ಇಬ್ಬರು ಹೀರೋಗಳಿಗೆ ಒಬ್ಬರೇ ‘ವಿಲನ್!’

ದಶರಥನ ಕಂದ…
ರಾವಣನ ಕೊಂದ …
ಸೀತೆಯ ಕರೆತಂದ …

ನಾನು ಶಾಲೆಯಲ್ಲಿದ್ದಾಗ ನಮ್ಮ ಮೇಷ್ಟ್ರಾದ ಸಾಸ್ವೆಹಳ್ಳಿ ಸತೀಶ್ ಅವರು ಒಂದು ಕತೆ ಹೇಳಿದ್ದರು. ಭಿಕ್ಷಾಟನೆಗೆ ಬಂದ ಸಾಧುವೋರ್ವನಿಗೆ ಮನೆಯೊಡತಿಯು, ಭಿಕ್ಷೆ ನೀಡುವ ಮೊದಲು ತನಗೆ ಸಂಪೂರ್ಣ ರಾಮಾಯಣದ ಕಥೆ ಹೇಳು ಎಂದು ಮನೆಯೊಳಗಿಂದ ಒಂದು ಲೋಟ ಮಜ್ಜಿಗೆ ತಂದಳಂತೆ. ಆ ಮಜ್ಜಿಗೆ ಲೋಟ ನೋಡಿದ ಸಾಧು ಇಡೀ ರಾಮಾಯಣವನ್ನ ಮೂರು ಸಾಲಿಗಿಳಿಸಿ‌ ಹೀಗೆ ಹೇಳಿದನಂತೆ.

ನಮ್ಮ ನೆಚ್ಚಿನ ನಿರ್ದೇಶಕ ಪ್ರೇಮ್ ಅವರ ಇದುವರೆಗಿನ ಎಲ್ಲಾ ಸಿನಿಮಾಗಳ ಕಥೆಗಳನ್ನೂ ಇಂತಹದ್ದೇ ಒಂದು ಚೌಪದಿಯಲ್ಲಿ ಸಲೀಸಾಗಿ ಹೇಳಿಬಿಡಬಹುದು ;

ಬಡ ತಾಯಿಯ ಕಂದ
ಪೇಟೆಗೋಡೋಡಿ ಬಂದ
ಸಿಕ್ಕಸಿಕ್ಕವರನ್ನು ಕೊಂದ
ಅಮ್ಮಾ ನೀನೇ ದೇವರೆಂದ.

ಇದನ್ನು ದಾಟಿ ಯೋಚಿಸುವ ಗೋಜಿಗೆ ಅವರ್ಯಾಕೋ ಹೋದಂತೆ ಕಾಣುವುದೇ ಇಲ್ಲ . ಸಿನಿಮಾನ ಮಾರ್ಕೆಟಿಂಗ್ ಮಾಡೋದನ್ನ ಅವರಷ್ಟು ಚೆನ್ನಾಗಿ ಮತ್ಯಾರು ಮಾಡಿಯಾರು ಎಂಬುದೇನೋ ನಿಜ. ಆದರೆ ಜಾಹೀರಾತು ನೋಡಿ ಖರೀದಿಸಿದ ಯಾವ ಪ್ರಾಡಕ್ಟ್ ಗಳೂ ಜಾಹಿರಾತಿನಲ್ಲಿ ಹೇಳಿದ್ದನ್ನು ಪೂರೈಸುವುದಿಲ್ಲ ಎಂಬುದು ಗ್ರಾಹಕರಿಗೆ ತಿಳಿದಿರಬೇಕಷ್ಟೇ. ಇದನ್ನೆಲ್ಲ ಹೇಳಬೇಕಾದ ಪ್ರಸಂಗ ಯಾಕೆ ಬಂತೆಂದರೆ ಹೈ ಬಜೆಟ್, ಮಲ್ಟಿ‌ಸ್ಟಾರ್ ಎಂದೆಲ್ಲ ಬಿಂಬಿತವಾಗಿದ್ದ  “ದಿ ವಿಲನ್ ” ಸಿನಿಮಾ ನೋಡಿ ಆದ ಭ್ರಮನಿರಸನ.

ನಾನೊಬ್ಬ ಹೆಚ್ಚು ಕನ್ನಡ ಸಿನಿಮಾಗಳನ್ನೇ ಥಿಯೇಟರ್‌ ನಲ್ಲಿ ನೋಡುವವನಾಗಿರುವುದರಿಂದ ಈ ಚಿತ್ರದ ಬಗ್ಗೆ ಬರೆಯುವ ಹಕ್ಕು ನನಗಿದೆ. (ಅದರಲ್ಲೂ ಹೈ ಬಜೆಟ್ ನ ನೆಪವೊಡ್ಡಿ ಎಂದಿಗಿಂತ ಹೆಚ್ಚು ದುಡ್ಡು ಬೇರೆ ಪಡೆದಿದ್ದಾರೆ)

ಹಾಗೆ ನೋಡಿದರೆ ಪ್ರೇಮ್ ಗೆ ಅಭಿನಂದನೆಗಳನ್ನೇ ಸಲ್ಲಿಸಬೇಕು. ಒಂದು ಅತೀ ಸಾಧಾರಣ ಚಿತ್ರಕ್ಕೆ ಈ ಪರಿ ಕಲೆಕ್ಷನ್ ಮೊದಲ ದಿನದಲ್ಲೇ ಆಗುವಂತೆ ನೋಡಿಕೊಂಡದ್ದು  ಅವರ ದೊಡ್ಡ ಶಕ್ತಿಯೇ ಸರಿ. ಚಿತ್ರದ ಕಥೆಯನ್ನು ಆ ಚೌಪದಿ ಬಿಟ್ಟು ವಿಶೇಷವಾಗಿ ಏನೂ ಹೇಳಬೇಕಿಲ್ಲ. ಆದರೆ ಶಿವರಾಜ್ ಕುಮಾರ್ ಮತ್ತು ಸುದೀಪ್ ರಂತ ಒಳ್ಳೆಯ ನಟರಿಗೆ ಮಾಡಕೊಂಡಿರೋ ಸಬ್ಜೆಕ್ಟ್ ಮಾತ್ರ ನಗು ತರಿಸುವಂತದ್ದು. ಇವರಿಬ್ಬರು ನಟರ ಅಭಿಮಾನಿಗಳ Unconditional Love ನಿಂದಾಗಿ ಮಾತ್ರ ಈ ಸಿನಿಮಾ ದುಡ್ಡು ಮಾಡುತ್ತಿದೆಯೇ ಹೊರತು ಅಲ್ಲದೆ ವಿಶೇಷವಾಗಿ ಸಿನಿಮಾದಲ್ಲಿ ಏನೂ ಇಲ್ಲ . You can’t celebrate a glory of past forever . ಇನ್ನು ಜೋಗಿ ಸಿನಿಮಾದ ಫ್ರೇಮ್ ಗಳೇ ಈ ಸಿನಿಮಾದಲ್ಲಿಯೂ ಬರುತ್ತವೆ ಎಂದಾದರೆ ನೀವೇ ಊಹಿಸಿಕೊಳ್ಳಿ ತಾವು ಅಪ್ ಡೇಟ್ ಆಗಬೇಕಿದೆ ಅಂತ.

ರಾಮ – ರಾವಣ ರ ರೂಪಕದಲ್ಲಿ ಕಥೆ ಹೇಳ ಹೊರಟಿರುವುದಂತೂ ಹಾಸ್ಯಾಸ್ಪದವಾಗಿದೆ. ಮಗ ರಾಮನಾಗಬೇಕು ಎಂದುಕೊಳ್ಳುವ ತಾಯಿ ಒಂದೆಡೆಯಾದರೆ, ರಾವಣನಂತೆ ಹತ್ತು ದಿಕ್ಕಿನಿಂದ ಯೋಚಿಸಬೇಕು ಎಂದು ತನ್ನ ಪುಡಾರಿತನಕ್ಕೆ ಸ್ವಯಂ ಸಬೂಬು ನೀಡಿಕೊಳ್ಳುವ ಮಗ. ರಾಮ ಆದರ್ಶ ಪುರುಷ ಮತ್ತು ರಾವಣ ಅಂದರೆ ವಿಲನ್ ಅನ್ನೋ ಕ್ಲೀಷೆಯ ತತ್ವ ಹೇಳೋಕೆ ಇಷ್ಟು ದೊಡ್ಡ ಬಜೆಟ್ ಬೇಕಿತ್ತಾ ಅನ್ನಿಸದಿರದು. ಪುಣ್ಯಕ್ಕೆ ಕೊನೆಯಲ್ಲಿ ರಾವಣನನ್ನು ಕೊಂದಿಲ್ಲ ಅನ್ನುವುದೊಂದೇ ಸಮಾಧಾನ.

ತಾಯಿ ಸೆಂಟಿಮೆಂಟ್ ನ್ನು ತಾವೊಬ್ಬರೇ ಮಾಡಬಹುದು ಅಂದುಕೊಂಡಿರುವ ನಿರ್ದೇಶಕರು ಎಷ್ಟು ಮೂರ್ಖತನದ ಡೈಲಾಗ್ ಹೇಳಿಸ್ತಾರೆ ಅನ್ನೋದಕ್ಕೆ ಸಿನಿಮಾದಲ್ಲಿ ತಾಯಿ ಹೇಳೋ ಈ ಡೈಲಾಗ್ ನಿದರ್ಶನ ; ‘ ಅಪ್ಪ ಇಲ್ದೇ ಬದಕಬೋದು…ಅಮ್ಮ ಇಲ್ದೆ ಬದುಕೋಕ್ ಆದಾತಾ ?’ ಏನ್ ನಾನ್ಸೆನ್ಸ್ ಅಲ್ವಾ ಇದು ? ನಿಜವಾದ ತಾಯಿ ಬಾಂಧವ್ಯ ಯಾವ ಕಾರಣಕ್ಕೂ ಇವರು ಡೈಲಾಗ್ ಗಳಲ್ಲಿ ಉಗ್ಗಡಿಸುವಂತೆ ಇರೋಲ್ಲ. ಅದೂ ಅಲ್ಲದೆ ಸುದೀಪ್ ಅವರ ಪಾತ್ರ ರಾವಣ ( ಅವರು ಬಿಂಬಿಸುವ ದುಷ್ಟ ಶಕ್ತಿ) ನಾಗಲು ಕಾರಣವಾದ ಅಂಶ ಯಾವುದು ಎಂಬುದನ್ನು ಕೇಳಿದರೆ ಅವರು ಮತ್ತೊಂದು ಸಿನಿಮಾ ಮಾಡಿಬಿಟ್ಟರೆ ಎಂಬ ಭಯ .

ಒಂದೆಡೆ ತಾಯಿಯ ಸೆಂಟಿಮೆಂಟ್ ನ್ನು ಬಂಡವಾಳವಾಗಿಸುವ ಪ್ರೇಮ್ ಅವರು ತಮ್ಮ ಇಡೀ ಕಥೆಯಲ್ಲಿ ಅದನ್ನು ಕೇವಲ ಒಂದು ಎಳೆಯಷ್ಟು ಇಟ್ಟು ಉಳಿದದ್ದೆನ್ನೆಲ್ಲ ಕೇವಲ ಕ್ರೌರ್ಯಕ್ಕೆ ಮೀಸಲಿಡುತ್ತಾರೆ. ತಮ್ಮ ಚಿತ್ರವನ್ನು ನೋಡುವ ಏಜ್ ಗ್ರೂಪ್ ಯಾವುದು ಎಂಬುದು ಗೊತ್ತಿದ್ದೂ ಹೀಗೆ ಮಾಡುತ್ತಾರೆ. ಹೊಸಹೊಸ ರೀತಿಯ ಆಯುಧಗಳನ್ನು ಪರಿಚಯಿಸಿ ಫ್ಯಾನ್ಸಿಯಾಗಿ ಕೊಲ್ಲುವುದನ್ನು ವಿಜೃಂಭಿಸುವ ದೃಶ್ಯಗಳ ಪರಿಣಾಮ ಏನೆಂದರೆ ಈ ಚಿತ್ರ ನೋಡಿ ಭಾವೋದ್ವೇಗಕ್ಕೊಳಗಾದ ಅಭಿಮಾನಿಗಳು ಅಮಾಯಕ ಕೋಣದ ಕತ್ತು ಕಡಿದು ಸಿನಿಮಾ ಪೋಸ್ಟರ್ ಗೆ ಅಭಿಷೇಕ ಮಾಡಿದರಲ್ಲ, ಅದೇ ಇರಬೇಕು.

ಮಾತೆತ್ತಿದರೆ ಹಳ್ಳಿ ಪರಿಸರ, ದೇಶೀಯ ಸೊಗಡಿನ ಬಗ್ಗೆ ಮಾತನಾಡುವ ನಿರ್ದೇಶಕರು ನಾಯಕಿ ಪಾತ್ರಕ್ಕೆ ಮಾತ್ರ ಬಾಲಿವುಡ್ ,ಹಾಲಿವುಡ್ ನವರೇ ಬೇಕೆನ್ನುವುದು ಆಶಾಡಭೂತಿ ತನ . ಆ ಹೀರೋಯಿನ್ ಸಿನಿಮಾ ಬಿಡುಗಡೆ ದಿನ ಕಾಲುವುಡ್ ನಲ್ಲಿ ಅವಕಾಶ ಸಿಕ್ಕದ್ದಕ್ಕೆ ಧನ್ಯವಾದ ಎಂಬ ಟ್ವೀಟ್ ಮಾಡಿದ್ದನ್ನು ನೋಡಿದರೆ , ಇಡೀ ಸಿನಿಮಾದಲ್ಲಿ ಯಾರ್ಯಾರಿಗೆ ಎಷ್ಟು ಕ್ಲಾರಿಟಿ ಇದೆ ಎಂಬುದು ಗೊತ್ತಾಗುತ್ತದೆ. ಇಡೀ ಕರ್ನಾಟಕದ ತುಂಬ ಆ ಪಾತ್ರಕ್ಕೆ ಸೂಕ್ತ ಪ್ರತಿಭೆ ಇರಲಿಲ್ಲವೆ ಎಂಬುದನ್ನು ಪ್ರಾಮಾಣಿಕವಾಗಿ ಕೇಳಿಕೊಳ್ಳಬೇಕು. ಅದನ್ನೂ ಒಂದು ಮಾರ್ಕೆಟ್ ತಂತ್ರ ಎಂದು ತಿಳಿದುಕೊಂಡಿದ್ದರೆ ಮುಗ್ಧರು ಎನ್ನಬೇಕೋ ಅಥವಾ ಅಪ್ ಡೇಟ್ ಆಗಿಲ್ಲ ಎಂದುಕೊಳ್ಳಬೇಕೋ ?

ಇನ್ನು ಸಂಭಾಷಣೆಯ ವಿಷಯಕ್ಕೆ ಬಂದರೆ ದುರ್ಬಲ‌ವಾದ ಕಥೆಯನ್ನು ಅದು ಮತ್ತಷ್ಟು ಹದಗೆಡಿಸಿದೆ.
‘ ಇಡೀ ಜಗತ್ತಿಗೆ ಒಬ್ಬನೇ ಅಧಿಪತಿ ಇರಬೇಕು ‘ ಎಂದು ಸುದೀಪ್ ಹೇಳುತ್ತಿದ್ದರೆ ,ಯಾವ ಜಗತ್ತು ಎಂಬ ನಗು ಬಾರದಿರದು. ‘ ಒಬ್ಬ ಭಾರತೀಯ ಬ್ರಿಟಿಷ್ ರನ್ನ ಆಳಿದ ಅನ್ನೋದು ಹೊಸ ಇತಿಹಾಸ ‘ ಅನ್ನುವ ಸಂಭಾಷಣೆಯನ್ನು ಹೇಗೆ ಸ್ವೀಕರಿಸಬೇಕು? ಅದರ ಜೊತೆಯಲ್ಲೇ ಬರುವ ; I am villain , a proud Indian ಎಂಬ ಮಾತಂತೂ ಒಬ್ಬ ಅಂಡರ್ ವರ್ಲ್ಡ್ ಡಾನ್ ಆಗಿ ಇಂಗ್ಲೆಂಡ್ ನ್ನು ಆಳಬೇಕು ಎನ್ನುವವನ ಬಗ್ಗೆ ಭಾರತ ದೇಶವಿಡೀ ಹೆಮ್ಮೆ ಪಡಬೇಕೇನೋ ಎಂಬಂತಿದೆ.

ಹಾಗೆ ನೋಡಿದರೆ ಈ ಸಿನಿಮಾದಲ್ಲಿ ಪಾತ್ರಕ್ಕೆ ತಕ್ಕ ಅಭಿನಯ ಮಾಡಿರೋದು ( ಪೂರ್ತಿ ಅಲ್ಲದಿದ್ದರೂ) ಅದು ಶಿವರಾಜ್ ಕುಮಾರ್ . ಸುದೀಪ್ ಅವರ ಪಾತ್ರ ಅವರಿಗೇ ಕನ್ ವಿನ್ಸ್ ಆದ ಹಾಗೆ ಕಂಡಿಲ್ಲ. ಒಬ್ಬ ಡಾನ್ ನ ಮ್ಯಾನರಿಸಂ , ಅದರಲ್ಲೂ ಇಡೀ ಜಗತ್ತಿಗೆ ಡಾನ್ ಆಗ ಹೊರಟವನದ್ದು ಕೆಲವೆಡೆ ಕೋಟಿಗೊಬ್ಬ೨ ರಲ್ಲಿ ಇರುವಂತಿದೆ. ಆ ಸಿನಿಮಾಕ್ಕೆ ಅದು ಆಕ್ಯುರೇಟ್. ಇಲ್ಲಿ ಅದು ಸಹಿಸಲಸಾದ್ಯ. ಸಿನಿಮಾನ ಸಿನಿಮಾ ಥರ ನೋಡ್ಬೇಕು , ಓದಬಾರ್ದು ಅಂತೆಲ್ಲ ಕೆಲವರು ಹೇಳ್ತಾರೆ. ಆದರೆ ಜನ ದುಡ್ಡು ಕೊಟ್ಟಿರ್ತಾರೆ. ಅದಕ್ಕೊಂದು ವಿಶೇಷ ಅನುಭವ ಅವರಿಗೆ ಬೇಕು . Poetic Truth ಗಳನ್ನು ಬಿಟ್ಟು ಸಿನಿಮಾ ನೋಡಬೇಕು ಎಂಬ ವಾದವನ್ನೇನು ನಾನು ಮುಂದಿಡುತ್ತಿಲ್ಲ . ಆದರೆ ನೀವೇ ಹೇಳಹೊರಟಿರುವ ಕಥೆಯೊಳಗಿನ ಲಾಜಿಕ್ ಮಿಸ್ ಆಗಬಾರದು ಅಷ್ಟೇ.

ರಕ್ಷಿತಾ ಅವರು ವಿಲನ್ ಸಿನಿಮಾ ಬಗ್ಗೆ ಅನೇಕರು ಸೋಷಿಯಲ್‌ ಮೀಡಿಯಾದಲ್ಲಿ ಟೀಕಿಸಿದ್ದಕ್ಕೆ ತುಂಬಾ ಖಾರವಾದ ಒಂದು ಪತ್ರ ಬರೆದಿದ್ದಾರೆ. ಕನ್ನಡ ಚಿತ್ರೋದ್ಯಮದ ಬಗ್ಗೆ ಜಗತ್ತು ತಿರುಗಿ ನೋಡುವಂತೆ ಮಾಡಿದ್ದು ಪ್ರೇಮ್, ಸಿನಿಮಾ ಅವರ ದೊಡ್ಡ ಪ್ಯಾಷನ್. ಅವರ ಬಗ್ಗೆ ಅವಹೇಳನ ಮಾಡಬೇಡಿ ಎಂಬ ಮಾತುಗಳನ್ನಾಡಿದ್ದಾರೆ. ಅದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಒಂದೇ ರೀತಿಯ ಚಿತ್ರಗಳನ್ನು ರಿಪೀಟ್ ಮಾಡೋದು ಅದೆಂಥಾ ಪ್ಯಾಷನ್ನು ಅಂತ. ಹೊಸದನ್ನು ಓದುವ ,ಹೊಸ ರೀತಿಯ ಆಲೋಚನೆಗೆ ಹಚ್ಚುವ ಬದಲಾದ ಸಮುದಾಯದ ಕಾಂಪ್ಲೆಕ್ಸಿಟಿಗಳನ್ನು ಹೇಳಲು ಪ್ರಯತ್ನಿಸಿದರೆ ಅದನ್ನು ಖಂಡಿತ ಜನ ಮೆಚ್ಚದೇ ಇರಲಾರರು.

ಇಷ್ಟೆಲ್ಲ ಹೇಳಲೇಬೇಕಾಗಿ ಬಂದದ್ದು ಹೈ ಬಜೆಟ್ ಚಿತ್ರ ಎಂಬ ನೆಪವೊಡ್ಡಿ ಟಿಕೆಟ್ ದರ ಹಿಚ್ಚಿಸಿರುವುದಕ್ಕೆ . ಈ ಸಿನಿಮಾದಲ್ಲಿ ನೀವು ಇಬ್ಬರು ಸ್ಟಾರ್ ಗಳನ್ನು ಹಾಕಿಕೊಂಡು, ಶೂಟಿಂಗ್ ಸಮಯದಲ್ಲಿ ಮಾಡಿದ ಖರ್ಚನ್ನು ಸಾಮಾನ್ಯ ಪ್ರೇಕ್ಷಕರ ತಲೆಮೇಲೇಕೆ‌ ಹಾಕ್ತೀರ ಸ್ವಾಮಿ ? ಅದರಲ್ಲೂ ಸಿನಿಮಾ ಬಗ್ಗೆ ವಿಪರೀತ ಪ್ಯಾಷನ್ ಇದ್ದವರು ಮಾಡುವ ಕೆಲಸವೇ ಅದು? ನಿಜವಾದ ಪ್ಯಾಷನ್ ಇದ್ದವರು ಕಡಿಮೆ ಖರ್ಚಿನಲ್ಲಿ ಒಳ್ಳೆಯ ಚಿತ್ರ ಮಾಡಬೇಕು ತಾನೆ ? ಅದೂ ಅಲ್ಲದೆ ಈ ಕತೆಗೆ ನೀವು ಲಂಡನ್ ವರೆಗೂ ಹೋಗುವ ಅವಶ್ಯಕತೆಯೂ ಇರಲಿಲ್ಲ. ಅದೇ ಡಾನ್ ವ್ಯವಸ್ಥೆಯನ್ನು ಬೆಂಗಳೂರಿಗೆ ಸೀಮಿತಗೊಳಿಸಿ ತಗೆದಿದ್ದರೂ ಯಾರೂ ಬೇಸರ ಮಾಡಿಕೊಳ್ಳುತ್ತಿರಲಿಲ್ಲ. ಹಾಗೆ ನೀವು ಲಂಡನ್ ನಲ್ಲೇ ಮಾಡಬೇಕೆಂಬ ಆಸೆಗೆ ನಾವೇಕೆ ಹೆಚ್ಚು ದುಡ್ಡು ಕೊಡಬೇಕು? ಸಿನಿಮಾ ಪ್ರೇಕ್ಷಕನಿಗೆ ಯಾವತ್ತಿದ್ದರೂ ಖರ್ಚಿನ ವಿಷಯ ಅನ್ನೋದನ್ನ ಮರೆಯಬೇಡಿ. ಅಷ್ಟಾದರೂ ತಮ್ಮ ನಟರ,ನಿರ್ದೇಶಕರ ಮೇಲಿನ ಪ್ರೀತಿಯಿಂದ ಜನ ಸಿನಿಮಾ ನೋಡುತ್ತಾರೆ. ಅವರ ಪ್ರೀತಿಯನ್ನೇ ಮಾರ್ಕೇಟ್ ಮಾಡಿಕೊಳ್ಳಬೇಡಿ.

ಎಷ್ಟೇ ಕೋಟಿ ಗಳಿಸಿದರೂ ನಮ್ಮ ಸಿನಿಮಾ ಪ್ರೇಕ್ಷಕನಿಗೆ ಒಂದು ಅನುಭೂತಿಯನ್ನು ನೀಡಿದೆಯಾ ? ಎಂಬುದನ್ನು ಕೇಳಿಕೊಳ್ಳಿ. ಏಕೆಂದರೆ ನಾನು ಸಿನಿಮಾ ನೋಡಿದ ಇಡೀ ಚಿತ್ರಮಂದಿರದಲ್ಲಿ ಸುದೀಪ್ ಹಾಗೂ ಶಿವರಾಜ್ ಕುಮಾರ್ ಅವರ ಅಭಿಮಾನಿಗಳೇ ತುಂಬಿದ್ದರು. ಪ್ರಾರಂಭದಲ್ಲಿ ಸಿಳ್ಳೆ , ಕೇಕೆ, ಕೂಗಾಟ, ಅರಚಾಟ ಸಾಕಷ್ಟಿತ್ತು . ಆದರೆ ಇಂಟರ್ವೆಲ್ ನಲ್ಲಿ ಯಾಕೋ ಜನ ಯಾರದೋ ಗೊತ್ತು ಪರಿಚಯ ಇಲ್ಲದ ಮದುವೆಗೆ ಬಂದು ತಬ್ಬಿಬ್ಬಾದ ಅಮಾಯಕರಂತೆ ಕಂಡರು. ಹಾಗಂತ ಮದುವೆಗೆ ಬಂದಮೇಲೆ ಊಟ ಮಾಡದೇ ಹೋದರೆ ಹೇಗೆ ಎಂಬ ಯೋಚನೆಯಿಂದ ಕೊನೇ ತನಕ ಕುಳಿತಿದ್ದರು. ಅವರ ಪರವಾಗಿ ಇಷ್ಟೆಲ್ಲ ಹೇಳಬೇಕಾಯಿತು ನೋಡಿ. ಅಂದಹಾಗೆ ಇಬ್ಬರು ಹೀರೋಗಳಿಗೆ ಒಬ್ಬರೇ ವಿಲನ್ ಯಾರೆಂದು ಪ್ರತ್ಯೇಕ ಹೇಳಬೇಕಿಲ್ಲ ತಾನೆ ?

5 comments

  1. ಬಹಳ ಸೊಗಸಾಗಿ ಬರೆದಿದ್ದೀಯ. ಇದನ್ನು ಓದಿಯಾದರೂ ನಿರ್ದೇಸಕರು ಸ್ವಲ್ಪ ಕಾಮನ್ ಸೆನ್ಸ್ ಇಟ್ಕೊಂಡು ಸಿನಿಮಾಗಳನ್ನು ಮಾಡಿದರೆ ಉತ್ತಮ.

  2. ನಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು

  3. ಅದ್ಭುತ ವಿಮರ್ಶೆ ಸರ್. ಪ್ರೇಮ್ ಅಂದರೆ ಸುಳ್ಳು, ಸುಳ್ಳು ಅಂದರೆ ಅದು ಕೇವಲ ಪ್ರೇಮ್. ಕನ್ನಡ ಕನ್ನಡ ಅಂತ ಮಾತಾಡೋ ಇವರು ಬೇರೆ ಪ್ರತಿಭಾವಂತ ಯುವ ನಿರ್ದೇಶಕರಿಗೆ ಬೇರೆಯವರ ಚಿತ್ರಗಳಿಗೆ ಬೆಂಬಲ ನೀಡುವುದಿಲ್ಲ. ಕನ್ನಡಕಾಗಿ ಏನೂ ಮಾಡಿಲ್ಲ.

Leave a Reply