ಸುಂದರಿಯ ಸಂಕಟ !

ಊರ ಹೊರಗಿನ ಮನೆಗೆ ಹೊಸದಾಗಿ ಬಾಡಿಗೆಗೆ ಬಂದ ಆ ಸುಂದರಿಯ ಬಗ್ಗೆ ಇಡೀ ಊರಿಗೆ ಊರೇ ಕುತೂಹಲ ತೋರಿಸಿದ್ದರಲ್ಲಿ ಯಾವ ಆಶ್ಚರ್ಯವೂ ಇರಲಿಲ್ಲ. ಹಳ್ಳಿಗಳಲ್ಲಿ ಅನಾಮಿಕವಾಗಿ ಬದುಕುವುದು ಬಲು ಕಷ್ಟ. ನಗರಗಳು ಅಪರಿಚಿತ, ಅನಾಮಿಕರನ್ನು ಹೇಗೋ ಸಾಕಿ ಬಿಡುತ್ತವೆ. ಆದರೆ ಹಳ್ಳಿಗಳು ಸಾಕು ಮಾಡಿಬಿಡುತ್ತವೆ. ಅವಳ ವಿಷಯದಲ್ಲಿಯೂ ಹೀಗೆಯೇ ಆಯಿತು.

ಹೆಚ್ಚಿನ ವಿವರಗಳನ್ನು ಅವಳಿಗೆ ಬಾಡಿಗೆ ಮನೆ ಕೊಟ್ಟವರ ಬಳಿ ಕೇಳೋಣವೆಂದರೆ ಅವರು‌ ತಮ್ಮ ಮಗನ ಜೊತೆ ದೂರದ ಕೆನಡಾ ದೇಶದಲ್ಲಿದ್ದಾರೆ. ಹಾಗಾದರೆ ಈಕೆ ಆಧುನಿಕ ಜಗತ್ತಿನ ಎಲ್ಲ ತಾಂತ್ರಿಕತೆಗಳನ್ನು ತಿಳಿದಿರುವಾಕೆಯಂತೂ ಹೌದು. ಆನ್ ಲೈನ್ ನಲ್ಲಿ ಬಾಡಿಗೆ ಕಳಿಸುವಂತ ಬಾಡಿಗೆದಾರ ಸಿಕ್ಕ‌ ಖುಷಿಗೆ ಅವರೂ ಕೂಡ ಇವಳ ಹಿಂದುಮುಂದು ವಿಚಾರಿಸಿರಲಿಲ್ಲ ಅನ್ನಿ.

* * * * * *
ಒಬ್ಬಳೇ ಆ ಮನೆಯಲ್ಲಿದ್ದಾಳೆ. ಊರಿನಲ್ಲಿರುವ ಯಾವ ಅಂಗಡಿಗೂ ಏನೂಂದನ್ನೂ ಕೊಳ್ಳಲು ಬರುವುದಿಲ್ಲ. ಅವಳು ಆಗಾಗ ಪಟ್ಟಣಕ್ಕೆ ಹೋಗಲು ಮನೆಯಿಂದ ಹೊರಬಂದಾಗಲಷ್ಟೇ ಅವಳನ್ನು ನೋಡಿದ ಕೆಲವು ಮಂದಿಯ ಪ್ರಕಾರ ಅವಳು ತುಂಬಾ ಸುಂದರವಾಗಿದ್ದಾಳಂತೆ. ಈಗಷ್ಟೇ ಹರೆಯದ ಹದವನ್ನು ಕಲಸಿಟ್ಟವಳಂತೆ. ಅವಳು ಮನೆಯಲ್ಲಿ ಯಾವಾಗಲೂ ಎಲ್ಲಿಗೋ ಹೊರಟವಳಂತೆ ಡ್ರೆಸ್ ಮಾಡಿಕೊಂಡು ಕಿಟಕಿಯ ಹೊರಗೆ ದೃಷ್ಟಿ ನೆಟ್ಟು ಕೂತಿರುತ್ತಾಳಂತೆ. ಊರಿನ ಬಸ್ ನಿಲ್ದಾಣದಲ್ಲಿ ಯಾವುದೇ ಬಸ್ ನಿಂತರೂ ಬಾಗಿಲ ಬಳಿ ಬಂದು ಯಾರೋ ಬರುತ್ತಾರೇನೋ ಎಂಬಂತೆ ಆಸೆ ಕಂಗಳಲ್ಲಿ ಕಾಯುತ್ತಾಳಂತೆ. ಅವಳ ಮನೆಗೆ ಒಂದೆರೆಡು ಬಾರಿ ಪೋಲೀಸರೂ ಕೂಡ ಬಂದು ಹೋಗಿದ್ದರು ಎಂಬುದಂತೂ ಹಳ್ಳಿಯ ಕೆಲವರ ಕಣ್ಣು ಕೆಂಪಾಗಿಸಿತ್ತಂತೆ. ‘ ವಯಸ್ಸಿಗೆ ಬಂದಿರೋ ಹೆಣ್ಮಕ್ಳು ಇರೋ ಊರಲ್ಲಿ ಹೀಗೆಲ್ಲ ನಡೆಯೋಕೆ ಸಲೀಸಾಗಿ ಬಿಟ್ಟರೆ ಮುಂದೇನು ಗತಿ ?’ ಎಂದು ಹಲುಬುತ್ತಿದ್ದ ಅಜ್ಜಿಯರೂ ಇದ್ದರು. ಇನ್ನು ಆ ಊರಿನ ಮರ್ಯಾದಸ್ಥ ಮಡದಿಯರೆಂದುಕೊಂಡವರೆಲ್ಲ ಅವಳನ್ನು ತಂತಮ್ಮ ಸವತಿಯಿರಬಹುದೆಂದೇ ನೆನೆದು ಒಳಗೊಳಗೇ ಕುದ್ದಿದ್ದರು. ಯಾರೋ ಕೆಲವರು ಪದೇ ಪದೇ ಬಂದು ಅವಳನ್ನು ಎಲ್ಲಿಗೋ ಕರೆದೊಯ್ಯಲು ಪ್ರಯತ್ನ ನಡೆಸುವುದು, ಅವಳು ಅವರ ಮನವೊಲಿಸಿ ಹಠ ಹಿಡಿದು ಮತ್ತಲ್ಲೇ ಉಳಿಯುವುದು ಕೂಡ ನಡೆದಿತ್ತು.

ಒಂದು ದಿನ‌ ಬಸ್ಟ್ಯಾಂಡ್ ನಲ್ಲಿ ಕೂತಿದ್ದವರ್ಯಾರೋ ಮಾತಿನ ಭರದಲ್ಲಿ ಈಕೆಯ ವಾಸರಹಸ್ಯವನ್ನು ಮನಸೋ ಇಚ್ಛೆ ಹರಟುತ್ತಿದ್ದಾಗ, ಸದಾ ಅಲ್ಲೇ ಕುಡಿದು ಬಿದ್ದಿರುತ್ತಿದ್ದ, ಎಷ್ಟೋ ವರ್ಷಗಳಿಂದ ದಿನವಿಡೀ ಅಲ್ಲೇ ಮಲಗಿ ಕಾಲ ಕೊಲ್ಲುತ್ತಿದ್ದ ಕುಡುಕನೊಬ್ಬ ಮಧ್ಯೆ ಪ್ರವೇಶಿಸಿ ಆ ಸುಂದರಿ ತಮ್ಮೂರಿಗೆ ಬಂದು ನೆಲೆಸಿದುದರ ಹಿಂದಿನ ಕಾರಣವನ್ನು ಈ ಮುಂದಿನಂತೆ‌ ಅವರಿಗೆಲ್ಲ ಬಿಡಿಸಿ ಹೇಳಿದ .

* * * * * *

ಬಸ್ ನಿಂತಿತು…

ರಸ್ತೆಯ ಆ ಬದಿಯಲ್ಲಿ ‘ಆಕೆ’ ಮತ್ತು ರಸ್ತೆಯ ಈ ಬದಿಯಲ್ಲಿ ‘ ಆತ’ ನಡೆದು ಹೋಗುತ್ತಲೇ ಇದ್ದರು. ಆಗಾಗ ಆಕೆ ಇವನನ್ನು ತಿರುಗಿ ನೋಡುತ್ತಿದ್ದಳು. ಮತ್ತೆ ಇವನೂ ಅದನ್ನೆ ಅನುಕರಿಸುತ್ತಿದ್ದ. ಎಲ್ಲ ಪ್ರಯಾಣಿಕರು ತಂತಮ್ಮ ಮನೆ ಸೇರುವ ಹವಣಿಕೆಯಲ್ಲಿ ಅವಸರದ ಹೆಜ್ಜೆ ಇಡುತ್ತಿದ್ದರು.

ನಿಧಾನಕ್ಕೆ ರಸ್ತೆಯ ಇಕ್ಕೆಲಗಳಲ್ಲಿ ಜನ ಕರಗತೊಡಗಿದರು.. ಆಗಾಗ ಕಳ್ಳನೋಟ ಬೀರುತ್ತಿದ್ದ ಅವರಿಬ್ಬರೂ ರಸ್ತೆಯ ತುದಿ ತಲುಪಿದರು. ಮುಂದೆ ರಸ್ತೆ ಇರಲಿಲ್ಲ.. ಊರ ಹೊರಗಿನ ಕಾಡಿಗೆ ಆ ರಸ್ತೆ ತೆರೆದುಕೊಂಡಿತು. ಇಬ್ಬರೂ ಒಮ್ಮೆ ಪರಸ್ಪರರನ್ನು ನೋಡಿಕೊಂಡರು. ಹಚ್ಚೆಂದರೆ ಅವರ ಪರಿಚಯ ಮೂರು ತಾಸುಗಳ ಕಾಲ ಜೊತೆಗೆ ಪ್ರಯಾಣಿಸಿದ್ದಾಗಿತ್ತು ಅಷ್ಟೇ. ಹಾಗೆ ಪ್ರಯಾಣಿಸುವಾಗಲಾದರೂ ಅವರ ಮಧ್ಯೆ‌ ಮಾತುಕತೆಯಾಗಿದ್ದು ಕಡಿಮೆಯೇ.

ಗೊತ್ತು ಪರಿಚಯವಿಲ್ಲದ ಊರಲ್ಲಿ ತಮಗೇನು ಭಯ ಎಂದು ಭಾವಿಸಿದರೋ ಏನೋ ಅಲ್ಲಿಂದ ಕಾಡಿನೊಳಕ್ಕೆ ಹೋಗುವಾಗ ಅವರ ದಾರಿ ಒಂದೇ ಆಯಿತು… ಕೈ ಕೈ ಹಿಡಿದು ಕಾಲುದಾರಿಯನ್ನು ಹಿಂಬಾಲಿಸಿದರು.

ಕೆಲ ಸಮಯದ ನಂತರ ‘ ಆತ ‘ ಮುಂದೆಮುಂದೆ ನಡೆದು ಬಂದ. ಆಕೆ ನುಲಿಯುತ್ತ ಅವನನ್ನೇ ಹಿಂಬಾಲಿಸಿ ಬಂದಳು. ಯಾವುದೋ ಬಸ್ ಬಂತು. ಆತ ಅವಳಿಗೆ ಕೈ ಬೀಸಿ ಹೋದ. ಆಕೆ ಬಸ್ಸೇರಲಿಲ್ಲ. ಇದಾಗಿ ಈಗ ಬಹಳ ದಿನಗಳೇ ಆಯ್ತು ಅನ್ಸುತ್ತೆ. ಅವನಿಗಾಗಿ ಇವಳು ಇಲ್ಲೇ ಕಾಯುತ್ತಿದ್ದಾಳೆ ಪಾಪ ‘ ಎಂದು ಹೇಳಿ ಮುಗಿಸುವಷ್ಟರಲ್ಲಿ ಆ ಕುಡುಕನ ಕತೆ ಕೇಳುತ್ತಿದ್ದವರ್ಯಾರು ಅಲ್ಲಿರಲಿಲ್ಲವೆಂಬದನ್ನು ಮನಗಂಡ ಆತ ‘ ಆ ಸುಂದರಿಯ ಸಂಕಟ ನೀಗುವ ಆ ಬಸ್ಸು ಆದಷ್ಟು ಬೇಗ ಬರಲಿ ‘ ಎಂದು ಆಶಿಸುತ್ತಿದ್ದರೆ , ಅಲ್ಲಿ ಊರ ಹೊರಗಿನ ಮನೆಯಲ್ಲಿ ಕಿಟಕಿಯ ಪಕ್ಕ‌ ಕೂತ ಆ ಸುಂದರಿ ಮಾತ್ರ ಆ ‘ಆತ’ನ ದಾರಿ ಮತ್ತಿನ್ಯಾವ ಕಾಡಿನ ಕಡೆಗೆ ಹೊಂಚು ಹಾಕಿದೆಯೋ ? ಎಂಬ ಸಂಕಟದಲ್ಲಿದ್ದುದು ಯಾರ ಗಮನಕ್ಕೂ ಬರಲಿಲ್ಲ .

1 comment

Leave a Reply