‘ಥೀ ಪೋಟ್ಟನ್’.. ದಲಿತನೊಬ್ಬನ ಸುಡು ಬಂಡಾಯ..

‘ವಿಶು’ ಹಬ್ಬದ ಮರುದಿನ.

ನನಗೆ ಟ್ರಾನ್ಸಫರ್ ಆರ್ಡರ್ ಬಂತು. ಈ ಬಾರಿ ಕಣ್ಣೂರಿಗೆ.

ಕಣ್ಣೂರಿನಲ್ಲಿ ರಾಮಚಂದ್ರನ್ ಅಂತ ಹಿರಿಯರೊಬ್ಬರು ಕೆಲಸ ಮಾಡ್ತಿದ್ರು. ಅವರು ರಿಟೈರ್ ಆಗ್ತಾರೆ ಅಂತ ಗೊತ್ತಾದ ತಕ್ಷಣ ಒಂದು ರಿಕ್ವೆಸ್ಟ್ ಅಪ್ಲಿಕೇಶನ್ ಕೊಟ್ಟಿದ್ದೆ. “ಆಲುವಾದಿಂದ ಕಣ್ಣೂರಿಗೆ ಕಳಿಸಿ” ಅಂತ.
ಕಣ್ಣೂರಿಗೆ ಹೋಗೋಕೆ ಎರಡು ಕಾರಣಗಳಿದ್ವು. ಊರಿಗೆ ಸ್ವಲ್ಪ ಹತ್ತಿರ ಅನ್ನೋದು ಒಂದಾದ್ರೆ, ಇನ್ನೊಂದು ಕಾರಣ ‘ಕೇರಳದ ಕಿರೀಟ’ ಅಂತಾನೇ ಪ್ರಸಿದ್ಧವಾದ ಕಣ್ಣೂರಿನಲ್ಲಿ ಕೆಲ ಕಾಲ ಇರೋದು. ದಕ್ಷಿಣ, ಮಧ್ಯ ಕೇರಳದ ನಂತರ ಉತ್ತರ ಕೇರಳದ ಬದುಕಿನ ಅನುಭವ ಪಡ್ಕೊಳ್ಳೋದು.

ಕಣ್ಣೂರು- ಬ್ರಿಟಿಷ್ ರಿಂದ ‘ Cannanore’ ಅಂತ ಕರೀಸ್ಕೋತಿದ್ದ ಕಣ್ಣೂರು ಮಲಬಾರ್ ನ ಉತ್ತರ ಭಾಗ. ಪೋರ್ಚುಗೀಸ್ ಕಾಲದ ಮಹತ್ವದ ಬಂದರ. ಮೆಣಸಿನ ಕಾಳಿನ ಮಾರ್ಕೆಟ್. ಬ್ರಿಟಿಷ್ ಕಾಲ್ದಲ್ಲಿ ವಾಣಿಜ್ಯ ಮಹತ್ವ ಕಳ್ಕೊಂಡ ಕಣ್ಣೂರು ಮುಂದೆ ಮಿಲಿಟರಿ ಕೇಂದ್ರವಾಗಿ ಬದಲಾಯ್ತು. ಈಗಲೂ ಏಷಿಯಾದ ಅತಿ ದೊಡ್ಡ ನೇವಲ್ ಅಕಾಡಮಿ ಕಣ್ಣೂರಿನಲ್ಲಿದೆ. ರಾಜಕೀಯವಾಗಿ ತುಂಬ ಬಲಿಷ್ಠವಾಗಿರೋ ಕಣ್ಣೂರು ಎಡರಂಗದ ಶಕ್ತಿ ಕೇಂದ್ರ. ‘ಪಾರ್ಟಿ ಹಳ್ಳಿಗಳು’ ಎನ್ನೋ ಹಳ್ಳಿಗಳೇ ಕಣ್ಣೂರಿನಲ್ಲಿವೆ. ಒಂದು ರಾಜಕೀಯ ನಿಲುವಿಗೆ ಹಳ್ಳಿಗೆ ಹಳ್ಳಿಯೇ ಅಂಟ್ಕೊಂಡ ಹಳ್ಳಿಗಳು ಅವು.

ಇನ್ನು ಕಣ್ಣೂರು ‘ತೆಯ್ಯಂ’ಗಳ ನೆಲ.ಕಣ್ಣೂರನ್ನ ‘Land of Looms and Lores’  ಅಂತಾನೂ ಕರೀತಾರೆ. ‘ಮಗ್ಗಗಳು ಮತ್ತು ಜಾನಪದದ ನಾಡು’ ಅಂತ. ಸಾವಿರಾರು ವರ್ಷಗಳ ಇತಿಹಾಸವಿರೋ ಈ ತೆಯ್ಯಂ ಕೆಳ ವರ್ಗಗಳ ದೇವರು.
ಅಂಥ ಒಂದು ‘ತೆಯ್ಯಂ ಕಥೆಯ ನಾಟ್ಕ’ದ ಬಗ್ಗೆ ನಾನಿವತ್ತು ಹೇಳ್ತಿರೋದು.

ತುಲಾ ಶ್ರಾಯ ಬಂತೆಂದರೆ ಉತ್ತರ ಮಲಬಾರ್ ನ ಸುತ್ತೆಲ್ಲ ಬುರಬುರನೆ ‘ತೆಯ್ಯಂ’ಗಳು ಏಳತೊಡಗ್ತಾವೆ. ‘ತೆಯ್ಯಂ’ ಇಲ್ಲಿನ ಗಟ್ಟಿ ಜಾನಪದ ಕಲಾಪ್ರಕಾರ. ವಾದ್ಯ, ಪದ್ಯ, ನೃತ್ಯ, ಮುಖ್ಯವಾಗಿ ಬಣ್ಣಗಾರಿಕೆ ಮತ್ತು ವೇಷದಲ್ಲಿ ವೈವಿಧ್ಯ ಮತ್ತು ಬೆರಗುಗೊಳಿಸೋ ಗುಣ ಹೊಂದಿರುವ ಈ ‘ತೆಯ್ಯಂ’ನ ಹಿಂದೆ ಅನೇಕ ದೈವಗಳಿವೆ. ಅನೇಕ ಕಥೆಗಳಿವೆ.

ಇಂಥ ಒಂದು ‘ತೆಯ್ಯಂ’ನ ಹಿಂದಿನ ಕಥೇನಿಟ್ಕೊಂಡು ಕ್ಯಾಲಿಕಟ್ ನ ‘ರಂಗಚೇತನ’ ತಂಡ ‘ಥೀ ಪೋಟ್ಟನ್’ ಎಂಬ ನಾಟಕವಾಡ್ತಿದೆ. ಕೇರಳ ಸರಕಾರದಿಂದ ಏಳು ಪ್ರಶಸ್ತಿಗಳನ್ನು ಗಳಿಸಿರೋ ಈ ನಾಟ್ಕ, ಸುಮಾರು ಐದು ನೂರಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಈ ನಾಟ್ಕದ ಕಥೆ ಅದೇ ಹೆಸರಿನ ದೈವದ ಕುರಿತಾದ್ದು.

ಕೇರಳದ ಈ ಭಾಗದಲ್ಲಿ ಈಗಲೂ ಜಾತಿ, ಧರ್ಮ, ವರ್ಗಗಳ ಹೆಸರಲ್ಲಿ ನಡೀತಿರೋ ಹಿಂಸೆ, ಕೊಲೆ, ದೊಂಬಿಗಳ ಹಿನ್ನೆಲೆಯಲ್ಲಿ ನಿರ್ದೇಶಕ ‘ಜಯನ್ ತಿರುಮನ್ನ’ ಈ ನಾಟ್ಕಾನ ಕಟ್ಟಿದ್ದಾರೆ. ಕಣ್ಣೂರಿನ ರಾಜಕೀಯ ಧಾರ್ಮಿಕ ಸಂಘರ್ಷಗಳ ಹಿನ್ನೆಲೆಯಲ್ಲಿ ನಾಟಕ ಬಿಚ್ಚಿಕೊಳ್ತದೆ. ಗಲಾಟೆಯಲ್ಲಿ ಕ್ರಿಶ್ಚಿಯನ್ ಯುವಕನೊಬ್ಬನ ಕೊಲೆಯಾಗಿದೆ. ಆಪಾದಿತ ಅನಂತನ್ ಎಂಬ ಯುವಕ ಜೈಲಿನಿಂದ ಹಿಂದಿರುಗಿದ್ದಾನೆ. ಮತ್ತೊಂದು ಗುಂಪು ಅನಂತನ್ ಮತ್ತವನ ಕುಟುಂಬದ ರಕ್ತಕ್ಕಾಗಿ ಕಾದಿದೆ. ಭಯದಿಂದ ಹೈರಾಣಾಗಿದ್ದ ಅನಂತನ್ ಮತ್ತವನ ಕುಟುಂಬವನ್ನು ಮೃತ ಕ್ರಿಶ್ಚಿಯನ್ ಯುವಕನ ಹೆಂಡತಿ ರಕ್ಷಿಸ್ತಾಳೆ “ನೀನು ಕೊಲೆಗಾರನಲ್ಲ. ನೀನು ಈ ರಾಜಕೀಯದಾಟದ ದಾಳ ಎಂದು ನನಗೆ ಗೊತ್ತು” ಅಂತಾಳೆ. ಈ ಅನಂತನ್ ದು ‘ಥೀ ಪೋಟ್ಟನ್’ ತೆಯ್ಯಂ ನ ಪಾತ್ರಿ ಗಳ ಕುಟುಂಬ.
ಈಗ ನಾಟ್ಕ ‘ಥೀ ಪೋಟ್ಟನ್’ ನ ನಾಯಕ ‘ಅಲಂಕಾರ್’ ನ ಕಥೆ ಹೇಳೋದಕ್ಕೆ ಶುರು ಮಾಡ್ತದೆ.

ಕೇರಳದ ಉತ್ತರ ಭಾಗ. ನಂಬೂದಿರಿಗಳ ಉತ್ತುಂಗದ ಕಾಲ. ಕಂದಾಚಾರದ ದಿನಗಳು. ನಂಬೂದರಿಗಳ ಅಟ್ಟಹಾಸ, ಶೋಷಣೆ, ಅಸ್ಪೃಶ್ಯತೆ ಸಾಮಾನ್ಯವಾಗಿದ್ದ ಕಾಲ. ಶೋಷಿತ ದಲಿತ ಜನಾಂಗದ ಮಧ್ಯೆ ‘ಅಲಂಕಾರ್’ ಎಂಬ ಯುವಕ ಹುಟ್ಟಿಕೊಳ್ತಾನೆ. ಹುಲಿಯೊಡನೆ ಹೋರಾಡೋ ಕೆಚ್ಚಿನ ವೀರ ಆತ. ದಲಿತರನ್ನು ದೇವರಿಗೆ ಬಿಡೋ ಅನಿಷ್ಟ ಪದ್ಧತೀನ ವಿರೋಧಿಸ್ತಾನೆ. ತನ್ನ ತಂಗಿಯ ಮದುವೆ ಮಾಡೋ ಮೂಲಕ ನಂಬೂದರಿಗಳ ವೈರ ಕಟ್ಟಿಕೊಳ್ತಾನೆ. ಸರಿ, ಸುರುವಾಗ್ತದೆ ಯುಧ್ಧ. ಹೆಜ್ಜೆ ಹೆಜ್ಜೆಗೂ ನಂಬೂದರಿಗಳಿಗೆ ಕಾಲ ಮುಳ್ಳಾಗ್ತಾನೆ ಆತ. ಆ ಕಾಲದ ಹೀನ ಪಧ್ಧತಿಗಳ ವಿರುಧ್ಧ ಹೋರಾಡೋಕೆ ಗೆಳೆಯರ ಗುಂಪು ಕಟ್ತಾನೆ. ಸರ್ವಜ್ಞ ಪೀಠದೆಡೆಗೆ ಹೊರಟ ಶಂಕರಾಚಾರ್ಯರನ್ನೂ ತಡೆಯೋ ಈತ ಒಂದು ಹಂತದಲ್ಲಿ ಅವರೊಡನೆಯೂ ವಾದಕ್ಕೆ ನಿಲ್ತಾನೆ. “ನಾನೂ ನೀವೂ ಒಂದೇ ತೆರನಾದ ಶೋಷಣೆ ಅನುಭವಿಸ್ತಿದ್ದೇವೆ” ಅಂತ ನೆನಪಿಸ್ತಾನೆ. ಹೋರಾಡ್ತಾ, ಹೋರಾಡ್ತಾ ನಂಬೂದರಿಗಳಿಂದ ಹಿಂಸೆ ಅನುಭವಿಸ್ತಾ ಸಾಯ್ತಾನೆ… ದೈವವಾಗ್ತಾನೆ. ‘ಥೀ ಪೋಟ್ಟನ್’ ಎನಿಸಿಕೊಳ್ತಾನೆ. ‘ಥೀ ಪೋಟ್ಟನ್’ ತೆಯ್ಯಂ ಮೂಲಕ ಬದುಕ್ತಾನೆ.

ಕೇರಳದ ಪ್ರೊಫೆಶನಲ್ ನಾಟಕದ ಎಲ್ಲ ಒಳ್ಳೇ ಗುಣಗಳನ್ನು ಮುಖ್ಯವಾಗಿ ಅಭಿನಯ ಮತ್ತು ಸಂಗೀತ ದಲ್ಲಿ ಪಡೆದಿರೋ ಈ ನಾಟ್ಕದ ಸ್ಟಾರ್ ಕಾಸ್ಟ್ ತುಂಬ ದೊಡ್ಡದೇ. ಇದ್ದ ಕೆಲವೇ ಕಲಾವಿದರು ಥಟ್ಟನೆ ವೇಷ ಬದಲಿಸ್ತಾ ಮೂಡ್ ಗಳಿಗೂ ಹೊಂದಿಕೊಳ್ತಾ ಸಾಗೋ ಬಗೆ ಬೆರಗು ಹುಟ್ಟಿಸ್ತದೆ. ಪ್ರಸ್ತುತ ವಿದ್ಯಮಾನಗಳ ನಡುವಿಂದ, ವರ್ತಮಾನದಿಂದ ಸರಾಗವಾಗಿ ಭೂತಕಾಲಕ್ಕೆ ಜಾರೋ ಈ ನಾಟ್ಕದ ತಾಂತ್ರಿಕ ನಿಖರತೆ ಮೆಚ್ಚುವಂಥದ್ದು. ಒಂದು ಪರಿಪೂರ್ಣ ಕ್ಲಾಸಿಕ್ ಆಗಬಹುದಾದ ಈ ನಾಟಕ ಕೆಲವೆಡೆ ‘ಅತಿ ಅಭಿನಯ’ ದ ಭಾರದಿಂದ ನಲುಗ್ತದೆ.

ಆದರೆ ನಾಟಕದ ಕೊನೆಯಲ್ಲ್ಲಿ ‘ಥೀ ಪೋಟ್ಟನ್’ ಉಗುಳೋ ಬೆಂಕಿ, ಅದರ ಜ್ವಾಲೆ, ಎಂದೆಂದೂ ಉರೀತಿರೋ ದಲಿತರ ಬಂಡಾಯಕ್ಕೆ ಸಾಕ್ಷಿಯಾಗ್ತದೆ.

 

4 comments

  1. Natkada vivaraneyondige allina stalagala visheshate tilisiddiri.Allina stalagala visheshate Namma Keralada jnanada paridhi higgisiddiri.Dhanyavadagalu.

  2. ಜ್ವಾಲೆ ಉಗುಳೋ ಸೀನ್ ಎಣಿಸಿಕೊಂಡೇ ಮೈ ಜುಮ್ಮೆಂತು. ಎಂಥ ಸುಂದರ ಕಲ್ಪನೆ!

Leave a Reply