ಮನಸಿಗೆ ಬಿದ್ದ ಪ್ರಾಸಗಳು

ಮನಸಿಗೆ ಬಿದ್ದ ಪ್ರಾಸಗಳು

(ತಿರುತಿರುಗಿ ನೋಡುವಂತೆ ಮಾಡಿ ಕಾಣದಾಗುತ್ತಾರೆ)


ರೇಣುಕಾ ರಮಾನಂದ್ 

ಕುಮಟಾ ಮೂವತ್ತು ಕೀ ಮೀ
ಅಂಕೋಲಾ ಮೂರು ಕೀ ಮೀ
ಇರುವಾಗ ಮರೆಯಲ್ಲಿದ್ದ ಮೈಲಿಗಲ್ಲು
ಕಣ್ಣಿಗೆ ಬೀಳುತ್ತದೆ
ದಾಟಿ ಮುಂದೆ ಹೋದಮೇಲೂ
ಅದರ ಮೇಲೊಂದು ಅಪ್ಯಾಯಮಾನ
ಪ್ರೀತಿಯಾಗುತ್ತಿರುತ್ತದೆ

ಒಂಭತ್ತು ಗಂಟೆಯ ಬಸ್ಸು ಬಂತಾ ಮಗೂ
ಕೇಳುವ ಅಜ್ಜಿಯ ಪಿಶ್ವಿಯಲ್ಲೊಂದು
ಕವಳದ ಪೊಟ್ಲೆಯಿರುತ್ತದೆ
ಬಂದಿಲ್ಲ ಇನ್ನೂ ತಡಾ
ಎಂದಾಗಲೆಲ್ಲ ಅಲ್ಲೇ ಸುತ್ತಮುತ್ತ
ಅಡಿಕೆ ಹೋಳು ಕುಟ್ಟಲೊಂದು ಕಲ್ಲು
ಹುಡುಕಲು ಬೇಕಾದಷ್ಟು ವೇಳೆ ಸಿಗುತ್ತದೆ

ದೊಡ್ಡ ಬಸ್ಸಿನ ಡ್ರೈವರ್‌ಗಳಲ್ಲೆಲ್ಲ ಬಸ್ಸು ಚಾಲು
ಮಾಡೋವಾಗ ಒಂದೇ ಒಂದು
ಆಸೆಯಿಟ್ಟುಕೊಂಡಿರುತ್ತಾರೆ
ಟ್ಹೂ ವ್ಹೀಲರ್ ಹುಡುಗಿಯರಿಗೆ ರಸ್ತೆ ಬಿಟ್ಟುಕೊಡುವಾಗ
ಇಂದಾದರೂ ಕೈ ನಡುಗದೇ, ಬಸ್ಸು ಪೂರ್ತಿ ವಾಲದೇ
ಇರಲೆಂದು ಹರಕೆ ಹೊರುತ್ತಿರುತ್ತಾರೆ

ಇಳಿಸಂಜೆಯಲ್ಲಿ ಹೂವರಳಿಸುವ ಮರಗಳು ಲೋಕದಲ್ಲಿ ಒಂದೋ ಎರಡೋ ಇರುತ್ತವೆ
ಎಲ್ಲೋ ಹೂವರಳಿದೆ ಎಂದು
ಹಲವರ ಮೂಗುಗಳಿಗೆ ಸುದ್ದಿಮಾಡಿ ಕಣ್ಣಿಗೆ ನಿಲುಕದೇ
ಅವು ಬಾಡಿಹೋಗುತ್ತವೆ

ರಾತ್ರಿ ಜೈ ಹನುಮಾನ್ ರಿಕ್ಷಾ ಸ್ಟ್ಯಾಂಡಿನಲಿ ತೂಕಡಿಸುವ ಹುಡುಗರು ಐವತ್ತಕ್ಕೋ ನೂರಕ್ಕೋ
ಕಾಯುತ್ತಿರುತ್ತಾರೆ
ಸಿಕ್ಕರೆ ಹಾಯುವ ಹಾದಿಯಲ್ಲಿ ಇದು ಮಗನ ಪಾಟಿಚೀಲಕ್ಕೆ,ಅವಳ ಕೊಬ್ಬರಿ ಎಣ್ಣೆ ಬಾಟ್ಳಿಗೆ
ಎಂದು ಲೆಕ್ಕ ಹಾಕುತ್ತ
ನಿದ್ದೆ ಮರೆಯುತ್ತಾರೆ

ರಾತ್ರಿ ಊರ ಹೆಣ್ಣುಮಕ್ಕಳೆಲ್ಲ ದೋಸೆ ಹಿಟ್ಟು ಹುದುಗದ
ಕನಸು ಕಂಡು ಬೆಚ್ಚಿ ಬೀಳುತ್ತಾರೆ
ಬೆಳ್ಳಂ ಬೆಳಗು ಚಟ್ನಿ ರುಬ್ಬೋವಾಗ ಅದೇ ನೆನಪಿನಲ್ಲಿ
ಹ್ಹ ಹ್ಹ ಹ್ಹ ಎಂದು ಯಾರೂ ಕಾಣದಂತೆ ನಗುತ್ತಿರುತ್ತಾರೆ
ಯಾಕೆ ನಗುತ್ತಿದ್ದೀ ಎಂದು ಕೇಳದ ಮನೆ
ಹುಡುಗನಿಗೆ ಹೀಗೊಂದು ಕನಸು ಬಿದ್ದಿತ್ತೆಂದು
ಹೇಳಬೇಕೆಂದರೂ ಹೇಳಲಾಗದೇ ನಾಚಿಕೊಳ್ಳುತ್ತಾರೆ

ಎಷ್ಟು ಹುಡುಕಿದರೂ ಹೆದ್ದಾರಿಯಲ್ಲಿ ಸಿಗದ
ಯಾರೋ ಒಬ್ಬರು
ಹಸಿರು ಹುಲ್ಲಿನ ಕಾಲುಹಾದಿಯಲ್ಲಿ ಧುತ್ತನೆ ಎದುರಾಗುತ್ತಾರೆ
ಒಂದು ಸಣ್ಣ ಹಳದಿ,ಕೆಂಪು,ನೀಲಿಯ
ಕಾಡುಹೂವಿನ ಕುಚ್ಚು ಕೈಗಿತ್ತು
ತಿರುತಿರುಗಿ ನೋಡುವಂತೆ ಮಾಡಿ
ಕಾಣದಾಗುತ್ತಾರೆ

ಕೆಂಪು ದಾಸಾಳ ಹೂ ಗಿಡದ ಪೊದೆಯೊಳಗೊಂದು
ಸಣ್ಣ ಟಿಂವ್ ಹಕ್ಕಿಯ ಹಾಡು
ಯಾಕೂ ಇಲ್ಲದೇ ಸುಮ್ಮನೆ ಹಚ್ಚಿಕೊಂಡ ಅಪ್ಪಟ
ಎದೆಯೊಳಗೊಂದು ಹೊಸ ನಮೂನೆಯ ಗೂಡು

8 comments

  1. ಮತ್ತಿದನ್ನೆಲ್ಲಾ ಬರೆಯುವ ನಿಮ್ಮ ಮೇಲೆ ನನ್ನೊಳಗೊಂದು ಸಣ್ಣ ಅಸೂಯೆ ಸುಳಿದಾಡತೊಡಗುತ್ತದೆ.
    Love u……

    • ಸುಧಾ ಮೇಡಂ..ನಿಮ್ಮ ಅಸೂಯೆ ನಿರಂತರವಾಗಿರಲಿ.ಅದರಲ್ಲೊಂದು ಪ್ರೀತಿಯಿದೆ

  2. ವಾಸ್ತವದ ಸುತ್ತಲೇ ಗಿರಕಿ ಹೊಡೆಯುತ್ತ ಕಣ್ಣಿಗೆ ಕಾಣುವ ದೃಶ್ಯಗಳನ್ನೇ ಕವನ ಕಟ್ಟುವ ನಿಮ್ಮ ಶೈಲಿ ಮತ್ತೊಮ್ಮೆ ಮೀನು ಪೇಟೆ ಸುತ್ತಿ ಅದೇ ಆ ಅಂಕೋಲಾ ಕೆಂಪು ಬಸ್ ಹತ್ತಿ ಬಂದ ಅನುಭವ ಮರುಕಳಿಸಿತು. ಡಿಟ್ಟೊ ಅದೇ ಅದೇ ರೇಣೂ…..
    ಸೂಪರ್. ಬಹಳ ಚೆನ್ನಾಗಿ ಬರೆದಿದ್ದೀರಾ. ಖುಷಿ ಖುಷಿ ಓದಿ. ಇನ್ನಷ್ಟು ಬರಿರಿ.

Leave a Reply