ವಿದ್ಯಾರ್ಥಿನಿಯೇ ಪೆಟ್ಟು ಕೊಟ್ಟಳು..!

ಅಣ್ಣನ ನೆನಪು 29

ಅಣ್ಣ ವೃತ್ತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದವರು. ನಮ್ಮ ಇಡಿ ಕುಟುಂಬವೇ ವೃತ್ತಿಯಲ್ಲಿ ಶಿಕ್ಷಕರು. ಅಜ್ಜ ಕೂಡ ಶಿಕ್ಷಕ. ಇನ್ನಕ್ಕ ಹಲವು ವರ್ಷಗಳ ಕಾಲ ಅಂಗನವಾಡಿಯಲ್ಲಿ ಶಿಕ್ಷಕಿ. ಮಾಧವಿ ಜ್ಯೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕಿ. ನಾನು ಕಾಲೇಜಿನಲ್ಲಿ ಉಪನ್ಯಾಸಕ. ಹಾಗಾಗಿ ಕುಟುಂಬರ ಪರಂಪರೆಯನ್ನು ಮುಂದುವರಿಸಿದ್ದೇವೆ. ಕೆಲವರು ನಮ್ಮನ್ನು ಪರಂಪರೆಯ ವಿರೋಧಿಗಳು ಎನ್ನುತ್ತಾರೆ.!!!

ಆತ ಶಿಕ್ಷಕ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದನ್ನು ಹಿಂದೆ ಹೇಳಿದ್ದೆ. ಪ್ರಶಸ್ತಿಗಿಂತ ಹೆಚ್ಚು ಅವನ ಶಿಷ್ಯರು ಈಗಲೂ ಆತನ ಕಲಿಸುವಿಕೆಯನ್ನು ನೆನಪಿಸಿಕೊಳ್ಳುತ್ತಾರೆ. ನೇರವಾಗಿ ಆತ ನನಗೆ ಕಲಿಸಿರಲಿಲ್ಲ. ನಾನು ಕೆರೆಕೋಣ ಶಾಲೆಗೆ ಹೋಗುವಾಗ ಆತ ಬೇರೆ ಶಾಲೇಲಿ ಇದ್ದ. ಅಕ್ಕಂದಿರು ಅವನ ನೇರ ಶಿಷ್ಯರೂ ಹೌದು.

ಆತ ಶಾಲೆಯಲ್ಲಿ ಕಲಿಸುವ ಸಂದರ್ಭದಲ್ಲಿ ಮಾಡುತ್ತಿದ್ದ ತಯಾರಿ ನನಗೆ ಗೊತ್ತು. ಹಲವು ಚಾರ್ಟಗಳನ್ನು ತಯಾರಿಸುತ್ತಿದ್ದ. ಕಲಿಕೆಯಲ್ಲಿ ಹಿಂದುಳಿದವರಿಗೆ ವಿಶೇಷ ಪಾಠದ ತಯಾರಿಯನ್ನು ನಿವೃತ್ತನಾಗುವವರೆಗೂ ಮಾಡುತ್ತಿದ್ದ. ಮಕ್ಕಳಿಗಾಗಿ ನಾಟಕ ಬರೀತಿದ್ದ. ಅದನ್ನು ಸ್ವತಃ ತಾನೇ ಆಡಿಸುತ್ತಿದ್ದ. ಹಲವು ಶಿಶು ಗೀತೆಗಳನ್ನು ಬರೆದು ಹಾಡಿಸುತ್ತಿದ್ದ.

ಇಂಗ್ಲಿಷ್ ಕಲಿಸುವುದರಲ್ಲಿ ಜಿಲ್ಲೆಯಲ್ಲಿಯೇ ಹೆಸರುಗಳಿಸಿದ್ದ. ಕನ್ನಡದಲ್ಲಿ ಇಂಗ್ಲೀಷ್ ವ್ಯಾಕರಣ ಎನ್ನುವ ಪುಸ್ತಕವನ್ನೂ ಬರೆದು ಪ್ರಕಟಿಸಿದ್ದ. ಅದರ 10 ಸಾವಿರ ಪ್ರತಿಗಳು ಮಾರಾಟ ಆಗಿವೆ.

ಒಮ್ಮೆ ನಮ್ಮಲ್ಲಿಯ ಕೆಲವು ಶಿಕ್ಷಕರಿಗೆ ಬಿ ಇ ಓ ಕಛೇರಿಯಿಂದ ಇಂಗ್ಲೀಷ್ ತರಬೇತಿಗೆ ಆದೇಶ ಬಂತಂತೆ. ಅವರು ಆ ತರಬೇತಿಗೆ ಹೋಗದಿರುವುದರಿಂದ ಯಥಾ ಪ್ರಕಾರ ನೋಟೀಸ್ ಬಂತು. ಆಗ ಅವರು ಕೊಟ್ಟ ಉತ್ತರ “ನಾವು ಕನ್ನಡ ಶಾಲೆಯಲ್ಲಿ ಆರ್. ವಿ. ಭಂಡಾರಿಯವರಿಂದ ಇಂಗ್ಲೀಷ್ ಕಲಿತಿದ್ದೇವೆ. ಹಾಗಾಗಿ ನಮಗೆ ಈ ಟ್ರೇನಿಂಗಿನ ಅವಶ್ಯಕತೆ ಇಲ್ಲ.” ಎಂದು ಉತ್ತರ ಕೊಟ್ಟಿದ್ದರಂತೆ.

ತಾಲೂಕಿನ ಶಿಕ್ಷಣಾಧಿಕಾರಿಯೊಬ್ಬರು ತಮ್ಮ ಮಗಳಿಗೆ ಒಳ್ಳೆಯ ಶಿಕ್ಷಕರು ಬೇಕೆಂದು ಮಗಳು ಕನ್ನಡ ಶಾಲೆಯಲ್ಲಿ ಇರುವವರೆಗೆ ಅಣ್ಣನನ್ನು ಕೆರೆಕೋಣ ಶಾಲೆಗೆ ವರ್ಗಮಾಡಿಸಿಕೊಂಡು ಬಂದಿದ್ದರು. ಇದೆಲ್ಲ ಒಂದೆರಡು ಸ್ಯಾಂಪಲ್ ಮಾತ್ರ.

ಮೊದಲು ಅಣ್ಣನ ಮಾಸ್ತರಿಕೆ ಕೆಲಸ ಪ್ರಾರಂಭವಾದದ್ದು ಔಡಾಳದಿಂದ. ಔಡಾಳ ಶಿರಸಿ ತಾಲೂಕಿನ ಒಂದು ಹಳ್ಳಿ. ಆಗ ಪ್ರಾಥಮಿಕ ಶಾಲೆ ನಡೆಸುತ್ತಿದ್ದುದು ಜಿಲ್ಲಾ ಸ್ಕೂಲ್‍ಬೋರ್ಡ್. ಅಲ್ಲಿಯವರೆಗೂ ಗಾಂವ್ಟಿ ಶಾಲೆಯಿದ್ದ ಅಲ್ಲಿ ಸ್ಕೂಲ್‍ಬೋರ್ಡ್ ಹೊಸದಾಗಿ ಶಾಲೆ ಮಂಜೂರು ಮಾಡಿತ್ತು. ಅದರ ಮೊದಲ ಶಿಕ್ಷಕ ಅಣ್ಣ. ಆತನೇ ಹೋಗಿ ಶಾಲೆ ಪ್ರಾರಂಭಿಸಬೇಕಿತ್ತು. ಆಗ ಶಿರಸಿಯ ಶಾಲೆ (ರಾಯಪ್ಪ ಹುಲೇಕಲ್ ಶಾಲೆ)ಗೆ ಮುಖ್ಯಾಧ್ಯಾಪಕರಾಗಿ ಆತನ ಅಪ್ಪಚ್ಚಿ ಗಜಾನನ ಭಂಡಾರಿ ಇದ್ದರು. ಅಲ್ಲಿ ಸಿಪಾಯಿಯಾಗಿ ಆತನ ಅಣ್ಣ ಮಂಜುನಾಥ ಭಂಡಾರಿ ಕೂಡ ಇದ್ದರು. ಅವರ ಸಹಾಯದಿಂದ ಸರಿಯಾದ ಮಾಹಿತಿ ಮತ್ತು ಸಹಾಯ ಪಡೆದು ಅಣ್ಣ ಔಡಾಳಕ್ಕೆ ನಡೆದ. ಆಗ ಬಹುಶಃ ಓಣಿಕೇರಿ ಶಾಲೆಯ ಮುಖ್ಯಾಧ್ಯಾಪಕರು ಹೆಚ್ಚಿನ ಮಾರ್ಗದರ್ಶನ ನೀಡಿದ್ದರು.

ಅಲ್ಲಿಯ ಕೆಲವು ಅನುಭವವನ್ನು ಅಣ್ಣನ ಮಾತಿನಲ್ಲೇ ಇಲ್ಲಿಡುತ್ತೇನೆ.

“ಔಡಾಳದಲ್ಲಿ ಓರ್ವ ಹೆಗಡೆಯವರ ಮನೆಯಲ್ಲಿ ಊಟ-ವಸತಿ. ಸಾರ್ವಜನಿಕವಾಗಿ ಹೆಚ್ಚು ಬೆರೆಯದ ಮತ್ತು ತೀರಾ ತೀರಾ ದಾಕ್ಷಿಣ್ಯ-ನಾಚಿಕೆ ಸ್ವಭಾವದ ನನಗೆ ಅದು ಕಷ್ಟದ ಸಂಗತಿ. ಆದರೆ ಹೆಗಡೆಯವರ ಮನೆಯವರು ಬಹಳ ಪ್ರೀತಿಯಿಂದ ನೋಡಿಕೊಂಡರು. ಆಗ ಹಿರಿಯ ಹೆಗಡೆಯವರ ತಾಯಿಯೊಬ್ಬರಿದ್ದರು. ಅವರು ಆಗಲೇ ಅಜ್ಜಿಯಾಗಿದ್ದರು. ಅವರಿಗೆ ನಾನೆಂದರೆ ತುಂಬಾ ಪ್ರೀತಿ. ನಾನು ಎಲ್ಲಾದರು ಮನೆಗೆ ಬಂದರೆ ನಾನು ಹೋಗುವುದರೊಳಗೆ ಮಾಸ್ತರಿಗಾಗೇ ಕಾದಿಟ್ಟ ಬಾಳೇಹಣ್ಣನ್ನು ಮಡಿಲಲ್ಲಿ ಹಾಕಿಕೊಂಡು ಬಂದು ಕೊಟ್ಟು ನನ್ನನ್ನು ಬೆರಗುಗೊಳಿಸುತ್ತಿದ್ದರು. ನಾನು ಪ್ರತಿ ಶನಿವಾರ ಶಿರಸಿಗೆ ಬಂದುಬಿಡುತ್ತಿದ್ದೆ. ಪಂಡಿತ ವಾಚನಾಲಯದಲ್ಲಿ ನಾನು ಸದಸ್ಯನಾಗಿ ಪ್ರತಿವಾರ ಪುಸ್ತಕ ಬದಲಿಸಿಕೊಂಡು ಹೋಗುತ್ತಿದ್ದೆ.

ಅವರ ಮನೆಯಿಂದ ಇಬ್ಬರು ಹುಡುಗಿಯರು ಶಾಲೆಗೆ ಬರುತ್ತಿದ್ದರು. ಅವರಲ್ಲಿ ಹಿರಿಯಾಕೆ ನಾಗವೇಣಿ, ಕಿರಿಯವಳು ಸೀತೆ. ಹಿರಿಯವಳು ಮೂರನೇ ತರಗತಿಯಲ್ಲಿದ್ದರೆ, ಕಿರಿಯವಳು ಎರಡನೇ ತರಗತಿ. ಇಬ್ಬರೂ ಮುಗ್ಧರು ಮತ್ತು ಸುಸ್ವಭಾವದವರು.
ಇವರಿಬ್ಬರೂ ನನಗೆ ಒಂದು ಸಮಸ್ಯೆಯಾಗಿದ್ದರು. ಇವರಲ್ಲಿ ಕಿರಿಯವಳಾದ ಸೀತೆ ಹೇಳಿದ್ದರ ವಿರುದ್ಧ ನಾಗವೇಣಿ ಇರುತ್ತಿದ್ದಳು. ಸೀತೆ ‘ಸಂಗೀತ ಹೇಳಿಕೊಡಿ ಗುರೂಜಿ’ ಎಂದರೆ ನಾಗವೇಣಿ ‘ಕಥೆ ಹೇಳಿ’ ಅನ್ನುವಳು. ಸೀತೆ ‘ಕವಿತೆ ಹೇಳಿಕೊಡಿ’ ಅಂದರೆ ನಾಗವೇಣಿ ‘ಪಾಠ ಓದಿಸಿ’ ಎನ್ನುವಳು. ನನಗೆ ಕೇಳಿ ಕೇಳಿ ಸಾಕಾಯಿತು. ಬುದ್ಧಿ ಹೇಳಿದ್ದು ವ್ಯರ್ಥವಾಯಿತು.

ಹೀಗಿರುತ್ತ ಒಂದು ದಿನ ಸೀತೆ ತಟ್ಟೆಯಿಂದ ನೀರು ಕುಡಿಯಲು ತೊಡಗಿದೊಡನೆ ನಾಗವೇಣಿ ಸರ್ರನೆ ಬಂದು ಕೈಯಿಂದ ತಟ್ಟೆಯನ್ನು ಹೊಡೆದು ಹಾರಿಸಿದಳು. ನನಗೆ ಎಲ್ಲಿಯದೋ ಸಿಟ್ಟುಬಂತು. ಅಲ್ಲೆ ಒಂದು ಬರಲು (ಕೋಲು) ಬಿದ್ದಿತ್ತು. ಅದನ್ನು ತೆಗೆದು ನಾಗವೇಣಿಗೆ ಒಂದು ಬಾರಿಸಿದೆ. ಅದು ನಾಗವೇಣಿಗೆ ಅನಿರೀಕ್ಷಿತವಾಗಿತ್ತು. ಅವಳು ಎಂಥ ಭಯಪಟ್ಟಳೆಂದರೆ ಅವಳು ಕಣ್ಣಿನಲ್ಲೇ ನರಳಿಬಿಟ್ಟಳು! ಅವಳ ಆ ಭಯದಿಂದ, ಆರ್ತತೆಯಿಂದ, ನೋವಿನಿಂದ ತುಂಬಿದ ಕಣ್ಣನ್ನು ನೋಡಿ ನಲುಗಿದೆ. ಆ ಮೇಲೆ ಮಾತ್ರ ಅವಳು ಅತ್ಯಂತ ಸಭ್ಯಳಾಗಿ ಬಿಟ್ಟಳು. ಆದರೆ ನನ್ನ ಮನಸ್ಸು ಮಾತ್ರ ಅತ್ಯಂತ ವೇದನೆಗೊಳಗಾಯಿತು.

ಮಾಸ್ತರನಾಗಿ ನನ್ನ ಕೆಲಸದ ಬಗ್ಗೆ ಅಪರಾಧಿಪ್ರಜ್ಞೆ ನನ್ನನ್ನು ಕಾಡತೊಡಗಿತು. ನಾನು ಈ ಘಟನೆಯನ್ನು ಆಗ ಕುಮಟಾದ ಕೆನರಾ ಕಾಲೇಜು (ಈಗ ಡಾ. ಬಾಳಿಗಾ ಕಾಲೇಜು) ನಲ್ಲಿ ಪ್ರೊಫೆಸರ್ ಆಗಿದ್ದ ಬಿ.ಎಚ್.ಶ್ರೀಧರ ಮತ್ತು ಮನೋವಿಜ್ಞಾನದ ಪ್ರ್ರಾಧ್ಯಾಪಕರಾಗಿದ್ದ ಹನುಮಂತರಾವ್ ಅವರೊಡನೆ ಹೇಳಿಕೊಂಡೆ. ಅವರು ಕೆಲವು ಪ್ರಕರಣಗಳಲ್ಲಿ ಅಂಥ ಶಿಕ್ಷೆ ಕೂಡ ಅವಶ್ಯ ಎಂದು ನನಗೆ ಸಮಾಧಾನ ಹೇಳಿದರು. ಆದರೆ ನನಗೆ ಮಾತ್ರ ಸಮಾಧಾನವಾಗಲಿಲ್ಲ.

ಹಾಗೆ ಯಾಕೆ ನಾಗವೇಣಿ ತುಂಟಿಕೋರಳಾದಳು ಎಂಬ ಯೋಚನೆ ಇದ್ದೇ ಇತ್ತು. ಸೀತೆ ಕಿರಿಯವಳು ಹಾಗೇ ಕೊನೆಯವಳು. ಸೀತೆಯ ಕುರಿತು ತಂದೆ ತಾಯಿಗಳ ಪ್ರೀತಿ ಜಾಸ್ತಿ. ಇಬ್ಬರ ವಯಸ್ಸಿನ ಮಧ್ಯೆ ಹೆಚ್ಚು ಅಂತರವಿರದ್ದರಿಂದ ತಂದೆ ತಾಯಿಗಳಿಂದ ತನಗೆ ಸಿಕ್ಕಬೇಕಾದ ಎಲ್ಲಾ ಪ್ರೀತಿಯ ಪಾಲನ್ನು ತಂಗಿ ಕಸಿದುಕೊಂಡಿದ್ದಾಳೆ ಎಂದು ನಾಗವೇಣಿಯ ಅನ್ನಿಸಿಕೆ. ಇದರಿಂದ ಅವಳ ಮನಸ್ಸು ಆಕ್ರಮಣಶೀಲವಾಗಿದೆ. ಇದನ್ನು ಅವಳು ತಿಳಿದು ಮಾಡುವುದಲ್ಲ. ಮುಗ್ಧ ಮನಸ್ಸಿನ ಬಾಲಲೀಲೆ. ಇದನ್ನು ಅವರ ಮನೆಯವರಿಗೆ ವಿವರಿಸಿ ಹೇಳಿದೆ.

ಆದರೆ ಅವಳ ಆ ಭಯಭೀತ ಕಣ್ಣನ್ನೂ, ನನ್ನ ತಪ್ಪನ್ನೂ ಎಂದೂ ಮರೆಯದಾಗಿದ್ದೇನೆ. ನಾನು ಶಿಕ್ಷಕ ಜಾಗದಿಂದ ನಿವೃತ್ತನಾದುದು ಸಾಲಕೋಡಿನಿಂದ. ಆಗ ನನಗೆ ಅಲ್ಲಿಯ ಶಾಲಾ ಅಭಿವೃದ್ಧಿ ಸಮಿತಿಯ ಮತ್ತು ಊರಿನವರಿಂದ ಒಂದು ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದರು. ಆ ಸಮಾರಂಭಕ್ಕೆ ಹೊನ್ನಾವರ ಸೆಂಟ್ ಥಾಮಸ್ ಪ್ರೌಢಶಾಲೆಯಲ್ಲಿ ಮುಖ್ಯಾಧ್ಯಾಪಕರಾಗಿ ನಿವೃತ್ತರಾದ ಅಬ್ರಹಾಮ್ ಮಾಸ್ತರರು ಮುಖ್ಯ ಅತಿಥಿಗಳಾಗಿ ಬಂದಿದ್ದರು. ನಾನು ನನ್ನ ಕೃತಜ್ಞತೆಯ ಮಾತನ್ನು ಹೇಳುತ್ತಿರುವಾಗ ಈ ಘಟನೆ ನೆನಪಿಗೆ ಬಂದು ಕಣ್ಣೀರು ತುಂಬಿಬಂತು. ಈ ಘಟನೆಯನ್ನು ವಿವರಿಸಿದೆ. ಆಗಲೂ ನನಗೆ ನಾಗವೇಣಿಯ ಭಯಭೀತ ಕಣ್ಣು ಕಾಣಿಸಿತು. ಈಗ ಆ ಮಕ್ಕಳು ಎಲ್ಲಿ ಇದ್ದಾರೋ ಏನೋ? ಆತಂಕವೆಂದರೆ ಈಗಲೂ ನಾಗವೇಣಿ ಅದೇ ಭೀತಿಯನ್ನು ಅನುಭೋಗಿಸುತ್ತಿರಬಹುದೇ? ತನ್ನ ಗಂಡ, ಅತ್ತೆ ಮೊದಲಾದವರಿಗೆ ಅಂಜಿ ಅಂಜಿ ತನ್ನ ವ್ಯಕ್ತಿತ್ವವನ್ನು ಕುಂದಿಸಿಕೊಂಡಿರಬಹುದೆ ಎಂದು.

ಪಾಟಿಯಲ್ಲಿ ಪೆಟ್ಟು

ಈ ಘಟನೆ ನಡೆದದ್ದು ಕೆರೆಕೋಣ ಶಾಲೆಯಲ್ಲಿ. ಇಲ್ಲಿ ನಾವು ಮೂವರು ಶಿಕ್ಷಕರು. ನಾನು ಮುಖ್ಯಾಧ್ಯಾಪಕ. ಎರಡನೇ ತರಗತಿಯನ್ನು ಒಬ್ಬ ಅಕ್ಕೋರು ತೆಗೆದುಕೊಂಡಿದ್ದರು. ಅವರಲ್ಲಿ ಒಬ್ಬ ಹುಡುಗಿ ಸಮಸ್ಯೆಯಾಗಿದ್ದಳು. ಅವಳು ಶಾಲೆ ತಪ್ಪಿಸುವುದು ಹೆಚ್ಚು ಎಂಬುದು ಒಂದಾದರೆ, ಹೆಚ್ಚು ಮಾತನಾಡುವವಳೂ ಅಲ್ಲ. ಮನೆಯಲ್ಲಿ ಇವಳ ಹಟ ಹೆಚ್ಚಾಗಿದ್ದಿರಲೂ ಸಾಕು. ಒಟ್ಟಿಗೆ ತಾನು ಹೇಳಿದ್ದೇ ಆಗಬೇಕು.

ಒಂದು ಸಲ ಅಕ್ಕೋರು ಹೇಳಿದರು. ನೋಡಿ ಸರ್ ಇವಳು ಬರೆ ಅಂದರೆ ಬರೆಯುವುದಿಲ್ಲ. ಓದು ಎಂದರೆ ಓದುವುದಿಲ್ಲ. ಪಾಟಿ ಒಗೆದಿದ್ದಾಳೆ. ಸರಿ, ಒಂದೈದು ನಿಮಿಷ ತಡೆದು ನಾನು ಅವಳ ಬಳಿಗೆ ಹೋದೆ. ಹತ್ತಿರ ಕುಳಿತು ಪ್ರೀತಿಯಿಂದ ಅವಳ ತಲೆಗೂದಲು ತೀಡಿ ಅಲ್ಲೇ ಬಿದ್ದ-ಅವಳು ಒಗೆದಿದ್ದ-ಪಾಟಿಯನ್ನು ಅವಳ ಕೈಗೆ ಎತ್ತಿಕೊಟ್ಟೆ. ಅವಳಿಗೆ ತಡೆಯಲಾರದ ಸಿಟ್ಟು ಬಂದುಬಿಟ್ಟಿತು! ನಾನು ಕೊಟ್ಟ ಪಾಟಿಯನ್ನು ತೆಗೆದುಕೊಂಡು ಅದೇ ಪಾಟಿಯಿಂದ ನನಗೆ ಪಟಾ ಪಟಾ ಬಾರಿಸಿದಳು. ಉಳಿದ ಹುಡುಗರಿಗೆ ನಗೆಯೋ ನಗೆ. (ತಮಗೆ ಹೊಡೆಯುವ ಗುರೂಜಿಗೇ ಬಾರಿಸಿದಳಲ್ಲ ಸರೀ ಆಯ್ತು ಎಂದಿರಬಹುದು) ನಾನು ಏನು ಮಾಡಲಿ? ಅವರೊಟ್ಟಿಗೆ ನಾನೂ ನಗೆಯಾಡುತ್ತ ಒಳಗೆ ಬಂದೆ.

ಆಮೇಲೆ ಅವಳಿಗೆ ನಾಚಿಕೆ ಅನ್ನಿಸಿ ಪಶ್ಚಾತಾಪ ಆಯಿತೋ ತಿಳಿಯದು. ಅದಕ್ಕಿಂತ ಮೇಲೆ ಎಂಥ ಸಭ್ಯಳಾಗಿ ಬಿಟ್ಟಳೆಂದರೆ ಅವಳು ಸತತವಾಗಿ ಶಾಲೆಗೆ ಬಂದಳು. ಅಭ್ಯಾಸ ಮಾಡಿದಳು. ಮಕ್ಕಳ ಮನಸ್ಸು ಎಷ್ಟು ವಿಚಿತ್ರ! ಪಾಸಾಗಿ ಮುಂದಿನ ತರಗತಿಗೆ ಹೋದಳು. ಆ ಹುಡುಗಿ ಈಗ ಮದುವೆಯಾಗಿ ಮಕ್ಕಳೊಂದಿಗಿದ್ದಾಳೆ. ಈಗಲೂ ಎಲ್ಲೋ ಅಪರೂಪಕ್ಕೆ ಭೇಟಿಯಾದಾಗ ನನ್ನ ನೋಡಿದಾಗ ಅವಳಿಗೆ ಘಟನೆ ನೆನಪಾಗಿ ನಾಚಿಕೆಯಾಗುತ್ತದಂತೆ!

ಕೊಂಕಣಿ ಕಲಿತದ್ದು

ನನ್ನನ್ನು ಕಾರವಾರದ ಕೋಡಿಭಾಗ ಹಿ.ಪ್ರಾ. ಶಾಲೆಗೆ ವರ್ಗ ಮಾಡಿದರು. ಅಲ್ಲಿ ಪೆಡ್ನೇಕರ ಎನ್ನುವವರು ಮುಖ್ಯಾಧ್ಯಾಪಕರು. ತುಂಬಾ ಒಳ್ಳೆಯವರೂ, ಕಷ್ಟ ಸಹಿಷ್ಣುಗಳೂ ಆಗಿದ್ದು ನನ್ನನ್ನು ಆತ್ಮೀಯವಾಗಿ ನೋಡಿಕೊಂಡವರು.
ನನಗೆ ಹೋದೊಡನೆ ಒಂದನೇ ತರಗತಿಯನ್ನು ಕೊಟ್ಟರು. ಅಲ್ಲಿ ಸಾಕಷ್ಟು ಶಿಕ್ಷಕರಿದ್ದು, ಒಂದು ತರಗತಿಗೆ ಒಬ್ಬರೇ ಶಿಕ್ಷಕರಾಗಿರುತ್ತಿದ್ದರು. ಅದು ಸಂತೋಷದ ಸಂಗತಿಯೇ. ಆದರೆ ಅಲ್ಲಿ ಅಂದರೆ ಕೋಡಿಭಾಗದ ಕಡೆ ಕೊಂಕಣಿಯೇ ಜನಭಾಷೆ. ‘ಕನ್ನಡ ಸುಟ್ಕಂಡ ತಿನ್ನೋಕೂ ಬರೂದಿಲ್ಲ’ ದೊಡ್ಡಾದಂತೆ ಇವೆಲ್ಲ ತಿಳಿಯುತ್ತಿತ್ತು. ನನಗೆ ಕೊಂಕಣಿ ಬರದು. ಮೇಲಿನ ತರಗತಿ ಕೊಡಿ ಎಂದು ಮುಖ್ಯಾಧ್ಯಾಪಕರಲ್ಲಿ ಹೇಳಿದೆ. ಆದರೆ ಅವರು ‘ಇಲ್ಲ ಇಲ್ಲ ಅದೇ ನಿಮಗೆ ತಕ್ಕಾಗಿದೆ’ ಎಂದರು. ಸರಿ ಎಂದೆ.

ನನ್ನ ಪಾಠ ಶುರುವಾಯಿತು. ಆದರೆ ಹೇಗೆ? ನಾನು ಚಿತ್ರಕಲೆಯ ಪರೀಕ್ಷೆಗೆ ಪ್ರಯತ್ನಿಸಿದ್ದೆ. ಪ್ರಯತ್ನಿಸಿದ್ದೆ ಏನು, ಇಂಟರ್‍ಮಿಡಿಯೇಟ್ ಪರೀಕ್ಷೆಗೆ ಕುಳಿತೂ ಇದ್ದೆ. ಚಿತ್ರಕಲೆಯಲ್ಲಿ ನಾನು ಎಷ್ಟು ಪಳಗಿರಬಹುದು ಎಂದು ನನ್ನ ಹಸ್ತಾಕ್ಷರ ನೋಡಿದರೆ ತಿಳಿಯಬಹುದು. ನಂದು ಚಿತ್ರಲಿಪಿ. ಚೀನೀ ಬರಹದ ತರಹ. ನಿರೀಕ್ಷೆಯಂತೆ ನಾನು ನಪಾಸ ಆದೆ. ಮುದ್ರಣ ದೋಷವಲ್ಲ. ನಪಾಸ ಆದೆ. ಆದರೆ ಒಂದು ಉಪಕಾರ ಏನಾಯಿತು ಬಲ್ಲಿರಾ? ನಾನು ಪರೀಕ್ಷೆಗೆಂದು ತುಸು ತೀಡಿದ್ದೆನಲ್ಲ. ಅದು ಸಹಾಯಕ್ಕೆ ಬಂತು. ನನ್ನ ಪಾಠ ಚಿತ್ರದ ಮುಖಾಂತರವೆ.

ಅಷ್ಟರಲ್ಲಿ ನನಗೆ ಇನ್ನೊಂದು ಅನುಕೂಲ ಒದಗಿ ಬಂತು. ನನ್ನ ತರಗತಿ ಅಂದರೆ ಒಂದನೇ ತರಗತಿಯಲ್ಲಿ ಓರ್ವ ಜಿ.ಎಸ್.ಬಿ.ಹುಡುಗಿ ಇದ್ದಳು. ಅವಳ ಪಾಲಕರು ವ್ಯಾಪಾರಿಗಳು. ಅಂದಮೇಲೆ ಕೇಳಬೇಕೇ? ವ್ಯಾಪಾರಿಗಳಿಗೆ ಬರದ ಭಾಷೆ ಯಾವುದು? ಅವರ ಮನೆಯ ಮಕ್ಕಳು ಕನ್ನಡ ಬಲ್ಲರು. ಇವಳೂ ತುಸುತುಸು ಬಲ್ಲಳು. ನಾನು ಈ ಹುಡುಗಿಯ ಸಹಾಯ ತೆಗೆದುಕೊಂಡೆ. ಕರಿಹಲಗೆಯ ಮೇಲೆ ಆಕಳ ಚಿತ್ರ ಹಾಕಿ ‘ಹೇಂ ಕಿತ್ಗೊ?’ ಎಂದು ಕೇಳಿದರೆ ಅವಳು ‘ಗಾಯ್’ ಎನ್ನುತ್ತಿದ್ದಳು. ಸರಿ ಗಾಯ್ ಗಾಯ್ ಮಳರಿ ಆಕಳು, ಹಾಗೇ ಹೀಗೆ ‘ಬಾ ಮಳರ್ ಯೋ, ಯೋ ಮಳರ್ ಬಾ ಮಜಾನೈ’ ಎಂದು ಹೊಡೆದೆ. ಇದರಿಂದ ಆ ಹುಡುಗಿ ಎಲ್ಲರಿಗಿಂತ ಚೆನ್ನಾಗಿ ಕನ್ನಡ ಕಲಿತಳು. ನಾನು ತುಸು ತುಸು ಕೊಂಕಣಿ ಕಲಿತೆ.

ದುರ್ದೈವವೆಂದರೆ ನಾನು ತುಂಬಾ ದಾಕ್ಷಿಣ್ಯದ ಸ್ವಭಾವದವನೂ, ಏಕಾಂತ ಪ್ರಿಯನೂ ಆಗಿರುವುದರಿಂದ ಜನ ಸಂಪರ್ಕದಿಂದ ದೂರ. ಇದರಿಂದ ನನಗೆ ಕೊಂಕಣಿ ಕರಗತವಾಗಲಿಲ್ಲ. ಇದರಿಂದ ನನಗೆ ಎಷ್ಟು ಹಾನಿಯಾಯಿತು.! ಒಂದು ಭಾಷೆ (ಕೊಂಕಣಿ) ಅವರ ಮಧ್ಯೆ ಇದ್ದು ನನಗೆ ಕಲಿಯಲಾಗಲಿಲ್ಲವಲ್ಲ. ಭಾಷೆ ಕಲಿಯುವುದೂ ಒಂದು ಕೌಶಲ್ಯ. ಅದು ಜನಸಂಪರ್ಕದಿಂದಲೇ ಬರುತ್ತದೆ.

ಇಲ್ಲಿಯೇ ಇನ್ನೊಂದು ಘಟನೆ ಹೇಳಬಹುದು. ಕೋಡಿಭಾಗದಲ್ಲಿದ್ದಾಗ ನಾನು ಸಂಜೆ ಶಾಲೆಬಿಟ್ಟ ಮೇಲೆ ದಿನಾಲು ನಡೆದುಕೊಂಡು ಕಾರವಾರ ಗ್ರಂಥಾಲಯಕ್ಕೆ ಬರುತ್ತಿದ್ದೆ. ಗ್ರಂಥಾಲಯ ಬಾಗಿಲು ಮುಚ್ಚುವವರೆಗೂ (ಬಹುಶಃ ಎಂಟು ಗಂಟೆ) ಕುಳಿತು ಓದುತ್ತಿದ್ದೆ. ಆದರೆ ಓದಿಗೆ ಒಂದು ಗುರಿ ಇದ್ದಿರಲಿಲ್ಲ. ಶಿಸ್ತು ಇಲ್ಲದ ಯಾವ ಕೆಲಸವೂ ಸರಿಯಾದ ಫಲ ಕೊಡುವುದಿಲ್ಲ. ಮುಂದೆಯೂ ನನ್ನ ಓದು-ಬರಹ ಎರಡರಲ್ಲೂ ಹೀಗೇ ಆಯಿತು. ಒಂದು ಶಿಸ್ತನ್ನು ಕಾದುಕೊಳ್ಳದ ಪರಿಣಾಮವಾಗಿ ನಾನು ‘ಸಂಬಾರಬಟ್ಲ’ ಆದೆನೇ ಹೊರತೂ ಯಾವುದರಲ್ಲೂ ಪ್ರಭುತ್ವ ಗಳಿಸಲಿಲ್ಲ.

ಗರ್ವಾಪಹರಣ

ಒಂದು ದಿನ ನನಗೆ ಒಬ್ಬ ಅಂಗಡಿ ಸಾವುಕಾರರು (ಈ ಮೇಲೆ ಹೇಳಿದ ಹುಡುಗಿಯ ತಂದೆ) ಕರೆದು ತಮ್ಮ ಮಗ ಐದನೇ ತರಗತಿಯಲ್ಲಿರುವನೆಂದೂ, ಅವನಿಗೆ ಶಾಲೆ ಬಿಟ್ಟಮೇಲೆ ಪಾಠ ಹೇಳಬೇಕೆಂದೂ ಹೇಳಿದರು. ಆಗ ನನಗೆ ಅತ್ಯಂತ ಬಡತನ. ಪಗಾರು ಕಡಿಮೆ ಸಾಮಾನು ತುಟ್ಟಿ. ನಾಲ್ಕಾಣೆಗೆ ಒಂದು ಬಂಗಡೆಯೂ ಬರುತ್ತಿರಲಿಲ್ಲ. ಆದ್ದರಿಂದ ನನ್ನ ಮನಸ್ಸು ಧಾವಿಸಿತು. ಆದರೆ ಸಂಜೆ ನನ್ನ ಓದನ್ನು ಹೇಗೆ ಬಿಡುವುದು? ನಾನು ಅವರಿಗೆ ಹೇಳಿದೆ: ‘ಐದನೇ ತರಗತಿ ನನ್ನದೇ’ ಅವರೆಂದರು: ‘ಅದುಗೊತ್ತು ಅದಕೆಂದೇ ಹೇಳಿದೆ’

‘ಒಂದು ಕೆಲಸ ಮಾಡಿ, ನಿಮ್ಮ ಮಗ ನನ್ನದೇ ತರಗತಿ. ನಾನು ಅಲ್ಲಿ ಕಲಿಸುತ್ತೇನೆ. ನೀವು ಮನೆಯಲ್ಲಿ ಮುಕ್ಕಾಲರಿಂದ ಒಂದು ತಾಸು ಆತ ಅಭ್ಯಾಸ ಮಾಡುವಂತೆ ನೋಡಿಕೊಳ್ಳಿ, ಉಳಿದದ್ದು ನನಗೆ ಬಿಡಿ, ಹೆಚ್ಚಿನ ಪಾಠವೂ ಬೇಡ ಏನೂ ಬೇಡ’.
ಅವರು ಒತ್ತಾಯಿಸಿದರು. ಆದರೂ ಅವರಿಗೆ ಇದನ್ನೇ ಹೇಳಿದೆ. ಸರಿ ಎಂದರಾತ.

ಸುಮಾರು ತಿಂಗಳ ನಂತರ ಒಮ್ಮೆ ರವಿವಾರ ಇರಬಹುದು. ನನ್ನ ಸಹಶಿಕ್ಷಕರ ರೂಮಿಗೆ ಹೋಗಿದ್ದೆ. ಅಲ್ಲಿ ನೋಡುತ್ತೇನೆ ಈ ವಿದ್ಯಾರ್ಥಿ! ನನಗೆ ತುಂಬಾ ಬೇಜಾರಾಯಿತು. ಛೆ! ನಾನು ಎಂಥ ದಡ್ಡನೆನಿಸಿತು. ನನ್ನ ವಿಚಾರ ಇಷ್ಟೇ, ನಾನು ಕಲಿಸಿದ ಮೇಲೂ ಮತ್ತೆ ಖಾಸಗಿ ಪಾಠ ಬೇಕೇ? ಇದು ನನ್ನ ಅಹಂಕಾರವಾಗಿತ್ತೋ ಅಥವಾ ಆಗಿನ ಮಟ್ಟ (ಸ್ಟ್ಯಾಂಡರ್ಡ್) ಕಡಿಮೆ ಇತ್ತೋ ತಿಳಿಯದು. ಅಥವಾ ನಾನು ಗ್ರಾಮೀಣ ಪ್ರದೇಶದಿಂದ ಹೋಗಿದ್ದು ಕಲಿಕೆಯ ಸ್ಪರ್ಧೆಯ ಅವಶ್ಯಕತೆಯ ಬಗ್ಗೆ ನನಗೆ ತಿಳಿದಿರಲಿಲ್ಲವೊ. ಅಂತೂ ಪಶ್ಚಾತ್ತಾಪ ಇಲ್ಲ.”

ಅಣ್ಣನ ಅನುಭವದ ಬೊಕ್ಕಸದಲ್ಲಿ ಇಂತಹ ನೂರಾರು ಸ್ವಾರಸ್ಯಕರ ಘಟನೆಗಳಿವೆ. ಅದನ್ನು ಅವನೆದುರು ಕುಳಿತು ಕೇಳುವುದು ನಮಗೆಲ್ಲಾ ಆಪ್ಯಾಯಮಾನವಾದದ್ದು.

ಆದರೆ ನನಗೆ ಇಂಗ್ಲೀಷ್ ಕಲಿಸುವ ವಿಷಯದಲ್ಲಿ ಏನೆಲ್ಲ ಪ್ರಯತ್ನ ಮಾಡಿ ಕೈಚೆಲ್ಲಿ ಕುಳಿತದ್ದು ಮಾತ್ರ ಆತ ತನ್ನ ಶಿಕ್ಷಕ ಬದುಕಿನಲ್ಲಿ ಕಂಡ ಮೊದಲ ಮತ್ತು ಕೊನೆಯ ಸೋಲು!! ಆದರೆ ನಾನು ಆತ ಬರೆದ ಕನ್ನಡದಲ್ಲಿ ಇಂಗ್ಲಿಷ್ ವ್ಯಾಕರಣ ಪುಸ್ತಕವನ್ನು ಬಂಡಾಯ ಪ್ರಕಾಶನದಿಂದ ಪ್ರಕಟಿಸಿ ಸುಮಾರು 10,000 ಪ್ರತಿಯನ್ನು ಮಾರಾಟ ಮಾಡಿದ್ದಂತು ಸತ್ಯ.

2 comments

 1. ಆರ್.ಭಂಡಾರಿಯವರು ನನಗಿಷ್ಟವಾಗಿದ್ದು ಅವರ ವಯೋಮಾನದವರು ನಾವು ನವ್ಯ,ಬಂಡಾಯ ಮುಂತಾದ ಚಳುವಳಿಗಳು ಪ್ರವರ್ತಕರೆಂಬ ಪೋಜು ಹೊಡೆಯುತ್ತ
  ಪತ್ರಕರ್ತರಿಗೆ ಕರೆದು ಸಂದರ್ಶನ ನೀಡುತ್ತಿರುವಾಗ ಇವರು ಕರ್ನಾಟಕದ ಮೂಲೆಯೂರೊಂದರಲ್ಲಿ ತನ್ನದಲ್ಲದ ಭಾಷೆಯ ಶಿಕ್ಷಕರಾಗಿ ನಮ್ಮಂತಹ ಹಳ್ಳಿಹುಡುಗರಲ್ಲಿ ಕನ್ನಡ ಪ್ರಜ್ಞೆ ಬೆಳೆಸುವ ಕಾರ್ಯ ಮಾಡಿದ್ದಕ್ಕಾಗಿ.
  ಡಿ.ಎಮ್.ನದಾಫ್
  ಅಫಜಲಪುರದ

 2. ವಿಠ್ಠಲ್,
  ಅಣ್ಣನಿಂದ ಹೊಡೆತ ತಿಂದ ಯಾರು ಆ ನಾಗವೇಣಿ , ನೋಡಬೇಕೆನಿಸಿದೆ..
  ಪ್ರಿಯ ಭಂಡಾರಿ ಸರ್ ಅನುಭವಗಳ ಸ್ವಾರಸ್ಯದಷ್ಟೇ ನಿನ್ನ ನಿರೂಪಣೆಯೂ ಪರಿಣಾಮಕಾರಿಯಾಗಿದೆ..

Leave a Reply