ್ಲಿ ಮಲ್ಲಿಗೆ ಕೇವಲ ಸಾಂಕೇತಿಕ.
ವ್ಯಸನದ ಮೂಲ ಕೆಟ್ಟದ್ದೇ ಆಗಬೇಕೆಂದೆನೂ ಇಲ್ಲ. ವ್ಯಸನದ ವಸ್ತು ಬೀಡಿ ಸಿಗರೇಟು ಶರಾಬು ಇತ್ಯಾದಿಗಳೇ ಯಾಕಾಗಬೇಕು? ಎಲ್ಲರ ಮೂಗರಳಿಸುವ ಮಲ್ಲಿಗೆಯನ್ನು ವ್ಯಸನದ ಧಾತುವಾಗಿಸಿಕೊಂಡು ಕಥೆಗಾರ ನಮ್ಮನ್ನು ವಿವೇಚನೆಗೆ ಇಡುಮಾಡುತ್ತಾರೆ. ಇಂದಿಗೆ ಸತ್ಯ ಮುಂದೊಂದು ದಿನ ಸುಳ್ಳಾಗಬಾರದೆಂಬ ನಿಯಮವೇನಿಲ್ಲ. ಇಂದಿಗೆ ಹಿತವಾದದ್ದು ಮುಂದೆ ಪ್ರಾರಬ್ದವೂ ಆಗಬಹುದು. ಮ್ಯಾಕಬೆತ್ ನಾಟಕದ “ಈಚಿiಡಿ is ಜಿouಟ, ಜಿouಟ is ಜಿಚಿiಡಿ” ಸಾಲು ಇದನ್ನೆ ಉದಾಹರಿಸುವುದು. ಯಮನೂರಪ್ಪನ ಮಲ್ಲಿಗೆಯ ಮೋಹ ಮತ್ತು ಆತನ ಬದುಕಿಗೆ ಅದು ಹೇಗೆ ಮಾರಕವಾಗುತ್ತದೆ ಎಂಬ ವಿಶ್ಲೇಷಣೆಯಿದೆ. ಹಳ್ಳಿ ಜೀವನದ ಕೆಲವು ಸ್ಟೀರಿಯೋಟೈಪ್ ಪಾತ್ರಗಳು ಅವುಗಳಲ್ಲಿ ಕಂಡುಬರುವ ವೈಯಕ್ತಿಕ ಭಿನ್ನತೆಗಳು ಹೇಗಿರುತ್ತವೆ ಎಂಬುದಕ್ಕೆ ಈ ಸಖ ಉದಾಹರಣೆಯಾಗುತ್ತಾನೆ.

“ದೇವರಾಟ” ಕಥೆ ಸಾಮಾಜಿಕ ಅನಿಷ್ಟವೊಂದು ಉಂಟುಮಾಡುವ ಸಮಸ್ಯೆಗೆ ದೈವದ ಆಚರಣೆ ಹೇಗೆ ಪರಿಹಾರ ನೀಡಬಲ್ಲದು ಎಂಬುದರ ಕುರಿತಾಗಿದೆ. ಹನುಮಪ್ಪನ ಓಸಿ ಆಟದ ಹುಚ್ಚು ಮನೆಮಠವನ್ನೇ ಕಬಳಿಸುವ ಸೂಚನೆ ಸಿಕ್ಕಂತಾಗಿ ತಂದೆ ವೃದ್ಧ ಶಂಕ್ರಪ್ಪ, ದೇವರನ್ನು ಮೈಮೇಲೆ ಆವಾಹಿಸಿಕೊಳ್ಳುವ ಮೂಲಕ ತನ್ನ ಹೊಲವನ್ನು ಮಗ ಹನುಮಪ್ಪನಿಂದ ಹಾಳಾಗದಂತೆ ಕಾಯ್ದುಕೊಳ್ಳುತ್ತಾನೆ. ಯಾವ ಬುದ್ಧಿವಾದಕ್ಕೂ ಜಗ್ಗದ ತಂದೆಯೆಂಬ ಗೌರವ, ಮಮಕಾರ ಹೊಂದಿರದ ಹನುಮಪ್ಪ ಮೈಮೇಲೆ ಬರುವ ಹಿರೇದೇವರಿಗೆ ಅಂಜಿ ತನ್ನ ಹೊಲ ಮಾರುವ ನಿರ್ಧಾರದಿಂದ ಹಿಂದೆ ಸರಿಯುವುದು, ದೇವನೆಂಬ ಕಲ್ಪನೆಯ ಆಳವಾದ ಬೀಳಲು ಹಳ್ಳಿಯ ಜನರ ಬದುಕನ್ನು ಆ ಬದ್ಧತೆಗೆ ನೆಲೆಗೊಳಿಸಿದ ಪರಿಯನ್ನು ವಿಶೇಷವಾಗಿ ನಿರೂಪಿಸುತ್ತಾರೆ.

ಕೊನೆಯ ಕಥೆ “ ಕದ್ದು ನೋಡುವ ಚಂದಿರ” ಜಗತ್ತಿನ ವಿಪಯಾಸಗಳನ್ನು ಮಾರ್ಮಿಕ ಉದಾಹರಣೆಗಳ ಮೂಲಕ ವಿವರಿಸುತ್ತಾ, ಜಗದ ಕಣ್ಣು ಗುರುತಿಸಿಯೂ ಅವು ಗುಪ್ತವಾದವುಗಳೆಂಬ ಗೃಹಿಕೆ ಮೂಡಿಸುವ ಹಲವು ವಿಚಾರಗಳು ಚಂದಿರನ ಕಣ್ಣಿಗೆ ಬೀಳುತ್ತಾ, ಚಂದಿರನೂ ಆ ಗೊಂದಲಗಳ ಮೂಟೆಯಲ್ಲಿ ಮಿಂದೇಳುವ ಅವನನ್ನು ಬಿಡದ ಮೋಹ ಮಮಕಾರಗಳು, ಅದರಾಚೆ ಇರುವುದೇನಿಲ್ಲ ಎಂಬ ಘೋರ ಸತ್ಯ ಇಲ್ಲಿದೆ. ಕಥೆಯ ಉದ್ದಕ್ಕೂ ಬರುವ ಬೆದೆಗೇರಿದ ನಾಯಿಗಳು, ಕತ್ತಲಾಗುತ್ತಲೇ ವಿಟನಾಗುವ ಸ್ವಾಮಿಜಿ, ಸಹಜ ಸಂಸಾರದ ಸಾಮಾನ್ಯ ವಿಷಯಗಳು, ಹಾದಿಬೀದಿ ರಂಪಾಟಗಳು, ಜೂಜು ಓಸಿಗಳಲ್ಲಿ ಮೈಮರೆತವರು ಎಲ್ಲವನ್ನು ಲೌಖಿಕದ ದ್ವನಿಯಾಗಿ ಮೂಡಿಸುವ ಕಥೆಗಾರ ಜೀವನ ಯಾತ್ರೆ ಇಷ್ಟೇ ಎಂಬ ಅಪ್ಪಟ ಸತ್ಯವನ್ನು ಪ್ರತಿಪಾದಿಸುತ್ತಾರೆ.

ಇಲ್ಲಿಯ ಕಥೆಗಳಲ್ಲಿಯ ಸನ್ನಿವೇಷಗಳು ಸಂಗತಿಗಳು ಯಾವುದೋ ದೂರದೂರಿನದಲ್ಲ. ನನ್ನದಲ್ಲದ ಸಂವೇದನೆ ಅಲ್ಲ. ಅರೇ! ನಾನೇ ಈ ಕಥೆಯೊಳಗಿನ ಚಿತ್ರ ಯಾ ಪಾತ್ರ ಆಗಿರಬಹುದೇ ಎಂಬಷ್ಟು ದೇಸಿ ಪಾತ್ರ ಸೃಷ್ಟಿ. ಕಥೆಯ ನಿರೂಪಣೆಯೂ ಒಂದಕ್ಕಿಂತ ಒಂದು ಭಿನ್ನ. ಇನ್ನೇನು ಕಥೆ ಇಷ್ಟೇ, ಅಲ್ಲಿಗೇ ಮುಟ್ಟಿ ಬಂದೆ ಎನ್ನುವಷ್ಟರಲ್ಲೇ ಕಥಾ ಅಂತ್ಯ ಚೂರುಚೂರೇ ಗಾವುದ ದೂರದ ಅಣತಿಯಲ್ಲಿದೆ ಎಂಬ ಭ್ರಮೆ ಹುಟ್ಟಿಸುತ್ತದೆ.ಕೆಲವು ಕಥೆಗಳು ಓದುಗನ ವಿಸ್ಮಯಕ್ಕೆ ದೂಡಿದರೆ ಕೆಲವು ಕೊನೆಯನ್ನು ಓದುಗನ ಕಲ್ಪನೆಗೆ ಬಿಡುತ್ತವೆ.ಎಲ್ಲವೂ ಸಹಿತ ಸಾಂದ್ರವಾಗಿ ನಮ್ಮ ನಿಮ್ಮೂರಿನ ಹಳ್ಳಿಯ ಚಿತ್ರಗಳಾಗಿ, ನಮ್ಮವೇ ಆಗಿ ಪಾತ್ರಗಳು ಮೂಡಿ, ಓದುತ್ತ ಅದರ ಭಾಗವೇ ನಾವೂ ಆಗಿ ಬಿಡಿವಂತಹ ತನ್ಮಯತೆಗೆ ಸಾಕ್ಷಿ ಇಲ್ಲಿಯ ಕಥೆಗಳು. ಭಾಷೆಯ ಬಳಕೆ ಮಾತ್ರ ಏಕತಾನತೆಯನ್ನು ಮುಡಿಸುವದನ್ನು ಬಿಟ್ಟರೆ ವೈವಿಧ್ಯತೆ ಸಂಕಲನದ ತಿರುಳು. ಇನ್ನು ಸಾಹಿತ್ಯ ಬರಿ ಸಮಾಜ ಉದ್ಧರಿಸುವ ಕೆಲಸಕ್ಕೆ ಕುಳಿತುಬಿಟ್ಟರೆ ಬದುಕಿನ ಲಹರಿಗಳ ಪಾಡೇನು? ಎನ್ನುತ್ತಾರೆ ನಿರೂಪಕ. ಕೆಲವು ಕಥೆಗಳು ಕಥೆಗಾರರೇ ಹೇಳಿದಂತೆ ಕೆಲವು ಮಿಟಕಲಾಡಿ ಅನುಭವಗಳು ಮೈಮನವನ್ನು ತಣಿಸಿದಾಗಲೇ ಹುಟ್ಟಿರಬಹುದು. ಇಲ್ಲ ದಕ್ಕಿತು ಎನ್ನುವುದು ದಕ್ಕದೇ ದೂರವಿದ್ದಾಗಲೇ ಆ ಹಪಾಹಪಿಗೆ ಬಸವಳಿದು ದುಮ್ಮಿಕ್ಕಿರಬಹುದು.

1 comment

  1. ವಿಮರ್ಶೆಯೂ ಒಂದು ಸೃಜನಶೀಲ ಕಲೆ ಎಂಬುದು ಇಂತಹ ವಿಮರ್ಶೆಗಳಿಂದ ಸಾಬೀತಾಗುತ್ತದೆ.

Leave a Reply