ಹೆಚ್ಚಿಗೆ ಲೈಕ್ ಗಳೇ ಸಿಗುವುದಿಲ್ಲ..

ಅಂಟಿಕೊಳ್ಳುವ ಗುಣ

ಸಿದ್ಧರಾಮ ಕೂಡ್ಲಿಗಿ

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಬ್ಬರು ತಮ್ಮ ಗೋಳನ್ನು ತೋಡಿಕೊಂಡಿದ್ದರು ‘ನಾನೆಷ್ಟು ಚೆನ್ನಾಗಿ ಬರೆದರೂ, ಚಿತ್ರಗಳನ್ನು ಹಾಕಿದರೂ ಹೆಚ್ಚಿಗೆ ಲೈಕ್ ಗಳೇ ಸಿಗುವುದಿಲ್ಲ’ ಎಂದು. ಮತ್ತೊಬ್ಬರು ‘ಇಲ್ಲಿ ಬರೀ ತಮಗೆ ಬೇಕಾದವರಿಗಷ್ಟೆ ಲೈಕ್ ಗಳು ಕಮೆಂಟ್ ಗಳು, ಪ್ರತಿಭೆಗೆ ಬೆಲೆಯೇ ಇಲ್ಲ’ ಎಂದು.

ಯಾಕೆ ಹೀಗೆ ? ಇಂತಿಷ್ಟು ಲೈಕ್ ಗಳು ನನಗೆ ಬರಲೇಬೇಕೆಂಬ ಹಪಾಹಪಿಯೇ ನಮ್ಮಲ್ಲಿರುವ ಅಂಟಿಕೊಳ್ಳುವ ಗುಣವನ್ನು ತೋರಿಸಿಬಿಡುತ್ತದೆ. ಯಾರೂ ನನ್ನನ್ನು ಗುರುತಿಸುತ್ತಿಲ್ಲ, ಯಾರೂ ನನಗೆ ಬೆಲೆ ಕೊಡುತ್ತಿಲ್ಲ, ನನ್ನ ಕೆಲಸಕ್ಕೆ ಬೆಲೆಯೇ ಇಲ್ಲ ಹೀಗೇ ನಮ್ಮ ಕೊರತೆಗಳ ಗೋಳು ಮುಂದುವರೆಯುತ್ತಲೇ ಇರುತ್ತದೆ. ಇಲ್ಲದ್ದನ್ನು ಹಚ್ಚಿಕೊಂಡು ಕೊರಗುವ ನಮ್ಮ ಮನಸ್ಥಿತಿಗಳೇ ನಮ್ಮನ್ನು ಮತ್ತಷ್ಟು ಕೆಳಕ್ಕೆ ತಳ್ಳುತ್ತ ಹೋಗುತ್ತವೆ.

ಮನುಷ್ಯನ ಸಹಜ ಸ್ವಭಾವವೆಂದರೆ ತನ್ನನ್ನು ತಾನು ಪ್ರೀತಿಸಿಕೊಳ್ಳುವುದು, ಇತರರೂ ನನ್ನನ್ನು ಪ್ರೀತಿಸಿಸಬೇಕೆಂಬುದು. ಆದರೆ ಈ ಧಾವಂತದಲ್ಲಿ ನಮ್ಮ ಕೊರತೆಗಳೇನು ಎಂಬುದನ್ನೇ ನಾವು ಯೋಚಿಸುವುದಿಲ್ಲ. ಮತ್ತೊಬ್ಬರಿಗೆ ನಾವು ಇಷ್ಟವಾಗಲೇಬೇಕೆಂದೇನಿಲ್ಲ. ನಮ್ಮ ಗುಣ ಸ್ವಭಾವಗಳು ಅವರಿಗೆ ಹೊಂದಾಣಿಕೆಯಾಗುತ್ತವೆಯೇ ಎಂಬುದನ್ನೂ ಯೋಚಿಸದೆ ಅವರು ನನ್ನನ್ನೇಕೆ ಮೆಚ್ಚುತ್ತಿಲ್ಲ ? ಎಂಬ ಕೊರಗಿನಲ್ಲಿಯೇ ದಿನಗಳನ್ನು ದೂಡುತ್ತ ವಿನಾಕಾರಣ ನಮ್ಮ ಚಿಂತನೆಯನ್ನೇ ಅಧೋಮುಖದತ್ತ ತಳ್ಳುತ್ತ ಹೋಗುತ್ತೇವೆ.

ಸಾಮಾನ್ಯವಾಗಿ ನಮ್ಮನ್ನು ಹೊಗಳುವವರು ನಮಗೆ ತುಂಬ ಇಷ್ಟವಾಗಿಬಿಡುತ್ತಾರೆ. ಹೊಗಳದೇ ಇರುವವರು ಕಂಡರೆ ಸಾಕು ಅವರಿಂದ ದೂರ ಸರಿಯಲು ಪ್ರಯತ್ನಿಸುತ್ತೇವೆ. ಇಲ್ಲಿ ಅಂಟಿಕೊಳ್ಳುವ ಗುಣ ಕೆಲಸ ಮಾಡುತ್ತದೆ. ರಾಜಕಾರಣಿಗಳಾದವರಿಗೆ ಬಹುಪರಾಕ್ ಹೇಳುವ ಕಾರ್ಯಕರ್ತರಿದ್ದರೆ ಅವರಿಗೇ ಅಂಟಿಕೊಂಡುಬಿಡುತ್ತಾರೆ. ಸುತ್ತಮುತ್ತಲೂ ಕಾರ್ಯಕರ್ತರಿದ್ದಷ್ಟೂ ರಾಜಕಾರಣಿಗಳಿಗೆ ಮತ್ತಷ್ಟು ಹುರುಪು. ಅಧಿಕಾರಿಗಳಿಗೆ ತಮ್ಮ ಮಾತುಗಳನ್ನು ಶಿರಸಾವಹಿಸಿ ಪಾಲಿಸುವ ನೌಕರರಿದ್ದಷ್ಟು ಸಂತಸ, ಪತ್ನಿಗೆ ಪತಿ ತನ್ನ ಪ್ರತಿಯೊಂದು ಮಾತನ್ನು ನಡೆಸಿಕೊಡುವ ರೀತಿಯಲಿದ್ದಷ್ಟೂ ಸಂಭ್ರಮ, ಹೀಗೆ ಬದುಕಿನ ಪ್ರತಿಹೊಂದು ಕ್ಷೇತ್ರದಲ್ಲೂ ತಮ್ಮ ಮಾತನ್ನು ನಡೆಸಿಕೊಡುವ, ತಮ್ಮನ್ನೇ ಇಷ್ಟಪಡುವವರಿಗೇ ಅಂಟಿಕೊಳ್ಳುವ ಗುಣವನ್ನು ಕಾಣುತ್ತ ಹೋಗುತ್ತೇವೆ.

ತನ್ನ ಆಸ್ತಿ, ತನ್ನ ಮನೆ, ತನ್ನ ಹಣ, ತನ್ನ ಕುಟುಂಬ, ತನ್ನ ಹೊಲ ಎಂಬ “ತನ್ನತನ” ಎಂಬುದು ಬದುಕಿನುದ್ದಕ್ಕೂ ಅಂಟಿಕೊಂಡೇ ಇರುತ್ತದೆ. ಇವುಗಳಲ್ಲಿ ಯಾವುದೇ ಏರುಪೇರಾದರೂ ಮನಸು ತಹತಹಿಸುತ್ತದೆ.

ಹೆಣ್ಣಿಗಾಗಿ ಸತ್ತವರು ಕೋಟಿ ಕೋಟಿ, ಹೊನ್ನಿಗಾಗಿ ಸತ್ತವರು ಕೋಟಿ ಕೋಟಿ ಮಣ್ಣಿಗಾಗಿ ಸತ್ತವರು ಕೋಟಿ ಕೋಟಿ, ನಿನಗಾಗಿ ಸತ್ತವರನಾರನೂ ಕಾಣೆ ಗುಹೇಶ್ವರಾ ಎಂದು ಅಲ್ಲಮಪ್ರಭುಗಳು ಹೇಳಿದಂತೆ, ಯಾವುದಕ್ಕಾದರೂ ಅಂಟಿಕೊಳ್ಳುವ ಕ್ರಿಯೆ ಜೀವನದಲ್ಲಿ ಹಾಸುಹೊಕ್ಕಾಗಿರುತ್ತದೆ. ಹಾಗಾದರೆ ಅಂಟಿಕೊಳ್ಳುವ ಗುಣ ತಪ್ಪೇ ಎಂದು ಯೋಚಿಸಿದಾಗ, ಯಾವುದಕ್ಕೂ ಅಂಟಿಕೊಳ್ಳದೇ ಇದ್ದಾಗಲೇ ಬದುಕನ್ನು ವಿಮರ್ಶಾತ್ಮಕವಾಗಿ ಕಾಣುವ ಗುಣ ಬೆಳೆಯುವದನ್ನು ಕಾಣುತ್ತೇವೆ. ಇಷ್ಟಪಟ್ಟವರನ್ನು ಇಷ್ಟಪಡದೇ ಇರುವವರನ್ನು ಸಮಾನ ಮನಸಿನಿಂದ ಕಾಣುವ ಮನೋಭಾವ ಬೆಳೆಸಿಕೊಂಡಾಗ ನಮ್ಮ ಚಿಂತನೆಗಳ ದಿಕ್ಕು ಬದಲಾಗುತ್ತ ಹೋಗುತ್ತದೆ. ಸ್ಥಿತಪ್ರಜ್ಞತೆ ಇದರ ಒಳಗುಟ್ಟು. ಎಲ್ಲವನ್ನು ಸಮಾನ ಮನಸಿನಿಂದ ಕಾಣುವ ಮನೋಭಾವ ಚಿಂತನೆಯ ಹೊಸ ದಿಕ್ಕನ್ನು ಪರಿಚಯಿಸುತ್ತದೆ.

ಆಸೆಯೇ ದು:ಖಕ್ಕೆ ಮೂಲ ಕಾರಣ ಎಂಬ ಬುದ್ಧನ ಹೇಳಿಕೆಯಂತೆ ಆಸೆಯೆಂಬುದೇ ಅಂಟಿಕೊಳ್ಳುವ ಗುಣ. ಇದರಿಂದ ಹೊರಬಂದರೆ ಹೊಸತನದ ಬದುಕನ್ನೇ ಕಾಣಬಹುದು. ನಕಾರಾತ್ಮಕ ಚಿಂತನೆಗಳ ಬದಲಾಗಿ ಸಕಾರಾತ್ಮಕ ಚಿಂತನೆ ನಮ್ಮ ವ್ಯಕ್ತಿತ್ವಕ್ಕೆ ಹೊಸತನವನ್ನು ತಂದುಕೊಡುತ್ತದೆ.

ಕಾರಣ ನಮಗೆ ಬೆಲೆಯೇ ಇಲ್ಲ, ನಮ್ಮನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬುದರ ಬದಲಾಗಿ ನಮ್ಮ ಸಕಾರಾತ್ಮಕ ಚಿಂತನೆಯೊಂದಿಗೆ ಹೊಸತನ್ನು ಕಟ್ಟುವ ಕ್ರಿಯಾಶೀಲ ಮನಸನ್ನು ಹೊಂದಿದರೆ ಖಂಡಿತ ಏನನ್ನಾದರೂ ಸಾಧನೆ ಮಾಡುವ ಅವಕಾಶವಿದೆ. ಹುಟ್ಟು ಬರಿಯ ಹುಟ್ಟಲ್ಲ ಅದರ ಹಿಂದೆ ಕಟ್ಟುವ ಚಿಂತನೆಯಿದೆ. ಪ್ರಕೃತಿಯಲ್ಲಿ ಪ್ರತಿಯೊಂದಕ್ಕೂ ಕಟ್ಟುವ ಅವಕಾಶವಿದೆ. ಅದು ಯಾವ ರೀತಿಯ ಕಟ್ಟುವಿಕೆ ಎಂಬ ಚಿಂತನ ಮಂಥನ ನಮ್ಮಲ್ಲಿಯೇ ನಡೆಯಬೇಕು. ಅಂದಾಗಲೇ ಹುಟ್ಟಿಗೂ ಸಾರ್ಥಕತೆ ಒದಗಲು ಸಾಧ್ಯ.

Leave a Reply