ಜೀವವಿಲ್ಲದ ಗೋಡೆಗಳ ಮಧ್ಯೆ..

ಜ್ಯೋತಿ ಹಿಟ್ನಾಳ್

 

ಜೀವವಿಲ್ಲದ ಗೋಡೆಗಳ ಮಧ್ಯೆ

ಸತ್ತ ಮನಕೆ  ದಿನಾ ಅಲಂಕಾರ

ಮುಗುಳ್ನಗೆಯೇ ಜೀವನಾಧಾರ.

ಅಂತರಾಳದ ಆರ್ತನಾದ

ಕೇಳದ  ಸದ್ದು

ಮೂಖ ಪ್ರೇಕ್ಷಕ ಗೋಡೆ

ಎಲ್ಲಾ ಮೌನ

ಈ  ಯಾನ

ನಿನ್ನ ಮಡಿಲನೊಮ್ಮೆ

ಅಪ್ಪಿ ಮಲಗಿದರೆ

ಕಾಣಲು ಕನಸು

ಬರೀ ನೆನಪು

ಭಾರಕ್ಕೆ ದೇಹ ನಲುಗಿ

ಒದ್ದೆಯಾದ  ಕಣ್ಣು,

ಸಾಕ್ಷಿಯಾದ  ಗೋಡೆ

ಮೂಕ ವಿಸ್ಮಿತವಾಗಿ

ನೋಡುತಿದೆ….ಎಲ್ಲಾ


ಹೆಣ್ಣಿನ ಒಡಲ ಬಿಸಿಗೆ ಅದೆಷ್ಟು ಆತುರ?

ಯಾರ ನಿಂದೆ ಹಂಗುಗಳಿರದೆ

ಸಮ್ಮತಿ ಕೇಳದ ಮನಸಿನ ನಡುವೆ

ಹೂವಿನ ಅಲಂಕಾರದ ನಡುವೆ

ಹೊಸ ಹೊಸ ವೇಷ ವರ್ತನೆಗಳ ನಡುವೆ

ಸುಖ ಉನ್ಮಾದದ ಮುಗಿಲು

ನನಗೋ ನಿತ್ಯ ಯಾತನೆಯ ಮಡಿಲು

ಪ್ರತಿ ದಿನ ಹಗಲಿನಂತೆ

ಇವರದು ನಿತ್ಯ ಮುಖವಾಡ

ಹೊಸ ಹೊಸ ಬಣ್ಣದ

ಭ್ರಮೆಯ ಪ್ರೀತಿಗೆ ಮರುಳಾಗಿ

ಮೂಕಳಂತೆ ಕಾಯುತ್ತಿದ್ದೇನೆ

ಗಿರಾಕಿ ಬಂದೀತೇ ಎಂದು

ನಗುವಿಲ್ಲದ ಬದುಕಿನಾಚೆ

ಈ ಪಲ್ಲಂಗದಲಿ

ಅತ್ತವರೆಷ್ಟೋ  ನಕ್ಕವರೆಷ್ಟೋ

ನೊಂದವರೆಷ್ಟೋ ಬೆಂದವರೆಷ್ಟೋ

ಕಿರುಚಿದವರೆಷ್ಟೋ ಒದ್ದಾಡಿದವರೆಷ್ಟೋ

ಸುಖ ಉಂಡವರೆಷ್ಟೋ  ಹೆತ್ತವರೆಷ್ಟೋ

ಕೊನೆಗೆ

ಕೊನೆ ಉಸಿರು ಬಿಟ್ಟವರೆಷ್ಟೋ

ಕೂಡು ಪ್ರೀತಿಯ ಲೆಕ್ಕದಲ್ಲಿ

ಹಸಿವಿನ ಲೆಕ್ಕ ಕಳೆದು

ಮೈ ಮನ ಆಹಕಾರದಲ್ಲಿ

ಕ್ರೌರ್ಯ ಮೆರೆದು

ಅರಿವಿಲ್ಲದೆಯೇ ನಗು ಅರಳಿಸಿದ್ದೇನೆ

ಗಿರಾಕಿ ಬಂದೀತೆಂದು

ಏನು ಹೇಳಲಿ ನಾನು

ಹಸಿವಿಗಾಗಿ ಬಲಿಯಾದೆ ಎನ್ನಲೇ

ಕರುಳ ಬಳ್ಳಿಗಾಗಿ ಒಂಟಿಯಾದೆ ಎನ್ನಲೇ

ಕಾಯದ ಧಗೆಗೆ ಈಡಾದೆ ಎನ್ನಲೇ

ಬರೀ ವಸ್ತುವಾಗಿ ಕಂಡ ಮನಸುಗಳ ನಡುವೆ

ಒಂಟಿ ದಾರಿಯಲಿ ಕಾಯುತ್ತಿರುವೆ

ನನೊಳಗಿನ ವೇಷ ಕಳಚಿ

ಒಳ ಬೆಳಕನರಸುತ್ತಾ

ಮತ್ತೆ ಕಾಯುತ್ತಿರುವೆ

ಮಾತಿಲ್ಲದ ಬದುಕಿನಾಚೆ

ಮತೇ ಇಲ್ಲದ ಬದುಕಿನಾಚೆ

ಬುಡ್ಡಿ ದೀಪದ  ಬೆಳಕಿಗಾಗಿ..

2 comments

Leave a Reply