ವಿಶ್ ಮಾಡುವ ಚಾನ್ಸ್ ಮಿಸ್ ಆಗೋಯ್ತು!

                                                                         ರಾಜೀವ ನಾರಾಯಣ ನಾಯಕ 

ಈ ಫೇಸ್ಬುಕ್ಕು ಟ್ವಿಟರುಗಳಂಥ ಸಾಮಾಜಿಕ ಜಾಲತಾಣಗಳು ಸೆಲೆಬ್ರೇಟಿಗಳ ಮಾತ್ರವಲ್ಲ ಸಾಮಾನ್ಯರ ಬರ್ತಡೇಗಳನ್ನೂ ಜಗಜ್ಜಾಹೀರು ಮಾಡಿಬಿಡುತ್ತಿವೆ.. ನೂರಾರು ಮೈಲಿ ದೂರದಲ್ಲಿದ್ದವರೂ, ಅಕ್ಕಪಕ್ಕದವರೂ ಅಷ್ಟೇಕೆ ಮನೆಯವರೂ ಈ ಮಾಧ್ಯಮಗಳ ಮೂಲಕವೇ ಶುಭಾಶಯಗಳನ್ನು ಹೇಳುವುದು ಈಗ ಸಾಮಾನ್ಯವಾಗಿದೆ.

ಸಾವಿರಾರು ಸ್ನೇಹಿತರಿದ್ದು ನೀವು ತುಸು ಜನಪ್ರಿಯರಾಗಿದ್ದರಂತೂ ಶುಭಹಾರೈಕೆಗಳು ರಪರಪನೇ ನಿಮ್ಮ ಇನ್ ಬಾಕ್ಸ್ ನಲ್ಲಿ ಬಂದು ಬೀಳುತ್ತವೆ.  ಹುಟ್ಟುಹಬ್ಬ ಆಚರಿಸಿಕೊಳ್ಳದಿರುವ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟೇನು ಜನಪ್ರಿಯರಲ್ಲದ ನನ್ನಂಥವರಿಗೂ ಫೇಸ್ಬುಕ್ಕು ವಾಟ್ಸ್ಯಾಪುಗಳಲ್ಲಿ ಪರಿಚಿತರು ಹಿರಿ-ಕಿರಿಯರು ಮಾಡಿದ ವಿಶ್ ಗಳು  ಆ ದಿನವನ್ನು ಒಂದಿಷ್ಟು ಭಿನ್ನ ಅನಿಸುವಂತೆ ಮಾಡುತ್ತವೆ ಎನ್ನುವುದು ನಿಜವೇ! ಆತ್ಮೀಯರ ಸಂದೇಶ ಬರದಿದ್ದರೆ ಇನ್ನೂ ಯಾಕೆ ವಿಶ್ ಮಾಡಿಲ್ಲವ್ವ …ಎಂದು ಕಾಯುವುದೂ ಸುಳ್ಳಲ್ಲ!

ಎಂದಿನಂತೆ ಶೇರ್ ಆಟೋ ಕ್ಯೂ, ಲೋಕಲ್ ಟ್ರೇನುಗಳ ಧಕ್ಕಾಮುಕ್ಕಿ, ಸ್ಟೇಶನ್ ಪಕ್ಕದಲ್ಲಿ ವಡಾಪಾವ್ ನಾಸ್ಟಾ ಇತ್ಯಾದಿ ನಿತ್ಯದ ಸಾಮಾನ್ಯ ದಿನಚರಿಗಳಲ್ಲೇ ಮೊನ್ನೆಮೊನ್ನೆ ನನ್ನ ಜನುಮದಿನವು ಕಳೆದು ಹೋದರೂ ಸಂಜೆ ಆಫೀಸಿನಿಂದ ಮರಳಿ ಬರುವಾಗಿನ ಒಂದು ಚಿಕ್ಕ ಅನುಭವವು ಆ ದಿನವನ್ನು ವಿಶೇಷ ಅನಿಸುವಂತೆ ಮಾಡಿದ್ದನ್ನು ಇಲ್ಲಿ ಶೇರ್ ಮಾಡುತ್ತಿದ್ದೇನೆ.

ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ಸಿನ ಫ್ಲಾಟಫಾರ್ಮಿನಲ್ಲಿ ಲೋಕಲ್ ಬರುತ್ತಿದ್ದಾಗಲೆ ಸಣ್ಣ ಸ್ಟಂಟ್ ಹೊಡೆದು ಒಳನುಗ್ಗಿ ಸೀಟು ಗಿಟ್ಟಿಸಿಕೊಂಡಿದ್ದೆ; ವಿಂಡೋ ಸೀಟ್ ಕೂಡ ದಕ್ಕಿಸಿಕೊಂಡಿದ್ದೆ. ( ಫೇಸ್ಬುಕ್ ಶುಭಾಶಯಗಳ ಪ್ರತಾಪ! ) ಕುರ್ಲಾ ಸ್ಟೇಶನ್ನಿಗೆ ಬರುವಷ್ಟರಲ್ಲಿ ಟ್ರೇನು ಫುಲ್ ಪ್ಯಾಕ್ ಆಗಿತ್ತು. ಇಪ್ಪತ್ತೈದು-ಇಪ್ಪತ್ತಾರರ ತರುಣನೋರ್ವ ಆ ಗಚ್ಚಾಗಿಚ್ಚಿಯಲ್ಲೇ ಕೈಯಲ್ಲಿ ಹಿಡಿದ ಚಿಕ್ಕ ಬ್ಯಾಗಿಗೆ ಧಕ್ಕೆಯಾಗದ ಹಾಗೆ ಕಾಳಜಿ ಮಾಡುತ್ತಿದ್ದ.

ನಾನು ಕುತೂಹಲದಿಂದ ಅದೇನು ಎಂದು ಊಹಿಸುತ್ತಿರುವಾಗಲೇ “ಜರಾ ಪಕಡೋ ಅಂಕಲ್” ಎಂದು ನನ್ನ ಕೈಗೆ ಇತ್ತ. ನೋಡುತ್ತೇನೆ, ಅದು ಕೇಕ್!! ಜೋಪಾನವಾಗಿ ಹಿಡಿದು ನನ್ನ ತೊಡೆಯ ಮೇಲಿಟ್ಟುಕೊಂಡೆ. ಕೇಕ್ ಕತ್ತರಿಸಲು ಚಿತ್ತಾರದ ನೈಫ್, ಒಂದು ಚಿಕ್ಕ ಕ್ಯಾಂಡಲ್ ಬಾಕ್ಸಿನ ಹೊರಗೆ ಅಂಟಿಕೊಂಡಿದ್ದವು. ಒಳಗಿರುವ ಕೇಕ್ ನೋಡೋಣ ಎಂಬ ಸಣ್ಣ ಆಸೆಯೊಂದು ಬಲವಾಗತೊಡಗಿತು. ಈ ಕೇಕ್ ನನ್ನ ಬಳಿಯೇ ಯಾಕೆ ಬಂತು? ಅದೂ ನನ್ನ ಜನ್ಮದಿನದಂದು? ನಿತ್ಯವೂ ಲಕ್ಷಾಂತರ ಜನ ಅಪರಿಚಿತರೊಂದಿಗೆ ಪರಿಚಿತ ಪ್ರಯಾಣಗೈಯುವ ಇವರಿಗೆಲ್ಲ ನನ್ನ ಬರ್ತಡೇ ಇಂದು ಎಂದು ಗೊತ್ತಾಯಿತೇ? ಕಂಪಾರ್ಟಮೆಂಟಿನಲ್ಲಿರುವ ಜನರೆಲ್ಲ ನಾನು ಕೇಕ್ ಕಟ್ ಮಾಡಲಿರುವುದನ್ನು ಕಾಯುತ್ತಿದ್ದಂತೆ ಅನಿಸತೊಡಗಿತು. ಬಹುಶ: ಇವರೆಲ್ಲ ಜೊತೆಯಾಗಿ “ಹ್ಯಾಪಿ ಬರ್ತ್ ಡೇ ಟು ಯೂ… ” ಎಂದು ಕೋರಸ್ ನಲ್ಲಿ ಹಾಡು ಕೂಡ ಹೇಳಬಹುದು…

ಅಚಾನಕ್ ಆಗಿ ಅನಿರೀಕ್ಷಿತವಾಗಿ ಚಿಟ್ಟೆಯಂತೆ ಹಾರಿ ಬಂದಿರುವ ಈ ಕೇಕ್ ಹೇಗೆ ನವಿರು ಭಾವವನ್ನು ಗರಿಗೆದರಿಸುತ್ತಿದೆ!
ಬರ್ತಡೇಗಳಲ್ಲಿ ಕೇಕ್ ಕಟ್ ಮಾಡುವ ರೂಢಿಯೇ ನಮಗಿರಲಿಲ್ಲ. ಈಗ ನಮ್ಮ ಮಕ್ಕಳ ಕಾಲದಲ್ಲಿ ಅದು ಸಾಮಾನ್ಯವಾಗಿದ್ದರೂ ನಾವು ಚಿಕ್ಕವರಿದ್ದಾಗ ನಮಗೆಲ್ಲ ಅದು ಗೊತ್ತೂ ಇರಲಿಲ್ಲ.

ನಮ್ಮ ಜನುಮದಿನದಂದು ನಮ್ಮ ತಾಯಿ ಏನಾದರೂ ಸಿಹಿ ಮಾಡುತ್ತಿದ್ದದ್ದು ನಿಜ. ಹಾಗಂತ ಬರ್ತಡೇ ವಿಶ್ ಮಾಡುವುದು ಅವಳಿಗಾಗಲಿ ನಮಗಾಗಲಿ ಗೊತ್ತಿರಲಿಲ್ಲ. ಆ ದಿನ ಒಂದು ಚಿಕ್ಕ ಸಂಭ್ರಮ ಅವಳಿಗೆ, ಅಷ್ಟೇ! ನಾವು ಹುಟ್ಟಿದ ಸಂದರ್ಭವನ್ನೂ,ಆಗಿನ ಚಿಕ್ಕಪುಟ್ಟ ಸಂಗತಿಗಳನ್ನೂ ನೆನೆದು ತನ್ನಷ್ಟಕ್ಕೆ ಎಂಬಂತೆ ಮಾತಾಡಿಕೊಳ್ಳುವಳು. ಉದ್ಯೋಗ ನಿಮಿತ್ತ ನಾವು ದೂರವಾದರೂ ನಮ್ಮ ಹುಟ್ಟಿದದಿನವನ್ನು ನೆನಪಿಟ್ಟು ಏನಾದರೂ ಸಿಹಿಮಾಡಿ, ಗಂಡನಿಗೂ ಅಕ್ಕಪಕ್ಕದವರಿಗೂ ಹಂಚುವುದನ್ನು ಮಾತ್ರ ಕೊನೆಯವರೆಗೂ ವ್ರತದಂತೆ ಪಾಲಿಸಿದಳು. ಅದು ಬಿಟ್ಟರೆ ಜನ್ಮದಿನವನ್ನು ನಾವು ಸಂಭ್ರಮಿಸುತ್ತಿದ್ದದ್ದು ಗಾಂಧಿ ಅಜ್ಜನದು ಮತ್ತು ಶ್ರೀಕೃಷ್ಣನದು ಮಾತ್ರ!

ನಾವು ಕಾಲೇಜಿಗೆ ಬರುವಷ್ಟರಲ್ಲಿ ಬರ್ತಡೇ ಕಾನ್ಸೆಪ್ಟ್ ಕಾಲಿಟ್ಟಿತ್ತು. ಅದನ್ನು ಸೆಲೆಬ್ರೇಟ್ ಮಾಡುವ ಉತ್ಸಾಹ ಉಕ್ಕುತ್ತಿತ್ತಾದರೂ ಕೈಯಲ್ಲಿ ಕಾಸಿರುತ್ತಿರಲಿಲ್ಲ. ಯಕ:ಶ್ಚಿತ್ ಪೆಪ್ಪರಮಿಂಟುಗಳಿಗೆ, ಗೆಳೆಯ- ಗೆಳತಿಯರಿಗಾಗಿ ಒಂದು ಗ್ರೀಟಿಂಗ್ ಕಾರ್ಡಿಗೂ ಕಾಸು ಸಿಗುವುದು ಕಷ್ಟವಾಗಿದ್ದ ದಿನಗಳವು. ಅಂಥದ್ದರಲ್ಲೂ ಅದು ಹೇಗೋ ಹಣ ಹೊಂದಿಸಿಕೊಂಡು ಅಂಕೋಲೆಯ ಜಿ ಸಿ ಕಾಲೇಜಿನ ಗೋಪಿ ಕ್ಯಾಂಟೀನಿನಲ್ಲಿ ಬೋಂಡಾ ಪಾರ್ಟಿ ನೀಡುತ್ತಿದ್ದವರು ನಮ್ಮ ಹೀರೋ ಆಗುತ್ತಿದ್ದರು. ಹಳ್ಳಿಕಡೆಗಳಿಂದ ಕಾಲೇಜಿಗೆ ಬರುತ್ತಿದ್ದವರಿಗೆ ಮನೆಯಲ್ಲಿ ಉಣ್ಣುತಿನ್ನುವುದಕ್ಕೆ ಅಂಥ ತೊಂದರೆಯಿಲ್ಲದಿದ್ದರೂ ಮೇಲು

ಖರ್ಚಿಗೆ ಹಣ ಹೊಂದಿಸುವುದು ಸುಲಭವಾಗಿರಲಿಲ್ಲ. ನನ್ನ ಗೆಳೆಯನೊಬ್ಬ ಶರ್ಟು ಹರಿದಿದೆ ಹುಟ್ಟಿದ ದಿನಕ್ಕಾದರೂ ಹೊಸದು ಹೊಲಿಸಿಕೊಳ್ಳಲು ದುಡ್ಡು ಕೊಡು ಎಂದು ಅಪ್ಪನಿಗೆ ವರಾತೆ ಹಾಕಿಹಾಕಿ ಅವನಪ್ಪ ಕೈಯಲ್ಲಿ ಹಣ ಇಲ್ಲದೆ ಅಟ್ಟದ ಮೇಲಿದ್ದ ಬೆಲ್ಲದ ಡಬ್ಬಿ ತಕ್ಕಾ ಹೋಗು ಅಂದಿದ್ದ. ಗೆಳೆಯನು ಕಾಲೇಜಿಗೆ ಬರುವ ಹಾದಿಯಲ್ಲೇ ಇದ್ದ ಶೆಟ್ಟರ ಅಂಗಡಿಯಲ್ಲಿ ಬೆಲ್ಲದ ಡಬ್ಬಿ ಇಳಿಸಿ ಅವರು ಕೊಟ್ಟ ಹಣವನ್ನು “ಯಾರಿಗೂ ಹೇಳಬೇಡ” ಎಂದು ಸೀಕ್ರೆಟಾಗಿ ನನ್ನ ಕಿಸೆಯಲ್ಲಿರಿಸಿದ್ದ.

ಗೆಳೆಯರ ಗುಂಪು ನನ್ನ ಕಿಸೆಯಲ್ಲಿ ರಿಸರ್ವ್ ಬ್ಯಾಂಕ್ ಶಾಖೆ ತೆರೆದಿರುವುದನ್ನು ಅದು ಹೇಗೋ ಪತ್ತೆ ಹಚ್ಚಿತ್ತು! ನಾನು ಲ್ಯಾಬೊರೇಟರಿಯಲ್ಲಿ ಪ್ರಾಕ್ಟಿಕಲ್ಸಿನಲ್ಲಿದ್ದಾಗ ನಾಲ್ಕಾರು ಜನ ಬಂದು ನನ್ನ ಕಿಸೆ ತಡಕಾಡಿ ಅಷ್ಟೂ ಹಣವನ್ನು ಕಸಿದುಕೊಂಡು ಹೋಗಬೇಕೆ! ಮತ್ತೆ ಶರ್ಟು ಹೊಲಿಸಿಕೊಳ್ಳಲು ಇನ್ನೊಂದು ವರ್ಷ ಕಾಯಬೇಕು ಎಂದು ಗೆಳೆಯ ಅತ್ತುಬಿಟ್ಟ. ಆದರೆ ಅ ಹಣದಿಂದ ಅವನು ಗುಪ್ತವಾಗಿ ಪ್ರೀತಿಸುತ್ತಿದ್ದ ಹುಡುಗಿಗೆ ಬರ್ತಡೇ ಗಿಫ್ಟ್ ಕೊಡಿಸುವವನಿದ್ದನೆಂದೂ ಜನುಮದಿಂದ ಗೆಳೆಯರಾದ ತಮ್ಮನ್ನು ಅವನು ಮರೆತದ್ದಕ್ಕೆ ಶಾಸ್ತಿ ಮಾಡಿದೆವೆಂದೂ ಉಳಿದವರು ಹೆಮ್ಮೆಪಟ್ಟರು. ಬೆಲ್ಲದ ಡಬ್ಬಿಯ ಪೂರ್ತಿ ಹಣವನ್ನು ದರೋಡೆ ಮಾಡಿ ಹಕ್ಕಿನಿಂದ ಮಜಾ ಉಡಾಯಿಸಿಬಿಟ್ಟರು!

ಸತ್ಯ ಏನೆಂದು ಕೊನೆಗೂ ತಿಳಿಯಲಿಲ್ಲ. ಹೊಸ ಶರ್ಟು ಹೊಲಿಸಿಕೊಳ್ಳುವ ಆಸೆ ನಿಜವೇ ಇರಬಹುದು ಅಥವಾ ಪ್ರೀತಿಸಿದ ಹುಡುಗಿಯೊಂದಿಗೆ ಜನ್ಮದಿನದಂದು ಏಕಾಂತದಲ್ಲಿ ಕೇಕ್ ಕತ್ತರಿಸಿ ಗಿಫ್ಟ್ ಕೊಟ್ಟುಕೊಳ್ಳುವ ಕನಸೂ ಇರಬಹುದು. ಅಂತೂ ಗೆಳೆಯನೊಬ್ಬನ ವಿಶ್ವಾಸವನ್ನು ಕಾದುಕೊಳ್ಳಲಾಗದ ವ್ಯಥೆ ಈಗಲೂ ಚಿಕ್ಕದಾಗಿ ನನ್ನನ್ನು ಕೊರೆಯುತ್ತದೆ; ಕೇಕ್ ಒಳಗೆ ನಾಜೂಕಾಗಿ ಇಳಿಯುವ ನೈಫ್ ಥರ!

 

ಲೋಕಲ್ ಟ್ರೇನಿನಲ್ಲಿ ಬರುವಾಗ ಸಿಗುವ ವಾಶಿ ಕ್ರೀಕ್ ನಲ್ಲಿ ಬೀಸಿದ ತಂಗಾಳಿಗೋ, ಗೆಳೆಯನ ಬರ್ತಡೇ ಸೆಲೆಬ್ರೇಶನ್ ಅಧೂರಾ ಆಗಿ ಉಳಿದ ಮನಸಿನ ಭಾರಕ್ಕೋ, ಅಥವಾ ತಾಯಿಯ ಪಾಯಸದ ಸವಿನೆನಪಿಗೋ ಕಣ್ಣುರೆಪ್ಪೆಗಳು ಮುಚ್ಚಿದ್ದು ಗೊತ್ತಾಗಲೇ ಇಲ್ಲ. ಬೇಲಾಪುರ ಸ್ಟೇಶನ್ನಿನಲ್ಲಿ ಸಕ್ಕರೆಯಂಥ ನಿದ್ದೆಯಿಂದ ಎಚ್ಚರಗೊಂಡು ನೋಡುತ್ತೇನೆ, ಕೈಯಲ್ಲಿ ಕೇಕ್ ಇಲ್ಲ! ಆ ತರುಣನೂ

ಕಾಣಲಿಲ್ಲ. ಬಹುಶ: ಹಿಂದಿನ ಯಾವುದೋ ಸ್ಟೇಶನ್ನಿನಲ್ಲಿ ಇಳಿದು ಹೋಗಿರಬಹುದು. ಕೇಕ್ ಹಿಡಿದೇ ಇರುವ ಭಂಗಿಯಲ್ಲಿದ್ದ ನನ್ನ ಕೈಗಳಲ್ಲೀಗ ಸಣ್ಣ ವಿಶಾದವೊಂದು ಬಂದು ಕೂತಿದೆ!

ಇಂದು ಯಾರ ಜನುಮದಿನ? ಆ ಯುವಕನದೇ ಇರಬಹುದೇ? ಅಥವಾ ಅವನ ಗೆಳತಿಯದೇ? ಅಥವಾ ಅವನು ವಿವಾಹಿತನಾಗಿದ್ದರೆ ಮನೆಯಲ್ಲಿ ಪುಟ್ಟ ಮಗಳಿರಬಹುದು, ಅವಳದೇ? ಕೇಕ್ ಮೇಲೆ ಚಿತ್ತಾರಗಳಲ್ಲಿ ಬರೆದಿರುವ ಆ ಏಂಜಲ್ ಹೆಸರೇನಿರಬಹುದು?

ಛೆ! ಎಚ್ಚರದಲ್ಲಿದ್ದರೆ ಕೇಕ್ ಮರಳಿ ನೀಡುತ್ತಾ ವಿಶ್ ಮಾಡಬಹುದಿತ್ತು!!

2 comments

  1. ಮಜವಾಗಿದೆ ‘ಚಿಟ್ಟೆಯಂತೆ ಹಾರಿಬಂದ ಕೇಕ್ ‘ ಕಲ್ಪನಾ ವಿಲಾಸ.

    • ಕೇಕ್ ಚಿಟ್ಟೆಯಂತೆ, ಕಲ್ಪನೆ ಗುರ್ಬಾಣಕ್ಕಿಯಂತೆ 🙂
      ನಮಸ್ತೆ!

Leave a Reply