ಇದು ‘ಬೀಜಧ್ಯಾನ’

ನರೇಂದ್ರ ರೈ ದೇರ್ಲ ಅವರ ‘ಬೀಜಧ್ಯಾನ’ ಕೃತಿಗೆ ಡಾ ಎಲ್ ಸಿ ಸುಮಿತ್ರಾ ಅವರು ಬರೆದ ಮುನ್ನುಡಿ 

ಹಸಿರಿನ ಉಸಿರು.

ಡಾ.ಎಲ್.ಸಿ. ಸುಮಿತ್ರಾ

ಕನ್ನಡದಲ್ಲಿ ಕೃಷಿ, ಪರಿಸರ ಸಂಬಂಧಿ ಬರಹಗಳನ್ನು ಬರೆಯುವವರಲ್ಲಿ ನರೇಂದ್ರರೈ ಪ್ರಮುಖರು. ನರೇಂದ್ರರೈ ಬರಹ ಗಳ ಪ್ರಸ್ತುತತೆಗೆ ಮುಖ್ಯ ಕಾರಣ ಅವರು ಅಧ್ಯಾಪಕರು, ಲೇಖಕರು,ಆಗಿರುವುದರ ಜತೆಗೆ ಕೃಷಿಕರೂ ಆಗಿರುವುದು. ಕೃಷಿಕ ಕುಟುಂಬದಲ್ಲಿ ಹುಟ್ಟಿ ಬೆಳೆದು ,ಕೃಷಿಕರೂ ಆಗಿರುವುದರಿಂದ ಅವರು ತಮ್ಮ ಅನುಭವಗಳ ಜತೆಗೆ, ಇವತ್ತಿನ ರೈತರು, ಅವರ ಸಮಸ್ಯೆಗಳು, ಕೃಷಿಯ ಏಕತಾನತೆ ,ಸೋಲು, ಸಂತೋಷಗಳ ಕುರಿತು ಹಲವರ ಅನುಭವಗಳ ಹಿನ್ನೆಲೆಯಲ್ಲಿ ಈ ಲೇಖನಗಳು ರೂಪುಗೊಂಡಿವೆ. ಅಧ್ಯಾಪಕ ವೃತ್ತಿಯ ಜತೆಗೆ ಅಡಿಕೆ ತೋಟವನ್ನು ಬೆಳೆಸುತ್ತಿರುವ ರೈ ಹಳ್ಳಿಯಲ್ಲಿ ನೆಲೆಸಿರುವವರು. ಇದು ಅವರ ಬರಹಗಳಿಗೆ ಇನ್ನೂ ತೂಕವನ್ನು ತಂದಿದೆ.

ಒಮ್ಮೆ ಶಿವರಾಮ ಕಾರಂತರ ಸಾಹಿತ್ಯ ಕುರಿತು ಮಂಗಳೂರು ವಿಶ್ವವಿದ್ಯಾನಿಲಯ, ಬೆಳ್ಳಾರೆ ಸರ್ಕಾರಿ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಆಮಂತ್ರಿತಳಾಗಿ ಹೋಗಿದ್ದೆ. ಅಗ ರೈ ಅವರು ನಾವು ನಾಲ್ವರು ಅತಿಥಿಗಳನ್ನೂ ಅವರ ಮನೆಗೆ ಆಹ್ವಾನಿಸಿದ್ದರು. ಅಂಚೆ ವಿಳಾಸದಲ್ಲಿ ’ಕನಸು’ ಮಾಡಾವು ಅಂಚೆ , ಎಂದು ಓದಿದ್ದ ನನಗೆ ರೈ ಅವರ “ಕನಸಿ’ನ ಪ್ರಪಂಚ ಕಾರಂತರ ಬೆಟ್ಟದ ಜೀವದ ಇನ್ನೊಂದು ಮುಖ ಅನ್ನಿಸಿತು..ಕಾಕತಾಳೀಯವೆಂಬಂತೆ ಬೆಟ್ಟದ ಜೀವದ ಕಥೆ ಇದೇ ಪರಿಸರದಲ್ಲಿ ನಡೆಯಿತೆಂಬಂತೆ ಕಾದಂಬರಿಯಲ್ಲಿ ಪಂಜ ಸೀಮೆಯ ವರ್ಣನೆಯಿದೆ. ಕಣಿವೆಯ ಆಳದಲ್ಲಿರುವ ತೋಟದ ಪಕ್ಕದಲ್ಲಿ ರೈ ಅವರ” ಕನಸಿ’ದೆ. ದೇರ್ಲದ ಅವರ ಮೂಲ ಮನೆಯ ಬಾಲ್ಯದ ಅನುಭವಗಳ ಕುರಿತು ಅವರು ಬರೆದ ಲೇಖನಗಳಿಂದ ಅವರ ಓದಿನ ಅಭಿಮಾನಿಯಾದವಳು ನಾನು. ಕೃಷಿ ಬದುಕಿನ ಹಿನ್ನೆಲೆಯಲ್ಲಿ ಬೆಳೆದ ಮಕ್ಕಳ ಜೀವನ ದೃಷ್ಟಿ ವಿಭಿನ್ನವಾಗಿರುತ್ತದೆಂಬುದು ನನ್ನ ಗ್ರಹಿಕೆ.

ಈ ಪರಿಸರವೇ ರೈ ಅವರ ಕೃಷಿ ಪ್ರೀತಿಯನ್ನು ಹೇಳುತ್ತದೆ. ಅವರು ಅಧ್ಯಾಪಕರೂ ಆಗಿ ವಿಶಾಲ ಓದಿನ ಹಿನ್ನೆಲೆ ಇರುವುದರಿಂದ ಇಲ್ಲಿಯ ಬರಹಗಳಿಗೆ ತೂಕವಿದೆ. ಅವರ ಸ್ವಾನುಭವ ,ಸಾಹಿತ್ಯ ಪ್ರೀತಿ , ಕೃಷಿ ಭೂಮಿಯಲ್ಲಿಯೇ ವಾಸವಿರುವುದು, ಗ್ರಾಮೀಣ ಕಾಲೇಜಿನ ಲ್ಲಿ ಅಧ್ಯಾಪಕರಾಗಿ ಹಳ್ಳಿಯ ಬದುಕಿನ ವಿವಿಧ ಮುಖಗಳನ್ನು ಸಮಸ್ಯೆಯ ಹಲವು ಆಯಾಮಗಳನ್ನೂ ತಿಳಿದಿರುವುದು ಅವರ ಬರಹಗಳು ಆಸಕ್ತಿಯಿಂದ ಓದಿಸಿಕೊಳ್ಳಲು ಕಾರಣಗಳಾಗಿವೆ. ರಾಜ್ಯದ ಮುಖ್ಯಕಾರ್ಯದರ್ಶಿ ಕೃಷಿಕರ ಭೇಟಿಗೆ ಹಳ್ಳಿಗೆ ಹೋಗುತ್ತೇನೆ ಅನ್ನುವಾಗ ರೈಗೆ ಬ್ರೆಕ್ಟ್ ರೈತರ ಕುರಿತು ಬರೆದ ಕವನ ನೆನಪಾಗುತ್ತದೆ. ಶಿಕ್ಷಣದಲ್ಲಿ ಮಕ್ಕಳಿಗೆ ಕೃಷಿ ಕುರಿತು ಕಾಳಜಿ ಮೂಡಿಸುವ ಪಠ್ಯವಿರಬೇಕು .ಐ ಏ ಎಸ್ ಅಧಿಕಾರಿಗಳು ಗ್ರಾಮವಾಸ್ತವ್ಯ ಮಾದಬೇಕೆಂದು ರೈ ಆಶಿಸುತ್ತಾರೆ. ಗೋಪಾಲಸ್ವಾಮಿ ಬೆಟ್ಟದಲ್ಲಿ ಬೇಳೆಯುವ ಬೆಳ್ಳುಳ್ಳಿಯ ಗುಣಮಟ್ಟ ,ಬಯಲಿನಲ್ಲಿ ಕೃತಕಗೊಬ್ಬರ ನೀರು ಕೊಟ್ಟು ಬೆಳೆಸುವ ಬೆಳ್ಳುಳ್ಲಿಗಿಂತ ಯಾಕೆ ಹೆಚ್ಚು ಎಂದು ಗೋಪಾಲಸ್ವಾಮಿ ಬೆಟ್ಟದ ಬೆಳ್ಳುಳ್ಳಿ ಲೇಖನದಲ್ಲಿ ಹೇಳುತ್ತಾರೆ.

“ಬಗೆಬಗೆಯ ಭಾರತ ಮತ್ತು ವಿದ್ಯಾಗಿರಿಯ ಬಾಕಿಮಾರು ಗದ್ದೆ” ,  ಲೇಖನದಲ್ಲಿ ವಿದ್ಯಾವಂತರು ಕೃಷಿಯಿಂದ ವಿಮುಖರಾಗಿ, ಕೃಷಿ ಉದ್ಯಮದ ರೂಪ ಪಡೆಯುತ್ತಿರುವುದರ ಅಪಾಯ ಕುರಿತು ಹೇಳುತ್ತಾರೆ. ವಿದ್ಯಾಗಿರಿಯಲ್ಲಿ ವಿದ್ಯಾರ್ಥಿಗಳಿಗೆ ಕೃಷಿಯನ್ನು ಪರಿಚಯಿಸಲು ಗದ್ದೆಯನ್ನು ಮಾಡಿರುವ ಕುತೂಹಲಕಾರಿ ವಿಷಯವನ್ನು ಹೇಳುತ್ತಾ ನಮ್ಮ ಶಿಕ್ಷಣ ಕೃಷಿಸ್ನೇಹಿಯಾಗಬೇಕಾದ ಅಗತ್ಯವನ್ನೂ ಹೇಳುತ್ತಾರೆ.

ನೀರಿನ ಮೂಲ ನೋಡದೆ ಊರು ಕಟ್ಟುವ ಆಧುನಿಕತೆ ಎಷ್ಟು ಅವೈಜ್ನಾನಿಕ ಎಂದು ,ನದೀ ತಿರುವು ಯೋಜನೆಗಳಿಗೆ ಇದೇ ಕಾರಣ ಎಂದು ಗುರುತಿಸುತ್ತಾರೆ. ವಿದ್ಯುತ್, ಮೊಬೈಲ್ ಸಿಗ್ನಲ್, ರಸ್ತೆ ಸೌಕರ್ಯ ನೋಡಿ ಮನೆ ಕಟ್ಟುವ ಜನರು ನೀರನ್ನು ದೂರದಿಂದ ತಂದರೆ ಸರಿ ಎಂಬ ನಿರ್ಲಕ್ಷ್ಯವನ್ನು  ಹೊಂದಿರುತ್ತಾರೆ. ಪಕ್ಕದ ಕೇರಳದಲ್ಲಿ ಕೃಷಿಗೆ ಕೃಷಿಕರಿಗೆ ಇರುವ ಮಹತ್ವವನ್ನು “ಕೃಷಿ ಪ್ರಶಸ್ತಿ ಅರ್ಜಿ ತುಂಬಲು ಅಕ್ಷರ ಇಲ್ಲದವರು “ ಲೇಖನದಲ್ಲಿ ಪ್ರಸ್ತಾಪಿಸುತ್ತಾ ಮನೋರಮ ಪತ್ರಿಕೆಯವರು ಪ್ರಶಸ್ತಿ ಕೊಡಲು ,ತಾವೇ ರೈತನ ಮನೆಗೆ ಹೋಗಿ ಅವರನ್ನು ತಮ್ಮ ವಾಹನದಲ್ಲಿ ರಾಜಭವನಕ್ಕೆ ಕರೆತಂದು ರಾಜ್ಯಪಾಲರೊಡನೆ ಕೂರಿಸಿ ಪ್ರಶಸ್ತಿ ನೀಡಿ ರಾಜಭವನದಲ್ಲಿ ಊಟವೂ ಆಗುತ್ತದೆ. ಅಂದರೆ ರೈತರಿಗೂ ಗೌರವ ಸಲ್ಲಿಸಬೇಕು ಎಂಬ ಎಚ್ಚರ ಅಲ್ಲಿ ಮೂಡಿದೆ.ಇಲ್ಲಿ ಯಾಕಿಲ್ಲ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ನಮ್ಮ ಕೃಷಿ ಕಾರ್ಯಕ್ರಮಗಳು ದೂರದರ್ಶನದಲ್ಲಿ ಬಹುತೇಕ ಸ್ಟುಡಿಯೋದಲ್ಲಿ ನಡೆಯುವ ಪ್ರಶ್ನೋತ್ತರಗಳು ಅಥವಾ ಕೃಷಿ ಅಧಿಕಾರಿಗಳ ಉಪದೇಶ, ಯಾವ ರಸಾಯನಿಕಗಳನ್ನು ಎಷ್ಟು ಪ್ರಮಾಣದಲ್ಲಿ ಸಿಂಪಡಿಸಬೇಕೆಂಬ ಮಾಹಿತಿಗೆ ಸೀಮಿತವಾಗಿ ನೀರಸವಾಗಿರುತ್ತವೆ.

ಕೇರಳದ ಮಾಧ್ಯಮಗಳು ರೈತಸ್ನೇಹಿಯಾಗಿವೆ. ಅವು ರೈತರ ಕೃಷಿಕ್ಷೇತ್ರಕ್ಕೇ ಹೋಗಿ ಕಾರ್ಯಕ್ರಮ ರೂಪಿಸುತ್ತವೆ. “ಕಿಸಾನ್ ಕೃಷಿದೀಪಮ್” ,ಆಗಲಿ ’ಭೂಮಿ ಮಲಯಾಳಮ್”,”ಹರಿತ,ಸುಂದರ” ಆಗಲಿ ಅಂತಹ ಕಾರ್ಯಕ್ರಮಗಳು. ರೈ ಇದನ್ನು ಸರಿಯಾಗಿ ಗುರುತಿಸಿದ್ದಾರೆ. “ರೈತರಿಗಿವರು ಡಾಕ್ಟರ್- ಗುರು” ಲೇಖನದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿ ಒಳ್ಳೆಯ ಉದ್ಯೋಗದಲ್ಲಿದ್ದ ಗುರು ದಂಪತಿಗಳು ತಂದೆಯ ಮರಣಾ ನಂತರ ತಮ್ಮ ಹಳ್ಳಿಗೆ ಮರಳಿ ಕೃಷಿಯಲ್ಲಿ ತೊಡಗಿದ ನಂತರ ಕೃಷಿಗೆ ಪೂರಕವಾದ ಕೃಷಿ ಉಪಕರಣಗಳ ಅಂಗಡಿಯನ್ನು ತೆರೆಯುತ್ತಾರೆ. ಚೀನಾ ದಲ್ಲಿರುವಂತೆ ರೈತರು ಕೃಷಿಯ ಜತೆಗೆ ಆದಾಯ ತರುವ ಆಟಿಕೆ ಉತ್ಪಾದನೆ ಯಂತಹ ಬೇರೆ ಕೆಲಸಗಳನ್ನೂ ಮಾಡಿದರೆ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂಬ ಗುರು ಅವರ ಸಲಹೆಯನ್ನು ಉಲ್ಲೇಖಿಸುತ್ತಾರೆ. ’ಎಲ್ಲ ಸರಿ,ಎತ್ತಿದ ಕಸವನ್ನು ಎಲ್ಲಿಸುರಿಯುತ್ತೀರಿ”, ಏನಾಯಿತು ಸ್ವಚ್ಚತಾ ಆಂದೋಲನ, ಎಂಬ ಲೇಖನಗಳಲ್ಲಿ ಅವರು ನಮ್ಮ ಜನರ ನಾಗರೀಕ ಪ್ರಜ್ನೆಯ ಕೊರತೆಯಿಂದ ಆಗುವ ಅನಾಹುತಗಳನ್ನು ಕುರಿತು ಬರೆದಿದ್ದಾರೆ.

ಇವೆಲ್ಲವೂ ಅತ್ಯುತ್ತಮ ಒಳನೋಟಗಳಿರುವ ಲೇಖನಗಳು. “ಗುಟ್ಕ ಹೆಸರಲ್ಲಿ ಅಡಿಕೆಗೇಕೆ ಕೊಲೆಗಾರ ಪಟ್ಟ” ಲೇಖನದಲ್ಲಿ ಗುಟ್ಕಾ ನಿಷೇಧದ ಹಿಂದೆ ಅಡಿಕೆಯ ತಪ್ಪಿಲ್ಲದೆ ,ಗುಟ್ಕಾಕ್ಕೆ ಹಾಕುವ ವಿಷಕಾರೀ ರಸಾಯನಿಕಗಳನ್ನು ನಿಯಂತ್ರಿಸದೇ ಅಡಿಕೆ ಬೆಳೆಗಾರರಿಗೆ ಆಗುವ ನಷ್ಟವನ್ನು ಕುರಿತು ಬರೆಯುತ್ತಾರೆ. ರೈತಾಪಿಯ ಕಷ್ಟ, ನಷ್ಟಗಳು.ಅಜ್ನಾನದಿಂದಾಗುವ ಅನಾಹುತಗಳು, ಗ್ರಾಮೀಣ ಬದುಕಿನ ಸೌಂದರ್ಯದ ಜತೆಗಿರುವ ತೊಂದರೆಗಳು, ಕಾಡುಗಳೂ, ಕಾಡು ಪ್ರಾಣಿಗಳೂ, ಹೀಗೆ ರೈ ಅವರ ಅನುಭವ ಜಗತ್ತು ದೊಡ್ದದು.

ಜಲಸಂರಕ್ಷಣೆಯ ಉಪಾಯಗಳನ್ನು, ಕುರಿತು ಬರೆಯುವ ಲೇಖಕರು ನೇರವಾಗಿ ಮತ್ತು ಪರೋಕ್ಷವಾಗಿ ಗ್ರಾಮೀಣ ಬದುಕಿನಲ್ಲಿ ನೆರೆಹೊರೆಯವರ ಜತೆಗೆ ಇರಬೇಕಾದ ಸಂಬಂಧಗಳ ಕುರಿತೂ ಸೂಚಿಸುತ್ತಾರೆ. ಹಳ್ಳಿಯ ಪರಿಸರದಲ್ಲಿ ಬದುಕುವ ಕೃಷಿಕ ದ್ವೀಪದಂತೆ ಬದುಕಲು ಸಾಧ್ಯವಿಲ್ಲ. ನಮ್ಮ ಹಳ್ಳಿಯನ್ನೂ, ಕೃಷಿಯನ್ನೂ ಪರಿಸರವನ್ನೂ ಪ್ರೀತಿಸಿದರೆ, ತಾನು ಕೃಷಿಕನಾಗಿರುವುದರ ಕುರಿತು ತನಗೇ ಹೆಮ್ಮೆಯಿದ್ದರೆ ಮಾತ್ರ ರೈತಾಪಿ ಬದುಕು ಉಳಿಯುತ್ತದೆ ಎಂಬ ಅರಿವು ನರೇಂದ್ರ ರೈ ಅವರಿಗಿದೆ. ಅದನ್ನೇ ಈ ಲೇಖನಗಳು ಅಡಿಗೆರೆಯ ಜತೆಗೆ ಹೇಳುತ್ತಿವೆ. ನನ್ನ ಪರಿಚಿತರೊಬ್ಬರು ತಮ್ಮ ಮಗ ತಮ್ಮಂತೆ ರೈತನಾಗದೆ ನಗರದಲ್ಲಿ ಸುಖವಾಗಿರಲಿ ಎಂದು ಬೆಂಗಳೂರಿಗೆ ಉದ್ಯೋಗಕ್ಕೆ ಕಳಿಸಿದರು..ಆದರೆ ಅವನಿಗೆ ಮದುವೆಯ ನಂತರ ಬರುವ ಸಂಬಳ ಸಾಲದೆ ಅವನ ಬೆಂಗಳೂರು ಖರ್ಚನ್ನು ಇವರೆ ನೋಡಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಆದರೂ ಮಗ ಬೆಂಗಳೂರಲ್ಲಿದಾನೆ ಎಂದು ಅವರಿಗೆ ಹೆಮ್ಮೆ.

ಈ ಬಗೆಯ ಪೊಳ್ಳು ಗ್ರಹಿಕೆ ಇಲ್ಲವಾದ ದಿನ ರೈತ ಹೆಮ್ಮೆಯಿಂದ ಕೃಷಿ ಅದುಕನ್ನು ಅನುಭವಿಸಬಲ್ಲ. ಬೆಂಗಳೂರಿನಂತಹ ನಗರಗಳಲ್ಲಿ ಒತ್ತಡದಲ್ಲಿ ಕೆಲಸ ಮಾಡುವವರು ವಾರಾಂತ್ಯದ ರಜೆ ಕಳೆಯಲು ನಮ್ಮ ಮಲೆನಾಡಿನ ಹಳ್ಳಿಗಳಲ್ಲಿ ಪ್ರಾರಂಭವಾಗಿರುವ ಹೋಮ್ ಸ್ಟೇ ಗಳಿಗೆ ಬರುತ್ತಾರೆ. ಇಲ್ಲಿಯ ಚಟುವಟಿಕೆಗಳಲ್ಲಿ ಕಾಡು ಬೆಟ್ಟ ಹತ್ತುವುದರ ಜತೆಗೆ ಗದ್ದೆ ತೋಟಗಳಲ್ಲಿ ಸುತ್ತಾಡುವುದೂ ಸೇರಿರುತ್ತದೆ. ಗ್ರಾಮೀಣ ಅಡುಗೆ ತಿಂಡಿಗಳೂ ಅವರಿಗೆ ಮೆಚ್ಚುಗೆಯಾಗುತ್ತವೆ. ಆದರೆ ಕೃಷಿ ಕುಟುಂಬದಿಂದ ಬಂದ ಮಕ್ಕಳಿಗೆ ಬೆಂಗಳೂರು ಇಶ್ಟವ ಹೊರತು ತಮ್ಮದೇ ಸ್ವಾಮ್ಯ ಇರುವ ಕೃಷಿ ಬದುಕಲ್ಲ. ಈ ಹಿನ್ನೆಲೆಯಲ್ಲಿ ರೈ ಅವರ ಬರಹಗಳಿಗೆ ತುಂಬ ಪ್ರಾಮಖ್ಯತೆಯಿದೆ..

ಈ ಎಲ್ಲ ಲೇಖನಗಳ ಹಿಂದೆ ನರೇಂದ್ರ ರೈ ಅವರ ಅಪಾರ ಅನುಭವ ಮತ್ತು ಕಾಳಜಿಗಳಿರುವುದು ಕಾಣುತ್ತದೆ. ಕೃಷಿಕರಾಗಿ ಅವರ ಅನುಭವ , ಸಾಹಿತ್ಯ ಕೃಷಿಯ ಅನುಭವ ಎರಡೂ ಸೇರಿ ನೆಲಜಲ, ಪರಿಸರ, ರೈತಾಪಿಯ ಕುರಿತು ಅವರಿಂದ ಎಂಟು ಕೃತಿಗಳು ರಚನೆಯಾಗುವಂತೆ ಮಾಡಿವೆ. ಇದು ಈ ದಾರಿಯಲ್ಲಿ ಇವರ ಎಂಟನೆಯ ಕೃತಿ. ತಮ್ಮ ಪುಸ್ತಕಗಳನ್ನು ಪ್ರಕಟಿಸಲು ತಮ್ಮದೇ” ಕನಸು’ ಪ್ರಕಾಶನವನ್ನು ನನಸಾಗಿಸಿಕೊಂಡಿದ್ದಾರೆ. ಬೆಟ್ಟದ ತಪ್ಪಲಲ್ಲಿ ಹೂಗಿಡಗಳು ,ತೆಂಗು, ಕಂಗುಗಳ ನಡುವೆ ದೇರ್ಲ ಅವರ ” ’ಕನಸು’ ಮನೆ ಹಸಿರಾಗಿದೆ. ನರೇಂದ್ರ ರೈ ದೇರ್ಲ ಅವರ ಪತ್ನಿಯವರು ಹಳ್ಳಿಯ ಒಂಟಿ ಮನೆಯಲ್ಲಿದ್ದು ಜವಾಬ್ದಾರಿಗಳನ್ನು ನೋಡಿಕೊಳ್ಳುವುದೂ ರೈ ಅವರ ಯಶಸ್ಸಿಗೆ ಕಾರಣ ಅನ್ನುವುದನ್ನೂ ಮರೆಯುವಂತಿಲ್ಲ. ನರೇಂದ್ರ ರೈ ಅವರಿಗೆ ಶುಭಾಶಯಗಳು.

3 comments

Leave a Reply