ಅವಳು ನಡೆಯುತ್ತಿದ್ದಾಳೆ..

ಪ್ರೇಮಾ ಟಿ ಎಂ ಆರ್ 

ಬೆಳಗಿನ ನಡಿಗೆಯ ದಾರಿ
ಎದುರು ಬದುರಾಗುತ್ತಾಳೆ ಹೆಣ್ಣು
ಅಬ್ಬಾ ಎಷ್ಟೊಂದು ಮೈ ದಪ್ಪ
ಮೂಗು ಮುರಿಯುತ್ತದೆ
ಮೊಟಕುತ್ತದೆ  ಮನಸು
ಮೂಗ ತಲೆಮೇಲೊಂದ

ಬೆಳಗು ಬೈಗು ಎಷ್ಟೊಂದು
ತೇದಿರಲಿಕ್ಕಿಲ್ಲ ಜೀವ ಭಾವ
ತನ್ನ ತಾನು ಕನ್ನಡಿಯಲ್ಲೊಮ್ಮೆ ಇಣುಕಿಕೊಳ್ಳಲಾಗದಷ್ಟು
ಅವನ ಮೊಗದಲ್ಲಷ್ಟು
ನಗು ಕಾಣುವದಕ್ಕೆ
ಮಮ್ಮಿ ಐ ಲೈಕ್ ಯು
ಅನ್ನಿಸಿಕೊಳ್ಳುವದಕ್ಕೆ
ರೋಸಿ ಮಿಸ್ ಬಿಗಿದ ಮುಖ ಸಡಿಲಾಗಿ
ಹೊಲಿದ ತುಟಿಬಿಚ್ಚಿ ಇಟ್ಸ್ ಓಕೆ
ಹಿ ಡಿಡ್ ವೆಲ್ ಎಂದು ಒಂದೇ
ಎಳೆ   ನಗು ತುಟಿಯಂಚಿಗೆ
ಮೆತ್ತಿಸಿಕೊಳ್ಳುವದಕ್ಕೆ
ಲಿವಿಂಗ್ ರೂಂ ಕಂಡ ಅವನ
ಕಛೇರಿಯ ಮಾಡರ್ನ್ ಗೆಳತಿಯರಿಂದ
ವಾವ್ ನೈಸ್ ಹಾಂ
ಹೊಗಳಿಸಿಕೊಳ್ಳುವದಕ್ಕೆ

ತನ್ನ ಮೈ ಮನಸುಗಳ ಅಸಹಜ
ಅವಳು ಕಾಣುತ್ತಲೇ ಇರಲಿಲ್ಲ
ಅಲ್ಲೊಂಚೂರಿದ್ದ ಸೊಂಟ ನೋವು
ಇಲ್ಲೊಂಚೂರು ಗಂಟು
ಹಿಡಿದುಕೊಳ್ಳುವದು
ಹೆಚ್ಚಾಗದಿದ್ದರೆ
ಸುಮ್ಮನೆ ಕೂತಾಗೊಮ್ಮೆ
ಸಾಯಲಿ ಈ ಬದುಕು
ಅಂದುಕೊಳ್ಳುವ ಖಿನ್ನತೆ
ಕಾಡಿರದಿದ್ದರೆ
ತಿಂಗಳುತಿಂಗಳು ಕಾಡುವ
ಮುಟ್ಟು ನಲವತ್ತಕ್ಕೂ ಮೊದಲೆ
ಮಿಸ್ಸಾಗತೊಡಗದಿದ್ದರೆ

ರಸ್ತೆಗಿಳಿದಿದ್ದಾಳೆ ಇಡಿ ಮೈ
ಮನಸು ಹಿಡಿ ಮಾಡಿಕೊಂಡು
ಶೂಸು ಬಿಗಿದು ಪೋನಿ ಕಟ್ಟಿದ
ಹೆಣ್ಣುಗಳ ಟಕ್ಟಕ್ ಹೆಜ್ಜೆ ಸದ್ದಿಗೆ
ಪೆಚ್ಚು ನಗೆ ನಗುತ್ತಲೇ
ನಿತ್ಯ ನಡೆಯುತ್ತಿದ್ದಾಳೆ

ಅವಳು ನಡೆಯುತ್ತಲೇ ಇರಬೇಕು
ಮಕ್ಕಳು ತಮ್ಮದೇ ಕಾಲಮೇಲೆ
ನಿಲ್ಲುವನಕ ಮಗಳ ಬಾಣಂತನ
ಆಗುವನಕ
ಮತ್ತವನು  ಇಂದು ಅವಳಿದ್ದಿದ್ದರೆ
ಎಂದುಕೊಳ್ಳುವ ಒಂಚೂರು
ಮುಂಚಿನ  ತನಕ

ಹವಾಯಿ ಚಪ್ಪಲಿನ ಅವಳು
ನಡೆಯುತ್ತಲೇ ಇರಬೇಕು

3 comments

  1. ಬಹಳ ಇಷ್ಟವಾಯ್ತು ಕವನ . ಅರೆ ಇಳಿವಯದ
    ಹೆಣ್ಣೊಬ್ಬಳ ಸಂಕಟಗಳನ್ನು ಎಲ್ಲೂ ಕ್ಲೀಷೆಯೆನಿಸದೆ ಹಿಡಿದಿದೆ ಕವನ. ಓದಿನ ಸುಖ , ಹೆಂಗಸಿನ ಕಷ್ಟ ಎರಡೂ ಒಟ್ಟಿಗೆ ಓದುಗರನ್ನು ತಾಕುವವು. ತ್ಯಾಂಕ್ಯೂ ನಾಯಕ್ ಅವರೆ,,

  2. ಎಷ್ಟು ಸರಳವಾಗಿ ತನ್ನವರಿಗಾಗಿ ಸವೆಯುವ ಹೆಣ್ಣಿನ ಬದುಕ ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ.ಸೂಪರ್

Leave a Reply