ಆನೆಯೊಂದು ‘ಪದ್ಮಶ್ರೀ’ ಪ್ರಶಸ್ತಿ ತಂದ ಕಥೆ..

ನನ್ ಗೆಳೆಯ ‘ಉಣ್ಣಿ’ ಗೆ ಹವ್ಯಾಸೀ ನಾಟಕಗಳೆಂದ್ರೆ ಅಷ್ಟಕ್ಕಷ್ಟೆ. ಆದ್ರೆ ಪ್ರೊಫೆಷನಲ್ ನಾಟ್ಕಗಳು ಅಂದ್ರೆ ಪಾಪ್ ಕಾರ್ನ್ ಹಾರ್ತಿದ್ದಂಗೆ ಹಾರ್ತಿದ್ದ. ಎಷ್ಟೆಂದ್ರೂ ಅದು ಅವನ ಪೂರ್ವಾಶ್ರಮ ತಾನೇ? ಯಾವುದೋ ಕಂಪ್ನೀಲಿ ಸಣ್ ಪುಟ್ ಪಾರ್ಟು ಮಾಡ್ಕೊಂಡು ಇದ್ನಂತೆ.

“ತುಂಬಾ ಕಷ್ಟದ ಬದುಕು ಸಾರ್ ಅದು” ಅಂತ ಬೇಸರ ಮಾಡ್ತಿದ್ದ. ನಾನು ಕನ್ನಡದ ನಾಟಕ ಕಂಪ್ನಿಗಳ ಕರುಣಾಜನಕ ಕಥೆಗಳನ್ನ ಹೇಳಿ ಅವ್ನನ್ನ ಸಮಾಧಾನ ಮಾಡ್ತಿದ್ದೆ. ‘ ಹೌದಾ ಸಾರ್, ಕಲೆಗೆ ಕಿಮ್ಮತ್ತೇ ಇಲ್ಲ ಸಾರ್” ಅಂತ ಉಸಿರುಬಿಡ್ತಿದ್ದ.
ಕೇರಳ ದ ಕಂಪ್ನಿಗಳು ನಮ್ ಥರ ಅಲ್ಲ. ನಮ್ ಕಂಪ್ನಿಗಳು ಐದಾರು ನಾಟ್ಕ ರೆಡಿ ಮಾಡ್ಕೊಂಡು, ಊರಿಂದೂರಿಗೆ ಹೋಗಿ ಕ್ಯಾಂಪ್ ಮಾಡ್ತವೆ. ಹಲವಾರು ತಿಂಗಳು ಅದೇ ಊರಲ್ಲಿದ್ದು ಒಂದೊಂದಾಗಿ ಎಲ್ಲ ನಾಟ್ಕಗಳನ್ನೂ ಆಡಿ, ಮುಗಿದ ಮೇಲೆ ಟೆಂಟ್ ಬಿಚ್ಚಿ ಹೊರಡ್ತವೆ.

ಆದ್ರೆ ಕೇರಳದ ಪ್ರೊಫೆಷನಲ್ ರಂಗಭೂಮಿ ಹೀಗಿಲ್ಲ. ‘ ಕೊಲ್ಲಂ’ನ ಸುತ್ತ ಮುತ್ತ ಹಲವಾರು ಕಂಪ್ನಿಗಳಿವೆ. ಪ್ರತಿ ಕಂಪ್ನೀಲೂ ಹದಿನೈದಿಪ್ಪತ್ತು ಕಲಾವಿದರು. ಪ್ರತಿ ವರ್ಷ ಅವು ಒಂದೋ ಎರಡೋ ನಾಟ್ಕ ಸಿದ್ಧ ಮಾಡಿಕೊಳ್ತವೆ. ನಾಟಕಗಳು ಸಿದ್ಧವಾಗ್ತಿದ್ದಂತೆ ‘ ಬುಕ್ಕಿಂಗ್’ ಪ್ರಾರಂಭ. ಹಳ್ಳಿಯ ಜಾತ್ರೆಗಳು, ಸಮಾರಂಭಗಳು, ಉತ್ಸವಗಳು ಹೀಗೆ ಬೇರೆ ಬೇರೆ ಕಡೆ ನಾಟ್ಕಗಳು ಬುಕ್ ಆಗ್ತವೆ. ಕಂಪ್ನಿ ತನ್ನದೇ ಗಾಡೀಲಿ ಬುಕ್ ಆದ ಕಡೆಯಲ್ಲೆಲ್ಲ ಹೋಗಿ, ನಾಟ್ಕ ಆಡಿ ಬರ್ತದೆ. ಸುಮಾರು ಇಡೀ ವರ್ಷ ನಾಟ್ಕ ಆಡ್ತಾರೆ.

ಪ್ರದರ್ಶನ ಕೂಡ ನಮ್ಮ ಕಂಪನಿಗಳಿಗಿಂತ ತೀರ ತೀರ ಭಿನ್ನ. ನಾಟಕಗಳು ಕಥಾಪ್ರಧಾನ. ಹೆಚ್ಚಿನವೆಲ್ಲ ಕೌಟುಂಬಿಕ ಕಥೆಗಳು. ಜನಪ್ರಿಯ ಕಾದಂಬರಿ ಆಧರಿಸಿದವು. ಕೆಲವು ಬಾರಿ ಜನಪ್ರಿಯ ಸದಭಿರುಚಿಯ ಸಿನಿಮಾಗಳ ರೀಮೇಕ್ ಗಳು. ಸಾಕಷ್ಟು ರಿಸ್ಕ್ ತಗೋತಾರೆ. (ಒಂದು ಕಂಪ್ನಿ ‘ ಸತ್ಯಜಿತ್ ರೇ’ ಅವರ ‘ ಪಥೇರ್ ಪಾಂಚಾಲಿ’ ಯನ್ನು ಕೂಡ ಪ್ರೊಫೆಷನಲ್ ನಾಟಕವಾಗಿಸಿ ಆಡಿದೆ.) ನಮ್ಮ ಈಗಿನ ಕಂಪ್ನಿ ನಾಟ್ಕಗಳಂತೆ ಕಾಮಿಡಿ ಟ್ರ್ಯಾಕ್ ಅಂತೂ ಇಲ್ಲವೇ ಇಲ್ಲ. ಹಾಸ್ಯ ಏನಿದ್ರೂ ನಾಟಕದೊಳಗಿಂದ್ಲೇ ಹೊರಬರ್ಬೇಕು ಅಷ್ಟೆ. ಅಭಿನಯದ ದೃಷ್ಟಿಯಲ್ಲಿ ಒಂದು ಕೈ ಮೇಲೇ. ಕೆಲವು ಬಾರಿ ಸ್ವಲ್ಪ ಹೆಚ್ಚೇ ಆಯಿತೇನೋ ಅನ್ನೋವಷ್ಟು. ಉರುಳುವ ಪರದೆಗಳಿಲ್ಲ. ವಾತಾವರಣ ನಿರ್ಮಿಸೋ ಹಿನ್ನೆಲೆಯ ಒಂದು ಪರದೆ ಮಾತ್ರ. ಉಳಿದದ್ದೆಲ್ಲ ರಿಯಲಿಸ್ಟಿಕ್ ಸೆಟ್ಟಿಂಗ್‍ಗಳು. ಮ್ಯೂಸಿಕ್ ಪಿಟ್ ಗಳಿಲ್ಲ. ಎಲ್ಲ ರೆಕಾರ್ಡೆಡ್ ಹಾಡುಗಳು, ಸಂಗೀತ. ಮಲಯಾಳೀ ಸಿನಿಮಾ ಸಂಗೀತದಂತೆ ತುಂಬಾ ಕೂಲ್.

ಜನಪ್ರಿಯ ಗಾಯಕರಿಂದ್ಲೇ ಹಾಡಿಸಿ ರೆಕಾರ್ಡ್ ಮಾಡಿಸೋರು. ತುಂಬ ಇಫೆಕ್ಟಿವ್ ಲೈಟಿಂಗ್. ಈ ಲೈಟಿನವನಿಗೂ, ಸಂಗೀತ ಪ್ಲೇ ಮಾಡೋನಿಗೂ ರಂಗದ ಎಡಬದಿಯಲ್ಲಿ ಜಾಗ. ಎಲ್ಲ ತುಂಬಾ ‘ಪ್ರೊಫೆಷನಲ್’  ಪಕ್ಕಾ ಟೈಮಿಂಗ್ ಮೇಂಟೇನ್ ಮಾಡೋರು. ನಾಟ್ಕದ ಮಧ್ಯ ಒಂದು ದೊಡ್ಡ ಇಂಟರ್ವಲ್. ಸೆಟ್ಟಿಂಗ್ ಬದಲಾಗೋದಾದ್ರೆ ಆಗ್ಲೇ ಆಗೋದು. ಮೂರು ಮೂರೂವರೆ ಘಂಟೆಗಳ ನಾಟ್ಕಾನ ಚೂರೂ ಬೋರ್ ಆಗದ ಹಾಗೆ ಕಟ್ಟಿ ಕೊಡೋರು.

ಇಷ್ಟೆಲ್ಲ ಇದ್ರೂ ಕಂಟೆಂಪರರಿ ನಾಟ್ಕಗಳ ಪ್ರೇಕ್ಷಕರ ಆರೋಪ ಇವರ ಮೇಲೆ. ಚೀಪ್ ಸಿನಿಮಾ ಇಮಿಟೇಶನ್ ಮಾಡ್ತಾರೆ, ಅತಿ ಅಭಿನಯ ಮಾಡ್ತಾರೆ. ಹೇಳಿದ್ದೇ ಕಥೆ ಹೇಳ್ತಾರೆ. ಎಲ್ಲವೂ ಅತಿ ಇವ್ರದ್ದು ಅಂತ. ಆದ್ರೆ ಕೆಲವೊಂದು ನಾಟ್ಕಗಳನ್ನ ಬಿಟ್ಟು ನನಗೆ ಹೆಚ್ಚಿನವು ಇಷ್ಟವಾದ್ವು.

ಈ ಬಾರಿ ನಾವು ನೋಡಿದ ನಾಟ್ಕ ‘ಪದ್ಮಶ್ರೀ ಅಂಬಾಡಿ ಕೇಶವನ್’ ನಾಟ್ಕದ ಪ್ಲಾಟ್ ನೋಡೇ ನಾನು ಬೆರಗಾದೆ. ಅಬ್ಬಾ! ಈ ಮಲಯಾಳೀ ಮಂದಿ ಎಂತೆಂಥ ಕಥೆ ಕಟ್ಕೊಂಡು ನಾಟ್ಕ ಮಾಡ್ತಾರೆ. ಈ ನಾಟ್ಕ ಒಂದು ಆನೆಯ ಕಥೆ. ‘ ಕೇಶವನ್’ ಅನ್ನೋ ಆನೆ. ಆ ಆನೇನ್ ಸಾಕಿದ ಒಬ್ಬ ಮೊದಲಾಳಿ (ಸಾಹುಕಾರ) ಅದರ ಮಾವುತರ ಪ್ರೀತಿಯ ಕಥೆ.

ಹಾಗೆಯೇ ಮಲಯಾಳಂ ಪ್ರೊಫೆಷನಲ್ ನಾಟ್ಕಗಳಲ್ಲಿ ಕಂಡು ಬರೋ ತಲೆಮಾರುಗಳ ಸಂಘರ್ಷದ ಕಥೆ. ಈ ಆನೆ ಮತ್ತು ಅದರ ಸುತ್ತ ಒಂದು ಕುಟುಂಬ. ದೇವಸ್ಥಾನದ ಹಬ್ಬಗಳಿಗೆ ಹೋಗಿ ಬರ್ತಾ, ಸುಖವಾಗಿದ್ದ ಆನೆಯದು. ಮೊದಲಾಳಿಯ ಮೇಲೆ ಆನೆಗೆ ಅವ್ಯಾಜ್ಯ ಪ್ರೀತಿ. ಆತನಿಗೂ ಅಷ್ಟೆ. ಬಡತನದಲ್ಲೂ ಆನೇನ ಸುಖವಾಗಿಟ್ಟವ. ತರುವಾಯದ ತಲೆಮಾರಿನ ಆತನ ಮಗನಿಗೆ ಇವೆಲ್ಲ ವೇಸ್ಟ್. ಭಾವನೆಗಳಿಲ್ಲದ ಹುಡುಗನವ. ಕೆಲಸ ಬೇರೆ ಸಿಕ್ಕಿಲ್ಲ. ಕೆಲಸಕ್ಕೆ ಹಣ ಹೊಂದಿಸೋಕೆ ಆನೇನ ಮಾರೋ ಉಪಾಯ ಮಾಡ್ತಾನೆ ಆತ.

ಕಡಿಮೆ ಹಣಕ್ಕೆ ಆನೇನ ಲಪಟಾಯಿಸೋ ಆಸೆಯ ಒಬ್ಬ ಸಾಬಿ. ಇಬ್ರೂ ವ್ಯವಹಾರ ಕುದುರಿಸಿ ಆನೆ ವ್ಯಾಪಾರ ಮಾಡಿಬಿಡ್ತ್ತಾರೆ. ಆನೆ ಮನೆ ಬಿಟ್ಟು ಹೋಗಲೊಲ್ಲದು. ಮೊದಲಾಳಿ ಗೋಳಿಡ್ತಾನೆ. ಭಾವನೆಗಳೇ ಇಲ್ಲದ ಜಗತ್ತಿನಲ್ಲಿ ಅದನ್ನೆಲ್ಲ ಕೇಳೋರ್ಯಾರು? ಇಂಜಕ್ಷನ್ ಚುಚ್ಚಿ ಆನೇನ ಕೊಂಡೊಯ್ತಾರೆ. ಮರುದಿನ ನಡೆಯೋ ರಾಷ್ಟ್ರೀಯ ಪ್ರದರ್ಶನಕ್ಕೆ ಆನೇನ ಕಳಿಸೋ ಏರ್ಪಾಡಾಗತ್ತೆ. ಅದೇ ರಾತ್ರೀನೇ ಆನೆ ಸರಪಳಿ ಹರ್ಕೊಂಡು ಮೊದಲಾಳಿಯ ಮನೇಗೆ ಬರ್ತದೆ. ಮತ್ತೆ ಒಂದಾಗ್ತದೆ ಆನೆ ಕುಟುಂಬ. ಖುಶಿಯಿಂದ್ಲೇ ಆನೆ ದೆಹಲಿಗೆ ಹೊರಡ್ತದೆ. ಪ್ರದರ್ಶನದಲ್ಲಿ ಆನೆಗೆ ಬಹುಮಾನ. ಜೊತೆಗೆ ಮೊದಲಾಳಿ ಗೆ ಪದ್ಮಶ್ರೀ ಪ್ರಶಸ್ತಿ ಕೂಡ. ಜನ ಆನೇನ ‘ ಪದ್ಮಶ್ರೀ’ ಅಂತ ಕರೆಯೋಕೆ ಶುರು ಮಾಡ್ತಾರೆ. ಮತ್ತೆಲ್ಲ ಸುಖಾಂತ.

ತುಂಬಾ ನೀಟ್ ಆದ ಪ್ರಯೋಗ. ಇಂಥ ಕಥೆಗಳನ್ನ ಕಟ್ಟಿಕೊಂಡು ನಾಟ್ಕ ಆಡಬಹುದು ಎನ್ನೋ ಯೋಚನೆಗೇ ಖುಶಿಯಾಯ್ತು. ಕಥೆ ಸ್ವಲ್ಪ ಅತಿಯೇ ಎನಿಸ್ಬಹುದು. ಬದಲಾದ ಕಾಲಮಾನದಲ್ಲಿ ಕಂಪನಿಗಳನ್ನ ಉಳಿಸಿಕೊಳ್ಳೋಕೆ ಇವೆಲ್ಲ ಅನಿವಾರ್ಯ ಕೂಡ.ಅದನ್ನ ಮಲಯಾಳಿಗಳು ಮಾಡ್ತಿದಾರೆ. ಆದ್ರೆ ನಮ್ ಕಂಪ್ನಿಗಳು ನಾಟಕಗಳಲ್ಲಿ ಕಥೆಯನ್ನೇ ಕಳೆದುಕೊಳ್ತಿವೆ.

6 comments

  1. ಇಂತಹ ಪ್ರಯತ್ನ ಕನ್ನಡ ರಂಗಭೂಮಿಯಲ್ಲೂ ಬಂದರೆ ಚನ್ನಾಗಿರುತ್ತೆಯೆಂದು ನನ್ನ ಅನಿಸಿಕೆ

  2. ನಿಮ್ಮ ನೆನಪಿನ ಗಣಿಯಿಂದ ಕೇರಳದ ನಾಟಕ ರಂಗದ ಮುತ್ತುಗಳನ್ನು‌ ಜೋಡಿಸಿ ಬರೆದ ಈ ಲೇಖನ ಮಾಲೆ ಅತ್ಯುತ್ತಮ ವಾಗಿ ಮೂಡಿಬರುತ್ತಿದೆ. ಧನ್ಯವಾದಗಳು.

Leave a Reply