ನಗರದಲ್ಲಿ ಸಿಕ್ಕ ನಮ್ಮೂರಿನವ..


ರಸ್ತೆಯ ಈ ಬದಿಯಲ್ಲಿ ನಾನು…
ಆ ಬದಿಯಲ್ಲಿ ಅವನು …
ನಾನು ಅದೇನೇನೋ ಕೆಲಸ ಮುಗಿಸಿಕೊಂಡು ಮನೆ ಸೇರುವ ಧಾವಂತದಲ್ಲಿದ್ದೆ.
ಅವನೂ ಅಂತದ್ದೇ ಸ್ಥಿತಿಯಲ್ಲಿದ್ದಿರಬಹುದು ಎಂದು ಊಹಿಸಿಕೊಳ್ಳುತ್ತೇನೆ. ಕೆಲವೊಮ್ಮೆ ನಿಜವನ್ನು ಊಹೆ ಎಂದುಕೊಳ್ಳುವುದು ಅಗತ್ಯ ಪಲಾಯನವಾಗುತ್ತದೆ.
‘ಇವನನ್ನು ಎಲ್ಲೋ ನೋಡಿದ್ದೇನಲ್ಲ’ ಎಂದೆನ್ನಿಸಿತು.
ಅವನು ಕೂಡ ಒಂದೆರಡು ಕ್ಷಣ ನನ್ನನ್ನೇ ದಿಟ್ಟಿಸಿದ.
ನಾನು ಕೈ ಬೀಸಿದೆ…
ಅವನೂ ಪ್ರತಿಕ್ರಿಯಿಸಿದ …
ರಸ್ತೆಯ ಇಕ್ಕೆಲಗಳಲ್ಲಿದ್ದ ನಾವು ಒಂದೇ ಬದಿಯಲ್ಲಿ ಸೇರಿದ್ದಾಯಿತು…
ಇಬ್ಬರೂ ಕೈ ಕುಲುಕಿದೆವು …
ಇಲ್ಲ ನೆನಪಾಗಲಿಲ್ಲ ‘ಯಾರವನೆಂದು?’
ಅವನಿಗಾದರೂ ನೆನಪಾಗಿ ಗುರುತು ಹೇಳುತ್ತಾನೆ ಎಂದು ದೀರ್ಘಕಾಲ ಕೈ ಕುಲುಕುತ್ತಲೇ ಇದ್ದೆ.
ಅವನದು ಅದೇ ಸ್ಥಿತಿ ಇರಬೇಕು.
ಏನೋ ಮುಜುಗರದಲ್ಲಿದ್ದಂತೆ ಕಂಡ.
ಕೈ ಬೀಸಿ ಕರೆದು, ಕೈ ಕುಲುಕಿದ್ದೂ ಆಯಿತು
“ಕಾಫೀ ? ” ಪ್ರಶ್ನಾರ್ಥಕವಾಗಿ ಅಂದೆ…
“ಸರಿ” ಅಂದ …
ಹೋಟೆಲ್ ಹೊಕ್ಕೆವು.
ಮಾತು ಮಳೆಯ ಕಡೆ ಹೊರಳಿತು. “ಈ ಬೆಂಗ್ಳೂರ್ ಲ್ಲಿ ಬರೋ ಮಳೆ ನಮ್ ಊರಲ್ಲಾದರೂ ಬಂದ್ರೆ ಚೆನ್ನಾಗಿರುತ್ತೆ ” ಎಂದೆ.  ಆಗಲಾದರೂ ಆತನ ವಿಳಾಸಮೂಲ ಹೇಳಿಯಾನು ಎಂಬ ನಿರೀಕ್ಷೆಯಿಂದ .
“ಹೌದು ನೋಡಿ ಸುಮ್ಮನೆ ಇಲ್ಲಿ ತೊಂದರೆ ಕೊಡುತ್ತೆ. ಅಲ್ಲಿ ಜನ ಕಾಯ್ತಿದಾರೆ ” ಅಂದನಾತ.
‘ಅಲ್ಲಿ’ ಎಂಬ ಈ ಅನಿರ್ಧಿಷ್ಟ ಸರ್ವನಾಮದಿಂದ ಅವನ ಬಗ್ಗೆ ನನಗೆ ಯಾವ ಸುಳಿವೂ ಸಿಗಲಿಲ್ಲ.
ಮಳೆ ಬೆಳೆ ಬಗ್ಗೆ ಎಲ್ಲರೂ ಮಾತಾಡಬಹುದಾದ ರೀತಿಯೇ ಅದಲ್ಲವೆ?
‘ನಿಮ್ಮ ಹೆಸರು ……… ಅಲ್ಲವಾ? ” ಎಂದು ಕೇಳಬೇಕೆಂದಿದ್ದೆ …
ಅಷ್ಟರಲ್ಲಿ ಅವನಿಗೊಂದು ಕಾಲ್ ಬಂತು.

*            *              *               *                 *

“ಏನೂ ಸೀರಿಯಸ್ಸಾ?
ನಾನು ಈಗ್ಲೇ ಬರ್ತೀನಿ. ಇಲ್ಲಿ ನನ್ನ ಹಳೆಯ ಪರಿಚಯದವರೊಬ್ಬರು ಸಿಕ್ಕಿದ್ದರು ಅವರ ಬಳಿ ಮಾತಾಡ್ತಿದ್ದೆ ” ಎಂದ.
ಈ ‘ಹಳೆಯ’ ಮತ್ತು ‘ ಪರಿಚಯ’ ಎಂಬೆರೆಡೂ ಪದಗಳು ನಮ್ಮಿಬ್ಬರ ಗುರುತು ಪತ್ತೆಗೇನು ಸಹಕಾರಿಯಾಗಲಿಲ್ಲ. ನಾನು ಅವನೇನಾದರೂ ಆಫೀಸಿನ ಐಡಿ ನೇತು ಹಾಕಿಕೊಂಡಿದ್ದಾನಾ ಎಂದು ಅವನ ಕುತ್ತಿಗೆಯನ್ನಲ್ಲ ಕಣ್ ಶೋಧ ಮಾಡಿದೆ. ಯಾವ ಟ್ಯಾಗ್ ಕೂಡ ಇರಲಿಲ್ಲ.
ಅಷ್ಟರಲ್ಲಿ ಕಾಫಿ ಬಂತು …
ಕಾಫಿ ಕುಡಿಯುತ್ತಾ, ಮಳೆಯ ಬಗ್ಗೆ , ಹೋಟೆಲ್ ನಲ್ಲಿ ಕೊಡುವ ಕಾಫಿಯ ಬಗ್ಗೆ , ಅಲ್ಲಿಯೇ ಇದ್ದ ನ್ಯೂಸ್ ಪೇಪರ್ ನ ಸುದ್ದಿ ಶೀರ್ಷಿಕೆ ಯೊಂದರ ಬಗ್ಗೆ , ಸಂಜೆ ಹೊತ್ತು ಪೀಕ್ ಗೆ ಹೋಗುವ ಟ್ರಾಫಿಕ್ ನ ಬಗ್ಗೆ, ಸರ್ಕಾರ ಜಾರಿಗೆ ತಂದಿರುವ ಹೊಸ ಸಂಚಾರಿ ನಿಯಮಗಳ ಬಗ್ಗೆ, ಸುಪ್ರೀಂ ಕೋರ್ಟ್ ಇತ್ತೀಚಿಗೆ ಕೊಟ್ಟ ಕೆಲವು ತೀರ್ಪುಗಳ ಬಗ್ಗೆ – ಹೀಗೆ ತರಹೇವಾರಿ ವಿಷಯಗಳ ಬಗ್ಗೆ ಮನಸೋ ಇಚ್ಛೆ ನಮ್ಮ ಅಭಿಪ್ರಾಯ ಹಂಚಿಕೊಂಡೆವು…
ಅಷ್ಟರಲ್ಲಿ ಬಿಲ್ ಬಂತು…

ಬಿಲ್ ಕೊಡಲು ತಯಾರಾಗಿಬಿಟ್ಟ ಆತ…
‘ಇಲ್ಲ. ಪ್ಲೀಸ್. ಬಿಲ್ ನಾನು ಕೊಡ್ತೀನಿ ಎಂದು ವೈಟರ್ ನ ಕೈಗೆ ದುಡ್ಡಿಟ್ಟೆ.
ಇದರಿಂದ ಅಷ್ಟೇನು ವಿಚಲಿತನಾಗದ ಅವನು ತಾನು ತೆಗೆದಿದ್ದ ನೂರರ ನೋಟನ್ನು ಕಿಸೆಗಿಳಿಸಿ , ಮಂದಹಾಸ ಬೀರುತ್ತಾ, ” ಇನ್ನೊಮ್ಮೆ ಸಿಗ್ತೀನಿ … ಸ್ವಲ್ಪ ಅರ್ಜೆಂಟ್ ಲ್ಲಿದೀನಿ .ತಪ್ಪು ತಿಳಿಬೇಡಿ…” ಎಂದು ಮತ್ತೆ ಗಟ್ಟಿಯಾಗಿ
ಕೈ ಕುಲುಕಿ ಹೊರಟ.
ಹೋದ …
ವೈಟರ್ ತಂದುಕೊಟ್ಟ ಚೇಂಜ್ ನ್ನು ನಿರ್ಭಾವುಕನಾಗಿ ಕಿಸೆಯಲ್ಲಿಡುತ್ತಾ ಹೋಟೆಲ್ ನ ಹೊರ ಬಂದೆ.
“ಅವನು” ಅವಸರವಸರವಾಗಿ ಬಸ್ ಏರಿ ಹೋದ …
ಅವನೇನೋ ಹೋದ … ಆದರೆ ನನ್ನಲ್ಲಿ ಅದೆಷ್ಟು ಪ್ರಶ್ನೆಗಳನ್ನು ಉಳಿಸಿಹೋದನೆಂದರೆ ;
ಅವನು ನಿಜಕ್ಕೂ ನನಗೇನಾದರೂ ಪರಿಚಿತನಾ?
ಹಳೆಯ ಕಂಪನಿಯವನಾ?
ಸ್ಕೂಲ್ ಮೇಟಾ?
ಕಾಲೇಜ್ ಮೇಟಾ?
ಹಾಸ್ಟೆಲ್ ನಲ್ಲಿ ಕೊನೇ ರೂಮ್ ನಲ್ಲಿದ್ದವನಾ?
ನನಗಿಂತಾ ಮೊದಲೇ ಈ ನಗರಕ್ಕೆ ಬಂದ ನಮ್ಮೂರಿನವನಾ ?,
ನಾನು ಬಂದ ಅನೇಕ ವರ್ಷಗಳ ನಂತರ ನಮ್ಮೂರಿನಿಂದ  ಈ ನಗರಕ್ಕೆ ಬಂದ ಸ್ಕೂಲ್ ಡ್ರಾಪ್ ಔಟಾ?
ಎಲ್ಲಿ ನೋಡಿದ್ದೆ?
ಅಥವಾ ಇದೇ ಮೊದಲು ನೋಡಿದ್ದಾ?
ಅಥವಾ ಆಗಾಗ ಮಾರ್ಕೆಟ್ಟಿನಲ್ಲಿ,
ಹಾಲಿನ ಬೂತ್ ನಲ್ಲಿ,
ಥಿಯೇಟರ್ ನಲ್ಲಿ,
ಸಿಗ್ನಲ್ ಗಳಲ್ಲಿ,
ಬಸ್ ಸ್ಟಾಪ್ ಗಳಲ್ಲಿ,
ರೈಲ್ವೇ ಪ್ರಯಾಣವೊಂದರಲ್ಲಿ ಸಿಗುತ್ತಿದ್ದವನಾ ?
ಇಲ್ಲೇ ಎಲ್ಲೋ ಆರು ರಸ್ತೆ ಆಚೆ ಮೂರನೇ ಕ್ರಾಸ್ ನಲ್ಲಿ ವಾಸವಾಗಿರುವವನೇ ಇರಬೇಕು.
ಆಗಾಗ ಎಲ್ಲೋ ಕಾಣಿಸಿಕೊಳ್ಳುತ್ತಾನೆ


*          *          *            *             *          *
ಎಂದುಕೊಳ್ಳುತ್ತಲೇ ಅವನು ಹೋದ ಹಾದಿಯನ್ನೇ ದಿಟ್ಟಿಸಿದೆ…
ಎಲ್ಲಿ ಮರೆಯಾದ ಎಂಬುದೇ ತಿಳಿಯಲಿಲ್ಲ…
ಅವನು ನನ್ನನ್ನು ಭೇಟಿಯಾಗಿದ್ದೇ ಸುಳ್ಳೇನೋ ಎಂಬಂಥ ಮಿಂಚಿನವೇಗದಲ್ಲಿ ಕಾಣದಾಗಿದ್ದ…
ಅಪರಿಚಿತನೂ ಪರಿಚಿತನಾಗುವ, ಪರಿಚಿತನೂ ಅಪರಿಚಿತನಾಗುವ ಈ ಸೋಜಿಗ ಸಂಭವಿಸಲು ನಮಗೆ ನಾವು ಅಪರಿಚಿತರಾಗಿರಬಾರದಷ್ಟೇ…

ಹೀಗೆ ಒಂದು ದಿನ ಅಚಾನಕ್ ಆಗಿ ಸಿಗ್ನಲ್ ನಲ್ಲಿ ಸಿಕ್ಕ ನಾಗರಿಕ (ನಗರಿಕ ಎಂದರೂ ನಡೆಯುತ್ತದೆ) ಮತ್ತೆಂದಾದರೂ ಸಿಕ್ಕಾನಾ ಎಂದು ಈಗೀಗ ಆ ಸಿಗ್ನಲ್ ಬಳಿ ಬಂದಾಗಲೆಲ್ಲ ಕಣ್ಣುಗಳು ಅವನನ್ನೇ ಹುಡುಕುತ್ತವೆ…

ಲಕ್ಷ ಲಕ್ಷ ಪರಿಚಯಗಳನ್ನು ಮರೆಸಿಬಿಡುವ ಈ ನಗರಕ್ಕೆ ಇಂತಹ ಕ್ಷುದ್ರ ಪರಿಚಯವೊಂದು ಯಾವ ಲೆಕ್ಕ ಎಂದು ನೆನಪಿಸಿಕೊಂಡು ಮನೆಯ ಹಾದಿ ಹಿಡಿಯುತ್ತೇನೆ…

Leave a Reply