ಜನ್ನತ್ ಮತ್ತು ಇತರ ಕಥೆಗಳು

ಡಾ. ಶಶಿಧರ ನರೇಂದ್ರ 
  

ಅಶ್ಫಾಕ್ ಪೀರಜಾದೆ ಅವರ ನಾಲ್ಕನೇ  ಕೃತಿ ಜನ್ನತ್ ಮತ್ತು ಇತರ ಕಥೆಗಳು 19/03/2018ರಂದು ಧಾರವಾಡದಲ್ಲಿ ಬಿಡುಗಡೆಯಾಗಿದೆ.  ಈ ಮೊದಲು ಬೆಳಗಾವಿ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಇವರು ಈ ಕೃತಿಯ ಮೂಲಕ ಧಾರವಾಡ ಸಾಹಿತ್ಯ ಪರಿಸರಕ್ಕೆ ತಮ್ಮನ್ನು ಪರಿಚಯಿಸಿಕೊಂಡಿದ್ದಾರೆ. ಜನ್ನತ್ ಕಥಾ ಸಂಕಲನ ಓದಿ ಮುಗಿಸಿದಾಗ ಜನ್ನತ್ ಕಥೆಗಾರ ಅಶ್ಫಾಕ್ ಪೀರಜಾದೆ ಒಬ್ಬ ನಿಸ್ಪೃಹಿ ಕಥೆಗಾರ ಎಂದು ನನಗನಿಸಿತು.

ಪ್ರಸ್ತುತ ಜನ್ನತ್ ಮತ್ತು ಇತರ ಕಥೆಗಳು ಒಟ್ಟು ಒಂಭತ್ತು ಕಥೆಗಳು ಹೊಂದಿದ್ದು ಸಂಕಲನದ ಶೀರ್ಷಿಕೆ ಸೂಚಿಸುವಂತೆ ಜನ್ನತ್ ಈ ಕೃತಿಯ ಮುಖ್ಯವಾದ ಕಥೆ, ವೃದ್ಧರ ಸಮಸ್ಯೆಗಳ ಮೇಲೆ ಬೆಳಕು ಚಲ್ಲುವಂಥದ್ದು ಜತೆಗೆ ವೃದ್ಧ ಜನ್ಮದಾತರನ್ನು ಕಡೆಗಣಿಸಿದರೆ ನರಕದ  ಬೆಂಕಿಯೇ ಗತಿ ಎನ್ನುವ  ಇಸ್ಲಾಮಿನ ಸಂದೇಶ ಸಾರುವ ಕಥೆಯಾದರು ಈ ನಾಕ ನರಕ ಬೇರೆಲ್ಲಿಯೂ ಇರದೆ ನಮ್ಮ ನಡುವಳಿಕೆಗಳಿಂದಲೇ ಭೂಮಿಯ ಮೇಲೆ ಇವು ಸೃಷ್ಟಿಯಾಗುತ್ತವೆ ಎಂದು ಮನದಟ್ಟು ಮಾಡಿಕೊಡುವ ಹೃದಯಸ್ಪರ್ಶಿ ಮನೋಜ್ಞ ಕಥೆ.

‘ಅಂತೆ ಕಂತೆಗಳ ನಡುವೆ..’ .ಕಥೆ ಕೂಡ ಈ ಕೃತಿಯ ಉತ್ತಮ ಕಥೆ. ಈ ಕಥೆ ಓದುವಾಗ ಕೆಲವು ದಿನಗಳ ಹಿಂದೆ ಹುಬ್ಬಳಿಯಲ್ಲಿ ನಡೆದ ವೈದ್ಯರೊಬ್ಬರ ನಿಗೂಢ ಸಾವಿನ ಘಟನೆ ನೆನಪಾಯಿತು. ಈ ಘಟನೆ ನಡೆದ ನಂತರವೇ ಕಥೆಗಾರ ಈ ಕತೆ ಬರದಿರಬಹುದೇ ಎನ್ನುವ ಶಂಕೆ ಕೂಡ ಉಂಟಾಯಿತು. ಏಕೆಂದರೆ ಈ ಕಥೆಗೂ ಆ ಘಟನೆಗೂ ತುಂಬಾ ಹೋಲಿಕೆ ಇತ್ತು.

ಆದರೆ ಈ ಕೃತಿ ಮುದ್ರಣಗೊಂಡಿದ್ದು 2015ರಲ್ಲಿ ಬಿಡುಗಡೆ ಭಾಗ್ಯ ಕಂಡಿದ್ದು ಮಾತ್ರ ಇತ್ತೀಚಿಗಷ್ಟೆ. ಅಂದರೆ ಈ ಕೃತಿ ಮುದ್ರಣವಾಗುವ ಹಲವು ವರ್ಷಗಳ ಹಿಂದೆಯೇ ಇಲ್ಲಿನ ಕಥೆಗಳು ವಿವಿಧ  ಪತ್ರಿಕೆಗಳಲ್ಲಿ ಪ್ರಕಟವಾಗಿರುವಂಥವು ಹೀಗಾಗಿ  ಉತ್ತಮ ಸಾಹಿತ್ಯ ಕಾಲಾತೀತವಾದದ್ದು ಎನ್ನುವ ಮಾತಿಗೆ  ಇಲ್ಲಿನ ಬಹುತೇಕ ಕಥೆಗಳು ಸಾಕ್ಷಿಯಾಗುತ್ತವೆ.

ಇದೇ ಮಾತಿಗೆ ಸಾಕ್ಷಿಯಾಗುವ ಇನ್ನೊಂದು ಅತ್ತ್ಯುತ್ತಮ ಕಥೆ “ಒಂದು ಹುಡುಗಿಯ ಶವ ಮತ್ತು ಪವಿತ್ರ ಜಲ ” ಈಗಲೂ ಸಮಾಜದಲ್ಲಿ ಜೀವಂತ ಇರುವ ಅಸ್ಪೃಶ್ಯತೆ ಮತ್ತು ಮೂಢನಂಬಿಕೆಗಳ ಕಥೆ ಹೇಳುವದರೊಂದಿಗೆ  ಇವುಗಳ ಒಳಸುಳಿಗಳನ್ನು ಒಂದೊಂದಾಗಿ  ಬಿಚ್ಚಿಡುತ್ತ ಓದುಗನನ್ನು ಬೆಚ್ಚಿಬೀಳುವಂತೆ ಮಾಡುತ್ತದೆ. ಗ್ರಾಮೀಣ ಬದುಕಿನ  ವಿವಿಧ ಮಜಲುಗಳು ಮತ್ತು ಮನುಷ್ಯನ ನಾನಾ ಮುಖಗಳು ಅನಾವರಣಗೊಳಿಸುವ ಅನೇಕ ಕಥೆಗಳು ಈ ಕೃತಿಯಲ್ಲಿವೆ.

ಉದಾಹರಣೆಗೆ ಗೋವು ಮತ್ತು ಮನುಷ್ಯ ಸಂಬಂಧದ ಚಿತ್ರಣ ಗಂಗೆಗೌರಿ ಪಾತ್ರಗಳ ಮೂಲಕ ಚಿತ್ರಿಸಿ ಹೃದಯ ಆರ್ದ್ರಗೊಳ್ಳುವಂತೆ ಮಾಡುವ ಕಥೆ ‘ದೋಷ’ , ಈ ಕಥೆಯನ್ನೇ ಸ್ವಲ್ಪ ಮಟ್ಟಿಗೆ  ಹೋಲುವ ಇನ್ನೊಂದು ‘ವಂಶೋದ್ಧಾರ’ ಕಥೆಯಲ್ಲಿ ವಂಶೋದ್ದಾರಕ್ಕಾಗಿ ನಡೆಯುವ ವಿಚಿತ್ರ ಘಟನಾವಳಿಗಳು, ಏರ್ಪಡುವ ಸಂಬಂಧಗಳು ಜಗತ್ತಿನಲ್ಲಿ ಹೀಗೋ ನಡೆಯಬಹುದೇ ಎಂದು ಯೋಚಿಸುವ ಅನಿವಾರ್ಯತೆಯನ್ನು ತಂದೊಡ್ಡುತ್ತದೆ.

ಭ್ರಷ್ಟ ರಾಜಕಾರಣಿಗಳ ಅಟ್ಟಹಾಸದ ನಡುವೆ ನಲಗುವ ಅಪ್ಪಟ ಗಾಂಧಿವಾದಿ ದೇಶಪ್ರೇಮಿಯ ಕಥೆ “ಅಪೂರ್ಣ ಹೋರಾಟ “, ಅನುದಾನ ರಹಿತ ಶಾಲಾಶಿಕ್ಷಕನೊಬ್ಬನ ಬಡತನ, ಬದುಕು ಬವಣೆಯ ಕತೆ “ರೇಷ್ಮೆ ಸೀರೆ”, ವಿಚಿತ್ರ ವಿಕ್ಷಿಪ್ತ ಮನಸಿನ ವ್ಯಾಪಾರಗಳನ್ನು ಒಂದು ಹೆಣ್ಣಿನ ತಳಮಳಗಳ  ಮೂಲಕ ಕಾಣಿಸುವ “ತೆರೆದಿದೆ ಮನೆಯೋ.. “. –

ವೃತ್ತಿ ರಂಗಭೂಮಿಗೆ ಹೇಳಿ ಮಾಡಿಸಿದಂತಿರುವ ಸುಖಾಂತ ಕತೆಗಳು ಉತ್ತಮ ಕಥೆಗಳೆಂದೇ ಹೇಳಬಹುದಾದರೂ ಕೆಲವೊಂದು ಕತೆಗಳು ಇನ್ನೂ ಮುಂದವರೆಯಬಹುದು ಎನ್ನುವಾಗಲೇ ಕಥೆಯ ಓಟಿಗೆ ಗಕ್ಕನೆ ಬ್ರೇಕ್ ಹಾಕಿ ನಿಲ್ಲಿಸಿ ಬಿಡುವ ಅವಸರದ ತಂತ್ರ ಹಾಗು ಉದ್ದೇಶಪೂರ್ವಕವಾಗಿಯೇ ತುರುಕುವ ಸಿನಿಮೀಯ ತಿರುವುಗಳಿಂದ ತಪ್ಪಿಸಿಕೊಂಡು ಕಥೆಗೊಂದು ತಾರ್ಕಿಕ ಅಂತ್ಯ ಕಾಣಿಸುವಲ್ಲಿ ಸಫಲವಾದರೆ ಮುನ್ನುಡಿಕಾರ ಮಹಾಲಿಂಗ ಅವರು ಹೇಳುವಂತೆ  ಅಶ್ಫಾಕ್ ಒಬ್ಬ ಒಳ್ಳೆಯ  ಕಥೆಗಾರನಾಗಿ ಬೆಳೆಯುವ ಲಕ್ಷಣವನ್ನು ಅಲ್ಲಗಳೆಯುವಂತಿಲ್ಲ.

 

 

1 comment

Leave a Reply