ನಗರ ನಕ್ಸಲ್ ಕವಿತೆಗಳು: ಕವಿಗೆ ತುಂಬಾ ಬೇಸರವಾಗಿದೆ

ಮತಧರ್ಮಗಳ ಬಗ್ಗೆ ಸಾಕಷ್ಟು ವಿವಾದ ಸೃಷ್ಟಿಸಾಯಿತು

ಲಿಂಗ ತಾರತಮ್ಯದ ಬಗ್ಗೆ ಸಂಕಲನವೇ ಬಂದಾಯಿತು

ಎಲ್ ಜಿ ಬಿ ಟಿ ಬಗ್ಗೆ ಸೂಕ್ತ ಹೇಳಿಕೆ ಕೊಟ್ಟಾಯಿತು

ನಾಗರಿಕ ಹಕ್ಕುಗಳ ಮಸೂದೆಯ ಚರ್ಚೆಯಲ್ಲಿ

ಮುಂಚೂಣಿಯಲ್ಲಿ ಹೆಸರಿದೆ

ಕೌಟುಂಬಿಕ ಸಮಸ್ಯೆಗಾಗಿ

ಸ್ಟೇಷನ್ನು ಮೆಟ್ಟಿಲೂ ಹತ್ತಿಯಾಯಿತು

ಪರಸತಿಯ ಕೆಣಕಿ ಕಪಾಳಮೋಕ್ಷ

ಮಕ್ಕಳ ಪೀಡಿಸಿದ ಸಣ್ಣ ಗುಮಾನಿ

ಪ್ರತಿಷ್ಠಿತರ ಪಟ್ಟಿಯಲ್ಲಿ ಮುಮ ಕೃಪೆಯಿಂದ ಸೈಟು

ಎಂ ಎಲ್ ಸಿಗೂ ಪರಿಗಣನೆ

ಶಾಸಕರ ಭವನದ ಸ್ಕ್ಯಾಮ್ ನಲ್ಲಿ

ಪರೋಕ್ಷ ಪಾಲುದಾರಿಕೆ

ಗೋಮಾಂಸ ಭಕ್ಷಣೆ ಸ್ತ್ರೀಯರ ರಕ್ಷಣೆ

ಮಾನಭಂಗ ಸಂತೃಸ್ತೆಗೆ ಹಣ ಸಂಗ್ರಹಣೆ

ತಕ್ಕಷ್ಟು ಮಟ್ಟಿಗೆ ಗಾಂಧಿ ದೂಷಣೆ

ಸನಾತನ ಪರಿವಾರದ ಸನ್ಮಾನ ಪೋಷಣೆ

ನೆರೆಗೆ ಕಾರಣ ಬರಕ್ಕೆ ಕಾರಣ

ನೆರವಿಗೆ ಬಂದವರ ಜಾತಿಮತಗಳ ಕಾರಣ

ವಿದೇಶಿ ಹಣ ಬೇಕು ಬೇಡಗಳ ಖಡಕ್ ವಿಶ್ಲೇಷಣೆ

ಚಾನಲ್ಲುಗಳ ಅತಿಪ್ರಿಯ ಅತಿಥಿ

ಸಂಪ್ರದಾಯಗಳ ಧಿಕ್ಕರಿಸಿ ಆದರೆ

ಭಾರತೀಯತೆ ಎಂದರೆ ಸಂಸ್ಕಾರ ಎಂದುಸುರಿ

ಸ್ಟ್ಯಾನ್ಡ್ ಅಪ್ ಕಾಮೆಡಿಯ ಅಧಿಕೃತ ಕಿಂಗ್ ಎನ್ನಿಸಿ

ನಗರ ನಕ್ಸಲ್ ಎಂದು ಘೋಷಿಸಿಕೊಂಡರೂ

ಗೃಹಬಂಧನವಿಲ್ಲದೇ

ಸ್ಪೋಟಗೊಳ್ಳದ ಸೇಫ್ಟಿ ವಾಲ್ವ್ ಆಗಿದ್ದೂ

ಎಲ್ಲೆಲ್ಲಿ ಎಷ್ಟೆಷ್ಟು ಬೇಕೋ ಅಷ್ಷ್ಟಷ್ಟು ಬಿಚ್ಚುತ್ತಾ ಮುಚ್ಚುತ್ತಾ

ಬರೆಯಬೇಕಾದ ಕಡೆ ಖಾಲಿ ಹಾಳೆಯನ್ನೂ

ಮೌನವಾಗಿರಬೇಕಾದೆಡೆ ವಾಚಾಳಿತನವನ್ನೂ

ಪ್ರದರ್ಶಿಸಿ ಕಷ್ಟಪಟ್ಟು ಇಷ್ಟವಿರುವ ಹಾಗೆ ನಟಿಸಿ ಕಾದು ಕಾದು

ಕವಿಗೆ ಬೇಸರವಾಗಿದೆ

ಇನ್ನೂ ಯಾಕೆ ಬಂದಿಲ್ಲ ಪೊಲೀಸರು ಬಂಧಿಸಲು?

ತಾನೇನು ಬುದ್ಧಿಜೀವಿಯೋ ಅಲ್ಲವೋ?

Leave a Reply