ಅಪ್ಪನ ವಾಚನ್ನು ಮತ್ತೆ ಧರಿಸಿದಾಗ..!

ನೇಸರ ಕಾಡನಕುಪ್ಪೆ 

ಇದು ನನ್ನ ತಂದೆ ನಿಧನರಾಗಿ ಮೂರನೆಯ ತಿಂಗಳು. ನನ್ನ ತಂದೆಯವರನ್ನು ಕುರಿತು ಒಂದು ವಿಶೇಷವಾದ ನೆನಪನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನಿಸಿತು. ಇದು ನನ್ನ ಜೀವನದಲ್ಲಿ ನಡೆದ ಒಂದು ಸಣ್ಣ ಘಟನೆ. ಆದರೆ, ಅದು ನನ್ನ ಮೇಲೆ ಬೀರಿದ ಪ್ರಭಾವ ದೊಡ್ಡದು.

ನಾನಾಗಿನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ. ರಾಮನಗರದ ನನ್ನ ತಂದೆಯ ಮಾವಂದಿರಾದ ರೇವಣ್ಣ ಹಾಗೂ ತಮ್ಮಣ್ಣ ಅವರ ಮನೆಯಲ್ಲೇ ನನ್ನ ಮುತ್ತಜ್ಜಿ ತಿಮ್ಮಕ್ಕ ಬಾಳಿ ಬದುಕಿ ಅಂದು ತೀರಿಕೊಂಡಿದ್ದರು. ನಾವು ಹೋದಾಗ ಮಧ್ಯಾಹ್ನವಾಗಿತ್ತು. ಆಗಲೇ ಮುತ್ತಜ್ಜಿಗೆ ಸ್ನಾನ ಮಾಡಿ ಕೂರಿಸಿದ್ದರು. ಅಪ್ಪ ಸ್ನಾನ ಮಾಡಿಸಲಿಲ್ಲ. ಒಮ್ಮೆ ಕೈ ಮುಗಿದರು. ನಾನೂ ಅವರೊಂದಿಗೆ ಕೈ ಜೋಡಿಸಿದೆ.

ಅವರ‌ ಮನೆಯಿಂದ ಸ್ವಲ್ಪವೇ ದೂರದಲ್ಲಿ ಅವರ ಜಮೀನಿತ್ತು. ಅಲ್ಲೇ ಮುತ್ತಜ್ಜಿಗಾಗಿ ಗುಂಡಿ ತೋಡಿದ್ದರು. ನನಗೆ ಇಂದಿಗೂ ಪರಿಚಯವಿಲ್ಲದ ಹಲವು ಸಾಂಪ್ರದಾಯಿಕ ಆಚರಣೆಗಳು ನಡೆಯುತ್ತಿದ್ದವು. ಅಜ್ಜಿಯನ್ನು ಗುಂಡಿಗೆ ಕೂರಿಸಿದ ಬಳಿಕ ಅಪ್ಪ ತಾವು ಧರಿಸಿದ್ದ ವಾಚ್ ಬಿಚ್ಚಿ ಅದನ್ನು ಗುಂಡಿಗೆ ಹಾಕಿಬಿಟ್ಟರು. ಅಲ್ಲಿದ್ದವರೆಲ್ಲಾ ಅದರಿಂದ ಹೌಹಾರಿದರು. ‘ಇದೇನಿದು ಶಿವರಾಮು ಹೀಗೆ ಮಾಡ್ತಾ ಇದ್ದೀಯ. ವಾಚ್‌ ಗುಂಡಿಗೆ ಹಾಕಿದರೆ ಅಜ್ಜಿ ಆತ್ಮಕ್ಕೆ ಶಾಂತಿ ಸಿಗುತ್ತಾ?’, ಇತ್ಯಾದಿ ಇತ್ಯಾದಿ ಬಯ್ಗುಳಗಳು ಹಾರಿ ಬಂದವು.

ಅಪ್ಪ ಅದಾವುದಕ್ಕೂ ತಲೆಕೆಡೆಸಿಕೊಳ್ಳಲಿಲ್ಲ. ಅಲ್ಲಿಂದ ನನ್ನನ್ನು ಕರೆದುಕೊಂಡು ಹೊರನಡೆದರು. ಇದೇಕೆ ಹೀಗಿ ಮಾಡಿದಿರಿ ಅಪ್ಪ, ಎಂದು ನಾನು ಕೇಳಿದೆ. ಆಗ ಅಪ್ಪ ಅವರ ನೆನಪಿನ ಬುತ್ತಿಯನ್ನು ಬಿಚ್ಚಿದರು. ಅಪ್ಪ ಪಿಯುಸಿ ಮುಗಿಸಿ ಮಂಡ್ಯದ ಸರ್ಕಾರಿ ಕಾಲೇಜಿಗೆ ಪದವಿ ಓದಲು ಸೇರಿಕೊಂಡಿದ್ದ ಕಾಲ. 1972 ಇರಬೇಕು. ಆಗ ಅಪ್ಪ ಪ್ರತಿನಿತ್ಯ ರೈಲಿನಲ್ಲಿ ರಾಮನಗರದಿಂದ ಮಂಡ್ಯಕ್ಕೆ ರೈಲಿನಲ್ಲಿ ಓಡಾಡುತ್ತಿದ್ದರು. ಅಪ್ಪನ ಅಜ್ಜಿ ತಿಮ್ಮಕ್ಕ ಅವರಿಗೆ ಅಪ್ಪನನ್ನು ಕಂಡರೆ ಬಲು ಪ್ರೀತಿ. ತಮ್ಮ ಕುಟುಂಬದಲ್ಲಿ ಕಾಲೇಜು ಮೆಟ್ಟಿಲು ಹತ್ತಿದ ಮೊದಲಿಗ, ಬುದ್ಧಿವಂತ ಎಂಬ ವಿಶೇಷ ಅಭಿಮಾನವೂ ಇತ್ತು. ಹಾಗಾಗಿ, ಈತನಿಗೆ ಸಮಯ ಪರಿಪಾಲನೆ ತುಂಬಾ ಮುಖ್ಯ ಎಂದು ‘ಎನಿಕರ್‌’ ಎಂಬ ವಾಚ್ ಕೊಡಿಸಿದ್ದರು.

ಅಂದು ಅದರ ಬೆಲೆ 200 ರೂಪಾಯಿ. 200 ರೂಪಾಯಿ ಅಂದಿಗೆ ಬಹುದೊಡ್ಡ ಮೊತ್ತ. ತಾನು ಕಷ್ಟಪಟ್ಟು ಕೂಡಿಟ್ಟ ಹಣದಿಂದ ಅಜ್ಜಿ ತಿಮ್ಮಕ್ಕ ಅಪ್ಪನಿಗೆ ಈ ವಾಚ್‌ ಕೊಡಿಸಿದ್ದರು. ಇದು ಸ್ವಿಟ್ಜರ್ ಲ್ಯಾಂಡ್‌ ನಿರ್ಮಿತ ಕೈ ಗಡಿಯಾರ. ಸ್ವಿಸ್ ಗಡಿಯಾರಗಳೆಂದರೆ, ಅಂದಿಗೂ ಇಂದಿಗೂ ನಿಖರತೆಗೆ ಹೆಸರುವಾಸಿ. ಅಪ್ಪ ಅದನ್ನು ಬಲು ಜೋಪಾನವಾಗಿ ಕಾಪಾಡಿಕೊಂಡಿದ್ದರು. ನನಗೆ ಗೊತ್ತಿರುವಂತೆ ಸುಮಾರು 25 ವರ್ಷ ಆ ಗಡಿಯಾರವನ್ನು ಅವರು ಕಟ್ಟಿದ್ದರು. ಚಿಕ್ಕಂದಿನಲ್ಲಿ ಅಪ್ಪ ಆ ವಾಚಿಗೆ ಪ್ರತಿದಿನ ಬೆಳಿಗ್ಗೆ ಕೀ ಕೊಟ್ಟು ಧರಿಸುತ್ತಿದ್ದದ್ದು ನಮಗೆ ವಿಸ್ಮಯದ ಸಂಗತಿ. ಕೀ ಕೊಡುವ ವಾಚ್‌ಗಳ ಸದ್ದು ವಿಭಿನ್ನವಾಗಿರುತ್ತದೆ. ಇಂದಿನ ‘ಟಿಕ್‌ ಟಿಕ್‌’ ಎಂಬ ಸದ್ದಿನಂತೆ ಇರುವುದಿಲ್ಲ. ಬದಲಿಗೆ ನಿರಂತರವಾದ ಯಾಂತ್ರಿಕ ಸದ್ದಿರುತ್ತದೆ. ಅದಕ್ಕೆ ಕಿವಿಕೊಟ್ಟು ಕೇಳಿಸಿಕೊಳ್ಳುವುದು ಅಂದಿನ ದಿನದಲ್ಲಿ ಖುಷಿ ಕೊಡುತ್ತಿತ್ತು. ಅಪ್ಪ ವಾಚ್‌ಗೆ ಕೀ ಕೊಡುವಾಗ ‘ನಾನೂ ಕೊಡುತ್ತೇನೆ’ ಎಂದು ಹಠ ಮಾಡಿ ವಾಚ್‌ ಪಡೆದು ಖುಷಿ ಪಟ್ಟಿದ್ದನ್ನು ಈಗ ಯಾವ ಸಂತೋಷಕ್ಕೂ ಹೋಲಿಸಲಾಗದು.
ಅಜ್ಜಿ ಸತ್ತಾಗ ಅವರ ಮೇಲಿನ ಗೌರವಕ್ಕಾಗಿ ಅಪ್ಪ ಆ ವಾಚನ್ನು ಅವರೊಂದಿಗೆ ಕಳುಹಿಸಿಕೊಟ್ಟಿದ್ದರು. ‘ಅಜ್ಜಿ ಕೊಡಿಸಿದ ವಾಚ್ ಅವರೊಂದಿಗೇ ಹೋಗಲಿ’ ಎಂದು ಅಪ್ಪ ನನ್ನೊಂದಿಗೆ ಅಂದು ಹೇಳಿದ್ದರು.

ಅದಾದ ಬಳಿಕ ಅಪ್ಪ ಹಲವು ವಾಚ್‌ಗಳನ್ನು ಕೊಂಡರು. ಅವುಗಳಲ್ಲಿ ಪ್ರಮುಖವಾದುದು 62ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಎಚ್‌ಎಂಟಿಯು 2002ರಲ್ಲಿ ಹೊರತಂದಿದ್ದ ಕನ್ನಡ ಅಂಕಿಯ ವಾಚ್. ಇದು ಜೋಡಿ ವಾಚ್. ಅಪ್ಪ– ಅಮ್ಮ ಧರಿಸುತ್ತಿದ್ದರು. ಇವೆರಡೂ ವಾಚ್‌ ಈಗಲೂ ನಮ್ಮ ಬಳಿ ಇವೆ.

‘ಎನಿಕರ್’ ವಾಚ್ ಬಗ್ಗೆ ನನಗೆ ಅಂದಿನಿಂದಲೂ ವಿಶೇಷವಾದ ವ್ಯಾಮೋಹವಿತ್ತು. ಕೊಂಚ ದಿನಗಳ ಹಿಂದೆ ನನಗೆ ಗೋಡೆ ಗಡಿಯಾರ ತಯಾರಿಸುವ ವಿಚಿತ್ರ ಹವ್ಯಾಸ ಬೆಳೆಯಿತು. ಮರಗೆಲಸ ಮಾಡುವುದು ನನ್ನ ಸುಮಾರು 12 ವರ್ಷಗಳ ಹವ್ಯಾಸ. ಈ ವರ್ಷದ ಆರಂಭದಲ್ಲಿ ಯಾರೋ ಒಬ್ಬರು ನನಗೆ ಸುಮಾರು 100 ವರ್ಷ ಹಳೆಯ ಅಮೆರಿಕನ್ ಅನ್ಸೊನಿಯಾ ಗೋಡೆ ಗಡಿಯಾರ ಕೊಟ್ಟರು. ಅದರಲ್ಲಿ ಗಡಿಯಾರದ ಯಂತ್ರ ಇರಲಿಲ್ಲ. ಮುರಿದು ಹೋದ ಮರದ ಪೆಟ್ಟಿಗೆ ಮಾತ್ರ ಇತ್ತು. ಅದಕ್ಕೆ ಯಂತ್ರ ಹುಡುಕುವಾಗ ಇಲ್ಲಿನ ಅಗ್ರಹಾರದಲ್ಲಿ ಸೈಯದ್ ಹಫೀಸ್ ಎಂಬವರು ಪರಿಚಯವಾದರು. ಅವರ ಬಳಿ ಸಾವಿರಾರು ಗೋಡೆ ಗಡಿಯಾರ ಹಾಗೂ ವಾಚ್‌ಗಳಿದ್ದುದನ್ನು ಕಂಡು ಚಕಿತನಾದೆ. ಆಗ ನನ್ನ ತಂದೆ ಬದುಕಿದ್ದರು. ಅವರಿಗೆ ಈ ಮುರಿದ ಗಡಿಯಾರವನ್ನು ತೋರಿಸಿದಾಗ ‘ಚನ್ನಾಗಿದೆ ರೆಡಿ ಮಾಡು’ ಎಂದು ಹೇಳಿದ್ದರು. ಮರದ ಪೆಟ್ಟಿಗೆಯ ಹಳೆಯ ಬಣ್ಣವನ್ನೆಲ್ಲಾ ಸ್ಯಾಂಡ್ ಪೇಪರ್‌ನಲ್ಲಿ ಉಜ್ಜಿ ತೆಗೆದು. ಹದ ಗೊಳಿಸಿ, ಮುರಿದ ಭಾಗಗಳನ್ನು ಬದಲಿಸಿ ಅದರ ಮೂಲ ಸ್ವರೂಪಕ್ಕೆ ತಂದೆ. ಹಫೀಸ್ ಬಳಿ ಅದಕ್ಕೊಂದು ಯಂತ್ರವನ್ನೂ ಕೊಂಡುಕೊಂಡು ಪೆಟ್ಟಿಗೆಗೊಳಗೆ ಜೋಡಿಸಿ ಚಾಲನೆ ಮಾಡಿದೆ.

ಮೊದಲನೆಯದಾಗಿ ಗಡಿಯಾರಕ್ಕೆ ಕೀ ಕೊಡುವುದೇ ವಿಶೇಷ ಅನುಭವ. ಗೋಡೆ ಗಡಿಯಾರದಲ್ಲಿ ಎರಡು ಕೀಗಳಿರುತ್ತವೆ. ವಾಸ್ತವವಾಗಿ ಅದೊಂದು ಸ್ಪ್ರಿಂಗ್. ಕೀ ಕೊಟ್ಟಂತೆ ಅದು ನುಲಿದುಕೊಳ್ಳುತ್ತದೆ. ನಿಧಾನವಾಗಿ ಬಿಡಿಸಿಕೊಂಡು ಗಡಿಯಾರದ ಚಲನೆಗೆ ಶಕ್ತಿ ಕೊಡುತ್ತದೆ. ಅಂತೆಯೇ ಇನ್ನೊಂದು ಕೀ ಇರುತ್ತದೆ. ಅದು ಗಡಿಯಾರ ಪ್ರತಿ ಗಂಟೆ ಹಾಗೂ ಅರ್ಧ ಗಂಟೆಗೆ ಚೆಂದದ ಗಂಟೆಯ ಸದ್ದನ್ನು ಮಾಡಲು ಸಹಕಾರಿ. ಗಡಿಯಾರವನ್ನು ಸಿದ್ಧಪಡಿಸಲು ನನಗೆ ಎರಡು ತಿಂಗಳಿಗೂ ಹೆಚ್ಚು ಕಾಲ ಹಿಡಿಯಿತು. ಕೊನೆಗೆ ಕೀ ಕೊಟ್ಟು ಗೋಡೆಗೆ ತಗುಲಿಹಾಕಿ ಚಾಲನೆ ಮಾಡಿದಾಗ ಆದ ಅನುಭವ ದೊಡ್ಡದು. ಪೆಂಡ್ಯುಲಮ್ ಚಲಿಸಬೇಕೆಂದರೆ ಸರಿಯಾಗಿ ಸಮತೋಲನ ಇರಬೇಕು. ಮಧ್ಯಕ್ಕೆ ಸರಿಯಾಗಿ ನಿಲ್ಲಿಸಿರಬೇಕು. ಆಗ ಮಾತ್ರ ಗಡಿಯಾರ ಸರಿಯಾಗಿ ಸಮಯ ತೋರಿಸುತ್ತದೆ. ಪೆಂಡ್ಯುಲಮ್‌ನ ಬಾಬ್‌ (ವೃತ್ತಾಕಾರದ ಆಕೃತಿ) ಕೊಂಚವೇ ಕೆಳಗೆ ಅಥವಾ ಮೇಲಕ್ಕೆ ಹೋದರೂ ಸಮಯ ತಪ್ಪಾಗುತ್ತದೆ. ಗಡಿಯಾರ ಸದ್ದು ಮಾಡುತ್ತಾ ಚಾಲನೆಗೊಂಡಾಗ ನನ್ನೊಂದಿಗೆ ಅಪ್ಪನೂ ಖುಷಿಪಟ್ಟರು.

ತಂದೆಯವರು ಜುಲೈ 26ರಂದು ತೀರಿಕೊಂಡರು. ಹಲವು ದಿನಗಳು ಉರುಳಿದವು. ಜೀವನ ನಡೆಯಲೇಬೇಕಿತ್ತು. ಆದರೆ, ಅಪ್ಪನ ನೆನಪು ದಿನವೂ ಜೀವಂತವಾಗಿಯೇ ಇತ್ತು. ಮನೆಯಲ್ಲಿದ್ದ ಗೋಡೆ ಗಡಿಯಾರವನ್ನು ನೋಡುತ್ತಿದ್ದಂತೆ ಅಪ್ಪನ ‘ಎನಿಕರ್‌’ ನೆನಪಾಯಿತು. ಮತ್ತೆ ಹಫೀಸ್ ಬಳಿ ಮೊರೆಯಿಟ್ಟೆ. ಅವರು ನನಗಾಗಿ ಹುಡುಕಾಡಿ ತಡಕಾಡಿ ಕೊನೆಗೂ ಒಂದು ಎನಿಕರ್ ಕೈ ಗಡಿಯಾರವನ್ನು ರೆಡಿ ಮಾಡಿಯೇಬಿಟ್ಟರು. ಎನಿಕರ್‌ ವಾಚಿನ ಡಯಲ್ ಮೇಲಿನ ಶನಿಗ್ರಹದ ಚಿತ್ರ, ಗಡಿಯಾರದ ಹಿಂಭಾಗದಲ್ಲಿ ನೀರೊಳಗಿಂದ ಮೇಲೆ ಛಿಮ್ಮುತ್ತಿರುವ ಡಾಲ್ಫಿನ್‌ ಮೀನಿನ ಚಿತ್ರ ಅದ್ಭುತವಾಗಿತ್ತು. ವಾಚನ್ನು ಕೈಯಲ್ಲಿ ಹಿಡಿದಾಗ ಅಪ್ಪನ ನೆನಪು ಬಿಚ್ಚಿಕೊಂಡಿತು. ಒಂದು ಕ್ಷಣ ಎಲ್ಲ ನೆನಪುಗಳೂ ಸ್ಮೃತಿಪಟಲದಲ್ಲಿ ಹಾದು ಹೋದವು. ಕೀ ಕೊಡುವ ಬಟನ್‌ ಮೇಲೂ ಶನಿಗ್ರಹದ ಉಬ್ಬು ಚಿತ್ರವಿತ್ತು. ಹಫೀಸ್‌ ಈ ವಾಚನ್ನು ನನ್ನ ಕೈಗಿಟ್ಟು ಕೇವಲ ಮುನ್ನೂರು ರೂಪಾಯಿ ಪಡೆದುಕೊಂಡರು. ವಾಚಿಗೆ ಕೀಕೊಟ್ಟು ಕಿವಿಗಿಟ್ಟುಕೊಂಡೆ. ವಾಚಿನ ಸದ್ದು ಅಪ್ಪನ ಎದೆಬಡಿತದಂತೆ ಭಾಸವಾಯಿತು. ಈ ವಾಚು ಅಪ್ಪನ ಬಳಿ ಇದ್ದ ವಾಚಿನಷ್ಟು ಚಂದವಾಗಿರಲು ಸಾಧ್ಯವೇ ಇಲ್ಲ. ಆದರೆ, ನೆನಪು ಮಾತ್ರ ಅತಿ ಚೆಂದ ಅಲ್ಲವೇ? ಅಪ್ಪನಂತೆ…

1 comment

  1. Oh, what a nostalgic memory recollection and narration. Emotionally moved me very much as my father passed away two years back and I preserved his Watch and get emotional on seeing it every time. Sometimes I feel that we value more of people and things only in their absence. It is a lesson learnt to value everything in present.

Leave a Reply