ಓಲ್ಗಾ ಕಥೆ ‘ಮೃಣ್ಮಯನಾದ’

ತೆಲುಗಿನಲ್ಲಿ ೨೦೧೫ ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಓಲ್ಗಾ ಅವರ ‘ವಿಮುಕ್ತ’ಎಂಬ ಸಂಕಲನದ ಒಂದು ಮಹತ್ವದ ಕಥೆ.

ಈ ಕಥೆ  ಇದುವರೆಗೂ ಒಂಬತ್ತು ಭಾಷೆಗಳಿಗೆ ಅನುವಾದಗೊಂಡಿದೆ

 ಮೃಣ್ಮಯನಾದ
_________________

ತೆಲುಗು ಮೂಲ: ಓಲ್ಗಾ
ಕನ್ನಡಕ್ಕೆ: ಅಜಯ್ ವರ್ಮಾ ಅಲ್ಲೂರಿ

ಜನಕನ ಅರಮನೆಯು ಸಂಗೀತ-ನೃತ್ಯಗಳಿಂದ,ಪುಷ್ಪ ಸೌರಭಗಳಿಂದ , ಬಣ್ಣಿಸಲಾಗದಂತಹ ಆನಂದೋತ್ಸಾಹಗಳಿಂದ ಕಂಗೊಳಿಸುತ್ತಿದೆ.ಆನಂದ ತರಂಗಗಳಲಿ ತೇಲಿಹೋಗುತ್ತಿರುವ ದೀಪೋತ್ಸವ ನೌಕೆಯಂತಿದೆ.

ಇರಲಾರದೆ ಮತ್ತೆ ? ಜನಕನ ಪ್ರಿಯ ಕುವರಿ ಸೀತೆಗೆ ಅತಿ ಮನೋಹರನೂ, ಶಿವ-ಧನುರ್ಭಂಗವ ಗೈದ ಶ್ರೀರಾಮಚಂದ್ರನೊಂದಿಗೆ ವಿವಾಹವಾಗಿದೆ.
ಇದೇ ಕಾಲಕ್ಕೆ ಸೀತೆಯ ತಂಗಿಯಂದಿರಿಗೆ ರಾಮಚಂದ್ರನ ತಮ್ಮಂದಿರೊಡನೆಯ ಕಲ್ಯಾಣವೂ ಸಹ.ಆಯೋಧ್ಯೆ ಈಗ ವಿದೇಹದ ದೇಹದೊಳಗೆ ದೇಹವಾಗಿ ಪರಸ್ಪರ ಸ್ನೇಹಾಲಿಂಗನದಲ್ಲಿ ಪರವಶಗೊಂಡಿದೆ.

ನಡುರಾತ್ರಿ.ಸಂಭ್ರಮಗಳೆಲ್ಲಾ ಮುಗಿದು ಮೌನ ಕವಿಯತೊಡಗಿತು.ರಾತ್ರಿಹೊತ್ತು ಎಚ್ಚರವಿದ್ದು ರಾಣಿವಾಸದ ಅಗತ್ಯಗಳನ್ನು ಪೂರೈಸುವ ಪರಿಚಾರಿಕೆಯರ ಹೆಜ್ಜೆ ಸಪ್ಪಳ ಬಿಟ್ಟು ಬೇರಾವ ಸದ್ದೂ ಇಲ್ಲ.ಆ ನಿಶ್ಶಬ್ದ ವೇಳೆಯ ಮೊದಲ ರಾತ್ರಿಗಳಲ್ಲಿ ನವದಂಪತಿಗಳು ಒಬ್ಬರ ಕಣ್ಣಲ್ಲೊಬ್ಬರು ನೋಡಿಕೊಳ್ಳುತ್ತಿದ್ದರು.

ಸೀತೆಗೆ ಎರಡು ರಾತ್ರಿಗಳಲ್ಲಿಯೇ
ರಾಮನೊಡನೆ ಮಾತು ಬೆರೆಸಿ ಚಮತ್ಕರಿಸಬಲ್ಲ ಸಲುಗೆ ಬೆಳೆಯಿತು.ಇತ್ತ ರಾಮನಿಗೆ ಸೀತೆಯ ಸೌಂದರ್ಯವನ್ನೆಲ್ಲಾ ಏನು ಮಾಡಬೇಕೆಂದು ಮೊದಲಿಗೆ ತೋಚದಿದ್ದರೂ ಕೊನೆಗೆ ಆ ಅಮಾಯಕತ್ವದಿಂದ ಆತ ಹೊರಬಂದನು.

ನಡುರಾತ್ರಿ ದಾಟಿದರೂ,ಮಲಗಬೇಕೆಂಬ ಯೋಚನೆಯೇ ಇಲ್ಲ ಇಬ್ಬರಿಗೂ.ಏನೇನೋ ಮಾತು,ಪರಿಹಾಸ್ಯ,ಚತುರೋಕ್ತಿ,
ಮಾತುಮಾತಿಗೂ ನಗು,ಅನಗತ್ಯ ಮುನಿಸು,
ಮಿತಿಮೀರಿದ ರಮಿಸುವಿಕೆ.ವಿಶಾಲವಾದ ಆ ಕೋಣೆ ಪ್ರಣಯೋತ್ಸವದಿಂದ ಮಿಡಿದೇಳುತ್ತಿತ್ತು.

ರಾಮನು ವಿಶ್ವಾಮಿತ್ರನ ಜೊತೆಗೆ ಹೋಗಿ ಅದೆಷ್ಟು ರಾಕ್ಷಸರನ್ನು ಕೊಂದನೋ,ಎಷ್ಟು ಸಲೀಸಾಗಿ ಕೊಂದನೋ ಎಂದು ಸ್ವಲ್ಪ ಅತಿಶಯವಾಗಿಯೇ ವರ್ಣಿಸಲು ಶುರುಮಾಡಿದ.ಆದರೆ ಸೀತೆಗೆ ಆ ಅಪವೇಳೆ ಸಂಹಾರದ ಸಂಗತಿಗಳನ್ನು ಕೇಳಲು ರವಷ್ಟೂ ಮನಸಾಗಲಿಲ್ಲ.ಆಕೆ ರಾಮನನ್ನು ತಡೆದು-.

“ಅರಣ್ಯ ವಿಹಾರದೊಳಗೆ ಈ ಬೀಭತ್ಸವಲ್ಲದೆ ಬೇರೆ ಅದ್ಭುತಗಳೇನೂ ನಡೆಯಲಿಲ್ಲವೇ ರಾಮಾ ! “ಎಂದಳು ಅವನ ಕಪ್ಪು ಕೇಶಗಳೊಳಗೆ ಬೆರಳಾಡಿಸಿ ಚೆಲ್ಲಾಪಿಲ್ಲಿ ಮಾಡುತ್ತಾ.

” ಮೊದಲೇ ನನ್ನ ಬಣ್ಣ ಕಪ್ಪು.ನೀನು ಹೀಗೆ ಕೂದಲನ್ನು ಮುಖದ ಮೇಲಕೆ ಎಳೆದರೆ ನಾನಿನ್ನು ಕಾಣುವುದೇ ಇಲ್ಲ.”ಎನ್ನುತ್ತಾ ಆತ ಸೀತೆಯ ಕೈಯನ್ನು ಮೆಲ್ಲನೆ ತಳ್ಳಿ –

“ಹಾ! ಅದ್ಭುತವೆಂದರೆ ನೆನಪಾಯಿತು ಸೀತಾ.ಆ ಅರಣ್ಯ ವಿಹಾರದೊಳಗೆ ಒಬ್ಬ ಅದ್ಭುತ ಸೌಂದರ್ಯವತಿಯನ್ನು ನೋಡಿದ್ದೆ ” ಎಂದನು.

ರಾಮನ ಮಾತು ಕೇಳುತ್ತಲೇ ಸೀತೆಯ ಮುಖ ಕಳೆಗುಂದಿತು.ತನ್ನನ್ನು ನೋಡುವ ಮುಂಚೆಯೇ  ರಾಮನು ಮತ್ತೊಬ್ಬ ಸೌಂದರ್ಯವತಿಯನ್ನು ನೋಡುವುದೆಂದರೇನು !

ಸೀತೆಯ ಮುಖ ಸಪ್ಪೆಯಾಗಿರುವುದನ್ನು ರಾಮನು ಗಮನಿಸುತಲಿದ್ದ. ಹಾಸ್ಯಕ್ಕಾದರೂ ಸರಿ , ಪರಸ್ತ್ರೀಯ ಸೌಂದರ್ಯ ವರ್ಣನೆಯಲ್ಲಿ ಸೀತೆಯನ್ನು ಕಡೆಗಣಿಸುವಷ್ಟು ವಯಸ್ಸಾಗಲೀ,ಮನಸ್ಸಾಗಲೀ ರಾಮನಿಗಿನ್ನೂ
ಬರಲಿಲ್ಲ‌.ಅದಕ್ಕೆಂದೇ ಸೀತೆಗೆ ಇದ್ದ ವಿಷಯ ಇದ್ದಂತೆಯೇ ಹೇಳಿದ.

“ಆಕೆಯನ್ನು ನೋಡಿದರೆ ಎರಡು ಕೈ ಜೋಡಿಸಿ ನಮಿಸಬೇಕೆಂದೆನಿಸಿತ್ತು. ಮುನಿಕಾಂತೆ.ಹೆಸರು ಅಹಲ್ಯೆಯಂತೆ.ಆಕೆಯ ದೊಡ್ಡದೊಡ್ಡ ಕಂಗಳನು ನೋಡಿದ್ದೇ ತಡ ಅಗ್ನಿಯನು,ಶೀತಲತೆಯನು ಅವಿತಿಟ್ಟುಕೊಂಡ ಸಾಗರಗರ್ಭದ ಆಳವು ಒಮ್ಮೇಲೆ ಕಂಡಂತಾಗಿ ಒಂದು ಕ್ಷಣ ಭಯವೆನ್ನಿಸಿತು.
ಆಕೆಯ ತುಟಿಗಳ ಮೇಲಿನ ನಗುವಿನ ಅರ್ಥ ನನಗಿನ್ನೂ ತಿಳಿಯುತ್ತಿಲ್ಲ.ಆಗ್ರಹ,ಅನುಗ್ರಹ,ನಿ ರ್ಲಿಪ್ತತೆ,ವೇದಾಂತ,
ದಯೆ,ಪ್ರೀತಿ ಎಲ್ಲ ಇವೆ ಅದರೊಳಗೆ.ಆ ಶರೀರದೊಳಗಿನ ಸಮನ್ವಯತೆ ಬರೀ ಶರೀರದ್ದಲ್ಲ.ಮನಸ್ಸಿನದ್ದು.ಶರೀರವನ್ ನು ಕಠೋರ ದೀಕ್ಷೆಯಿಂದ ವಶ ಮಾಡಿಕೊಂಡ ಸಮನ್ವಯತೆಯದು.ಆಕೆಯನ್ನು ಹಾಗೆಯೇ ನೋಡುತ್ತಾ ಇದ್ದುಬಿಡಬೇಕೆಂದೆನಿಸಿತು.ನನಗೆ ಅರಿವಿಲ್ಲದಂತೆಯೇ  ಕೈಮುಗಿದೆ.
ದೇವತೆಯಂತೆ ಪ್ರಸನ್ನವಾಗಿ ನಕ್ಕಳಾಕೆ.ಆ ಕ್ಷಣಗಳನ್ನು ಭಗ್ನಗೊಳಿಸುತ್ತಾ ಮಹರ್ಷಿ ವಿಶ್ವಾಮಿತ್ರರು ನನ್ನನು ಮುಂದಕೆ ಕರೆದೋಯ್ದು ಆಕೆಯ ಬಗ್ಗೆ ಎಲ್ಲ ಹೇಳಿದರು. ಮನಸ್ಸೆಲ್ಲ ಕಹಿಯಾಯಿತು.ಸೌಂದರ್ಯದ ಮರೆಯಲ್ಲಿ ಸೌಶೀಲ್ಯ ಇಲ್ಲವೆಂದು ತಿಳಿದ ಮೇಲೆ ತುಂಬಾ ದುಃಖವೆನಿಸಿತು.ಆದರೆ ನಾನು ಆಕೆಯನ್ನು ಮರೆಯಲಾರೆನು. ಆ ಕಂಗಳನೂ,ಆ ನಗುವನ್ನೂ.”

ಸೀತೆ ಉತ್ಕಟತೆಯಿಂದ ಆಲಿಸುತ್ತಿದ್ದಳು.

ಅಹಲ್ಯ,ಒಳ್ಳೆಯ ಹೆಸರು. ನೇಗಿಲಿನಿಂದ ಉಳದ ಭೂಮಿ ಎಂದರ್ಥ.ತಾನೇನೋ ನೇಗಿಲಿನಿಂದ ಭೂಮಿ ಊಳುತ್ತಿರುವಾಗ ದೊರೆತ ಭೂಪುತ್ರಿ.ಆದರೆ ನೇಗಿಲ ಪೆಟ್ಟೇ ಅರಿಯದವಳು ಅಹಲ್ಯ! ಸೌಶೀಲ್ಯ ಇಲ್ಲವೆಂದರೆ ಏನರ್ಥ ! ಆ ಸಂಗತಿ ಕೇಳಬಹುದೇ ? ಸೀತೆ ಆಲೋಚನೆಯಲ್ಲಿ ಮುಳಿಗದ್ದನ್ನು ನೋಡಿ ರಾಮನು ಆಕೆಯನ್ನು  ಎದೆಗಪ್ಪಿಕೊಂಡು-

“ನಾನು ನಿನ್ನ ಬದಿಯಲ್ಲಿರುವಾಗ ನಿನ್ನ ಮನಸ್ಸು ಬೇರೆಡೆ ಇರಕೂಡದು.ನಿನ್ನ ಮನಸ್ಸು ನನ್ನಿಂದ ಒಂದು ಕ್ಷಣ ಪಕ್ಕಕ್ಕೆ ಸರಿದರೂ ನಾನು ಸಹಿಸಲಾರೆನು ಸೀತಾ “ಎಂದನು.

ಪ್ರೀತಿಯಿಂದಲೇ ಆದರೂ ಯಾವುದೋ ಖಚಿತವಾದ ಆಜ್ಞೆ ಆ ಕಂಠದೊಳಗೆ ಕೇಳಿದಂತಾಗಿ ಕಳವಳಗೊಂಡ ಸೀತೆ ತನ್ನ ಯೋಚನೆಯನ್ನು ತಡಮಾಡದೆ ಹೇಳಿದಳು-

“ನನ್ನ ಮನಸ್ಸು ಮತ್ತೆಲ್ಲಿಗೋ ಹೋಗಲಾರದು ರಾಮಾ.ನೀವು ಹೇಳಿದ ಅಹಲ್ಯೆಯ ಸಂಗತಿಯನ್ನೇ ಯೋಚಿಸುತಲಿದ್ದೇನೆ. ಸೌಶೀಲ್ಯ ಇಲ್ಲವೆಂದರೆ …..”

“ಸೀತಾ ! ನೀನಿನ್ನೂ ಚಿಕ್ಕವಳು. ನಿನಗೆ ಇದೆಲ್ಲಾ  ಅರ್ಥವಾಗುವುದಿಲ್ಲ‌.ಅಷ್ಟಕ್ಕೂ ಇಂತಹ ವಿಷಯಗಳನ್ನು ನೀನು ಕೇಳಕೂಡದು.ಮಾತನಾಡಕೂಡದು.”

ಸೀತೆಯ ತುಟಿಗಳನ್ನು ತನ್ನ ತುಟಿಗಳಿಂದ ರಾಮನು ಮುಚ್ಚಿಬಿಟ್ಟ.ಸೀತೆ ಎಲ್ಲವನ್ನೂ ಮರೆತು ಬಿಟ್ಟಳು ಆ ನಿಶೆಯಲ್ಲಿ.

*

ಅಯೋಧ್ಯೆಯಲ್ಲಿ ಸೀತೆಗೆ ಕಾಲ ಹೇಗೆ ಕಳೆಯುತ್ತಿದೆಯೆಂದು ಯೋಚಿಸುವ ವ್ಯವಧಾನವೂ ಇಲ್ಲ.ರಾಮನ ಪ್ರೀತಿಯಂತೂ ಆಕೆಯನ್ನು ಉಸಿರುಗಟ್ಟಿಸುತ್ತಿದೆ. ಅತ್ತೆಯಂದಿರ ಕಾಳಜಿ ಎಣೆಯಿಲ್ಲದ್ದು.ತವರುಮನೆಯ ಕುರಿತು ಚಿಂತಿಸುವ ಅವಕಾಶವೇ ಇಲ್ಲ.ತಂಗಿಯರು ಸಹ ಇಲ್ಲಿಯೇ ಇದ್ದಾರೆ.ದಿನಕ್ಕೊಂದು ರೀತಿಯಲ್ಲಿ ಪುಷ್ಪಾಲಂಕಾರಗಳನು ಮಾಡುತ್ತಿದ್ದ ಪರಿಚಾರಿಕೆಯರನ್ನು ಪ್ರಶಂಸಿಸುವುದು ಬಿಟ್ಟು ಬೇರೆ ಕೆಲಸವೇನೂ ಇಲ್ಲ ಆಕೆಗೆ.

ಅಂತಹ ಆನಂದಮಯ ಸಮಯದಲ್ಲಿ ಒಂದು ದಿನ ಅತ್ತೆ ಕೌಸಲ್ಯೆ ಸೀತೆಯನ್ನು ತನ್ನ ಮಂದಿರಕ್ಕೆ ಕರೆಸಿದಳು.ಸಮುಚಿತವಾಗಿ ಅಲಂಕರಿಸಿಕೊಂಡು ಹೋಗಿ ಅತ್ತೆಗೆ ಪ್ರಣಾಮಗಳನ್ನು ಸಲ್ಲಿಸಿದಳು ಸೀತೆ.

ಯಾರೋ ಸಾಮಂತಿ ರಾಣಿಯರು ಸೀತೆಯನ್ನು ನೋಡಲು ಬಂದಿದ್ದರು.ಅವರು ಸೀತೆಯನ್ನು ನೋಡಿ ಮುಗ್ಧರಾಗಿ ಆಕೆಯ ಸೌಂದರ್ಯವನ್ನು ಕೌಸಲ್ಯೆಯ ಹೃದಯ ಉಕ್ಕೇರುವಂತೆ ವರ್ಣಿಸಿದರು.

“ನಮ್ಮ ಸೀತೆ ಭೂಪುತ್ರಿ.”ಎಂದಳು ಕೌಸಲ್ಯೆ ಗರ್ವದಿಂದ.

“ಹೌದು ಕೇಳಿದ್ದೇವೆ.ಜನಕ ಮಹಾರಾಜನ ಅದೃಷ್ಟ.ಅದಕ್ಕೆಂದೇ ಅಂದದಲಿ ಅಹಲ್ಯೆಯನ್ನೂ ಮೀರಿಬಿಟ್ಟಿದ್ದಾಳೆ.” ಎಂದಳು ಒಬ್ಬ ರಾಣಿ.

ಸೀತೆ ಬೆಚ್ಚಿಬಿದ್ದಳು.’ಅಹಲ್ಯೆ- ರಾಮನು ಪ್ರಶಂಸಿಸಿದ ಅಹಲ್ಯೆ ಇವರಿಗೂ ಗೊತ್ತೇ ?’ ಬಂದಿದ್ದ ಅತಿಥಿತಿಗಳು ಹೋದ ನಂತರ ಕೌಸಲ್ಯೆ ಪರಿಚಾರಿಕೆಯರನ್ನು ಕರೆದು ಸೀತೆಗೆ ದೃಷ್ಟಿ ತಗೆಸಿದಳು.

“ನಿನ್ನನ್ನು ತೋರಿಸದೆ ಇರಲಾರೆನು. ಅವರ ದೃಷ್ಟಿದೋಷ  ತಗುಲುತ್ತದೆ ಎಂದು ಭಯಗೊಳ್ಳಲಾರದೆಯೂ ಇರಲಾರೆನು,” ನಕ್ಕಳು ಕೌಸಲ್ಯೆ.

“ಅಹಲ್ಯೆ ಯಾರು ಅತ್ತೆ ?” ಸಂಕೋಚದಿಂದ ಕೇಳಿದಳು ಸೀತೆ.

“ಓ ! ಆಕೆ ಗೌತಮ ಮಹರ್ಷಿಯ ಪತ್ನಿ. ಅಪರೂಪವಾದ ಅಂದ.ಅದಕ್ಕೆ ತಕ್ಕಂತಹ ಸೌಶೀಲ್ಯ.ಆದರೂ ಪಾಪ ಶಾಪಗ್ರಸ್ಥಳಾಗಿದ್ದಾಳೆ.

“ಏನಾಗಿದೆ ಅತ್ತೆ ?”

“ಏನಿದೆ ತಾಯಿ,ಅಂದವಾದ ಹೆಂಗಸರನ್ನು ಭೋಗದ ವಸ್ತು ಎಂದುಕೊಳ್ಳುತ್ತಾರಲ್ಲ ಕೆಲ ಗಂಡಸರು ! ಹಾಗೆಯೇ ಇಂದ್ರನೆಂಬುವವನಿಗೆ ಅಹಲ್ಯೆಯ ಮೇಲೆ ಆಸೆಯಾಯಿತು.ಒಂದು ದಿನ ಗೌತಮನು ಆಶ್ರಮದೊಳಗೆ ಇಲ್ಲದ ಸಮಯವನ್ನು ನೋಡಿಕೊಂಡು  ಗೌತಮನಂತೆ ವೇಷ ಧರಿಸಿ ಬಂದನು ಆ ಇಂದ್ರ.ಆಕೆ ಗಂಡನೆಂದುಕೊಂಡಿದ್ದಳು.ಇನ್ನೇನು ! ಇಂದ್ರನ ಬಯಕೆ ಈಡೇರಿತು.ಅದೇ ಸಮಯಕ್ಕೆ ಗೌತಮ ಮಹರ್ಷಿ ಅಲ್ಲಿಗೆ ಬಂದಿದ್ದರಿಂದ ವಿಷಯ ಬಯಲಾಯಿತು‌.ಅಷ್ಟೇ,ಆತ ಆಕೆಯನ್ನು ಪರಿತ್ಯಜಿಸಿದ. ಅಹಲ್ಯೆ ನಡೆದದ್ದನ್ನು ತಿಳಿದುಕೊಂಡು ಸ್ಥಾವರವಾದಳು. ಚಲನೆಯಿಲ್ಲದ ಶಿಲೆಯಾದಳು.ನಮ್ಮ ಲೋಕದೊಳಗೇ ಇಲ್ಲದೆ,ಮನೆ -ಮಠ,ಬಿಸಿಲು,ಮಳೆ,ಚಳಿ ಯಾವ ಭೇದವೂ ತಿಳಿಯದಂತೆ ಈಗ ಆ ಕಾಡಿನಲ್ಲಿರುತ್ತಾಳೆ. ಯಾರಿಗೂ ಕಾಣುವುದಿಲ್ಲ.”

ಸೀತೆ ಹನಿಗಣ್ಣಳಾದದ್ದನ್ನು ಕಂಡ ಕೌಸಲ್ಯೆ  ತಾನು ಮಾಡಿದ ಕೆಲಸಕ್ಕೆ ನೊಂದುಕೊಂಡು-

“ಚಿಕ್ಕ ಹುಡುಗಿ ನೀನು.ನಿನಗೆ ಇದೆಲ್ಲಾ ಹೇಳಿ ತಪ್ಪು ಮಾಡಿದೆ.ಯಾರ ಹಣೆಬರಹ ಹೇಗಿರುತ್ತದೋ ಹಾಗೆಯೇ ನಡೆಯುತ್ತದೆ.ನಾವು ಮಾಡುವುದೇನೂ ಇಲ್ಲ. ಹಣೆಬರಹವನ್ನು ಯಾರೂ ಬದಲಿಸಲಾರರು.ಮರೆತು ಬಿಡಮ್ಮಾ. ಆ ದುರದೃಷ್ಟವಂತೆಯ ಸಂಗತಿಯನ್ನು ಇನ್ನು ಮರೆತುಬಿಡು.”

ಆ ಮಾತುಗಳನ್ನು ಹೇಳುತ್ತಲೇ ಸೀತೆಯ ಮನಸ್ಸನ್ನು ಬದಲಾಯಿಸಲು ಮಂದಿರದ ನಡುವಲಿದ್ದ ಮಾತು ಕಲಿತ  ಗಿಳಿಯ ಬಳಿಗೆ ಕರೆದೋಯ್ದಳು ಕೌಸಲ್ಯೆ.

ಆ ಗಿಳಿ ಕೌಸಲ್ಯೆಯು ಮಾತು ನಿಲ್ಲಿಸುತ್ತಲೇ  ಸೀತೆಯತ್ತ ತಿರುಗಿ ‘ಸೀತೆಯ-ವಿಧಿ,’ಸೀತೆ-ಹಣೆಬರಹ’ ಎಂದು ಉಲಿಯುತ್ತಾ ವಿಚಿತ್ರವಾಗಿ ನಗತೊಡಗಿತು.

ಸೀತೆ ಭಯಗೊಂಡು ಕೌಸಲ್ಯೆಯ ಹಿಂದೆ ನಿಂತು- ” ನಾನು ನನ್ನ ಮಂದಿರಕ್ಕೆ ಹೋಗಬಹುದೆ ಅತ್ತೆ ?” ಎಂದಳು.

ಗಿಳಿಯ ವಿಚಿತ್ರ ಚೇಷ್ಟೆಗೆ ಕೌಸಲ್ಯೆಗೂ ಏಕೋ ಭಯವೆನಿಸಿತು.
“ನಡೆಯಮ್ಮಾ ನಾನೂ ಬಂದು ರಾಮನನ್ನು ನಿನ್ನನ್ನು ಕಣ್ಣಾರೆ ನೋಡಿಕೊಳ್ಳುವೆ.” ಎನ್ನುತ್ತಾ ಹಿಂದೆ ಬರುತ್ತಿದ್ದ ದಾಸಿಯರನ್ನು
ತಡೆದು ಸೀತಾರಾಮರ ಮಂದಿರದೆಡೆಗೆ ನಡೆದಳು ಕೌಸಲ್ಯೆ.ರಾಮನಿಗಾಗಿ ಮಧ್ಯಾಹ್ನದಿಂದಲೂ ಕಾದು ನೋಡುತ್ತಿದ್ದಾಳೆ ಸೀತೆ.ಕೌಸಲ್ಯೆ ಬಂದು ರಾಮನಿಲ್ಲವೆಂದು ತಿಳಿದು ಸಂಜೆವರೆಗೂ ಸೀತೆಯೊಡನೆಯೇ ಇದ್ದಳು.ಬಳಿಕ ಪೂಜೆಯ ವೇಳೆಯಾಗುತ್ತಿದೆ ಎಂದು ಹೋಗುತ್ತಾ ಮಾರನೆಯ ದಿನ ಇಬ್ಬರೂ ತನ್ನ ಮಂದಿರಕ್ಕೆ ಬರಬೇಕಾಗಿ ಆಹ್ವಾನಿಸಿದಳು.

ಅಂದಿನಿಂದಲೂ ಸೀತೆಯ ಮನದ ತುಂಬಾ ಅಶಾಂತಿ. ಅಹಲ್ಯೆಯ ಕಥೆ ನೆನೆಸಿಕೊಂಡು ಭಯ,ಕರುಣೆ,ದುಃಖ.ಆಕೆ ಸೌಶೀಲ್ಯೆ ಅಲ್ಲವೆಂದು ರಾಮನು ಏಕಂದನೋ ತಿಳಿಯದೇ ಕೋಪ.ಅತ್ತೆ ಸೌಶೀಲ್ಯೆ ಎಂದಳಲ್ಲ ! ನಡೆದದ್ದರಲ್ಲಿ ಆಕೆಯ ತಪ್ಪೇನೂ ಇಲ್ಲದಿದ್ದರೂ ರಾಮನೇಕೆ ಹಾಗಂದನು ? ಪಾಪ ಅಹಲ್ಯೆ!ಆಕೆಯ ಹಣೆಬರಹ ಹಾಗೆ ಬರೆದಿದೆ ಎಂದಿದ್ದಳು ಅತ್ತೆ.ಆ ಗಿಳಿಯಾದರೂ  ಏಕೆ ಹಾಗಂದಿತು ? ‘ಸೀತೆಯ-ಹಣೆಬರಹ,’ಸೀತೆಯ-ವಿಧಿ’….

ಗಿಳಿಯ ಮಾತು ನೆನಸಿದರೆ ಮೈಯೆಲ್ಲಾ ಭಯದಿಂದ ಕಂಪಿಸುತ್ತಿತ್ತು ಸೀತೆಗೆ.ತಲೆ ಸಿಡಿಯುವಷ್ಟು ನೋವು.ಚಂದನ ಲೇಪಿಸಿರೂ,ದಾಸಿಯರು ಎಷ್ಟೇ ಉಪಚಾರ ಮಾಡಿದರೂ ನೋವು ವಾಸಿಯಾಗಲಿಲ್ಲ. ನಡುರಾತ್ರಿಯವರೆಗೆ ರಾಮನೂ ಬರಲಿಲ್ಲ. ಸೀತೆ ಆ ತಲೆನೋವಿನಲ್ಲೇ ನಿದ್ರೆ ಹೋದಳು.

*

ಅಂತಃಪುರದೊಳಗೆ ಶೋಕ ಸಮುದ್ರಗಳು ದಾಟಿ,ನದೀ ತೀರದ ಬಳಿ ಬಂದು,ಹಿಂಬಾಲಿಸಿದ ಗಣ್ಯರನ್ನು ಬೀಳ್ಗೊಂಡು ಹಡಗು ಹತ್ತಿದ ನಂತರವೇ ಸೀತೆಗೆ ವಿಶ್ರಾಂತಿ ಎನಿಸಿದ್ದು.

ನಡೆದದ್ದೇನೋ ನಡೆದಿದೆ.ರಾಮನ ಒಡಗೂಡಿ ತಾನು ಎಲ್ಲಿದ್ದರೇನು ? ಅಂತಃಪುರಗಳು ಚಿಕ್ಕಂದಿನಿಂದಲೂ ಚಿರಪರಿಚಿತವೇ.ಈ ನದಿ,ಕಾಡು,ಬೆಟ್ಟ ಇವುಗಳ ಸುಖ- ಶಾಂತಿಗಳನ್ನು ಈಗ ಅನುಭವಿಸಬೇಕು.ಆಗ ಮಾತ್ರ ಯಾವ ರಾಜಕೀಯ ಭೇದವೂ ಇಲ್ಲದಂತೆ ರಾಮನ ಪ್ರೀತಿ ತನ್ನ ವಶವಾಗುತ್ತದೆ.

ಸೀತೆಗೆ ಇದ್ದಿದ್ದರಲ್ಲಿಯೇ ಆನಂದವನ್ನು ಕಂಡುಕೊಳ್ಳುವುದು ಸಹಜ ಸ್ವಭಾವ. ರಾಜ್ಯವನ್ನು ದಾಟುತ್ತಿದ್ದಂತೆ ಆಕೆಗೆ ತನ್ನ ಸ್ವಸ್ಥಳಕ್ಕೆ ಸೇರುತ್ತಿದ್ದೇನೇನೋ ಎಂಬಂತಹ ಭಾವ ಬಿಟ್ಟು
ಅನ್ಯಸೀಮೆಗೆಲ್ಲಿಗೋ ಹೋಗುತ್ತಿದ್ದೇವೆ ಎಂಬ ಭಾವನೆಯೇ ಬರಲಿಲ್ಲ.

ಅದನ್ನು ರಾಮನಿಗೆ ಹೇಳಿದರೆ-

“ನೀನು ಭೂಪುತ್ರಿಯಲ್ಲವೇ,ಎಲ್ಲಾ ನಿನ್ನ ಸಾಮ್ರಾಜ್ಯವೇ.”
ಎಂದನು ನಗುತ್ತಾ.

ಸೀತೆಗೆ ಮತ್ತೆ ಅಹಲ್ಯೆ ನೆನಪಾದಳು. ತನ್ನನಾರಾದರೂ ಭೂಪುತ್ರಿ ಎಂದ ಕೂಡಲೇ ಅಹಲ್ಯೆ ಏಕೆ ನೆನಪಾಗುತ್ತಾಳೋ ಎಂದು ಸೀತೆಗೆ ಅರ್ಥವಾಗುತ್ತಿಲ್ಲ.ಪಯಣ ಸಾಗುತ್ತಿದೆ.ಅರಣ್ಯ ಪ್ರಾಂತಗಳೊಳಗೆ ಆಶ್ರಮಗಳು ಕಂಡಲ್ಲೆಲ್ಲ ರಾಮನು ನಿಲ್ಲುತ್ತಿದ್ದಾನೆ.ಮುನಿಗಳನ್ನು ಸಂದರ್ಶಿಸಿ ಅವರ ಸುಖ-ದುಃಖಗಳನ್ನು ಆಲಿಸುತ್ತಿದ್ದಾನೆ.ದಸ್ಯರಿಂದಾಗಿ ತಮಗೆ ಎದುರಾಗುತ್ತಿರುವ ಅಡ್ಡಿ-ಆತಂಕಗಳನ್ನು ಅವರು ಹೇಳುತ್ತಿದ್ದಾಗಲೆಲ್ಲಾ ರಾಮನ ಅಂಗೈ ಧನಸ್ಸಿನ ಮೇಲೆ ಬಿಗಿದುಕೊಳ್ಳುತ್ತಿತ್ತು.ಇತ್ತ ಸೀತೆ ಮುನಿಪತ್ನಿಯರನ್ನು ಭೆಟ್ಟಿಯಾಗಿ ಅವರು ಆಹಾರವನ್ನು ತಯಾರಿಸುವ ವಿವಿಧ ಬಗೆಗಳನ್ನು ತಿಳಿದುಕೊಳ್ಳುತ್ತಿದ್ದಳು.

ಏನೇ ಆಗಲಿ ಸೀತೆಗೆ ನೆಮ್ಮದಿಯಿಂದ ಕಾಲ ಕಳೆಯುತ್ತಿದೆ.ಮುನಿಯಾಶ್ರಮವೊಂದರಲ್ ಲಿ ಎರಡು ದಿನ ಉಳಿದುಕೊಂಡು ಹೋಗೋಣವೆಂದು ಅಣ್ಣ ತಮ್ಮಂದಿರಿಬ್ಬರೂ ತೀರ್ಮಾನಿಸಿದರು.ಆ ಪರಿಸರ ಪ್ರಾಂತಗಳಲಿ ದಸ್ಯರ ವಿವರಗಳನ್ನು ಶೇಕರಿಸಬಹುದೆಂಬುದು ಅವರ ಪ್ರಯತ್ನವಾಗಿತ್ತು.ಮುಂಜಾವಿನ ಪೂಜೆಗಳನ್ನು ಮುಗಿಸಿಕೊಂಡು ಅಣ್ಣ ತಮ್ಮಂದಿರಿಬ್ಬರು ಎಲ್ಲಿಗೋ ಹೋದರು.ಸೀತೆ ಮುನಿಪತ್ನಿಗೆ ಸಹಾಯ ಮಾಡೋಣವೆಂದು ಹೋದರೆ ಆಕೆ ಕಿರುನಗುತ್ತಾ ಬೇಡವೆಂದಳು.ಅಷ್ಟರೊಳಗೆ ಸೀತೆ ಆ ಆಶ್ರಮದ ಪರಿಸರದೊಳಗೆ ಒಂದು ಜಲಪಾತವಿದೆ ಎಂದು ತಿಳಿದುಕೊಂಡು ಅದರ ದಾರಿ ವಿಚಾರಿಸಿ ಆ ಕಡೆಗೆ ಹೊರಟಳು.

ಅದು ಅಷ್ಟು ದೂರವಲ್ಲ.ದೊಡ್ಡ ಜಲಪಾತವೂ ಅಲ್ಲ‌.ಆದರೆ ತುಂಬಾ ಅಂದವಾದ ಪ್ರದೇಶ.ಜಲಪಾತದಿಂದ ಸ್ವಚ್ಛವಾದ ನೀರು ಸಣ್ಣ ಪ್ರವಾಹವಾಗಿ ಸಾಗಿ ಹೋಗುತ್ತಿದೆ.ಆ ಪ್ರವಾಹದ ಅಡಿಯಲ್ಲಿ ಬಣ್ಣ ಬಣ್ಣದ ಕಲ್ಲು‌ಗಳಿವೆ.ಥಳಥಳಿಸುವ ಸೂರ್ಯ ಕಿರಣಗಳು ಆ ಕಲ್ಲುಗಳ ಮೇಲೆ ಬಿದ್ದು ಅವು ರತ್ನಗಳಂತೆ ಹೊಳೆಯುತ್ತಿವೆ.ಆ ನೀರಿನಲ್ಲಿ ಕಾಲಿಟ್ಟು ಆ ಬಣ್ಣದ ಕಲ್ಲುಗಳನ್ನೇ ಕಣ್ದುಂಬಿಕೊಳ್ಳುತ್ತಾ ಕುಳಿತಳು ಸೀತೆ.

“ಯಾರಮ್ಮಾ ನೀನು ?”

ಮೃದು ಗಂಭೀರವಾದ ಆ ದನಿ ಕೇಳಿಸುವವರೆಗೂ ಸೀತೆ ಆ ಬಣ್ಣದ ಕಲ್ಲುಗಳ ಲೋಕದಲ್ಲಿಯೇ ಇದ್ದಳು.ಪಕ್ಕಕ್ಕೆ ತಿರುಗಿ ತಲೆ ಮೇಲಕ್ಕೆತ್ತಿದಾಗ ಅಲ್ಲಿ ಬದಿಗೆ ನಿಂತಿದ್ದ ಒಬ್ಬ ಹೆಂಗಸನ್ನು ಕಂಡು ಬೆರಗಾಗಿ ಹೋದಳು.ದಿವ್ಯ ತೇಜೋಮೂರ್ತಿ! ಅಪ್ರಯತ್ನವಾಗಿ ಎದ್ದು ನಿಂತು ತನ್ನೆರಡೂ ಕೈಗಳನ್ನೆತ್ತಿ ಆಕೆಗೆ  ನಮಿಸಿದಳು .

“ನನ್ನ ಹೆಸರು ಸೀತೆ, ಶ್ರೀರಾಮಚಂದ್ರನ ಪತ್ನಿ.”

ಆಹಲ್ಯೆ ಸೀತೆಯ ಭುಜದ ಮೇಲೆ ಕೈಯಿಟ್ಟು ‘ಹೌದಾ ‘ ಎಂದು ಕಿರುನಗೆ ಬೀರಿದಳು.

ಒಂದು ಕಿರುನಗೆಯಲ್ಲಿ ಇಷ್ಟೊಂದು ಕರುಣೆ ಇರುತ್ತದೆ ಎಂದು ಸೀತೆಗೆ  ಇದೇ ಮೊದಲ ಸಲ ಅನ್ನಿಸಿತು.

“ಯಾರು ತಾಯಿ ನೀವು ?” ಎಂದು ಆಕೆಯ ಪಾದಗಳನ್ನು ನೋಡುತ್ತಾ ಕೇಳಿದಳು.

“ನನ್ನನ್ನು ಅಹಲ್ಯೆ ಎನ್ನುತ್ತಾರೆ”

ಸೀತೆಗೆ ಒಂದು ಕ್ಷಣ ಎದೆಬಡಿತ ನಿಂತಂತನಿಸಿತು.

“ಅಹಲ್ಯೆ ! ಅಹಲ್ಯೆಯೆಂದರೆ ನೀವೇನಾ ?”

“ನನ್ನ ಕುರಿತು ಕೇಳಿದೆಯಾ ? ”
ಪಾರಿಜಾತದ ಹೂವುಗಳು ದಳದಳನೆ ಉದುರಿದಂತೆ ನಕ್ಕಳು ಅಹಲ್ಯೆ.

ಅಹಲ್ಯೆ ಕೂಳಿತುಕೊಳ್ಳಲು ಸೀತೆಯೂ ಆಕೆಯ ಬದಿಯಲ್ಲೇ ಕುಳಿತಳು.

“ಹೌದು ಕೇಳಿದ್ದೆ.ನಮ್ಮ ಅತ್ತೆ ಕೌಸಲ್ಯೆ ನಿಮ್ಮ ಕಥೆಯನ್ನೆಲ್ಲಾ ಹೇಳಿದರು. ಎಂಥಾ ಅನ್ಯಾಯ !”

“ಏನು ಅನ್ಯಾಯ ?” ಸಹಜವಾಗಿ ಕೇಳಿದಳು ಅಹಲ್ಯೆ.

“ಮಾಡದ ತಪ್ಪಿಗೆ ನೀವು ನಿಂದೆ ಅನುಭವಿಸುತ್ತಿದ್ದೀರಲ್ಲ !”
ಕನಿಕರದರದಿಂದ ನುಡಿದಳು ಸೀತೆ.

“ಈ ಲೋಕದಲ್ಲಿ ಅನೇಕ ಹೆಂಗಸರು ಹೀಗೆಯೇ ಅನುಭವಿಸುತ್ತಿದ್ದಾರಲ್ಲಾ ಸೀತಾ ?”

“ಆದರೆ ನಿಮ್ಮದು ಹಾಗಲ್ಲ.ಎಷ್ಟು ಘೋರ ?ಆತ ನಿಮ್ಮ ಗಂಡನಲ್ಲವೆಂದು ನಿಮಗೆ ಗೊತ್ತಿರಲಿಲ್ಲವಲ್ಲ”.

“ಗೊತ್ತೋ ಗೊತ್ತಿಲ್ಲವೋ ನಿನಗೆ ಗೊತ್ತಾ ?ಬೇರಾರಿಗಾದರೂ ಗೊತ್ತಾ ?”

ಸೀತೆ ಏನೋ ಹೇಳಲು ಹೋಗಿ ಮತ್ತೆ ಸುಮ್ಮನಾದಳು.
ಅಹಲ್ಯೆಯ ಆ ಮಾತಿಗೆ ಆಕೆಗೆ ತಲೆ ತಿರುಗಿದಂತಾಯಿತು.
ಚೇತರಿಸಿಕೊಂಡು,ಮತ್ತೆ ಕೇಳಿದಳು

“ಅಂದರೆ ನಿಮಗೆ ಗೊತ್ತಾ ?”

“ಈ ಪ್ರಶ್ನೆಗೆ ಯಾವ ಅರ್ಥವೂ ಇಲ್ಲ ಸೀತಾ !”

“ಆದರೆ ಸತ್ಯವೆನ್ನುವುದು ಒಂದು ಇದ್ದರೆ ಅದಕ್ಕೆ ಅರ್ಥವು ಇದ್ದೇ ಇರುತ್ತದಲ್ಲ ”

ಸೀತೆಗೆ ಆಶ್ಚರ್ಯ, ಕುತೂಹಲ.

“ಸತ್ಯದ ಕುರಿತು ಯಾರ ನಿಲುವು ಅವರದ್ದೇ, ಸತ್ಯಾಸತ್ಯಗಳನ್ನು ನಿರ್ಣಯಿಸಬಲ್ಲ ಶಕ್ತಿ ಈ ಲೋಕದಲ್ಲಿ ಯಾರಿಗಾದರೂ ಇದೆಯಾ?”

ಸೀತೆಗೆ ಅಹಲ್ಯೆಯ ಮಾತುಗಳು ಅರ್ಥವಾಗಲಿಲ್ಲ.ಆಕೆಯ ಕಸಿವಿಸಿಯ, ಅಮಾಯಕ ಮುಖ ಕಂಡು ಅಹಲ್ಯೆಗೆ ಕನಿಕರವೆನಿಸಿತು‌

“ಇದೆಲ್ಲಾ ಅರ್ಥ ಮಾಡಿಕೊಳ್ಳುವುದು ಕಷ್ಟ ಸೀತಾ! ನಿನಗೆ ನನ್ನ ಕಥೆ ಏಕೆ ಹೇಳಿದರೋ, ಹೇಗೆ ಹೇಳಿದರೋ ನನಗೆ ತಿಳಿಯದು.
ಇಂದ್ರ ನನ್ನನ್ನು ಬಯಸಿದ್ದ.ಹೆಣ್ಣು ಗಂಡಸಿನ ಭೋಗದ ವಸ್ತುವೆಂದು ಎಲ್ಲರೂ ಅಂದುಕೊಂಡಂತೆಯೇ ಅವನೂ ಅಂದುಕೊಂಡಿದ್ದ.
ನಾನು ಅವನಿಗೆ ಒಲಿಯುವುದಿಲ್ಲ ಎಂದು ತಿಳಿದು ಕತ್ತಲಲ್ಲಿ ನನ್ನ ಗಂಡನ ವೇಷ ಧರಿಸಿ ಬಂದಿದ್ದ.ಆತ ನನ್ನ ಗಂಡನಲ್ಲವೆಂದು ನಾನು ಗುರುತು ಹಿಡಿದನೋ,ಇಲ್ಲವೋ ಎಂಬುದು ಲೋಕದಲ್ಲಿ ಅನೇಕರನ್ನು ಕಾಡುವ ಪ್ರಶ್ನೆ.ಆದರೆ,ನನ್ನ ಗಂಡನಿಗೆ ಮಾತ್ರ ಈ ವಿಷಯದಲ್ಲಿ ಯಾವ ಭೇದವೂ ಇಲ್ಲ.ನನಗೆ ಗೊತ್ತಿದ್ದರೂ ಸರಿ,
ಗೊತ್ತಿಲ್ಲದಿದ್ದರೂ ಸರಿ ಅವರಿಗೆ ಒಂದೇ‌.ಅವರ ವಸ್ತು ತಾತ್ಕಾಲಿಕವಾಗಿಯಾದರೂ ಅನ್ಯರಪಾಲಾಗಿದೆ. ಮೈಲಿಗೊಂಡಿದೆ. ಮಡಿ,ಮೈಲಿಗೆ,ಪವಿತ್ರತೆ,ಅಪವಿತ್ರತೆ, ಶೀಲ,ಪತನ ಈ ಪದಗಳನ್ನು ಬ್ರಾಹ್ಮಣ ಪುರುಷರು ಎಷ್ಟು ಬಲವಾಗಿ ಸೃಷ್ಟಿಸಿದ್ದಾರೆಂದರೆ ಇದರೊಳಗೆ ಸತ್ಯಾಸತ್ಯಗಳ ಪ್ರಮೇಯವೇ ಇಲ್ಲ. ವಿವೇಚನೆಯೂ ಇಲ್ಲ.”

ಅಹಲ್ಯೆ ಮಾತು ನಿಲ್ಲಿಸಿದಳು.ಸೀತೆಗೆ ಇದೆಲ್ಲ ಅರ್ಥವಾಗುವುದೇ ?ಆಕೆಯ ಮುಖ ನೋಡಿದರೆ ಯಾವುದೋ ಮಮತೆ. ಜೊತೆಗೆ ಆತ್ಮೀಯತೆ.ಆಕೆಗೆ ಇದೆಲ್ಲಾ ಏಕೆ ಹೇಳತ್ತಿದ್ದೇನೆಂದು ತನಗೆ ಆಶ್ಚರ್ಯವಾಗುತ್ತಿದೆ.ಸೀತೆಯ ಬಗ್ಗೆ ತನಗೀ ಸೋದರಿ ಭಾವವಾದರೂ ಏಕೆ ?

ಮಾತನಾಡುವುದನ್ನು ನಿಲ್ಲಿಸಿದ ಅಹಲ್ಯೆಯನ್ನು ನೋಡುತ್ತಲಿದ್ದಾಳೆ ಸೀತೆ.

” ನೀನೇಕೆ ಈ ಅರಣ್ಯಕ್ಕೆ ಬಂದಿರುವೆ ಸೀತಾ ?”

ಸೀತೆ ತನ್ನ ಕಥೆಯನ್ನೆಲ್ಲ ಹೇಳಿದಳು.

“ರಾಮನನ್ನು ಬಿಟ್ಟು ಇರಲಾರದೆ ಈ ಅರಣ್ಯ ವಾಸಕ್ಕೆ ಬಂದೆಯಾ ?” ನಕ್ಕಳು ಅಹಲ್ಯೆ.

ಸೀತೆ ನಾಚಿಕೊಳ್ಳುತ್ತಾ  “ಅವರನ್ನು ಬಿಟ್ಟು
ನಾನು ಒಂದು ದಿನವೂ ಇರಲಾರೆ.ಅವರೂ ಅಷ್ಟೇ,ಎಲ್ಲ ಗಂಡಸರಂತಲ್ಲ.”ಎಂದಳು.

“ಗಂಡಸರೆಲ್ಲಾ ಒಂದೇ ಸೀತಾ.ಮುಖ್ಯವಾಗಿ ಹೆಂಡತೀಯರ ವಿಷಯದಲ್ಲಿ.”

“ಇಲ್ಲ‌.ನನ್ನ ಗಂಡ ಅಂಥವನಲ್ಲ. ಸತ್ಯಾಸತ್ಯಗಳನ್ನು ವಿಚಾರಿಸುತ್ತಾನೆ.”

” ವಿಚಾರಿಸುತ್ತಾನಲ್ಲ !”ವ್ಯಂಗ್ಯವಾಗಿ ಅಂದಳು ಅಹಲ್ಯೆ.

“ಎಂದರೆ  ?”

“ಎಂದರೆ….ವಿಚಾರಣೆ ಮಾಡುವುದೆಂದರೆ ಏನು ಸೀತಾ ?ಅಪನಂಬಿಕೆ ತಾನೆ.ಅದಕ್ಕಿಂತಲೂ ಯಾವುದೋ ಒಂದು ನಂಬಿಕೆಯೇ ಲೇಸಲ್ಲವೇ ?”

ಸೀತೆಗೆ ಬೇಸರವೆನಿಸಿತು.ಏನಿದು ವಿತಂಡವಾದ ?ಸತ್ಯವೆನ್ನುವುದೇ ಇಲ್ಲವೆನ್ನುತ್ತಾಳೆ.ಅದು ಯಾರಿಗೂ ತಿಳಿಯದೆನ್ನುತ್ತಾಳೆ.ತನ್ನ ಸಂಗತಿಯನ್ನಂತೂ ಹೇಳುತ್ತಿಲ್ಲ.

” ಅಂದರೆ ನಿಮ್ಮ ವಿಷಯದಲ್ಲಿ ಸತ್ಯವೇನೆಂದು ನಿಮಗೆ ಹೇಳಲಾಗುವುದಿಲ್ಲವೇ ?”

” ನಿನ್ನ ಮನಸ್ಸಿಗೆ ಯಾವುದು ಶಾಂತಿಯನ್ನು ಕೊಡುವುದೋ ಅದನ್ನೇ ಸತ್ಯ ಎಂದು ತಿಳಿದಿಕೋ.” ನಕ್ಕಳು ಅಹಲ್ಯೆ.

ಸೀತೆಯ ಮುಖ ವಿವರ್ಣಗೊಂಡಿತ್ತು. ಅಹಲ್ಯೆ ತನ್ನನ್ನು ಅವಮಾನಿಸುತ್ತಿದ್ದಾಳೆ. ಈಕೆಯ ಕುರಿತು ತಾನೆಷ್ಟು ಯೋಚಿಸಿದಳು. ಹೌದು,ರಾಮನ ಮಾತುಗಳೇ ನಿಜವಿರಬಹುದು. ಈಕೆಗೆ ಸೌಶೀಲ್ಯವಿಲ್ಲವೇನೋ.

” ನನ್ನ ಹಾಗೆ ಮಾತನಾಡುವ ಹೆಂಗಸರನ್ನು ಸಹಿಸಿಕೊಳ್ಳುವುದು ಕಷ್ಟ ಸೀತಾ ! ನಾನು ತಪ್ಪು ಮಾಡಿದೆನೆಂದು ಒಪ್ಪಿದರೆ ಸಹಿಸುತ್ತಾರೆ.
ಪಾಪಕ್ಕೆ ಪ್ರಾಯಶ್ಚಿತ್ತವಿರುತ್ತದೆ.ತಪ್ಪು ಮಾಡಲಿಲ್ಲವೆಂದು ವಾದಿಸಿದರೆ ನನ್ನ ಮೇಲೆ ಕರುಣೆ ತೋರುತ್ತಾರೆ.ಅನ್ಯಾಯವಾಗಿ ನಿಂದೆ ಹಾಕಿದ್ದಾರೆಂದು ನನ್ನ ಪಕ್ಷ  ವಹಿಸುತ್ತಾರೆ.
ಆದರೆ ನನ್ನ ತಪ್ಪೊಪ್ಪುಗಳಿಂದ   ನಿಮಗೇನು ಸಂಬಂಧ ? ಅದನ್ನು ವಿಚಾರಿಸುವ ಹಕ್ಕು,ಅಧಿಕಾರ ನಿಮಗೆ ಯಾರು ಕೊಟ್ಟಿದ್ದಾರೆಂದು ಕೇಳಿದರೆ ಯಾರೂ ಸಹಿಸುವುದಿಲ್ಲ.”

“ಆ ಅಧಿಕಾರ ಸ್ವತಃ ಗೌತಮ ಮಹರ್ಷಿಗೂ ಇಲ್ಲವೇ?” ಸೀತೆಗೆ ಅಹಲ್ಯೆಯ ತರ್ಕ ನಿಲುಕುದೆ ಕೇಳಿಬಿಟ್ಟಳು.

“ಲೋಕ ಅವರಿಗೆ ಆ ಅಧಿಕಾರವನ್ನು ಕೊಟ್ಟಿದೆ.ನಾನು ಕೊಟ್ಟಿಲ್ಲ.ನಾನು ಕೊಡುವವರೆಗೂ ಯಾರೂ ನನ್ನ ಮೇಲೆ ಅಧಿಕಾರವನ್ನು ಹೊಂದಲಾರರು.”

“ಆದರೆ ಅವರು ನಿಮ್ಮನ್ನು ಪರಿತ್ಯಜಿಸಿದ್ದರಲ್ಲವೇ !”

” ಪಾಪ!ನನ್ನನ್ನು ಕಳೆದುಕೊಂಡಿದ್ದಾರೆ.”

“ನೀವು ಮಾತ್ರ ಎಷ್ಟೋ ವರ್ಷ ಶಿಲೆಯಾಗಿ ನಿರ್ಜೀವವಾಗಿ ಬದುಕಿದ್ದೀರಂತಲ್ಲ !”

“ಹಾಗಂತ ನೀವೆಲ್ಲಾ ಅಂದುಕೊಳ್ಳುತ್ತಿದ್ದೀರಿ.ಇಷ್ಟು ವರ್ಷ ನಾನು ಈ ಲೋಕದಲ್ಲಿ ನನ್ನ ಅಸ್ತಿತ್ವವನ್ನು ಕುರಿತು ಯೋಚಿಸುತ್ತಿದ್ದೆ.ಲೋಕ ಯಾವ ನೀತಿಯ ಮೇಲೆ,ಧರ್ಮದ ಮೇಲೆ ನಡೆಯುತ್ತದೆಯೋ,ಅದಕ್ಕೆ ಮೂಲವೇನೆಂದು ಈಗ ತಿಳಿದುಕೊಂಡಿದ್ದೇನೆ.ನಾನೆಷ್ಟೋ ಜ್ಞಾನ ಸಂಪಾದಿಸಿದ್ದೇನೆ.”

“ಸತ್ಯಾಸತ್ಯಗಳು ಇಲ್ಲವೆಂದು ಹೇಳುವುದೇ ಆ ಜ್ಞಾನವಾ !”ಸೀತೆ ವ್ಯಂಗ್ಯವಾಗಿ ಅಷ್ಟೇ ಚುರುಕಾಗಿ ಕೇಳಿದಳು.

“ಸತ್ಯ ಎಂದೂ ಒಂದೇ ಥರ ಇರುವುದಿಲ್ಲವೆಂದು,ನಿರಂತರ ಬದಲಾಗುತ್ತಾ ಇರುತ್ತದೆಯೆಂದು ತಿಳಿದುಕೊಳ್ಳುವುದೇ ನಾನು ಸಂಪಾದಿಸಿದ ಜ್ಞಾನ.”

“ಸತ್ಯವಿದೆ.ಬದಲಾಗದ ಸತ್ಯವಿದೆ.ನನ್ನ ಮೇಲೆ ರಾಮನ ಪ್ರೀತಿ,ರಾಮನ ಮೇಲೆ ನನ್ನ ಪ್ರೀತಿ, ಇದು ಸತ್ಯ.ಇದರೊಳಗೆ ಅಸತ್ಯವಾವುದೂ ಇಲ್ಲ.ಇದರ ಮುಂದೆ ನೀವು ಸಂಪಾದಿಸಿದ ಜ್ಞಾನವೆಲ್ಲ ಯಾವ ಲೆಕ್ಕದ್ದು!ಒಂದಲ್ಲ ಒಂದು ದಿನ ಅದೆಲ್ಲಾ ಕೊಚ್ಚಿಹೋಗುತ್ತದೆ.” ಆವೇಶದಿಂದ ಅಂದಳು ಸೀತೆ.

“ಹಾಗಾದರೆ  ಜ್ಞಾನಕ್ಕಿರುವ  ಆ ಕೋಣವನ್ನು ಸಹ ನಾನು ಅರ್ಥ ಮಾಡಿಕೊಳ್ಳುವೆ ಸೀತಾ”.

ಸೀತೆಗೆ  ಇನ್ನು ಅಹಲ್ಯೆಯೊಡನೆ ಮಾತು ಬೆಳೆಸಲು ಮನಸ್ಸಾಗಲಿಲ್ಲ.ಯಾವುದೋ ಆವೇಶ‌‌.ಪರಿತಾಪ.ಆಕೆಗೆ ಬೇಗನೆ ರಾಮನ ಸನ್ನಿಧಿಗೆ ಹೋಗಿಬಿಡಬೇಕೆಂದೆನಿಸಿತು.

ಸೀತೆ ಎದ್ದು ನಿಂತು ಅಹಲ್ಯೆಗೆ ನಮಸ್ಕರಿಸಿದಳು.

ಅಹಲ್ಯೆ ಸೀತೆಯ ತಲೆಯ ಮೇಲೆ ಕೈಯಿಟ್ಟು,
“ಎಂದೂ ಯಾವ ವಿಚಾರಣೆಗೂ ಒಪ್ಪದಿರು ಸೀತಾ,ಅಧಿಕಾರಕ್ಕೆ ಶರಣಾಗದಿರು.”ಎಂದು ಆಶೀರ್ವಾದ ನೀಡಿದಳು.

ಸೀತೆ ಆ ಮಾತುಗಳಿಗೆ ತಡೆಯಲಾಗದೆ,ಹಿನ್ನೋಡದೆ ಸರಸರನೆ ಅಲ್ಲಿಂದ ಹೊರಟುಬಿಟ್ಟಳು.

*

ಆ ರಾತ್ರಿ ರಾಮನೊಂದಿಗೆ ಮಾಮೂಲಿ ಮಾತುಕತೆಯ ನಂತರ ಹೇಳಿದಳು

” ನಾನು ಅಹಲ್ಯೆಯನ್ನು ನೋಡಿದೆ. ”

“ಎಲ್ಲಿ ?” ರಾಮನು ಬೆಚ್ಚಿ ಕೇಳಿದನು.

“ಏಕಷ್ಟು ಅವಸರ ! ಜಲಪಾತದ ಕಡೆಗೆ ಹೋಗಿದ್ದೆ.”

“ನೀನೊಬ್ಬಳೆ ಹೋದೆಯಾ?”

“ಹೌದು.ಇಲ್ಲಿಗೆ ಬಹಳ ಸಮೀಪ.ತುಂಬಾ ಚೆನ್ನಾಗಿದೆ.”

“ಒಬ್ಬಂಟಿ ಎಲ್ಲಿಗೂ ಹೋಗದಿರು ಸೀತಾ.”

“ಆಯ್ತು ಹೋಗುವುದಿಲ್ಲ.ಆದರೆ ಅಹಲ್ಯೆಯ ಸಂಗತಿಯನ್ನು ನಿಮಗೆ ಹೇಳಬೇಕಿತ್ತು.”

ರಾಮನು ಮಾತನಾಡಲಿಲ್ಲ.

“ಆಕೆ ನೀವೇಳಿದಂತೆ ಅದ್ಭುತ ಸೌಂದರ್ಯಮೂರ್ತಿ.ಎರಡು ಕೈಜೋಡಿಸಿ ನಮಿಸಬೇಕೆನಿಸುವ ತೇಜಸ್ಸು.ಆದರೆ ಆಕೆಯ ಮಾತುಗಳಿಗೆ ಅರ್ಥವೇ ಇಲ್ಲವೆನಿಸಿತ್ತು. ಲೋಕದಲ್ಲಿ ಸತ್ಯವೆನ್ನುವುದು ಇಲ್ಲವೆಂದು, ಸತ್ಯ ನಿರಂತರ ಬದಲಾಗುತ್ತದೆಂದು ಹೀಗೆ ಏನೇನೋ ಮಾತನಾಡಿದಳು.ನನ್ನ ಮನಸ್ಸಿಗೆ ಅದಾವುದೂ ಇಂಪೆನಿಸಲಿಲ್ಲ.”

ರಾಮ ಮೌನವಾಗಿಯೇ ಇದ್ದ.

“ಏಕೆ  ಮಾತನಾಡುತ್ತಿಲ್ಲ ನೀವು ?”

” ಮಾತನಾಡಲಿಕ್ಕಾದರೂ ಏನಿದೆ ? ಅಂಥಾ ಹೆಂಗಸಿನ ಮಾತು ನಿನ್ನಂಥಾ ನಿರ್ಮಲ ಹೃದಯಿಗಳಿಗೆ,ಅಮಾಯಕ ಮನಸ್ಸುಗಳಿಗೆ ಅರ್ಥವಾಗುವುದಿಲ್ಲ. ಹೊತ್ತಾಗಿದೆ.ಇನ್ನು ಮಲಗು ಸೀತಾ.”

ಆಜ್ಞಾಪಿಸಿದಂತೆಯೇ ಎಂದು ತಾನು ನಿದ್ರೆಗೆ ಜಾರಿದ.ಸೀತೆಗೆ ರಾಮನೊಡನೆ ಅಹಲ್ಯೆ ಜೊತೆಗಿನ ಸಂಭಾಷಣೆಯನ್ನೆಲ್ಲಾ ಹೇಳಿಬಿಡಬೇಕೆಂದೆನಿಸಿತು.ಆದರೆ ಅದನ್ನೆಲ್ಲಾ ಕೇಳುವುದು ರಾಮನಿಗೆ ಇಷ್ಟವಿಲ್ಲವೆಂದು ತಿಳಿದು ಸುಮ್ಮನಾದಳು.

ಮತ್ತೆ ಮತ್ತೆ ಅಹಲ್ಯೆಯ ಮಾತುಗಳನ್ನು ನೆನೆದುಕೊಳ್ಳುತ್ತಾ,ಬೇಸರ ಪಡುತ್ತಾ, ಅಶಾಂತಿಯಿಂದ ನಿದ್ರೆಯಿಲ್ಲದ ರಾತ್ರಿಯನ್ನು ದಾಟಿದಳು ಸೀತೆ.

ಆ ಬಳಿಕ ತುಂಬಾ ವರ್ಷಗಳ ಕಾಲ ಆಕೆ  ಅಹಲ್ಯೆಯನ್ನು ಮರೆತಳೆಂದೇ ಹೇಳಬೇಕು.

*

ಆ ದಿನ ಸೀತೆಯ ಮನವು  ಆನಂದೋದ್ವೇಗಗಳಿಂದ ತುಂಬಿ ಹೋಗಿತ್ತು. ರಾವಣ ಸಂಹಾರದ ಸುದ್ದಿ  ಆಕೆಗೆ ತಲುಪಿತ್ತು. ಲಂಕೆಯಿಂದ ವಿಮುಕ್ತಿ ದೊರೆಯಿತೆಂಬ ಆನಂದದಲ್ಲಿ ಪ ತೇಲಿ ಹೋದಳು. ಅದೆಂದಿಗೆ ರಾಮನನ್ನು ನೋಡುತ್ತೇನೆ ಎಂದು ಆಕೆಯ ಹೃದಯ ಬಡಿದುಕೊಳ್ಳುತ್ತಿತ್ತು.ರಾಮನನ್ನು ನೋಡಿದ ಕೂಡಲೇ ತಾನೇನಾಗುವಳು ? ರಾಮನೇನಾಗುತ್ತಾನೆ ? ಪ್ರೀತಿದುಂಬಿದ ನೋಟ,ಪ್ರೇಮ,ಚುಂಬನ ಎಲ್ಲವೂ ದೊರೆಯುತ್ತವೆ ಮರಳಿ.ಆನಂದ ಪರ್ವಶಳಾದ ಆಕೆಯ ಕಣ್ಣುಗಳಿಂದ ಕಣ್ಣಹನಿ ಅವಿರಾಮ ಸುರಿಯುತ್ತಲಿದ್ದವು.ಲಕ್ಷ್ಮಣನನ್ನು ದೂರದಿಂದಲೇ ನೋಡಿದಾಕೆ ಕೂಡಲೇ ಮುಂದಕೆ ನಡೆದು ಬಂದಳು.

ಆಕೆಗೆ ಆಶ್ಚರ್ಯ.’ಅರೇ! ರಾವಣ ಸಂಹಾರ ಜರುಗಲಿಲ್ಲವೇ ? ಜರುಗದಿದ್ದರೆ ಲಕ್ಷ್ಮಣನೇಕೆ ಬಂದನಿಲ್ಲಿಗೆ ? ಬಂದವನ  ಮುಖದೊಳಗೆ ಸಂತಸವಿಲ್ಲವೇಕೆ ? ವಿಜಯ ಗರ್ವದಿಂದ ತಲೆಯೆತ್ತಿ ಬರದೆ ಅಪರಾಧಿಯಂತೆ ತಲೆ ತಗ್ಗಿಸಿಕೊಂಡಿದ್ದಾನೇತಕೆ ?’

“ಲಕ್ಷ್ಮಣ!ಹೇಗಿರುವಿ ?” ಸೀತೆಯೇ ಮೊದಲು ಮಾತನಾಡಿಸಿದಳು.ಲಕ್ಷ್ಮಣ ಮತ್ತಷ್ಟು ತಲೆತಗ್ಗಿಸಿದ.

” ಶ್ರೀರಾಮಚಂದ್ರ-ನಿಮ್ಮ ಅಣ್ಣನವರು
ಕುಶಲ ತಾನೆ ?” ಆ ವಿಷಯದೊಳಗೆ ಸೀತೆಗೆ ಯಾವ ಸಂದೇಹವೂ ಇರಲಿಲ್ಲವಾದರೂ ಮೈದುನನ ಮುಖ ನೋಡಿದ ಬಳಿಕ ಆಕೆಗೆ ಆ ಮಾತು ಬಿಟ್ಟು ಮತ್ತಾವ ಮಾತೂ ಬರಲಿಲ್ಲ.

“ಕುಶಲವೇ ಅತ್ತಿಗೆ.”

” ಮತ್ತೆ ಹಾಗೇಕೆ ಇರುವಿ ಲಕ್ಷ್ಮಣ ? ಸಂತಸವೇ ಕಾಣುತ್ತಿಲ್ಲವೇಕೆ ನಿನ್ನ ಮುಖದೊಳಗೆ ?ನನ್ನನ್ನು ಕರೆತರಲೆಂದೆ ಕಳಿಸಿದರಲ್ಲವೇ ನಿಮ್ಮ ಅಣ್ಣ ನಿನ್ನನಿಲ್ಲಿಗೆ.ನಡೆ ಹೋಗೋಣ.”

” ಅತ್ತಿಗೆ,ಒಂದು ವಿಷಯ ಹೇಳಬೇಕಿತ್ತು ನಿಮ್ಮ ಬಳಿ.”

ಸೀತೆಗೆ ಮಂಕು ಹಿಡಿದಂತಾಯಿತು.
ಒಂದು ಕಡೆ ವಿಜಯೋತ್ಸವದಿಂದ ವಾನರ ಸೈನ್ಯೆ ಮಾಡುತ್ತಿರುವ ಕೋಲಾಹಲವು ಅಶೋಕ ವನಕ್ಕೂ ಕೇಳುತ್ತಿದೆ.ಆದರೆ ಲಕ್ಷ್ಮಣನು ಪೂರ್ತಿ ಪರಾಜಯಪಾಲಾದವನಂತೆ ಇದ್ದಾನೇತಕೆ?

“ಅಣ್ಣ ಶ್ರೀರಾಮಚಂದ್ರನು ನಿಮ್ಮ ಶೀಲಪರೀಕ್ಷೆ ಕೋರುತ್ತಿದ್ದಾನೆ ತಾಯಿ.”

ಸೀತೆ ಸರ್ರನೆ ಹಿಂದಿರುಗಿದಳು.ಆ ಮಾತುಗಳು ಆಕೆಯ ಮನದೊಳಗೆ ಇಂಗುವುದರೊಳಗೆ ಆಕೆ ನಿಲ್ಲಲಾಗದೆ ನೆಲಕ್ಕೆ ಕುಸಿದಳು.

“ಶ್ರೀರಾಮಚಂದ್ರನಿಗೆ ಯಾವ ಸಂದೇಹವೂ ಇಲ್ಲ ಅತ್ತಿಗೆ.ಕೇವಲ ಪ್ರಜೆಗಳಿಗಾಗಿ ಈ ಆಲೋಚನೆ.ಪರೀಕ್ಷೆಯಲ್ಲಿ ನಿಂತು ಗೆದ್ದ ನಿಮ್ಮ ಶೌಶೀಲ್ಯವನ್ನು ಎಲ್ಲರೂ ಹಾಡಿ ಹೊಗಳುತ್ತಾರೆ.ರಾಮಚಂದ್ರನು ನಿಮ್ಮೊಡನೆ ಈ ಮಾತು ಹೇಳಿ ಬರಲು ನನ್ನ ಕಳಿಸಿದನು ತಾಯಿ.”

ಸೀತೆಗೆ ಮಿಂಚಿನಂತೆ ಅಹಲ್ಯೆಯ ರೂಪ ಕಣ್ಣ ಮುಂದೆ ಸುಳಿಯಿತು‌.

‘ವಿಚಾರಣೆ ಮಾಡುವುದೆಂದರೆ ಏನು ಸೀತಾ ?ಅಪನಂಬಿಕೆ ತಾನೆ.ಅದಕ್ಕಿಂತಲೂ ಯಾವುದೋ ಒಂದು ನಂಬಿಕೆಯೇ ಲೇಸಲ್ಲವೇ ?’

‘ಗಂಡಸರೆಲ್ಲಾ ಒಂದೇ ಸೀತಾ’

ಅಹಲ್ಯೆಗೆ ಇದೆಲ್ಲ ಹೀಗೆ ನಡೆಯುತ್ತದೆ ಎಂದು ಮುಂಚೆಯೇ ಗೊತ್ತಿತ್ತೇ ? ರಾಮನೀಗ ತನ್ನ ಶೀಲ ಪರೀಕ್ಷೆ  ಕೋರಿದ್ದಾನೆ.
ಇದಕ್ಕಿಂತಲೂ ಸಾವೇ ಮೇಲಲ್ಲವೇ ! ತನ್ನ ಕರ್ಮಕ್ಕೆ ತನ್ನನ್ನು ಬಿಡುವುದು ಲೇಸಲ್ಲವೇ! ಏಕೆ ತನಗೆ ಈ ಅವಮಾನ ?ಈ ಎಲ್ಲಾ ಯುದ್ದವೂ ಈ ಕಾರಣಕ್ಕಾಗಿಯೇ ?

ಯುದ್ಧ ಏನಿದ್ದರೂ ಪ್ರತಾಪಗಳ ನಿರೂಪಣೆಗೆ. ರಾಮ ತನ್ನ ಪ್ರತಾಪವನ್ನು ನಿರೂಪಿಸಿಕೊಂಡ.ಈಗ ತನ್ನ ಹೆಂಡತಿಯ ಶೀಲ ನಿರೂಪಣೆಗೆ ಕಾಯುತ್ತಿದ್ದಾನೆ.ಅಹಲ್ಯೆ ಹೇಳಿದ್ದ ಆ ‘ಅಪನಂಬಿಕೆ’ಯೇ ಇದು ? ಅದಕ್ಕಿಂತಲೂ  ತನ್ನನ್ನು ನಂಬಿ ಕೈಹಿಡಿದುಕೊಳ್ಳುವುದೋ, ನಂಬದೇ ಪರಿತ್ಯಜಿಸುವುದೋ ಲೇಸಲ್ಲವೇ ! ಏನು ಮಾಡವುದೀಗ ? ಸೀತೆಯ ಮನಸ್ಸು ಅಗ್ನಿಪರ್ವತವಾಯಿತು.

” ಅಣ್ಣನನ್ನು ಅಪಾರ್ಥ ಮಾಡಿಕೊಳ್ಳದಿರಿ ತಾಯಿ.ಇಂದಿಲ್ಲ ನಾಳೆ ನಿಮ್ಮ ಕುರಿತು ಯಾರೂ ಏನೂ ಆಡಿಕೊಳ್ಳಬಾರದೆಂಬ ಎಚ್ಚರವಷ್ಟೇ ಇದು. ಅಯೋಧ್ಯಾ ನಗರಕ್ಕೆ ನೀವು ಅಗ್ನಿಯಂತೆ
ನಡೆದು ಹೋಗಬೇಕಮ್ಮಾ .ಅಣ್ಣ ಎಷ್ಟು ದುಃಖಿಸುತ್ತಿದ್ದಾನೋ,ವಿಲಪಿಸುತ್ತಿ ದ್ದಾನೋ
ನೀವು ಊಹಿಸಲಾರಿರಿ.ಅಣ್ಣ ನಿಸ್ಸಹಾಯಿ ತಾಯಿ.”

ಲಕ್ಷ್ಮಣನು ರಾಮನ ದುಃಖವನ್ನು ವರ್ಣಿಸುತ್ತಾ ಹೋದಂತೆ ಸೀತೆಯ ಹೃದಯದೊಳಗೆ ಬಿಸುಪು ತಗ್ಗತೊಡಗಿತು.

ರಾಮನಿಗೆ ಯಾವ ಸಂದೇಹವೂ ಇಲ್ಲ. ಸತ್ಯವೇನೆಂದು ಗೊತ್ತು‌.ತನ್ನ ಮೇಲೆ ಯಾವ ನಿಂದೆಯೂ ಬೀಳದಂತೆ ತನಗಾಗಿಯೇ ಇಷ್ಟು ದುಃಖಿಸುತ್ತಿದ್ದಾನೆ.ಇದಕ್ಕೆ ತಾನೇಗೆ ಸ್ಪಂದಿಸುತ್ತೇನೋ ಎಂದು ಕೊರಗುತ್ತಿದ್ದಾನೆ. ತಮ್ಮಿಬ್ಬರ ನಡುವೆ ಇದು ಸೃಷ್ಟಿಸಬಲ್ಲ
ಅಗಾಧವನ್ನು ನೆನೆದುಕೊಂಡು ಕಂಪಿಸುತ್ತಿದ್ದಾನೆ.

ರಾಮನನ್ನು ಸಂತೈಸಲು ಸಿದ್ಧಲಾದಳು ಸೀತೆ.

ನಿಜ‌,ರಾಮನು ನಿಸ್ಸಹಾಯಿ,ಬಲಹೀನ.
ಆದರೆ ಯಾರ ಮುಂದೆ ? ರಾವಣನ ಮುಂದೆ ಅಲ್ಲ.ಲೋಕದ ಮುಂದೆ.ಲೋಕ ಎಂದರೆ ಅದು ಹೇಳುವ ನೀತಿ ಸೂತ್ರಗಳು. ಧರ್ಮಶಾಸ್ತ್ರಗಳು.ಇವುಗಳ ಮುಂದೆ.ಮತ್ತೊಠಮ್ಮೆ ಅಹಲ್ಯೆಯ ಮಾತು ನೆನಪಾದವು ಸೀತೆಗೆ.

‘ ಮಡಿ,ಮೈಲಿಗೆ, ಪವಿತ್ರ,ಅಪವಿತ್ರ,
ಶೀಲ,ಪತನ ಈ ಪದಗಳನ್ನು ಬ್ರಾಹ್ಮಣ ಪುರುಷರು ಎಷ್ಟು ಬಲವಾಗಿ ಸೃಷ್ಟಿಸಿದ್ದಾರೆಂದರೆ…..’

ಇಲ್ಲ ,ಆ ಬಲದ ಮುಂದೆ ರಾಮಬಾಣ ಗೆಲ್ಲುತ್ತದೆ. ಬ್ರಹ್ಮಾಸ್ತ್ರ ಬಲಹೀನವಾಗುತ್ತದೆ‌.ಹೇಗಾದರೂ ರಾಮನನ್ನು ಕಾಪಾಡಬೇಕು.ಲೋಕದಿಂದ ರಕ್ಷಿಸಿಕೊಳ್ಳಬೇಕು.ಆತನ ಕಣ್ಣೀರೊರೆಸಬೇಕು. ಬಲವನ್ನು ನೀಡಬೇಕು.ಹೌದು! ಇದನ್ನು ತಾನೊಬ್ಬಳು ಬಿಟ್ಟು ಮತ್ತಾರೂ ಮಾಡಲಾರರು.

‘ಇಲ್ಲ ಅಹಲ್ಯ ! ರಾಮನಿಗೆ ಅಪನಂಬಿಕೆ ಇಲ್ಲ.ನನ್ನ ರಾಮನು ಎಲ್ಲ ಗಂಡಸರಂತಲ್ಲ. ಇದು ಸತ್ಯ.ನಾನು ನಿನಗೆ ನಿರೂಪಿಸದಿರಬಹದು.ಲೋಕ ಇದನ್ನು ನಂಬಲಾರದೆಯೂ ಇರಬಹುದು.ಆದರೆ ನನಗೆ ಮಾತ್ರ ಇದು ಸತ್ಯ .

ಅಹಲ್ಯೆ ಈ ಮಾತೂ ಸಹ ಅಂದಳಲ್ಲವೇ-

‘ಸತ್ಯದ ಕುರಿತು ಯಾರ ನಿಲುವು ಅವರದ್ದೇ, ಸತ್ಯಾಸತ್ಯಗಳನ್ನು ನಿರ್ಣಯಿಸಬಲ್ಲ ಶಕ್ತಿ ಈ ಲೋಕದಲ್ಲಿ ಯಾರಿಗಾದರೂ ಇದೆಯಾ?’

ಅಹಲ್ಯ-ಏಕೆ ಹೀಗೆ ಮಾತನಾಡಿದೆ ನೀನು ?ನಿನ್ನ ಮಾತುಗಳು ನನಗೀಗ ಒಂದು ರೀತಿಯಲ್ಲಿ ಅರ್ಥವಾಗುತ್ತಿವೆ.ಅದು ಸರಿಯಾದ ಅರ್ಥವೇ ? ಯಾರು ಹೇಳಬೇಕು  ಈಗ ಅದನ್ನು ?

ಸಿಡಿಯುತ್ತಿದ್ದಂತಹ ಚೆಂಡೊಂಡನ್ನು ಗಟ್ಟಿಯಾಗಿ ಹಿಡಿದುಕೊಂಡಂತೆ ಸೀತೆ ತಲೆಗೆ ಕೈಹೊತ್ತು ಕೂತಳು.

ಆ ಯೋಚನೆಗಳು ಆಮೇಲೆ.ಈಗ ರಾಮನನ್ನು ನೋಡಬೇಕು‌.ತಾನು ಧೈರ್ಯದಿಂದ ಆ ಪರೀಕ್ಷೆಯನ್ನು ಎದುರಿಸಬೇಕು. ಸೀತೆ ಎದ್ದು ನಿಂತಳು.ಸೀರೆ ಸೆರಗಿನಿಂದ ಮುಖವನ್ನು ಶುಭ್ರವಾಗಿ ಒರೆಸಿಕೊಂಡಳು.

“ನಡಿ ಲಕ್ಷ್ಮಣ,ನಿಮ್ಮ ಅಣ್ಣನವರ ಬಳಿ ಹೋಗೋಣ.ಆ ಪರೀಕ್ಷೆಯೇನೋ  ನೋಡುತ್ತೇನೆ.”

ಸೀತೆಯ ಬಾಯಿಂದ ಬಲವಾಗಿ,ಅಷ್ಟೇ ಧೈರ್ಯವಾಗಿ ವಿಶ್ವಾಸ ಪೂರ್ವಕ ನಿರ್ಣಯದಂತೆ ಹೊರಬಂದ ಆ ಮಾತುಗಳನ್ನು ಕೇಳಿದ ಲಕ್ಷ್ಮಣನು ಧೈರ್ಯದಿಂದ ತಲೆ ಎತ್ತಿದ.

ಸೀತೆ ಭೂಪುತ್ರಿ ಎಂದು ಆತನ ಕಿವಿಯಲ್ಲಿ ಯಾರೋ ಪಿಸು ನುಡಿದಂತಾಯಿತು.

*

ಅಯೋಧ್ಯೆಗೆ ಬಂದ ಮೇಲೂ ಸಹ ಸೀತೆ ಅಹಲ್ಯೆಯನ್ನು ಮರೆಯದಾದಳು. ಅಂತಃಪುರದಲ್ಲಿ ಹೆಜ್ಜೆ ಇಟ್ಟಿದ್ದೇ ತಡ,ಆಕೆಗೆ ಏನೋ ಸಂಕೋಚ.ಮೂವರು ಅತ್ತೆಯಂದಿರಲ್ಲಿ ಯಾರೇ ಈ ಶೀಲ ಪರೀಕ್ಷೆಯ ಕುರಿತು ಪ್ರಸ್ತಾಪ ಮಾಡಿದರೆ ತಾನು ಸಹಿಸಬಲ್ಲಳೇ ?

ಕೌಸಲ್ಯೆ ಸೀತೆಯನ್ನು ಎದೆಗಪ್ಪಿಕೊಂಡು   ‘ನನ್ನ ಸೊಸೆ ಶೀಲವಂತೆ ‘ಎಂದು ಕಣ್ಣೀರಿಟ್ಟಾಗ ಸೀತೆಯ ಹೃದಯದಲ್ಲಿ   ಕಬ್ಬಿಣದಂತಹ ಗಟ್ಟಿತನವಾವುದೊ ಒಳಸುಳಿದಂತಾಯಿತು.ತನ್ನ ಸೊಸೆ ಶೀಲವಂತೆಯೋ ಇಲ್ಲವೋ ಎನ್ನುವ ಸಂದೇಹ ಮೂಡಿ  ಕೊನೆಗೆ ತಾನು ಶೀಲವಂತೆ ಎಂದು ನಿರ್ಧರಿಸಿದ್ದಾಳೆಯೇ ?ಏಕೆಂದರೆ ಈ ಮುಂಚೆ ಅಹಲ್ಯೆಯ ಬಗ್ಗೆಯೂ ಸಹ ಆಕೆ ಹೀಗೇ ಅಂದುಕೊಂಡಿದ್ದಳಲ್ಲವೇ !

‘ ನಿನ್ನ ಮನಸ್ಸಿಗೆ ಯಾವುದು ಸಂತಸವನ್ನು ಕೊಡುವುದೋ ಅದೇ ಸತ್ಯ, ಸೀತಾ’ ಎಂದಿದ್ದಳು ಅಹಲ್ಯೆ.ಈಗ ಅತ್ತೆಯ ನಿಲುವೂ ಸಹ ಇದೇ ಆಗಿರಬಹುದೇ ? ಇಲ್ಲ ಆಕೆಯದು ಸೊಸೆಯ ಮೇಲಿನ ದೃಡ ನಂಬಿಕೆಯೋ ?

ಇವೆಲ್ಲಾ ಉತ್ತರವಿರದ ಪ್ರಶ್ನೆಗಳು. ಯಾರನ್ನೂ ಕೇಳಲಾಗದು.ಕೇಳಿದರೂ ಈ ವಿಷಯವಾಗಿ ಯಾರೂ ನೇರ ಮಾತನಾಡಲಾರರು.ರಾಮನಾದರೂ ಸಹ ಏನೂ ನಡೆಯಲಿಲ್ಲವೆಂಬಂತೆ ವರ್ತಿಸುತ್ತಿದ್ದಾನೆ.ತನ್ನ ಪ್ರೀತಿಯಲ್ಲಿ ರವಷ್ಟು  ವ್ಯತ್ಯಾಸವನ್ನೂ ತೋರದ ಹಾಗೆ. ಆದರೆ ಅಹಲ್ಯೆ ಏನೆಂದುಕೊಂಡಾಳು ತನ್ನ ಬಗ್ಗೆ ? ನಗುವಳೇ ?  ‘ಎಂದೂ ಯಾವ ವಿಚಾರಣೆಗೂ ಒಪ್ಪದಿರು ಸೀತಾ ‘ ಎಂದಿದ್ದಳಾಕೆ.ಆದರೆ ತಾನೀಗ ಒಪ್ಪಿದ್ದಾಳೆ. ಅದು ತನಗಾಗಿ ಅಲ್ಲ ರಾಮನಿಗಾಗಿ ಎಂದರೆ ಅಹಲ್ಯೆ ನಂಬುವಳೇ ? ಅರ್ಥ ಮಾಡಿಕೊಳ್ಳುವಳೇ ?ಇಲ್ಲ, ಅವಳು ಜ್ಞಾನಿ.ಖಂಡಿತ ಅರ್ಥ ಮಾಡಿಕೊಳ್ಳುತ್ತಾಳೆ.

ಅಹಲ್ಯೆಯನ್ನು ಹೇಗಾದರೂ ಮಾಡಿ ಭೇಟಿಯಾಗಬೇಕೆಂಬ ಆಸೆ ಸೀತೆಗೆ ದಿನೇ ದಿನೇ ಹೆಚ್ಚುತ್ತಿತ್ತು.ಈ ವಿಷಯದ ಕುರಿತು ತಾನು ಅಹಲ್ಯೆಯೊಡನೆ ಮಾತನಾಡಬಲ್ಲಷ್ಟು ಮತ್ತಾರೊಡನೆಯೂ ಮಾತನಾಡಲಾರಳು. ಮಾತನಾಡದೇ ಇದ್ದರೆ ತನ್ನ ಮನವು ಮತ್ತಷ್ಟು ಕಲ್ಲಾಗುವದರಲ್ಲಿ ಅನುಮಾನವಿಲ್ಲ.ಆಕೆ ಎಷ್ಟು ದಟ್ಟವಾಗಿ ಸೀತೆಯನ್ನು ಆವರಿಸಿಬಿಟ್ಟಿದ್ದಳೆಂದರೆ ತಾನು ಬಸುರಿ ಎಂದು ತಿಳಿದು ಅಂತಪುರವೆಲ್ಲ ಸಂತಸದಲ್ಲಿ ಮುಳುಗಿದ್ದ  ದಿನವೂ ಸಹ ಸೀತೆ ಅಹಲ್ಯೆಯನ್ನು ನೆನೆಯುತ್ತಲೇ ಕಾಲಕಳೆದಳು.

“ಬಸುರಿಯಾದವರಿಗೆ ಅದ್ಯಾವುವೋ ಆಸೆ ಇರುತ್ತವಂತೆ.ಅವನ್ನು ತೀರಿಸಬೇಕಂತೆ. ಅಮ್ಮ ನಿನ್ನ ಮನದೊಳಗಿನ ಆಸೆಯೇನೆಂದು ತಿಳಿದುಕೊಳ್ಳಲು ಮತ್ತೆ ಮತ್ತೆ ಹೇಳಿ ಕಳುಹಿಸಿದಳು, ಸೀತಾ ! “.

ರಾಮನಿಗೆ ತನ್ನ ಮನದೊಳಗಿನ ಆಸೆ,ಅಹಲ್ಯೆಯನ್ನು ಭೆಟ್ಟಿಯಾಗಿ ಮಾತನಾಡಿಸಬೇಕೆನ್ನುವ ಆಸೆಯ ಬಗ್ಗೆ  ಹೇಳಲೆತ್ನಿಸಿ ಸುಮ್ಮನಾದಳು ಸೀತೆ.ಹೇಳಿದರೆ ರಾಮನು ಖಂಡಿತ ಅದನ್ನು ಮೆಚ್ಚಲಾರ,ಆತನಿಗೆ ನೋವಾದೀತು. ಆದರೆ ಈ ಆಸೆ ಈಡೇರದಿದ್ದರೆ ತನ್ನ ಮನಸ್ಸಿಗೂ ಮತ್ತಿದರ ಪರಿಣಾಮದಿಂದ ತನ್ನ ಗರ್ಭಸ್ಥ ಶಿಶುವಿಗೂ ಒಳಿತಲ್ಲವೆಂದುಕೊಂಡಳು ಸೀತೆ.

“ನನಗೆ ಅರಣ್ಯ ವಿಹಾರದ ಬಗ್ಗೆ ಮನಸ್ಸಾಗುತ್ತಿದೆ ರಾಮಾ. ನಾವಿಬ್ಬರೂ ಕೂಡಿ ಈ ಮುಂಚೆ ನೋಡಿದ ಮುನಿಯಾಶ್ರಮಗಳನ್ನು , ಆ ನದೀ ತೀರಗಳನ್ನು, ಆ ಕಾಡ ಸೌಂದರ್ಯಗಳನ್ನೂ  ಮತ್ತೊಮ್ಮೆ ನೋಡಬೇಕೆನಿಸುತ್ತದೆ.”

” ಆಗಲಿ,ಅದೇನಂತಹ ಹಿರಿದಾಸೆ ! ಖಂಡಿತ ಹೋಗೋಣ “.

ಸೀತೆಗೆ ಹೇಳತೀರದ ಉದ್ವೇಗ , ಜೊತೆಗೆ ಭಯ. ತಾನೇಕೆ ಹೀಗೆ ಮಾಡುತ್ತಿದ್ದಾಳೆ? ಅಹಲ್ಯೆಯೊಡನೆ ಮಾತನಾಡಿದರೆ ನನ್ನ ಅಶಾಂತಿ ಇನ್ನೂ ಹೆಚ್ಚುತ್ತದೆ ವಿನಃ  ತಗ್ಗುವುದೇ ? ತನ್ನ ಕೇಡಿಗೆ ತಾನೇ ದಾರಿಮಾಡಿಕೊಳ್ಳುತ್ತಿದ್ದಾಳೆಯೇ ? ಇಲ್ಲ. ಈಗ ತನಗೆ ಅಹಲ್ಯೆಯ ಮಾತುಗಳಿಂದ ಬೇಸರಗೊಳ್ಳದೆ ಇರುವಂತಹ ಅನುಭವ ಸಿದ್ದಿಸಿದೆ. ಎಂಥಾ ಅನುಭವ ! ಆಳವಾದ ಇಂಗಿತದಲಿ ಆಕೆಯಾಡುವ ಮಾತುಗಳನ್ನು ಕಿವಿದುಂಬಿಕೊಂಡು ಆ ಕುರಿತು ಯೋಚಿಸದ ವಿನಃ ಪರಿಪೂರ್ಣ ನೆಮ್ಮದಿ ದೊರೆಯುವುದೇಯಿಲ್ಲ ಅನ್ನುವಷ್ಟು . ತನ್ನ ಮನಸ್ಸಿಗೆ ಇಂಥಾ ಪ್ರಶಾಂತತೆ ಕೊಡುವ ಶಕ್ತಿ ಕೇವಲ ಅಹಲ್ಯೆಗೆ ಬಿಟ್ಟು ಮತ್ತಾರಿಗಿದೆ !.

ರಾಮನೊಡಗೂಡಿ ಹೋದರೂ, ಸರಿ-ಸಮಯ ನೋಡಿಕೊಂಡು ತಾನೊಬ್ಬಳೇ ಹೋಗಿ ಅಹಲ್ಯೆಯನ್ನು ಭೇಟಿಯಾಗಬಹುದು.
ಈ ಕುರಿತು ಯೋಚಿಸುತ್ತಿರಲು ಸೀತೆಯ ಮನದೊಳಗೆ ಸಂತಸ ತುಂಬಿಕೊಳ್ಳಲಾರಂಭಿಸಿತು.ತನ್ನ ಪ್ರೀತಿಯ ಗೆಳತಿಯನ್ನು ಭೇಟಿಯಾಗುತ್ತಿರುವೆನೆಂಬ ಕುತೂಹಲದಿಂದ, ಸಂತಸದಿಂದ ತುಂಬಿ ತುಳುಕುತ್ತಿರುವ ಸೀತೆಯ ಮುಖವನ್ನು ನೋಡಿ ರಾಮನೂ ಖುಷಿಗೊಂಡ.

ಅರಣ್ಯ ವಿಹಾರದ ಬಳಿಕ ಎಲ್ಲ ಸರಿ ಹೋಗುತ್ತದೆ.ಸೀತೆ ಲಂಕೆಯಿಂದಲ್ಲದೆ ನೇರವಾಗಿ ಅರಣ್ಯದಿಂದಲೇ ಅಯೋಧ್ಯೆಗೆ ಬಂದರೆ ಒಳಿತಿರುತ್ತಿತ್ತು.ಆದರೆ ಹಾಗೆ ನಡೆಯಲಿಲ್ಲ.ಮತ್ತೆ ಈಗ ಆ ಅವಕಾಶ ಬಂದಿದೆ .ಅರಣ್ಯದಿಂದ ಬಂದ ಸೀತೆ ತನಗೆ ವಾರಸುದಾರನನ್ನು ಕೊಡುತ್ತಾಳೆ.ಆದ್ದರಿಂದ ಎಲ್ಲ ಬದಲಾಗುತ್ತದೆ .ಸೀತೆಗೂ ತನಗೂ ಮಧ್ಯೆ ಏರ್ಪಟ್ಟ ತೆಳ್ಳನೆಯ ಪರದೆ ಕಳಚುತ್ತದೆ .

ಹೀಗೆ ಏನೋನೋ ಯೋಚಿಸುತ್ತಾ ರಾಮನು ಆ ರಾತ್ರಿ ಅರಣ್ಯ ವಾಸದಲ್ಲಿ ಸೀತೆಯ ಸನಿಹವೇ ನಿದ್ರಿಸಿದನೇನೋ  ಎಂಬಂತಹ ನಿಶ್ಚಿಂತೆಯಿಂದ ನಿದ್ರೆಹೋದ.

*
ರಾಮನು ತನ್ನೊಂದಿಗೆ ಅರಣ್ಯ ವಿಹಾರಕ್ಕೆ ಬರುವುದಿಲ್ಲವೆಂದು ತಿಳಿದು ಸೀತೆ ಮತ್ತಷ್ಟು ಹಗುರವಾದಳು.ಇನ್ನು ಅಹಲ್ಯೆಯೊಡನೆ ಎಷ್ಟು ಸಮಯವಾದರೂ ಕಳೆಯಬಹುದು, ಮನಸನ್ನೆಲ್ಲಾ ತೊಳೆದುಕೊಂಡು ಬಿಡಬಹುದು.ಹೀಗಂದುಕೊಳ್ಳುತ್ತಾ ಸಂತಸದಿಂದ ರಥವೇರುತ್ತಿದ್ದಾಕೆ ಲಕ್ಷ್ಮಣನ ಮುಖವನ್ನು ನೋಡಿ ಗಾಬರಿಗೊಂಡಳು.

“ಲಕ್ಷ್ಮಣಾ ! ಆರೋಗ್ಯ ಸರಿಯಿಲ್ಲವೇ ? ನೀನೇಕೆ ಬಂದೆ ? ಶತ್ರುಜ್ಞನಿಗಾದರೂ ಈ ಕೆಲಸ ಒಪ್ಪಿಸಬೇಕಿತ್ತಲ್ಲವೇ ”

ಲಕ್ಷ್ಮಣನು ಮಾತನಾಡದೆ ರಥವೇರಿ ಕುದುರೆಯನ್ನು ಅಣಿಗೊಳಿಸಿದನು.ಸೀತೆ ತಾನು ಹೋಗಲಿಚ್ಚಿಸಿದ ಜಲಪಾತದೆಡೆಗಿನ ಹಾದಿಗುರುತುಗಳನ್ನು ಹೇಳುತ್ತಲಿದ್ದಳು.ಆದರೆ ಲಕ್ಷ್ಮಣನು ತುಂಬಾ ಈಚೆಯೇ ,ಕಾಡಿನ್ನೂ ದಟ್ಟವಾಗುವ ಮುನ್ನವೇ ರಥವನ್ನು ನಿಲ್ಲಿಸಿಬಿಟ್ಟ.

*

ತುಂಬು ಬಸುರಿ ಸೀತೆಯನ್ನು ವಾಲ್ಮೀಕಿಯ ಆದೇಶದ  ಅನುಗುಣವಾಗಿ ಆಶ್ರಮವಾಸಿಗಳೆಲ್ಲಾ ಜಾಗುರುಕವಾಗಿ  ನೋಡಿಕೊಳ್ಳುತ್ತಿದ್ದಾರೆ .ಸೀತೆ ಹೆಪ್ಪುಗಟ್ಟಿದ ಗಂಗಾ ನದಿಯಂತ್ತಿದ್ದಾಳೆ . ವಾಲ್ಮೀಕಿ ಸೀತೆಯನ್ನು ನೋಡಿ ಯೋಚಿಸುತ್ತಿದ್ದಾನೆ, ‘ಏನು ಮಾಡಿದರೆ ಈಕೆಯ ಸುಲಭ ಪ್ರಸವವಾದೀತು ? ‘

” ನಿನಗೆ ಬೇಕೆನಿಸಿದ್ದಾವುದಾದರೂ ಇದ್ದರೆ ಸಂದೇಹಗೊಳ್ಳದೆ ಕೇಳು ತಾಯಿ ” ಎಂದನು ವಾಲ್ಮೀಕಿ.

“ನಾನು ಅಹಲ್ಯೆಯನ್ನು ನೋಡ ಬಯಸಿದ್ದೇನೆ ” ನೇರವಾಗಿ ವಾಲ್ಮೀಕಿಯ ಮುಖವನ್ನೇ ನೋಡುತ್ತಾ ಕೇಳಿದಳು ಸೀತೆ.

ವಾಲ್ಮೀಕಿಗೆ ಒಂದು ಕ್ಷಣ ಗಲಿಬಲಿಯೆನಸಿ ಅಷ್ಟರಲ್ಲೆ ಅದರಿಂದ ಹೊರಗಾಗಿ ” ಆಗಲಿ ಸೀತಾ, ನೋಡುವಿಯಂತೆ .ಆಕೆ ನಿನಗೆ ನೆಮ್ಮದಿಯನ್ನು ಕೊಡಬಲ್ಲ ಸಮರ್ಥಳು.ಖಂಡಿತ ಕರೆಸುತ್ತೇನೆ .” ಎಂದು ಮಾತುಕೊಟ್ಟ.

ಎರಡು ದಿನಗಳ ಕಾಲ ಸೀತೆ ಮೈಯೆಲ್ಲಾ ಕಣ್ಣಾಗಿ ಕಾದು  ಕುಳಿತ ಬಳಿಕ  ವಾಲ್ಮೀಕಿಯ ಆಶ್ರಮಕ್ಕೆ ಬಂದಳು ಅಹಲ್ಯೆ.

“ಚೆನ್ನಾಗಿರುವೆಯಾ ಸೀತಾ ?”

ಪಕ್ಕದಲ್ಲಿಯೇ ಕುಳಿತು ಸೀತೆಯ ಕೈ ಹಿಡಿದು ಪ್ರೀತಿಯಿಂದ ಕೇಳಿದಳು ಅಹಲ್ಯೆ. ಸೀತೆ ಆಕೆಯ ಮಡಿಲಲ್ಲಿ ತಲೆಯಿಟ್ಟು ಬಿಕ್ಕಿ ಬಿಕ್ಕಿ ಅಳತೊಡಗಿದಳು  ಆ ಒಂದೇ ಪ್ರೀತಿಯ ಮಾತಿಗೆ.

“ಸುಮ್ಮನಾಗಮ್ಮ.ಈ ಸಂದರ್ಭದಲ್ಲಿ ಅಷ್ಟು ದುಃಖ ನಿನಗೆ ತರವಲ್ಲ “.

ಸೀತೆಯ ಬೆನ್ನು ಸವರುತ್ತಿದ್ದ ಅಹಲ್ಯೆಯ ಕಣ್ಣಲ್ಲೂ ನೀರು ಉಕ್ಕತೊಡಗಿತು.

ಸೀತೆ ಅತ್ತೂ ಅತ್ತೂ ಆ ಬಳಿಕ-

“ನನಗೀಗ ತುಂಬಾ ಹಾಯೆಸುತ್ತಿದೆ ಅಕ್ಕಾ .ರಾವಣ ಸಂಹಾರವಾದಾಗಿನಿದಂದ ನನ್ನ ಮನಸ್ಸು  ಹೆಪ್ಪುಗಟ್ಟುತ್ತಲಿತ್ತು .ನಿನ್ನನ್ನು ನೋಡಿದ ಕೂಡಲೇ, ನಿನ್ನ ಸ್ನೇಹ ಸ್ಪರ್ಶದಿಂದ ಅದೀಗ ಕರಗಿಬಿಟ್ಟಿದೆ.ಈಗದು ಹಿಂದಿನಂತೆ ಹಗುರವಾಗಿದೆ. “ಎಂದಳು.

ತುಂಬಾ ಹೊತ್ತು ಇಬ್ಬರು ಮೌನದಲ್ಲಿಯೇ
ಮಾತನಾಡಿಕೊಂಡರು.

“ಸತ್ಯ ಸತ್ಯಗಳ ಕುರಿತು ನಿನ್ನ ಮಾತಿನ ಇಂಗಿತ ಈಗ ಅರ್ಥವಾಯಿತಕ್ಕಾ”.

“ಜ್ಞಾನ ಸಂಪಾದನೆಗೆ ಅನುಭವವನ್ನು ಮೀರಿದ  ಹಾದಿ ಬೇರೆ ಇಲ್ಲ ಸೀತಾ”.

“ಅಕ್ಕಾ,ನಾನು ವಿಚಾರಣೆಗೆ ಒಪ್ಪಿಕೊಂಡಿದ್ದು ಕೇವಲ ರಾಮನಿಗಾಗಿಯೇ.ನನಗಾಗಿ ಅಲ್ಲ”

“ಅದು ನೀನು ಹೇಳಬೇಕೆ! ನನಗೆ ತಿಳಿಯದೇ !”

” ಆದರಿದು ಎಂದಿಗೂ ಹೀಗೆ ಕಾಡುತ್ತಲೇ ಇರುವುದಾ ಅಕ್ಕಾ ?

” ರಾಮನಿಗಾಗಿ ಅಲ್ಲದೆ ನಿನಗಾಗಿ ನೀನು ನಿರ್ಧಾರ ತೆಗೆದುಕೊಳ್ಳುವವರೆಗೂ ಇದು ಹೀಗೆಯೇ ಸೀತಾ.ಈಗ ನೀನಿರುವಿ.ಇಷ್ಟೆಲ್ಲಾ ನೋವು ಅನಭವಿಸುತ್ತಿರುವಿ. ಇದೆಲ್ಲಾ ಯಾರಿಗಾಗಿಯೋ ಅನುಭವಿಸುತ್ತಿದ್ದೇನೆ ಎಂದುಕೊಳ್ಳುತ್ತಿರುವಿ,ನಿನ್ನ ಧೈರ್ಯ,ಮನೋಸ್ಥೈರ್ಯಗಳನೆಲ್ಲಾ ಅನ್ಯರಿಗೆ ಕೊಟ್ಟಿರುವಿ.ಆದರೆ ನಿನಗಾಗಿ ನೀನು ಏನು ಉಳಿಸಿಕೊಂಡಿರಯವೆ ಹೇಳು.”

“ನಾನೆಂದರೆ ಏನಕ್ಕಾ ? ಯಾರು ನಾನು?”

ಅಹಲ್ಯೆ ನಕ್ಕಳು.

” ಹುಚ್ಚಿ ! ಮಹಾ ಮಹಾ ಮುನಿಗಳು,ವೇದಾಂತಿಗಳು ತಮ್ಮ ಇಡೀ ಜೀವನ ಈ ಪ್ರಶ್ನೆಗೆ ಉತ್ತರವನ್ನು ಹುಡುಕುತ್ತಲೇ ಕಾಲಕಳೆದರು.ನೀನೆಂದರೆ ನೀನೇ.ಕೇವಲ ಶ್ರೀರಾಮನ ಪತ್ನಿ ಅಷ್ಟೇ ಅಲ್ಲ.ಅದನ್ನು ಮೀರಿದವಳು.ಈ ಪಟ್ಟಕ್ಕಿಂತಲೂ ಮಿಗಿಲಾದದ್ದು ನನ್ನೊಳಗಿದೆ.ಅದೇನೆಂದು ತಿಳಿದುಕೊಳ್ಳಲು ಹೆಂಗಸರಿಗೆ ಯಾರೂ ಹೇಳುವುದಿಲ್ಲ ಸೀತಾ.ಗಂಡಸರ ಅಹವು ಆಸ್ತಿಯಲ್ಲಿ,
ಪ್ರತಾಪಗಳಲ್ಲಿ, ವಿದ್ಯೆಯಲ್ಲಿ,ಕುಲಗೋತ್ರಗಳಲ್ಲಿ ಇದ್ದರೆ,ಹೆಣ್ಣಿನ ಅಹವು ಪಾತಿವ್ರತ್ಯದಲ್ಲಿ ,ಮಾತೃತ್ವದಲ್ಲಿ ಇರುತ್ತದೆ‌.ಆ ಅಹಂಕಾರವನ್ನು ದಾಟಬೇಕೆಂದು ಹೆಂಗಸರಿಗೆ ಯಾರೂ ಹೇಳುವುದಿಲ್ಲಮ್ಮಾ.ನಾವು ಹೆಂಗಸರು ಸಹ ನಮಗೆ ನಾವು ವಿಶಾಲವಿಶ್ವದ ಭಾಗವೆಂದು ಅಂದುಕೊಳ್ಳುವುದೇ ಇಲ್ಲ‌ ನೋಡು!
ಒಬ್ಬ ವ್ಯಕ್ತಿಗೆ,ಒಂದು ಮನೆಗೆ, ಒಂದು ವಂಶದ
ಗೌರವಕ್ಕೆ ಪರಿಮಿತವಾಗಿಬಿಡುತ್ತೇವೆ.ಅಹಮ್ಮನ್ನು ಜಯಿಸುವುದು ಗಂಡಸರಿಗೆ ಆಧ್ಯಾತ್ಮಿಕ ಗುರಿಯಾಗುವುದಾದರೆ,
ಅಹಮ್ಮನ್ನು ಬೆಳಸಿಕೊಳ್ಳುವುದು,ಆಹಮ್ಮಿನಲ್ಲಿಯೇ ಸುಟ್ಟು ಬೂದಿಯಾಗಿಬಿಡುವುದು ಹೆಂಗಸರ ಗುರಿಯಾಗುತ್ತದೆ.ಸೀತಾ ! ನೀನು ಯಾರೆಂದು,ನಿನ್ನ ಜೀವನದ ಗುರಿಯೇನೆಂದು
ತಿಳಿಯಲು ಪ್ರಯತ್ನಿಸು.ಅದು ಅಷ್ಟು ಸುಲಭದ್ದಲ್ಲ.ಆದರೆ ಪ್ರಯತ್ನವನ್ನು ನಿಲ್ಲಿಸದಿರು. ಕೊನೆಗೆ ನೀನೇ ತಿಳಿದುಕೊಳ್ಳುವಿ.ನಿನಗೆ ಆ ಶಕ್ತಿಯಿದೆ.ಶ್ರೀರಾಮಚಂದ್ರನನ್ನು ಕಾಪಾಡಬಲ್ಲವಳು ನಿನ್ನನ್ನು ನೀನು ಕಾಪಾಡಿಕೊಳ್ಳಲಾರೆಯಾ ?ಇದೆಲ್ಲಾ ಏಕೆ  ಘಟಿಸಿದೆ ಎಂದು ಚಿಂತಿಸದಿರು.ನಿನ್ನನ್ನು ನೀನು ಅರಿಯುವ ಕ್ರಮದ ಭಾಗದಲ್ಲಿಯೇ ಇದೆಲ್ಲಾ ನಡೆದಿದೆ.ಸಂತಸದಿಂದಿರು.ಈ ನಿಸರ್ಗವನ್ನು, ಸಕಲ ಜೀವರಾಶಿಗಳ ಪರಿಣಾಮ ಕ್ರಮವನ್ನು ಪರಿಶೀಲಿಸು.ನಿರಂತರ ಅದರೊಳಗೆ ನಡೆಯುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸು,ಈ ಅರಣ್ಯದಲ್ಲಿ ಬರೀ ಆಶ್ರಮಗಳಷ್ಟೇ ಅಲ್ಲ,ಅನೇಕ ಜಾತಿಯ ಜನಗಳಿದ್ದಾರೆ ಅವರ ಜೀವನವನ್ನು ಗಮನಿಸು. ಈ ಇಡೀ ಪ್ರಪಂಚದಲ್ಲಿ ನೀನಿರುವಿ.ಒಬ್ಬ ರಾಮನಿಗಷ್ಟೇ ಅಲ್ಲ.”

ಅಹಲ್ಯೆಯ ಮಾತುಗಳು ಮೃಣ್ಮಯನಾದದಂತೆ ಧ್ವನಿಸುತ್ತಿದ್ದರೆ, ಸೀತೆ ಶ್ರದ್ಧೆಯಿಂದ ಕಿವಿಕೊಟ್ಟು ಕೇಳುತ್ತಿದ್ದಳು.

“ನಿನಗೆ ಮಾತೃತ್ವದ ಅನುಭವವಾಗಲಿದೆ ಸೀತಾ. ಅದನ್ನು ಆನಂದಿಸು‌. ಯಾವ ಕೋರಿಕೆ ಬಯಕೆಗಳನ್ನು ಇಟ್ಟುಕೊಳ್ಳದೆ ಚಿಗರೆ ಮರಿಗಳನ್ನು ಬೆಳೆಸಿದಂತೆ ನಿನ್ನ ಮಕ್ಕಳನ್ನು ಬೆಳೆಸು.”

ಸೀತೆಗೆ ಒಳಗೆಲ್ಲೋ ಹುದುಗಿದ್ದ ಮಾತೃತ್ವದ ಭಾವನೆ ಉಕ್ಕೇರತೊಡಗಿತ್ತು‌.ಅಪ್ರಯತ್ನವಾಗಿ ಆಕೆಯ ಕೈಗಳು ಗರ್ಭವನ್ನು ತಾಕಿದವು. ಆಕೆಯ ಕಣ್ಣಲ್ಲಿ ಪ್ರೀತಿಯ ಹೊಳಪು ತುಂಬಿ ತುಳುಕುತ್ತಿತ್ತು.

ಮರುದಿನದ ಬೆಳಗು ಅಹಲ್ಯೆ ಹೊರಡಲು ಸಿದ್ಧಳಾದಳು‌.

ಸೀತೆಯ ಕಣ್ಣಲ್ಲಿಯ ಕಾಂತಿಯನ್ನು ಕಂಡು ವಾಲ್ಮೀಕಿ ನಿಶ್ಚಿಂತನಾದನು.

ಸೀತೆ ಅಹಲ್ಯೆ ಯನ್ನೊಮ್ಮೆ ಅಪ್ಪಿಕೊಂಡಳು.

” ನನ್ನ ಮೇಲೆ ಹಾಕಿದ್ದ ನಿಂದೆಯ ಬಗೆಗಿನ ಸತ್ಯವೇನೆಂದು ಈಗ ಹೇಳಲಾ ಸೀತಾ ?”

” ಬೇಡಕ್ಕಾ. ಯಾವುದಾದರೂ ಒಂದೇ. ಅದಕೆ ಯಾವ ಅರ್ಥವೂ ಇಲ್ಲ .”

ಅಹಲ್ಯೆಯನ್ನು ಸಗೌರವದಿಂದ ಕಳಿಸಿಕೊಟ್ಟರು ಸೀತೆ.

                          *

ರಾಮನು ಪುತ್ರರನ್ನು ಬಳಿಗೆ ಕರೆದುಕೊಂಡು ಆನಂದದಲ್ಲಿ ಮೈಮರೆತನು.

ಪುತ್ರರನ್ನು ವಾರಸುದಾರರಾಗಿ ಒಪ್ಪಿಕೊಂಡ ರಾಜ್ಯವು,ಸೀತೆಯನ್ನು ತನ್ನ ಪಟ್ಟಮಹಿಷಿಯಾಗಿ ಒಪ್ಪಿಕೊಳ್ಳುವುದೇ ? ಒಪ್ಪಿಕೊಂಡರೆ ,ಆ ನಂತರ ತಾನು ಯಾರನ್ನೂ ಲೆಕ್ಕಿಸನು.

ಅಯೋಧ್ಯೆಗೆ ಬರಲೆಂದು ರಾಮನು ಸೀತೆಗೆ ಕರೆ ಕಳಿಸಿದ.

ಆ ಕೆರೆಯಿಂದಾಗಿ ಸೀತೆ ಉದ್ವೇಗಕ್ಕೆ ಒಳಗಾಗಲೇಯಿಲ್ಲ.ಕಳೆದ ಹನ್ನೆರಡು ವರ್ಷಗಳಿಂದ ಆಕೆಯ ಮುಖದಲ್ಲಿ ಬೆಳಗುತ್ತಿರುವ ಆನಂದದ ಕಾಂತಿಯು ರವಷ್ಟೂ ತಗ್ಗಲಿಲ್ಲ.

ಕಿರು ನಗೆಯಿಂದ ರಾಮನ ವಿನಂತಿಯನ್ನು ತಿರಸ್ಕರಿಸಿದಳು.

“ನಿನ್ನ ಮಕ್ಕಳನ್ನು ಬಿಟ್ಟು ನೀನು ಇರಬಲ್ಲೆಯಾ ಸೀತಾ ?”ಮತ್ತೊಂದು ಕೆರೆ ಅಯೋಧ್ಯೆಯಿಂದ ಆಶ್ರಮಕ್ಕೆ ಬಂತು.

ಈ ಅಸ್ತ್ರದಿಂದ ಸೀತೆ ಪರಾಜಿತಳಾಗುತ್ತಾಳೆಂದುಕೊಂಡನು ರಾಮ‌.

” ಆ ಮಕ್ಕಳು ಬರೀ ನನ್ನ ಮಕ್ಕಳಲ್ಲ ರಾಮಾ.ಈ ಪ್ರಪಂಚದಲ್ಲಿಯ ಅನಂತ ಜೀವಕ್ತಿಯ ಪ್ರತೀಕಗಳವರು.
ಇಡೀ ವಿಶ್ವಕ್ಕೆ ಅವರು ಸೇರುತ್ತಾರೆಂದು ನಾನು ತಿಳಿದಿರುವೆ.ಅವರೂ, ನೀವೂ ಅವರು ಅಯೋಧ್ಯೆಗೆ ಸೇರಿದವರೆಂದು,ಸೂರ್ಯ ವಂಶದ ವಾರಸುದಾರರೆಂದು ನಂಬಿರುವಿರಿ. ನಿಮ್ಮ ನಂಬಿಕೆಯ ಪ್ರಕಾರವೇ ನಡೆದುಕೊಳ್ಳಿ.”

“ಮತ್ತೆ ನೀನೆಲ್ಲಿ ಹೋಗುತ್ತಿ ಸೀತಾ ! ಪತಿ,ಪುತ್ರರನ್ನು ತೊರೆದು ?”

“ನಾನು ಭೂಪುತ್ರಿ ರಾಮಾ! ನಾನು ಯಾರೆಂದು ಈಗ ಅರಿತುಕೊಂಡಿದ್ದೇನೆ.ಈ ಇಡೀ ಲೋಕವೆಲ್ಲಾ ನನ್ನದೇ.ಯಾವ ಕೊರತೆಯೂ ಇಲ್ಲ‌ ನನಗೆ.ನಾನು ಭೂಪುತ್ರಿ.”

ಸ್ಥಿರವಾಗಿ,ಗಂಭೀರವಾಗಿ   ಸೀತೆಯಾಡಿದ ಆ ಮಾತುಗಳಿಗೆ ರಾಮನು ನಿರುತ್ತರನಾದ.

ಸೀತೆಯ ಸಹಾಯವಿಲ್ಲದೆ ರಾಮನು ಮೊದಲ ಸಲ ಸೋಲನುಭವಿಸಿದ.ಬಹಿರಂಗದ ಅಧಿಕಾರಕ್ಕೆ ಶರಣಾಗದ ಸೀತೆ,ತನ್ನ ಅಂತರಂಗದಲ್ಲಿ ತನ್ನ ಮೇಲೆ ತನಗಿರುವ ಅಧಿಕಾರದ ಶಕ್ತಿಯನ್ನು ಮೊದಲ ಸಲ ಸಂಪೂರ್ಣವಾಗಿ ಅನುಭವಿಸಿದಳು.

14 comments

 1. Ishtu chandada katheyannu naanu odhiralee illa..
  Enthaaa arthavidhe …!!
  Idannu kannadakke anuvaada madidavariguu nanna dhanyavaadha …

 2. ಸೀತೆ ಕೇಳುವ ಪ್ರಶ್ನೆಗಳಿಗೆ ಉತ್ತರವಿಲ್ಲ. ಕಥೆ ಓದುತ್ತಾ ಓದುತ್ತಾ ಬೆವತು ಹೋದೆ. ಇದು ಕಥೆಯಲ್ಲ ಸದಾ ಕಾಡುವ ಅಂತರಾತ್ಮ. ಕನ್ನಡದ್ದೇ ಅನಿಸುವಷ್ಟು ಸೊಗಸಾಗಿ ಅನುವಾದಿಸಿರುವ ಅಜಯ್ ವರ್ಮಾ ಅಲ್ಲೂರಿ ಅವರಿಗೆ ಋಣಿ.

 3. ಅಜಯ್ ಬಹಳ ಇಷ್ಟ ಆಯ್ತು.ಕಥೆ,ನಿರೂಪಣೆ,ಶೈಲಿ ಎಲ್ಲವೂ..

 4. ಹೊಸ ದೃಷ್ಟಿಕೋನದ ಕಥೆ.
  ಓಲ್ಗಾ ಅವರ ಎಲ್ಲ ಬರಹಗಳಂತೆ ಹೆಣ್ಣಿನ ಅಸ್ಮಿತೆಯ ಹುಡುಕಾಟದ ಅಂಶವೇ ಪ್ರಧಾನ.
  ಅನುವಾದ ಸೊಗಸಾಗಿದೆ.
  ಕಂಗ್ರಾಟ್ಸ್ ಅಜಯ್.

  • ಧನ್ಯವಾದ. ಸಂಕಲನದ ಉಳಿದ ಕಥೆಗಳನ್ನೂ ಅನುವಾದಿಸಿರುವೆ ಮೇಡಂ.

 5. ” ನನ್ನ ಮೇಲೆ ಹಾಕಿದ್ದ ನಿಂದೆಯ ಬಗೆಗಿನ ಸತ್ಯವೇನೆಂದು ಈಗ ಹೇಳಲಾ ಸೀತಾ ?”
  ” ಬೇಡಕ್ಕಾ. ಯಾವುದಾದರೂ ಒಂದೇ. ಅದಕೆ ಯಾವ ಅರ್ಥವೂ ಇಲ್ಲ .”

  ಬದುಕು ಅದೆಷ್ಟು ಪಾಠಗಳನ್ನು ಕಲಿಸುತ್ತದೆ! ಕತೆ, ಅನುವಾದ ಎರಡೂ ಉಸಿರು ಬಿಗಿ ಹಿಡಿದು ಓದಿಸುತ್ತದೆ
  ತುಂಬ ಚೆನ್ನಾಗಿದೆ ಅಜಯ್

Leave a Reply