ಆದರೆ ಗಾಂಧೀಜಿಯನ್ನು ಹೀಗಳೆಯುವ, ನಿರಾಕರಿಸುವ ಕಾಯಕ ಅವ್ಯಾಹತವಾಗಿ ಸಾಗಿದೆ..

ಗಾಂಧೀಜಿ ಬದುಕಿದ್ದರೆ ಇಂದಿಗೆ 149 ವರ್ಷ ತುಂಬುತ್ತಿತ್ತು. ನಮಗೆ ಸ್ವಾತಂತ್ರ್ಯ ಲಭಿಸಿ 71 ವರ್ಷಗಳಾಗಿವೆ, ಗಾಂಧೀಜಿ ಹತ್ಯೆಯಾಗಿಯೇ ಎಪ್ಪತ್ತು ವರ್ಷಗಳು ಕಳೆದುಹೋಗಿವೆ.

ಆದರೆ ಗಾಂಧೀಜಿಯನ್ನು ಹೀಗಳೆಯುವ, ನಿರಾಕರಿಸುವ ಅಥವಾ ತುಚ್ಛೀಕರಿಸುವ ಕಾಯಕ ಮಾತ್ರ ಅವ್ಯಾಹತವಾಗಿ ಸಾಗಿಯೇ ಇದೆ…

ಬಾಪೂಜಿಯನ್ನು ಕೊಂದ ಸಂಘ ಪರಿವಾರದ ವಿರೋಧ ಒಂದು ಕಡೆಯಾದರೆ, ಕರ್ಮಠ ಅಂಬೇಡ್ಕರ್ ವಾದಿಗಳ ಅಸಹನೆ ಇನ್ನೊಂದು ಕಡೆ.

ಅದಕ್ಕೆ 1932ರ ಪೂನಾ ಒಪ್ಪಂದವನ್ನೇ ಕೇಂದ್ರವಾಗಿಟ್ಟುಕೊಂಡು ಗಾಂಧಿ ಮತ್ತು ಅಂಬೇಡ್ಕರರನ್ನು ಪರಸ್ಪರ ಶತ್ರುಗಳೆಂದು ಬಿಂಬಿಸುವ ಪ್ರಯತ್ನಗಳು ನಿಂತೇ ಇಲ್ಲ. ಈಗ ಕೆಲ ವರ್ಷಗಳ ಹಿಂದೆ ಅರುಂಧತಿ ರಾಯ್ ಕೂಡ ಆಂಬೇಡ್ಕರರ ಚರಿತ್ರಾರ್ಹ ‘ಜಾತಿವಿನಾಶ’ ಕೃತಿಗೆ ಮುನ್ನುಡಿ ರೂಪದಲ್ಲಿ ‘ಡಾಕ್ಟರ್ ಮತ್ತು ಸಂತ’ ಎಂಬ ಸುದೀರ್ಘ ಬರಹ ಬರೆದು ಗಾಂಧಿ ಭಂಜನೆಗೆ ಯತ್ನಿಸಿದರು.

ಅದಕ್ಕೆ ಉತ್ತರವಾಗಿ ಚಿಂತಕ ಮತ್ತು ಗಾಂಧೀಜಿ ಮೊಮ್ಮಗ ರಾಜಮೋಹನ್ ಗಾಂಧಿ ಬರೆದ ‘Independence and Social Justice: Understanding Ambedkar- Gandhi debate’ ಕೃತಿಯನ್ನು ಎರಡು ವರ್ಷಗಳ ಹಿಂದೆ ನಾನು ಕರ್ನಾಟಕ ಗಾಂಧಿ ಸ್ಮಾರಕ ನಿಧಿಗಾಗಿ ಅನುವಾದ ಮಾಡಿಕೊಟ್ಟಿದ್ದೆ.

ಆ ಕೃತಿಯ ಆಯ್ದ ಭಾಗಗಳನ್ನು ಇಲ್ಲಿ ಹಾಕುತ್ತಿರುವೆ.

ಇಂದಿಗೂ ಕಗ್ಗಂಟಾಗೇ ಉಳಿದಿರುವ ಅಂಬೇಡ್ಕರ್- ಗಾಂಧಿ ವಾಗ್ವಾದ ಕುರಿತ ತಿಳಿವಿಗೆ ಇದು ಸಹಕಾರಿಯಾಗಬಹುದು ಎಂಬ ನಂಬುಗೆ ನನ್ನದು.

-ಎನ್ ಎಸ್ ಶಂಕರ್ 

ಗಾಂಧಿ ಅಂಬೇಡ್ಕರ್ ಸಂಬಂಧ

1932ರ ಸೆಪ್ಟೆಂಬರಿನಲ್ಲಿ ಗಾಂಧಿ ಪುಣೆಯ ಯರವಾಡ ಜೈಲಿನಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಕೈದಿಯಾಗಿದ್ದಾಗ, ಪ್ರತ್ಯೇಕ ದಲಿತ ಮತಕ್ಷೇತ್ರಗಳ ವಿರುದ್ಧ, ಹಾಗೆಯೇ ಸವರ್ಣೀಯ ಹಿಂದೂ ಆತ್ಮಸಾಕ್ಷಿಯನ್ನು ಕಲಕಲೆಂದು, ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಘೋಷಿಸಿದರು.

ಉಪವಾಸಕ್ಕೆ ಒಂದು ದಿನ ಮುಂಚೆ ಮುಂಬಯಿಯಲ್ಲಿ ಸಭೆ ಸೇರಿದ ಅತ್ಯಂತ ಪ್ರಭಾವಿ ಸವರ್ಣೀಯ ಹಿಂದೂ ನಾಯಕರು ‘ಸ್ವರಾಜ್ ಸಂಸತ್ತು ಅಸ್ತಿತ್ವಕ್ಕೆ ಬಂದ ಕೂಡಲೇ ಮೊದಲಿಗೆ ಅಸ್ಪೃಶ್ಯರಿಗೆ ಸಾರ್ವಜನಿಕ ಬಾವಿಗಳು, ಸಾರ್ವಜನಿಕ ಶಾಲೆಗಳು, ರಸ್ತೆಗಳು ಮತ್ತೆಲ್ಲ ಸಾರ್ವಜನಿಕ ಸಂಸ್ಥೆಗಳಲ್ಲಿ ಸಮಾನ ಪ್ರವೇಶ ಕಲ್ಪಿಸಲಾಗುವುದು’ ಎಂದು ನಿರ್ಣಯಿಸಿದರು (ಸಮಗ್ರ ಕೃತಿಗಳು 51: 159-60).

ಗಾಂಧಿ ಉಪವಾಸದಿಂದಾಗಿ ಒತ್ತಡಕ್ಕೆ ಸಿಲುಕಿದ ಅವರು- ಯಾವುದೋ ಕಾಲದಲ್ಲಿ ಅಗಬೇಕಿದ್ದ- ಈ ಚಾರಿತ್ರಿಕ ವಾಗ್ದಾನಕ್ಕೆ ಸಹಿ ಹಾಕಿದರು.

ಸ್ವತಃ ಅಂಬೇಡ್ಕರ್ ಈ ನಿರ್ಣಯವನ್ನು ಉಲ್ಲೇಖಿಸಿದರೂ (ಅಂಬೇಡ್ಕರ್ 1945, 103), ಅರುಂಧತಿ ರಾಯ್ ಮಾತ್ರ ತಮ್ಮ ಸಮೀಕ್ಷೆಯಿಂದ ಇದನ್ನು ಬಹಿಷ್ಕರಿಸಿಬಿಡುತ್ತಾರೆ.

ಭಾರತದ ಉದ್ದಗಲ, ಗಾಂಧಿ ಉಪವಾಸದಿಂದ ಪ್ರಚೋದಿತರಾಗಿ ಅಸ್ಪೃಶ್ಯರಿಗೆ ಶತಮಾನಗಳ ಕಾಲ ಮುಚ್ಚಿದ್ದ ದೇವಾಲಯಗಳು ತಮ್ಮ ಬಾಗಿಲು ತೆರೆದವು. ಬ್ರಾಹ್ಮಣರು ದಲಿತರನ್ನು ತಮ್ಮ ಮನೆಗಳಿಗೆ ಊಟಕ್ಕೆ ಕರೆದರು. ಅತ್ತ ಸಾಮ್ರಾಜ್ಯ, ಯರವಾಡ ಜೈಲಿನ ಬಾಗಿಲನ್ನು ತೆರೆಯಿತು, ಮತ್ತು ಅಂಬೇಡ್ಕರ್ ಗಾಂಧಿಯೊಡನೆ ಸಮಾಲೋಚಿಸಲು ಒಳಗಡಿಯಿಟ್ಟರು.

ಆಗ ಒಂದು ಇತ್ಯರ್ಥಕ್ಕೆ ಬರಲಾಯಿತು. ಶಾಸನಸಭೆಗಳಲ್ಲಿ ದಲಿತರಿಗೆ ಮೀಸಲಾತಿ ನೀಡುವ ಪ್ರಸ್ತಾಪವನ್ನು ಮುಂಚೆ ಗಾಂಧಿ ವಿರೋಧಿಸಿದ್ದರು; ಈಗ ಅದನ್ನು ಒಪ್ಪಿದ್ದಷ್ಟೇ ಅಲ್ಲ, ದಲಿತರಿಗೆ ಅವರ ಜನಸಂಖ್ಯೆಗೆ ತಕ್ಕಷ್ಟು ಸ್ಥಾನಗಳಿರಬೇಕೆಂದೂ ಹೇಳಿದರು. ದಲಿತರಿಗೆ ಪ್ರತ್ಯೇಕ ಮತಕ್ಷೇತ್ರಗಳು ಮತ್ತು ಸ್ಥಾನಗಳನ್ನು ಮೀಸಲಿಡುವ ತನ್ನ ಯೋಜನೆಯಲ್ಲಿ ಬ್ರಿಟಿಷ್ ಸಾಮ್ರಾಜ್ಯ ನಿಗದಿ ಮಾಡಿದ್ದು, ಇದರ ಅರ್ಧದಷ್ಟು ಸ್ಥಾನಗಳನ್ನು ಮಾತ್ರ.

ಅಂಬೇಡ್ಕರ್, ಗಾಂಧಿಯವರ ಜೀವವನ್ನು ಉಳಿಸುವ ಸಲುವಾಗಿ, ದಲಿತ ಅಭ್ಯರ್ಥಿಗಳ ಪರ ಅಥವಾ ವಿರುದ್ಧ ದಲಿತರು ಮಾತ್ರ ಮತ ಚಲಾಯಿಸಲಿದ್ದ ಪ್ರತ್ಯೇಕ ಮತಕ್ಷೇತ್ರಗಳ ಒತ್ತಾಯವನ್ನು ಬಿಟ್ಟುಕೊಟ್ಟರು.

ಹೀಗೆ ಸಮಾನ ಭೂಮಿಕೆಯನ್ನು ಕಂಡುಕೊಂಡ ಅವರಿಬ್ಬರೂ ಒಂದು ಒಪ್ಪಂದಕ್ಕೆ ಬಂದರು. ಲಂಡನ್ನಿಗೆ ಕೇಬಲ್ ಸಂದೇಶ ಹೋಯಿತು, ತನ್ನದೊಂದು ಸೆರೆಮನೆಯಿಂದ ಕಳಿಸಲಾದ ಈ ಜಂಟಿ ಪ್ರಸ್ತಾವವನ್ನು ಅರಸೊತ್ತಿಗೆ ಒಪ್ಪಿಕೊಂಡಿತು, ಗಾಂಧಿ ತಮ್ಮ ಉಪವಾಸವನ್ನು ಕೈ ಬಿಟ್ಟರು.

ಈ ಒಪ್ಪಂದದ ತಿರುಳನ್ನು ಮುಂದಕ್ಕೆ ಸ್ವತಂತ್ರ ಭಾರತದ ಸಂವಿಧಾನದಲ್ಲಿ ಅಳವಡಿಸಲಾಯಿತು. ಒಪ್ಪಂದದ ನಂತರದ 82 ವರ್ಷಗಳಲ್ಲಿ- ದೇಶವ್ಯಾಪಿಯಿರಲಿ, ಅಥವಾ ರಾಜ್ಯದ್ದಾಗಿರಲಿ, ನಗರ ಪಟ್ಟಣ ಹಳ್ಳಿಯದ್ದಾಗಲಿ- ಭಾರತದ ಪ್ರತಿಯೊಂದು ಚುನಾವಣೆಯನ್ನೂ ಈ ಒಪ್ಪಂದದ ಅನುಸಾರವೇ, ದಲಿತರಿಗೆ ಪ್ರತ್ಯೇಕ ಮತಕ್ಷೇತ್ರಗಳಿಲ್ಲದೆ, ಮೀಸಲು ಸ್ಥಾನಗಳನ್ನಿಟ್ಟು ನಡೆಸಲಾಗಿದೆ. ಸ್ವಾತಂತ್ರ್ಯ ಬರುತ್ತಿದ್ದಂತೆಯೇ ಮುಸ್ಲಿಮರು ಮತ್ತು ಸಿಕ್ಖರ ಪ್ರತ್ಯೇಕ ಮತಕ್ಷೇತ್ರಗಳೂ ರದ್ದಾದವು.

ಉಪವಾಸದ ವೇಳೆ ಗಾಂಧಿ ‘ನಿಮ್ನ ವರ್ಗಗಳು ಅನುಭವಿಸುತ್ತಿರುವ ಸಾಮಾಜಿಕ, ಪೌರ ಮತ್ತು ರಾಜಕೀಯ ಹಿಂಸೆಯನ್ನು ಕೊನೆಗಾಣಿಸಲು ಸುಧಾರಕರ ದೊಡ್ಡ ಸೈನ್ಯವೇ’ ಶ್ರಮಿಸುವುದೆಂದು ಆಶಿಸಿದ್ದರು. ‘ಸ್ವರಾಜ್ಯಕ್ಕಿಂತಲೂ ಬಹು ಮಟ್ಟಿಗೆ ಮಿಗಿಲಾದ, ವಿಶ್ವಾತೀತ ಮೌಲ್ಯದ’ ಸಂಗತಿಯಿದು ಎಂದಿದ್ದರು (ಸಮಗ್ರ ಕೃತಿಗಳು 51: 119)

ಯರವಾಡ ಜೈಲಿನಲ್ಲಿ ತಮ್ಮೊಂದಿಗೆ ಸಮಾಲೋಚಿಸಿದ್ದ ‘ಡಾ. ಅಂಬೇಡ್ಕರ್, ರಾವ್ ಬಹಾದೂರ್ ಶ್ರೀನಿವಾಸನ್… ರಾವ್ ಬಹಾದೂರ್ ಎಂ.ಸಿ. ರಾಜಾ’ ಅವರಿಗೆ ‘ಹಿಂದೂ ಕೃತಜ್ಞತೆ’ ಅರ್ಪಿಸುತ್ತ ಗಾಂಧಿ ಹೇಳಿದ್ದು:
ಸವರ್ಣೀಯ ಹಿಂದೂಗಳ ತಲತಲಾಂತರದ ಪಾಪಕೃತ್ಯಗಳಿಗೆ ಶಿಕ್ಷೆ ವಿಧಿಸಲೆಂದು ಅವರು ನಿರ್ದಾಕ್ಷಿಣ್ಯವಾಗಿ ವ್ಯತಿರಿಕ್ತ ಧೋರಣೆ ತಳೆಯಬಹುದಿತ್ತು. ಅವರು ಹಾಗೆ ಮಾಡಿದ್ದರೆ, ನಾನಂತೂ ಮುನಿಸಿಕೊಂಡು ಅವರ ಧೋರಣೆಯನ್ನು ವಿರೋಧಿಸುವ ಕೆಲಸಕ್ಕೆ ಕೈ ಹಾಕುತ್ತಿರಲಿಲ್ಲ. ಆಗ ನನ್ನ ಸಾವು, ಹಿಂದೂ ಧರ್ಮದ ಬಹಿಷ್ಕೃತರು ಎಷ್ಟೋ ಅಜ್ಞಾತ ತಲೆಮಾರುಗಳ ಕಾಲ ಅನುಭವಿಸುತ್ತ ಬಂದ ಚಿತ್ರಹಿಂಸೆಗೆ ಪ್ರತಿಯಾಗಿ ತೆತ್ತ ಕ್ಷುಲ್ಲಕ ಬೆಲೆಯಾಗುತ್ತಿತ್ತು. ಆದರೆ ಅವರು ಉದಾತ್ತ ಹಾದಿಯನ್ನೇ ಆರಿಸಿಕೊಂಡರು, ಮತ್ತು ಎಲ್ಲ ಧರ್ಮಗಳ ಮೂಲ ಸ್ರೋತವಾದ ಕ್ಷಮೆಯ ಹಾದಿಯನ್ನೇ ಅನುಸರಿಸಿ ತೋರಿದರು. ಈಗ ಸವರ್ಣೀಯ ಹಿಂದೂಗಳು, ಈ ಕ್ಷಮೆಗೆ ತಾವು ಅರ್ಹರೆಂದು ಸಾಬೀತುಪಡಿಸುವರೆಂದು ಆಶಿಸುತ್ತೇನೆ (ಸಮಗ್ರ ಕೃತಿಗಳು 51: 143- 5).

ಇನ್ನು ಸವರ್ಣೀಯರಿಗೆ ಗಾಂಧಿ ಒಂದು ಎಚ್ಚರಿಕೆ ನೀಡಿದರು:
ಹಿಂದೂಗಳ ಬಹು ದೊಡ್ಡ ಜನಸ್ತೋಮ ಅನುಭವಿಸುತ್ತಿರುವ ಸಾಮಾಜಿಕ ಹಾಗೂ ಧಾರ್ಮಿಕ ಸಂಕಟಗಳನ್ನು ಸಂಪೂರ್ಣವಾಗಿ ತೆಗೆದುಹಾಕುವ ನಿಟ್ಟಿನಲ್ಲಿ ಸವರ್ಣೀಯ ಹಿಂದೂಗಳು ಮುಂಬರುವ ದಿನಗಳಲ್ಲಿ ಕೈಗೊಳ್ಳಬೇಕಾದ ಸುಧಾರಣೆಗಳ ವಿಶಾಲ ಕ್ಷೇತ್ರದಲ್ಲಿ ಈ (ಒಪ್ಪಂದದ) ರಾಜಕೀಯ ಭಾಗ ಒಂದು ಚಿಕ್ಕ ತುಣುಕಷ್ಟೇ.
ಈ ಸುಧಾರಣೆಯ ಕೈಂಕರ್ಯವನ್ನು ಸತತವಾಗಿ ನಿರ್ವಹಿಸಿ ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಸಾಧಿಸಿ ತೋರದಿದ್ದಲ್ಲಿ ನಾನು ಮತ್ತೆ ಉಪವಾಸವನ್ನು ಪುನರಾರಂಭಿಸಬೇಕಾಗುವುದು. ಮತ್ತು ನಾನು ಉಪವಾಸ ನಿಲ್ಲಿಸಿದ್ದರಲ್ಲೇ ಈ ಎಚ್ಚರಿಕೆಯೂ ಅಂತರ್ಗತವಾಗಿತ್ತೆಂದು ನಾನು ನನ್ನ ಸವರ್ಣೀಯ ಬಂಧುಗಳು ಮತ್ತು ಸುಧಾರಕರಿಗೆ ನೆನಪಿಸದಿದ್ದರೆ, ಅದು ವಿಶ್ವಾಸದ್ರೋಹವಾದೀತು (ಸಮಗ್ರ ಕೃತಿಗಳು 51: 143- 5).

ಅಷ್ಟಾದರೂ, ಸವರ್ಣೀಯ ಹಿಂದೂಗಳ ಪರಿವರ್ತನೆ ಅಗತ್ಯವಿದ್ದಷ್ಟು ಆಳಕ್ಕೆ ಹೋಗುತ್ತಿಲ್ಲವೆಂದು ಅವರು ಆತಂಕಗೊಂಡಿದ್ದರು.

1932ರ ಸೆಪ್ಟೆಂಬರ್ 30ರಂದು ಅವರು ದೀನಬಂಧು ಆಂಡ್ರ್ಯೂಸರಿಗೆ ಒಂದು ಪತ್ರ ಬರೆದರು:
ಸಂಪ್ರದಾಯವಾದಿಗಳಿಂದ ನಾನು ಬಹು ದೊಡ್ಡ ಪ್ರತಿಕ್ರಿಯೆಯನ್ನು ನಿರೀಕ್ಷಿಸಿದ್ದೇನೋ ಹೌದು. ಆದರೆ ಈ ಮಟ್ಟದ ಹಠಾತ್ ಪ್ರತಿಸ್ಪಂದನೆಗೆ ನಾನು ತಯಾರಾಗಿರಲಿಲ್ಲ. ಆದರೆ ಇಷ್ಟರಿಂದಲೇ ನಾನು ಮೋಸ ಹೋಗಲಾರೆ. ತೆರೆದ ದೇವಾಲಯಗಳು ತೆರೆದೇ ಇರುತ್ತವೆಯೇ, ಮಿಕ್ಕ ಸಂಗತಿಗಳೂ ಹಾಗೇ ಉಳಿದು ಬರುತ್ತವೆಯೇ ಕಾದು ನೋಡಬೇಕು (ಸಮಗ್ರ ಕೃತಿಗಳು 51: 154)
ಹಾಗೆ ಸುಧಾರಣೆಗಳನ್ನು ‘ಸತತವಾಗಿ ನಿರ್ವಹಿಸಿ ಗೊತ್ತಾದ ಕಾಲಾವಧಿಯಲ್ಲಿ ಸಾಧಿಸಲಾಯಿತೇ?’ ಸಾಕಷ್ಟು ಆಗಿದೆ, ಆದರೆ ಮತ್ತೂ ಬಹಳಷ್ಟು ಸಾಧಿಸಲಾಗದೆ ಉಳಿದಿದೆ. ಹಾಗೆಂದು ಗಾಂಧಿ ಮತ್ತೆ ಉಪವಾಸ ಕೂತರೇ? ಇಲ್ಲ. 1933ರ ಮೇನಲ್ಲಿ ಅವರು ಅಸ್ಪೃಶ್ಯತೆ ವಿರುದ್ಧ 21 ದಿನ ಉಪವಾಸ ಮಾಡಿದರೂ, ಈ ಉದ್ದೇಶಕ್ಕಾಗಿ ಮಾಡಲಿಲ್ಲ. ಅಂದ ಮಾತ್ರಕ್ಕೆ ಅವರು ಅರುಂಧತಿ ರಾಯ್ ಆಪಾದಿಸುವಂತೆ ಒಬ್ಬ ಆಷಾಢಭೂತಿ ಮತ್ತು ದಲಿತರ ಗುಪ್ತ ಶತ್ರುವಾಗಿದ್ದರೇ? ಅಥವಾ ತಮ್ಮ ಮಿತಿಗಳು ಹಾಗೂ ತಮ್ಮ ಜನರ ಮಿತಿಗಳ ನಡುವೆಯೇ, ತಮ್ಮ ಸರ್ವಸಾಮರ್ಥ್ಯವನ್ನೂ ತೊಡಗಿಸಿ ಒಂದಕ್ಕಿಂತ ಹೆಚ್ಚು ಕಠಿಣ ಧ್ಯೇಯಸಾಧನೆಗಾಗಿ ಹೋರಾಡುತ್ತಿದ್ದ ಅಸಾಮಾನ್ಯ ಮನುಷ್ಯರಾಗಿದ್ದರೇ?

*

ಒಪ್ಪಂದಕ್ಕೆ ಸಹಿ ಹಾಕಿದ ಆನತಿ ಕಾಲದಲ್ಲೇ ಅಂಬೇಡ್ಕರ್, ಗಾಂಧಿ ಮತ್ತು ತಮ್ಮ ನಡುವೆ ‘ಅಷ್ಟೊಂದು ಸಮಾನ ಅಂಶಗಳಿದ್ದುದಕ್ಕೆ’ ತಮಗೆ ‘ಆಶ್ಚರ್ಯ, ಮಹದಾಶ್ಚರ್ಯ’ವಾಯಿತೆಂದು ಹೇಳಿದರು. ಅಂಬೇಡ್ಕರ್ ‘ನೀವೇನಾದರೂ ಇಡಿಯಾಗಿ ನಿಮ್ನ ವರ್ಗಗಳ ಕಲ್ಯಾಣಕ್ಕಾಗಿ ತೊಡಗಿಕೊಂಡರೆ ನೀವೇ ನಮ್ಮ ನಾಯಕರಾಗುವಿರಿ’ ಎಂದು ಗಾಂಧಿಗೆ ಹೇಳಿದರು (ಪ್ಯಾರೇಲಾಲ್ 1932, 59).

ಗಾಂಧಿಯನ್ನು ‘ಮೋಹನ್’ ಎಂದು ಕರೆಯುತ್ತಿದ್ದ ಮತ್ತು ಗಾಂಧಿಯಿಂದ ‘ಚಾರ್ಲಿ’ ಎಂದು ಕರೆಸಿಕೊಳ್ಳುತ್ತಿದ್ದ ಗಾಂಧಿಯ ಆಪ್ತ ಬ್ರಿಟಿಷ್ ಸ್ನೇಹಿತ ಚಾಲ್ರ್ಸ್ ಆಂಡ್ರ್ಯೂಸ್ ಕೂಡ ಅದೇ ಸಲಹೆ ನೀಡಿದ್ದರು. ಅಸ್ಪೃಶ್ಯತೆ ಆಚರಿಸುವ ಭಾರತೀಯರು ಸ್ವರಾಜ್ಯಕ್ಕೆ ‘ಅರ್ಹರಲ್ಲ’ವೆಂದು ಗಾಂಧಿ ‘ಪದೇ ಪದೇ’ ಹೇಳುತ್ತಿದ್ದುದನ್ನು ನೆನೆಸಿಕೊಂಡ ಆಂಡ್ರ್ಯೂಸ್, ಗಾಂಧಿ ಅಸ್ಪೃಶ್ಯತೆಯ ವಿರುದ್ಧವೇ ತಮ್ಮ ಸಂಪೂರ್ಣ ಗಮನ ಹರಿಸಬೇಕೆಂದೂ ‘ಇಬ್ಬಿಬ್ಬರು ಮಾಲೀಕರ ಸೇವೆಯಲ್ಲಿ’ ತೊಡಗಬಾರದೆಂದೂ ಸೂಚಿಸಿದ್ದರು (ಗ್ರೇಸಿ 1989, 155).

ನಾವು ಗಾಂಧಿ ಹೇಳಿದ್ದನ್ನು ಒಪ್ಪಲಿ, ಬಿಡಲಿ, ಆದರೆ ಈ ಮನಃಪೂರ್ವಕ ಸಲಹೆಯನ್ನು ಅವರು ನಿರಾಕರಿಸಿದ್ದಕ್ಕೆ ನೀಡಿದ ಕಾರಣಗಳನ್ನು ನೋಡಬಹುದು.

ಆಂಡ್ರ್ಯೂಸ್ಗೆ, 15 ಜೂನ್ 1933: ನನ್ನ ಪ್ರೀತಿಯ ಚಾರ್ಲಿ, ಈಗ ಅಸ್ಪೃಶ್ಯತೆ ಕುರಿತ ನಿಮ್ಮ ಮಹತ್ವದ ವಾದದ ಬಗ್ಗೆ… ನನ್ನ ಜೀವನವೊಂದು ಅವಿಭಾಜ್ಯ ಅಖಂಡ ಚೇತನ. ಅದು ವಿವಿಧ ವಿಭಾಗಗಳಾಗಿ ಸಂಯೋಜನೆಗೊಂಡಿಲ್ಲ. ಸತ್ಯಾಗ್ರಹ, ಅಸಹಕಾರ, ಅಸ್ಪೃಶ್ಯತೆ, (ಮತ್ತು) ಹಿಂದೂ ಮುಸ್ಲಿಂ ಏಕತೆ… ಇವೆಲ್ಲವೂ ಒಂದರಿಂದೊಂದು ಬೇರ್ಪಡಿಸಲಾಗದ- ಒಂದೇ ಇಡಿತನದ ಭಾಗಗಳು…

ನನ್ನ ಜೀವನದ ಒಂದು ಕಾಲದಲ್ಲಿ ಯಾವುದೋ ಒಂದು ಅಂಶಕ್ಕೆ ಒತ್ತು ಕಾಣಬಹುದು, ಮತ್ತೊಂದು ಕಾಲಘಟ್ಟದಲ್ಲಿ ಬೇರೊಂದು. ಅದು ಪಿಯಾನೊ ವಾದಕನೊಬ್ಬ ಒಮ್ಮೆ ಒಂದು ಸ್ವರ ಮತ್ತೊಮ್ಮೆ ಮತ್ತೊಂದು ಸ್ವರ ನುಡಿಸಿದಂತೆ. ಆದರೆ ಅವೆಲ್ಲವೂ ಒಂದಕ್ಕೊಂದು ಸಂಬಂಧಪಟ್ಟವೇ…

‘ಈಗ ನಾಗರಿಕ ಅಸಹಕಾರಕ್ಕೂ ಅಥವಾ ಸ್ವರಾಜ್ಯಕ್ಕೂ ನನಗೂ ಯಾವ ಸಂಬಂಧವೂ ಇಲ್ಲ!’ ಎಂದು ಹೇಳುವುದು ನನ್ನಿಂದ ಸಾಧ್ಯವೇ ಇಲ್ಲ. ಅಷ್ಟೇ ಅಲ್ಲ,… ಸ್ವರಾಜ್ಯವಿಲ್ಲದೆ… ಅಸ್ಪøಶ್ಯತೆಯ ಸಂಪೂರ್ಣ ಮತ್ತು ಅಂತಿಮ ಮೂಲೋತ್ಪಾಟನೆ ಸಾಧ್ಯವೂ ಇಲ್ಲ….. ಪ್ರೀತಿ. ಮೋಹನ್ (ಸಮಗ್ರ ಕೃತಿಗಳು 55: 196- 9).
*

ಪುಣೆ ಒಪ್ಪಂದದ ಸಮಯದಲ್ಲಿ ಗಾಂಧಿ ಬಗ್ಗೆ ಅಂಬೇಡ್ಕರರಲ್ಲಿ ಚಿಗುರಿದ ಹೃತ್ಪೂರ್ವಕತೆಯನ್ನು ಅರುಂಧತಿ ರಾಯ್ ಗುರುತಿಸುತ್ತಾರಾದರೂ, ಕೂಡಲೇ ಅವರು ಹೇಳುವುದು:
ಆಮೇಲೆ ತಮ್ಮ ಮೈ ಮರೆವಿನಿಂದ ಎಚ್ಚೆತ್ತ ಅಂಬೇಡ್ಕರ್ ಬರೆದಿದ್ದು: ‘ಆ ಉಪವಾಸದಲ್ಲಿ ಉದಾತ್ತವಾದುದು ಏನೂ ಇರಲಿಲ್ಲ. ಅದೊಂದು ಅಸಹ್ಯಕರ ಗಲೀಜು ಕೃತ್ಯ’ (126).

ಅಂಬೇಡ್ಕರ್ ಈ ಕಠೋರ ನುಡಿಗಳನ್ನು ಬಳಸಿದ್ದು ನಿಜ. ಆದರೆ ಯಾವಾಗ? ಅವರು ಗಾಂಧಿ ಉಪವಾಸದ ಮೈ ಮರೆವಿನಿಂದ ಎಚ್ಚೆತ್ತುಕೊಂಡಾಗ ಎಂದು ಅರುಂಧತಿ ರಾಯ್ ಹೇಳುತ್ತಾರೆ. ಹಾಗಾದರೆ, ಗಾಂಧಿ ಬಗ್ಗೆ ಯಾವ ಪೂಜ್ಯ ಭಾವವೂ ಇರದಿದ್ದ ಎದುರಾಳಿ ಅಂಬೇಡ್ಕರ್ಗೆ, ಗಾಂಧಿಯ ‘ಒತ್ತಡ’ದಿಂದ ಪಾರಾಗಲು ಎಷ್ಟು ದಿನ ಬೇಕಾಗಿದ್ದೀತು? ಏಳು ದಿನ? ಏಳು ತಿಂಗಳು? ಅರುಂಧತಿ ರಾಯ್ ದಿನಾಂಕವನ್ನು ಮುಚ್ಚಿಟ್ಟು ಉಲ್ಲೇಖಿಸಿರುವ ಈ ಮಾತುಗಳನ್ನು ಅಂಬೇಡ್ಕರ್ ಬರೆದಿದ್ದು 1945ರ ಬೇಸಿಗೆಯಲ್ಲಿ- ಉಪವಾಸ ಮತ್ತು ಒಪ್ಪಂದದ ಪೂರ್ಣ ಹದಿಮೂರು ವರ್ಷಗಳ ನಂತರ- ‘ಗಾಂಧಿ ಮತ್ತು ಕಾಂಗ್ರೆಸ್ ಅಸ್ಪೃಶ್ಯರಿಗೆ ಮಾಡಿದ್ದೇನು?’ ಎಂಬ ತಲೆಬರಹದಲ್ಲಿ ಅವರು ಬರೆದ ಭಾವಾವಿಷ್ಟ ಹೊತ್ತಗೆಯಲ್ಲಿ.

ತಮ್ಮ ಈ ಉಗ್ರ ಪಠ್ಯದಲ್ಲಿ ಅಂಬೇಡ್ಕರ್ ಗಾಂಧಿಯ ಉಪವಾಸ ಮತ್ತು ಪುಣೆ ಒಪ್ಪಂದವನ್ನು ಸಾಧಿಸಿದ ವಿಧಾನದ ಮೇಲೇನೋ ವಾಗ್ದಾಳಿ ನಡೆಸುತ್ತಾರೆ; ಆದರೆ ನಮಗೆ ಸ್ಪಷ್ಟವಿರಬೇಕು, ಈ ದಾಳಿ- ಆ ಒಪ್ಪಂದದ ಕರಾರುಗಳ ವಿರುದ್ಧ ಅಲ್ಲ.
ಹಾಗೆ ನೋಡಿದರೆ ತಮ್ಮ 1945ರ ಪಠ್ಯದಲ್ಲಿ, ಅಂಬೇಡ್ಕರ್, ಪುಣೆ ಒಪ್ಪಂದ ತಮಗೆ ಸಂದ ವಿಜಯವೆಂದೇ ಅಲ್ಲಲ್ಲಿ ಹೇಳಿಕೊಳ್ಳುತ್ತಾರೆ. ಅದಕ್ಕೇ ಅವರು ಬರೆಯುವುದು, ‘ಉಪವಾಸ ವಿಫಲವಾಗಿ, ಗಾಂಧಿ ಅಸ್ಪೃಶ್ಯರ ರಾಜಕೀಯ ಹಕ್ಕೊತ್ತಾಯಗಳನ್ನು ಮನ್ನಿಸಿದ- ಪುಣೆ ಒಪ್ಪಂದ ಎಂದು ಕರೆಯಲಾಗುವ- ಈ ಒಪ್ಪಂದಕ್ಕೆ ಸಹಿ ಹಾಕಲೇಬೇಕಾದ ಸಂದರ್ಭ ಬಂದಾಗ, ಅಸ್ಪೃಶ್ಯರ ಹಕ್ಕುಗಳು ಯಾವ ಉಪಯೋಗಕ್ಕೂ ಬರದ ರೀತಿಯಲ್ಲಿ ಚುನಾವಣೆಗಳಲ್ಲಿ ಅಕ್ರಮಗಳನ್ನು ಎಸಗಲು ಕಾಂಗ್ರೆಸ್ಸನ್ನು ಉತ್ತೇಜಿಸುವ ಮೂಲಕ, ಗಾಂಧಿ ತಮ್ಮ ಸೇಡು ತೀರಿಸಿಕೊಂಡರು. (ಅಂಬೇಡ್ಕರ್ 1945, 259).

ಉಪವಾಸನಿರತ ಗಾಂಧಿಯ ಎದುರು ದೃಢವಾಗಿ ನಿಲ್ಲುವ ಯಾವ ಅವಕಾಶವೂ ಅಂಬೇಡ್ಕರರಿಗೆ ಇರಲಿಲ್ಲ ಎನ್ನುತ್ತಾರೆ ಅರುಂಧತಿ ರಾಯ್. ಕೆಲವೇ ಪುಟಗಳ ನಂತರ ಆಕೆ ‘ಪುಣೆ ಒಪ್ಪಂದದ ಪತನ’ ಎಂಬ ಮಾತಾಡುತ್ತಾರೆ (137). ಆದರೂ, ಅಂಬೇಡ್ಕರ್ ತಮ್ಮ 1945ರ ಈ ಪ್ರಕ್ಷುಬ್ಧ ಪಠ್ಯದಲ್ಲಿ ಎಲ್ಲಿಯೂ ಒಪ್ಪಂದದ ಕರಾರುಗಳನ್ನು ಟೀಕಿಸುವುದಿಲ್ಲ. ಅಷ್ಟೇ ಅಲ್ಲ, ಆ ಸಂದರ್ಭದಲ್ಲಿ ಅಥವಾ ನಂತರ ಯಾವಾಗಲಾದರೂ- ನನಗೆ ತಿಳಿದ ಮಟ್ಟಿಗೆ- ಆ ಒಪ್ಪಂದವನ್ನು ರದ್ದುಗೊಳಿಸಲು ಅಥವಾ ಬದಲಾಯಿಸಲು ಯತ್ನಿಸಲೂ ಇಲ್ಲ. ಈ ಒಪ್ಪಂದವನ್ನು ‘ಪತನ’ ಎಂದುಕೊಳ್ಳುವ ಬದಲು ಅವರು ಅದನ್ನು, ದಲಿತರೂ ಸೇರಿದಂತೆ ಎಲ್ಲರಿಗೂ ಲಾಭದಾಯಕವಾದ ಹೊಂದಾಣಿಕೆಯಾಗಿಯೇ ಕಂಡರು ಎನಿಸುತ್ತದೆ.

1945ರ ಈ ಪಠ್ಯವನ್ನು ಬರೆದ ಎರಡೇ ವರ್ಷಗಳ ನಂತರ, ಅವರು ಇದೇ ಒಪ್ಪಂದವನ್ನು ಅಳವಡಿಸಿಕೊಂಡ ಸಂವಿಧಾನಕ್ಕೆ ಕಾನೂನು ರೂಪ ಕೊಡುವ ಪ್ರಕ್ರಿಯೆಗೆ ಚಾಲನೆ ನೀಡಿದರು. ಇಂದು ನೋಡಿದರೆ ಆ ಒಪ್ಪಂದ ಮಹಾ ಮುತ್ಸದ್ದಿತನದ ತೀರ್ಮಾನವಾಗಿಯೇ ಎದ್ದು ಕಾಣುತ್ತದೆ.

ಇನ್ನು ಸಂಪ್ರದಾಯವಾದಿ ಹಿಂದೂಗಳು ಸಹ ಗಾಂಧಿಯವರ 1932ರ ಉಪವಾಸವನ್ನು ತಮ್ಮ ಮೇಲೆ ಹೇರಿದ ಒತ್ತಡವಾಗಿ ಭಾವಿಸಿ, ತತ್ಫಲವಾದ ಒಪ್ಪಂದಕ್ಕೆ ಪ್ರತಿರೋಧ ಒಡ್ಡಿದ್ದನ್ನು- ಅರುಂಧತಿ ರಾಯ್ ಒಪ್ಪಿಕೊಳ್ಳುವುದಿಲ್ಲವಾದರೂ- ಅಂಬೇಡ್ಕರ್ ಮಾತ್ರ (ತಮ್ಮ 1945ರ ಪಠ್ಯದಲ್ಲಿ) ದಾಖಲಿಸುತ್ತಾರೆ.

ತಾವು ತೋರಿದ ರಿಯಾಯ್ತಿಗಳಿಂದಾಗಿ ‘ಅಸ್ಪೃಶ್ಯರು ದುಃಖಿತರಾದರು’ ಎಂದು ಅಂಬೇಡ್ಕರ್ ಬರೆದರೂ ಅವರು ಹೇಳುವುದು:
ಸವರ್ಣೀಯ ಹಿಂದೂಗಳಿಗೆ (ಒಪ್ಪಂದವನ್ನು) ವಿರೋಧಿಸುವ ಧೈರ್ಯ ಇರಲಿಲ್ಲವಾದರೂ, ಅದನ್ನು ಅವರು ಖಡಾಖಂಡಿತವಾಗಿ ದ್ವೇಷಿಸಿದ್ದಂತೂ ನಿಜ (ಅಂಬೇಡ್ಕರ್ 1945, 90- 91).

ಈ ಒಪ್ಪಂದ ಹಾಗೂ ಉಪವಾಸಕ್ಕೆ ಕಂದಾಚಾರಿಗಳ ಪ್ರತಿರೋಧದ ಫಲವಾಗಿ 1934ರಲ್ಲಿ ಗಾಂಧಿ ಹತ್ಯೆಯ ಎರಡು ಪ್ರಯತ್ನಗಳು ನಡೆದವು- ಒಂದು ಬಿಹಾರದ ಜಸಿಧಿಯಲ್ಲಿ, ಮತ್ತೊಂದು ಪುಣೆಯಲ್ಲಿ. ಅಷ್ಟಾದರೂ ಸಂಪ್ರದಾಯವಾದಿಗಳು ತಮ್ಮ ನೆಲೆ ಕಳೆದುಕೊಳ್ಳುತ್ತಿದ್ದಾರೆಂದೇ ಗಾಂಧಿ ಭಾವಿಸಿದರು. ಅವರು ನೆಹರೂಗೆ (15 ಫೆಬ್ರವರಿ 1933) ಬರೆದದ್ದು,
ಸನಾತನಿಗಳ ವಿರುದ್ಧ ಹೋರಾಟ ಬರಬರುತ್ತಾ ಹೆಚ್ಚು ಹೆಚ್ಚು ಕ್ಲಿಷ್ಟಕರವಾಗುತ್ತಿದ್ದರೂ, ಆಸಕ್ತಿದಾಯಕ ರೂಪವನ್ನೂ ಪಡೆಯುತ್ತಿದೆ… ಅವರು ನನ್ನತ್ತ ತೂರಿಬಿಡುತ್ತಿರುವ ಬೈಗುಳಗಳು ಅದ್ಭುತವಾಗಿ ಉಲ್ಲಾಸದಾಯಕವಾಗಿವೆ. ನಾನು ಈ ಜಗತ್ತಿನಲ್ಲಿ ಅತ್ಯಂತ ಕೆಟ್ಟದು ಹಾಗೂ ಭ್ರಷ್ಟವಾದದ್ದೆಲ್ಲದರ ಮೊತ್ತವಾಗಿಬಿಟ್ಟಿದ್ದೇನೆ. ಆದರೆ ಈ ಬಿರುಗಾಳಿ ಕ್ಷೀಣಿಸುವುದು ಖಂಡಿತ… ಇದು ಬೆಂಕಿಯ ಸುತ್ತ ಪತಂಗದ ಮೃತ್ಯನರ್ತನ (ಸಮಗ್ರ ಕೃತಿಗಳು 53: 309 -10).
ಕೆಲವು ಸನಾತನಿಗಳು (‘ಡಾಕ್ಟರ್ ಮತ್ತು ಸಂತ’ ಗುರುತಿಸಿ ಹೇಳದಿದ್ದರೂ) 1934ರಲ್ಲಿ ಗಾಂಧಿಯವರನ್ನು ಕೊಲ್ಲಲು ಯತ್ನಿಸಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ.

*

1945ರ ಈ ಪಠ್ಯ ಬರೆಯುತ್ತಿದ್ದ ಉಜ್ವಲ ಚಿಂತಕ ಮತ್ತು ಸದಸ್ಯರಾಗಿದ್ದ (ಅಂದರೆ ಮಂತ್ರಿ) ಅಂಬೇಡ್ಕರರಿಗೆ, ಬ್ರಿಟಿಷರ ಯಾವುದೇ ಹೊಸ ಯೋಜನೆಯ ಮೇಲೂ ಪ್ರಭಾವ ಬೀರುವ ಆಶಯವಿತ್ತು. ಇದರ ಜೊತೆಗೆ ಈ ರಾಜಕೀಯ ಮುಖಂಡನಿಗೆ 1937ರ ಚುನಾವಣಾ ಫಲಿತಾಂಶವನ್ನು ಮರೆಯಲಾಗಿರಲಿಲ್ಲ. ಯುದ್ಧದ ಕಾರಣದಿಂದಾಗಿ ಅದೇ ಕಡೆಯ ಚುನಾವಣೆಯಾಗಿತ್ತು ಬೇರೆ. ಈಗ 1945- 46ರಲ್ಲಿ ತಮ್ಮ ಸಾಧನೆಯನ್ನು ಸುಧಾರಿಸಿಕೊಳ್ಳುವುದು ಅವರ ಉದ್ದೇಶವಾಗಿತ್ತು. 1937ರ ಫಲಿತಾಂಶಗಳಿಂದಾಗಿ ರೇಗಿಹೋಗಿದ್ದ ಅಂಬೇಡ್ಕರ್, 1945ರ ಈ ಪ್ರಬಂಧದ ಮುಖಾಂತರ ಬ್ರಿಟಿಷ್ ನಾಯಕರು ಹಾಗೂ ಭಾರತೀಯ ಮತದಾರರಿಬ್ಬರ ಮುಂದೆಯೂ ಒಟ್ಟಿಗೇ ತಮ್ಮ ವಾದವನ್ನು ಮಂಡಿಸಿದರು..

Leave a Reply