ಒಂದೂ ಲಿಪ್ ಮಾರ್ಕ್ ಉಳಿದಿರಲಿಲ್ಲ..

ಬೆವರ ಕಲೆಗಳು

ಭುವನೇಶ್ವರಿ ಹಿರೇಮಠ್

ನನ್ನ ಹಸ್ತ ರೇಖೆಗಳಿಗೆ
ದುರ್ಬೀನು ಹಚ್ಚಿ ನೋಡಿದೆ
ಆಯುಷ್ಯರೇಖೆ ಒಂದೆರಡು ಕಡೆಗೆ ಮಂಕಾಗಿ
ಅಳಿಸಿ ಹೋದಂತೆ ಕಂಡಿತು.

ಇದು ಮೊದಲ ಭೇಟಿ
ಮೆಲ್ಲಗೆ ಹತ್ತಿರ ಸರಿದು
ಬಿಳಿ ಬೆಡ್ ಶೀಟಿನ ಮೇಲೆ
ಕೈ ಊರಿದ,
ಹಸ್ತರೇಖೆ ಬಿಟ್ಟು ಅವನ ಅಂಗೈಯ ಬೆವರು ಮೂಡಿತು

ಭಯವಾ!
ಕಣ್ಣಲ್ಲಿ ಕಣ್ಣಿಟ್ಟು
‘ನೋಡು’……ಎಂದ.

ಒಮ್ಮೆ ಬೆಕ್ಕಿನಂತೆ
ಮತ್ತೊಮ್ಮೆ ಮೊಲದಂತೆ
ಮೆತ್ತಗೆ ತೊಡೆಯ ಮೇಲೆ
ಬೆನ್ನ ಮೇಲೆ
ಕೈ ಇರಿಸಿ ಬೀಗುವುದು,
ಇದ್ಯಾವುದೂ ನದಿಗಳ ತಿರುವಿನಲ್ಲಿ
ಜ್ಞಾನೋದಯವಾದ ಬಂಡೆಗಲ್ಲಿನ ಶಾಸನದಂತಿರಲಿಲ್ಲ.

ಒಂದು ಜೊತೆ ಬೆಂಡೋಲೆಯ
ಬಯಸಿದ್ದು
ಕಣ್ಣ ಹನಿಗಳ ಸಂವಹನದಲ್ಲಿ
ಅವನ ಎದೆ ತಲುಪಲಿಲ್ಲ,
ಬಿಳಿ ಅಂಗಿಯ ತುಂಬ
ಮುತ್ತಿಡುತ್ತಲೇ ಸಾಗಿದೆ
ಒಂದೂ ಲಿಪ್ ಮಾರ್ಕ್ ಉಳಿದಿರಲಿಲ್ಲ

ಬಿಳಿ ತುಟಿಗಳಿಂದ
ಗುರುತುಗಳು ಮೂಡುವುದೇಯಿಲ್ಲ
ಬದಲಾಗುವ ಸತ್ಯಗಳಿಂದ
ಬದುಕೊಂದು ಬಚಾವಾದಂತೆ

ಬೆವರ ಕಲೆಗಳು ಆರುವ ಮೊದಲೇ
ಮೊಲ ಬೆಕ್ಕು
ಯಾವುದಕ್ಕೂ ಹೋಲಿಕೆಯಾಗದ
ಭಯದ ನೆರಳು
ಕಂಗೆಟ್ಟು ಓಡಿ ಓಡಿ ಸುಸ್ತಾಗಿ
ನನ್ನ ಹಸ್ತರೇಖೆಗಳೆಲ್ಲ
ಸವೆದು ಹೋದ ಟಾರು ರೋಡಿನಂತೆ,
ಅಂಗುಷ್ಟ ಕಿತ್ತುಹೋದ
ಹಳೆ ಚಪ್ಪಲಿಯಂತೆ
ಅಜ್ಞಾತದಲ್ಲೇ ಉಳಿದುಬಿಟ್ಟಿವೆ

ಮೊದಲ ಬಾರಿ ಸಾವನ್ನು ಜಯಿಸಿದ ನಿಟ್ಟುಸಿರು

Leave a Reply