ಗಾಂಧಿ ಕಣ್ಣೆದುರಿನ ಬೆಳಕಾಗಲಿ, ಗೋಡ್ಸೆ ಎಂದೆಂದೂ ಅವರ ಕಣ್ಣಿಗೆ ಬೀಳದಿರಲಿ..

ಸಂಧ್ಯಾರಾಣಿ

ಚಿತ್ರಗಳು: ತಾಯ್ ಲೋಕೇಶ್

’ಇನ್ನು ಕೆಲವೇ ವರ್ಷಗಳಲ್ಲಿ ಇವರೆಲ್ಲಾ ಗಾಂಧಿಯನ್ನು ದೇವರು ಮಾಡಿಬಿಡಬಹುದೇನೋ’ ಎಂದು ಒಮ್ಮೆ ಲಂಕೇಶ್ ಬರೆದಿದ್ದ ನೆನಪು. ಆದರೆ ಈ ಕಾಲಘಟ್ಟದಲ್ಲಿ ಗಾಂಧೀಜಿ ಎಲ್ಲರಿಗೂ ಬೇಕಾದ ದೇವರಾಗುವುದಿರಲಿ, ಯಾರಿಗೂ ಬೇಡದ ಹಳೆಯ ನಾಣ್ಯವಾಗಿಬಿಟ್ಟಿದ್ದಾರೆ. ಅಕ್ಟೋಬರ್ ೨ ಬಂತೆಂದರೆ ನಮಗೇ ಗೊತ್ತಿಲ್ಲದಂತೆ ’ಗಾಂಧಿ Vs ಲಾಲ್ ಬಹದ್ದೂರ್ ಶಾಸ್ತ್ರಿ’, ’ಗಾಂಧಿ Vs ಅಂಬೇಡ್ಕರ್’ ಮಾತುಗಳು ಕೇಳಿಬರುತ್ತವೆ. ಗಾಂಧೀಜಿ ಏಕೆ ಶಾಸ್ತ್ರಿ ಆಗಬೇಕು? ಗಾಂಧೀಜಿ ಏಕೆ ಅಂಬೇಡ್ಕರ್ ಜೊತೆ ಪೈಪೋಟಿಗೆ ನಿಲ್ಲಬೇಕು? ನಾವು ಒಬ್ಬರನ್ನೇ ಏಕೆ ಆಯ್ದುಕೊಳ್ಳಬೇಕು? ’ಮನಸ್ಸಿನಲ್ಲಿ ಗಾಂಧಿ, ಮಸ್ತಿಷ್ಕದಲ್ಲಿ ಅಂಬೇಡ್ಕರ್’ ಇರಲಿ ಎಂದು ಮತ್ತ್ಯಾರೋ ಬರೆದ ಮಾತು ಇಷ್ಟ ಆಯಿತು. ಇಂತಹ ಕಾಲಘಟ್ಟದಲ್ಲಿ ಮಕ್ಕಳಿಗೆ ಗಾಂಧಿ ಕತೆಯನ್ನು ಹೇಳುವ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ. ಈ ನಿಟ್ಟಿನಲ್ಲಿ ಕರ್ನಾಟಕ ವಾರ್ತಾಇಲಾಖೆ, ಬೋಳುವಾರು ಸರ್ ಮತ್ತು ಶ್ರೀಪಾದಭಟ್ ಇವರೆಲ್ಲರ ಪ್ರಯತ್ನ ಮತ್ತು ಕೊಡುಗೆಯಿಂದ ಬಂದ ನಾಟಕ ’ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ’.

ಮೊನ್ನೆ ಕಲಾಕ್ಷೇತ್ರದಲ್ಲಿ ಗಾಂಧೀಜಿಯ ೧೫೦ ನೆಯ ವರ್ಷದ ಹುಟ್ಟುಹಬ್ಬದ ನೆನಪಿನಲ್ಲಿ ನಾಟಕ ಆಯೋಜಿಸಲಾಗಿತ್ತು. ಇಡೀ ಕಲಾಕ್ಷೇತ್ರ ಗಾಂಧೀಮಯ. ಹೋದ ಕೂಡಲೆ ಸಿಕ್ಕ ಪತ್ರಕರ್ತ ದಿಲಾವರ್ ರಾಮದುರ್ಗ ಅವರು ಗಾಂಧೀಜಿಯ ಬಗ್ಗೆ ಮಾತನಾಡುತ್ತಾ ’ಗೋಡ್ಸೆ ಗಾಂಧಿಯನ್ನು ಕೊಂದ ದಿವಸ ಬಹುಶಃ ಬಾಪು ಹುಟ್ಟಿದರು’ ಎಂದು ಹೇಳಿದರು. ಆ ಮಾತು ನನ್ನನ್ನು ಆಲೋಚನೆಗೆ ದೂಡಿತ್ತು.

ನಾಟಕದ ಪ್ರಾರಂಭದ ದಿನಗಳಲ್ಲಿ ಒಮ್ಮೆ ಸಿಕ್ಕಿದ್ದ ಶ್ರೀಪಾದ ಭಟ್ಟರು ನಾಟಕದ ಬಗ್ಗೆ ಮಾತನಾಡುತ್ತಾ, ಇದಕ್ಕಾಗಿ ಬೋಳುವಾರರ ಪಠ್ಯವೇ ಹೇಗೆ ಸೂಕ್ತ ಎಂದು ವಿವರಿಸಿದ್ದರು. ಗಾಂಧಿಯನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುವುದು ಈ ಕಾಲಮಾನದ ಅಗತ್ಯ ಎಂದು ಸಹ ಹೇಳಿದ್ದರು. ಮೊನ್ನೆ ನಾಟಕ ನೋಡುವಾಗ ನನಗೂ ಅದೇ ಅನ್ನಿಸಿತು. ಇದು ಮಕ್ಕಳು ನೋಡಲೇಬೇಕಾದ ನಾಟಕ. ’ಪಾಪು’ ಗಾಂಧಿ ಪುಟ್ಟ ಹುಡುಗನಾಗಿದ್ದಾಗ ಆಡಿದ ಮೊದಲ ಸುಳ್ಳಿನಿಂದ ಪ್ರಾರಂಭವಾಗುವ ನಾಟಕ ನಂತರ ಗಾಂಧಿ ’ಬಾಪು’ ಆಗುವವರೆಗೂ ನಡೆಯುತ್ತದೆ. ಗಾಂಧೀಜಿಯ ಬದುಕಿನ ಕೆಲವು ಪುಟಗಳನ್ನು ತೆಗೆದುಕೊಂಡು ಅದಕ್ಕೆ ಒಂದಿಷ್ಟು ರಾಘವಾಂಕನ ’ಹರಿಶ್ಚಂದ್ರ ಕಾವ್ಯ’ದ ಸಾಲುಗಳನ್ನು ಹೆಣೆದು ಪೋಣಿಸಲಾಗಿದೆ. ಒಂದೆರಡು ದೃಶ್ಯಗಳನ್ನು ಬಿಡಬಹುದಿತ್ತು ಅನ್ನಿಸಿತು. ಆದರೆ ಕೆಲವು ದೃಶ್ಯಗಳು ಅತ್ಯಂತ ಮನೋಜ್ಞವಾಗಿ ಮೂಡಿಬಂದವು. ನನಗೆ ತುಂಬಾ ಇಷ್ಟವಾದ ಒಂದು ದೃಶ್ಯ : ಬಾಲಕ ಗಾಂಧಿ ರಸ್ತೆಯಲ್ಲಿ ಮಳೆಗೆ ಸಿಲುಕುತ್ತಾನೆ. ಅಲ್ಲಿದ್ದ ಅಂಗಡಿಯ ನೆರಳಲ್ಲಿ ನಿಲ್ಲುತ್ತಾರೆ. ಸ್ವಲ್ಪ ದೂರದಲ್ಲಿ ಯುವಕನೊಬ್ಬ ಮಳೆಯಲ್ಲೇ ನೆನೆಯುತ್ತಾ ನಿಂತಿರುತ್ತಾನೆ. ಗಾಂಧಿ ಆ ಹುಡುಗನನ್ನು ಅಂಗಡಿಯ ನೆರಳಿಗೆ ಕರೆದರೂ ಆತ ಬರುವುದಿಲ್ಲ, ಅಂಗಡಿಯ ಯಜಮಾನ ಸಹ ಅವನನ್ನು ಕರೆಯದಂತೆ ಗಾಂಧಿಯನ್ನು ತಡೆಯುತ್ತಾರೆ. ಬಾಲಕ ಗಾಂಧಿ ತಾನೂ ಹೋಗಿ ಅವನ ಪಕ್ಕ ನಿಲ್ಲುತ್ತಾನೆ. ಆ ಬಾಲಕನ ತಲೆಯ ಮೇಲೆ ನೀರು ಬೀಳದಿರಲೆಂದು ಆ ಯುವಕ ಕೈಗಳನ್ನು ಅಡ್ಡ ಇಟ್ಟರೆ, ಆ ಯುವಕನ ತಲೆಯ ಮೇಲೆ ನೀರು ಬೀಳುವುದನ್ನು ತಪ್ಪಿಸಲು ಈ ಹುಡುಗ ಕೈಗಳನ್ನು ಅಡ್ಡ ಇಡುತ್ತಾನೆ’. ಈ ದೃಶ್ಯ ಯಾಕೋ ಮನಸ್ಸಿನಲ್ಲಿ ನಿಂತುಹೋಗಿದೆ. ಸುರಿವ ಮಳೆಯನ್ನು ನಿಲ್ಲಿಸಲಾಗುವುದಿಲ್ಲ, ನಮ್ಮ ಕೈಗಳನ್ನಾದರೂ ಅಡ್ಡ ಇಟ್ಟು, ನಮ್ಮಿಂದ ಸಾಧ್ಯವಾದಷ್ಟೂ ಇನ್ನೊಬ್ಬರಿಗೆ ಸ್ಪಂದಿಸಬಹುದು ಅಲ್ಲವೆ?

ಭಟ್ಟರ ನಾಟಕದಲ್ಲಿ ಸಂಗೀತ ಮತ್ತು ನಾಟಕದ ವಿನ್ಯಾಸಕ್ಕೆ ವಿಶೇಷ ಸ್ಥಾನವಿರುತ್ತದೆ. ರಂಗಸಜ್ಜಿಕೆಯಂತೂ ನಯನ ಮನೋಹರ. ಕೆಲವು ಪೇಂಟಿಂಗ್ ಗಳ ಮೂಲಕ ಅವರು ಗಾಂಧೀಜಿಯ ಬೇರೆಬೇರೆ ವಯೋಮಾನದ ಆವರಣವನ್ನು ಕಟ್ಟುತ್ತಾರೆ. ಅವರ ಬ್ಲಾಕಿಂಗ್ ಸದಾ ಅದ್ಭುತ. ಮಕ್ಕಳಿಗಾಗಿ ಅವರು ತಯಾರಿಸಿದ ಈ ನಾಟಕದಲ್ಲಿ ಅವರು ಎಲ್ಲೂ ಗೋಡ್ಸೆಯನ್ನು ತೋರಿಸುವುದೇ ಇಲ್ಲ. ನಮ್ಮ ಮಕ್ಕಳಿಗೆ ಗಾಂಧಿ ಕಣ್ಣೆದುರಿನ ಬೆಳಕಾಗಲಿ, ಗೋಡ್ಸೆ ಎಂದೆಂದೂ ಅವರ ಕಣ್ಣಿಗೆ ಬೀಳದಿರಲಿ.. ಅವರ ಈ ಸಂವೇದನಾಶೀಲತೆಗೆ ಶರಣು.

ನಾಟಕದ ಕೆಲವು ದೃಶ್ಯಗಳು ಇಲ್ಲಿವೆ :

5 comments

  1. ‘ಸುರಿವ ಮಳೆಯನ್ನು ನಿಲ್ಲಿಸಲಾಗುವುದಿಲ್ಲ, ನಮ್ಮ ಕೈಗಳನ್ನಾದರೂ ಅಡ್ಡ ಇಟ್ಟು, ನಮ್ಮಿಂದ ಸಾಧ್ಯವಾದಷ್ಟೂ ಇನ್ನೊಬ್ಬರಿಗೆ ಸ್ಪಂದಿಸಬಹುದು…’.ಥ್ಯಾಂಕ್ಯು ಸಂಧ್ಯಾ…

    • ಥ್ಯಾಂಕ್ಯೂ ಸರ್, ನಿಮ್ಮೊಂದಿಗೆ ಕೂತು ನಾಟಕ ನೋಡಿದ್ದು ಖುಷಿ ಆಯಿತು!

  2. ತುಂಬ ಚೆನ್ನಾಗಿದೆ ಸಂಧ್ಯಾ
    ಮಿಸ್ ಮಾಡಿಕೊಂಡೆ 🙁
    ಮುಂದಿನ ಪ್ರದರ್ಶನಕ್ಕೆ ಹೋಗಲೇಬೇಕು ಅನ್ನಿಸುತ್ತಿದೆ ನಿನ್ನ ಬರಹ ಓದಿದ ಮೇಲೆ …

  3. ಹೌದು ಸಂಧ್ಯಾ. ವ್ಯಕ್ತಿ, ವ್ಯಕ್ತಿತ್ವಗಳನ್ನು ತುಲನೆ ಮಾಡುವ ಭರದಲ್ಲಿ ಯಾರೊಬ್ಬರ ಬಗ್ಗೆಯೂ ಸ್ಪಷ್ಟ ಚಿತ್ರ ಮೂಡಿಸದ ಇಂದಿನ ಪರಿಸ್ಥಿತಿಯಲ್ಲಿ ಪ್ರತಿಯೊಂದು ಪಾತ್ರ ವನ್ನೂ ಒಳಹೊಕ್ಕು ಬಿಚ್ಚಿಡುವ, ಆ ಮೂಲಕ ವ್ಯಕ್ತಿತ್ವ ವನ್ನು ಅರಿಯುವ ಹಾಗೂ ರೂಪಿಸಿಕೊಳ್ಳಲನುವಾಗುವ ಇಂಥ ಪ್ರಯತ್ನಗಳ ಅಗತ್ಯವಿದೆ. ನಾಟಕ ನೋಡಬೇಕು.

Leave a Reply