ಸುನಂದಾ ಕಡಮೆ ಕಂಡ ‘ಅವರೆಲ್ಲ ದೇವರಾಗಿದ್ದಾರೆ’

ಸುನಂದಾ ಕಡಮೆ

ಹೇಮಾ ಅಮಿನ್ ಬರೆದ
ಮನಸ್ಸನ್ನು ಮಾನವೀಯಗೊಳಿಸುವ ಕಥಾಗುಚ್ಚ ‘ಅವರೆಲ್ಲ ದೇವರಾಗಿದ್ದಾರೆ’

ಒಂದು ಕಾಲದಲ್ಲಿ ಸಾಹಿತ್ಯದ ಅತ್ಯಂತ ದುರ್ಬಲ ಪ್ರಕಾರ ಅಂದರೆ ಅದು ಸಣ್ಣ ಕತೆಯ ಪ್ರಕಾರ ಅನ್ನುವ ಮಾತಿತ್ತು ಆದರೆ ಈಗ ಅದೊಂದು ಜನಪ್ರಿಯ ಪ್ರಕಾರವಾಗಿ ಬೆಳೆದು ನಿಂತಿದೆ. ಈ ಹಿಂದೆ ಇದನ್ನು ದುರ್ಬಲ ಪ್ರಕಾರ ಎಂದೆಣ ಸಲು ಒಂದು ಬಲವಾದ ಕಾರಣವಿತ್ತು, ಕಾದಂಬರಿಯಲ್ಲಿ ಸಾಧ್ಯವಾದ ಹಾಗೆ ಒಂದು ಸಮಗ್ರ ಬದುಕಿನ ಚಿತ್ರಣವಾಗಲೀ ದರ್ಶನವಾಗಲೀ ಸಣ್ಣ ಕತೆಗೆ ಸಾಧ್ಯವಾಗುತ್ತೋ ಇಲ್ಲವೋ, ಅಥವಾ ಬದುಕಿನ ಒಂದು ಮಗ್ಗುಲಿಗೆ ಮಾತ್ರ ಪ್ರಾಮುಖ್ಯತೆ ಸಿಗಬಹುದೋ ಅನ್ನುವ ಅನುಮಾನಗಳಿದ್ದವು. ಆದರೀಗ ಕಿರಿದರಲ್ಲೂ ಪಿರಿದರ್ಥವನ್ನು ಹೊಮ್ಮಿಸುವಂತೆ ಧ್ವನಿಪೂರ್ಣವಾಗಿ ಬರೆಯುವದನ್ನು, ಹೇಳಿದ್ದರ ಜೊತೆಗೆ ಹೇಳದೇ ಇದ್ದದ್ದೂ ಸಂಭವಿಸುವ ಹಾಗೆ ಕಲಾತ್ಮಕವಾಗಿ ಬರೆಯುತ್ತಿರುವುದರಿಂದ ಸಣ್ಣ ಕತೆಗಳಿಗೆ ಜನಪ್ರಿಯತೆ ಹೆಚ್ಚಿರಬಹುದು ಅಥವಾ ಸಮಯ ಸಹನೆಗಳಿಲ್ಲದ ಇಂದಿನ ಆವೇಗದ ದಿನಗಳಲ್ಲಿ, ಓದಲು ಕಡಿಮೆ ಕಾಲಾವಕಾಶ ತಗಲುವ ಸಣ್ಣ ಕತೆಗಳನ್ನೇ ಇಷ್ಟಪಟ್ಟ ಸಹೃದಯರು ಈ ಪ್ರಕಾರವನ್ನು ಜನಪ್ರಿಯಗೊಳಿಸಿದ್ದಾರೆ ಅಂತ ಕೂಡ ಭಾವಿಸಬಹುದು. ಒಬ್ಬ ಒಳ್ಳೆಯ ಕಥೆಗಾರ ಏಳೆಂಟೇ ಪುಟಗಳಲ್ಲಿ ಒಂದು ದಟ್ಟ ಜೀವನಾನುಭವವನ್ನು ಕಟ್ಟಿಕೊಡಬಲ್ಲ, ಹಾಗೆ ಕತೆಯ ಒಂದೊಂದು ಸಾಲೂ ಬ್ಲೇಡಿನಷ್ಟೇ ಹರಿತವಾಗಿರಬೇಕು, ಬೆಂಕಿ ಪಟ್ನದ ಬಾಕ್ಸಿನೊಳಗಿನ ಒಂದೊಂದು ಕಡ್ಡಿಯ ಹಾಗೆ, ಪ್ರತೀ ಕಡ್ಡಿಗೂ ಸ್ಪಾರ್ಕ ಆಗುವ ಗುಣವಿರುವಂತೆ ನಮ್ಮ ಕತೆಯ ಒಂದೊಂದು ಸಾಲಿಗೂ ಅಂಥದೊಂದು ಶಕ್ತಿಯಿರಬೇಕು.

ಹಾಗೊಂದು ‘ಕೌಸ್ತುಭ ಸೌಧ’ ಅನ್ನುವ ಶೀರ್ಷಿಕೆಯ ಕತೆ ಇಲ್ಲಿದೆ. ಒಂದು ಮನೆತನಕ್ಕೆ ವಂಚನೆ ಮಾಡಿ, ಆ ಮನೆಯವರ ಸರ್ವನಾಶಕ್ಕೆ ಕಾರಣನಾದ ವ್ಯಕ್ತಿಯೊಬ್ಬ, ಆ ಮನೆಯನ್ನೇ ತನ್ನದನ್ನಾಗಿ ಮಾಡಿಕೊಂಡು ಅಲ್ಲೇ ವಾಸಿಸುತ್ತಿರುವಾಗ ತಾನು ಮೆರೆದ ಅಮಾನವೀಯತೆಯು ಪ್ರಜ್ಞೆಯೊಂದು ಕಾಡುತ್ತ ಹಿಂಸಿಸುವ ತೆರದಲ್ಲಿ ಅವನಿಗೆ ಹಗ್ಗವೂ ಹಾವಾಗಿ ಭಯಹುಟ್ಟಿಸುತ್ತದೆ. ಹಾಗೆ ‘ಶಾಪಗ್ರಸ್ತ ಆತ್ಮದ ಹಾಗಿರುವ’ ಮನೆ ಕೌಸ್ತುಭ ಸೌಧದ ಕತೆ ಹೇಳುವ ರಮ್ಯಾ ಎನ್ನುವ ಯುವತಿ, ತನ್ನ ಮೊದಲಿನ ಹೆಸರನ್ನು ಬದಲಾಯಿಸಿಕೊಂಡು, ಆ ಕತೆಯ ಚೌಕಟ್ಟಿನಿಂದ ಹೊರಬಂದು ನಿಂತು ಕಥಿಸುತ್ತಿದ್ದಾಳೋ ಅನ್ನುವ ರೀತಿಯಲ್ಲಿ ಆ ಚಿತ್ರಗಳು ತಟ್ಟಿ ತಟ್ಟಿ ನಮ್ಮ ಮನಸ್ಸನ್ನು ಮಾನವೀಯಗೊಳಿಸುತ್ತವೆ. ಸಾಹಿತ್ಯ ಆ ನಿಟ್ಟಿನಲ್ಲಿ ನಮ್ಮನ್ನು ಮಾನವೀಯಗೊಳಿಸುವಂಥದ್ದು. ಕಳ್ಳರೆನಿಸಿಕೊಂಡವರು ಎಸಗಿದ ಕಳ್ಳತನವನ್ನು ಒಂದು ಮಾನವೀಯ ನೆಲೆಯಲ್ಲಿ ನೋಡಲು ಸಾಧ್ಯವಾಗುವುದಾದರೆ, ಕೆಲವು ಸಂದರ್ಭಗಳಲ್ಲಿ ಉಳ್ಳವರ ಬಳಿಯಿದ್ದುದನ್ನು ಕದ್ದು ಇಲ್ಲದವರಿಗೆ ಹಂಚುವ ಒಬ್ಬ ಕಳ್ಳ ನಮಗೆ ಅತ್ಯಂತ ಆಪ್ತನಾಗಬಲ್ಲ, ಅಥವಾ ಹೊಟ್ಟೆ ಹಸಿವಿಗಾಗಿ ಒಂದು ಅಂಗಡಿಯಿಂದ ಬ್ರೆಡ್ಡಿನ ತುಂಡನ್ನು ಕದ್ದ ಅನಾಥ ಬಾಲಕನೊಬ್ಬ ನಮ್ಮ ಅಂತಃಕರಣ ಕಲಕಬಲ್ಲ ಅಂತಾದರೆ ಅದು ಸಾಹಿತ್ಯದಲ್ಲಿ ಮಾತ್ರ ಸಾಧ್ಯ.

 

ಇಲ್ಲಿ ಬರುವ ಒಂದು ಕತೆ ‘ಬಡವರ ಬಂಗಾರ’ ಇದರಲ್ಲಿ ಕೆಲಸದ ಹುಡುಗಿಯೊಬ್ಬಳು ತನ್ನ ಮಾಲಿಕರ ಮನೆ ಹುಡುಗನ ಚಿನ್ನದ ಚೈನನ್ನು ಕದ್ದಳೇನೋ ಅನ್ನುವ ಸಂಶಯದ ಬಿಂಬ ಹೊತ್ತು ಕತೆ ಆರಂಭಗೊಳ್ಳುತ್ತದೆ. ಓದುತ್ತಾ ಓದುತ್ತಾ ಸಹೃದಯರನ್ನು ಮಾನವೀಯತೆಯೆಡೆಗೆ ಒಯ್ಯುವ ರೀತಿ ಅನನ್ಯ, ಇಲ್ಲದಿದ್ದವರು ಕದ್ದರೆ ತಪ್ಪಿಲ್ಲ ಎನ್ನುವ ಭಾವ ಬರುವಂತೆ ಕಥೆಗಾರ್ತಿ ಅಭಿವ್ಯಕ್ತಿಸುವದು, ಇವರ ಮನಸ್ಸು ಯಾರ ಪರ ತುಡಿಯುತ್ತಿದೆ ಅನ್ನುವುದು ಇಲ್ಲಿ ಮುಖ್ಯ. ಲೇಖಕಿ ಉಳ್ಳವರ ಪರ ಇದ್ದಾರೋ, ಬಡವರ ಪರ ಇದ್ದಾರೋ, ಇದು ಕತೆಯ ಆಶಯವನ್ನು ಒಟ್ಟುಗೂಡಿಸುವಂಥದ್ದು. ಕೇವಲ ಎಂಬತ್ತೈದು ಜನ ಬಂಡವಾಳಶಾಹಿಗಳು ಇಡೀ ಜಗತ್ತಿನ ಜನರ ಹಣದಲ್ಲಿ ಸರೀ ಅರ್ಧ ಭಾಗವನ್ನು ಕಬಳಿಸಿ ಕೂತಿರುವಾಗ, ಇಂಥದೊಂದು ಆರ್ಥಿಕ ಅಸಮತೋಲನದ ಕಾರಣವನ್ನು ನಾವು ಸರಿಯಾಗಿ ಗ್ರಹಿಸಬೇಕಾದರೆ, ಕಾರ್ಲಮಾಕ್ರ್ಸನ ದಾಸ್ ಕೆಪಿಟಲ್ ಅಭ್ಯಸಿಸಬೇಕು. ಹಸಿದವನ ಎದುರು ರೊಟ್ಟಿ ಇಡು ಹೊರತು ಅಕ್ಷರವಲ್ಲ ಅಂದ ಹಾಗೆಯೇ ಇದೂ ಕೂಡ.

 

ಸಾಹಿತ್ಯ ಯಾವಾಗಲೂ ಮನಸ್ಸು ಮಾರಿಕೊಂಡವರ ಪರ ಇರಲಿಕ್ಕೆ ಸಾದ್ಯವೇ ಇಲ್ಲ. ಹೀಗೆಂದ ಕೂಡಲೇ ನೆನಪಿಗೆ ಬರುವ ಇನ್ನೊಂದು ಕತೆಯೆಂದರೆ, ಅದು ಒಬ್ಬ ಬಾಡಿಗೆ ತಾಯಿಯ ಕುರಿತಾಗಿರುವ ವ್ಯಾಖ್ಯಾನ. ‘ಸಂಯುಕ್ತ’ ಆ ಕತೆಯ ಹೆಸರು. ಇಲ್ಲಿಯ ವಿಷಯ ವಸ್ತು ಕನ್ನಡ ಕಥಾ ಸಾಹಿತ್ಯಕ್ಕೆ ಅಪರೂಪದ್ದು. ಹುಡುಕಿದರೆ ಏಳೆಂಟು ಕತೆಗಳು ದೊರಕಬಹುದಷ್ಟೇ. ನಿಜಕ್ಕೂ ಸೂಕ್ಷ್ಮ ಸಂವೇದನೆಯ ಹೆಣ್ಣುಮಗಳೊಬ್ಬಳು ಹಣಕ್ಕಾಗಿ ಒಂದು ಮಗುವನ್ನು ತನ್ನ ಒಡಲಲ್ಲಿ ಹೆತ್ತು ಹೊತ್ತು ಇನ್ನೊಬ್ಬರಿಗೆ ಕೊಟ್ಟು ಬಿಡುವ ಘಳಿಗೆ, ಒಂದು ರೀತಿಯಲ್ಲಿ ಗರ್ಭವನ್ನು ವ್ಯಾಪಾರದ ಮಾಧ್ಯಮವನ್ನಾಗಿಸುವದು, ಇದೂ ಕೂಡ ಮನಸ್ಸನ್ನು ಮಾರಿಕೊಳ್ಳುವ ಇನ್ನೊಂದೇ ಲಕ್ಷಣ, ಅಥವಾ ಅದನ್ನು ನಾವು ಯಾವ ಮನದಂಡದ, ಯಾವ ಮೌಲ್ಯದ ತಕ್ಕಡಿಯಲ್ಲಿಟ್ಟು ನೋಡಬೇಕು ಅನ್ನುವುದು ಚಿಂತನೆಗೆ ಹಚ್ಚುವ ಸಂಗತಿ. ಈ ಆಧುನಿಕ ಕಾಲಘಟ್ಟದಲ್ಲಿ ಮಾರಣಾಂತಿಕವಾದಂತಹ ಹೊಟ್ಟೆಯ ಹಸಿವು ಮತ್ತು ಅದಕ್ಕಂಟಿದ ಬಡತನಕ್ಕೆ, ತಾಯ್ತನದ ಭಾವನಾತ್ಮಕತೆಯನ್ನು ಕೊಲ್ಲುವ ಅನಿವಾರ್ಯತೆಯ ಶಕ್ತಿಯೊಂದು ಪ್ರಾಯೋಗಿಕವಾಗಿ ಒದಗಿಬರುತ್ತದೋ ಯೋಚಿಸಬೇಕು.

ಹಣಕ್ಕೆ ಪರ್ಯಾಯವಾಗಿ ಹೆಣ್ಣಿನ ದೇಹ ಎಂಬಂಥ ರೀತಿಯ ಯೋಚನೆಯೇ ಮೂಲದಲ್ಲಿ ತಪ್ಪು. ಅದೇ ಬ್ಯಾಂಕಾಕಿನಲ್ಲಿ ವೇಶ್ಯಾ ವೃತ್ತಿಯನ್ನು ಸರಕಾರವೇ ಅಧಿಕೃತ ಉದ್ಯಮವಾಗಿ ಮಾಡಿದ ರೀತಿ ನಿಜಕ್ಕೂ ಖಂಡನೀಯ. ನಮ್ಮಲ್ಲಿಯೂ ಕೆಲ ತಿಳಿಗೇಡಿ ಮನಸ್ಸುಗಳು ಇದಕ್ಕೆ ಬೆಂಬಲ ವ್ಯಕ್ತಪಡಿಸುವುದನ್ನು ನಾವು ಕಂಡಿದ್ದೇವೆ. ಹೆಣ ್ಣನ ದೇಹದ ಅಂಗಾಂಗಗಳನ್ನು ಒಂದು ಉದ್ಯಮವನ್ನಾಗಿ ಅಂಗೀಕರಿಸುವುದಕ್ಕೆ, ಈ ವ್ಯವಸ್ಥೆಯ ಲಂಪಟತನ ಮತ್ತು ಅಸಮಾನ ಮಾನವತೆಯೇ ಕಾರಣ. ಅತ್ಯಾಚಾರಗಳು ನಡೆಯುವದೂ ಇಂಥ ವಿಕೃತಿಯಿಂದಲೇ. ಅವಳ ದೇಹದಲ್ಲಿ ಗರ್ಭಕೋಶ ಮಾತ್ರವಲ್ಲ, ಮಿದುಳು ಮತ್ತು ಮನಸ್ಸೂ ಇದೆ ಎನ್ನುವ ಅರಿವನ್ನು ನಮ್ಮ ಸಮಾಜ ಪಡೆದುಕೊಳ್ಳಲು ಇನ್ನೆಷ್ಟು ಶತಮಾನ ಬೇಕು?

ಅಂಥದೊಂದು ‘ಬನ್’ ಎನ್ನುವ ಕತೆ ಇಲ್ಲಿದೆ. ತನ್ನ ಹೆಂಡತಿ ಮಗಳ ಸಂತೋಷವೇ ತಾನು ಒಯ್ಯುವ ಒಂದು ಬನ್ಸ್‍ನಲ್ಲಿದೆ ಅಂತ ತಿಳಿದ ಶಂಕರನ ಅನಿವಾರ್ಯತೆಯೇ ಕತೆಗೊಂದು ಪರಿಹಾರದ ಮುಕ್ತತೆಯನ್ನು ಒದಗಿಸಿದೆ. ಶಂಕರನ ಲಕ್ಷಗಟ್ಟಲೇ ಆಸ್ಪತ್ರೆ ವೆಚ್ಚ ಭರಿಸಿದ ಶಾಸ್ತ್ರಿ ಎಂಬ ವ್ಯಕ್ತಿಯು ಅವನ ಹೆಂಡತಿ ಜಲಜೆಯನ್ನು ಖರೀದಿಸಿದಂತೆ ಆಡುತ್ತಿದ್ದ ಬಗೆಯಲ್ಲೇ, ಬಡತನದಲ್ಲಿರುವ ಸ್ತ್ರೀಬದುಕಿನ ವಿಭಿನ್ನ ಸಂಕಟಗಳನ್ನು ಕೌಟುಂಬಿಕ ನೆಲೆಯಲ್ಲಿ ನೋಡುವಂಥದ್ದು. ಹಣಕ್ಕೆ ಪರ್ಯಾಯವಾಗಿ ಹೆಣ ್ಣನ ದೇಹ ಎಂಬ ರೀತಿಯಲ್ಲಿ ಬೆಳೆದ ವ್ಯವಸ್ಥೆಯ ನಿರ್ಲಜ್ಜೆ ಸ್ತ್ರೀ ಅಸ್ಮಿತೆಯನ್ನು ಪ್ರಶ್ನಿಸುವಂಥದ್ದು. ಅಸಮಾನತೆಯನ್ನು ಬಿಂಬಿಸುವಂಥದ್ದು. ‘ಬೀಡಿ ಕಟ್ಟುವ ಮಾಲಿಕರ ಜೊಲ್ಲೂ ಅವಳಿಗೆ ಮೈ ಉರಿಸುತ್ತಿತ್ತು’ ಎಂಬಲ್ಲಿ ಹೆಣ್ಣನ್ನು ದೇಹ ಮಾತ್ರವಾಗಿ ನೋಡುವ ಸಮಾಜದ ವಿಕೃತಿಯ ಪದರನ್ನು ಕತೆ ಅನೂಚನವಾಗಿ ಶೋಧಿಸಬಲ್ಲದು ಮತ್ತು ಕಥಾ ಆಶಯದಲ್ಲಿ ಸ್ತ್ರೀತ್ವ ಎಚ್ಚರಗೊಳ್ಳುವುದೂ ಈ ಹಂತದಲ್ಲಿಯೇ.


‘ಕಾರ್ಮೋಡ ಸರಿದಾಗ ‘ ಕೂಡ ಅಂಥದೇ ಬಿಂಬದ ಕತೆ. ಇಲ್ಲಿ ಹೆಣ್ಣಿನ  ಮನಸ್ಥಿತಿಯ ಮಿತಿ ಹಾಗೂ ಸಾಧ್ಯತೆಗಳ ಕುರಿತು ಹೇಮಾ ಪ್ರಶ್ನೆಗಳನ್ನು ಎತ್ತುತ್ತಾರೆ. ಮಲತಾಯಿಯೊಬ್ಬಳು ತನ್ನ ಮಲಮಗಳನ್ನು ಪ್ರೀತಿಸುವ ಸಂದರ್ಭ ಹೇಗೆ, ಎಲ್ಲಿ, ಯಾವ ಕ್ಷಣದಲ್ಲಿ ಒದಗಿಬರುತ್ತದೆ ಎಂಬಲ್ಲಿ ‘ತಾಯ್ತನ ಜಾಗ್ರತಗೊಳಿಸುವ ಕ್ಷಣ’ವನ್ನು ಮೆಲುಕು ಹಾಕುವಂತಾಗುತ್ತದೆ, ಮಿತಿ ಹಾಗೂ ಸಾಧ್ಯತೆ ಅಂದಕೂಡ್ಲೇ ಈ ಸಂಕಲನದಲ್ಲಿರುವ ‘ಮೌನದಾಚೆಯ ಮಾತಿನಲ್ಲಿ’ ಕತೆಯ ಪ್ರಸಂಗವೊಂದು ನೆನಪಾಯಿತು. ಅಲ್ಲಿ ಬರುವ ಸಂದರ್ಭವನ್ನು ಕಥೆಗಾರ್ತಿ ಬೇರೆ ಸಾಧ್ಯತೆಗಳ ಕಡೆಗೆ ಬಿಟ್ಟು ಕೊಡದೇ ಒಂದೇ ಮುಖದಲ್ಲಿ ಕಂಡಿದ್ದಾರೆ ಅನ್ನುವುದಕ್ಕೆ ಒಂದು ಉದಾಹರಣೆ ಇಲ್ಲಿದೆ.

ಕಥೆ ಕಾದಂಬರಿ ಕವಿತೆಗಳೆಲ್ಲ ಸಹಜವಾಗಿಯೇ ಹುಟ್ಟುವುದು ನಿಜವಾದರೂ, ನಮ್ಮ ಕೈ ಬೆರಳಿನ ಉಗುರು ಕೂಡ ಸಹಜವಾಗಿಯೇ ಬೆಳೆದಿರುತ್ತದೆ. ಆದರೆ ಅದನ್ನು ಹಾಗೆಯೇ ಬೆಳೆದುಕೊಂಡು ಹೋಗಲು ನಾವು ಬಿಟ್ಟುಬಿಡುತ್ತೇವೆಯೇ? ಬೆರಳಿಗಿಂತ ಮುಂದಕ್ಕೆ ಬೆಳೆದಿದ್ದನ್ನು ಕತ್ತರಿಸುತ್ತೇವೆ, ಇಲ್ಲದಿದ್ದರೆ ಟ್ರಿಮ್ ಮಾಡುತ್ತೇವೆ, ಯಾವುದು ಕತೆಗೆ ಅನಗತ್ಯವೋ ಅದನ್ನು ಕತ್ತರಿಸಿ ಒಗೆಯುವ ಉದಾರತೆ ಕಥೆಗಾರರಿಗೆ ಇರಬೇಕು. ಹಗೆ ಕತೆಗಳನ್ನು ಕೂಡ ಟ್ರಿಮ್ ಮಾಡಿ, ಕಲರ್ ಪೇಂಟ್ ಹಚ್ಚಿ ಕಲಾತ್ಮಕಗೊಳಿಸಬೇಕಾಗುತ್ತದೆ. ಇಲ್ಲಿಯ ‘ಮೌನದಾಚೆಯ ಮಾತು’ ಕಥೆಯಲ್ಲಿ ಹೇಮಾ ಅಂಥದ್ದೊಂದು ಮಿತಿ ಇಟ್ಟುಬಿಟ್ಟಿದ್ದಾರೆ. ಅದರಲ್ಲಿ ನಾನು ಕಂಡ ಹಾಗೆ ಒಂದು ಅಪೂರ್ವವಾದ ಹೊಸ ಸಾಧ್ಯತೆಯಿತ್ತು, ಅದನ್ನು ಹೇಮಾ ಒಂದೇ ಪ್ಯಾರಾದಲ್ಲಿ ಮುಗಿಸಿಬಿಟ್ಟಿದ್ದಾರೆ. ಅದು ಎಲ್ಲಿ ಅಂದರೆ, ಸುಜಾ ತನ್ನ ತಾಯಿಯ ಸಾವಿನಿಂದ ಕಂಗಾಲಾಗಿ, ತಳಮಳಿ, ನೊಂದು, ಆಘಾತಗೊಂಡಿರುವ ಸಂದರ್ಭ. ಹಾಗೆ ಆತಂಕದಲ್ಲಿ ಮಾನಸಿಕ ಸ್ಥಿಮಿತ ಕಳಕೊಳ್ಳುವ ಸುಜಾ, ತನ್ನ ತಾಯಿಯ ಹಾಗೆಯೇ ಸೀರೆ ಉಟ್ಟುಕೊಳ್ಳುವುದು, ವೀಳ್ಯದೆಲೆ ತಿನ್ನುವುದು ಹಾಗೂ ತಾಯಿಯಂತೆಯೇ ವರ್ತಿಸಲು ಆರಂಭಿಸುತ್ತಾಳೆ. ಕತೆಗೊಂದು ಸಿದ್ಧಿ ಅನ್ನುತ್ತರಲ್ಲ, ಅದು ಇಲ್ಲಿ ತಾನೇ ತಾನಾಗಿ ಘಟಿಸಿತ್ತು. ಹೀಗೆ ತಾನಾಗೇ ಸಂಭವಿಸಿದ ಕಥಾ ದರ್ಶನವನ್ನು ಯಾವಾಗಲೂ ಬಿಟ್ಟುಕೊಡಬಾರದು. ಅದನ್ನೇ ಬಳಸಿಕೊಂಡು ಹೋಗಿ, ಕಥಾ ವಸ್ತುವನ್ನು ಅದರ ಸುತ್ತಲೂ ಸಾವಯವ ಸಮಗ್ರೀಕರಣಗೊಳ್ಳುವಂತೆ ಹೆಣ ಯಬಹುದಿತ್ತು.

ಆದರೆ ಹೇಮಾ ಇಲ್ಲಿ ಅವಸರಕ್ಕೆ ಸಿಲುಕಿದ್ದಾರೆ. ಆ ಒಂದು ಸಾಧ್ಯತೆಯ ಬದಿ ತಿರುಗಿಯೂ ನೋಡದೇ ಅದನ್ನು ಒಂದೇ ಸಣ್ಣ ಪ್ಯಾರಾದಲ್ಲಿ ಹೇಳಿ ಮುನ್ನಡೆದಿದ್ದಾರೆ. ಎಷ್ಟೋ ಸಲ ಇಂಥ ಅವಸರ ಹಾಗೂ ಧಾವಂತಗಳಿಂದ ಅಮೂಲ್ಯ ಕಥಾ ಕ್ಷಣವನ್ನು ನಾವು ಕಳೆದುಕೊಂಡು ಬಿಡುತ್ತೇವೆ ಅನಿಸುತ್ತದೆ. ಎಲ್ಲ ಕೆಲಸಕ್ಕೂ ಎಲ್ಲ ಕ್ರಿಯೆಗೂ ಅವಸರ ಅವಘಡವೇ. ಮವಿನ ಕಾಯಿಗೆ ಇಂಜೆಕ್ಟ್ ಮಾಡಿ ಹಣ್ಣು ಮಾಡಿದ ಹಗೆಯೇ ಅದು. ಹಸುವೊಮದು ದನಗಳ ಗುಂಪಿನಲ್ಲಿ ತನ್ನ ಕರುವನ್ನು ಸಹಜವಾಗಿ ಗುರುತಿಸಿದಂತೆ, ಟೆರೇಸಿನ ನೀರು ಇಂಗುಗುಂಡಿಯೆಡೆ ನಿರಾಯಾಸ ದುಮುಕಿದಂತೆ, ಬರವಣ ಗೆ ಸಹಜ ಮಾನವೀಯ ನೆಲೆಯದು.

ಸಂಕಲನದ ಶೀರ್ಷಿಕೆ ಹೊಂದಿದ ‘ಅವರೆಲ್ಲ ದೇವರಾಗಿದ್ದಾರೆ’ ಎಂಬ ಕತೆ ಈ ರೀತಿಯ ಭಾವವಲಯದ್ದು, ಇಲ್ಲಿ ಬಯಲಾಟ ಆಡುವ ಪಾತ್ರಧಾರಿಗಳ ಬದುಕು ಹೃದಯಂಗಮವಾಗಿ ಕಟ್ಟಿಕೊಂಡಿದೆ. ಉತ್ತಮ ಪುರುಷದಲ್ಲಿರುವ ಇಲ್ಲಿಯ ನಿರೂಪಣೆಯಲ್ಲಿ ಪಾತ್ರಧಾರಿಗಳೂ ದೇವರಾಗುವ ಬಗೆಯನ್ನು ಹೇಮಾ ಸೂಕ್ಷ್ಮವಾಗಿ ವಿವರಿಸುತ್ತಾರೆ. ಕೆಲಸ ತೊಗೊಳ್ಳಲು ಮಗು ಸಿಂಚನಾಗೆ ಅಮ್ಮ ಹೇಳುವ ರಾವಣ, ರಾಕ್ಷಸ, ಕುದಿಯುವ ಬಾಣಲೆ ಅಂತೆಲ್ಲ ಬರುವ ಕತೆಯಲ್ಲಿ ಮಕ್ಕಳ ಅಂತಃಸತ್ವದ ತಿದ್ದುವಿಕೆಗೂ ಕಾರಣವಾಗುವ ಬಗೆ ಮತ್ತು ಪಾತ್ರದವರ ಮಕ್ಕಳು ಶಾಲೆಯನ್ನೇ ಕಾಣದ ಪರಿಸ್ಥಿತಿಯಲ್ಲಿರುವ ದಿಗಿಲುಗಳು ಕತೆಯನ್ನು ಇನ್ನೊಂದೇ ಸ್ಥರದಲ್ಲಿ ಚಿಂತಿಸಲು ಅನುವು ಮಾಡಿಕೊಡುತ್ತದೆ. ಇಲ್ಲಿ ಬರುವ ‘ಅಪ್ಪನ ಪ್ರಪಂಚದಲ್ಲಿ ಕೇವಲ ಮನುಷ್ಯರಿರುತ್ತಾರೆ, ಜಾತಿ ವರ್ಗ ಧರ್ಮ ಏನಿಲ್ಲ, ಅವರಿಗೆ ಕಾಣೋದು ಜನರು ಮತ್ತವರ ನೋವು, ಹಿರಿತನಕ್ಕೆ ತಕ್ಕ ಗೌರವ ನೀಡಬೇಕಾದುದೂ ಕೃತಜ್ಞತೆ ಸ್ಮರಿಸಬೇಕಾದುದೂ ಮಾನವ ಧರ್ಮ, ಬಹುಶಃ ಆ ಧರ್ಮವೂ ಸೊರಗುತ್ತಿರಬಹುದು’ ಎಂಬೆಲ್ಲ ಓತಪ್ರೋತವಾಗಿ ಬರುವ ಚಿಂತನೆಗಳು ಕತೆಯ ಘನತೆಯನ್ನು ಇದ್ದಲ್ಲೇ ಹೆಚ್ಚಿಸಿವೆ. ಕತೆಗಳ ಕುರಿತು ಇಷ್ಟು ಸಾಕು.

ಕನ್ನಡ ಕಥಾ ಕ್ಷೇತ್ರದಲ್ಲಿ ವಿಶ್ವವಿದ್ಯಾಲಯಗಳ ಅಕೆಡೆಮಿಕ್ ಜನವಷ್ಟೇ ಬರೆಯುವ ಜಾಯಮಾನ ಹೋಗಿ ತುಂಬ ಕಾಲವಾಗಿದೆ. ಕೃಷಿಕರು, ವ್ಯಾಪಾರಸ್ಥರು, ಬ್ಯಾಂಕು ಪೋಸ್ಟು ಕೆಇಬಿ ಗ್ರಂಥಾಲಯಗಳಲ್ಲಿ ಕೆಲಸ ಮಾಡುವ ಜನ, ಡ್ರೈವರ್ ಕಂಡಕ್ಟರ್ ಪೋಲೀಸ್ ಸೇವೆಯಲ್ಲಿರುವವರು, ಪತ್ರಕರ್ತರು, ಗ್ರಹಿಣ ಯರು, ವೈದ್ಯರು, ಎಂಜಿನಿಯರ್‍ಗಳು ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಬರಹಗಾರರೂ ಇಂದು ಬರೆಯುತ್ತಿದ್ದಾರೆ. ಅಂದರೆ ಎಲ್ಲ ರೀತಿಯ ಅನುಭವ ಲೋಕವೂ ತೆರೆದುಕೊಳ್ಳತ್ತಲಿದೆ. ಇದು ಆಗಬೇಕಿತ್ತು, ‘ಒಂದೇ ತರಹದ ಬರಹಗಾರರ ಬರವಣ ಗೆ ಒಂದು ರೀತಿಯಲ್ಲಿ ಏಕ ತರಹದ ತರುಲತೆಗಳಿರುವಂಥ ಉದ್ಯಾನದ ಜಾಯಮಾನವುಳ್ಳದ್ದು. ಇಂದಿನ ಕನ್ನಡ ಸಾಹಿತ್ಯದ್ದು ಕಾಡಿನ ಜಾಯಮಾನ’ ಎಂಬ ಕುಂವೀ ಮಾತನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

ಹೇಮಾ ಅವರದು ಸ್ತ್ರೀ ಪ್ರಜ್ಞೆಯನ್ನು ಕಾಯ್ದುಕೊಂಡು ಬಂದ ನಗರಪ್ರಜ್ಞೆಯ ಕತೆಗಳು. ಸೃಜನಶೀಲವಾದಂತಹ ಭಾಷೆ ಮತ್ತು ತಂತ್ರವನ್ನು ವಸ್ತುವಿಗೆ ತಕ್ಕುದಾಗಿ ದುಡಿಸಿಕೊಳ್ಳುವ ರೂಢಿ ಹೇಮಾ ಅವರಿಗೆ ಬರೆಯುತ್ತ ಬರೆಯುತ್ತ ಒಲಿಯುವಂಥದ್ದು. ಓದಿದಕೂಡಲೇ ನಮ್ಮ ಅನುಭವವೇ ಆಗುವಂಥ ಪರಿಣಾಮಕಾರಿಯಾದ ಅಭಿವ್ಯಕ್ತಿಯ ಕತೆಗಳು ಇನ್ನೂ ಹೆಚ್ಚು ಹೆಚ್ಚಾಗಿ ಹೇಮಾ ಅವರಿಗೆ ಸಿದ್ಧಿಸಲಿ ಎಂದು ಈ ಸಂದರ್ಭದಲ್ಲಿ ಮಮತೆಯಿಂದ ಹಾರೈಸುವೆ.

3 comments

  1. ನಿಮ್ಮ ಪ್ರಕಟಣೆಯ ಎಂಟರಲ್ಲಿ ಆರು ಪುಸ್ತಕಗಳು ನನ್ನಲ್ಲಿವೆ.. ಉತ್ತಮ ಪುಸ್ತಕಗಳನ್ನು ಪ್ರಕಟಿಸುತಿದ್ದೀರಿ, ಅಭಿನಂದನೆಗಳು – ಕಂನಾಡಿಗಾ ನಾರಾಯಣ

  2. ವಾಸ್ತವದ ಸಂಕ್ಷಿಪ್ತ ನಮ್ಮ ನಮ್ಮಗಳ ನಡುವೆ ಗಟಿಸುವಂತಹ ಘಟನೆಗಳ ಪೂರಕ ಭಾವಗಳೆಂಬ ಅಲೆಗಳೆ ಮಳೆಯ ಅಂಕುರತೆಯ ಪ್ರತಿರೂಪಕದಂತೆ ಜಿನುಗಿದ ಮಳೆಯ ಹನಿಗಳ ಜೇಂಕಾರವೇ ಸರಿ. ಒಬ್ಬ ರೈನ ಮಗನಾಗಿ ಕಾರ್ಯವನ್ನು ವೀಕ್ಷಿಸಿದ ಸಣ್ಣ ಹಿರಿಮೆ ನನಗಿಹುದು.

  3. ನನ್ನ ಬರವಣಿಗೆಯನ್ನು ಪ್ರಕಟಿಸುತ್ತಾ ಬಂದಿರುವ ನಿನಗೆ ತುಂಬು ಹೃದಯದ ಧನ್ಯವಾದಗಳು. ಇತ್ತೀಚಿಗೆ ನನ್ನ ಅವಳಿ ಕೃತಿಗಳ ವಿಮರ್ಶೆಯನ್ನು ಬಹಳ ಸುಂದರವಾಗಿ ಪ್ರಕಟಿಸಿದ್ದು ಎಲ್ಲರ ಮೆಚ್ಚುಗೆಯನ್ನು ಪಡೆದಿರುವುದು ಸುಳ್ಳಲ್ಲ.

    ಲೇಖಕಿ ಸುನಂದಾ ಅವರಿಗೂ ಮನಪೂರ್ವಕ ಧನ್ಯವಾದಗಳು.

Leave a Reply