ಅವನ ಮುನಿಸಿನ ಹಿಂದೆ ಇತಿಹಾಸದ ಗೆರೆಗಳಿದ್ದವು..

 

Can you please shut your mouth, you “black” asshole. ಎಂದು ಗಟ್ಟಿಯಾಗಿ ಚೀರಿದೆ. ಗಹಗಹಿಸಿ ನಗುತ್ತಿದ್ದವನ ಮುಖ ಸ್ತಬ್ಧವಾಯಿತು. ಅದುವರೆಗೂ ಕ್ಲಾಸ್ ರೂಮ್ ನಲ್ಲಿ ಅಬ್ಬರಿಸುತ್ತಿದ್ದವನ ಗಂಟಲು ಬತ್ತಿಹೋಗಿ, ಕಿರುಚಾಟವಿರಲಿ ಒಂದು ಸಣ್ಣ ದನಿಯೂ ಹೊರಬರಲಿಲ್ಲ. ಅವನ ಕಪ್ಪಗಿನ ಮುಖ ಇನ್ನಷ್ಟು ಕಪ್ಪಿಟ್ಟುಕೊಂಡಿತು.

ಅವನು ಇವಾನ್ ಜೀಸಸ್ ವಾಲ್ಡಮೇರಿಕ್. ಆಗ್ನೇಯ ಆಫ್ರೀಕಾದ ಭಾಗವಾಗಿರುವ ಮೋಝಾಂಬಿಕ್ ದೇಶದವನು. ಮೈಸೂರಿನ ಮಹಾಜನ ಕಾಲೇಜಿನಲ್ಲಿ ನನ್ನೊಂದಿಗೆ “ಬ್ಯಾಚುಲರ್ ಆಫ್ ಬಿಸಿನೆಸ್ ಮ್ಯಾನೆಜ್ಮೆಂಟ್” ಓದುವಾಗ ಕ್ಲಾಸ್ಮೇಟ್ ಆಗಿದ್ದವನು.

ಆವತ್ತು ಆಗಿದ್ದು ಇಷ್ಟೇ. ಬಿಸಿನೆಸ್ ಸ್ಟಾಟಿಸ್ಟಿಕ್ಸ್ ನ ಇಂಟರ್ನಲ್ಸ್ ಎಕ್ಸಾಂ ನಲ್ಲಿ ನನಗೆ ಅಂದುಕೊಂಡಷ್ಟು ಮಾರ್ಕ್ಸ್ ಬಂದಿರಲಿಲ್ಲ, ಕಳೆದ ಸೆಮ್ ನಲ್ಲಿ ಒಂದು ಬ್ಯಾಕ್ ಲಾಗ್ ಪೇಪರ್ ಉಳಿದುಕೊಂಡಿತ್ತು. ಯೂನಿವರ್ಸಿಟಿಯವರ ತರೇಹವಾರಿ ಕಾನೂನುಗಳಿಂದ, ಎಕ್ಸಾಂ ಬರೆದರೂ ಪಾಸಾಗುವ ಲಕ್ಷಣಗಳು ಕ್ರಮೇಣವಾಗಿ ಕ್ಷೀಣಿಸಿಹೋಗಿದ್ದವು. ಅದೇ ಸಮಯದಲ್ಲಿ ಇವಾನ್ ತನ್ನ ಮಾತೃಭಾಷೆ ಪೋರ್ಚುಗೀಸ್ ನಲ್ಲಿ ಅಶ್ಲೀಲ ಎನಿಸುವಂತ ಪದಗಳನ್ನು ಉಚ್ಛರಿಸುತ್ತ ನನ್ನ ಪೇಪರ್ ನೋಡಿ ಕಿಚಾಯಿಸಿದ. ಸಿಟ್ಟು ಸೀಳಿಕೊಂಡು ಬಂದಿತ್ತು. ಒಮ್ಮೆಗೆ ಒಡಲು ಕುದಿಯಾಗಿತ್ತು. ಆಗಲೇ ಅವನ ಮುಖಕ್ಕೆ ಮುಖಕೊಟ್ಟು, Can you please shut your mouth, you “black” asshole. ಎಂದು ಗಟ್ಟಿಯಾಗಿ ಚೀರಿಬಿಟ್ಟಿದ್ದೆ.

ಎಷ್ಟೋ ಹೊತ್ತಿನ ನಂತರ ಸಾವರಿಸಿಕೊಂಡು, You said something “black” in mid of the sentence? ಎಂದು ಸಣ್ಣ ದನಿಯಲ್ಲಿ ಪ್ರಶ್ನಿಸುವಂತೆ ಕೇಳಿದ ಇವಾನ್. ನಾನು ಚೀರಿದ ಸಾಲಿನಲ್ಲಿ ಎಲ್ಲವೂ ಕಳಚಿಬಿದ್ದು, “black” ಎನ್ನುವ ಅದೊಂದು ಪದವಷ್ಟೇ ಅವನೊಳಗೆ ಉಳಿದುಹೋಗಿತ್ತು. ಕಪ್ಪಗಿನ ಚಹಾ ಪುಡಿಯಂತಹ ಪದರುಪದರಾದ ಅವನ ಮುಖದಲ್ಲಿ, ಅವನ ಕಪ್ಪು ಕಣ್ಣುಗಳು ಉಪ್ಪು ನೀರಿನ ನಡುವೆ ಅನಿರ್ಧಿಷ್ಟವಾಗಿ ಹೋಯ್ದಾಡುತ್ತಿದ್ ದಂತೆ ಕಂಡವು.

ಆ ಹೊತ್ತಿಗೆ ನನಗೆ ಅರ್ಥವಾಗಿಹೋಗಿತ್ತು. ನನ್ನ ಸಿಟ್ಟಿನ ಅವಿವೇಕದ ಅಳತೆಗೋಲಿನಲ್ಲಿ ಇವಾನ್ ಜೀಸಸ್ ತನ್ನ ಮೈ ಬಣ್ಣದಿಂದ ಅಳೆದುಹೋಗಿದ್ದ. ಅವನ ಪಾಲಿಗೆ ಅದು ವರ್ಣಭೇದ ನೀತಿ ಅರ್ಥಾತ್‌ Racism. ಅದಾದ ಒಂದೇ ಕ್ಷಣಕ್ಕೆ ಎಚ್ಚೆತ್ತುಕೊಂಡುಬಿಟ್ಟೆ. ಇವಾನ್ ಎದುರಿಗೆ ನಿಂತು ಕ್ಷಮಿಸು ಎನ್ನುವಂತೆ, Am sorry Ivan. I hadn’t been in the position to listen your mocking words. ಎಂದು ಹೇಳಿದೆ. ಬರಿದಾದ ಬಟ್ಟಲಿನಂತಹ ಅವನ ಮುಖದಲ್ಲಿ ಏನೆಂದರೆ ಏನೂ ಪ್ರತಿಕ್ರಿಯಿಯೆ ಜಾರಲಿಲ್ಲ.

ಸುಮ್ಮನೆ ಬೆಂಚ್ ಮೇಲಿದ್ದ ಬ್ಯಾಗನ್ನ ಹೇಗಲಿಗೇರಿಸಿಕೊಂಡವನು, ಏನನ್ನೂ ಹೇಳದೇ ಕ್ಲಾಸ್ ರೂಮಿನಿಂದ ಹೊರಗೆ ಹೊರಟುಹೋದ. ನಾನು ಕೂಗುತ್ತಲೇ ಇದ್ದರೂ ಧಿಕ್ಕರಿಸಿ‌ ಕಾರಿಡಾರ್ ನ ಮೆಟ್ಟಿಲುಗಳನ್ನಿಳಿದು
ನಡೆದುಹೋಗುತ್ತಿದ್ದ. ಅದೊಂದು ಬಗೆಯ ಸಿಟ್ಟು ಅವನನ್ನು ಆವರಿಸಿಕೊಂಡಿತ್ತು. ಅವನ ಮುನಿಸಿನ ಹಿಂದೆ ಇತಿಹಾಸದ ಗೆರೆಗಳು ನಿಚ್ಚಳವಾಗಿ ಕಾಣುತ್ತಿದ್ದವು.

ಮೋಝಾಂಬಿಕ್ ನಂತಹ ಆಫ್ರೀಕಾ ಖಂಡದ ಸಣ್ಣಸಣ್ಣ ದೇಶಗಳಿಂದ ಆರಂಭವಾಗಿ ಅಮೆರಿಕಾದಂತಹ ದೈತ್ಯ ದೇಶದವರೆಗೂ ಈ “ಚರ್ಮ”ದ ಬಣ್ಣ ಬಹುದೊಡ್ಡ ಪಾಪದಂತೆ ಕಾಡಿದೆ.‌ ಇಂತಹದೇ ವರ್ಣಬೇಧದ ಛಡಿ ಏಟುಗಳು ಮೋಝಾಂಬಿಕ್ ಎನ್ನುವ ಬಡವನ ಬಡಕಲು ದೇಹದ ಮೇಲೂ ಬಾಸುಂಡೆಗಳನ್ನು ಮೂಡಿಸಿದೆ.

ಮೋಝಾಂಬಿಕ್ ಐನೂರು ವರ್ಷಗಳ ಕಾಲ ಪೋರ್ಚುಗೀಸರ ಬಿಗಿಮುಷ್ಠಿಯಲ್ಲಿ  ಉಸಿರುಗಟ್ಟಿ ನಲುಗಿದ್ದ ದೇಶ. ಅದು ಸಿವಿಲ್ ವಾರ್ ಮತ್ತು ಅಂತರ್ಯುದ್ಧಗಳು ಮೋಝಾಂಬಿಕ್ ಎನ್ನುವ ಅನಕ್ಷರಸ್ಥನನ್ನು ದಂಡಿಸಿವೆ. ಒಂದು ಶತಮಾನದ ಹಿಂದೆ ಮೋಝಾಂಬಿಕ್ ಗುಲಾಮಗಿರಿಯನ್ನೇ ತನ್ನ ಜೀವನಶೈಲಿ ಎಂದು ಭಾವಿಸಿಕೊಂಡು ಬದುಕಿದೆ. ಸತತ ಐನೂರು ವರ್ಷಗಳಷ್ಟು ಪೋರ್ಚುಗೀಸರ ಹಿಡಿತದಲ್ಲಿದ್ದ ಮೋಝಾಂಬಿಕ್ ಗೆ ಸ್ವಾತಂತ್ರ್ಯದ ಪರಿಕಲ್ಪನೆಯೂ ಇರಲಿಲ್ಲ.

ಆಗ ಮೋಝಾಂಬಿಕ್ ನ ಕಪ್ಪು ಜನರ ಪಾಲಿಗೆ ನಾಯಕನಾಗಿ ದೇವಮಾನವನಂತೆ ಉದಯಿಸಿದವನು “ಸಮೋರಾ ಮಾಚೇಲ್”. ಮೋಝಾಂಬಿಕ್ ನ ಮೊದಲ ಅಧ್ಯಕ್ಷ. ಅವನೊಬ್ಬನ ಸಮಾಜವಾದಿ ಪರಿಕಲ್ಪನೆಗಳು ಮೋಝಾಂಬಿಕ್ ‌ಜನರನ್ನ ಅದೆಷ್ಟು ಬಡಿದೆಬ್ಬಿಸಿತ್ತು ಎಂದರೆ ಗುಡಿಸಿಲಿನಲ್ಲಿ ಮೌನವಾಗಿ ರೊಟ್ಟಿ ಸುಡುತ್ತಿದ್ದ ಮುದುಕಿಯೂ ಕೂಡ ತನ್ನದೇ ನಾಯಕ ತನಗಿರಬೇಕು ಎಂದು ಹಂಬಲಿಸತೊಡಗಿದ್ದಳು.‌ ಆ ಹಂಬಲದ ದ್ಯೋತಕ ಫಲವಾಗಿ ಛಿದ್ರವಾಗಿದ್ದ ಮೋಝಾಂಬಿಕ್ ತನ್ನ ಕಪ್ಪು ಮೈಯನ್ನು ನೆಲಕ್ಕಿಳಿಸಿ ೨೫ ಜೂನ್ ೧೯೭೫ರಂದು ಸ್ವಾತಂತ್ರ್ಯ ಪಡೆದುಕೊಂಡಿತು.

ಬಡತನವನ್ನ ತನ್ನ ಮೈ ಮುಚ್ಚುವ ಅಂಗಿಯಂತೆ ಮಾಡಿಕೊಂಡಿದ್ದ ಮೋಜಾಂಬಿಕ್ ತನ್ನ ನೆಲದ ಮಕ್ಕಳು ಅನ್ಯರಿಂದ ಅನುಭವಿಸಿದ ವರ್ಣಭೇದ ನೀತಿಯ ಕರಾಳ ಸ್ಥಿತಿಯನ್ನು ಮೀರಿ‌ ನಿಲ್ಲುವುದಕ್ಕೆ ಹೆಣಗಾಡಿದೆ.‌ ಬಡತನ, ಕ್ಷಾಮ, ಅನಕ್ಷರತೆಯ ಹೊಂಡದಲ್ಲಿ ಉಸಿರುಗಟ್ಟಿ‌ ನರಳಿದೆ. ಸ್ವಾತಂತ್ರ್ಯಗೊಂಡ ಆರಂಭದಲ್ಲಿ ಪ್ರಜಾಪ್ರಭುತ್ವದ ರೂಪುರೇಷೆಗಳಿಲ್ಲದೆ ಪಿಳಿಪಿಳಿ ಕಣ್ಣುಮಾಡಿದೆ.‌

ಕೆಲವೇ ಕೆಲವು ಚುನಾವಣೆಯನ್ನು ತೆವಳುತ್ತಲೇ ದಾಟುತ್ತಿರುವ ಮೋಂಜಾಬಿಕ್ ಇಂದಿಗೂ ವ್ಯವಸ್ಥಿತ ಚುನಾವಣಾ ಪದ್ದತಿಯನ್ನು ಅನುಸರಿಸಲು ಸಾಧ್ಯವಾಗಿಲ್ಲ.‌ ಇಂತಹ ಬಡ ದೇಶದ ಮನೆಯೊಂದರಿಂದ ಬಂದ ಇವಾನ್ ಜೀಸಸ್ ವಾಲ್ಡಮೇರಿಕ್ ಗೆ ನನ್ನ ಅದೊಂದು ಮಾತು Racism ಎನಿಸಿದ್ದರ ಹಿಂದೆ ಅವನ ಸ್ವಂತದ ಅರಿವಿರಲಿಲ್ಲ. ಅವನದೇ ಜನಗಳು ಶತಮಾನಗಳಿಂದ ನರಳುವಾಗ ಹೊರಜಾರಿಸಿದ ನೋವಿನ ನಿಟ್ಟುಸಿರ ಇತಿಹಾಸವಿತ್ತು ಅಷ್ಟೇ.

***
೨೦೦೮ರಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಬರಾಕ್ ಒಬಾಮಾ ಅಧ್ಯಕ್ಷನಾಗಿ ಆಯ್ಕೆಯಾದಾಗ ಅಮೆರಿಕಾದ ಕಪ್ಪು ಜನರು ಇನ್ನಿಲ್ಲದಂತೆ ಕುಣಿದ್ದಿದ್ದರು. ವಾಸಿಂಗ್ಟನ್ ನ ಬೀದಿಗಳಲ್ಲಿ ನಿಂತು ಕಣ್ಣೀರು ಸುರಿಸಿದ್ದರು. ತಮ್ಮ ಮನೆಯ ಮಗನೊಬ್ಬ ಇದ್ದಕ್ಕಿದ್ದಂತೆ ಸೀದಾ ನಡೆದುಹೋಗಿ ವೈಟ್ ಹೌಸ್ ನಲ್ಲಿ ಗತ್ತಿನಿಂದ ಕೂತಿದ್ದಾನೆ ಎನ್ನುವಂತೆ ಮೈ ಕೊಡವಿದ್ದರು. ಶತಮಾನಗಳ ಕಾಲ ಬಿಳಿಯರಿಗೆ ಗುಲಾಮರಾಗಿ ಬದುಕಿದ್ದ ಅಮೆರಿಕಾದ ಕಪ್ಪು ಜನರು ಒಬಾಮಾನ ಗೆಲುವಿನಲ್ಲಿ ತಮ್ಮ ಗೆಲುವು ಕಂಡಿದ್ದರು.

ವಾಷಿಂಗ್ಟನ್ ಡಿ.ಸಿ ಯಲ್ಲಿ ನಿಂತು ಅಧ್ಯಕ್ಷೀಯ ಭಾಷಣ ಮಾಡುತ್ತಿದ್ದ ಬರಾಕ್ ಒಬಾಮಾ “The God given promise that all are equal, all are free, and all deserve a chance to pursue their full measure of happiness”. ಎಂದು ಹೇಳುತ್ತಲೇ ಆನ್ ನಿಕ್ಸನ್ ಕೂಪರ್ ಎನ್ನುವ ೧೦೬ ವರ್ಷದ ವಯೋವೃದ್ದೆಯನ್ನು ನೆನಪಿಸಿಕೊಂಡಿದ್ದರು.

“ದಿ ಟೆಲಿಗ್ರಾಫ್”, “ಡೈಲಿ ಮೇಲ್”, “ವಾಸಿಂಗ್ಟನ್ ಪೋಸ್ಟ್” “ನ್ಯೂರ್ಯಾಕರ್” ನಂತಹ ಪತ್ರಿಕೆಗಳು ಮಾಡಿದ್ದ ವರದಿಗಳು ನಿಕ್ಸನ್ ಕೂಪರ್ ನನ್ನು ಅದಾಗಲೇ ಅಮೆರಿಕಾಗೆ ಪರಿಚಯಿಸಿದ್ದವು. ಆವತ್ತಿಗೆ ಅವಳೊಂದು ಬದಲಾವಣೆಯ ರೂಪಕ. ಕಪ್ಪು‌ಜನಾಂಗದವಳು ಹಾಗೂ ಹೆಂಗಸು ಎನ್ನುವ ಎರಡು ಕಾರಣಗಳಿಗೆ ಮತದಾನದ ಹಕ್ಕಿಲ್ಲದೆ ದಶಕಗಳ ಕಾಲ ನರಳಿದ್ದ ನಿಕ್ಸನ್ ಕೂಪರ್ ೨೦೦೮ರ ಅಧ್ಯಕ್ಷೀಯ ಚುನಾವಣೆಯಲ್ಲಿ ಕಿಲೋ ಮೀಟರ್ ಗಳಷ್ಟು ನಡೆದುಹೋಗಿ ಮತದಾನ ಮಾಡಿದ್ದಳು.

ನಡೆಯುತ್ತಲೇ ಮತದಾನ ಮಾಡಿದ್ದ ನಿಕ್ಸನ್ ಕೂಪರ್ ಉದ್ದೇಶವಿತ್ತು. ಅದೊಂದು ಕನಸು ಸಾಯುವ ಕಡೆಯ ದಿನಗಳಲ್ಲೂ ನಳನಳಿಸುತ್ತ ಜೀವಂತವಾಗಿತ್ತು. ತನ್ನ ಜೀವಿತಾವಧಿಯಲ್ಲಿ ಬರೋಬ್ಬರಿ ಹದಿನೆಂಟು ಅಮೆರಿಕಾದ ಅಧ್ಯಕ್ಷರನ್ನ ಕಂಡಿದ್ದ ನಿಕ್ಸನ್ ಕೂಪರ್, ಪುಟ್ಟ ಹುಡುಗಿಯಾಗಿದ್ದಾಗ ಬಿಳಿಯರ ಮನೆಯಲ್ಲಿ ಗುಲಾಮರಂತೆ ಕೆಲಸ ಮಾಡಿದವಳು. ತನ್ನಂತ ಅಸಂಖ್ಯಾ ಕಪ್ಪು ಜನರ ಅಸಹಾಯಕತೆ, ನೋವನ್ನು ಒಂದು ಶತಮಾನಗಳ ಕಾಲ ಕಂಡವಳು. ಆದರೆ ನಿಕ್ಸನ್ ಗೆ ನಿಜವಾಗಲೂ ಸ್ವತಂತ್ರ ಕಲ್ಪನೆ ಸದೃಶವಾಗಿದ್ದು, ಅಮೆರಿಕದ ವೈಟ್ ಹೌಸ್ ನಲ್ಲಿ ಬರಾಕ್ ಒಬಾಮಾನಂತಹ ಕಪ್ಪು ಜನಾಂಗದವನಿಗೆ ರೆಡ್ ಕಾರ್ಪೆಟ್ ಹಾಸಿನ ಸ್ವಾಗತ ದೊರೆತ ನಂತರ.  ಒಬಾಮಾ ವಿಶ್ವದ ಎದುರು ನಿಂತು” This election has many first and many stories have to be told to the generation” ಎಂದು ಗಟ್ಟಿಯಾಗಿ ನುಡಿದ ನಂತರ.

೨೦೦೮ರಲ್ಲಿ ತನ್ನಂತೆ ಮೈಬಣ್ಣದ ಕಾರಣಕ್ಕೆ ನಸುಕಿ ಹೋಗಿದ್ದವನೊಬ್ಬನ ಮನೆಯ ಹುಡುಗ ಅಮೆರಿಕಾದ ಗದ್ದುಗೆಯೇರಿದ್ದು ನಿಕ್ಸನ್ ಕೂಪರ್ ಗೆ ಮೋಕ್ಷ ತೋರಿದ ಹಾದಿಯಂತಿತ್ತು. ಒಂದು ಬದಲಾವಣೆಗಾಗಿ ನಡೆದೇ ಹೋಗಿ ಮತದಾನ ಮಾಡಿದ್ದ ನಿಕ್ಸನ್ ಕೂಪರ್ ನನ್ನು ಬರಾಕ್ ಒಬಾಮ ಮತ್ತು ಆತನ ಪತ್ನಿ ಮಿಚೆಲ್  ವೈಟ್ ಹೌಸ್ ಗೆ ಅಥಿತಿಯಾಗಿ ಸ್ವಾಗತಿಸಿದ್ದರು. ತನ್ನ ಮುದಿ ಕಾಲುಗಳನ್ನು ನಿಧಾನವಾಗಿ ಊರುತ್ತ ಬಂದ ನಿಕ್ಸನ್ ಕೂಪರ್ ಒಬಾಮನನ್ನು ಕಂಡವಳು ವಿದ್ಯುತ್ಕಾಂತೀಯನ್ನು ಸೋಕಿದವಳಂತೆ  ಕುಣಿಯತೊಡಗಿದ್ದಳು. ಅವಳ ಮುದಿ ದೇಹಕ್ಕೂ ದಿವ್ಯಶಕ್ತಿಯ ಸಂಚಾರವಾದಂತೆ ಕಂಡಿತ್ತು.

ಒಬಾಮಾನ ತೋಳುಗಳನ್ನು ಹಿಡಿದು, Yes, Sir. I would never live to get in the white house. And I will tell you am so happy. A black president. Am here to celebrate to black history
ಎಂದು ನಿಕ್ಸನ್ ಕೂಪರ್ ಹೇಳಿದ ಮಾತುಗಳನ್ನು ಕೇಳಿದ ಒಬಾಮಾ ಅಮೆರಿಕಾದ ಅಧ್ಯಕ್ಷನಾಗಿ ಕಾಣುತ್ತಿರಲಿಲ್ಲ. ಅಮೆರಿಕಾದ ನೆಲಕ್ಕೆ ಬದುಕನ್ನೇ ಅರ್ಪಿಸಿಕೊಂಡ ಕಪ್ಪು ಜನಾಂಗದವರ ಪ್ರತಿನಿಧಿಯಂತೆ ತಾನು ಎನ್ನುವಂತೆ ನಿಂತುಬಿಟ್ಟಿದ್ದರು.

1963 ಆಗಷ್ಟ್ 28ರಂದು ವಾಸಿಂಗ್ಟನ್ ಡಿಸಿ,ಯ  ಲಿಂಕನ್ ಹಾಲ್ ನಲ್ಲಿ , ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಮಾತನಾಡುತ್ತ “I have a dream that one day this nation will rise up and live out the true meaning of its creed. we hold these truths to be self – evident that all men are equal.

I have a dream that one day on the red hill of georgia the sons of former slaves and the sons of former slave onwers will be able to sit down together at the table of brotherhood.
I have a dream”.  ಎನ್ನುವ ಮಾತುಗಳು ಅದೆಷ್ಟೋ ವರ್ಷಗಳ ನಂತರ ತನ್ನ ಮೂಲಕ ಘಟಿಸಿಹೋದಂತೆ ಎನ್ನುವುದನ್ನು ನೆನೆದಂತೆ ಕಾಣುತ್ತಿದ್ದವು. ಜಾರ್ಜ್ ಬುಷ್ನಂತ ಪ್ರಭಲರ ನಂತರ ಅಮೆರಿಕಾ ಬರಾಕ್ ಒಬಾಮನಂತರಹವರ ಕೈಗೆ ಬಂದಿತ್ತು.

ಅದೊಂದು ಬದಲಾವಣೆಯನ್ನು ನೆನೆದು ಆನ್ ನಿಕ್ಸನ್ ಕೂಪರ್ ತನ್ನ ಕಡೆ ದಿನಗಳಲ್ಲಿ “A century and some change: My life before the president called my name” ಹೆಸರಿನಲ್ಲಿ ತನ್ನ ಆತ್ಮಕತೆಯನ್ನು ಬರೆದಳು.‌ ಅಮೆರಿಕಾದ ಅಧ್ಯಕ್ಷನೊಬ್ಬ ನೆನೆಯುವ ಮೊದಲು ತಾನು ಹಾಗೂ ತನ್ನಂತಹ ಕಪ್ಪು ಜನರ ಬದುಕು ಅದೆಷ್ಟೋ ದುರ್ಭರವಾಗಿತ್ತು ಎನ್ನುವುದನ್ನ ಸೂಚ್ಯವಾಗಿ ದಾಟಿಸಿದ್ದಳು ನಿಕ್ಸನ್. ಅದು ಏಕಕಾಲಕ್ಕೆ ಆತ್ಮಕತೆಯೂ ಹಾಗೂ ಇತಿಹಾಸದ ಪುಸ್ತಕವಾಗಿಯೂ ಕಾಣುತ್ತಿತ್ತು.

***

ಅಮೆರಿಕಾ ಹಾಗೂ ಆಫ್ರೀಕಾದ ಸಣ್ಣದಾದ ದೇಶಗಳ ಕಪ್ಪ ಜನರ ಸಂಕಟ ತೀರಾ ಭಿನ್ನವಾಗಿಲ್ಲ.‌ ಸಂಕ್ಕೃತಿ ವಿಚಾರದಿಂದ ಒಂದಿಷ್ಟು ಭಿನ್ನವಾಗಿರಬಹುದು ಅಷ್ಟೇ. ಇದೇ ರೀತಿಯ ನೋವುಗಳನ್ನು ತಿಂದು ಮೋಝಾಂಬಿಕ್ನಂತ ದೇಶದ ಸಣ್ಣ ಮನೆಯೊಳಗಿನಿಂದ ಭಾರತಕ್ಕೆ ಬಂದಿದ್ದ ಇವಾನ್ ಗೆ ನನ್ನ ಅದೊಂದು ಮಾತು ತಪ್ಪಾಗಿ ಕಂಡಿದ್ದರಲ್ಲಿ ಅವನ ದೋಷವಿರಲಿಲ್ಲ. ಅಳಿಸಲಾಗದ ಅವನದೇ ಇತಿಹಾಸದ ಕುರುಹುಗಳಿದ್ದವು ಎನ್ನುವುದನ್ನು ನಾನು ಒಪ್ಪಿಕೊಳ್ಳಬೇಕು ಅಷ್ಟೇ.

2 comments

  1. ಸಂದೀಪ್ ಇಷ್ಟ ಆಯ್ತು ಬರಹ.ಶೈಲಿ ಕೂಡ ಚಂದ

Leave a Reply