ಎಷ್ಟು ರಿಚ್ಚು! ಈ ಮ್ಯಾಕ್ ರಿಚ್ಚು..

ಮಗಳನ್ನು ನರ್ಸರಿಯಿಂದ ಯುಕೆಜ ವರೆಗೆ ಇಲ್ಲಿನ ಸ್ಥಳೀಯ ಶಾಲೆಗೆ ಸೇರಿಸಲಾಗಿತ್ತು. ೩೦ ಮಕ್ಕಳಲ್ಲಿ ೫ – ೬ ಮಕ್ಕಳು ಮಾತ್ರ ಭಾರತದವರು. ಹಾಗಾಗಿ ಚೀನಿ ಅಮ್ಮಂದಿರ ಜೊತೆಗೂ ನನ್ನ ಒಡನಾಟ ಆರಂಭವಾಗಿತ್ತು. ಕೆಲವರು ದೂರದಿಂದಲೇ ಹಾಯ್ – ಬಾಯ್ ಹೇಳುತ್ತಾ ತಮ್ಮ ವ್ಯವಹಾರ ಮುಗಿಸಿದರೆ, ಮತ್ತೆ ಕೆಲವರು ಮಕ್ಕಳು ಆಟ ಆಡುವ ಸಮಯದಲ್ಲೂ ನಮ್ಮ ಜೊತೆ ಇದ್ದು ಮಾತಾಡಿ ತೆರಳುತ್ತಿದ್ದರು. ಅವರಿಗೂ ನಮ್ಮ ದೇಶ, ಸಂಸ್ಕ್ರತಿ, ಆಚಾರ – ವಿಚಾರ, ಹಬ್ಬ, ಅಡುಗೆಗಳ ಬಗ್ಗೆ ಕುತೂಹಲ. ನಮಗೂ ಅವರ ಬಗ್ಗೆ ತಿಳಿಯುವ ಆಸಕ್ತಿ. ಹಾಗೆ ನೋಡಿದ್ರೆ, ಕೆಲವರನ್ನು ಹೊರತುಪಡಿಸಿ, ಕಾರಣ ಇಲ್ಲದೆ ಮಾತಾಡುವ ಆಸಾಮಿಗಳೇ ಅಲ್ಲ ಈ ಚೀನೀಯರು. ಯಾರಾದ್ರೂ ಬಂದು ನಮ್ಮ ಜೊತೆ ಮಾತಿಗೆ ಕೂರೋದು ಅಂದ್ರೆ ಅಚ್ಚರಿಯ ಸಂಗತಿ. ಅದರಲ್ಲಿ ನಾವೇ ಎಷ್ಟೋ ವಾಸಿ. ಯಾರೇ ಆಗಿರಲಿ, ಮಾತಾಡಿಸೋದು ಹಾಗೂ ಮಾತಾಡೋದ್ರಲ್ಲಿ ಹೃದಯ ಶ್ರೀಮಂತರು. ದೇಶವನ್ನೇ ಬಿಟ್ಟು ಬಂದ ನಮಗೆ ಪರಿಚಯ ಆದವರೆಲ್ಲಾ ಒಂಥರಾ ಸಂಬಂಧಿಕರೇ ಆಗಿದ್ದರು.

ಹೀಗೆ ಒಂದು ದಿನ ಚೀನಿ ಅಮ್ಮಂದಿರ ಜೊತೆ ಮಾತಾಡುತ್ತಾ, ‘ಒಂದು ಅರ್ಧ ಗಂಟೆಯಲ್ಲಿ ನಿಮ್ಮ ಎಲ್ಲಾ ಸಂಬಂಧಿಕರನ್ನು ಭೇಟಿ ಮಾಡಿ ಬರಬಹುದು ಅಲ್ವಾ ಇಲ್ಲಿ’ ಅಂದಿದ್ದೆ. ನನ್ನ ಬಗ್ಗೆಯೂ ವಿಚಾರಿಸಿದ ಅವರು, ಗಂಡನ ಮನೆಯಿಂದ ಅಮ್ಮನ ಮನೆಗೆ ಹೋಗೋಕೆ ೮ ಗಂಟೆಯಿದೆ ಅಂದಾಗ ಟ್ರಾವೆಲ್ ಟೈಮ್ ಕೇಳಿಯೇ ಖುಷಿ ಪಟ್ಟಿದ್ರು. ನಾವೆಲ್ಲಾ ಅವ್ಯವಸ್ಥೆ ಬಗ್ಗೆ ಹೋರಾಟ ಮಾಡಿದ್ರೆ, ಸಿಕ್ಕ ಸೌಲಭ್ಯ ಹೆಚ್ಚಾಗಿ ಬೇರೆ ಏನೋ ಹೊಸತು ಹುಡುಕುವ ಮನೋಸ್ಥಿತಿ ಇಲ್ಲಿಯವರದ್ದು.

ವರ್ಷದ ಪ್ರಾರಂಭದಲ್ಲೇ ಸರ್ಕಾರಿ ರಜೆಗಳು, ಮಕ್ಕಳ ಪರೀಕ್ಷೆಗಳ ಬಗ್ಗೆ ಪೂರ್ಣ ಮಾಹಿತಿ ಲಭ್ಯವಾಗುತ್ತವೆ. ಹೀಗಾಗಿ ಇಡೀ ವರ್ಷದಲ್ಲಿ ಕೈಗೊಳ್ಳುವ ಬಹುತೇಕ ಪ್ರವಾಸದ ಟಿಕೆಟ್ ಗಳು ಜನವರಿನಲ್ಲೇ ಬುಕ್ ಆಗಿರುತ್ತವೆ.

ಹಾಗಂತ ಇಲ್ಲಿನ ಸರ್ಕಾರವು ಕೂಡ ಸುಮ್ಮನೆ ಕೈಕಟ್ಟಿ ಕುಳಿತಿಲ್ಲ. ಇಲ್ಲಿನ ನಾಗರಿಕರ ಮನವೊಲಿಸಲು ತನ್ನ ಪ್ರಯತ್ನನೂ ಮುಂದುವರಿಸುತ್ತಾ ಇರುತ್ತದೆ. ಚುನಾವಣೆ ಬಂದಾಗ ಮಾತ್ರ ಅಭಿವೃಧ್ಧಿ ಕಾರ್ಯ ನೆನಪು ಮಾಡೋದು ನಮ್ಮ ರಾಜಕಾರಣಿಗಳ ಸಂಪ್ರದಾಯ. ಆದರೆ ಇಲ್ಲಿ ಹಾಗಿಲ್ಲ. ಜನರ ವಿರಾಮದ ದೃಷ್ಟಿಯಿಂದಲೂ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತವೆ.

ಬೆಂಗಳೂರಿಗಿಂತಲೂ ಚಿಕ್ಕದಾಗಿರುವ ಈ ದೇಶದಲ್ಲಿ ಚಟುವಟಿಕೆ ಅಂದ್ರೆ ಆಫೀಸ್ ಕೆಲಸ, ಅದು ಬಿಟ್ರೆ ಮನೆ ಕೆಲಸ. ನಮ್ಮ ಹಾಗೆ ಸ್ವಂತ ಭೂಮಿ, ಕೃಷಿ ಚಟುವಟಿಕೆಗಳು ಇಲ್ಲಿ ನಡಿಯೋದಿಲ್ಲ. ಈ ಕಾರಣದಿಂದಲೋ ಏನೋ, ಇಲ್ಲಿಯ ಜನತೆ ಫಿಟ್‌ನೆಸ್ ಗೆ ಹೆಚ್ಚಿನ ಪ್ರಾಮುಖ್ಯತೆ ಕೊಡೋದು. ವ್ಯಾಯಾಮ, ವಾಕಿಂಗ್, ಜಾಗಿಂಗ್ ಅಂತ ಸಮಯ ಮೀಸಲು ಇಡೋದು. ವಸತಿ ಪ್ರದೇಶಗಳಲ್ಲಿ ಉಚಿತವಾಗಿ ಬಳಸಬಹುದಾದ ಜಿಮ್ ಗಳು, ಓಟಕ್ಕೆ ಬೇಕಾದ ಟ್ರ್ಯಾಕ್ಸ್ ಗಳು ಅಲ್ಲಲ್ಲಿ ಕಾಣಬಹುದು.

ಇದ್ದುದ್ದರಲ್ಲೇ ತುಂಬಾ ದುಬಾರಿ ಅಂದ್ರೆ ಇಲ್ಲಿನ ಖಾಲಿ ಭೂ ಪ್ರದೇಶಗಳು. ಎಲ್ಲವೂ ಸರ್ಕಾರಿ ಸ್ವಾಮ್ಯಕ್ಕೆ ಸೇರಿದ್ದಾಗಿವೆ. ಇರುವ ಭೂಮಿಯನ್ನು ಕಾಪಾಡುತ್ತಾ, ಈಗಾಗಲೇ ನೈಸರ್ಗಿಕವಾಗಿರುವ ಪ್ರದೇಶವನ್ನು ಮತ್ತುಷ್ಟು ಸುಂದರವಾಗಿಸಿ ಜನರನ್ನು ಆಕರ್ಷಿಸುವುದು ಆಡಳಿತಗಾರರ ಟೆಕ್ನೀಕ್.

ಹೀಗೆ ಅಭಿವೃಧ್ಧಿ ಪಡಿಸಿದ ಹಲವು ವಿಚಾರಗಳಲ್ಲಿ ಇಲ್ಲಿನ ಜಲಾಶಯಗಳು ಒಂದು. ಅವುಗಳಲ್ಲಿ ಪ್ರಮುಖವಾದುದು ಮ್ಯಾಕ್ ರಿಚಿ ಜಲಾಶಯ.

ಮ್ಯಾಕ್ ರಿಚೀ ಸಿಂಗಾಪುರದ ಅತಿದೊಡ್ಡ ಜಲಾಶಯ. ಹೈಕಿಂಗ್ ಟ್ರೇಲ್ಸ್,  ಕಾಯಕ್ಸ್  ಮತ್ತು ದೋಣಿ ವಿಹಾರ ಇವು ಈ ಜಲಾಶಯದ ಹೈಲೈಟ್ಸ್. ಒಂದು ರೀತಿಯಲ್ಲಿ ಭೂಮಿ ಮತ್ತು ನೀರಿನಲ್ಲಿ ಮಾಡಬಹುದಾದ ಮನರಂಜನಾ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ ಜಾಗ. ಸುಮಾರು ೧೨ ಹೆಕ್ಟೇರ್ ಪ್ರದೇಶವನ್ನು ಒಳಗೊಂಡ ಇದು ದೇಶದಲ್ಲೇ ಮೊದಲನೆಯದ್ದು. ಆರಂಭಿಕ ದಿನಗಳಲ್ಲಿ ಬ್ರಿಟಿಷ್ ಒಪ್ಪಂದದಂತೆ ಸಿಂಗಪುರದಲ್ಲಿ ನೀರಿನ ಸರಬರಾಜು ಒಂದು ಪ್ರಮುಖ ಕಾಳಜಿಯಾಗಿತ್ತು. 1819 ರ ಲ್ಲಿ ವ್ಯಾಪಾರ ವಹಿವಾಟು ಆರಂಭವಾದ ಬಳಿಕ ದ್ವೀಪಕ್ಕೆ ಆಗಮಿಸುವ ವ್ಯಾಪಾರದ ಹಡಗುಗಳು ಮತ್ತು ವಲಸಿಗರ ಸಂಖ್ಯೆ ಬೆಳೆಯುತ್ತಾ ಸಾಗಿತ್ತು. ಇದು ತಾಜಾ ನೀರಿನ ಪೂರೈಕೆಯ ಬೇಡಿಕೆಯನ್ನು ಹೆಚ್ಚಿಸುವಂತೆ ಮಾಡಿತ್ತು. ಹೀಗಾಗಿ ನೀರು ಸರಬರಾಜು ವ್ಯವಸ್ಥೆ ಗೆ ರಚನೆಗೊಂಡ ಮೊದಲ ಜಲಾಶಯ ಇದಾಗಿದೆ

ಮ್ಯಾಕ್ ರಿಚ್ಚಿಯ ಸುತ್ತಮುತ್ತಲಿನ ಕಾಡುಗಳ ಲ್ಲಿ ವಿಶಿಷ್ಟ ಬಗೆಯ ಮರಗಳು, ಸಸ್ಯರಾಶಿಗಳನ್ನು ಕಾಣಬಹುದು. ಮ್ಯಾಕ್ರಿಚ್ಚಿ ಜಲಾಶಯ ಮತ್ತು ಅರಣ್ಯ ದ ಅದ್ಭುತವಾದ 360-ಡಿಗ್ರಿ ನೋಟಕ್ಕಾಗಿ 7-ಡೆಕ್ ಜೆಲುಟೊಂಗ್ ಗೋಪುರ ವನ್ನು ಕಟ್ಟಲಾಗಿದೆ. ಓರಿಯೆಂಟಲ್ ಹನಿ ಬಜಾರ್ಡ್, ಬ್ಲ್ಯಾಕ್ ಬಾಝಾ, ಜೆರ್ಡಾನ್ಸ್ ಬಾಝಾ ಮತ್ತು ಜಪಾನಿ ಸ್ಪ್ಯಾರೋಹಾಕ್ನಂತಹ ರಾಪ್ಟರ್ ಜಾತಿಗಳನ್ನು ಒಳಗೊಂಡಂತೆ ವಿಭಿನ್ನ ಬಗೆಯ ಹಕ್ಕಿಗಳನ್ನು ಇಲ್ಲಿ ಕಾಣಬಹುದು.

ಮ್ಯಾಕ್ ರಿಚೀ ಜಲಾಶಯವನ್ನು ಟಾನ್ ಕಿಮ್ ಸೆಂಗ್ ಅವರು ನೀಡಿದ  ದೇಣಿಗೆ ಹಣದ ಮೂಲಕ 1867 ರಲ್ಲಿ ನಿರ್ಮಿಸಲಾಯಿತು. ನೈಸರ್ಗಿಕ ಮೀಸಲು ಪ್ರದೇಶದಲ್ಲಿರುವ ನಾಲ್ಕು ಜಲಾಶಯಗಳಲ್ಲಿ ಇದು ಒಂದಾಗಿದೆ. ಲೋವರ್ ಪಿಯರ್ಸ್ ಜಲಾಶಯ, ಅಪ್ಪರ್ ಪಿಯರ್ಸ್ ಜಲಾಶಯ ಮತ್ತು ಮೇಲ್ ಸೆಲೆಟ್ಟರ್ ಜಲಾಶಯ ಉಳಿದವು.

ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಮೊದಲನೆಯದು ಟ್ರೀ ಟಾಪ್ ವಾಕ್. ಈ ಸೇತುವೆಯು ಒಟ್ಟು 250 ಮೀಟರ್  ಉದ್ದ ಮತ್ತು ಭೂ ಪ್ರದೇಶದಿಂದ 25 ಮೀ ಎತ್ತರದಲ್ಲಿದೆ. ಟ್ರೀ ಟಾಪ್ ವಾಕ್ ನಡಿಗೆಯ ದೂರ 7 ಕಿಲೋ ಮೀಟರ್ ನಿಂದ 10 ಕಿ.ಮೀ.  ಸಸ್ಯ ಗುರುತಿಸುವಿಕೆಯ ಕೆಲಸ, ಅರಣ್ಯ ಪರಿಸರ ವ್ಯವಸ್ಥೆಗಳು, ಸಂಶೋಧನೆಗಳಿಗೆ ಇದು ಮುಕ್ತ ಸ್ಥಳ. ಸೇತುವೆಯಲ್ಲಿ ಸಂಚರಿಸುತ್ತಿದ್ದಂತೆ ಅತೀ ಎತ್ತರದ ಮರಗಳು ಹಾಗೂ ಅವುಗಳ ತುದಿಯ ಭಾಗಗಳು ನಮ್ಮ ತಲೆ ಎತ್ತರದಲ್ಲಿ ಅನುಭವಕ್ಕೆ ಬರೋದು ಮತ್ತೊಂದು ರೋಚಕ ಸಂಗತಿ.

ಮತ್ತೊಂದು ಗಮನ ಸೆಳೆಯುವ ಸಂಗತಿ ಮ್ಯಾಕ್ ರಿಚೀ ಕಾಲುದಾರಿ. ಉಷ್ಣವಲಯದ ಮಳೆಕಾಡಿನ ಮಧ್ಯೆ ಸಂಚಾರ. ಸುಮಾರು ೧೧ಕಿಲೋ ಮೀಟರ್ ಗಳ ಈ ನಡೆದಾಟ ನಿಜಕ್ಕೂ ಆಹ್ಲಾದಕರ. ದಾರಿ ಮಧ್ಯೆ ನಿಮ್ಮನ್ನ ಸ್ವಾಗತಿಸಲೆಂದೇ ಕೆಲವೊಮ್ಮೆ ಕೋತಿಗಳು,  ಉಡಗಳ ಹಾರಾಟ , ಗೂಬೆಗಳು ಅಲ್ಲಲ್ಲಿ ಪ್ರತ್ಯಕ್ಷವಾಗೋದು ಸಾಮಾನ್ಯ.

ನೀರಿನಲ್ಲಿ ಎಂಜಾಯ್ ಮಾಡಲು ಇಲ್ಲಿ ಕಯಾಕ್ ಬಳಸಲು ಅವಕಾಶವಿದೆ.  ಪ್ಯಾಡಲ್ ಲಾಡ್ಜ್ ನಲ್ಲಿ ನೀವು ಕಯಕ್ಸ್ ಅನ್ನು ಬಾಡಿಗೆಗೆ ಪಡೆಯಬಹುದು. ಮೊದಲ ಬಾರಿ ಬಳಸುವವರಿಗೆ ನಿರ್ದಿಷ್ಟ ಪ್ರದೇಶ ಮತ್ತು ಅನುಭವಿಗಳಿಗಾಗಿ ಪ್ರತ್ಯೇಕ ಸ್ಥಳಗಳ ವ್ಯವಸ್ಥೆ ಮಾಡಲಾಗಿದೆ. ಕೆಲವು ದಿನಗಳಲ್ಲಿ ಸ್ಪರ್ಧಾತ್ಮಕ ಪ್ಯಾಡ್‌ಲರ್ಸ್ ಗಳ ತರಬೇತಿಯನ್ನು ಇಲ್ಲಿ ಕಾಣಬಹುದು. ಸಿಂಗಾಪೂರ ಕ್ಯಾನಿಯೋ ಫೆಡರೇಷನ್ ಇದನ್ನು ನಿರ್ವಹಿಸುತ್ತಿದ್ದು, ಕುಟುಂಬ ಸದಸ್ಯರ ಜೊತೆ ಆನಂದಿಸಲು ಇದು ಉತ್ತಮ ಸ್ಥಳವಾಗಿದೆ. ೫ ವರ್ಷ ಮೇಲ್ಪಟ್ಟ ಮಕ್ಕಳು ಹಿರಿಯರ ಜೊತೆ ಕಾಯಕ್ ನಲ್ಲಿ ಆನಂದಿಸುವ ಅವಕಾಶವಿದೆ.

ಪಬ್ಲಿಕ್ ಯುಟಿಲಿಟಿಸ್ ಬೋರ್ಡ್ ಪ್ರಾರಂಭಿಸಿದ  ಸುಂದರ ಹಾಗೂ ಸ್ವಚ್ಛತ ಕಾರ್ಯಕ್ರಮದ ಅಡಿಯಲ್ಲಿ, ಉದ್ಯಾನವನದ 100 ಮೀಟರ್ ನಷ್ಟು ಭಾಗದಲ್ಲಿ ಜಲ್ಲಿಗಲ್ಲು ಮಿಶ್ರಿತ ಸಸ್ಯರಾಶಿ ಜೊತೆಗೆ ೪0 ಮೀಟರ್ ನಷ್ಟು ಉದ್ದಕ್ಕೆ ಕಾಲುದಾರಿ ರಚಿಸಲಾಗಿದೆ.  ಈ ಲಕ್ಷಣಗಳು ಪ್ರಾಥಮಿಕವಾಗಿ ಮೇಲ್ಮೈ ನೀರಿನ ಹರಿವಿನಿಂದ ಒರಟಾದ ಸಂಚಯಗಳು ಮತ್ತು ಮಾಲಿನ್ಯಕಾರಕಗಳನ್ನು ಹೊರಹಾಕಲು ವಿನ್ಯಾಸಗೊಳಿಸಲಾಗಿದೆ. ಇದರ ಉದ್ದೇಶ ಜಲಾಶಯದ ನೀರಿನ ಗುಣಮಟ್ಟವನ್ನು ಹೆಚ್ಚಿಸುವುದಾಗಿದೆ.  ಸಸ್ಯಗಳು ಮತ್ತು ಸಸ್ಯವರ್ಗದೊಂದಿಗೆ ಈ ವೈಶಿಷ್ಟ್ಯಗಳ ಸಜ್ಜುಗೊಳಿಸುವಿಕೆಯು ಮತ್ತಷ್ಟು ಸುಸಂಸ್ಕೃತ ಜೀವವೈವಿಧ್ಯವನ್ನು ಹೊಂದಲು ಸಹಕಾರಿಯಾಗಿದೆ.

ಮ್ಯಾಕ್ ರಿಚೀ ಜಲಾಶಯದ ಅತಿದೊಡ್ಡ ಅಭಿಮಾನಿ, ವಿಶ್ವ ಸಮರ 2 ಯುದ್ಧದ ನಾಯಕ ಮೇಜರ್-ಜನರಲ್ ಲಿಮ್ ಬೋ ಸೆಂಗ್ ಅವರ ಸಮಾಧಿಯನ್ನು ಇಲ್ಲಿ ಕಟ್ಟಲಾಗಿದೆ. ಮ್ಯಾಕ್ರಿಚ್ಚಿ ಜಲಾಶಯ ಸುರಕ್ಷಿತ ಅಭಯಾರಣ್ಯ ಎಂದೇ ಖ್ಯಾತಿ ಪಡೆದಿದೆ.

ಅಚ್ಚರಿ ಎಂದರೆ ಹಿಂದಿನ ಕಾಲದಲ್ಲಿ ಚೀನಿಯರು  ರಬ್ಬರ್, ಮೆಣಸು ಹೀಗೆ ನಾನಾ ಬಗೆಯ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದರಂತೆ. ಹೀಗೆ ಅಳಿದು ಉಳಿದು ಹೋದ ರಬ್ಬರ್ ಮರಗಳನ್ನು ಇಲ್ಲಿ ಕಾಣಬಹುದು.

ಆಫೀಸ್ ಜಂಜಾಟ, ಕೆಲಸಗಳ ಒತ್ತಡ, ಮಕ್ಕಳ ಪಾಲನೆ ಹೀಗೆ ಹಲವು ವಿಚಾರಗಳಿಂದ ದಣಿದವರಿಗೆ ಇದೊಂದು ವಿರಾಮದ ತಾಣ.. ಎಲ್ಲವನ್ನು ಮರೆತು ಕೆಲ ಸಮಯಗಳವರೆಗೆ ಪ್ರಕೃತಿ ಸೌಂದರ್ಯ ಹಾಗೂ ಇತರೇ ಚಟುವಟಿಗೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಆನಂದಿಸಲು ಉತ್ತಮ ಸುಯೋಗ. ಮಕ್ಕಳು ಕೂಡ ತಮ್ಮ ಹೆತ್ತವರು, ಕುಟುಂಬ ಸದಸ್ಯರು ಹಾಗೂ ಗೆಳೆಯರ ಜೊತೆ ಆಟವಾಡ್ತಾ ಸುಂದರ ಲೋಕವನ್ನೇ ಸೃಷ್ಟಿಸೋದ್ರಲ್ಲಿ ಸಂಶಯವಿಲ್ಲ.

Leave a Reply