ಕರ್ಕಿ ಪ್ರಶಸ್ತಿಯ ಮಡಿಲಲ್ಲಿ ‘ಅಮ್ಮನಿಗೊಂದು ಕವಿತೆ’

ಡಾ.ಡಿ.ಎಸ್. ಕರ್ಕಿ ಪ್ರತಿಷ್ಠಾನದ  ಕಾವ್ಯ ಪ್ರಶಸ್ತಿಗೆ ಪಾತ್ರರಾದ

ಪ್ರಕಾಶ್ ಕಡಮೆ ಅವರಿಗೆ ‘ಅವಧಿ’ಯ ಅಭಿನಂದನೆಗಳು 

ಪ್ರಶಸ್ತಿ ವಿಜೇತ ಕೃತಿ ‘ಅಮ್ಮನಿಗೊಂದು ಕವಿತೆ’ಯ ಬಗ್ಗೆ ಒಂದು ನೋಟ 

ಆಶಾ ಜಗದೀಶ್

ನಮ್ಮ ಅಂತರಂಗದ ಬಡತನಕ್ಕೆ ಪಂಜರದಾಚೆಯ ಜಗತ್ತಿಲ್ಲ…. (ಸಾವ ಬಾಗಿಲು)

ಹೌದಲ್ಲ…. ಈಗ ನಮ್ಮ ಪರಿಸ್ಥಿತಿ ಹಾಗೇ ಆಗಿದೆ. ಈ ಬಡತನ ರೇಖೆಯನ್ನು ಮೀರುವುದು ಹೇಗೆ ಎನ್ನುವ ಹತಾಶ ಭಾವದ ಜೊತೆಗೆ ಇನ್ನಾದರೂ ಅದರ ಅರಿವಿನ ನೆಲೆಯಲ್ಲಿ ಹೊಸ ಹುಡುಕಾಟದ ಸಹವಾಸಕ್ಕೆ ಬೀಳುವುದು ಅವಶ್ಯಕತೆ ಎಂದು ಮೊಟಕಿ ಹೇಳುವ ಗಟ್ಟಿ ದನಿ ಈ ಸಾಲುಗಳಲ್ಲಿದೆ.

ಇವು ಪ್ರಕಾಶ್ ಕಡಮೆಯವರ ಮೂರನೆ ಕವನ ಸಂಕಲನ “ಅಮ್ಮನಿಗೊಂದು ಕವಿತೆ” ಯ ಗಟ್ಟಿ ಸಾಲುಗಳು. ಪ್ರಕಾಶರ ಕಾವ್ಯ ಕಟ್ಟುವ ಕಲೆಯೊಂದಿಗೆ ಕಾವ್ಯವನ್ನು ಮೀರಿದ ಅವರ ಅಂತರಂಗದ ಹುಡುಕಾಟಕ್ಕೂ ಇಂತಹ ಸಾಲುಗಳು ಸಾಕ್ಷಿಯಾಗಿ ನಿಲ್ಲುತ್ತವೆ ಎನಿಸುತ್ತದೆ.

ಈ ಸಂಕಲನ ಒಳಗಿಳಿಯುತ್ತಾ ಎಷ್ಟೊಂದು ವೈವಿಧ್ಯಮಯ ವಸ್ತುವಿನೊಟ್ಟಿಗೆ ಸಾಮಾನ್ಯ ಚಿಂದಿ ಆಯುವವಳು, ನಿರುದ್ಯೋಗಿ  ಯಂತವರೂ ಇವರ ಮುಂದೆ ಬಂದು ನಿಂತು ಚಂದದ ಪದ್ಯವಾಗಿಸಿಕೊಂಡಿದ್ದಾರೆ (ಅವರನ್ನು ಚಂದಗಾಣಿಸುವ ಅಂತಃಕರಣ ಸಾಮಾಜಕ್ಕಿಲ್ಲದಿದ್ದರೂ ಪ್ರಕಾಶರ ಕಾವ್ಯಕ್ಕೆ ಅದು ಒದಗಿಬಂದದ್ದೊಂದು ಸುಕೃತ) ಎಂದು ಖುಷಿಯಾಗುತ್ತದೆ.

ಅನುದಿನ ಉಂಡುಟ್ಟು
ಜೀವಿಸುವಾಗ ಕ್ಷಣ ಕ್ಷಣವೂ ಜೊತೆ
ಸೇತುವೆಯಾಗಲೇ ಇಲ್ಲ ಕಂಪ್ಯೂಟರ್
(ಕಲಿಕೆ)

ಎನ್ನುವ ಈ ಸಾಲುಗಳು ತಂತ್ರಜ್ಞಾನದ ನಿರರ್ಥಕತೆಯನ್ನು ಚಿತ್ರಿಸುತ್ತದೆ.

ಮಗುವಿನ ಹಾಗೆ ಮನಬಿಚ್ಚಿ
ನಗಬೇಕು ಕಿಲಕಿಲನೆ
ಬಿಂಕ ಬಿಗುಮಾನದಲಿ
ನಗಲಿಲ್ಲ ತುಟಿಬಿಚ್ಚಿ

ಆದರೇನು ಮಾಡುವುದು?
ಬೆಳೆದುಬಿಟ್ಟಿದ್ದೇವೆ ವಿನಾಕಾರಣ
(ಹಂಬಲ)

ಕಳೆದುಕೊಂಡದ್ದರ ಬಗೆಗಿನ ಹಪಾಹಪಿ ಒಂದು ಕಡೆಯಾದರೆ ಮತ್ತೊಂದೆಡೆ ಆ ಅಮೂಲ್ಯವಾದ ಅದು (ಇಲ್ಲಿ ಬಾಲ್ಯ) ಮತ್ತೊಮ್ಮೆ ಮರಳಿ ಬಾರದಲ್ಲ ಎನ್ನುವ ಹತಾಶ ಸ್ಥಿತಿ ಕೊರೆ ಹಿಂಡುವಂತದ್ದು. ಅಷ್ಟಕ್ಕೂ ಬಾಲ್ಯವೆನ್ನುವುದು ಯಾರನ್ನು ತಾನೆ ಕಾಡದೆ ಬಿಟ್ಟಿದೆ ಮತ್ತು ಯೌವ್ವನವನ್ನು ಮಾತ್ರ ಪ್ರೀತಿಸುವ ಅಮರ ಬದುಕಿರಲು ತವಕಿಸುವ ಮನುಷ್ಯನ ಕೊನೆಯಿಲ್ಲದಾಸೆಗೆ ಕೊನೆ ಎಂಬುದೇ ಶತೃ. ಮತ್ತು ಕವಿತೆಯ ಕೊನೆಯಲ್ಲಿ ವಾಸ್ತವವನ್ನು ಒಪ್ಪಿ ಬದುಕಲು ಅಣಿಯಾಗುವ ಶಣಾಗತಿ ಮತ್ತು ಸಮ್ಮತಿ ಕಂಡುಬರುತ್ತದೆ.

“ತಾಯಿ ಕರುಳು” ಕವಿತೆ ಹೆಣ್ಣು ಸ್ವಭಾವತಃ ತಾಯಿ ಎಂಬುದನ್ನು ನಿರೂಪಿಸುತ್ತದೆ. ಹೆಣ್ಣು ಗಂಡನನ್ನಾದರೂ ನಿರ್ಲಕ್ಷಿಸಿಯಾಳು ಆದರೆ ಮಕ್ಕಳನ್ನಲ್ಲ. ತಾನು ಹಸಿದಿದ್ದರೂ ಮಕ್ಕಳ ಹೊಟ್ಟೆ ತುಂಬಿಸುವ ಅವಳ ಮಮತೆ ಯಾರಾದರೂ ಕಲಿಸಿಟ್ಟದ್ದಲ್ಲ ಮತ್ತು ಸ್ವತಃ ಅವಳೇ ಉದ್ದೇಶಪೂರ್ವಕವಾಗಿ ಕಲಿತದ್ದೂ ಅಲ್ಲ.

ಇಲ್ಲಿನ ಪ್ರತಿ ಕವಿತೆಗಳು ತುಂಬು ಬದುಕಿನಲ್ಲಿ ಕಂಡರಿತ ಎಲ್ಲವನ್ನೂ ಅಳೆಯುತ್ತಾ ತೂಗುತ್ತಾ ವರ್ತಮಾನದ ನಿರಾಶಾದಾಯಕ ಬೆಳವಣಿಗೆಯಿಂದ ಬೇಸತ್ತದ್ದರ ನಿದರ್ಶನವಾಗುತ್ತಿರುವ ಹೊತ್ತಿಗೇ ಮುಂದೆ ಏನಾಗಬೇಕು ಏನಾಗಬಹುದೆಂಬುದರ ಶೋಧಕ್ಕೂ ಇಳಿಯುತ್ತವೆ. ಕೆಲವೊಮ್ಮೆ ಏನೂ ತಿಳಿಯದ ಅಬೋಧ ಬಾಲನಂತೆ ನಿಂತರೆ ಮಗದೊಮ್ಮೆ ಎಲ್ಲವನ್ನೂ ತಿಳಿದೂ ತಾಳ್ಮೆ ವಹಿಸಿ ಸಹಿಸಿ ಕಾಯುತ್ತಿರುವ ಸ್ಥಿತಪ್ರಜ್ಞ ಪ್ರಾಜ್ಞನಂತೆ ನಿಲ್ಲುತ್ತವೆ.

ವಸ್ತುವಿನ ವಿಷಯಕ್ಕೆ ಬಂದಾಗ ಇಲ್ಲಿನ ವೈವಿಧ್ಯಮಯ ವಸ್ತುಗಳು ಕವಿಯು ಸಮಕಾಲೀನ ಜಗತ್ತಿಗೆ ಸೂಕ್ಷ್ಮವಾಗಿ ಸ್ಪಂದಿಸುತ್ತಿರುವುದನ್ನು ಹೇಳುತ್ತವೆ ಮತ್ತು ಕವಿಯ ಸೂಕ್ಷ್ಮ ಮನಸ್ಥಿತಿಯಿಂದಾಗಿ ಕವಿತೆಗಳಾಗಿ ಯಶಸ್ಸು ಪಡೆದಿವೆ ಅಂತಲೂ ಅನಿಸುತ್ತದೆ. ಕಾವ್ಯ ಶರೀರದ ದೃಷ್ಟಿಯಿಂದಲೂ, ಭಾಷೆಯ ದೃಷ್ಟಿಯಿಂದಲೂ ಕಟ್ಟುವಿಕೆ, ತಾಜಾತನದೊಂದಿಗೆ ಸಮಾಕಾಲಿನತೆಯ ಸಂಕರವನ್ಬು ಒಪ್ಪಿ ಅಪ್ಪದೆ ಹೋದರೆ ಬಾಳಿಕೆ ಬರಲಾರದು ಉಳಿಯಲಾರದು ಅನಿಸುತ್ತದೆ. ಮಿನರಲ್ ವಾಟರ್, ಸ್ಮಾರ್ಟ್ ಫೋನು, ಐಟಿ ಪಾರ್ಕು ಇವುಗಳಲ್ಲಿ ಆಧುನಿಕತೆಯ ವ್ಯಂಗ್ಯವಿದೆ. “ಸ್ಮಾರ್ಟ್  ಫೋನು” ಒಂದೊಳ್ಳೆಯ ವಿಡಂಬನಾತ್ಮಕ ಕವಿತೆ. ಇಲ್ಲಿನ ಕವಿತೆಗಳು ಸಮಕಾಲೀನ ಪ್ರಪಂಚದಲ್ಲಿ ಬದುಕಬಲ್ಲವು ಎನಿಸುವಾಗ ಕವಿಯ ಉಳಿವು ನಿಶ್ಚಿತವೆನಿಸುತ್ತದೆ.

ಆತ್ಮ ಪ್ರತ್ಯಯದಲ್ಲಿ ಬರೆಯುವ ಇವರ ಪದ್ಯಗಳು ನೈಜತೆ ಮತ್ತು ಎಲ್ಲಕ್ಕೂ ಪ್ರಾಮಾಣಿಕವಾಗಿರಬೇಕೆಂಬ ಹಂಬಲದಿಂದಾಗಿ ಓದುಗರನ್ನು ತಟ್ಟುತ್ತವೆ. ಕಾಡುವುದು ಸದಾ ನನ್ನ, ಹೇಳು ನನ್ನೊಡತಿ, ತಾಯ ಕರುಳು, ನೌಕರಿಯೆಂಬ ಪ್ರೀತಿ, ಅಂಕೋಲೆ ಎಂದರೆ, ನಾನು ಮತ್ತು ಅವಳು … ಮತ್ತು ಇನ್ನು ಕೆಲವು ಈ ಬಗೆಯ ಕವಿತೆಗಳು.

“ಬಸಲೆ ಬಳ್ಳಿ’ಯಲ್ಲಿ ಏರಿ ನಿಂತ ತೆಂಗಿನ ಮರ ಬಾಗಲಾರದೇನೋ…. ಆದರೆ ನೆಲದ ಬಸಳೆ ಮುಗಿಲಿಗೆ ದೃಷ್ಟಿ ನೆಡಬಲ್ಲದು ತೆಂಗಿನಂತೆ. ಮತ್ತು ತೆಂಗಿನುದ್ದಕ್ಕೂ ಸುತ್ತಿ ಬೆಳೆದು ಅದರ ನೆತ್ತಿಯ ಮುತ್ತಿಡಬಲ್ಲ ಆತ್ಮವಿಶ್ವಾಸದಿಂದ ಕನಸ ಕಾಣಬಲ್ಲದು. ಮತ್ತು ಬಾಗದ ತೆಂಗು ಆಸರೆಯಾಗುವ ವಿಶ್ವಾಸವೀಯುತ್ತದೆ ಎನ್ನುವ ಕವಿತೆಯಲ್ಲಿ ಒಬ್ಬರು ಮತ್ತೊಬ್ಬರಿಗೆ ಪೂರಕವಾಗಿ ಜೊತೆ ನಿಲ್ಲಬಲ್ಲ ಸಹಬಾಳ್ವೆಯ ಲೆಕ್ಕಾಚಾರವಿದೆ. “ಸೀಟು ಸಿಕ್ಕ ಜನ” ಒಂದು ಮಾರ್ಮಿಕ ಕವಿತೆ. ಸುವರ್ಣ ಮಹೋತ್ಸವದ ಜೀವನ ಪ್ರೀತಿ ಇಷ್ಟವಾಗುತ್ತದೆ. ಅಸಹಾಯಕ ನಗು,ಹೂದೋಟ, ನನಗೆ ಶಿವರಾತ್ರಿಯೆಂದರೆ ಕವಿತೆಗಳು ಪ್ರಿಯವಾಗುತ್ತವೆ.

“ರೆಡಿ ಟು ಈಟ್ ಸಂಸ್ಕೃತಿ” ಎಂಬುದು ಇವರ ಐಟಿ ಪಾರ್ಕು ಎನ್ನುವ ಕವಿತೆಯ ಒಂದು ಸಾಲು. ಇದು ಒಮ್ಮೆ ಸಿದ್ಧ ತಿಂಡಿಗಳನ್ನು ತಿನ್ನುವ ಸಂಸ್ಕೃತಿ ಎನಿಸಿದರೆ ಮತ್ತೊಮ್ಮೆ ಹಣದ ಹೊಳೆಯಲ್ಲಿ ತೇಲುತ್ತಿರುವ ಪಟ್ಟಣಗಳು “ಸಂಸ್ಕೃತಿಯನ್ನೇ ತಿನ್ನಲು ಸಿದ್ಧವಾಗಿವೆ” ಎನ್ನುವ ಅರ್ಥವನ್ನೂ ಪಡೆದುಕೊಳ್ಳತ್ತದೆ ಎನಿಸಿದಾಗ ಮಾತ್ರ ವಿಷಾದವೆನಿಸಿ ವಿಷಣ್ಣತೆ ಆವರಿಸುತ್ತದೆ.

ಈ ಪುಸ್ತಕಕ್ಕೊಂದು ಚಂದದ ಶೀರ್ಷಿಕೆ ಒದಗಿಸಿದ ಸಶಕ್ತ ಕವಿತೆಯೇ “ಅಮ್ಮನಿಗೊಂದು ಕವಿತೆ”. ಎದುರಿಗಿದ್ದಾಗ ಇರುವುದರ ಬೆಲೆ ತಿಳಿಯದೆ ಕಳೆದುಹೋದ ಮೇಲೆ ಹಲುಬುವ ಪರಿಸ್ಥಿತಿ ನಮ್ಮೆಲ್ಲರದ್ದೂ ಸಹ. ಯಾರೂ ಹೊರತಲ್ಲ ಈ ಭಾವಕ್ಕೆ. ಅದರಲ್ಲೂ ಅಮ್ಮ…. ಅವಳ ತ್ಯಾಗ ಮಮತೆ ವಾತ್ಸಲ್ಯ…. ಎಲ್ಲಕ್ಕೂ ಮೀರಿದ್ದು. ಆ ಕಾರಣವೇ ಮತ್ತು ಅಕಾರಣವಾಗಿಯೂ ಈ ಕವಿತೆ ನಮ್ಮನ್ನು ಆವರಿಸುತ್ತದೆ.

ಅಲ್ಲಲ್ಲಿ ಸಣ್ಣದಾಗಿ ಪದ್ಯದೊಳ ನುಸುಳುವ ಗದ್ಯ ಮತ್ತು ವಾಚ್ಯತೆಯನ್ನು ಹೊರತುಪಡಿಸಿ ಇದೊಂದು ಚೊಕ್ಕ ಸಂಕಲನ. ಕುಸುರಿ ಕೆಲಸಕ್ಕೆ ಇನ್ನೊಂಚೂರು ಕೈ ಕುದುರಿಬಿಟ್ಟರೆ ಇವರಿಂದ ಇನ್ನಷ್ಟು ಉತ್ಕೃಷ್ಟ ಕೃತಿಗಳನ್ನು ನಿರೀಕ್ಷಿಸಬಹುದು.

2 comments

  1. ಕರ್ಕಿ ಪ್ರಶಸ್ತಿ ಪಡೃದಿರುವ ಪ್ರಕಾಶ್ ಗೆ ಹಾರ್ದಿಕ ಅಭಿನಂದನೆಗಳು. ಈಶಾ ಅವರು ತುಂಬಾ ಚೆನ್ನಾಗಿ ವಿಮರ್ಶೆ ಬರೆದಿದ್ದಾರೆ.

Leave a Reply