ಅಯ್ಯಪ್ಪನೇ..

ಪ್ರವೇಶ 

ವಿದ್ಯಾರಶ್ಮಿ ಪೆಲತ್ತಡ್ಕ  

ಗುಡಿಯ ಕದ ದಢಾರನೆ ತೆರೆಯಿತೆಂದು
ಬರಲಾರೆವು ನಾವು,
ದಡಬಡನೆ ಮೆಟ್ಟಿಲು ಹತ್ತಿ.
ಹುಟ್ಟಿನ ಜತೆಗೇ ಸಿಕ್ಕವನು ನೀನು
ನಮ್ಮೊಳಗೇ ಬೆಳೆದಿದ್ದೇಯೆ
ನಿನ್ನ ಅಲ್ಲಿ ಕೂರಿಸಿ ಬೇಲಿಯಿಕ್ಕಿದವರು ಅವರು
ನಮ್ಮ ನಡೆಗೆ ತಡೆ ಹಾಕಿದವರೂ ಅವರೇ
ಸೃಷ್ಟಿಸಿದ ನಿನಗೇನಿಲ್ಲ ಸಲ್ಲದ ಹೇವರಿಕೆ

ಅಯ್ಯಪ್ಪನೇ,

ನಮ್ಮ ಕೊಳೆಗೆ ಹೇಸಿ ಕೂತರೆ ಸೃಷ್ಟಿಯುಂಟೇ
ನೀನು ನೀನೇ ಹೌದಾದರೆ ನಮ್ಮ ದೂರವಿಡಲಾರೆ
ಅಪ್ಪಗಳಿರಾ,

ನೀವು ಕಟ್ಟಿದ ಗುಡಿಯ ಕದ ಮುಚ್ಚಿದಾಗಲೇ
ಎದೆಯ ಗುಡಿ ತೆರೆಯಿತು
ನಿಮ್ಮ ಗುಡಿಯ ಹಂಗು ಎಂದಿಗೂ ಎಮಗಿಲ್ಲ,
ಪೂಜಾರಿಗಳಾದ ನಿಮ್ಮೆಲ್ಲರದೂ
ನಾವು ಎಂದೋ ಒಳಗಿದ್ದೇವೆ
ಹೊರಗಿರುವವರು ನೀವು,
ದಯಮಾಡಿ ಒಳಬನ್ನಿ.

4 comments

  1. ಕರೆಕ್ಟ್ , ನಮಗೇನು ಬೇರೆ ದೇವರು ಇಲ್ವೆ ?ಧಂಡಿಯಾಗಿದಾವೆ ,,, both male n female ! ಎದ್ದು ಬಿದ್ದು ಆ ಮಲೆ ಹತ್ತದಿದ್ರೆ , ಆ ಎಳೆ ಹುಡುಗದೇವ್ರನ್ನ ನೋಡದಿದ್ರೆ ಯಾವ ರಾಜ್ಯ ಕೊಳ್ಳೆ ಹೋದಾತು,,, ಇರಲಾರದೆ ಇರುವೆ ಬಿಟ್ಕೊಂಡ ಸಾವಾಸ ಕಣ್ರೀ,,,,, ಒಂದಷ್ಟು ಗುಡಿಗೆ ನಮ್ಮನ್ನು ಬಿಟ್ಕೊಳದಿದ್ರೆ ಅಷ್ಟು ಕರ್ಮ ಕಳೀತು ಅಂದುಕೋಬೇಕು. ಈಗ ಅತ್ತೆಯೊ ಮಾವನೊ ಹರಕೆ ಕಟ್ಕೊಂಡು ಹೋಗಿಬಾರಮ್ಮ ಅಂತ ವರಾತ ಮಾಡಕ್ಕೆ ಅಯ್ಯಪ್ಪ ಒಬ್ಬ ಅಡಿಷನಲ್ ಆದ ಅಷ್ಟೇ. ನಮಾಜು ಮಾಡಕ್ಕೋಗಿ ಮಸೀದೀನೆ ಮೈ ಮೇಲೆ ಎಳಕೊಂಡಂಗೆ ಇವೆಲ್ಲ. 33% ಮಹಿಳಾ ಮೀಸಲಾತಿ ಬಿಲ್ ನಾಪತ್ತೆ ಆಗೋಯ್ತು. ಯಾವ ಪಕ್ಷ ಬಂದರೂ ನಾಜೂಕಾಗಿ ಅದನ್ನ “ಡೀಲ್” ಮಾಡ್ತಾ ಇದಾರೆ. ಅದ ಅತ್ತ ಬಿಟ್ಟು ನಾವು ಈ ಅಯ್ಯಪ್ಪ ಶನಿಯಪ್ಪನ್ನ ಹಿಡಕೊಂಡು ಅವರು ಗುಡಿಯಲ್ಲಿ ಮಾತ್ರ ಇದಾರೆ ಅಂತ ಕೋರ್ಟಿನ ತನಕ ಹೋಗಿದೀವಿ. ನಮ್ಮ ಹೊಟ್ಟೆಲಿ ಹುಟ್ಟೊ ಗಂಡುಡುಗರೆಲ್ಲ ಅಯ್ಯಪ್ಪಗಳೆ, ನಮಗೆ ಗಂಟು ಬೀಳೋ ಎಡವಟ್ಟುಗಳೆಲ್ಲ ಶನಿ ಮಹಾತ್ಮರೇ ! ಗುಡಿಗ್ಯಾಕೆ ಹೋಗಬೇಕು ಅವರನ್ನ ನೋಡೋಕೆ

Leave a Reply