ನಿನ್ನೆದೆಯ ಹರವಿಗೆ..

ಕಲ್ಪನೆಯಾಗೇ ಉಳಿದು ಬಿಡು…

ಡಾ. ಪ್ರೇಮಲತ ಬಿ

ಕಲ್ಪನೆಯಾಗೇ ಉಳಿದುಬಿಡು ಹುಡುಗ

ನಿಜದಲ್ಲಿ….

ನನ್ನೊಳಗೆ ಚಿಮ್ಮುವ ಕಿಡಿಗಳು

ತಾಗದಷ್ಟು ದೂರ ನೀನು

ಹೊತ್ತಿ ಉರಿಯುವ ಸುಖದಲ್ಲಿ

ಸಖನಾಗಿರುವ  ನಿನ್ನ ಕಲ್ಪನೆ

ನನ್ನೊಳಗಿನ ಮಾತ್ರದ ಹೂ ದೋಟ

ನನ್ನದೋ ಹುಚ್ಚು ತುಡುಗು ಪ್ರೀತಿ

ಕೊಚ್ಚಿ ಕೊಂಡೊಯ್ಯಬಲ್ಲದು

ನನ್ನನ್ನು ಜೊತೆಗೆ ನಿನ್ನನ್ನೂ

ಬಲವೋ, ಒಲವೋ ತಿಳಿವ ಗೋಜಿಲ್ಲ

ಯಾಕೆಂದು ಯಾರಲ್ಲೂ ಕೇಳಿಲ್ಲ

ಆವರಿಸಿಕೊಂಡ ಭಾವಗಳಿಗೆ

ನಿಮಿಷಗಳ ಎಣಿಕೆ ಯಾಕೆ?

ಇಲ್ಲಿ ಕಾಲ ಕಣ್ಣು ಮಿಟುಕಿಸುವುದಿಲ್ಲ

ನನ್ನ ನೀನುಗಳೆಲ್ಲ ಮೂರ್ತವಾದರೆ

ನಿನ್ನ ಸೊಬಗ  ದಿಟ್ಟಿಸಲೋ, ವರ್ಣಿಸಲೋ

ಮುಟ್ಟಿ ಅನುಭವಿಸಿ ಆನಂದಿಸಲೋ

ಹಾಕುವ ಲೆಕ್ಕಕ್ಕೆ ಕೊನೆಯಿಲ್ಲ

ಕಲ್ಪನೆಯಾಗೇ ಉಳಿದುಬಿಡು

ಹುಚ್ಚು ಹುಡುಗ ನಿಜದಲ್ಲಿ…

ನಿನ್ನೆದೆಯ ಹರವಿಗೆ ನನ್ನೆದೆ

-ಯೆತ್ತರದ ಕಲ್ಪನೆಗಳಿಗೆ

ಸವಾಲು ಹಾಕುವ ಆಳವಿಲ್ಲ !

Leave a Reply