ಕೊನೆಗೊಂದು ದಿನ ಫ್ಲೆಕ್ಸಿನ ಚಿತ್ರವಾಗಿಯೋ, ಹಾರ ಹಾಕಿಸಿಕೊಂಡ ಫೋಟೋವಾಗಿಯೋ..

 ಗಣೇಶ್ ಕೊಡೂರ್ 

ಕೊನೆಗೊಂದು ದಿನ ಫ್ಲೆಕ್ಸಿನ ಚಿತ್ರವಾಗಿಯೋ, ಹಾರ ಹಾಕಿಸಿಕೊಂಡ ಫ್ರೇಮಿನೊಳಗಿನ ಫೋಟೋವಾಗಿಯೋ…

ಕಳೆದ ಏಳು ವರ್ಷಗಳಿಂದ ಪ್ರತೀ ಸಂಜೆ ನಾವು ಮನೆಗೆ ಬೇಕಾದ ತರಕಾರಿಯನ್ನು ಕೊಳ್ಳುತ್ತಿರುವುದು ಮಲ್ಲೇಶ್ವರ ಈಜುಕೊಳ ಬಡಾವಣೆಯ ಎರಡನೇ ಕ್ರಾಸ್ ಹತ್ತಿರದ ಪುಟ್ಟ ಸರ್ಕಲ್ಲಿನಲ್ಲಿ ತಳ್ಳುಗಾಡಿ ನಿಲ್ಲಿಸಿಕೊಂಡು ತರಕಾರಿ ಮಾರಾಟ ಮಾಡುವ ಗೋಪಾಲ ಅವರ ಹತ್ತಿರ. ಇವರೊಂದಿಗೆ ವ್ಯಾಪಾರ, ಚೌಕಾಸಿ ಎನ್ನುವುದೆಲ್ಲವನ್ನೂ ಮೀರಿದ ಆತ್ಮೀಯ ಸಂಬಂಧವೊಂದು ನನಗೂ, ರಮಾಕಾಂತಿಗೂ ಇದೆ. ಆದ್ದರಿಂದಲೇ ನಾವು ಇಷ್ಟು ವರ್ಷಗಳಲ್ಲಿ ಗೋಪಾಲ ಅವರ ಗೈರು ಹಾಜರಿಯಲ್ಲಿ ಕೆಲವೊಮ್ಮೆ ಬೇರೆ ಕಡೆ ತರಕಾರಿ ತೆಗೆದುಕೊಂಡಿದ್ದೇವೆ ಬಿಟ್ಟರೆ, ಇವರಿದ್ದಾಗ ಬೇರೆ ಕಡೆ ತರಕಾರಿ ಖರೀದಿಸಿದ ನೆನಪು ನನಗಿಲ್ಲ.

ಗೋಪಾಲ ಅವರು ತರಕಾರಿ ಮಾರುವ ರಸ್ತೆಯ ಎದುರಿಗಿರುವ ಹಾಲಿನ ಬೂತ್ ಹತ್ತಿರದ ಮೂಲೆಯಲ್ಲಿ ಅದೊಂದು ದಿನ ತರಕಾರಿ ಗಾಡಿಯೊಂದಿಗೆ ಪ್ರತ್ಯಕ್ಷವಾಗಿದ್ದು ನರಸಿಂಹಯ್ಯ.

ಒಂದು ಕಣ್ಣು ಸ್ವಲ್ಪ ಒರಚಾಗಿರುವ, ತೆಳ್ಳಗಿನ ಶರೀರದ, ಮಧ್ಯಮ ಎತ್ತರದ ಈ ನರಸಿಂಹಯ್ಯ ವ್ಯಾಪಾರಕ್ಕೆ ನಿಲ್ಲುತ್ತಿದ್ದಂತೆ ಮೊದಲು ಕೈ ಹಾಕಿದ್ದೇ ಗೋಪಾಲ ಅವರ ಖಾಯಂ ಗ್ರಾಹಕರಿಗೆ! ಇದರಿಂದ ನಾನೂ ಹೊರತಾಗಿರಲಿಲ್ಲ. ಅದೊಮ್ಮೆ ಗೋಪಾಲ ಅವರಿಲ್ಲದೇ ಇದ್ದಾಗ ತರಕಾರಿ ಖರೀದಿಸೋಣವೆಂದು ನರಸಿಂಹಯ್ಯನವರ ಹತ್ತಿರ ಹೋದೆ. ನಾನು ಗೋಪಾಲ ಅವರ ಹತ್ತಿರ ಪ್ರತೀದಿನ ತರಕಾರಿ ಖರೀದಿಸುವುದನ್ನು ಗಮನಿಸಿದ್ದ ನರಸಿಂಹಯ್ಯ ನಾನು ಅವರ ಹತ್ತಿರ ವ್ಯಾಪಾರಕ್ಕೆ ಹೋಗುತ್ತಿದ್ದಂತೆ, ತುಂಬಾ ಪ್ರೀತಿಯಿಂದ ಮಾತನಾಡಿಸಿದರು. ವ್ಯಾಪಾರವೆಲ್ಲ ಮುಗಿದು ನಾನು ಹಣ ಕೊಟ್ಟು ಬೆನ್ನಾಗುವಾಗ, ’ಸರ‍್, ಬೇರೆಯವರಿಗೆ ಹೋಲಿಸಿದ್ರೆ ನನ್ನ ರೇಟು ಸ್ವಲ್ಪ ಕಡಿಮೆ ಸರ‍್. ನಿಮಗೆ ಸ್ವಲ್ಪ ನೋಡಿನೇ ರೇಟ್ ಹಾಕ್ತೀನಿ, ಏನು…’ ಎಂದು ಪಕ್ಕಾ ವ್ಯಾಪಾರಿ ನಗುವೊಂದನ್ನು ನಕ್ಕರು.
ನನ್ನ ನಗುವೇ ಅವರಿಗೆ ಉತ್ತರವಾಗಿತ್ತು.

ಇದರ ನಂತರವೂ ನಾನು ಗೋಪಾಲ ಅವರ ಹತ್ತಿರ ತರಕಾರಿ ಖರೀದಿಸುವುದನ್ನು ನಿಲ್ಲಿಸಲಿಲ್ಲ. ಯಾಕೆಂದರೆ ನನಗೆ ವ್ಯಾಪಾರವನ್ನು ಮೀರಿದ ಆತ್ಮೀಯತೆ ಗೋಪಾಲ ಅವರೊಂದಿಗೂ, ಅವರ ಕುಟುಂಬದೊಂದಿಗೂ ಇದೆ. ಹಾಗೆಂದು ನರಸಿಂಹಯ್ಯನವರೇನೂ ನನ್ನ ಹತ್ತಿರ ಸಿಟ್ಟು ಮಾಡಿಕೊಳ್ಳಲೂ ಇಲ್ಲ. ಗೋಪಾಲ ಅವರಿಲ್ಲದೇ ಇದ್ದಾಗ ನಾನು ಇವರ ಗಾಡಿಯಲ್ಲೇ ತರಕಾರಿ ಖರೀದಿಸುತ್ತಿದ್ದೆ. ಆಗಲೂ ಅವರು ನನ್ನನ್ನು ತಮ್ಮ ಗ್ರಾಹಕರನ್ನಾಗಿಸಿಕೊಳ್ಳಲು ಒಂದಲ್ಲ ಒಂದು ರೀತಿಯಲ್ಲಿ ಪ್ರಯತ್ನ ಪಡುತ್ತಲೇ ಇದ್ದರು. ಐದು ರೂಪಾಯಿ ಚೇಂಜ್ ಇಲ್ಲವೆಂದಾಗ, ಆಯ್ತು ಸರ‍್ ನಾಳೆ ಕೊಡಿ ಎಂದು ಚಿಲ್ಲರೆಯನ್ನು ನನ್ನ ಹತ್ತಿರವೇ ಬಿಟ್ಟು ಬಿಡುತ್ತಿದ್ದರು.

ಚಿಲ್ಲರೆ ಕೊಡುವ ನೆಪದಲ್ಲಾದರೂ ನಾಳೆ ತನ್ನ ಹತ್ತಿರ ವ್ಯಾಪಾರಕ್ಕೆ ಬರಲಿ ಎನ್ನುವ ಪಕ್ಕಾ ವ್ಯಾಪಾರಿ ಮನೋಭಾವ ಅವರದ್ದು. ನಾನಾದರೂ ಅಷ್ಟೇ, ಒಮ್ಮೆ ಪರಿಚಯವಾದ ಯಾರನ್ನೇ ಆಗಲಿ ಎಂದಿನ ಆತ್ಮೀಯತೆಯಿಂದ ಮಾತನಾಡಿಸುವಂತೆ, ಗೋಪಾಲ ಅವರ ಹತ್ತಿರ ತರಕಾರಿ ತೆಗೆದುಕೊಂಡು ಆ ಕಡೆ ಹೋದರೆ ’ಏನ್ ನರಸಿಂಹಯ್ಯನವರೇ, ಟೀ ಆಯ್ತಾ?’ ಎಂದು ವಿಚಾರಿಸುತ್ತಿದ್ದೆ. ಅವರೂ ಅಷ್ಟೇ ಪ್ರೀತಿಯಿಂದ ಉತ್ತರಿಸುತ್ತಿದ್ದರು. ದಾರಿಯಲ್ಲಿ ನಾನೆಲ್ಲೇ ಕಾಣಿಸಿದರೂ ’ನಮಸ್ತೆ ಸರ‍್’ ಎನ್ನುತ್ತಿದ್ದರು. ಬಿಡುವಿದ್ದರೆ ಅವರ ಜೀವನ, ವ್ಯಾಪಾರದ ಏರಿಳಿತಗಳ ಬಗ್ಗೆಯೂ ಕೇಳುತ್ತಿದ್ದೆ. ಬರೀ ತರಕಾರಿ ವ್ಯಾಪಾರ ಗಿಟ್ಟುವುದಿಲ್ಲವೆಂದು ತರಕಾರಿಗಳೊಂದಿಗೆ ಹಣ್ಣಿನ ವ್ಯಾಪಾರ ಮಾಡಿದರು. ತೀರಾ ಇತ್ತೀಚೆಗೆ ಯಾವುದಾದರೂ ಒಂದು ಬಗೆಯ ತರಕಾರಿಯನ್ನು ಮಾತ್ರವೇ ಗಾಡಿ ತುಂಬಾ ಹೇರಿಕೊಂಡು, ’ಹೋಲ್ ಸೇಲ್ ರೇಟ್, ಚೀಪ್ ರೇಟ್…’ ಎಂದು ಕೂಗಿ ಮತ್ತೆ ಎಲ್ಲಾ ಗ್ರಾಹಕರನ್ನು ತನ್ನೆಡೆಗೆ ಸೆಳೆಯುವ ಪ್ರಯತ್ನ ನಡೆಸಿದ್ದರು… ಒಟ್ಟಿನಲ್ಲಿ ಹೇಗಾದರೂ ಸರಿ ತನ್ನ ಪ್ರತಿಸ್ಪರ್ಧಿಗಳನ್ನು ಮೀರಿಸುವಂತೆ ತಾನು ವ್ಯಾಪಾರ ಮಾಡಬೇಕು, ಕಾಸು ಮಾಡಬೇಕು ಎನ್ನುವ ಮನಸ್ಥಿತಿ ನರಸಿಂಹಯ್ಯನವರದ್ದು.

ದುಡ್ಡು ಮಾಡಬೇಕು, ಕೂಡಿಡಬೇಕು ಎಂದು ತನ್ನ ತರಕಾರಿ ವ್ಯಾಪಾರದಲ್ಲಿ ಏನೆಲ್ಲ ಸರ್ಕಸ್ ಮಾಡಿದ ನರಸಿಂಹಯ್ಯ ಮೊನ್ನೆ ಅವರ ತರಕಾರಿ ಗಾಡಿ ನಿಲ್ಲಿಸುತ್ತಿದ್ದ ಹಾಲಿನ ಬೂತ್ ಪಕ್ಕದ ಲೈಟ್ ಕಂಬದಲ್ಲಿ ಫ್ಲೆಕ್ಸ್ ನಲ್ಲಿನ ಚಿತ್ರವಾಗಿ ನೇತಾಡುತ್ತಿದ್ದರು!

ಹೌದು, ನರಸಿಂಹಯ್ಯ ಮೊನ್ನೆ ೨೫ನೇ ತಾರೀಖು ಈ ಜಗತ್ತಿನ ವ್ಯಾಪಾರ ಮುಗಿಸಿ ಹೊರಟು ಹೋದರು.

ಹಾಲಿನ ಬೂತ್ ಅಮ್ಮನ ಹತ್ತಿರ ವಿಚಾರಿಸಿದರೆ ’ಹಾರ್ಟ್ ಅಟ್ಯಾಕ್’ ಅಂತೆ ಎಂದರು.

ಅಷ್ಟೆಲ್ಲ ಬಡಿದಾಡಿ, ಏನೆಲ್ಲ ಸರ್ಕಸ್ ಮಾಡಿ ವ್ಯಾಪಾರ ಮಾಡಿ, ಹೇಗಾದರೂ ಸರಿ ಕಾಸು ಮಾಡಬೇಕು, ತನ್ನ ಪ್ರತಿಸ್ಪರ್ಧಿಗಳನ್ನೆಲ್ಲ ಬಡಿದು ಹಾಕಬೇಕು ಎಂದು ಹೊರಟಿದ್ದ ನರಸಿಂಹಯ್ಯನವರ ಬದುಕು ಕೊನೆಗೆ ಮುಗಿದು ಹೋಗಿದ್ದು ಹೀಗೆ. ಆಸ್ಪತ್ರೆಗೆ ಸೇರಿಸಿದರಂತೆ, ಅಲ್ಲಿಯೇ ಹೋದರಂತೆ… ಎನ್ನುವ ಮಾತುಗಳ ನಡುವೆ ನರಸಿಂಹಯ್ಯ ಕೊನೆಗೆ ಲೈಟ್ ಕಂಬದಲ್ಲಿ ನೇತಾಡುವ ಫ್ಲೆಕ್ಸ್ ಆಗಿಬಿಟ್ಟರು.

ಬಡಿದಾಡುವ ಬದುಕು ಮತ್ತು ಸದ್ದಿಲ್ಲದೇ ಬಂದು ಎತ್ತಿಕೊಂಡು ಹೋಗುವ ಸಾವಿನ ನಡುವೆ ಎಲ್ಲವೂ ಇಷ್ಟು ಮತ್ತು ಇಷ್ಟೇ.

ಆದರೂ ನರಸಿಂಹಯ್ಯ ಸೇರಿದಂತೆ ನಾವೆಲ್ಲರೂ ಎಷ್ಟೊಂದು ಹೊಡೆದಾಡುತ್ತೇವೆ?! ಕೊನೆಗೆ ನಾವೆಲ್ಲರೂ ಸೇರಿ ಎಲ್ಲವನ್ನೂ ಎತ್ತಿಕೊಂಡೇ ಹೋಗುತ್ತೇವೇನೋ ಎನ್ನುವ ತೀವ್ರತೆಯಲ್ಲೇ ಪ್ರತೀದಿನವನ್ನೂ ಬದುಕುತ್ತೇವೆ. ಯಾರನ್ನು ತುಳಿದಾದರೂ ಸರಿ ನಾನೊಬ್ಬನೇ ಮೇಲೆ ಹೋಗಿ ನಿಲ್ಲಬೇಕು ಎಂದು ಮಾಡಬಾರದ ಕೆಲಸಗಳನ್ನೆಲ್ಲ ಮಾಡುತ್ತೇವೆ. ಇಷ್ಟೆಲ್ಲ ಮಾಡಿ ನಾವು ಅನುಭವಿಸಿದ್ದೇನು ಎಂದು ನೋಡಿಕೊಂಡರೆ, ಅದೇ ಹುಚ್ಚು ವೇಗದ ಹೋರಾಟದಲ್ಲಿನ ದಣಿವು ಮತ್ತು ಬೇರೆಯವರಿಗಿಂತ ನನ್ನದೊಂದು ನಾಲ್ಕು ಜಾಸ್ತಿ ಎನ್ನುವ ಸಣ್ಣ ವಿಕೃತ ಸಂತೋಷವಷ್ಟೇ.

ಬದುಕನ್ನು ಬದುಕಾಗಿ ಬದುಕಬೇಕು ಮತ್ತು ಹೀಗೆ ಬದುಕುವ ಬದುಕು ನನಗೆ ಖುಷಿ ನೀಡಬೇಕು ಎನ್ನುವ ಸಣ್ಣದೊಂದು ಕ್ಲಾರಿಟಿಯೂ ಇಲ್ಲದೇ ಬಡಿದಾಡುತ್ತಲೇ ಹೀಗೆ ಸಾವಿನ ತೆಕ್ಕೆಗೆ ಸಿಕ್ಕಿ ಬಿಡುತ್ತೇವಲ್ಲ… ಈ ಕ್ಷಣ ಬದುಕಿಯೇ ಇರುವ ನಮಗೆ ಇದೆಲ್ಲವೂ ಗೊತ್ತಿರುತ್ತದೆ. ಆದರೂ ನಾವು ಬದಲಾಗುವುದಿಲ್ಲ. ಬಡಿದಾಡಿಯೇ ಸೈ ಎಂದುಕೊಂಡು ಪ್ರತೀ ಬೆಳಗನ್ನೂ ಎದುರುಗೊಳ್ಳುತ್ತೇವೆ. ಕೊನೆಗೊಂದು ದಿನ ಹೀಗೆ ಫ್ಲೆಕ್ಸಿನ ಚಿತ್ರವಾಗಿಯೋ, ಹಾರ ಹಾಕಿಸಿಕೊಂಡ ಫ್ರೇಮಿನೊಳಗಿನ ಫೋಟೋವಾಗಿಯೋ, ಪತ್ರಿಕೆಯಲ್ಲಿ ’ಶ್ರದ್ಧಾಂಜಲಿ’ಯ ಜಾಹೀರಾತಾಗಿಯೋ ಕೊನೆಯಾಗುತ್ತೇವೆ.

ಇನ್ನೂ ದುರಂತವೆಂದರೆ, ಕೆಲವೊಮ್ಮೆ ಇದ್ಯಾವುದೂ ಕೂಡಾ ಆಗದೇ ನಾವಿಲ್ಲಿ ಬದುಕಿದ್ದೆವು ಮತ್ತು ಬದುಕು ಮುಗಿಸಿ ಹೋಗಿಯೇ ಬಿಟ್ಟೆವು ಎನ್ನುವ ಸಣ್ಣ ಸುಳಿವೂ ಇಲ್ಲದಂತಾಗಿರುತ್ತೇವೆ. ಅಷ್ಟರಮಟ್ಟಿಗೆ ಈ ಬದುಕು ಚಿಕ್ಕದರಲ್ಲೇ ಇಷ್ಟೇ ಇಷ್ಟು ಚಿಕ್ಕದು. ಆದರೂ ಬದುಕಿರುವಾಗ ’ನನ್ನದು, ಎಲ್ಲವೂ ನನಗೇ, ನನ್ನೆದುರು ಯಾರೂ ನಿಲ್ಲಬಾರದು…’ ಎನ್ನುವ ಹೊಡೆದಾಟದಲ್ಲೇ ಬದುಕಿನೆಲ್ಲವನ್ನೂ ಕಳೆದುಕೊಳ್ಳುತ್ತೇವೆ. ಗಳಿಸಬೇಕಾಗಿರುವುದನ್ನು ಗಳಿಸದೇ ಕೊನೆಯಾಗುತ್ತೇವೆ.

6 comments

  1. ಬಹಳ ಸೊಗಸಾದ ಲೇಖನ… ಜೀವನ ನಾವಂದುಕೊಂಡ ಹಾಗಿರುವುದಿಲ್ಲ ಎನ್ನುವುದು ಸತ್ಯವಾದರೂ ಕೆಲವೊಮ್ಮೆ ಇಂತಹಾ ಅನಿರೀಕ್ಷಿತಗಳು ಎದುರಾಗಿ ಜೀವನವನ್ನು ಮತ್ತಷ್ಟು ಗೋಜಲುಗೊಳಿಸುತ್ತದೆ..‌ಯಾವುದು ಸರಿ ಯಾವುದು ತಪ್ಪು ಅಂತ ಮನಸ್ಸು ಲೆಕ್ಕ ಹಾಕುತ್ತಲೇ ಇದೆ..

  2. ತುಂಬಾ ಅದ್ಭುತವಾಗಿದೆ ಗಣೇಶ್ ಸರ್.ಮನ ಮುಟ್ಟುವಂತೆ ಬರೆದಿರುವಿರಿ.ಅರ್ಥಪೂರ್ಣವಾಗಿದೆ.

  3. ತುಂಬಾ ಅದ್ಭುತವಾಗಿ ಬರೆದಿರುವಿರಿ ಸರ್.ಮನ ಮುಟ್ಟುವಂತಿದೆ.ಅರ್ಥಪೂರ್ಣವಾಗಿದೆ.

  4. ಬದುಕಿಗೆ ಅತ್ಯುತ್ತಮ ಸಂದೇಶವನ್ನು ಸಾರುವ ಅರ್ಥಪೂರ್ಣ ಲೇಖನ ಗಣೇಶ್ ಸರ್.

  5. Well conveyed message.
    The moment we realize that life is a game of few years, the seriousness with which we covet illusionary pleasures will come down.
    Life is not be taken too seriously and we are but one of a human being irrespective of our gender, social status, riches, caste, colour, creed, and community.

Leave a Reply