ಕಾವ್ಯಾ ಕಡಮೆಗೆ ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ

ಕಾವ್ಯಾ ಕಡಮೆಗೆ 2018 ನೇ ಸಾಲಿನ ಡಾ. ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ ಘೋಷಿಸಲಾಗಿದೆ.

ಹಿರಿಯ ಸಾಹಿತಿಗಳಾದ ರಮಜಾನ ದರ್ಗಾ, ಸುಬ್ರಾಯ ಮತ್ತಿಹಳ್ಳಿ ಮತ್ತು ಡಾ. ಎಚ್ ಎಸ್ ಅನುಪಮಾ ಅವರನ್ನೊಳಗೊಂಡ ಆಯ್ಕೆ ಸಮಿತಿ ಕಾವ್ಯಾ ಕಡಮೆಯವರ ‘ಜೀನ್ಸ್ ತೊಟ್ಟ ದೇವರು’ ಎಂಬ ಕವನ ಸಂಕಲನಕ್ಕೆ ಈ ಪ್ರಶಸ್ತಿ ಘೋಷಿಸಿದೆ.

ಪ್ರಶಸ್ತಿಯು 10 ಸಾವಿರ ರೂ ನಗದು ಹಾಗೂ  ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ನವೆಂಬರ್ 11 ರಂದು ಭಾನುವಾರ ಮುಂಜಾನೆ 11 ಗಂಟೆಗೆ ಗಂಗಾದೇವಿ ತೊರ್ಕೆ ಸಭಾಭವನದಲ್ಲಿ ಸಾಹಿತಿ ಶ್ರೀನಿವಾಸ ಶೂದ್ರ ಅವರು ಪ್ರಶಸ್ತಿ ಪ್ರದಾನ ಮಾಡುವರು. ಮುಖ್ಯಮಂತ್ರಿ ಚಂದ್ರು ಅಧ್ಯಕ್ಷತೆ ವಹಿಸುವರು. ನಾಟಕ ಅಕೆಡೆಮಿಯ ಮಾಜಿ ಅಧ್ಯಕ್ಷ ಡಾ. ಬಿ.ವಿ ರಾಜಾರಾಮ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಅಂಕೋಲಾದ ಡಾ. ದಿನಕರ ದೇಸಾಯಿ ಪ್ರತಿಷ್ಠಾನ ಈ ಪ್ರಶಸ್ತಿಯನ್ನು ಕಳೆದ ಮೂರು ದಶಕಗಳಿಂದ ನೀಡುತ್ತ ಬಂದಿದೆ. ಪ್ರತಿಷ್ಠಾನವು ಆರಂಭವಾಗಿ 35 ವರ್ಷಗಳು ಕಳೆದಿವೆ.
ಇದು ಕವಿ ಡಾ. ದಿನಕರ ದೇಸಾಯಿಯವರ 110 ನೇ ಜನ್ಮ ವರ್ಷಾಚರಣೆಯ ಸಂದರ್ಭವಾಗಿರುವುದು ವಿಶೇಷವಾಗಿದೆ.

ಇದುವರೆಗೆ ಕವಿಗಳಾದ ಆನಂದ ಜಂಜರವಾಡ, ಸುಮತೀಂದ್ರ ನಾಡಿಗ, ಪ್ರೊ. ಚಂಪಾ, ಚ. ಸರ್ವಮಂಗಳಾ, ಎಚ್ ಎಸ್ ವೆಂಕಟೇಶ ಮೂರ್ತಿ, ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ, ಆರಿಫ್ ರಾಜಾ, ಜಿ.ಕೆ ರವೀಂದ್ರಕುಮಾರ, ಎಚ್ ಎಲ್ ಪುಷ್ಪಾ, ನಾ. ಮೊಗಸಲೆ, ಜರಗನಹಳ್ಳಿ ಶಿವಶಂಕರ, ಎಚ್ ಎಸ್ ಶಿವಪ್ರಕಾಶ, ಜಯಂತ ಕಾಯ್ಕಿಣಿ, ಡಿ.ಬಿ ರಜಿಯಾ, ಎಮ್, ಎಸ್ ಶೇಖರ, ಎಚ್ ಎಸ್ ಅನುಪಮಾ ಮುಂತಾದ 20 ಜನ ಕವಿಗಳು ದಿನಕರ ದೇಸಾಯಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Leave a Reply